

ಅಮೆರಿಕದ ವಿದ್ಯಮಾನಗಳತ್ತ ಜಗದ ಕುತೂಹಲದ ಕಣ್ಣು ನೆಟ್ಟಿರುತ್ತದೆ. ಎಷ್ಟೆಂದರೂ ಅದು ಜಗತ್ತಿನ ಅತಿ ದೊಡ್ಡ ಸೇನಾಶಕ್ತಿ ಹಾಗೂ ಆರ್ಥಿಕ ದೈತ್ಯನಲ್ಲವೆ! ಅಲ್ಲಿನ ಸರ್ಕಾರದ ನೀತಿನಿರ್ಧಾರಗಳು ಜಗತ್ತನ್ನು ತುದಿಗಾಲ ಮೇಲೆ ನಿಲ್ಲಿಸುತ್ತವೆ. ಜೊತೆಗೆ, ಡಾಲರ್ ಬೆಲೆ ಏನಾಯಿತು? ಟೆಕ್ ಕಂಪನಿಗಳ ನಡೆ ಏನು? ಅಲ್ಲಿ ವಾಸಿಸುತ್ತಿರುವ ತಂತಮ್ಮ ದೇಶಬಾಂಧವರ ಸ್ಥಿತಿಗತಿ ಹೇಗಿದೆ ಎಂಬೆಲ್ಲ ಸುದ್ದಿಗಳತ್ತ ಜನರು ಗಮನಿಸುತ್ತಿರುತ್ತಾರೆ. ಹೀಗಿರುವಾಗ, ಪ್ರತಿ ನಾಲ್ಕು ವರ್ಷಗಳಿಗೆ ನಡೆಯುವ ಅಧ್ಯಕ್ಷೀಯ ಚುನಾವಣೆಯತ್ತ ಜಗದ ಚಿತ್ತ ನೆಡದೆ ಇರುತ್ತದೆಯೆ? ಈ ಸಲವಂತೂ, ಸದ್ಯದ ಜಾಗತಿಕ ರಂಗದ ವರ್ಣರಂಜಿತ ನಾಯಕರಲ್ಲೊಬ್ಬರಾದ ಡೊನಾಲ್ಡ್ ಟ್ರಂಪ್ ಕಣದಲ್ಲಿದ್ದುದರಿಂದ ಕುತೂಹಲದ ಪ್ರಮಾಣ ದುಪ್ಪಟ್ಟಾಗಿತ್ತು. ಬಹುತೇಕ ಸಮೀಕ್ಷೆಗಳ ಅಂದಾಜನ್ನು ಮೀರಿ, ಭರ್ಜರಿ ಬಹುಮತದಿಂದ ಆಯ್ಕೆಯಾಗಿರುವ ಟ್ರಂಪ್, ಬರುವ ಜನವರಿ 20ರಂದು ಅಧಿಕಾರವಹಿಸಿಕೊಳ್ಳಲಿದ್ದಾರೆ.
ಚುನಾವಣಾ ಪ್ರಚಾರ ಸಂದರ್ಭದಲ್ಲಿ ಟ್ರಂಪ್ ಕೆಲ ವಿಚಾರಗಳನ್ನು ಮುಖ್ಯವಾಗಿ ಪ್ರಸ್ತಾಪಿಸಿದ್ದರು. ‘ಅಮೆರಿಕ ಮೊದಲು’ ಎಂಬ ನೀತಿ ಅದರಲ್ಲಿ ಮುಖ್ಯವಾದುದು. ಹಾಗಂತ ಇದು ಹೊಸ ಪರಿಕಲ್ಪನೆಯೇನಲ್ಲ. ಟ್ರಂಪ್ರ ಮೊದಲ ಅಧ್ಯಕ್ಷೀಯ ಅವಧಿಯಲ್ಲೇ ಟಂಕಿಸಲಾಗಿದ್ದ ಪದಪುಂಜ. ಇನ್ನೊಂದು ಪ್ರಮುಖ ಸಂಗತಿ- ಅಕ್ರಮ ವಲಸೆಗೆ ಕಡಿವಾಣ ಹಾಕಲಾಗುವುದು ಎಂಬ ಘೋಷಣೆ.
