ಕ್ರೀಡೆಯಲ್ಲಿ ನಮ್ಮಿಂದ ಹೆಚ್ಚು ಸಾಧನೆ ಸಾಧ್ಯವಿಲ್ಲವೆ?

Heggade Column
Published on
ಒಲಿಂಪಿಕ್ಸ್ ಎನ್ನುವುದು ಜಗತ್ತಿನ ಕ್ರೀಡಾಸಕ್ತರಿಗೆ ರಸದೌತಣ ನೀಡುವ ಕ್ರೀಡಾಹಬ್ಬ. ನಾಲ್ಕು ವರ್ಷಕ್ಕೊಮ್ಮೆ ನಡೆಯುವ ಈ ಕ್ರೀಡೋತ್ಸವ ಈ ಬಾರಿ ಜಪಾನ್​ನಲ್ಲಿ ಆಯೋಜನೆಗೊಂಡು ಯಶಸ್ವಿಯಾಗಿ ಸಂಪನ್ನಗೊಂಡಿತು. ವರುಷಗಳಿಂದ ಅವಿರತ ಪರಿಶ್ರಮಪಟ್ಟು ವಿಶ್ವಮಟ್ಟದಲ್ಲಿ ಮಿಂಚಬೇಕು, ಪದಕಗಳನ್ನು ಗೆಲ್ಲಬೇಕು, ದೇಶದ ಕೀರ್ತಿಯನ್ನು ಹೆಚ್ಚಿಸಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಅನೇಕ ಕ್ರೀಡಾಪಟುಗಳು ನಿಂತಿದ್ದರು. ಅನೇಕರು ಗುರಿ ಮುಟ್ಟಲು ಯಶಸ್ವಿಯಾಗಿ ಸ್ವರ್ಣ, ರಜತ, ಕಂಚು ಪದಕಗಳನ್ನು ಮುಡಿಗೇರಿಸಿಕೊಂಡರೆ ಇನ್ನೂ ಹಲವಾರು ಕ್ರೀಡಾಪಟುಗಳು ಅಂತಿಮ ಹಂತದಲ್ಲಿ ಎಡವಿದ್ದಾರೆ. ಜನಸಂಖ್ಯೆಯಲ್ಲಿ ಹಿರಿದಾದ ರಾಷ್ಟ್ರಗಳನ್ನು ಹಿಂದಿಕ್ಕಿ ಸಣ್ಣ ರಾಷ್ಟ್ರಗಳು ಕೂಡ ಅಮೋಘ ಸಾಧನೆ ಮಾಡಿವೆ.

ಭಾರತವೂ ಜನಸಂಖ್ಯೆಯ ಆಧಾರದಲ್ಲಿ ಹಿರಿದಾದ ರಾಷ್ಟ್ರವಾಗಿದೆ. ಆದರೆ ಒಲಿಂಪಿಕ್ಸ್​ನಂತಹ ಕ್ರೀಡಾಕೂಟಗಳಲ್ಲಿ ಕನಿಷ್ಠ ದರ್ಜೆ ಪಡೆಯುತ್ತಿದೆ. ಯಾಕೆ ಹೀಗೆ ಆಗುತ್ತಿದೆ? ನಮ್ಮಿಂದ ಸಾಧನೆ ಮಾಡಲು ಸಾಧ್ಯವಿಲ್ಲವೇ? ನಾವೆಲ್ಲಿ ಎಡವಿದ್ದೇವೆ? ಎಂದು ಗಮನಿಸಿದಾಗ, ಸಾಮಾನ್ಯವಾಗಿ ಎಲ್ಲರೂ ಟೀಕೆ ಮಾಡುವವರೇ. ಇಷ್ಟು ಜನಸಂಖ್ಯೆ ಇದೆ, ಆದರೆ ಯಶಸ್ವಿಯಾಗುವ ಆಟಗಾರರು ಒಲಿಂಪಿಕ್ಸ್​ನಲ್ಲಿ ಪ್ರತಿಬಿಂಬಿಸಲು ಇಲ್ಲವೇ? ಎಂದು ಕೆಳುತ್ತಾರೆ. ಕ್ರೀಡಾಸ್ಪೂರ್ತಿಯ ಮನೋಭಾವ ನಮ್ಮಲ್ಲಿ ಕಡಿಮೆ ಇರುವುದರಿಂದ ಕ್ರೀಡೆಗಳಿಗೆ ಹೆಚ್ಚಿನ ಮಾನ್ಯತೆ ಹಾಗೂ ಮಹತ್ವ ನೀಡದ ಕಾರಣ ಅಪಹಾಸ್ಯಪ್ರಜ್ಞೆ ಬೆಳೆದಿದೆ. ಈ ಬಾರಿ ಒಲಂಪಿಕ್ಸ್​ನಲ್ಲಿ ಭಾರತ ಒಂದು ಚಿನ್ನದ ಪದಕ ಸೇರಿದಂತೆ ಒಟ್ಟು 7 ಪದಕ ಸಂಪಾದಿಸಿದೆ. ಈ ಗೆಲುವಿಗೆ ಮುಖ್ಯ ಕಾರಣ ಕ್ರೀಡಾಸ್ಪೂರ್ತಿ. ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕ್ರೀಡಾಪಟುಗಳನ್ನು ಉದ್ದೇಶಿಸಿ ಸ್ಪೂರ್ತಿಯ ಮಾತುಗಳನ್ನಾಡಿ ಹುರಿದುಂಬಿಸಿದ್ದರು. ಕ್ರೀಡಾಕೂಟದ ನಂತರ ಕೂಡ, ಪ್ರಧಾನಿಯವರು ಸೋತರು-ಗೆದ್ದರು ಎಂದು ಭೇದ ಭಾವಿಸದೆ ಕ್ರೀಡಾಪಟುಗಳೊಂದಿಗೆ ವೈಯಕ್ತಿಕವಾಗಿ ಕ್ರೀಡಾಸ್ಪೂರ್ತಿಯ ಮಾತುಗಳನ್ನಾಡಿ ಅಭಿನಂದಿಸುವ ಮೂಲಕ ಹೊಸ ಶಕೆಗೆ ನಾಂದಿ ಹಾಡಿದ್ದಾರೆ.

ಇವತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಾಕಷ್ಟು ಅವಕಾಶಗಳಿವೆ. ಸುಮಾರು 50 ವರ್ಷಗಳ ಹಿಂದೆ ಶೇ.10% ಪೋ›ತ್ಸಾಹವೂ ಕ್ರೀಡೆಗಳಿಗೆ ಇರಲಿಲ್ಲ. ನಗರದಲ್ಲಿರುವ ವಿದ್ಯಾರ್ಥಿಗಳು ಮುಕ್ತವಾಗಿ ಸ್ಪರ್ಧೆಗೆ ಭಾಗವಹಿಸುತ್ತಿದ್ದರು. ಗ್ರಾಮೀಣದಲ್ಲಿ ಸಾಮಾನ್ಯವಾಗಿ ಎಂಟು-ಒಂಬತ್ತು ತರಗತಿಯ ಮಕ್ಕಳು ಅದರಲ್ಲೂ ವಿಶೇಷವಾಗಿ ಹೆಣ್ಣುಮಕ್ಕಳು ಏನಾದರೂ ಕ್ರೀಡೆಯಲ್ಲಿ ಆಸಕ್ತಿ ತೋರಿಸಿದರೆ ಮನೆಯವರು ‘ನೀನು ಮಿತಿ ಮೀರಿ ಹೋಗುತ್ತಿದ್ದೀಯ, ಹೆಣ್ಣುಮಕ್ಕಳಿಗೆ ಇಂತಹ ಕ್ರೀಡೆಗಳು ಸರಿಯಲ್ಲ’ ಅಂತ ಹೇಳಿ ಅವರಿಗೆ ಅವಕಾಶವನ್ನೇ ಕೊಡುತ್ತಿರಲಿಲ್ಲ. ಇನ್ನು ಅನೇಕ ಪ್ರಾಥಮಿಕ, ಪ್ರೌಢ ಶಾಲೆಗಳಲ್ಲಿ ಮಕ್ಕಳಿಗೆ ಆಟಕ್ಕೆ ಎಂದು