

ಮಕ್ಕಳು ಹುಟ್ಟುತ್ತ ಸರಿಯಾಗಿ ಇರುವುದಿಲ್ಲ ಮತ್ತು ಅವರನ್ನು ಸರಿಪಡಿಸಬೇಕು ಎಂದು ಜನರನ್ನು ‘ದುರಾದೃಷ್ಟವಶಾತ್’ ನಂಬಿಸಲಾಗಿದೆ. ಮಕ್ಕಳು ಮತ್ತು ತಂದೆ-ತಾಯಿಗಳನ್ನು ಗಮನಿಸಿ ನೋಡಿದಾಗ, ಸಾಮಾನ್ಯವಾಗಿ, ಕೊನೆಯಪಕ್ಷ ಹತ್ತು ವರ್ಷದೊಳಗಿನ ಮಕ್ಕಳು ಖಂಡಿತವಾಗಿಯೂ ಹೆಚ್ಚು ಸಂತೋಷಭರಿತರಾಗಿರುತ್ತಾರೆ. ಹೀಗಿರುವಾಗ, ಜೀವನದ ಬಗ್ಗೆ ಸಲಹೆಗಾರರು ಯಾರಾಗಿರಬೇಕು? ಹೆಚ್ಚು ಸಂತೋಷಪೂರ್ಣರಾಗಿರುವವರೋ ಅಥವಾ ಮಕ್ಕಳನ್ನು ಹೇಗೆ ನಿಭಾಯಿಸಬೇಕೆಂದು ತಿಳಿಯದೆ ತಮ್ಮೊಳಗೇ ಗೊಂದಲದಿಂದ ಇರುವವರೋ? ನೀವೇನು ಮಾಡುತ್ತಿರೋ ಮಕ್ಕಳು ಅದನ್ನೇ ಅನುಕರಿಸುತ್ತಾರೆ. ನೀವು ಗೌರವ ಕೊಡುವ ರೀತಿಯಲ್ಲಿ ಇದ್ದರೆ, ಮಕ್ಕಳನ್ನು ಬೆಳೆಸಲು ಹೆಚ್ಚೇನೂ ಮಾಡಬೇಕಾಗಿಲ್ಲ.
ಮೌಲ್ಯಮಾಪನ ಮಾಡಿಕೊಳ್ಳಿ: ಮಗುವನ್ನು ಹೊಂದಲು ನಿರ್ಧರಿಸಿದರೆ, ಪ್ರತಿಯೊಂದು ದೃಷ್ಟಿಕೋನದಿಂದಲೂ ಮೌಲ್ಯಮಾಪನ ಮಾಡಿಕೊಳ್ಳಬೇಕು. ನೀವು ಕುಳಿತುಕೊಳ್ಳುವ, ನಿಂತುಕೊಳ್ಳುವ ರೀತಿ, ಮಾತನಾಡುವ ರೀತಿ ಮತ್ತು ಪರಿಸ್ಥಿತಿಗಳಿಗೆ ಪ್ರತಿಕ್ರಿಯಿಸುವ ರೀತಿ. ನಿಮಗೆ ನೀವೇ ಕೇಳಿಕೊಳ್ಳಿ, ನೀವು ಐದು ವರ್ಷದ ಮಗುವಾಗಿದ್ದರೆ, ನೀವು ಈ ವ್ಯಕ್ತಿಯನ್ನು ಇಷ್ಟಪಟ್ಟು ಗೌರವ ನೀಡುತ್ತಿದ್ದಿರಾ? ಇನ್ನೊಂದು ವಿಷಯವೆಂದರೆ, ಮಕ್ಕಳೊಂದಿಗೆ ಸಾಕಷ್ಟು ಸಮಯ ಕಳೆದು, ಅವರು ನಿಮ್ಮನ್ನು ಇಷ್ಟಪಡುತ್ತಾರಾ, ಮತ್ತು ನೀವು ಅವರನ್ನು ಇಷ್ಟಪಡುತ್ತಿದ್ದೀರಾ ಎಂಬುದನ್ನು ಗಮನಿಸಿ. ಹೀಗೆ ಮಾಡಿದರೆ, ನಿಮ್ಮಲ್ಲಿ ಅಪಾರವಾದ ವಿವೇಕ ಅರಳುತ್ತದೆ.
