ಮನೋಲ್ಲಾಸ: ಕಷ್ಟಗಳು ಕ್ಷಣಿಕವೆಂದುಕೊಂಡರೆ...

Baloon
Published on

| ಜಯಶ್ರೀ ಜೆ. ಅಬ್ಬಿಗೇರಿ

ವ್ಯಕ್ತಿಯೊಬ್ಬ ಕೆಲಸ ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ. ಅದೇ ಸಮಯಕ್ಕೆ ಎಣ್ಣೆ ಬ್ಯಾರೆಲ್​ಗಳ ಟ್ರಕ್​ಗೆ ಬೆಂಕಿ ತಗುಲಿತ್ತು. ಟ್ರಕ್​ನ ಚಾಲಕ ಡ್ರಮ್​ಗಳ ಮಧ್ಯೆ ಸಿಲುಕಿದ್ದ. ರಸ್ತೆಯಲ್ಲಿ

ಇರುವವರು ಕೆಲವರು "ಅಯ್ಯೋ! ಪಾಪ' ಎಂದು ಮರುಕ ವ್ಯಕ್ತಪಡಿಸುತ್ತಿದ್ದರು. ಹಲವರು ಅಸಹಾಯಕರಾಗಿ ನೋಡುತ್ತಿದ್ದರು. ಇನ್ನೂ ಕೆಲವರು ೋನಿನಲ್ಲಿ ಆ ದೃಶ್ಯವನ್ನು ಸೆರೆ ಹಿಡಿಯುವುದರಲ್ಲಿ ಮಗ್ನರಾಗಿದ್ದರು. ಈ ವ್ಯಕ್ತಿ ಪರಿಸ್ಥಿತಿಯನ್ನು ಅವಲೋಕಿಸಿ, ಧೈರ್ಯವಾಗಿ ಮುನ್ನುಗ್ಗಿದ. ಬೆಂಕಿಯ ನಡುವೆ ಸಿಕ್ಕ ಹಾಕಿಕೊಂಡಿದ್ದ ಚಾಲಕನನ್ನು ಎಳೆದು ತಂದು ಬಿಟ್ಟ. ಚಾಲಕನನ್ನು ರಸುವ ಸಮಯದಲ್ಲಿ ಆ ವ್ಯಕ್ತಿಗೆ ಸಣ್ಣಪುಟ್ಟ ಗಾಯಗಳೂ ಆದವು. ಆದರೆ ಆತ ಅದನ್ನೆಲ್ಲ ಲಸಿದಂತೆ ಕಾಣಲಿಲ್ಲ. ಬದಲಾಗಿ ಆತನ ಕಣ್ಣಲ್ಲಿ ಮಿಂಚು ಕಾಣುತ್ತಿತ್ತು. ಸೇರಿದ ಜನರಲ್ಲಿ ಒಬ್ಬಾತ, "ನಿಮ್ಮ ಜೀವವನ್ನು ಅಪಾಯಕ್ಕೆ ಒಡ್ಡಿ ಚಾಲಕನನ್ನು ರಸಿದರಲ್ಲ, ನಿಮಗೆ ಹೇಗೆ ಅನಿಸುತ್ತಿದೆ? ನಿಮಗಾದ ಗಾಯಗಳು ನೋವನ್ನುಂಟು ಮಾಡುತ್ತಿಲ್ಲವೇ?' ಎಂದು ಕೇಳಿದ. "ಸಹಾಯಹಸ್ತ ಚಾಚಿ ಜೀವವೊಂದನ್ನು ಉಳಿಸಿದ್ದು ನನಗೆ ಖುಷಿಯಾಯಿತು. ಯಾವುದೇ ಕಷ್ಟ ಬಂದರೂ ನಾವು ಹೆದರಬಾರದು. ಸಂಕಷ್ಟಗಳು ನಮ್ಮನ್ನು ಅಲ್ಲಾಡಿಸಲು ನೋಡುತ್ತವೆ. ಆದರೆ ನಾವು ಓಡುವ ನದಿಯ ನಡುವೆ ಅಲುಗಾಡದೆ ನಿಂತ ಬಂಡೆಯಂತೆ ಇರಬೇಕು. ಮತ್ತೊಬ್ಬರಿಗೆ ನೆರವು ನೀಡುವ ಸಂದರ್ಭ ಬಂದಾಗ ಹಿಂಜರಿಯಬಾರದು. ನಮ್ಮ ದೇಹಕ್ಕೆ ಪೆಟ್ಟು ಬಿದ್ದರೆ ಅದನ್ನು ನಗುತ್ತ ಸಹಿಸಿಕೊಳ್ಳಬೇಕು' ಎಂದ.

