

ಅವನೊಬ್ಬ ನತದೃಷ್ಟ.
ಪ್ರಪಂಚವೆಂದ ಮೇಲೆ ಎಲ್ಲ ಬಗೆಯ ಜನರೂ ಇರಲೇಬೇಕು. ಬುದ್ಧಿವಂತರು, ದಡ್ಡರು, ಸುಂದರಾಂಗರು, ಶೋಕಿಲಾಲರು, ಚಪಲಚಿತ್ತರು, ಸಭ್ಯರು, ಸಜ್ಜನರು, ವಂಚಕರು, ದುಷ್ಟರು, ದುರುಳರು, ಹೀಗೆ... ಯಾರ ಮನಸ್ಸು ನಿಷ್ಕಲ್ಮಷವೋ, ಯಾರ ಆಂತರ್ಯ ಕಪಟವೋ, ಯಾರ ಹೃದಯದಲ್ಲಿ ನಿರ್ಮಲ ಪ್ರೀತಿಯಿದೆಯೋ, ಯಾರ ಬುದ್ಧಿ ಕೇಡಿನ ವಿಷ ಕಾರುವುದೋ ಬಳಸುವವರೆಗೂ ಅನುಭವಕ್ಕೆ ಬರುವುದಿಲ್ಲ.
ಆತನೂ ಅಷ್ಟೇ. ಅವನಿಗೊಂದು ಬದುಕಿದೆ, ಕನಸುಗಳಿವೆ, ಆಸೆಗಳಿವೆ. ಆದರೆ, ಮನೆಯಲ್ಲಿ, ಸಮಾಜದಲ್ಲಿ, ವೃತ್ತಿಸ್ಥಳದಲ್ಲಿ ಎಲ್ಲೆಲ್ಲೂ ಆತ ಒಂಟಿಯೇ. ಕಾರಣ ಆತನ ಆಕರ್ಷಕವಲ್ಲದ ವ್ಯಕ್ತಿತ್ವ. ಆತನ ಸ್ನೇಹ, ಒಡನಾಟ, ಮಾತು, ತಮಾಷೆ ಯಾರಿಗೂ ಬೇಡ. ಎದುರಿಗೆ ಬಂದರೆ ಅಪರಿಚಿತರಂತೆ ವರ್ತಿಸುವ, ಬೆನ್ನಹಿಂದೆ ಆಡಿಕೊಳ್ಳುವ ಜನರ ತಾರತಮ್ಯ ಆತನಿಗೆ ತಿಳಿದಿದೆ. ತಾನೇಕೆ ಹೀಗಾದೆ ಎಂಬ ಪ್ರಶ್ನೆ ಕಾಡುತ್ತಿದೆ. ಎಲ್ಲರಿಗೂ ಇಷ್ಟವಾಗುವಂತೆ, ಸಮಾಜದಲ್ಲಿ ಆಕರ್ಷಣೆಯ ಕೇಂದ್ರಬಿಂದುವಾಗಿ ಬದುಕಬೇಕೆಂಬ ಆಸೆ ಆತನಿಗಿದೆ. ಆದರೆ, ಹೇಗೆ?
ನಿದ್ರೆಯಲ್ಲಿ, ಎಚ್ಚರದಲ್ಲಿ, ಒಂಟಿತನದ ಏಕತಾನತೆಯಲ್ಲಿ ಆತ ಕನಸು ಕಾಣುತ್ತಾನೆ, ಕನವರಿಸುತ್ತಾನೆ. ತನ್ನಷ್ಟಕ್ಕೇ ದುಃಖಿಸುತ್ತಾನೆ. ತನಗೂ ಗೆಳೆಯರಿರಬೇಕೆಂದು ಹಂಬಲಿಸುತ್ತಾನೆ. ತನ್ನನ್ನು ಪ್ರೀತಿಸುವ ಹೃದಯವೊಂದಿರಬೇಕೆಂದು ಚಡಪಡಿಸುತ್ತಾನೆ. ಜನ ತನ್ನನ್ನೂ ಗೌರವಿಸಬೇಕು, ತನ್ನ ಅಭಿಪ್ರಾಯಗಳನ್ನು ಆಸ್ಥೆಯಿಂದ ಆಲಿಸಬೇಕು, ಸಹಾನುಭೂತಿಯಿಂದ ವರ್ತಿಸಬೇಕೆಂದು ಅಪೇಕ್ಷಿಸುತ್ತಾನೆ. ಹೋದಲ್ಲಿ, ಬಂದಲ್ಲಿ, ಇರುವಲ್ಲಿ, ಅನುಪಸ್ಥಿತಿಯಲ್ಲೂ ತನ್ನನ್ನು ಗುರುತಿಸಬೇಕೆಂದು ನಿರೀಕ್ಷಿಸುತ್ತಾನೆ. ಆದರೆ, ಆತನ ಬದುಕಿನಲ್ಲಿ ಅಂಥದ್ದೇನೂ ಆಗುವುದೇ ಇಲ್ಲ.