ಸೂಕ್ತವಾದ ವಾತಾವರಣ ನಿರ್ವಿುಸಿ: ಈಗಾಗಲೇ ಒಂದು ಮಗುವಿದ್ದರೆ, ಮಾಡಬೇಕಾದದ್ದು ಏನೆಂದರೆ, ಒಂದು ಪ್ರೇಮಪೂರ್ವಕ, ಪ್ರೋತ್ಸಾಹದಾಯಕ ಮತ್ತು ಚೈತನ್ಯಶೀಲ ವಾತಾವರಣವನ್ನು ಸೃಷ್ಟಿಸಿಕೊಡುವುದು. ಕಲಿಸುವುದು ನಿಜವಾಗಿಯೂ ಏನೂ ಇಲ್ಲ. ಮಕ್ಕಳಿಗೆ ಹೋಲಿಸಿದರೆ ನಿಮಗೆ ತಿಳಿದಿರುವುದೆಲ್ಲ ಪ್ರಪಂಚದ ಕೆಲವು ತಂತ್ರಗಳಷ್ಟೆ, ಬದುಕುಳಿಯುವುದು ಮತ್ತು ಸಂಪಾದನೆ ಮಾಡುವುದು ಹೇಗೆ ಎಂಬುದಷ್ಟೆ. ಈ ತಂತ್ರಗಾರಿಕೆಯನ್ನು ಈ ಚಿಕ್ಕವಯಸ್ಸಿನಲ್ಲಿ ಕಲಿಸಿಕೊಡುವ ಅವಶ್ಯಕತೆಯಿಲ್ಲ. ಒಂದು ಮಗು ನಿಮ್ಮ ಜೀವನವನ್ನು ಪ್ರವೇಶಿಸಿದಾಗ ಅದು ಕಲಿಯುವ ಸಮಯ, ಕಲಿಸುವ ಸಮಯವಲ್ಲ. ಮಕ್ಕಳಿಗೆ ಯಾವುದು ಅಪಾಯಕಾರಿ, ಯಾವುದು ಒಳ್ಳೆಯದು ಇತ್ಯಾದಿಗಳು ಗೊತ್ತಿಲ್ಲದಿರಬಹುದು. ಆದರೆ ನಿಮಗೆ ನಿಮ್ಮಸುತ್ತಲಿನ ಜೀವನದ ಬಗ್ಗೆ ನಿರ್ದಿಷ್ಟವಾದ ವಿವೇಕವಿರುತ್ತದೆಯಲ್ಲವೇ. ಅವರು ಅಪಾಯದ ಕಡೆಗೆ ಹೋಗುತ್ತಿದ್ದರೆ, ನಿಮ್ಮ ವಿವೇಕವನ್ನು ಬಳಸಿರಿ. ಇಲ್ಲವಾದರೆ, ಮಕ್ಕಳು ಜೀವನವನ್ನು ನಿಮಗಿಂತ ಸಂತೋಷಭರಿತವಾಗಿ ನಿಭಾಯಿಸುತ್ತಾರೆ. ಆ ಅಂಶಗಳನ್ನು ಅವರಿಂದ ಕಲಿಯಿರಿ.
ಜೀವನದಲ್ಲಿ ಕೆಲಸಕ್ಕೆ ಬಾರದ ಮತ್ತು ಎಂದಿಗೂ ಅನುಸರಿಸಲು ಸಾಧ್ಯವಾಗದ ಅನುಶಾಸನಗಳನ್ನು ಅವರಿಗೆ ಕಲಿಸಬೇಡಿ. ಮಕ್ಕಳು ನಿಮಗಿಂತ ಚೆನ್ನಾಗಿರಬೇಕೆಂದರೆ ಮಾಡಬೇಕಾದ ಮೊದಲ ಸಂಗತಿಯೆಂದರೆ ನೀವು ಬದ್ಧತೆಯಿಂದ ಕೂಡಿರಬೇಕು, ಏಕೆಂದರೆ ಅವರು ಎಲ್ಲಿಗೆ ಹೋದರೂ, ಇದು ಅವರನ್ನು ಸುಸ್ಥಿರವಾಗಿ ಇರಿಸುತ್ತದೆ. ನಿಮ್ಮ ನಡೆ-ನುಡಿಗಳಲ್ಲಿ ಹೊಂದಾಣಿಕೆಯಿರಬೇಕು. ಒಂದು ಪ್ರೇಮಭರಿತ ಮತ್ತು ಚೈತನ್ಯಶೀಲ ವಾತಾವರಣವನ್ನು ಸೃಷ್ಟಿಸಿದರೆ, ಅವರು ಚೆನ್ನಾಗಿರುತ್ತಾರೆ.