ಅಮೆರಿಕ ಅಕ್ಷರಶಃ ವಲಸಿಗರ ದೇಶ. ವಸಾಹತುಶಾಹಿ ಕಾಲದಿಂದಲೂ ಇದು ಅನೂಚಾನವಾಗಿ ನಡೆದುಕೊಂಡು ಬಂದಿದೆ. ಜಗತ್ತಿನ ಬೇರ್ಯಾವ ದೇಶದಲ್ಲೂ ಇಷ್ಟು ವಲಸಿಗರಿಲ್ಲ. 2019ರ ಹೊತ್ತಿಗೆ ಅಲ್ಲಿನ ಒಟ್ಟು ವಲಸಿಗರ ಸಂಖ್ಯೆ 5.66 ಕೋಟಿ. ಅಂದರೆ, ಅಮೆರಿಕ ಜನಸಂಖ್ಯೆಯ ಶೇ.14.4. ಅಲ್ಲಿ ಜನಿಸಿದ ವಲಸಿಗರ ಮಕ್ಕಳನ್ನೂ ಲೆಕ್ಕಿಸಿದರೆ ಒಟ್ಟು ಸಂಖ್ಯೆ 9 ಕೋಟಿಯಷ್ಟಾಗುತ್ತದೆ. ಅಂದರೆ, ಅಮೆರಿಕದ ಒಟ್ಟು ಜನಸಂಖ್ಯೆಯ ಶೇ.28ರಷ್ಟಾಗುತ್ತದೆ. ಕಾನೂನುಬದ್ಧ ದಾಖಲೆಗಳೊಂದಿಗೆ ಅಲ್ಲಿ ನೆಲೆಸಿರುವವರ ಹಾಗೆ ಅಕ್ರಮ ವಲಸಿಗರೂ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಹೀಗಾಗಿ ವಲಸೆ ವಿಚಾರದತ್ತ ಮತ್ತೆ ಚರ್ಚೆ ಗಿರಕಿ ಹೊಡೆಯುತ್ತಿದೆ.
ಅಮೆರಿಕದ ಹೋಮ್ಲ್ಯಾಂ ಸೆಕ್ಯುರಿಟಿ ಇಲಾಖೆಯು ಇದೇ ಅಕ್ಟೋಬರ್ 22ರಂದು ದೊಡ್ಡ ಬಾಡಿಗೆ ವಿಮಾನದಲ್ಲಿ ಹಲವು ಭಾರತೀಯರನ್ನು ವಾಪಸ್ ಭಾರತಕ್ಕೆ ರವಾನಿಸಿತು. ಅಮೆರಿಕದಲ್ಲಿ ಕಾನೂನುಬದ್ಧವಾಗಿ ವಾಸಿಸಲು ಬೇಕಾದ ದಾಖಲೆಗಳು ಇವರ ಬಳಿ ಇಲ್ಲ ಎಂಬ ಕಾರಣಕ್ಕೆ ಈ ಕ್ರಮ. ಹೀಗೆ ಜನರನ್ನು ಭಾರತಕ್ಕೆ ವಾಪಸ್ ಕಳಿಸುತ್ತಿರುವುದು ಇದು ಮೊದಲೂ ಅಲ್ಲ ಕೊನೆಯದೂ ಅಲ್ಲ. ಆದರೆ ವಿಶೇಷ ವಿಮಾನವನ್ನು ಕಳಿಸುವ ಮೂಲಕ, ಅಕ್ರಮ ವಲಸಿಗರನ್ನು ಹೊರಕಳಿಸುವ ತನ್ನ ಬಲವಾದ ಸಂಕಲ್ಪವನ್ನು ಅಲ್ಲಿನ ಸರ್ಕಾರ ತೋರ್ಪಡಿಸಿದೆ ಎಂಬುದು ತಜ್ಞರ ಅಂಬೋಣ. ಅಲ್ಲಿನ ವಲಸೆ ಮತ್ತು ಸುಂಕ ಜಾರಿ ವಿಭಾಗವು ಮಾಮೂಲಾಗಿ ಸಂಚರಿಸುವ ವಿಮಾನಗಳ ಮೂಲಕವೂ ದಾಖಲೆಗಳಿಲ್ಲದ ವಲಸಿಗರನ್ನು ಅವರವರ ದೇಶಗಳಿಗೆ ರವಾನಿಸುವ ಕಾರ್ಯವನ್ನು ಮಾಡುತ್ತಲೇ ಇರುತ್ತದೆ.
