ಬೇಕಿರುವುದು ಬರೀ ಪದವಿಯಲ್ಲ ಪ್ರಜ್ಞಾವಂತಿಕೆ, ಪ್ರಬುದ್ಧತೆ

Shasthry Edison
Published on
ಮಹಾವಿಜ್ಞಾನಿ ಎಡಿಸನ್ ಶಾಲೆಗೆ ಹೋಗಿದ್ದು ಮೂರು ತಿಂಗಳು; ಮೈಕೆಲ್ ಫ್ಯಾರಡೆ ಶಾಲೆಗೆ ಹೋಗಿದ್ದು ಆರು ತಿಂಗಳು. ಡಿ.ವಿ.ಗುಂಡಪ್ಪನವರು ಮೆಟ್ರಿಕ್ ಪರೀಕ್ಷೆಯಲ್ಲಿ ಕನ್ನಡದಲ್ಲಿ ನಪಾಸಾದವರು. ಲಾಲ್ ಬಹದ್ದೂರ್ ಶಾಸ್ತ್ರಿಯವರು ರಾಷ್ಟ್ರೀಯ ರೀತಿಯಲ್ಲಿ ಶಿಕ್ಷಣ ಪಡೆದು ಆಧುನಿಕ ಮೂಢನಂಬಿಕೆಗಳಿಂದ ಪಾರಾಗಿದ್ದುದರಿಂದಲೇ, ಪಾಕ್ ಜತೆಗಿನ ಯುದ್ಧದ ಸ್ವರೂಪವನ್ನೇ ಬದಲಾಯಿಸಲು ಸಾಧ್ಯವಾಯಿತು.

ಸ್ವಾಮಿ ವಿವೇಕಾನಂದರು ಪರಿವ್ರಾಜಕ ಜೀವನದ ಭಾಗವಾಗಿ 1892ರ ಡಿಸೆಂಬರ್ ಮಧ್ಯಭಾಗದಲ್ಲಿ ತಿರುವನಂತಪುರವನ್ನು ತಲುಪುತ್ತಾರೆ. ಅಲ್ಲಿ ಅವರನ್ನು ಉಳಿಸಿಕೊಂಡಿದ್ದು ಪೊ›.ಸುಂದರರಾಮ್ ಅಯ್ಯರ್; ಯುವರಾಜ ಮಾರ್ತಾಂಡವರ್ಮನ ಗುರು ಹಾಗೂ ಮಾರ್ಗದರ್ಶಕರಾಗಿದ್ದವರು. ಗುರುವಿನ ಬಾಯಲ್ಲಿ ಈ ಅಪರೂಪದ ಸಂನ್ಯಾಸಿಯ ಬಗ್ಗೆ ಕೇಳಿದ ಯುವರಾಜ ಸ್ವಾಮೀಜಿಯನ್ನು ಭೇಟಿಯಾಗಲಿಚ್ಛಿಸಿದ. ಅರಮನೆಯಲ್ಲಿಯೇ ಭೇಟಿ ನಿಗದಿಯಾಯಿತು. ‘ಯುವರಾಜನನ್ನು ಕಂಡು ನಿಮಗೇನನ್ನಿಸಿತು?’ ಎಂದು ಸುಂದರರಾಮ್ ಸ್ವಾಮಿಜಿಯನ್ನು ಕೇಳಿದಾಗ ಅವರು ಕೊಟ್ಟ ಉತ್ತರ ಮನನೀಯ.‘ಈತನಲ್ಲಿ ತುಂಬಾ ಸಾಧ್ಯತೆ (possibilities)ಗಳಡಗಿವೆ. ಆದರೆ ವಿಶ್ವವಿದ್ಯಾಲಯದ ಶಿಕ್ಷಣದಿಂದಾಗಿ ಅವನ ನಿಜಪ್ರತಿಭೆ ಮಸುಕಾಗದಿದ್ದರೆ ಅದೃಷ್ಟ, ಆದರೂ ಅವನನ್ನು ತನ್ನಷ್ಟಕ್ಕೆ ಬಿಟ್ಟುಬಿಡುವುದೇ ಒಳ್ಳೆಯದು.’