ಅದೊಂದು ದಿನ ಕಚೇರಿಯಲ್ಲಿ ಸಹೋದ್ಯೋಗಿಗಳನ್ನು ಈತನೇ ಮೇಲೆ ಬಿದ್ದು ಮಾತನಾಡಿಸುತ್ತಾನೆ. ಅವರಿಗೆ ಕಿರಿಕಿರಿಯಾಗುತ್ತದೆ. ‘ಸಂಜೆ ಪಾರ್ಟಿಗೆ ಹೋಗೋಣ ಬನ್ನಿ’ ಎಂದು ಒಡನಾಟ ಬೇಡುತ್ತಾನೆ. ‘ಅಯ್ಯೋ, ತುಂಬ ಕೆಲಸವಿದೆ, ಸಾಧ್ಯವೇ ಇಲ್ಲ’ ಎಂದು ಸಬೂಬು ಹೇಳುತ್ತಾರೆ. ಈತನ ಅಸಹಾಯಕತೆ, ಮನಸ್ಸಿನ ವ್ಯಥೆ ಸುತ್ತಮುತ್ತ ಇರುವವರಿಗೆ ತಮಾಷೆಯ ಸಂಗತಿಯಾಗಿ ಬಿಟ್ಟಿರುತ್ತದೆ. ಇಷ್ಟೇ ತನ್ನ ಬದುಕು ಎಂಬ ಬೇಸರದಿಂದ, ನನಗೆ ನಾನೇ ಸ್ನೇಹಿತ ಎಂಬ ಆತ್ಮಸಮಾಧಾನದಿಂದ ಆತ ಸಂಜೆ ಒಬ್ಬಂಟಿಯಾಗಿ ಪಾರ್ಟಿ ಕ್ಲಬ್ಗೆ ಹೋಗುತ್ತಾನೆ. ಅಲ್ಲಿ ನೋಡಿದರೆ, ಇವನ ಸಹೋದ್ಯೋಗಿಗಳೆಲ್ಲರೂ ಗುಂಪುಗೂಡಿದ್ದಾರೆ. ಈತನನ್ನು ಕಂಡೊಡನೆ ಛೇ, ಇವನೇಕೆ ಇಲ್ಲಿಗೆ ಬಂದ ಎಂಬ ಅಸಹನೆಯಿಂದ ಅವರೆಲ್ಲರೂ ತಲೆತಗ್ಗಿಸುತ್ತಾರೆ, ಮುಖಮುಚ್ಚಿಕೊಳ್ಳುತ್ತಾರೆ. ನಮ್ಮನ್ನು ನೋಡದಿದ್ದರೆ ಸಾಕು, ಮಾತನಾಡಿಸದಿದ್ದರೆ ಸಾಕು ಎಂದು ಮುಖ ತಿರುಗಿಸುತ್ತಾರೆ. ಆದರೆ, ಈ ನತದೃಷ್ಟ ಸ್ನೇಹಭಾವದಿಂದ ಮತ್ತೆ ಅವರತ್ತಲೇ ಹೋಗುತ್ತಾನೆ. ತನ್ನ ಉಪಸ್ಥಿತಿ ಅವರಿಗೆ ಇಷ್ಟವಿಲ್ಲ ಎಂದು ತಿಳಿದಿದ್ದರೂ ಬಲವಂತವಾಗಿ ಅವರೊಂದಿಗೇ ಕುಳಿತುಕೊಳ್ಳುತ್ತಾನೆ. ಅಷ್ಟರಲ್ಲಿ ಆತನ ಕನಸುಗಳಲ್ಲಿ ಬರುವ ಚೆಲುವೆ ದೂರದಲ್ಲಿ ಕಾಣಿಸಿಕೊಳ್ಳುತ್ತಾಳೆ. ಅವಳ ಸೌಂದರ್ಯ ನೋಡುತ್ತ ಈತ ಮೈಮರೆಯುತ್ತಾನೆ. ಆಗ ಸಹೋದ್ಯೋಗಿಗಳೆಲ್ಲರೂ, ‘ಹೋಗು ಮಾತನಾಡಿಸು, ಅವಳೊಬ್ಬಳೇ ಬಂದಿದ್ದಾಳೆ, ಇದೇ ಸುವರ್ಣಾವಕಾಶ’ ಎಂದು ಆತನನ್ನು ಸಾಗಹಾಕುತ್ತಾರೆ.