‘ಅಮೆರಿಕದ ಮನಸ್ಸು ಎಷ್ಟು ವಿಶಾಲ ಎಂದರೆ, ಸಿರಿವಂತರು ಅಥವಾ ಕುಲೀನರು ಮಾತ್ರವಲ್ಲ ಯಾವುದೇ ದೇಶದ ಅಥವಾ ಧರ್ಮದ ಬಡವರನ್ನು ಸಹ ತೆರೆದ ತೋಳುಗಳಿಂದ ಸ್ವಾಗತಿಸುತ್ತದೆ. ಅವರು ಇಲ್ಲಿ ನಮ್ಮಂತೆಯೇ ಹಕ್ಕು ಮತ್ತು ಅವಕಾಶಗಳನ್ನು ಪಡೆಯುತ್ತಾರೆ’ ಎಂದು ಅಮೆರಿಕದ ಮೊದಲ ಅಧ್ಯಕ್ಷ ಜಾರ್ಜ್ ವಾಷಿಂಗ್ಟನ್ ಹೇಳಿದ್ದರು. ‘ವಲಸಿಗರು ಅಮೆರಿಕದ ಸಾಮಾಜಿಕ ನೇಯ್ಗೆಯನ್ನು ಇನ್ನಷ್ಟು ಸುಂದರಗೊಳಿಸಿದ್ದಾರೆ’ ಎಂದು ಮಾಜಿ ಅಧ್ಯಕ್ಷ ಜಾನ್ ಎಫ್. ಕೆನಡಿ ಹೇಳಿದ್ದರು. ಈ ಮಾತುಗಳು ವಲಸೆಯ ವಿವಿಧ ಆಯಾಮವನ್ನು ತೆರೆದಿಡುತ್ತವೆ.
ಅಮೆರಿಕದಲ್ಲಿ ಸದ್ಯ ಸುಮಾರು 52 ಲಕ್ಷ ಭಾರತೀಯರು ಇದ್ದಾರೆ. 2022ರ ಅಮೆರಿಕ ಜನಗಣತಿ ಪ್ರಕಾರ 48 ಲಕ್ಷ. ದಾಖಲೆಗಳಿಲ್ಲದ ವಲಸಿಗರನ್ನು ದೊಡ್ಡ ಪ್ರಮಾಣದಲ್ಲಿ ಗಡಿಪಾರು ಮಾಡಲಾಗುವುದು ಎಂದು ಡೊನಾಲ್ಡ್ ಟ್ರಂಪ್ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಪದೇಪದೇ ಹೇಳುತ್ತಿದ್ದರು. ಟ್ರಂಪ್ ಅಧಿಕಾರವಹಿಸಿಕೊಂಡ ನಂತರ ಈ ಮಾತನ್ನು ಕಾರ್ಯರೂಪಕ್ಕೆ ತಂದಲ್ಲಿ ಭಾರತೀಯರೂ ಸೇರಿ ಬೇರೆ ಬೇರೆ ದೇಶಗಳ 1.1 ಕೋಟಿ ವಲಸಿಗರು ಸಂಕಟಕ್ಕೆ ಸಿಲುಕಲಿದ್ದಾರೆ. ಫ್ಯೂ ರಿಸರ್ಚ್ ಸೆಂಟರ್ ಪ್ರಕಾರ, 2021ರ ಹೊತ್ತಿಗೆ ಅಮೆರಿಕದಲ್ಲಿ ದಾಖಲೆಗಳಿಲ್ಲದ ಭಾರತೀಯರ ಸಂಖ್ಯೆ 7.25 ಲಕ್ಷದಷ್ಟಿತ್ತು. ಈ ಯಾದಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ.