ಆಟಿಕೆಗಳನ್ನು ಬಿಡಿ, ಮರ ಹತ್ತಿ: ಒಂದು ಕೀಟದಿಂದ ಒಂದು ಹೂವಿನವರೆಗೆ ಎಲ್ಲವೂ ವಿಸ್ಮಯಕಾರಿಯಾಗಿರುವ- ಪ್ರಕೃತಿಯ ಮಡಿಲಲ್ಲಿ ಮಗುವನ್ನು ಕರೆದೊಕೊಂಡು ಹೋಗಿ. ಆದರೆ ಇಂದು ಬಹುತೇಕ ತಂದೆ-ತಾಯಿಯರು ಏನೋ ಒಂದು ಆಟಿಕೆಯನ್ನು ಕೊಂಡುತಂದು, ಅದರಿಂದ ಮಗು ಗಾಯಗೊಳ್ಳದಿರುವಂತೆ ಮೆತ್ತನೆಯ ವಸ್ತುವಿನಿಂದ ಸುತ್ತಿ ಮಕ್ಕಳ ಕೋಣೆಯಲ್ಲಿ ಬಿಸಾಡಿ ಬಾಗಿಲು ಮುಚ್ಚಿ ಪಾರ್ಟಿಗೆ ಹೋಗಿಬಿಡುತ್ತಾರೆ. ಇದಲ್ಲ ಮಕ್ಕಳನ್ನು ಬೆಳೆಸುವ ವಿಧಾನ!
ಪ್ರಪಂಚದಲ್ಲಿ ಪ್ರತಿವರ್ಷ ಕೋಟ್ಯಂತರ ಡಾಲರ್ಗಳನ್ನು ಕೇವಲ 20ರಿಂದ 30%ರಷ್ಟು ಮಕ್ಕಳಿಗಾಗಿ ಆಟಿಕೆಗಳನ್ನು ಕೊಳ್ಳಲು ಖರ್ಚು ಮಾಡಲಾಗುತ್ತಿದೆ, ಉಳಿದ 70% ಮಕ್ಕಳಿಗೆ ಅವರ ಜೀವಮಾನದಲ್ಲಿ ಒಂದೇ ಒಂದು ಆಟಿಕೆಯೂ ಲಭ್ಯವಾಗುವುದಿಲ್ಲ. ಈ ಆಟಿಕೆಗಳನ್ನು ಪಡೆದ ಮಕ್ಕಳು, ಮಾನಸಿಕ ಮತ್ತು ಭಾವನಾತ್ಮಕ ಮಟ್ಟದಲ್ಲಿ ಹೆಚ್ಚು ಬಳಲುತ್ತಾರೆ. ಇತರ ಮಕ್ಕಳು ಪೋಷಕಾಂಶಗಳ ಕೊರತೆ ಮತ್ತು ಇತರ ಮೂಲಭೂತ ಅವಶ್ಯಕತೆಗಳ ಕೊರತೆಯಿಂದ ಬಳಲುತ್ತಾರೆ. ಆದರೆ ಸ್ಥಿತಿವಂತರ ಮಕ್ಕಳು ಆಂತರಿಕ ಪ್ರಕ್ಷುಬ್ಧತೆಯನ್ನು ಅನುಭವಿಸುತ್ತಾರೆ. ಬದಲಾಗಿ, ಮಕ್ಕಳನ್ನು ಹೊರಗೆ ಕರೆದುಕೊಂಡು ಹೋಗಿ, ಮರಹತ್ತಲು ಪ್ರೋತ್ಸಾಹಿಸಿ, ಅವರೊಂದಿಗೆ ನಡೆಯಿರಿ, ಅವರನ್ನು ಈಜಲು ಕರೆದೊಯ್ಯಿರಿ, ಆಗ ಮಗು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯಪೂರ್ಣವಾಗಿ ಬೆಳೆಯುತ್ತದೆ.