ವಾರದಲ್ಲಿ ಕೇವಲ ಒಂದು ಅಥವಾ ಎರಡು ಗಂಟೆ ಮೀಸಲಿರಿಸಲಾಗುತ್ತಿತ್ತು. ಈ ಅವಧಿಯಲ್ಲಿ ಕಾಟಾಚಾರಕ್ಕೆ ಏನೋ ಆಟ ಆಡಿಸುತ್ತಿದ್ದದ್ದು ಹೊರತುಪಡಿಸಿದರೆ, ಮಕ್ಕಳ ಕ್ರೀಡಾಸಕ್ತಿ ಕಡೆ ಶಿಕ್ಷಕರು ಗಮನ ಹರಿಸಿರಲಿಲ್ಲ. ಸ್ಪರ್ಧಾ ಕೂಟದಲ್ಲಿ ನಗರದ ಮಕ್ಕಳು ಕಾಲಿಗೆ ಶೂ, ಸ್ಪೈಕ್ಸ್ ಹಾಕಿಕೊಂಡು ಓಡಿದರೆ ಗ್ರಾಮೀಣ ಮಕ್ಕಳು ಬರಿಗಾಲಿನಲ್ಲಿ ಓಡುತ್ತಿದ್ದರು. ಹೀಗಾಗಿ ನಾವು ಧರ್ಮಸ್ಥಳ ಹೈಸ್ಕೂಲು ಮತ್ತು ಪ್ರಾಥಮಿಕ ಶಾಲೆಗಳಲ್ಲಿ ಕ್ರೀಡೆಗೆ ವಿಶೇಷ ಪೋ›ತ್ಸಾಹ ಕೊಟ್ಟು ಒಂದು ಕ್ರೀಡಾ ಸಂಘವನ್ನೇ ಮಾಡಿದೆವು. ಇದರಲ್ಲಿ ಪ್ರಾಥಮಿಕ ಹಂತದಲ್ಲಿ ಕ್ರೀಡಾ ಅಧ್ಯಾಪಕರು, ದೈಹಿಕ ಶಿಕ್ಷಣ ಶಿಕ್ಷಕರು ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ಅವರಿಗೆ ಪೋ›ತ್ಸಾಹ ನೀಡಬೇಕು, ಪ್ರೌಢಶಿಕ್ಷಣದ ಸಂದರ್ಭದಲ್ಲಿ ಕ್ರೀಡಾ ಕೋಟದ ಮೂಲಕ ಅಂತಹ ವಿದ್ಯಾರ್ಥಿಗಳಿಗೆ ವಿಶೇಷ ಮನ್ನಣೆ ನೀಡುವ ಕಾರ್ಯವನ್ನು 45 ವರ್ಷದ ಹಿಂದೆ ಆರಂಭ ಮಾಡಿದ್ದೆವು. ಇದರಿಂದಾಗಿ ಹೆಣ್ಣುಮಕ್ಕಳಿಗೆ ಸಂಕೋಚ ಕಡಿಮೆಯಾಯಿತು. ಮನೆಯವರು ಕೂಡ ಬೆಂಬಲ ವ್ಯಕ್ತಪಡಿಸಿದರು. ತರಬೇತಿಗೆ ಸೂಕ್ತ ಸಲಕರಣೆಗಳನ್ನು ಒದಗಿಸಲಾಯಿತು, ಹಳ್ಳಿಯ ಯುವ ಪ್ರತಿಭೆಗಳು ಬೆಳಕಿಗೆ ಬರಲಾರಂಭಿಸಿದವು. ರಾಜ್ಯ, ರಾಷ್ಟ್ರಮಟ್ಟದಲ್ಲೂ ಸ್ಥಾನ ಪಡೆದರು. ನಾವು ಗ್ರಾಮೀಣ ಯುವಕ ಯುವತಿಯರಿಗೆ ಮತ್ತು ಸಮಾಜದ ಎಲ್ಲ ವರ್ಗದವರಿಗೆ ಪೋ›ತ್ಸಾಹ ಕೊಟ್ಟು ಕ್ರೀಡೆ ಮತ್ತು ಆಟೋಟಗಳಲ್ಲಿ ಆಸಕ್ತಿ ಬೆಳೆಸುವಂತೆ ಮಾಡುವುದು ಬಹಳ ಅಗತ್ಯವಾಗಿದೆ.