ಇತ್ತೀಚಿನ ಕೆಲ ವರ್ಷಗಳಿಂದ ಕೆಲವಲಯಗಳಲ್ಲಿ ಒಂದು ಪ್ರಶ್ನೆ ಬಹಳ ಸುಳಿದಾಡುತ್ತಿದೆ. ಅದೇನೆಂದರೆ- ಅವರು ಎಷ್ಟು ಓದಿದ್ದಾರೆ? ಅರ್ಥಾತ್ ಅವರ qualification ಏನು? ಇತ್ಯಾದಿ. ಈ ಪ್ರಶ್ನೆಯನ್ನು ಯಾರೋ ಸಾಮಾನ್ಯ ಜನರು ಕೇಳುತ್ತಿದ್ದರೆ ಸುಮ್ಮನಾಗಬಹುದಿತ್ತು. ಒಂದು ರಾಜ್ಯದ ಮುಖ್ಯಮಂತ್ರಿಯಾದವರು, ಅದರಲ್ಲೂ ಐಐಟಿಯಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಶಿಕ್ಷಣ ಪಡೆದವರು, ಇನ್ನು ಕೆಲವೊಮ್ಮೆ ಸಂಸದರು! ಭಾರತೀಯ ಸಂಸತ್ ಕಲಾಪಗಳನ್ನು ಗಮನಿಸಿದವರಿಗೆ ಒಂದಂತೂ ನಿಚ್ಚಳವಾಗಿ ತಿಳಿಯುತ್ತದೆ. ಯಾವ ಕಾರಣಕ್ಕೂ ಶಾಲಾವಿದ್ಯಾರ್ಥಿಗಳು ಈ ಕಲಾಪಗಳನ್ನು ನೋಡಬಾರದು. ದೇಶದಲ್ಲಿ ಅತ್ಯಂತ ಅಶಿಸ್ತಿನ, ಅಸಭ್ಯತೆಯಿಂದೊಡಗೂಡಿದ ಜನರ ಸಭೆ ಇದ್ದರೆ ಅದು ಭಾರತೀಯ ಸಂಸತ್​ಭವನ. ಘನತೆ, ಗಾಂಭೀರ್ಯಗಳ ಗಂಧಗಾಳಿಯೂ ಇಲ್ಲದ ‘ಸಂಯಮ’ ಎನ್ನುವ ಪದವೇ ನಿಘಂಟಿನಲ್ಲಿಲ್ಲದ ಒಂದು ಸಭೆ ಇದ್ದರೆ ಅದು ಭಾರತೀಯ ಸಂಸತ್. ಚರ್ಚೆ ನಡೆಯಬೇಕಾದ್ದು ಘನತೆವೆತ್ತವರ ನಡುವೆ ಎನ್ನುವುದನ್ನು ನಮ್ಮ ಸಂಸದರು ಮರೆತು ಬಹಳ ದಿನಗಳೇ ಆಗಿವೆ ಎಂದು ಯಾರಿಗೂ ಅನ್ನಿಸದಿರದು. ಹಾಗೆಯೇ ವಿರೋಧಿಗಳನ್ನು ಕುರಿತು ಏಕವಚನ ಉಪಯೋಗಿಸುವುದು ಕೂಡ ರಾಜಕಾರಣಿಗಳಿಗೆ ಸರ್ವೆಸಾಮಾನ್ಯ. ಇವೆಲ್ಲಾ ಸಂಸ್ಕೃತಿಹೀನ, ಪ್ರಜ್ಞಾಹೀನ ಮತ್ತು ಅಶಿಕ್ಷಿತ ವಿದ್ಯಾಹೀನ ವ್ಯಕ್ತಿಗಳಲ್ಲಿ ಎದ್ದು ಕಾಣುವ ಲಕ್ಷಣಗಳು. ಇಂಥ ಮಹನೀಯರು ಅವರ ಪದವಿ ಎಷ್ಟು? ಇವರ qualification ಎಷ್ಟು? ಎಂದು ಕೇಳುವುದಕ್ಕಿಂತ ನಗೆಪಾಟಲಿನ ವಿಷಯ ಮತ್ತೊಂದಿರಲಾರದು.