1965ರಲ್ಲಿ ಅಮೆರಿಕದ ವಲಸೆ ಕಾಯ್ದೆಗೆ ಬದಲಾವಣೆ ತಂದ ತರುವಾಯ ವಲಸಿಗರ ಸಂಖ್ಯೆ ಇನ್ನಷ್ಟು ಹೆಚ್ಚಿದೆ. 1965ಕ್ಕಿಂತ ಮೊದಲಿನ ಕಾಯ್ದೆಯು ಉತ್ತರ ಮತ್ತು ಪಶ್ಚಿಮ ಯೂರೋಪಿನಿಂದ ಬರುವ ವಲಸಿಗರಿಗೆ ವಲಸೆಗೆ ಅನುಮತಿಸಿ, ಏಷ್ಯಾದವರನ್ನು ಬಹುತೇಕವಾಗಿ ನಿಷೇಧಿಸುವಂತಿತ್ತು. 1965ರ ವಲಸೆ ಮತ್ತು ರಾಷ್ಟ್ರೀಯತೆಯ ಕಾಯ್ದೆಯು ಏಷ್ಯಾ ಹಾಗೂ ಲ್ಯಾಟಿನ್ ಅಮೆರಿಕದ ವಲಸಿಗರಿಗೆ ಬಾಗಿಲು ತೆರೆಯಿತು. 1965ರ ನಂತರದಲ್ಲಿ ವಲಸಿಗರಲ್ಲಿ ಅರ್ಧದಷ್ಟು ಮಂದಿ ಲ್ಯಾಟಿನ್ ಅಮೆರಿಕದಿಂದ ಬಂದವರು; ಈ ಪೈಕಿ ಕಾಲು ಭಾಗ ಮೆಕ್ಸಿಕೊದವರು. ಉಳಿದ ಕಾಲು ಭಾಗ ಏಷ್ಯಾದಿಂದ ಬಂದವರು. ಇವರಲ್ಲಿ ಹೆಚ್ಚಿನವರು ಭಾರತ, ಚೀನಾ ಮುಂತಾದ ದೇಶಗಳವರು. ಈಗಲೂ ಮೆಕ್ಸಿಕೊದಿಂದ ಬರುವವರು ಅಧಿಕ; ಅಕ್ರಮವಾಗಿ ಕೂಡ.
ಅಮೆರಿಕ ಸರ್ಕಾರವು ಸ್ಥೂಲವಾಗಿ ಐದು ಅಂಶಗಳ ಆಧಾರದ ಮೇಲೆ ಕಾನೂನುಬದ್ಧ ವಲಸೆಯನ್ನು ಅನುಮೋದಿಸುತ್ತದೆ. ಅವೆಂದರೆ- ಉದ್ಯೋಗ, ಶಿಕ್ಷ, ಕುಟುಂಬ, ಸುರಕ್ಷತೆ ಮತ್ತು ವೈವಿಧ್ಯತೆಗೆ ಉತ್ತೇಜನ ನೀಡುವುದು. ಚೀನಾದ ಜನರು ಹೆಚ್ಚಾಗಿ ಶಿಕ್ಷಣದ ಸಲುವಾಗಿ ಅಮೆರಿಕಕ್ಕೆ ತೆರಳುತ್ತಾರೆ. 2006-21ರ ಅವಧಿಯಲ್ಲಿ ಬಂದ ಚೀನಾದವರ ಪೈಕಿ ಶೇ.19 ಮಂದಿ ಶೈಕ್ಷಣಿಕ ಉದ್ದೇಶಕ್ಕಾಗಿ ಬಂದವರು. ಇದು ಯಾವುದೇ ಇತರ ದೇಶಕ್ಕಿಂತ ಅಧಿಕ ಪ್ರಮಾಣ. ಭಾರತದಿಂದ ವಲಸೆ ಹೋಗುವವರಲ್ಲಿ ಹೆಚ್ಚಿನವರು ಕುಟುಂಬದ ಸಲುವಾಗಿ ತೆರಳುತ್ತಾರೆ. ಈ ಪ್ರಮಾಣ ಸುಮಾರು ಶೇ.18. ಆದರೆ 2021ರಲ್ಲಿ ಹೆಚ್ಚಿನ ಜನರು ಶಿಕ್ಷಣದ ಉದ್ದೇಶಕ್ಕಾಗಿ ಹೋಗಿದ್ದರು.