ಈತ ಅವಳೆಡೆಗೆ ಹೋಗುತ್ತಾನೆ. ಪ್ರಯತ್ನಪೂರ್ವಕವಾಗಿ ಮಾತನಾಡಿಸುತ್ತಾನೆ. ಆಕೆ ಪರಿಚಯವೇ ಇಲ್ಲದಂತೆ ವರ್ತಿಸುತ್ತಾಳೆ. ಈತನ ಕಣ್ತಪ್ಪಿಸಿ ಅಲ್ಲಿಂದ ಜಾರಿಕೊಳ್ಳುತ್ತಾಳೆ. ಈತ ಅಪಹಾಸ್ಯಕ್ಕೀಡಾಗುತ್ತಾನೆ. ಬೇಸರವಾಗುತ್ತದೆ, ಕಣ್ತುಂಬಿ ಬರುತ್ತದೆ. ಕಾಲುಗಳು ಮುಂದೆ ಹೆಜ್ಜೆ ಇಡಲಾಗದೆ ಸೋಲುತ್ತವೆ. ಆದರೆ, ಹೃದಯದಲ್ಲಿ ಆಸೆ ಬತ್ತಿರುವುದಿಲ್ಲ. ‘ದೇವರೇ, ಇವಳಿಗಾಗಿ ನಾನು ಯಾವ ತ್ಯಾಗಕ್ಕೂ ಸಿದ್ಧ. ಅವಳು ನನಗೆ ಸಿಗುವಂತೆ ಮಾಡು’ ಎಂದು ಬೇಡಿಕೊಳ್ಳುತ್ತಾನೆ. ಆತನ ಮನಸ್ಸಿನ ಮಾತನ್ನು ಪ್ರೇತಾತ್ಮವೊಂದು ಕೇಳಿಸಿಕೊಳ್ಳುತ್ತದೆ.
ಅಲ್ಲಿಂದ ಅವನ ಬದುಕು ಬದಲಾಗುತ್ತದೆ. ಅವನ ಬದುಕಿನಲ್ಲಿ ಪ್ರೇತಾತ್ಮದ ಪ್ರವೇಶವಾಗುತ್ತದೆ. ಆದರೆ ಅಲ್ಲೂ ಷರತ್ತಿರುತ್ತದೆ. ‘ನಿನಗೆ ಏಳು ವರ ಕೊಡುತ್ತೇನೆ. ನೀನು ಏನೇ ಬಯಸಿದರೂ ಅದೆಲ್ಲ ನಿನ್ನದಾಗುತ್ತದೆ. ಅದಕ್ಕೆ ಪ್ರತಿಯಾಗಿ ನಿನ್ನ ಆತ್ಮವನ್ನು ನನಗೆ ಬಿಟ್ಟುಕೊಡಬೇಕು’ ಎಂದು ಆ ಪ್ರೇತ ಷರತ್ತು ವಿಧಿಸುತ್ತದೆ.