20 ವರ್ಷಗಳ ಕಾರ್ಯಯೋಜನೆಗೆ ಸಿದ್ಧರಾಗಿ: ಒಮ್ಮೆ ನಿಮಗೆ ಒಂದು ಮಗುವಾಯಿತೆಂದರೆ, ಅದು ಇಪ್ಪತ್ತು ವರ್ಷಗಳ ಕಾರ್ಯಯೋಜನೆಯಾಗಿದೆ- ಅದೂ ಅವರು ಚೆನ್ನಾಗಿ ಬೆಳೆದರೆ ಮಾತ್ರ. ಅವರು ಸರಿಯಾಗಿ ಬೆಳೆಯಲಿಲ್ಲವಾದರೆ, ಅದು ಜೀವನಪರ್ಯಂತ ಕಾರ್ಯಯೋಜನೆಯಾಗಿಬಿಡುತ್ತದೆ. ನೀವದಕ್ಕೆ ಸಿದ್ಧರಿಲ್ಲದಿದ್ದರೆ, ನೀವು ಮಕ್ಕಳನ್ನು ಪಡೆಯಬಾರದು. ಒಂದು ಮಗು ಒಂದು ಅನುಕೂಲಕರ ಕಾರ್ಯಯೋಜನೆಯಲ್ಲ. ನಾವು ಮುಂದಿನ ತಲೆಮಾರನ್ನು ಸೃಷ್ಟಿಸುತ್ತಿದ್ದೇವೆ. ಒಂದು ರೀತಿಯಲ್ಲಿ, ಮುಂದಿನ ತಲೆಮಾರು ನಮಗಿಂತ ಒಂದು ಹೆಜ್ಜೆ ಮುಂದಿರಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡಲು ಬಯಸದಿದ್ದಲ್ಲಿ, ಮಕ್ಕಳನ್ನು ಮಾಡಿಕೊಳ್ಳಬಾರದು. ಮುಂದಿನ ತಲೆಮಾರು ನಮ್ಮಂತೆಯೇ ಇರುವುದಾದರೆ ಏನು ಪ್ರಯೋಜನ? ಮತ್ತು ಎಲ್ಲಕ್ಕಿಂತ ಮುಖ್ಯವಾಗಿ, ಮನುಕುಲವೇನೂ ಅಳಿವಿನ ಅಂಚಿನಲ್ಲಿಲ್ಲ. ಹಾಗಾಗಿ ಎಲ್ಲರೂ ಸಂತಾನೋತ್ಪತ್ತಿ ಮಾಡಬೇಕೆಂದೇನಿಲ್ಲ. ಸಂಖ್ಯೆಯ ದೃಷ್ಟಿಯಲ್ಲಿ ನಾವು ಕೀಟಗಳೊಂದಿಗೆ ಸ್ಪರ್ಧಿಸಲು ಪ್ರಯತ್ನಿಸುತ್ತಿರುವಂತೆ ಕಾಣುತ್ತದೆ. ನಾವು ಹಲವಾರು ವಿಷಯಗಳಲ್ಲಿ ನಿಧಾನಿಸಬೇಕಾದ ಸಮಯ ಬಂದಿದೆ.