ಅಮೆರಿಕದ ಸುಂಕ ಮತ್ತು ಗಡಿ ರಕ್ಷಣಾ ವಿಭಾಗದ ಅಂಕಿ-ಅಂಶಗಳ ಪ್ರಕಾರ 2022ರ ನವೆಂಬರ್ ನಿಂದ 2023ರ ಸೆಪ್ಟೆಂಬರ್ವರೆಗೆ ದಾಖಲೆ ಸಂಖ್ಯೆಯ 96,917 ಭಾರತೀಯರನ್ನು ಅಕ್ರಮ ಪ್ರವೇಶ ಕಾರಣಕ್ಕೆ ಬಂಧಿಸಲಾಗಿದೆ. 2024 ನೇ ಆರ್ಥಿಕ ಸಾಲಿನಲ್ಲಿ, ಅಕ್ರಮವಾಗಿ ಅಮೆರಿಕ ಗಡಿಯೊಳಗೆ ಪ್ರವೇಶಿಸಲು ಯತ್ನಿಸಿದ ಭಾರತೀಯರನ್ನು ಪ್ರತಿ ತಾಸಿಗೆ ಸರಾಸರಿ ಹತ್ತು ಮಂದಿಯಂತೆ ಬಂಧಿಸಲಾಗಿದೆ. 2019ರಿಂದ ಈಚೆಗೆ ಅಕ್ರಮ ಪ್ರವೇಶ ಪ್ರಯತ್ನ ಪ್ರಮಾಣ ಐದು ಪಟ್ಟು ಏರಿಕೆ ಆಗಿದೆ. ಇವರಲ್ಲಿ ಸುಮಾರು ಅರ್ಧದಷ್ಟು ಮಂದಿ ಗುಜರಾತ್ ಮೂಲದವರು. ಹೀಗೆ ಅಕ್ರಮ ಪ್ರವೇಶ ಪ್ರಯತ್ನದಲ್ಲಿ ಸಾವು ಕಂಡವರು ಕೂಡ ಇದ್ದಾರೆ. ಬದುಕಿನ ಹೋರಾಟ ಬದುಕನ್ನೇ ಆಪೋಶನ ತೆಗೆದುಕೊಳ್ಳುವ ದುರಂತ ಇದು. ಪ್ರಧಾನಿ ನರೇಂದ್ರ ಮೋದಿ ಹಾಗೂ ಡೊನಾಲ್ಡ್ ಟ್ರಂಪ್ ನಡುವೆ ಉತ್ತಮ ಬಾಂಧವ್ಯ ಇರುವ ಕಾರಣಕ್ಕೆ ವಲಸೆ ನಿಯಮಗಳಲ್ಲಿ ತಮಗೆ ರಿಯಾಯಿತಿ ಸಿಗಬಹುದು ಎಂದು ಅನೇಕ ಗುಜರಾತಿಗಳು ಭಾವಿಸುತ್ತಿದ್ದಾರಂತೆ.
