

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಫಲಿತಾಂಶ ಹೊರಬೀಳುತ್ತಿದ್ದಂತೆ ಪಾಲಕರು ಹಾಗೂ ವಿದ್ಯಾರ್ಥಿಗಳಲ್ಲಿ ಮುಂದೇನು ಎಂಬ ಬೃಹದಾಕಾರದ ಪ್ರಶ್ನೆ ಉದ್ಬವಿಸುತ್ತದೆ. ಯಥೇಚ್ಛವಾಗಿರುವ ಅವಕಾಶಗಳ ನಡುವೆ ಯಾವುದನ್ನು ಆಯ್ಕೆ ಮಾಡಿಕೊಳ್ಳಬೇಕೆಂಬ ಗೊಂದಲ ಮೂಡುತ್ತದೆ. ಮಕ್ಕಳ ಭವಿಷ್ಯಕ್ಕೆ ಯಾವುದು ಉತ್ತಮ ಎನ್ನುವುದರ ಕುರಿತು ವಿಜಯವಾಣಿ ಮತ್ತು ದಿಗ್ವಿಜಯ ನ್ಯೂಸ್ 24/7 ಆಯೋಜಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಜಿ.ಎಂ. ಗಣಾಚಾರಿ, ಇಲಾಖೆಯ ಜಂಟಿ ನಿರ್ದೇಶಕ (ಶೈಕ್ಷಣಿಕ) ಎನ್.ರಾಜು, ತಾಂತ್ರಿಕ ಶಿಕ್ಷಣ ಇಲಾಖೆ ಸಹಾಯಕ ನಿರ್ದೇಶಕ ಡಾ.ವೈ.ಎನ್.ದೊಡ್ಡಮನಿ ಅವರು ವಿದ್ಯಾರ್ಥಿಗಳಿಗೆ ಮಹತ್ವದ ಸಲಹೆಗಳನ್ನು ಕೊಟ್ಟಿದ್ದಾರೆ.
ಎಲ್ಲದಕ್ಕೂ ಒಳ್ಳೆ ಸ್ಕೋಪ್... ಆರ್ಟ್ಸ್, ಕಾಮರ್ಸ್, ಸೈನ್ಸ್ ಎಲ್ಲಾ ವಿಷಯಗಳು ಸರಿಸಮಾನ. ಪ್ರತಿಯೊಂದಕ್ಕೂ ಅದರದೇ ಆದ ಮೌಲ್ಯವಿದೆ. ಆರ್ಟ್ಸ್ ತೆಗೆದುಕೊಂಡರೆ ಕೆಲವರು ಆಡಿಕೊಳ್ಳುತ್ತಾರೆ. ಅಯ್ಯೋ ಆರ್ಟ್ಸ್ಗೆ ಸ್ಕೋಪ್ ಇಲ್ಲ, ಅದನ್ಯಾಕೆ ತೆಗೆದುಕೊಂಡ್ರಿ ಎನ್ನುತ್ತಾರೆ. ಅಂತಹವರ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ. ಆರ್ಟ್ಸ್ ತೆಗೆದುಕೊಂಡವರಿಗೂ ವಿಪುಲ ಅವಕಾಶಗಳಿವೆ. ಪಿಯುಸಿ ಆರ್ಟ್ಸ್ ತೆಗೆದುಕೊಂಡವರು ಬಿ.ಎ, ಬಿ.ಇಡಿ, ಎಂಎ ಮಾಡಿ ಶಿಕ್ಷಕರು ಅಥವಾ ಉಪನ್ಯಾಸಕರು ಆಗಬಹುದು. ಪತ್ರಿಕೋದ್ಯಮ ಮಾಡಿದರೆ ಪತ್ರಕರ್ತರಾಗಬಹುದು. ಬಿಎ ಓದುವಾಗಲೇ ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ಮಾಡಿಕೊಂಡರೆ ಭವಿಷ್ಯದಲ್ಲಿ ಕೆಎಎಸ್ ಮತ್ತು ಐಎಎಸ್ ಅಧಿಕಾರಿಗಳಾಗಬಹುದಾದ ಅವಕಾಶಗಳಿವೆ.
ಮಕ್ಕಳ ಮೇಲೆ ಒತ್ತಡ ಹೇರಬೇಡಿ...