ಪದವಿಗಳಿಗೆ ಬೆಲೆಯೇ ಇಲ್ಲ ಅಂತಲ್ಲ. ಶಿಕ್ಷಣ, ವಿದ್ಯೆ, ಪದವಿ ಇಂಥ ವಿಷಯಗಳ ಬಗ್ಗೆ ಜಗತ್ತಿನಲ್ಲೇ ಮೊದಲು ಆಳವಾಗಿ ಚಿಂತನೆಗೈದ ರಾಷ್ಟ್ರ ಭಾರತ. ವಿಲ್ ಡ್ಯೂರಂಟ್, ವಾಲ್ಟೇರ್, ಮಾರ್ಕೆಪೋಲೋ, ಫಾಹಿಯಾನ್ ಅವರಲ್ಲದೇ, ಬೀಜಿಂಗ್ ವಿಶ್ವವಿದ್ಯಾಲಯದ ಕುಲಪತಿಗಳೂ, ಮುಂದೆ ಅಮೇರಿಕಾಕ್ಕೆ ಚೈನಾದ ರಾಯಭಾರಿಯೂ ಆಗಿದ್ದ ಹೂ ಷಿ ಅವರ ಪ್ರಕಾರ ಆ ಕಡೆ ಪೌರ್ವಾತ್ಯ ಮತ್ತು ಈ ಕಡೆ ಪಾಶ್ಚಾತ್ಯ ರಾಷ್ಟ್ರಗಳ ವಿದ್ಯಾರ್ಥಿಗಳನ್ನು ಆಕರ್ಷಿಸಿ ಜ್ಞಾನದಾನಗೈದ ಮತ್ತು ವಿವೇಕಾನಂದರ ಪ್ರಕಾರ ಪ್ರಪಂಚದ ಯಾವುದೇ ಮೂಲೆಯಲ್ಲಿ ಮನುಷ್ಯನ ಉದ್ಧಾರಕ್ಕೆ ಸಂಬಂಧಿಸಿದ ಯಾವುದಾದರೂ ಗಹನವಾದ ವಿಚಾರವಿದ್ದಲ್ಲಿ ಅದು ಭಾರತದಿಂದ ಹೋಗಿದೆ ಎನ್ನುವಷ್ಟರ ಮಟ್ಟಿಗೆ ಜಗತ್ತಿನಲ್ಲಿ ಶೈಕ್ಷಣಿಕ ಉತ್ಕ್ರಾಂತಿ ಮಾಡಿದ ದೇಶ ಭಾರತ. ಇತಿಹಾಸದ ಮೊಟ್ಟಮೊದಲ ಘಟಿಕೋತ್ಸವ ಭಾಷಣ ಬಂದಿರುವುದು ತೈತ್ತಿರೀಯ ಉಪನಿಷತ್ತಿನಲ್ಲಿ! ಆದರೆ ಆ ಶಿಕ್ಷಣಕ್ಕೂ ಮತ್ತು ಇಂದು ನಮ್ಮ ಐಐಟಿಗಳ ಆದಿಯಾಗಿ ಭಾರತದಲ್ಲಿ ಪ್ರಚಾರದಲ್ಲಿರುವ ಮೆಕಾಲೆ ಶಿಕ್ಷಣಕ್ಕೂ ಅಜಗಜಾಂತರ. ಅಂಥ ಶಿಕ್ಷಣದ ವ್ಯವಸ್ಥೆಯಲ್ಲಿ ಪದವಿಗಳಿಗೆ ಬೆಲೆ. ಬಿಜಾಪುರದ ಭಾಷೆಯಲ್ಲಿ ಹೇಳಬೇಕೆಂದರೆ ಈ ಐಐಟಿನಿರ್ವಿುತ ‘ದೀಡು