ಗರ್ಭಿಣಿಯರ ನೆರವಿಗೆ ವಾಟ್ಸ್​ಆ್ಯಪ್ ಹೆಲ್ಪ್​ಲೈನ್

IMG-20210510-WA0029
Published on

(ಕರೊನಾದ ಈ ದಿನಗಳಲ್ಲಿ ಗರ್ಭಿಣಿಯರು ಪದೇ ಪದೇ ಆಸ್ಪತ್ರೆಗಳಿಗೆ ತಪಾಸಣೆಗೆ ಹೋಗುವುದು ಬಲು ಕಷ್ಟ. ಈ ಕಾರಣದಿಂದಾಗಿ ರಾಷ್ಟ್ರೀಯ ಮಹಿಳಾ ಆಯೋಗವು ಇಂಥ ಮಹಿಳೆಯರಿಗಾಗಿ ವಾಟ್ಸ್​ಆಪ್ ಸಹಾಯವಾಣಿ ಆರಂಭಿಸಿದೆ. ಅದು ಹೇಗೆ ಕೆಲಸ ನಿರ್ವಹಿಸುತ್ತದೆ? ಏನೆಲ್ಲಾ ನೆರವು ನೀಡುತ್ತದೆ? ಈ ಕುರಿತ ಮಾಹಿತಿ.)

ಕರೊನಾದ ಈ ಬಿಕ್ಕಟ್ಟಿನ ದಿನಗಳಲ್ಲಿ ಗರ್ಭಿಣಿಯಾದವರ ಸ್ಥಿತಿ ಬಿಸಿತುಪ್ಪವಾಗಿದೆ. ಗರ್ಭ ಧರಿಸಿರುವ ದಿನಗಳಲ್ಲಿ ಏನಾದರೂ ಸಲಹೆ ಸೂಚನೆಗಳು ಬೇಕು ಎಂದರೆ ಹೊರಗೆ ಹೋಗದಂಥ ಸ್ಥಿತಿ ಇದೆ. ಫ್ಯಾಮಿಲಿ ಡಾಕ್ಟರ್​ರನ್ನು ದೂರವಾಣಿ ಮೂಲಕ ಸಂರ್ಪಸಿ ಸಲಹೆ ಪಡೆಯುವ ಅನುಕೂಲ ಇರುವುದು ಕೆಲವೇ ಕೆಲವು ಅದೃಷ್ಟವಂತರಿಗೆ ಮಾತ್ರ. ಆದರೆ ಉಳಿದವರ ಸ್ಥಿತಿ? ಇಂಥವರ ನೆರವಿಗೆ ಧಾವಿಸಿದೆ ಕೇಂದ್ರ ಸರ್ಕಾರ.ರಾಷ್ಟ್ರೀಯ ಮಹಿಳಾ ಆಯೋಗದ ಮೂಲಕ ಇಂಥದ್ದೊಂದು ನೆರವನ್ನು ನೀಡಲಾಗುತ್ತಿದೆ. ಗರ್ಭಿಣಿಯರಿಗೆ ನೆರವಾಗುವ ದೃಷ್ಟಿಯಿಂದ ವಾಟ್ಸ್​ಆಪ್ ಸಹಾಯವಾಣಿ ತೆರೆದಿರುವ ಆಯೋಗ ಈ ಮೂಲಕ ಭಾವಿ ಅಮ್ಮಂದಿರಿಗೆ ನೆರವಾಗುತ್ತಿದೆ. ತನ್ನ ಇಮೇಲ್ ಐಡಿ ಮೂಲಕವೂ ಗರ್ಭಿಣಿಯರಿಗೆ ಸಹಾಯಹಸ್ತ ಚಾಚುತ್ತಿದೆ. ವಾಟ್ಸ್ ಆಪ್ ಮಾಡುವ ಮೂಲಕ ಕೇವಲ ವೈದ್ಯಕೀಯ ಸಲಹೆ ಮಾತ್ರವಲ್ಲದೆ, ಆನ್​ಲೈನ್ ಮೂಲಕವೂ ಔಷಧವನ್ನು ತರಿಸಿಕೊಳ್ಳುವ ಅವಕಾಶವನ್ನು ಗರ್ಭಿಣಿಯರಿಗೆ ಆಯೋಗದ ವತಿಯಿಂದ ನೀಡಲಾಗಿದೆ. ಗರ್ಭಿಣಿಯರ ದೇಹ ಪ್ರಕೃತಿ ಅತ್ಯಂತ ಸೂಕ್ಷ್ಮವಾಗಿರುವ ಕಾರಣ, ಯಾವುದೇ ಕಾರಣಕ್ಕೂ ಅವರು ಇಂಥ ಸಮಯದಲ್ಲಿ ವೈದ್ಯರನ್ನು ಕಾಣಲು ಆಸ್ಪತ್ರೆಗೆ ಹೋಗುವುದು ಅಪಾಯಕಾರಿ. ದೈಹಿಕವಾಗಿ ಎಷ್ಟೇ ಶಕ್ತರಾಗಿದ್ದರೂ ಗರ್ಭಿಣಿಯರು ಹೊರಗಡೆ ಹೋಗಬೇಡಿ ಎನ್ನುತ್ತಾರೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ವ. ಮಹಿಳೆ ಯರು ಸೋಂಕಿತರಾಗಿರಲಿ, ಬಿಡಲಿ ಮನೆಯಿಂದ ಹೊರಕ್ಕೆ ಕಾಲಿಡುವಂತಿಲ್ಲ. ಇದೇ ಕಾರಣಕ್ಕೆ ಅವರಿಗೆ ಎಲ್ಲಾ ರೀತಿಯ ನೆರವು ನೀಡುವ ನಿಟ್ಟಿನಲ್ಲಿ ಈ ಸಹಾಯವಾಣಿ ಆರಂಭಿಸಲಾಗಿದೆ ಎಂದಿದ್ದಾರೆ ಅವರು.