ಮನುಷ್ಯನ ವಿಧಿಯೇ ಹಾಗೆ. ನಾವು ನಮಗಾಗಿ ಏನನ್ನೇ ಬಯಸಿದರೂ ಅದಕ್ಕೊಂದು ಪೂರ್ಣತ್ವ ಇರುವುದಿಲ್ಲ. ದೇವರು ಒಲಿದ ಅಮೃತಘಳಿಗೆಯಲ್ಲಿ ನಾವು ಜಗತ್ತಿನ ಎಲ್ಲ ಸುಖಸಂಪತ್ತುಗಳನ್ನು ಬೇಡಿ ಪಡೆದುಕೊಂಡರೂ, ನಾವು ಗ್ರಹಿಸದ, ನಮ್ಮ ಎಣಿಕೆಗೆ ನಿಲುಕದ ಅಪಾಯವೊಂದನ್ನು, ಆತಂಕವೊಂದನ್ನು, ಅಪಘಾತವೊಂದನ್ನು ವಿಧಿ ಸುಖಸಂಪತ್ತಿನ ಬೆನ್ನಿಗೆ ಕಟ್ಟಿ ಕಳುಹಿಸಿರುತ್ತದೆ. ಆಸೆಯ ಹಿಂದೆ ದುಃಖ, ಸುಃಖದ ಬೆನ್ನಿಗೇ ನೋವು, ಬೆಳಕಿನ ತರುವಾಯ ಕತ್ತಲೇ ಹೀಗೆ ಒಂದನ್ನು ಮತ್ತೊಂದು ಹಿಂಬಾಲಿಸುವ ಈ ಸೃಷ್ಟಿ ಚಕ್ರದಲ್ಲಿ ನಾವು ಮಾತ್ರ ಒಳಿತನ್ನೇ ಬಯಸುತ್ತ ಅಪಾಯವನ್ನು ಎದುರಿಸಲು ಸಿದ್ಧರಾಗಿರುವುದಿಲ್ಲ. ಆದರೆ, ವಿಧಿಯ ಕೊಡುಗೆ ಯಾವಾಗಲೂ ಪ್ಯಾಕೇಜ್ ರೂಪದಲ್ಲಿರುತ್ತದೆ. ಒಂದನ್ನು ಬಯಸಿದವರು ಇನ್ನೊಂದನ್ನೂ ಪಡೆದುಕೊಳ್ಳಲೇಬೇಕು. ಇಷ್ಟವಿಲ್ಲದಿದ್ದರೂ ಅನುಭವಿಸಲೇಬೇಕು. ಅದೇ ಪ್ರಪಂಚ.
ಆ ನತದೃಷ್ಟನ ವಿಚಾರದಲ್ಲೂ ಅದೇ ಆಗುತ್ತದೆ. ತಾನು ಜಗತ್ತಿನ ಅತ್ಯಂತ ಶಕ್ತಿಶಾಲಿ, ಶ್ರೀಮಂತ ವ್ಯಕ್ತಿ ಆಗಬೇಕು. ನನ್ನ ಕನಸಿನ ಚೆಲುವೆ ಹೆಂಡತಿಯಾಗಿರಬೇಕು ಎಂದು ಆತ ವರ ಕೇಳುತ್ತಾನೆ. ಕ್ಷಣಾರ್ಧದಲ್ಲಿ ಆತ ಡ್ರಗ್ ಮಾಫಿಯಾ ಕಿಂಗ್ಪಿನ್ ಆಗಿ ಬದಲಾಗಿರುತ್ತಾನೆ. ಜಗತ್ತಿನ ಎಲ್ಲ ಸುಖಸಂಪತ್ತೂ ಆತನ ಕಾಲಬಳಿ ಬಿದ್ದಿರುತ್ತದೆ. ಬಯಸಿದವಳೇ ಹೆಂಡತಿಯಾಗಿರುತ್ತಾಳೆ. ಆದರೆ, ಅಲ್ಲೊಂದು ವಿಧಿಯ ಟ್ವಿಸ್ಟ್ ಇರುತ್ತದೆ. ಆಕೆ ಹೆಸರಿಗೆ ಮಾತ್ರವೇ ಇವನಿಗೆ ಪತ್ನಿಯಾಗಿರುತ್ತಾಳೆ. ಆಕೆಯ ಪ್ರೀತಿ ಬೇರೊಬ್ಬನಿಗೆ ಮೀಸಲಾಗಿರುತ್ತದೆ. ಆತ ರೇಜಿಗೆಯಿಂದ ಈ ವರದ ಸಹವಾಸ ಬೇಡ ಎಂದು ಪ್ರೇತದ ಬಳಿಗೆ ಮರಳುತ್ತಾನೆ.