ಮಕ್ಕಳು ಬೇಕೆಂದಿರುವವರು ಅವರಿಗಾಗಿ ಸಮಯವನ್ನು ಮೀಸಲಿಡಬೇಕು, ಏಕೆಂದರೆ ಅದು ನಮಗಿಂತ ಉತ್ತಮ ತಲೆಮಾರನ್ನು ರೂಪುಗೊಳಿಸವ ಕೆಲಸವಾಗಿದೆ. ಮತ್ತು ಎಲ್ಲಕ್ಕಿಂತ ಹೆಚ್ಚಾಗಿ, ನೀವು ಮಕ್ಕಳು ಗೌರವಿಸುವ ಮತ್ತು ಪ್ರೀತಿಸಬಹುದಾದ ವ್ಯಕ್ತಿಯಾಗಿರಬೇಕು. ಅವರು ನಿಜವಾಗಿಯೂ ನಿಮ್ಮನ್ನು ಗೌರವಿಸಿದರೆ, ನಿಮ್ಮೊಂದಿಗೆ ಅವರು ಕಳೆಯುವ ಐದು ನಿಮಿಷಗಳು ಐದು ದಿನಗಳಷ್ಟು ಮೌಲ್ಯಯುತವಾಗಿರುತ್ತದೆ. ಒಂದು ಮಗುವನ್ನು ಪಡೆದುಕೊಳ್ಳುವ ಹೊಣೆಗಾರಿಕೆಗೆ ‘ತೊಡಗಿಸಿಕೊಳ್ಳುವಿಕೆ’ ಬೇಕಾಗುತ್ತದೆ. ಒಂದು ವೇಳೆ ಅಗತ್ಯವಿರುವ ತೊಡಗಿಸಿಕೊಳ್ಳುವಿಕೆಯಿಲ್ಲದೆ ಒಂದು ಮಗುವನ್ನು ಹೆರುವ ತಪ್ಪನ್ನು ನೀವು ಮಾಡಿದರೆ, ಆಗ ಮಗುವನ್ನು ಪ್ರೇಮಭರಿತ, ಕಾಳಜಿಯುಳ್ಳ ಮತ್ತು ಸಂತೋಷದಿಂದ ಇರುವ, ತಮ್ಮ ಜೀವನವನ್ನು ಮಗುವಿಗೆ ನೀಡಲು ಸಿದ್ಧರಿರುವ ಯಾರಿಗಾದರೂ ಕೊಟ್ಟುಬಿಡಿ. ಅವರು ಜೈವಿಕವಾದ ತಂದೆ-ತಾಯಿಗಳೋ ಅಲ್ಲವೋ ಎಂಬುದು ಮಗುವಿಗೆ ಮುಖ್ಯವಾಗುವುದಿಲ್ಲ. ಯಾರು ಹೆಚ್ಚು ಪ್ರೀತಿಸುತ್ತಾರೋ, ಹೆಚ್ಚು ಸಂತೋಷಭರಿತರೋ ಅಂತಹವರೊಂದಿಗೆ ಮಗು ಇರಲು ಬಯಸುತ್ತದೆ.
ಸಕಾರಾತ್ಮಕವಾದ ಪ್ರಪಂಚವನ್ನು ಅನ್ವೇಷಿಸಿ: ಇಂದಿನ ದಿನಗಳಲ್ಲಿ ಮೂರು ವರ್ಷದ ಮಕ್ಕಳು ಟೀವಿ ಅಥವಾ ಸ್ಮಾರ್ಟ್ಫೋನ್ಗಳಿಗೆ ಅಂಟಿಕೊಂಡಿರುವುದು ಎಲ್ಲೆಡೆ ಕಂಡುಬರುತ್ತದೆ. ಮತ್ತು ಅವರು ಏನನ್ನು ಒಳಗೆ ತೆಗೆದುಕೊಳ್ಳುತ್ತಿದ್ದಾರೆ ಎಂಬುದು ನಮಗೆ ಗೊತ್ತಾಗುವುದಿಲ್ಲ. ಏಕೆಂದರೆ ಏನಾಗುತ್ತಿದೆ ಎಂದು ನೀವೂ ಕಂಡುಕೊಳ್ಳಲಾಗುವುದಿಲ್ಲ. ಒಂದು ಕ್ಷಣ, ಯಾರೋ ಒಬ್ಬರು ಒಂದು ಸುಂದರವಾದ ಜಗತ್ತನ್ನು ಸೃಷ್ಟಿಸುವುದರ ಬಗ್ಗೆ ಮಾತನಾಡುತ್ತಿರುತ್ತಾರೆ, ಮರುಕ್ಷಣ ಬಾಂಬುಗಳ ಸುರಿಮಳೆಯಾಗುತ್ತಿರುವುದನ್ನು ನೋಡಬಹುದು. ಮಕ್ಕಳು ಯಾವ ವಾತಾವರಣದಲ್ಲಿ ಬೆಳೆಯಬೇಕು ಎಂಬುದನ್ನು ಪ್ರತಿಯೊಬ್ಬ ತಂದೆ-ತಾಯಿಯೂ ಯೋಚಿಸಬೇಕು. ಅವರು ಯಾವ ಪರಿಸರದ ಪ್ರಭಾವಕ್ಕೊಳಗಾಗುತ್ತಾರೋ ಅದು ಅವರನ್ನು ಜೀವನಪರ್ಯಂತ ಅಂಟಿಕೊಳ್ಳುತ್ತದೆ, ಯಾವುದೇ ನೈತಿಕ ಬೋಧನೆಯಲ್ಲ. ಅವರನ್ನು ಎಲ್ಲ ರೀತಿಯ ಅದ್ಭುತ ಸಂಗತಿಗಳಿಗೆ ತೆರೆದಿಡಬೇಕು.