‘ನೀವು ಒಂದೋ ಓದಬೇಕು ಅಥವಾ ಕ್ರೀಡೆಗೆ ಹೋಗಬೇಕು. ಎರಡೂ ಆಗೋದಿಲ್ಲ’ ಎನ್ನುವಂತಹ ಮಾತನ್ನು ತಂದೆ ತಾಯಿಗಳು ಹೇಳುತ್ತಿದ್ದರು. ಹೀಗಾಗಿ ಕ್ರೀಡಾಪಟುಗಳು ವಿದ್ಯೆಯನ್ನೋ ಅಥವಾ ಕ್ರೀಡೆಯನ್ನೋ ಅರ್ಧದಲ್ಲೇ ಮೊಟಕುಗೊಳಿಸುತ್ತಿದ್ದರು. ಇದನ್ನು ಗಮನಿಸಿ ಸರ್ಕಾರಗಳು ಕ್ರೀಡಾಪಟುಗಳ ಅಧ್ಯಯನಕ್ಕೆ ಮತ್ತು ಪ್ರಗತಿಗೆ ತೊಂದರೆಯಾಗದಂತೆ ಶೈಕ್ಷಣಿಕ ಕ್ಷೇತ್ರದಲ್ಲಿ ಮೀಸಲಾತಿ ಪ್ರಕಟಿಸಿವೆ ಮತ್ತು ವಿಶೇಷ ಸವಲತ್ತುಗಳನ್ನೂ ಒದಗಿಸುತ್ತಿವೆ. ಸರಕಾರ ಸ್ಪೋರ್ಟ್ಸ್ ಅಥಾರಿಟಿ ಆಫ್ ಇಂಡಿಯಾ (ಖಅಐ) ಸಂಸ್ಥೆಯ ಮೂಲಕ ಕ್ರೀಡಾಪಟುಗಳಿಗೆ ಪೋ›ತ್ಸಾಹ ನೀಡುತ್ತಿದೆ. ಆದರೆ ಇನ್ನೂ ಹೆಚ್ಚಿನ ಪೋ›ತ್ಸಾಹ ಅಗತ್ಯವಿದೆ. ಒಲಂಪಿಕ್ಸ್​ನಲ್ಲಿ ನಮ್ಮವರು ಹೆಚ್ಚಿನ ಪದಕಗಳನ್ನು ಗೆಲ್ಲಬೇಕಾದರೆ ವಿಶೇಷವಾಗಿ ನಮ್ಮ ಪ್ರಾಥಮಿಕ, ಪ್ರೌಢ ಮತ್ತು ಉನ್ನತ ಶಿಕ್ಷಣಗಳಲ್ಲಿ ಕ್ರೀಡೆಗೆ ಮಹತ್ವ ಮತ್ತು ಅವಕಾಶಗಳನ್ನು ಕೊಡಬೇಕು.