ಪಂಡಿತ’ರ ಪದವಿಗಳಿಗೆ ಏನು ಬೆಲೆ? ಇಂಥ ಶಿಕ್ಷಣದಿಂದ ಈಗಾಗಲೇ ಚೆನ್ನಾಗಿರುವ ವ್ಯಕ್ತಿ ಹಾಳಾಗುವ ಸಂಭವವೇ ಜಾಸ್ತಿ ಎನ್ನುವ ಇಂಗಿತವನ್ನೇ ಸ್ವಾಮಿ ವಿವೇಕಾನಂದರು ಪೊ›.ಐಯ್ಯರ್​ರೊಡನೆ ಮಾತನಾಡುವಾಗ ಹೊರಹಾಕಿದ್ದು. ಭಾರತದ ಉದ್ಧಾರಕ್ಕೆ ಅವಶ್ಯವಿರುವ ಪ್ರತಿಯೊಂದು ವಿಷಯದ ಬಗ್ಗೆಯೂ ಚಿಂತಿಸಿದ ಸ್ವಾಮಿ ವಿವೇಕಾನಂದರು ಪ್ರಸ್ತುತ ಶಿಕ್ಷಣ ಪದ್ಧತಿಯ ಬಗ್ಗೆ ಏನು ಹೇಳುವರು ಎಂಬುದನ್ನು ನೋಡಿದರೆ ಮೇಲಿನ ಮಾತು ಮತ್ತಷ್ಟು ಸ್ಪಷ್ಟವಾದೀತು!

‘ನಮಗೆ ಈಗ ದೊರೆಯುತ್ತಿರುವ ಶಿಕ್ಷಣದಲ್ಲಿ ಕೆಲವು ಒಳ್ಳೆಯ ಅಂಶಗಳಿವೆ. ಅದರಲ್ಲಿ ಒಂದು ಮಹಾ ದೋಷವಿದೆ. ಅದು ಒಳ್ಳೆಯ ಅಂಶಗಳನ್ನು ನಿಷ್ಕ್ರಿಯಗೊಳಿಸಿದೆ. ಅದು ಪುರುಷಸಿಂಹರನ್ನು ತಯಾರುಮಾಡುವ ವಿದ್ಯಾಭ್ಯಾಸವಲ್ಲ. ಅದು ಕೇವಲ ನಿಷೇಧಮಯವಾದ ವಿದ್ಯಾಭ್ಯಾಸ ಮತ್ತು ನಿಷೇಧ ಭಾವನೆಯ ಮೇಲೆನಿಂತ ಯಾವ ತರಬೇತಿಯಾದರೂ ಮೃತ್ಯುವಿಗಿಂತ ಹಾನಿಕರ. ಮಗುವನ್ನು ಶಾಲೆಗೆ ಕಳುಹಿಸುವರು, ಮೊದಲು ಅದು ಅಲ್ಲಿ ಕಲಿಯುವುದೇ ತನ್ನ ತಂದೆ ಮೂರ್ಖ ಎಂಬುದನ್ನು, ಎರಡನೆಯದು ಅದರ ತಾತ ಹುಚ್ಚನೆನ್ನುವುದು, ಮೂರನೆಯದೇ ಗುರುಗಳೆಲ್ಲಾ ಆಷಾಢಭೂತಿಗಳು, ನಾಲ್ಕನೆಯದೇ ಮಂತ್ರ, ಶಾಸ್ತ್ರಗಳೆಲ್ಲ ಸುಳ್ಳಿನ ಕಂತೆ ಎನ್ನುವುದು. ಹದಿನಾರು