*ಆನ್​ಲೈನ್ ಆರ್ಡರ್​ಗೂ ಇದೆ ಅವಕಾಶ*

ಕೋವಿಡ್ ಸೋಂಕಿಲ್ಲದ ಗರ್ಭಿಣಿಯರು ಆನ್​ಲೈನ್ ಮೂಲಕವೇ ಅಗತ್ಯವಿರುವ ಔಷಧಗಳನ್ನೂ ಆರ್ಡರ್ ಮಾಡಲು ಇಲ್ಲಿ ಅವಕಾಶವಿದೆ. ಅಂಥ ಸಮಯದಲ್ಲಿ ತಾವು ಸೋಂಕಿತರಲ್ಲ ಎನ್ನುವುದನ್ನು ಮೊದಲೇ ಸ್ಪಷ್ಟಪಡಿಸಬೇಕಾ ಗುತ್ತದೆ. ಇನ್ನೂ ಒಂದು ಹೆಜ್ಜೆ ಮುಂದಿಟ್ಟಿರುವ ರಾಷ್ಟ್ರೀಯ ಮಹಿಳಾ ಆಯೋಗ, ಗರ್ಭಿಣಿಯರಿಗಷ್ಟೇ ಅಲ್ಲದೆ ಪ್ರಸವಾನಂತರದ ಸಮಸ್ಯೆಗಳಿಗೆ ಇದೇ ಸಹಾಯ ವಾಣಿ ಮೂಲಕ ಸಲಹೆ ನೀಡಲು ಮುಂದಾಗಿದೆ. ವೈದ್ಯಕೀಯ ಸೌಲಭ್ಯ ಮಾತ್ರವಲ್ಲದೆ, ಹೊರಗೆ ಹೋಗಲು ಭಯ ಪಡುತ್ತಿರುವ ಗರ್ಭಿಣಿಯರು ತಮಗೆ ರೇಷನ್, ಆಸ್ಪತ್ರೆಯಲ್ಲಿ ಹಾಸಿಗೆ ಮೀಸಲು ಇತ್ಯಾದಿಗಳ ಬಗ್ಗೆಯೂ ಕೋರಿಕೆ ಇಡುತ್ತಿರುವ ಹಿನ್ನೆಲೆಯಲ್ಲಿ ಆಯೋಗದಿಂದ ಈ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತಿದೆ.

*ಹೇಗೆ ಇದರ ಕೆಲಸ?*

ಈ ವಾಟ್ಸ್​ಆಪ್ ಸಂಖ್ಯೆಯನ್ನು ಕೇವಲ ಸಂದೇಶ ಕಳುಹಿಸಲು ಮಾತ್ರ ತೆರೆಯಲಾಗಿದೆ. ಇಲ್ಲಿ ಯಾವುದೇ ರೀತಿಯ ಕರೆಗಳಿಗೆ ಆಸ್ಪದ ಇರುವುದಿಲ್ಲ. ಮೊದಲಿಗೆ ಒಂದು ಸಂದೇಶ ಕಳುಹಿಸುವ ಮೂಲಕ ತಮಗೆ ವೈದ್ಯಕೀಯ ನೆರವು ಅಗತ್ಯವಿದೆ ಎಂದು ತಿಳಿಸಬೇಕು. ಜತೆಗೆ ಗರ್ಭಿಣಿಯರು ಸೋಂಕಿತರೇ ಇರಲಿ, ಇಲ್ಲದೇ ಇರಲಿ ಅವರು ತಮಗೆ ಅಗತ್ಯವಿರುವ ನೆರವಿನ ಬಗ್ಗೆ ವಿವರವಾಗಿ ಸಂದೇಶದಲ್ಲಿ ಅರುಹಬೇಕು. ಆಯೋಗಕ್ಕೆ ಇನ್ನೂ ಹೆಚ್ಚಿನ ಮಾಹಿತಿ ಅಗತ್ಯವಿದ್ದರೆ ಅತ್ತ ಕಡೆಯಿಂದ ಸಂದೇಶ ಬರುತ್ತದೆ. ಆಗ ಸಂಬಂಧಿತ ಮಾಹಿತಿ ನೀಡಬೇಕು. ಇದಕ್ಕಾಗಿ ತಜ್ಞ ವೈದ್ಯರ ತಂಡವೇ ಇದ್ದು, ಅಗತ್ಯ ಇರುವ ಗರ್ಭಿಣಿಯರಿಗೆ ಏನೆಲ್ಲಾ ಸಹಾಯ ಬೇಕು ಎಂಬ ಬಗ್ಗೆ ಆನ್​ಲೈನ್ ಮೂಲಕ ಸಲಹೆ ನೀಡುತ್ತಾರೆ. ಜತೆಗೆ ಆಯಾ ಗರ್ಭಿಣಿಯರ ಅಗತ್ಯಕ್ಕೆ ತಕ್ಕಂತೆ ಅವಶ್ಯವಿರುವ ಔಷಧೋಪಚಾರಗಳ ಬಗ್ಗೆಯೂ ತಿಳಿಸುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net