ಕ್ರೀಡೆಯಲ್ಲಿ ಸಾಧನೆ ಮಾಡಿದರೆ ಉದ್ಯೋಗ ದೊರೆಯುವುದಿಲ್ಲ, ಅದಕ್ಕೆ ಶೈಕ್ಷಣಿಕವಾಗಿ ಸಾಧನೆ ಮಾಡಬೇಕು, ದಡ್ಡರಿಗೆ ಮಾತ್ರ ಕ್ರೀಡೆ ಎನ್ನುವ ತಪ್ಪು ಕಲ್ಪನೆ ಜನರಲ್ಲಿತ್ತು. ಇಂತಹ ತಪ್ಪು ಕಲ್ಪನೆ ಹೋಗಲಾಡಿಸುವ ನಿಟ್ಟಿನಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಶ್ರಮಿಸಿವೆ. ಕೇಂದ್ರ ಸರ್ಕಾರದ ಎಲ್ಲ ಇಲಾಖೆಗಳಲ್ಲಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಕ್ರೀಡಾ ಕೋಟದ ಮೂಲಕ ಉದ್ಯೋಗದ ಮೀಸಲಾತಿ ಒದಗಿಸಲಾಗಿದೆ.

ಮಹಾಭಾರತದಂತಹ ಪುರಾಣ ಗಮನಿಸಿದರೆ ಅಂಗಸಾಧನೆಗೆ ಬಹಳ ಪ್ರಾಶಸ್ತ್ಯವನ್ನು ಕೊಟ್ಟಿವೆ. ರಾಮ ಲಕ್ಷ್ಮಣರ ದೇಹ ಸೌಂದರ್ಯ ಮಾನಸಿಕ ಸೌಂದರ್ಯಕ್ಕಿಂತ ವಿಶೇಷವಾದದ್ದು. ಬಾಲ್ಯದಿಂದಲೇ ರಾಜಕುಮಾರರಾಗಲಿ, ಸಾಮಾನ್ಯ ಪ್ರಜೆಗಳಾಗಲಿ ವ್ಯಾಯಾಮ ಮಾಡಬೇಕು, ಮತ್ತು ಬಿಲ್ವಿದ್ಯೆ, ಕತ್ತಿ ವರಸೆ, ಗದೆ ಬಳಕೆ, ಕುದುರೆ ಸವಾರಿ, ಒಂಟೆ ಸವಾರಿ ಹೀಗೆ ಯಾವುದಾದರೊಂದು ವಿದ್ಯೆಯಲ್ಲಿ ಪ್ರಾವೀಣ್ಯ ಪಡೆಯಬೇಕು. ಆಗಿನ ಕಾಲದಲ್ಲೇ ಸ್ಪರ್ಧೆ, ಕ್ರೀಡೆಗಳಿಗೆ ಹೆಚ್ಚಿನ ಮಹತ್ವವನ್ನು ಭಾರತ ನೀಡಿತ್ತು.

ಮಹಾಭಾರತದಲ್ಲಿ ದ್ರೋಣಾಚಾರ್ಯರು ಎಲ್ಲ ಶಿಷ್ಯರಿಗೆ ವಿದ್ಯೆ ಕಲಿಸಿ ಅವರ ಏಕಾಗ್ರತೆ ಪರೀಕ್ಷಿಸಲು, ‘ನೀವು ನಿಮ್ಮ ಬಿಲ್ವಿದ್ಯೆಯ ಸಾಮರ್ಥ್ಯನ್ನು ತೋರಬೇಕಾಗಿದೆ. ದೂರದಲ್ಲಿರುವ ಆ ಮರದ ಕೊಂಬೆ ಮೇಲೆ ಮರದ ಪಕ್ಷಿಯೊಂದನ್ನು ಇರಿಸಲಾಗಿದ್ದು, ಅದರ ಕಣ್ಣಿಗೆ ಬಣ್ಣವನ್ನು ಲೇಪಿಸಲಾಗಿದೆ. ನೀವೀಗ ಆ ಪಕ್ಷಿಯತ್ತ ಗುರಿಯಿಟ್ಟು ಅದರ ಕಣ್ಣಿಗೆ ಬಾಣ ಪ್ರಯೋಗಿಸಬೇಕು’ ಎಂಬುದಾಗಿ ಆದೇಶಿಸುವರು. ಮೊದಲು ಯುಧಿಷ್ಠಿರ ಅವಕಾಶ ಪಡೆಯುತ್ತಾನೆ. ಪಕ್ಷಿಯತ್ತ ಗುರಿಯಿಟ್ಟ ಯುಧಿಷ್ಠಿರನಲ್ಲಿ ದ್ರೋಣಾಚಾರ್ಯರು, ‘ನೀನೇನನ್ನು ಕಾಣುತ್ತಿರುವಿ ತಿಳಿಸು’ ಎಂದು ಪ್ರಶ್ನಿಸುತ್ತಾರೆ. ಆಗ ಯುಧಿಷ್ಠಿರನು ‘ನಾನು ಪಕ್ಷಿ, ಮರ, ಮರದಲ್ಲಿರುವ ಹಣ್ಣುಗಳು ಹಾಗೂ ಮರದ ಮೇಲಿರುವ ಮತ್ತಿತರ ಪಕ್ಷಿಗಳನ್ನೂ ಕಾಣುತ್ತಿದ್ದೇನೆ’ ಎನ್ನುತ್ತಾನೆ. ಆಗ ದ್ರೋಣರು ‘ನೀನು ಹೋಗು’ ಎನ್ನುತ್ತಾರೆ.

ದುರ್ಯೂೕಧನನಲ್ಲೂ ದ್ರೋಣಾಚಾರ್ಯರು ಅದೇ ಪ್ರಶ್ನೆ ಕೇಳಲಾಗಿ, ಅದಕ್ಕವನು ಪಕ್ಷಿ, ಎಲೆಗಳು, ಹಣ್ಣುಗಳು, ಮತ್ತೊಂದು ಪಕ್ಷಿ ಎನ್ನುತ್ತಾನೆ. ಭೀಮಸೇನ ಸಹ ಪಕ್ಷಿ, ಮರ, ಹಣ್ಣುಗಳು ಎಂದಾಗ ಇಬ್ಬರಿಗೂ ಹೊರಡಲು ದ್ರೋಣರು ಸೂಚಿಸುತ್ತಾರೆ. ನಕುಲ-ಸಹದೇವರದ್ದೂ ಹಾಗೆಯೇ ಆಗುತ್ತದೆ. ಕಟ್ಟಕಡೆಯ ಸರದಿ ಅರ್ಜುನನದ್ದಾಗಿರುತ್ತದೆ: ಅರ್ಜುನ, ‘ಗುರುದೇವ, ನಾನು ಪಕ್ಷಿಯ ಕಣ್ಣನ್ನಲ್ಲದೇ ಮತ್ತೇನನ್ನೂ ನೋಡುತ್ತಿಲ್ಲ’ ಎನ್ನುತ್ತಾನೆ. ದ್ರೋಣರು ಬಾಣ ಪ್ರಯೋಗಿಸಲು ಆದೇಶಿಸುತ್ತಾರೆ. ಬಾಣ ಗುರಿಗೆ ತಲುಪುತ್ತದೆ.

ಈ ವರ್ಷ ಅನೇಕರು ಬಿಲ್ವಿದ್ಯೆಯಲ್ಲಿ ಸ್ಪರ್ಧೆಗೆ ಹೋದರು. ಮಹಾಭಾರತದಲ್ಲಿನ ಪ್ರಸಂಗದ ಹಾಗೆ, ಪಕ್ಷಿಗಳ ಗುರಿ ಹಿಡಿದಾಗ ಆ ಹಕ್ಕಿಯ ಕಣ್ಣು ಮಾತ್ರ ಕಾಣಬೇಕೆ ಹೊರತು ಅಲ್ಲಿರುವ ಮರ, ಕೊಂಬೆ, ಸುತ್ತಮುತ್ತಲಿನ ಪರಿಸರ ಕಾಣಿಸಿದರೆ ಏಕಾಗ್ರತೆಯ ಕೊರತೆಯಾಗಿ ಗುರಿ ಮುಟ್ಟುವ ಸಾಧ್ಯತೆ ತಗ್ಗುತ್ತದೆ.