ಕಷ್ಟದಲ್ಲಿ ಇದ್ದವರನ್ನು ಪಾರು ಮಾಡುವುದು ಅತ್ಯುತ್ತಮ ಸೇವೆ. ಆದರೆ ಇತ್ತೀಚಿನ ದಿನಗಳಲ್ಲಿ ಕಷ್ಟದಲ್ಲಿದ್ದವರಿಗೆ ಸಹಾಯ ಮಾಡಲು ಹಿಂಜರಿಯುವುದು ಸಾಮಾನ್ಯ ಮಾನವ ವರ್ತನೆ ಎಂಬಂತಾಗಿದೆ. ಆದರೆ ನಾವು ಇದಕ್ಕಿಂತ ಮೇಲೆ ಹೋಗಬೇಕು. ಪ್ರಪಂಚದಲ್ಲಿ ಪ್ರಬುದ್ಧ ಚಿಂತಕರು, ಪ್ರಕಾಂಡ ಪಂಡಿತರು, ಜ್ಞಾನವಂತರು, ಬುದ್ಧಿವಂತರು ಹೇರಳವಾಗಿ ಇದ್ದಾರೆ. ಅವರ ಅಗತ್ಯತೆಯೂ ನಮಗಿದೆ. ಆದರೆ, ಈಗ ನಮಗೆ ಹೃದಯವಂತರ ಅಗತ್ಯ ಹೆಚ್ಚಿದೆ. ಜಗದ ಎಲ್ಲ ಮಾಧುರ್ಯವೂ ಜನರ ಸೇವೆಯಲ್ಲೇ ಇದೆ. ಆದರ್ಶಪುರುಷರೆಲ್ಲ ಸಹಜೀವಿಗಳ ಸೇವೆ ಮಾಡಲು ಹೇಳಿದ್ದಾರೆ. ಅದರಲ್ಲೂ ಕಷ್ಟದಲ್ಲಿರುವ ಮನುಷ್ಯನ ಸೇವೆ ಮಾಡಿದಾಗ ಅವರ ಕಂಗಳಲ್ಲಿ ಕಾಣುವ ಕೃತತೆಯ ಭಾವವನ್ನು ಅನುಭವಿಸಿದವರಿಗೆ ಜೀವನ ಸಾರ್ಥಕವೆಂಬ ಭಾವ ಮೂಡುತ್ತದೆ. ನಮ್ಮ ಪರಿಸ್ಥಿತಿ ಚೆನ್ನಾಗಿದೆ. ಉಣ್ಣುವುದಕ್ಕೆ, ಉಡುವುದಕ್ಕೆ ತೊಂದರೆಯಿಲ್ಲ. ಬೇರೆಯವರ ಬಗ್ಗೆ ನಾವೇಕೆ ಚಿಂತಿಸಬೇಕು ಎಂಬ ಅಭಿಪ್ರಾಯ ಸರಿಯಲ್ಲ. ನಮ್ಮಲ್ಲಿ ಅನುಕಂಪ, ಸಹಾನುಭೂತಿ ಇರಬೇಕು. ಪಕ್ಕದ ಮನೆಗೆ ಬೆಂಕಿ ಬಿದ್ದರೆ ನಮ್ಮ ಮನೆ ಸಹ ಉಳಿಯುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಂಡು ನಡೆದುಕೊಳ್ಳಬೇಕು. ಕಷ್ಟದ ಕ್ಷಣಗಳು ಹೊರಟು ಹೋಗಲಿವೆ ಎನ್ನುವ ಧೈರ್ಯದೊಂದಿಗೆ ಸಮಸ್ಯೆಗಳನ್ನು ಎದುರಿಸಬೇಕು. ಕಷ್ಟಗಳು ತಬ್ಬಿಬ್ಬುಗೊಳಿಸುತ್ತವೆ. ಆದರೆ ಅವು ಕ್ಷಣಿಕವೆಂದುಕೊಂಡರೆ ಮನಸ್ಸು, ಬುದ್ಧಿ ಸರಿಯಾಗಿ ಕೆಲಸ ಮಾಡುತ್ತವೆ. ಆಗ ಬದುಕು ಬೆಳಕಿನತ್ತ ನಡೆಯುತ್ತದೆ.

(ಲೇಖಕಿ ಇಂಗ್ಲಿಷ್​ ಉಪನ್ಯಾಸಕಿ)

(ಪ್ರತಿಕ್ರಿಯಿಸಿ: manollasavv@gmail.com)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net