ವರುಷ ತುಂಬುವ ಸಮಯಕ್ಕೆ ಅವನೊಂದು ನಿಷೇಧಮಯ ಕಂತೆಯಾಗುವನು. ಅವನು ನಿರ್ಜೀವನಾಗಿ, ನಿತ್ರಾಣನಾಗುವನು. ಇದರ ಪರಿಹಾರವಾಗಿ ಐವತ್ತು ವರುಷಗಳ (ಇದನ್ನು 1897 ರಲ್ಲಿ ಹೇಳಿದ್ದು) ಇಂತಹ ವಿದ್ಯಾಭ್ಯಾಸದಿಂದ ಮೂರು ಪ್ರೆಸಿಡೆನ್ಸಿಗಳಲ್ಲಿ ಸ್ವತಂತ್ರನಾಗಿ ವಿಚಾರ ಮಾಡುವ ಒಬ್ಬ ವ್ಯಕ್ತಿಯೂ ಇದರ ಮೂಲಕ ಬಂದಿಲ್ಲ. ಸ್ವತಂತ್ರವಾಗಿ ವಿಚಾರಮಾಡುವ ವ್ಯಕ್ತಿಗಳಾರೂ ವಿದ್ಯಾಭ್ಯಾಸವನ್ನು ಇಲ್ಲಿ ಪಡೆದಿಲ್ಲ ಹೊರಗೆ ಪಡೆದರು. ಇಲ್ಲವೇ ಪುನಃ ಹಿಂದಿನಕಾಲದ ವಿದ್ಯಾಕೇಂದ್ರಗಳಿಗೆ ತಮ್ಮ ಮೂಢನಂಬಿಕೆಯಿಂದ ಪಾರಾಗಲು ಹೋದರು. ವಿದ್ಯಾಭ್ಯಾಸವೆಂದರೆ ನಿಮ್ಮ ತಲೆಗೆ ತುಂಬಿದ ವಿಷಯಗಳ ಮೊತ್ತವಲ್ಲ. ಅದು ಅಲ್ಲಿ ಜೀರ್ಣವಾಗದೇ ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದು. ಜೀವನವನ್ನು ನಿರ್ವಣಮಾಡುವಂತಹ ಪುರುಷಸಿಂಹವನ್ನು ತಯಾರಿಸುವ, ಶೀಲ ಸಂಪತ್ತಿಗೆ ಸಹಾಯ ಮಾಡುವಂತಹ, ವಿಚಾರಗಳನ್ನು ಗ್ರಹಿಸುವಂತಹ ವಿದ್ಯಾಭ್ಯಾಸ ನಮಗೆ ಬೇಕು. ನಮ್ಮ ಆದರ್ಶವೆಂದರೆ ಪಾರಮಾರ್ಥಿಕ ಮತ್ತು ಲೌಕಿಕ ಶಿಕ್ಷಣಗಳೆರಡೂ ನಮ್ಮ ಅಧೀನದಲ್ಲಿದ್ದು ಸಾಧ್ಯವಾದ ಮಟ್ಟಿಗೆ ಅವು ರಾಷ್ಟ್ರೀಯವಾಗಿರಬೇಕು ಮತ್ತು ರಾಷ್ಟ್ರೀಯ ಪದ್ಧತಿಯಲ್ಲಿರಬೇಕು.’

