ಸರ್ಕಾರಕ್ಕೆ ನಿಷ್ಠ ಮೂರು ಲಕ್ಷದಷ್ಟಿದ್ದ ಸೇನೆಯನ್ನು ಪರಾಭವಗೊಳಿಸಿ, ರಾಜಧಾನಿ ಕಾಬುಲ್ ಸಹಿತ ದೇಶದೆಲ್ಲೆಡೆ ಕೊಲೆ, ಸುಲಿಗೆ, ಅತ್ಯಾಚಾರದ ತಾಂಡವ ನಡೆಸುತ್ತಿರುವ ಮತಾಂಧ ಎಪ್ಪತ್ತು-ಎಂಬತ್ತು ಸಾವಿರ ತಾಲಿಬಾನಿಗಳು ಸೃಷ್ಟಿಸಿರುವ ಅರಾಜಕತೆಯಿಂದ ಇಡೀ ಅಫ್ಘಾನಿಸ್ತಾನ ಹತಾಶೆ-ನಿರಾಶೆಯ ಕೂಪದಲ್ಲಿದೆ. ಮಿಲಿಟರಿ-ಪೊಲೀಸ್ ಅಧಿಕಾರಿಗಳನ್ನು, ಸರ್ಕಾರಕ್ಕೆ ನಿಷ್ಠರಾಗಿದ್ದವರನ್ನು ಹುಡುಕಿ ಚಿತ್ರಹಿಂಸೆ ನೀಡಿ ಕೊಲ್ಲುತ್ತಿರುವ, ಮಹಿಳೆಯರ-ಮಕ್ಕಳ ದಾರುಣ ಆಕ್ರಂದನ ಮನಕಲಕುವಂತಹದು. ಬದುಕುವ ಉತ್ಕಟ ಇಚ್ಛೆಯಿಂದ ಹೇಗಾದರೂ ಸರಿ ಎಲ್ಲಾದರೂ ಸರಿ ಎಂದು ಉಟ್ಟಬಟ್ಟೆಯಲ್ಲಿ ಓಡುತ್ತಿರುವ ಅಫ್ಘನ್ನರ ದಯನೀಯ ಸ್ಥಿತಿ ನಿಜಕ್ಕೂ ಶೋಚನೀಯ. 75 ವರ್ಷಗಳ ಸ್ವತಂತ್ರ ಭಾರತದ ಪ್ರಜಾಪ್ರಭುತ್ವದ ನೆರಳಿನಲ್ಲಿ ನೆಮ್ಮದಿಯ ಜೀವನ ನಡೆಸುತ್ತಿರುವ ನಾವು ಭಾರತೀಯರು ಇದರಿಂದ ಪಾಠ ಕಲಿತುಕೊಳ್ಳಬೇಕಾಗಿದೆ.