ಟಿ.ವಿ.ಯಲ್ಲಿ ‘ಓ ಮೈ ಗಾಡ್’ ಎಂಬ ಕಾರ್ಯಕ್ರಮವಿದೆ. ಅದರಲ್ಲಿ ಅನೇಕ ಸಾಧಕರನ್ನು ಪರಿಚಯಿಸುತ್ತಾರೆ. ಒಬ್ಬ ಯುವಕನಂತೂ ತಲೆಗೆ ಹೆಲ್ಮೆಟ್ ಧರಿಸಿ, ಸೈಕಲ್​ನ ಸೀಟಿನ ಮೇಲೆ ಶೀರ್ಷಾಸನ ಮಾಡುತ್ತಾ ಸೈಕಲ್ ಓಡಿಸುತ್ತಾನೆ. ಅಂತಹವರು ಇನ್ನೂ ಹೆಚ್ಚಿನ ಸಾಧನೆ ಯಾಕೆ ಮಾಡಬಾರದು? ಟಿ.ವಿ. ಕಾರ್ಯಕ್ರಮವೊಂದರಲ್ಲಿ ಗ್ರಾಮೀಣ ಪ್ರದೇಶದ ಸಂಗೀತ ಗುರುಗಳು ತಮ್ಮ ಅನುಭವವನ್ನು ಹೇಳುತ್ತ, ‘ನನ್ನ ಬಳಿ ಅಭ್ಯಾಸಕ್ಕೆ ಬಂದವರು ನಮಗೆ ಶಾಸ್ತ್ರೀಯ ಸಂಗೀತ, ರಾಗ, ತಾಳ, ಲಯ ಅದೆಲ್ಲ ಏನೂ ಬೇಡ ಸ್ವಾಮಿ, ಸ್ಪರ್ಧೆಯಲ್ಲಿ, ರಿಯಾಲಿಟಿ ಶೋಗಳಲ್ಲಿ ಗೆಲ್ಲುವ, ಬಹುಮಾನ ಪಡೆದುಕೊಳ್ಳುವ ಸಂಗೀತ, ನೃತ್ಯ ಕಲಿಸಿ ಎಂದೆನ್ನುತ್ತಾರೆ’ಎಂದರು. ಇದರಿಂದಾಗಿ ಕೇವಲ ಸ್ಪರ್ಧೆಗಾಗಿ ಹಾಗೂ ಪ್ರಚಾರಕ್ಕಾಗಿ ಎಷ್ಟೇ ಸಾಧನೆ ಮಾಡಲು ಸಿದ್ಧರಿದ್ದಾರೆ ಎನ್ನುವುದು ಗೊತ್ತಾಗುತ್ತದೆ. ಆದರೆ ದೇಶ ಅಥವಾ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಬೇಕೆಂಬ ಉತ್ಸಾಹವನ್ನು ತೋರುವುದಿಲ್ಲ.