ಕಾನೂನುಬದ್ಧವಾಗಿ ಅಮೆರಿಕಕ್ಕೆ ತೆರಳಲು ಹಾದಿಗಳು ಇವೆ. ಆದರೆ ಆಕಾಂಕ್ಷಿಗಳ ಸಂಖ್ಯೆಗೆ ಹೋಲಿಸಿದರೆ ಇದು ಬಹಳ ಕಡಿಮೆ. ಅಮೆರಿಕದ ಆರ್ಥಿಕ ಸಾಲಿನಲ್ಲಿ (ಅಕ್ಟೋಬರ್ 1ರಿಂದ ಸೆಪ್ಟೆಂಬರ್ 30) ಸುಮಾರು 1.40 ಲಕ್ಷ ಉದ್ಯೋಗ ಆಧಾರಿತ ವಲಸೆ ವೀಸಾ ಕೊಡುವ ಅವಕಾಶ ಇದೆ. ಟ್ರಂಪ್ ಮೊದಲ ಅಧ್ಯಕ್ಷೀಯ ಅವಧಿಯಲ್ಲಿ (2017-2021) ಭಾರತೀಯ ವೃತ್ತಿಪರರಿಗೆ ನೀಡುವ ಎಚ್1ಬಿ ವೀಸಾದಲ್ಲಿ ಇಳಿಕೆಯಾಗಿತ್ತು. ‘ಅಮೆರಿಕದ ವಸ್ತುಗಳನ್ನು ಖರೀದಿಸಿ ಮತ್ತು ಅಮೆರಿಕನ್ನರನ್ನು ಉದ್ಯೋಗಕ್ಕೆ ನೇಮಿಸಿಕೊಳ್ಳಿ’ ಎಂಬುದು ಟ್ರಂಪ್ ಘೊಷಣೆ ಆಗಿತ್ತು. ಎಲ್ 1 ವೀಸಾ ವಿಭಾಗದಲ್ಲಿ ಭಾರತೀಯ ಕಂಪನಿಗಳು ತಮ್ಮ ಉದ್ಯೋಗಿಗಳನ್ನು ಅಮೆರಿಕಕ್ಕೆ ಕಳಿಸುವ ಪ್ರಕ್ರಿಯೆಯನ್ನು ಬೇಕೆಂದೇ ಹೆಚ್ಚು ಕ್ಲಿಷ್ಟವಾಗಿಸಲಾಗಿತ್ತು ಎಂಬ ಮಾತು ಸಹ ಇದೆ.
ಆದರೆ ಇಲ್ಲೊಂದು ಸೂಕ್ಷ್ಮ ಸಂಗತಿ ಇದೆ. ಅಮೆರಿಕದ ಟೆಕ್ ಕಂಪನಿಗಳಿಗೆ ಭಾರತದ ಮಾರುಕಟ್ಟೆ ಬೇಕು. ಬಿಲಿಯನೇರ್ ಉದ್ಯಮಿ ಎಲಾನ್ ಮಸ್ಕ್ ಅವರಂತೂ ಅಧಿಕೃತವಾಗಿಯೇ ಟ್ರಂಪ್ ಆಡಳಿತದ ಭಾಗವಾಗುತ್ತಿದ್ದಾರೆ. ಹೀಗಿರುವಾಗ, ವಲಸೆ ನಿಯಂತ್ರಿಸುತ್ತೇನೆ ಎಂಬ ಟ್ರಂಪ್ ಮಾತನ್ನು ಬೃಹತ್ ಉದ್ಯಮಿಗಳು ಹೇಗೆ ಸ್ವೀಕರಿಸುತ್ತಾರೆ ಎಂಬುದು ಕುತೂಹಲಕರ. ‘ಅಮೆರಿಕ ಮೊದಲು’ ಎಂಬ ಘೊಷಣೆ ಭಾವನಾತ್ಮಕವಾಗಿ ಸೆಳೆಯುವಂತಹದು ನಿಜ. ಆದರೆ ಜಾಗತೀಕರಣ ಮತ್ತು ಉದಾರೀಕರಣದ ಯುಗದಲ್ಲಿ ದೇಶವೊಂದು ಹೀಗೆ ಹೇಳಿ ದಕ್ಕಿಸಿಕೊಳ್ಳಬಹುದೇ ಎಂಬ ಪ್ರಶ್ನೆಯೂ ಇದೆ.