ಹೀಗೆ ಆತ ಆರು ಬಾರಿ ವರಗಳನ್ನು ಪಡೆದುಕೊಂಡರೂ ಆತ ಬಯಸಿದ ಜೀವನ ಅವನದ್ದಾಗುವುದಿಲ್ಲ. ಅವನು ಕವಿಯಾಗುತ್ತಾನೆ, ಭಾವಜೀವಿಯಾಗುತ್ತಾನೆ, ಕ್ರೀಡಾಪಟುವಾಗುತ್ತಾನೆ, ಎಲ್ಲರೂ ಇಷ್ಟ ಪಡುವಂಥ ಆಕರ್ಷಕ ವ್ಯಕ್ತಿಯಾಗುತ್ತಾನೆ. ಆದರೆ, ಪ್ರತೀ ಬಾರಿ ಅವನಿಗೆ ಆತ ಬಯಸಿದ ಹುಡುಗಿ, ಅವಳ ಪ್ರೀತಿ ಸಿಗದಂತೆ ವಿಧಿಯ ಟ್ವಿಸ್ಟ್ಗಳು ತಬ್ಬಿಬ್ಬಾಗಿಸುತ್ತವೆ.
ಕೊಟ್ಟಕೊನೆಯದಾಗಿ ಆತನಿಗೇ ಅರಿವಿನ ಬೆಳಕು ತೋರುತ್ತದೆ. ಬೇರೆಯವರ ಹೆಗಲನ್ನೇರಿ ಜಗತ್ತು ಗೆಲ್ಲಲು ಸಾಧ್ಯವಿಲ್ಲ. ವರಗಳ ನೆರವಿನಿಂದ, ಅದೃಷ್ಟದ ಬಲದಿಂದ ಸುಖ-ಸಿರಿವಂತಿಕೆ ಪಡೆಯುವುದು ಸಾಧ್ಯವಿಲ್ಲ. ನನಗೇ ಏನೇನು ಬೇಕೋ ನಾನೇ ಪಡೆದುಕೊಳ್ಳಬೇಕೆಂಬ ಜ್ಞಾನೋದಯವಾಗುತ್ತದೆ. ನನಗಾಗಿ ಜಗತ್ತು ಬದಲಾಗುವುದಿಲ್ಲ. ಜಗತ್ತಿಗೆ ಸರಿಯಾಗಿ ನಾನು ಬದಲಾಗಬೇಕೆಂಬ ತಿಳಿವಳಿಕೆ ಮೂಡುತ್ತದೆ. ಜನರಿಗೆ ನಾನು ಇಷ್ಟವಾಗುತ್ತಿಲ್ಲವೆಂದರೆ ನನ್ನಲ್ಲೇ ಏನೋ ದೋಷವಿದೆ. ನನ್ನ ಮಾತು, ನನ್ನ ಚರ್ಯ, ನಡವಳಿಕೆ, ಹಾವಭಾವ, ಸ್ವಭಾವ, ದೇಹಪ್ರಕೃತಿ ಅಥವಾ ಇನ್ನಾವುದೋ ಅವಲಕ್ಷಣವಿರಬೇಕು. ಜನರನ್ನು ಮೆಚ್ಚಿಸುವ ಬದುಕು ಬೇಡ, ನನ್ನ ಆತ್ಮತೃಪ್ತಿಗಾಗಿ ಬದುಕಬೇಕೆಂಬ ಛಲಮೂಡುತ್ತದೆ. ಅವನ ಬದುಕು ಅಲ್ಲಿಂದ ಬೇರೊಂದು ಹಾದಿಗೆ ಹೊರಳುತ್ತದೆ.