ಈಗ ಇರುವ 300 ಕ್ರೀಡಾ ಕೇಂದ್ರಗಳನ್ನು ಸಾವಿರ ಕೇಂದ್ರಗಳನ್ನಾಗಿಸುತ್ತೇವೆ ಎಂದು ಕೇಂದ್ರ ಸರ್ಕಾರ ಹೇಳಿದೆ. ಪ್ರಧಾನ ಮಂತ್ರಿಯವರು ಕ್ರೀಡೆಗೆ ಪೋ›ತ್ಸಾಹ ನೀಡುತ್ತಿದ್ದಾರೆ. ಮೊದಲು ಗ್ರಾಮೀಣ ಪ್ರದೇಶಗಳಲ್ಲಿರುವ ಪ್ರತಿಭೆಗಳನ್ನು ಸ್ಥಳೀಯ ಸಂಘ-ಸಂಸ್ಥೆಗಳು ಗುರುತಿಸಿ ಹೆಚ್ಚಿನ ತರಬೇತಿಗೆ ಅವಕಾಶ ಒದಗಿಸಿಕೊಡಬೇಕು. ಆಗ ಶಾಲೆ-ಕಾಲೇಜು, ವಲಯ, ವಿ.ವಿ, ರಾಜ್ಯ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಾಧನೆ ಮಾಡಲು ಸಾಧ್ಯ. ಕಳೆದ ಮೂವತ್ತು ವರ್ಷಗಳಿಂದ ಈಚೆಗೆ ಹಾಕಿ, ಫುಟ್​ಬಾಲ್ ಆಟವನ್ನು ಮೀರಿಸಿ ಕ್ರಿಕೆಟ್ ಹೆಚ್ಚಿನ ಜನಪ್ರಿಯತೆ ಪಡೆಯಿತು. ಅನೇಕರು ರಾಷ್ಟ್ರೀಯ ಮಟ್ಟದ ಕ್ರಿಕೆಟ್ ಟೀಮ್ೆ ಸೇರಬೇಕೆಂಬ ಆಸೆ ಹೊಂದಿರುತ್ತಾರೆ. ಅದಕ್ಕಾಗಿ ಶ್ರಮ ಪಡುತ್ತಾರೆ, ಸಾಧನೆ ಮಾಡಲು ಸಿದ್ಧರಿರುತ್ತಾರೆ. ಕ್ರಿಕೆಟ್ ಅಥವಾ ಇನ್ನಿತರ ಆಟವಾದರೂ ಸರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಬಹುದಾದ ಪ್ರತಿಭೆಗಳನ್ನು ಹೊಂದಿರುವ ದೇಶ ನಮ್ಮದಾಗಿದೆ.

ಒಟ್ಟಿನಲ್ಲಿ ಎಲ್ಲರೂ ಕ್ರೀಡಾಸ್ಪೂರ್ತಿಯಿಂದ ಆಡಬೇಕು ಹಾಗೂ ತಂಡದ ಜೊತೆ ಆಡುವಾಗ ತಾನು ಉತ್ತಮವಾಗಿ ಆಡಬೇಕು ಎಂಬ ಭಾವನೆಯ ಜೊತೆಗೆ ತಮ್ಮ ತಂಡ ಗೆಲ್ಲಬೇಕು ಎಂಬ ಮನಸ್ಥಿತಿಯಿರಬೇಕು. ಈ ಬಾರಿ ಒಲಿಂಪಿಕ್ಸ್​ನಲ್ಲಿ ಕೆಲವು ಪದಕಗಳು ನಮ್ಮ ದೇಶಕ್ಕೆ ಲಭಿಸಿವೆ. ಮುಂದಿನ ಒಲಿಂಪಿಕ್ಸ್​ನ ಒಳಗೆ ಇನ್ನಷ್ಟು ಅಭ್ಯಾಸ, ತಯಾರಿ ಮಾಡಿ ಪಾಲ್ಗೊಂಡರೆ ಇನ್ನೂ ಹೆಚ್ಚಿನ ಪದಕಗಳನ್ನು ಪಡೆಯಬಹುದು.

ಏಕಲವ್ಯ ಅಂದು ಸಾಂಪ್ರದಾಯಿಕ ಅಭ್ಯಾಸವನ್ನು ಮಾಡಲಾಗದೆ ಏಕಾಂಗಿಯಾಗಿ ಅಭ್ಯಾಸ ಮಾಡಿ ಸಾಧಕನಾಗುತ್ತಾನೆ. ಇಂತಹ ಗ್ರಾಮೀಣ ಪ್ರತಿಭೆಗಳಿಗೆ ಅಭ್ಯಾಸಕ್ಕೆ ಅವಕಾಶ ಮತ್ತು ಪೋ›ತ್ಸಾಹ ನೀಡಿದಲ್ಲಿ ಭಾರತ ಕ್ರೀಡಾರಂಗದಲ್ಲಿ ಹೆಚ್ಚು ಮಿಂಚಬಹುದು...

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net