ಮಕ್ಕಳು ಬೇಕೆಂದು ಬಯಸುವ ಜನರು ತಮ್ಮ ಮಕ್ಕಳೊಂದಿಗೆ ನಗರಗಳಲ್ಲಿ ಅಥವಾ ಅಪಾರ್ಟ್ವೆುಂಟ್ಗಳಲ್ಲಿ ಇರುವುದಕ್ಕಿಂತ, ಪ್ರಕೃತಿಯ ನಡುವೆ ಕೊನೆಯಪಕ್ಷ ವರ್ಷದಲ್ಲಿ ಎರಡು ತಿಂಗಳುಗಳ ಕಾಲ ಸಮಯ ಕಳೆಯಲು ತಯಾರಿರಬೇಕು. ಮಕ್ಕಳು ದೈಹಿಕವಾಗಿ ಮತ್ತು ಮಾನಸಿಕವಾಗಿ ಸಮತೋಲನದಿಂದ ಬೆಳೆಯಲು, ಪ್ರಕೃತಿಯ ನಡುವೆ ಇರುವುದು ಅವಶ್ಯಕ. ಭಾವನಾತ್ಮಕ ಸುರಕ್ಷತೆ ನೀಡಿ: ಇಂದು ಹುಚ್ಚರಾಗುತ್ತಿರುವ ಜನರ ಸಂಖ್ಯೆ ಹೆಚ್ಚಾಗಿದೆ. ಕಳೆದ ಎರಡು ಶತಮಾನಗಳಿಂದ ಆರ್ಥಿಕ ಸುಸ್ಥಿತಿಯನ್ನು ಅನುಭವಿಸಿದ ಯುರೋಪಿನ ರಾಷ್ಟ್ರಗಳಲ್ಲಿ, ಸುಮಾರು ಮೂವತ್ತೆಂಟು ಪ್ರತಿಶತ ಜನರು ಮಾನಸಿಕ ರೋಗಗಳಿಂದ ಬಳಲುತ್ತಿದ್ದಾರೆ. ಕಾಳಜಿಯಿಲ್ಲದ ವಾತಾವರಣಗಳಲ್ಲಿ ಬೆಳೆದಿರುವುದೇ ಇದಕ್ಕೆ ಮುಖ್ಯ ಕಾರಣ. ಅವರಿಗೆ ತಮ್ಮ ತಂದೆ ಅಥವಾ ತಾಯಿ ಯಾವಾಗ ಬಿಟ್ಟುಹೋಗುತ್ತಾರೋ ಎಂಬುದು ತಿಳಿದಿರುತ್ತಿರಲಿಲ್ಲ.
ಭಾವನಾತ್ಮಕ ಸುರಕ್ಷತೆಯಿಲ್ಲದಿದ್ದಾಗ, ಮನುಷ್ಯರು ಮಾನಸಿಕವಾಗಿ ಅಸಮತೋಲನಗೊಳ್ಳುತ್ತಾರೆ. ನಿಮಗೆ ಒಂದು ಕ್ರಿಯಾಶೀಲ ಜನರ ತಲೆಮಾರು ಬೇಕಿದ್ದರೆ, ಅವರು ಪ್ರಜ್ಞಾಪೂರ್ಣರಾಗಿರಬೇಕು ಅಥವಾ ಅವರಿಗೆ ಭಾವನಾತ್ಮಕ ಸುರಕ್ಷತೆ ಒದಗಿಸಬೇಕು. ಇಲ್ಲವಾದರೆ, ಅವರು ಹುಚ್ಚರಾಗುತ್ತಾರೆ. ನಾವು ಇವೆಲ್ಲವನ್ನೂ ನಾಶಮಾಡಿದ್ದೇವೆ ಮತ್ತು ನಂತರ ನಮ್ಮ ಮಕ್ಕಳು ಹುಚ್ಚರಂತೆ ಆಡುತ್ತಿರುವುದೇಕೆ, ಯಾರ ಮೇಲೋ ಗುಂಡುಹಾರಿಸುವುದು ಅಥವಾ ತಮ್ಮ ಮೇಲೇ ಗುಂಡು ಹಾರಿಸಿಕೊಳ್ಳುವುದೇಕೆಂದು ಆಶ್ಚರ್ಯಪಡುತ್ತೇವೆ.