ಮುಂದುವರಿದು ಸ್ವಾಮೀಜಿ ಹೇಳುತ್ತಾರೆ, ‘ಅಶಿಕ್ಷಿತರಿಗೆ ಬೆಳಕನ್ನು ಕೊಡಿ; ಆದರೆ ಶಿಕ್ಷಿತರಿಗೆ ಹೆಚ್ಚಿನ ಬೆಳಕನ್ನು ಕೊಡಿ.’ ಏಕೆಂದರೆ ಆಧುನಿಕ ಶಿಕ್ಷಣದ ಅರ್ಥಹೀನ ಆಡಂಬರಗಳೆಲ್ಲ ಶಿಕ್ಷಿತ ವರ್ಗದಲ್ಲೆ ಜಾಸ್ತಿ ಇರುವುದು. ಯಾವುದೇ ಸಾರ್ವಜನಿಕ ಕಚೇರಿಗಳಲ್ಲಿ, ಬಸ್​ಸ್ಟಾ್ಯಂಡಿನಲ್ಲಿ, ರೈಲ್ವೇ ಸ್ಟೇಷನ್, ಮಾರ್ಕೆಟ್, ಪ್ರತಿನಿತ್ಯದ ವ್ಯವಹಾರಗಳಲ್ಲಿ ಅನಕ್ಷರಸ್ಥ ಅವಿದ್ಯಾವಂತ ವ್ಯಕ್ತಿಗಳಲ್ಲಿ ನ್ಯಾಯಪರತೆ, ಪ್ರಾಮಾಣಿಕತೆ, ಕೊಟ್ಟಮಾತಿನ ಬಗ್ಗೆ ಬದ್ಧತೆ, ವ್ಯವಹಾರದಲ್ಲಿ ಸೌಜನ್ಯ, ಒಟ್ಟಿನಲ್ಲಿ ಮಾನವೀಯತೆ ಮತ್ತು ಸಂಸ್ಕೃತಿಗಳನ್ನು ಕಾಣುತ್ತೇವೆ. ಆದರೆ ವಿದ್ಯಾವಂತರಿರಬಹುದು ಎಂದು ಕಾಣುವ ಶೇಕಡ 90 ರಷ್ಟು ಜನರಲ್ಲಿ ಈ ಲಕ್ಷಣಗಳನ್ನು ಕಾಣುವುದಿಲ್ಲ. ಅಲ್ಲಿ ಕಾಣುವುದು ನಯವಂಚಕತನ, ಸ್ವಾರ್ಥ, ಭ್ರಷ್ಟತೆ, ನರಿಸಂಸ್ಕ್ರತಿ; ಯಾವ ಮಾರ್ಗವಾದರೂ ಸರಿಯೆ ಎಷ್ಟೇ ಮೌಲ್ಯಹೀನವಾಗಿದ್ದರೂ ಸರಿಯೇ ನಮ್ಮ ಕೆಲಸ ಆದರೆ ಆಯಿತು, ಮೋಸ, ಅನ್ಯಾಯ, ವಂಚನೆಗಳ ಮೊರೆಹೊಕ್ಕಾದರೂ ಸರಿಯೆ! ಹಾಗೆ ಬದುಕುವುದು ಅವರ ದೃಷ್ಟಿಯಲ್ಲಿ smartness! ಇಲ್ಲಾಂದ್ರೆ ಈಗಿನ ಕಾಲದಲ್ಲಿ ಬದುಕುವುದಕ್ಕೇ ಆಗುವುದಿಲ್ಲ. ಅವರು ಹೀಗೆ ಭಾವಿಸುವುದಕ್ಕೆ ಕಾರಣಗಳಿಲ್ಲದಿಲ್ಲ. ಅವರು ತಮ್ಮ ಶೈಕ್ಷಣಿಕ ಜೀವನದ ಯಾವ ಹಂತದಲ್ಲೇ ಆಗಲಿ ಅಥವಾ ಕೌಟುಂಬಿಕ ವಾತಾವರಣದಲ್ಲೇ ಆಗಲಿ ಆದರ್ಶ ಮಹಾಪುರುಷರ ಮಹಾತ್ಮರ ಜೀವನಗಳ ಬಗ್ಗೆ ತಿಳಿದಿಲ್ಲ. ಅವರಿಂದ ಸ್ಪೂರ್ತಿ ಹೊಂದಿಲ್ಲ. ಜೀವನ ಎಂಬುದರ ಸಮಗ್ರ ಚಿತ್ರವೂ ಅವರಲ್ಲಿಲ್ಲ. ಒಟ್ಟಿನಲ್ಲಿ Science of Physics, Science of Biology ಅವರಿಗೆ ಗೊತ್ತೇ ಹೊರತು Life Science ಅವರಿಗೆ ಗೊತ್ತಿಲ್ಲ. ಅದರ ಅವಿಭಾಜ್ಯ ಅಂಗವಾದ Moral Scienceನಲ್ಲಿ ಸಹಜವಾಗಿಯೇ ಅವರಿಗೆ ನಂಬಿಕೆಯೂ ಇಲ್ಲದಿರಬಹುದು. ಇವರು ಯಾರ ಪದವಿಗಳ ಬಗ್ಗೆ ಪ್ರಶ್ನಿಸುತ್ತಿದ್ದಾರೊ ಅವರೆಲ್ಲ Life science ಮತ್ತು moral science ಅಥವಾ ನೈತಿಕ ಶಿಕ್ಷಣವನ್ನೇ ಪ್ರಧಾನವಾಗಿ ಅಪ್ಪಿಕೊಂಡವರು. ಬಹುಶಃ ಆಧುನಿಕ ಶಿಕ್ಷಣದಲ್ಲಿ ನಕಾರಾತ್ಮಕ ಅಂಶಗಳೇ ಪ್ರಬಲ. ಇರುವ ಕೆಲವೇ ಉತ್ತಮ ಅಂಶಗಳು ಇವುಗಳ ಭಾರದ ಅಡಿಯಲ್ಲಿ ಕುಸಿದುಹೋಗಿವೆ ಎಂಬ ವಿವೇಕಾನಂದರ ಮಾತಿನ ಅರ್ಥ ಇದೇ.