ಪ್ರೇತ ಕೊಟ್ಟ ಕೊನೆಯ ವರ ಬಾಕಿ ಇರುತ್ತದೆ. ‘ನಾನು ಇಷ್ಟ ಪಟ್ಟ ಹುಡುಗಿ ಎಲ್ಲೇ ಇರಲಿ, ಸುಖವಾಗಿರಲಿ’ ಎಂದು ಆತ ಬೇಡಿಕೊಳ್ಳುತ್ತಾನೆ. ಈ ಬಾರಿ ಆತ ತನಗಾಗಿ ಏನನ್ನೂ ಬೇಡುವುದಿಲ್ಲ. ಬೇಡುವುದು ಸ್ವಾರ್ಥ, ಕೊಡುವುದು ಲೋಕಹಿತ ಎಂಬ ಅರ್ಥ ಅವನಿಗಾಗಿರುತ್ತದೆ. ಲೋಕ ಬಯಸುವುದೂ ಅದನ್ನೇ. ಬೇಕು, ಬೇಕು, ಬೇಕು ಎಂಬ ಸಂಕುಚಿತ ಆಸೆಗಿಂತ ಬೇರೆಯವರ ಒಳಿತಿಗಾಗಿ, ಸಮಷ್ಟಿಯ ಹಿತಕ್ಕಾಗಿ ಹಾರೈಸುವುದು ಶ್ರೇಷ್ಠ ಎಂಬ ತಿಳಿವಳಿಕೆ ಅವನಲ್ಲಿ ನೆಮ್ಮದಿ ತರುತ್ತದೆ. ನಾನೊಬ್ಬನೇ ಚೆನ್ನಾಗಿರಬೇಕೆಂಬ ಸಣ್ಣತನಕ್ಕಿಂತ ಜಗತ್ತು ಚೆನ್ನಾಗಿದ್ದರೆ, ಆ ಸುಂದರ ಜಗತ್ತಿನಲ್ಲಿ ತಾನೂ ಇರುತ್ತೇನೆಂಬ ಭಾವನೆಯೇ ಎದೆಯಲ್ಲಿ ನಿರಾಳ ತರುತ್ತದೆ. ಅದೇ ರೀತಿ ಬೇರೆಯವರ ಒಳಿತಿಗೆ ಆಶಿಸುವ ಆತನ ಪ್ರಾರ್ಥನೆಗೆ ಈ ಬಾರಿ ವಿಧಿಯೂ ಕೈಜೋಡಿಸುತ್ತದೆ. ‘ನೀನೀಗ ನಿಜವಾದ ಮನುಷ್ಯನಾದೆ. ಇಷ್ಟ ಪಟ್ಟಿದ್ದನ್ನು ಪಡೆಯಲು ನಿನಗೀಗ ನನ್ನ ವರಗಳ ಅಗತ್ಯವಿಲ್ಲ’ ಎಂದು ಪ್ರೇತಾತ್ಮವೂ ಆತನ ಬೆನ್ತಟ್ಟುತ್ತದೆ. ಆತ್ಮ ನಮ್ಮ ಆಸ್ತಿಯಲ್ಲ. ಅದರ ಮೇಲೆ ನಮ್ಮ ನಿಯಂತ್ರಣವೂ ಇಲ್ಲ. ಅದನ್ನು ಬೇರೆಯವರಿಗೆ ಬಿಟ್ಟುಕೊಡುವುದು, ಪಡೆದುಕೊಳ್ಳುವುದು ಎರಡೂ ಸಾಧ್ಯವಿಲ್ಲ. ಜೀವವಿರುವವರೆಗೂ ದೇಹ ನಮ್ಮದು. ಆದರೆ, ಆತ್ಮಕ್ಕೆ ಸಾವಿಲ್ಲ ಎಂಬ ಸತ್ಯ ಅವನ ಗ್ರಹಿಕೆಗೆ ಬರುತ್ತದೆ. ಅಲ್ಲಿಗೆ ಪ್ರೇತಾತ್ಮ ಸ್ವಸ್ಥಾನಕ್ಕೆ ತೆರಳುತ್ತದೆ. ಈ ನತದೃಷ್ಟನ ಬದುಕಿನಲ್ಲಿ ಆತ್ಮವಿಶ್ವಾಸದ ಹೊಸಬೆಳಕು ಮೂಡುತ್ತದೆ. ಹೊಸತನದ, ಹೊಸ ಮನುಷ್ಯನ ಆವಿರ್ಭಾವ ಅವನಲ್ಲಾಗುತ್ತದೆ. ಇದೊಂದು ಹಾಲಿವುಡ್ ಚಲನಚಿತ್ರ ಹೇಳುವ ಕಥೆ.