ಇದೇ ಹೊತ್ತಿಗೆ, ಪೌರತ್ವ ವಿಷಯದಲ್ಲಿ ಕೂಡ ಟ್ರಂಪ್ ನಿಲುವಿನ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅಮೆರಿಕದಲ್ಲಿ ಜನಿಸಿದ ಮಕ್ಕಳಿಗೆ ಸ್ವಯಂಚಾಲಿತವಾಗಿ ನಾಗರಿಕತ್ವ ದೊರಕುತ್ತದೆ. ಆದರೆ, ಈ ಸಲ ಟ್ರಂಪ್ ಅವರ ಪ್ರಚಾರ ವೆಬ್ಸೈಟಿನಲ್ಲಿ, ಪಾಲಕರಲ್ಲಿ ಕನಿಷ್ಠ ಒಬ್ಬರಾದರೂ ಅಮೆರಿಕ ನಾಗರಿಕರಾಗಿದ್ದರೆ ಅಥವಾ ಶಾಶ್ವತ ನಿವಾಸಿಯಾಗಿದ್ದರೆ (ಅಂದರೆ ಗ್ರೀನ್ ಕಾರ್ಡ್ ಹೊಂದಿದವರು) ಮಾತ್ರ ಅಂಥವರ ಮಕ್ಕಳಿಗೆ ಸ್ವಯಂಚಾಲಿತ ಪೌರತ್ವ ಸಿಗುತ್ತದೆ ಎಂಬ ನಿಯಮ ತರುವ ಪ್ರಸ್ತಾಪದ ಕರಡನ್ನು ಪ್ರಕಟಿಸಲಾಗಿತ್ತು. ಅಮೆರಿಕದಲ್ಲಿರುವ ಭಾರತೀಯರ ಪೈಕಿ ಶೇ.36 ಮಂದಿ ಅಂದರೆ ಸುಮಾರು 16 ಲಕ್ಷ ಜನರು ಅಲ್ಲಿಯೇ ಜನಿಸಿದವರು.
ಜಗತ್ತಿನ ಯಾವ ಭಾಗಕ್ಕೇ ಹೋಗಲಿ, ಗದ್ದಲಗೌಜಿಗೆ ಆಸ್ಪದ ನೀಡದೆ ಸ್ಥಳೀಯ ಸಂಸ್ಕೃತಿಯ ಜೊತೆಗೆ ಸಮರಸದಿಂದ ಬೆರೆತು, ತಮ್ಮ ಬೇರನ್ನೂ ಜತನದಿಂದ ಕಾಪಾಡಿಕೊಂಡು ಹೋಗುವ ನಮ್ಯತೆಯ ಗುಣ ಭಾರತೀಯರಿಗಿದೆ. ವೈದ್ಯಕೀಯ, ಐಟಿ, ಶಿಕ್ಷಣ... ಹೀಗೆ ವಿವಿಧ ರಂಗಗಳಲ್ಲಿ ಅಮೆರಿಕದಲ್ಲೂ ಭಾರತೀಯರ ಛಾಪು ಬಲವಾಗಿಯೇ ಇದೆ. ಟ್ರಂಪ್ ಆಡಳಿತ ಈ ವಿನ್ಯಾಸದಲ್ಲಿ ಬದಲಾವಣೆ ಮಾಡಲು ಮುಂದಾಗುತ್ತದೆಯಾ? ಅದು ಸಾಧ್ಯವಾ? ಕಾದುನೋಡಬೇಕು.