ವೈಜ್ಞಾನಿಕವಾಗಿ ಯೋಚಿಸುವುದೆಂದರೆ ವಿಜ್ಞಾನದ ಪುಸ್ತಕಗಳನ್ನು ಓದುವುದು, ವಿಜ್ಞಾನದಲ್ಲಿ ಪದವಿ ಪಡೆಯುವುದು ಎಂಬುವ ಮಹಾಮೂಢನಂಬಿಕೆಯಿಂದ ಮೊದಲು ಪಾರಾಗಬೇಕು. ‘ವೈಜ್ಞಾನಿಕತೆಯೆಂದರೆ ಸಂಪೂರ್ಣವಾಗಿ ತರ್ಕವನ್ನೇ ಅವಲಂಬಿಸಿ, ಎಲ್ಲ ಪೂರ್ವಾಗ್ರಹಗಳಿಂದ ಮುಕ್ತರಾಗಿ ಪೂರ್ತಿಯಾಗಿ ಸಾಬೀತಾದ ಮೇಲೆಯೇ ವಿಷಯವೊಂದನ್ನು ಸತ್ಯವೆಂದು ಸ್ವೀಕರಿಸುವುದು’ ಎಂಬ ನೊಬೆಲ್ ವಿಜ್ಞಾನಿ ಜೆ.ಎ.ಥಾಮ್ಸನ್ ಅವರ ಮಾತನ್ನು ತಿಳಿಯಬೇಕು. ಜೊತೆಜೊತೆಗೇ ಬುದ್ಧಿ ಮತ್ತು ಹೃದಯಗಳಿಗೆ ಕೊಡುವ ತರಬೇತಿ ಮತ್ತು ಅಂಥ ತರಬೇತಿಯಿಂದ ವಿಕಾಸಗೊಂಡ ಜೀವನ ಸಾಮರ್ಥ್ಯವೇ ಶೀಲ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಬೇಕು. ಮಹಾವಿಜ್ಞಾನಿ ಎಡಿಸನ್ ಶಾಲೆಗೆ ಹೋಗಿದ್ದು ಮೂರು ತಿಂಗಳು; ಮೈಕೆಲ್ ಫ್ಯಾರಡೆ ಶಾಲೆಗೆ ಹೋಗಿದ್ದು ಆರು ತಿಂಗಳು. ಕನ್ನಡ ಸಾಹಿತ್ಯದ ಮೇರುಪ್ರತಿಭೆ ಡಿ.ವಿ.ಗುಂಡಪ್ಪನವರು ಮೆಟ್ರಿಕ್ ಪರೀಕ್ಷೆಯಲ್ಲಿ ಕನ್ನಡದಲ್ಲಿ ನಪಾಸಾದವರು. ಹಲವು ಶತಮಾನಗಳ ನಂತರ, ಯುದ್ಧದಲ್ಲಿ ಜಯಗಳಿಸುವುದೇನೆಂಬುದರ ರುಚಿಯನ್ನು ಮತ್ತೆ ತೋರಿಸಿಕೊಟ್ಟ ಧೀಮಂತನಾಯಕ ಲಾಲ್ ಬಹದ್ದೂರ್ ಶಾಸ್ತ್ರಿಯವರು ರಾಷ್ಟ್ರೀಯ ರೀತಿಯಲ್ಲಿ ಶಿಕ್ಷಣ ಪಡೆದು ಆಧುನಿಕ ಮೂಢನಂಬಿಕೆಗಳಿಂದ ಪಾರಾಗಿದ್ದುದರಿಂದಲೇ, ಪಾಕ್ ಸೈನ್ಯ ಭಾರತದೆಡೆಗೆ ಧಾವಿಸುತ್ತಿದ್ದಾಗ ಭಾರತೀಯ ಸೇನಾಪಡೆಗಳು ಲಾಹೋರನ್ನು ವಶಪಡಿಸಿಕೊಳ್ಳಲು ಸಮಯೋಚಿತ ಸೂಚನೆ ಕೊಟ್ಟು ಯುದ್ಧದ ಸ್ವರೂಪವನ್ನೇ ಬದಲಾಯಿಸಲು ಸಾಧ್ಯವಾಯಿತು. The tallest decision taken by the shortest Prime Minister of India ಎಂದು ಪ್ರಶಂಸೆಗೆ ಪಾತ್ರರಾಗಲು ಸಾಧ್ಯವಾಯಿತು. ಇದು ಅವರ ಪ್ರಜ್ಞಾವಂತಿಕೆ ಮತ್ತು ಪ್ರಬುದ್ಧತೆಗಳಿಗೆ ಹಿಡಿದ ಕೈಗನ್ನಡಿ.

ವಿದ್ಯಾ ವಿವಾದಾಯ | ಧನಂ ಮದಾಯ |

ಶಕ್ತಿಃ ಪರೇಷಾಂ ಪರಿಪೀಡನಾಯ ||

ಖಲಸ್ಯ ಸಾಧೋ ವಿಪರೀತ ಮೇತತ್ |

ಜ್ಞಾನಾಯ ದಾನಾಯ ಚ ರಕ್ಷಣಾಯ ||

‘ಅಲ್ಪನ ವಿದ್ಯೆ ವಿವಾದಗಳಿಗೂ, ಧನಮದಕ್ಕೂ ಶಕ್ತಿಯು ಪರಪೀಡನೆಗೂ ಎಡೆ ಮಾಡಿಕೊಟ್ಟರೆ ಸಾಧು ವ್ಯಕ್ತಿತ್ವ ಉಳ್ಳವರಲ್ಲಿ ಇದೇ ವಿದ್ಯೆ ಜ್ಞಾನದಂತೆ, ಧನ ದಾನ ರೂಪದಲ್ಲಿ ಮತ್ತು ಶಕ್ತಿ ಪರರ ರಕ್ಷಣೆಯ ಸಾಧನವಾಗಿ ಶೋಭಿಸುತ್ತದೆ.’

ಇಂಥ ವಿಚಾರಗಳನ್ನು ತಿಳಿದು ಅದಕ್ಕೆ ತಕ್ಕಂತೆ ನಮ್ಮ ಮನಸ್ಥಿತಿ-ಧೋರಣೆಗಳನ್ನು ತಿದ್ದಿಕೊಳ್ಳುವುದು ವ್ಯಕ್ತಿತ್ವದಲ್ಲಿ ಅಳವಡಿಸಿಕೊಳ್ಳುವುದು ಇದೇ ್ಝ್ಛ ಠ್ಚಜಿಛ್ಞಿ್ಚ ಅಥವಾ ಜೀವನ ವಿಜ್ಞಾನ. ದೇಶಕ್ಕೆ ಬೇಕಿರುವುದು ಇಂಥವರೇ. ಇವರೇ ಪ್ರಬುದ್ಧರು; ಪ್ರಜ್ಞಾವಂತರು.

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net