ಜಗತ್ತೇ ಹಾಗೆ. ಮನುಷ್ಯ ಸಂಘಜೀವಿ ಎನ್ನುವುದನ್ನು ತಪ್ಪಾಗಿ ಅರ್ಥೈಸಿಕೊಂಡು ನಾವು ಪರಾವಲಂಬಿಗಳಾಗಿ ಬಿಟ್ಟಿರುತ್ತೇವೆ. ಎಲ್ಲವನ್ನೂ ಬೇರೆಯವರಿಂದ ನಿರೀಕ್ಷಿಸುತ್ತೇವೆ. ಯಾವುದೋ ಇಚ್ಛೆಯಿಂದ, ಇನ್ನಾವುದೋ ಹುಚ್ಚಿನಿಂದ, ಮತ್ತಾರನ್ನೋ ಮೆಚ್ಚಿಸಲು ಸಮಯ ವ್ಯರ್ಥ ಮಾಡುತ್ತಿರುತ್ತೇವೆ. ಯಾರೋ ಸಹಾಯ ಮಾಡಲಿ ಎಂದು ಕಾಯುತ್ತಿರುತ್ತೇವೆ. ಅನಿರೀಕ್ಷಿತಗಳು ಘಟಿಸಲಿ, ಪವಾಡಗಳು ಜರುಗಲಿ, ಅನಾಯಾಸವಾಗಿ ಎಲ್ಲವೂ ದೊರಕಲಿ ಎಂಬ ದುರಾಸೆ ಮನದ ಮೂಲೆಯಲ್ಲೆಲ್ಲೋ ಕುಳಿತ ಪರಿಣಾಮ, ನಮ್ಮ ಪ್ರಯತ್ನ, ನಮ್ಮ ಶ್ರಮ ಹಾಕುವುದನ್ನು ಕಡಿಮೆ ಮಾಡಿರುತ್ತೇವೆ. ಬದುಕೆನ್ನುವುದೊಂದು ಕಲ್ಲು ಬಂಡೆಯಂತೆ. ಅದನ್ನು ಕೆತ್ತಬೇಕಾದ ಶಿಲ್ಪಿ ನಾವೇ. ಆ ಬಂಡೆ ಬಟ್ಟೆ ಒಗೆಯುವ ಕಲ್ಲಾಗಬೇಕೋ, ದೇವರ ವಿಗ್ರಹವಾಗಬೇಕೋ ಎನ್ನುವುದು ನಮ್ಮ ಪರಿಶ್ರಮ, ನಮ್ಮ ಕೌಶಲ್ಯಕ್ಕೆ ಸೇರಿದ್ದು. ನಮ್ಮ ಪ್ರಯತ್ನ ಪ್ರಾಮಾಣಿಕವಾಗಿದ್ದಾಗ, ಪರಿಪೂರ್ಣವಾಗಿದ್ದಾಗ ವಿಧಿಯೂ ನಮ್ಮ ನೆರವಿಗೆ ಬರುತ್ತದೆ. ಕೊಟ್ಟಿದ್ದು ತಮಗೆ, ಬಚ್ಚಿಟ್ಟದ್ದು ಪರರಿಗೆ ಎಂಬಂತೆ ನಮ್ಮ ಸ್ವಾರ್ಥಕ್ಕಿಂತ ಎಲ್ಲರ ಹಿತ ಬಯಸುವುದರಲ್ಲೇ ಸುಖವಿದೆ. ಜೀವನದ ಸಾರ್ಥಕತೆ ಇದೆ. ಏನಂತೀರಿ...
(ಲೇಖಕರು 'ವಿಜಯವಾಣಿ'ಡೆಪ್ಯೂಟಿ ಎಡಿಟರ್)