‘ನಾನು ಕಾರ್ಯಾಲಯದಿಂದ ಹೊರಡುವ ಮುಂಚೆ ವ್ಯಕ್ತಿಯೊಬ್ಬ ಪತ್ರವೊಂದನ್ನು ನೀಡಿದ. ಅದನ್ನು ಅವನು ಯಾಕೆ ಬರೆದ ಎಂಬುದು ಗೊತ್ತಿಲ್ಲ. ನೀವು ಫ್ರಾನ್ಸಿಗೆ ಹೋಗಿ ನೆಲೆಸಬಹುದು. ಆದರೆ ಕಟ್ಟಾ ಫ್ರೆಂಚರಾಗಲು ಸಾಧ್ಯವಿಲ್ಲ. ನೀವು ಇಟಲಿ ಅಥವಾ ಜರ್ಮನಿಗೆ ಹೋಗಿ ಬೇಕಾದರೂ ನೆಲೆಸಬಹುದು. ಆದರೆ ಜರ್ಮನ್ ಅಥವಾ ಇಟಾಲಿಯನ್ ಆಗಲಾಗದು. ಟರ್ಕಿ, ಗ್ರೀಸ್, ಜಪಾನ್ ಹೀಗೆ ಯಾವ ದೇಶಕ್ಕೆ ಬೇಕಾದರೂ ಹೋಗಿ ವಾಸಿಸಬಹುದು. ಆದರೆ ಜಗತ್ತಿನ ಯಾವ ಭಾಗದಿಂದಲಾದರೂ ಅಮೆರಿಕಕ್ಕೆ ಬಂದು ನೆಲೆಸಬಹುದು ಮತ್ತು ಅಮೆರಿಕನ್ನರೇ ಆಗಿಬಿಡಬಹುದು ಎಂದು ಅದರಲ್ಲಿ ಬರೆದಿತ್ತು’ ಎಂಬುದಾಗಿ ಅಮೆರಿಕ ಮಾಜಿ ಅಧ್ಯಕ್ಷ ರೋನಾಲ್ಡ್ ರೇಗನ್ ಒಮ್ಮೆ ಹೇಳಿದ್ದು, ವಲಸಿಗರ ಕುರಿತ ಭಾಷ್ಯ ಎನ್ನಬಹುದು.
ಬದುಕನ್ನು ಹುಡುಕಿಕೊಂಡು ಜನರು ಸ್ವದೇಶದಿಂದ ವಿದೇಶಗಳತ್ತ ತೆರಳುವ ಹಾಗೆ (ಇದಕ್ಕೆ ಪ್ರತಿಭಾ ಪಲಾಯನದ ಆಯಾಮವೂ ಇದೆ), ದೇಶದಲ್ಲಿಯೇ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತೆರಳುವುದು ಸಹ ಮಾಮೂಲು. ಈ ಪ್ರವೃತ್ತಿಯು ನಗರ ವಲಸೆ ಪ್ರಮಾಣವನ್ನು ಹೆಚ್ಚಿಸಿದೆ; ಇದರಿಂದ ಅನೇಕ ಸಮಸ್ಯೆಗಳು ಸಹ ಉದ್ಭವವಾಗಿವೆ. ಇದು ಬೇರೆಯದೇ ಚರ್ಚಾವಿಷಯ. ಆದರೆ ಜೀವನವನ್ನು ಕಟ್ಟಿಕೊಳ್ಳಲು ನಡೆಯುವ ಹೋರಾಟಕ್ಕೆ ಕೊನೆಯಿಲ್ಲ. ಉತ್ತರ ಕರ್ನಾಟಕದ ಯಾವುದೋ ಮೂಲೆಯ ಹೆಣ್ಮಗಳೊಬ್ಬಳು, ಬೆಂಗಳೂರಿನ ಮೆಜೆಸ್ಟಿಕ್ನಲ್ಲಿ ಬಸ್ ಇಳಿದು, ಬಗಲಲ್ಲಿ ಹಸುಗೂಸನ್ನು ಇರಿಸಿಕೊಂಡು, ತಲೆಮೇಲೆ ಗಂಟನ್ನು ಇಟ್ಟುಕೊಂಡು ನಡೆದುಹೋಗುವ ದೃಶ್ಯ ಮನಕಲಕುತ್ತದೆ. ಅದೇ ಹೊತ್ತಿಗೆ, ಆಕೆಯ ಬದುಕುವ ಛಲಕ್ಕೆ ಮನ ಮಣಿಯುತ್ತದೆ...