ಕೆಲ ಪಾಲಕರು ತಮ್ಮ ಜೀವನದಲ್ಲಿ ಸಾಧಿಸಲಾಗದ್ದನ್ನು ಬಲವಂತವಾಗಿ ತಮ್ಮ ಮಕ್ಕಳ ಮೇಲೆ ಹೇರುತ್ತಾರೆ. ಉದಾಹರಣೆಗೆ ತಂದೆಯೊಬ್ಬರಿಗೆ ಡಾಕ್ಟರ್ ಅಥವಾ ಇಂಜಿಯರ್ ಆಗಬೇಕು ಎಂಬ ಕನಸು ಇರುತ್ತದೆ. ಅದನ್ನು ಈಡೇರಿಸಿಕೊಳ್ಳಲು ಆಗಿರುವುದಿಲ್ಲ. ಅದನ್ನು ಮಕ್ಕಳ ಮೂಲಕ ಸಾಕಾರಗೊಳಿಸಲು ಮುಂದಾಗಿ ಮಕ್ಕಳ ಆಸೆ ಆಕಾಂಕ್ಷೆಗಳಿಗೆ ಅವಕಾಶ ನೀಡದೆ ಒತ್ತಡ ಹೇರುತ್ತಾರೆ. ಇದರಿಂದ ಇಷ್ಟವಿಲ್ಲದಿರುವ ವಿಷಯವನ್ನು ಕೊಡಿಸಿ, ಅವರು ಫೇಲ್ ಆಗುವಂತೆ ಮಾಡಿ ಅವರ ಭವಿಷ್ಯವನ್ನು ಹಾಳು ಮಾಡಿದಂತಾಗುತ್ತದೆ.
ಮೊದಲೇ ವೃತ್ತಿ ಆಯ್ಕೆ ಮಾಡಿಕೊಳ್ಳಿ
ಸಾಮಾನ್ಯವಾಗಿ ಮೊದಲು ಕೋರ್ಸ್ ಆಯ್ಕೆ, ನಂತರ ವೃತ್ತಿ ಆಯ್ಕೆ ಎಂಬುದು ಎಲ್ಲರ ಯೋಚನೆ. ಹೀಗಾಗಿಯೇ ಬಹುತೇಕ ವಿದ್ಯಾರ್ಥಿಗಳು ಪದವಿ, ಪಿಜಿ ಮುಗಿದ ನಂತರವೂ ವೃತ್ತಿ ಆಯ್ಕೆಯ ಗೊಂದಲದಲ್ಲಿರುತ್ತಾರೆ. ಆದ್ದರಿಂದ, ಮೊದಲು ವೃತ್ತಿ ಆಯ್ಕೆ, ನಂತರ ಕೋರ್ಸ್ ಆಯ್ಕೆ ಎಂದುಕೊಂಡು ಪಾಲಿಸುವುದು ಸೂಕ್ತವಾಗಿದೆ. ಇದರಿಂದ ಭವಿಷ್ಯದಲ್ಲಿ ವಿದ್ಯಾರ್ಥಿಗಳು ತಮ್ಮ ಕನಸನ್ನು ಬೇಗ ನನಸು ಮಾಡಿಕೊಳ್ಳಬಹುದಾಗಿದೆ. ದ್ವಿತೀಯ ಪಿಯುಸಿ ಮುಗಿದ ನಂತರವಾದರೂ ತಮ್ಮ ಇಷ್ಟದ ವೃತ್ತಿಗೆ ಸಂಬಂಧಿಸಿದ ಕೋರ್ಸ್ಗಳನ್ನು ಆಯ್ಕೆ ಮಾಡಿದರೆ ಬೇಗ ಯಶಸ್ಸನ್ನು ಕಾಣಬಹುದು ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಸಹಾಯಕ ನಿರ್ದೇಶಕ ಗಣಾಚಾರಿ ವಿವರಿಸಿದ್ದಾರೆ.
ಕಲಾಸಕ್ತರಿಗೂ ವಿಪುಲ ಅವಕಾಶ
ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ಆರ್ಟ್ಸ್, ಸೈನ್ಸ್, ಕಾಮರ್ಸ್, ಡಿಪ್ಲೊಮ, ಐಟಿಐ ಹೀಗೆ ಬಹಳಷ್ಟು ಅವಕಾಶಗಳಿವೆ. ಓದಿನಲ್ಲಿ ಆಸಕ್ತಿ ಇಲ್ಲದವರು, ಯಾವುದಾದರೊಂದು ಕಲೆಯಲ್ಲಿ ವಿಶೇಷತೆ ಹೊಂದಿರುತ್ತಾರೆ. ಅಂತಹವರಿಗೂ ವಿಪುಲ ಅವಕಾಶಗಳಿವೆ. ಎಸ್ಸೆಸ್ಸೆಲ್ಸಿ ಪಾಸ್ ಆದ ನಂತರ ಚಿತ್ರಕಲೆ, ಕ್ರೀಡೆ, ನೃತ್ಯ, ಸಂಗೀತ ಹೀಗೆ ತಮ್ಮ ಆಸಕ್ತಿಗೆ ಅನುಗುಣವಾಗಿ ಡಿಪ್ಲೊಮಾ ಕೋರ್ಸ್ಗಳಿವೆ. ಚಿತ್ರಕಲೆಯಲ್ಲಿ ಆಸಕ್ತಿ ಇರುವವರು ಫ್ಯಾಷನ್ ಡಿನೈನಿಂಗ್ ಕೋರ್ಸ್ ಮಾಡಬಹುದು. ಸಿನಿಮಾ ಮಾಧ್ಯಮದಲ್ಲೂ ಉತ್ತಮ ಅವಕಾಶ ಹೊಂದಬಹುದಾಗಿದೆ.
ಡಿಪ್ಲೊಮಾ ಮುಗಿಸಿ ಬಿಇಗೆ ಪ್ರವೇಶ ಡಿಪ್ಲೊಮಾ ಕೋರ್ಸ್ ಮುಗಿಸಿ ನೇರವಾಗಿ ಇಂಜಿನಿಯರಿಂಗ್ (ಬಿಇ) ದ್ವಿತೀಯ ವರ್ಷಕ್ಕೆ ಪ್ರವೇಶ ಪಡೆಯಬಹುದು. ಈ ಮೂಲಕ 6 ವರ್ಷಗಳಲ್ಲಿ ಡಿಪ್ಲೊಮಾ ಹಾಗೂ ಬಿಇ ಎರಡನ್ನೂ ಮುಗಿಸಬಹುದು. ಇಂಜಿನಿಯರಿಂಗ್ ಮಾಡಿದರೆ ಆಯಾ ವಿಷಯಗಳಲ್ಲಿ ಹೆಚ್ಚಿನ ಜ್ಞಾನ ಪಡೆಯಬಹುದು. ಸಾಕಷ್ಟು ಖಾಸಗಿ ಕಂಪನಿಗಳು ವಿದ್ಯಾರ್ಥಿಗಳನ್ನು ಕೆಲಸಕ್ಕೆ ನೇಮಕಾತಿ ಮಾಡಿಕೊಳ್ಳುತ್ತಿವೆ. ಪ್ರಸ್ತುತ ಸಾಫ್ಟ್ವೇರ್ ಇಂಜಿನಿಯರಿಂಗ್ ಹಾಗೂ ಎಲೆಕ್ಟ್ರಾನಿಕ್ಸ್ ಪದವಿ ಪಡೆದವರಿಗೆ ಹೆಚ್ಚಿನ ಬೇಡಿಕೆಗಳಿವೆ ಎಂದು ತಾಂತ್ರಿಕ ಶಿಕ್ಷಣ ಇಲಾಖೆಯ (ದಾಖಲಾತಿ ವಿಭಾಗ) ಸಹಾಯಕ ನಿರ್ದೇಶಕ ಡಾ.ವೈ.ಎನ್ ದೊಡ್ಡಮನಿ ವಿವರಿಸಿದರು.