ಬಹುತೇಕ ಜನರ ವ್ಯಕ್ತಿತ್ವದ 80%ರಷ್ಟು ಭಾಗ ಭಾವನೆಗಳಿಂದ ರೂಪುಗೊಂಡಿರುತ್ತದೆ. ಭಾವನೆಗಳನ್ನು ಹದಗೊಳಿಸಿಕೊಳ್ಳದಿದ್ದರೆ, ಅವುಗಳನ್ನು ಜೀವನದಲ್ಲಿ ಸಕಾರಾತ್ಮಕ ಶಕ್ತಿಯಾಗಿ ಪರಿವರ್ತಿಸಿಕೊಳ್ಳದಿದ್ದಲ್ಲಿ, ಅವು ನಿಮ್ಮನ್ನು ಉಸಿರುಕಟ್ಟಿಸುತ್ತವೆ. ಇಂದು, ಭಾವಪೂರ್ಣರಾಗುವುದನ್ನು ಋಣಾತ್ಮಕ ಭಾವನೆಗಳೊಂದಿಗೆ ಸಮೀಕರಿಸಲಾಗುತ್ತಿದೆ. ಯಾರೋ ಒಬ್ಬರು ತುಂಬ ಭಾವುಕರಾದರು ಎಂದು ನಾವು ಹೇಳಿದಾಗ, ಅದರರ್ಥ ಅವರು ಸ್ವಲ್ಪ ಹುಚ್ಚರಾದರು ಎಂದಾಗುತ್ತದೆ. ಪ್ರಪಂಚದಲ್ಲಿ ನಾವಿದನ್ನು ಬದಲಾಯಿಸಬೇಕು. ಸಂತೋಷ, ಆನಂದ, ಪ್ರೇಮ, ಭಕ್ತಿ ಮತ್ತು ಪರಮಾನಂದಗಳು ಭಾವನೆಗಳೆಂದು ನಾವೇಕೆ ಒಪ್ಪಿಕೊಳ್ಳುವುದಿಲ್ಲ?
ಭಾವನಾತ್ಮಕ ಸುರಕ್ಷತೆ ಮುಖ್ಯವಾದದ್ದು, ಏಕೆಂದರೆ ಭಾವನೆಗಳು ಇನ್ನೂ ಮನುಷ್ಯರ ಆಂತರ್ಯದ ಬೃಹತ್ ಆಯಾಮವಾಗಿದೆ. ಒಬ್ಬ ವ್ಯಕ್ತಿ ನಿಜವಾದ ಅರಿವನ್ನು ಹೊಂದಿದರೆ, ಆಗ ಭಾವನೆಗಳು ಅಪ್ರಸ್ತುತವಾಗುತ್ತವೆ. ಆದರೆ ಅಲ್ಲಿಯವರೆಗೂ, ಅವುಗಳಿಗೆ ಮಹತ್ವಪೂರ್ಣವಾದ ಪಾತ್ರವಿದೆ. ಹಾಗಾಗಿ, ಮಕ್ಕಳನ್ನು ಚೆನ್ನಾಗಿ ಬೆಳೆಸಬೇಕೆಂದರೆ, ಯಾವಾಗಲೂ ಅವರ ಸುತ್ತಲೂ ಪ್ರೇಮಪೂರ್ಣ ವಾತಾವರಣ ವಿರಬೇಕು. ಮನೆಯಲ್ಲಿ ಮಾತ್ರವಲ್ಲ, ಶಾಲೆ ಮತ್ತು ಬೀದಿಯಲ್ಲೂ ಸಹ ಇರಬೇಕು.