ಬಯೋಟೆಕ್ನಾಲಜಿಯಲ್ಲಿ ಪರಿಹಾರ ಸದ್ಯ ರಾಸಾಯನಿಕ ಹಾಗೂ ಪ್ಲಾಸ್ಟಿಕ್ ಬಳಕೆಯಿಂದ ಪರಿಸರ ಕಲುಷಿತಗೊಂಡಿದೆ. ಹಾಗಾಗಿ ಇದಕ್ಕೆ ಭವಿಷ್ಯದಲ್ಲಿ ಬಯೋಟೆಕ್ನಾಲಜಿ ಮೂಲಕ ಪರಿಹಾರ ಕಂಡುಕೊಳ್ಳುವ ಪ್ರಯತ್ನ ಮಾಡಬೇಕಿದೆ. ಈ ನಿಟ್ಟಿನಲ್ಲಿ ಬಯೋಟೆಕ್ನಾಲಜಿಯಲ್ಲಿ ಹೆಚ್ಚಿನ ಅಧ್ಯಯನ ಹಾಗೂ ಸಂಶೋಧನೆಗೆ ಅವಕಾಶವಿದೆ. ರೈತರು ಸಾವಯವ ಕೃಷಿ ಬೆಳೆಯಲು ಪ್ರೋತ್ಸಾಹಿಸುವ ಅಗತ್ಯವಿದೆ. ಮುಂದಿನ ದಿನಗಳಲ್ಲಿ ಇಂಧನದ ಸಮಸ್ಯೆ ಇದುರಾಗಲಿದೆ. ಆಗ ಅನಿಲದ ಬದಲಿಗೆ ಗೋಬರ್ ಗ್ಯಾಸ್ ಬಳಕೆಯ ಅಗತ್ಯ ಎದುರಾಗುವ ಸಾಧ್ಯತೆಗಳು ನಿಚ್ಚಳವಾಗಿವೆ. ಪ್ಲಾಸ್ಟಿಕ್ ನಿಮೂಲನೆಗೂ ಇದರ ಮೂಲಕವೇ ಪರಿಹಾರ ಕಂಡುಕೊಳ್ಳಬೇಕಿದೆ. ಹಾಗಾಗಿ ಭವಿಷ್ಯದ ಸಮಸ್ಯೆಗಳಿಗೆ ಬಯೋಟೆಕ್ನಾಲಜಿ ಪರಿಹಾರ ಒದಗಿಸುವ ಸಾಧ್ಯತೆಗಳು ಹೆಚ್ಚಿವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ (ಶೈಕ್ಷಣಿಕ) ಎನ್. ರಾಜು ಮಾಹಿತಿ ನೀಡಿದರು.
ಎಜುಕೇಷನ್ ಲೋನ್ ಸಿಗುತ್ತದೆ
ಮನೆಯ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರದ ವಿದ್ಯಾರ್ಥಿಗಳು ಕಡಿಮೆ ಬಡ್ಡಿದರದಲ್ಲಿ ಶೈಕ್ಷಣಿಕ ಸಾಲ ಪಡೆದು ಉನ್ನತ ಶಿಕ್ಷಣವನ್ನು ಪಡೆಯಬಹುದು. ಉದ್ಯೋಗ ಸಿಕ್ಕಿದ ನಂತರ ಅದನ್ನು ವಿದ್ಯಾರ್ಥಿಗಳೇ ತೀರಿಸಬಹುದಾಗಿದೆ. ಈ ಬಗ್ಗೆ ಮನೆ ಸಮೀಪವಿರುವ ಬ್ಯಾಂಕ್ಗಳಿಗೆ ತೆರಳಿ ಮಾಹಿತಿ ಪಡೆದುಕೊಳ್ಳಬಹುದಾಗಿದೆ.
ವಿದೇಶದಲ್ಲೂ ಕೆಲಸ
ಈ ವರ್ಷದಿಂದ ಪ್ರಾಯೋಗಿಕವಾಗಿ ಡಿಪ್ಲೊಮಾದಲ್ಲಿ ಸೈಬರ್ ಸೆಕ್ಯುರಿಟಿ ಮತ್ತು ಟೂರಿಸಂ ಕೋರ್ಸ್ಗಳನ್ನು ಆರಂಭಿಸಲಾಗುತ್ತಿದೆ. ವಿದೇಶದಲ್ಲೂ 1 ವರ್ಷದ ತರಬೇತಿ ನೀಡಲಾಗುತ್ತಿದ್ದು, ಅಲ್ಲೂ ಕೂಡ ಉದ್ಯೋಗ ಮಾಡಲು ಅವಕಾಶ ಸಿಗಲಿದೆ.
50 ಸಾವಿರ ರೂ. ಸ್ಕಾಲರ್ಶಿಪ್
ಡಿಪ್ಲೊಮಾ ಕೋರ್ಸ್ಗೆ ಅತ್ಯಂತ ಕಡಿಮೆ ಪ್ರವೇಶ ಶುಲ್ಕ ಇದೆ. ಅಲ್ಲದೆ, 50 ಸಾವಿರ ರೂ.ವರೆಗೂ ವಿದ್ಯಾರ್ಥಿ ವೇತನ ಸಿಗಲಿದೆ.