ಹಲ್ಲುಗಳು ಏಕೆ ಬಿಳಿಯಾಗಿವೆ, ಸಹಜ ಬಣ್ಣ ಯಾವುದು?

Teath
Published on
ಯಾರಿಗೆ ತಾನೇ ಸುಂದರವಾಗಿ ಆಕರ್ಷಕವಾಗಿ ಕಾಣುವುದು ಇಷ್ಟವಾಗುವುದಿಲ್ಲ? ಸುಂದರವಾಗಿ ಇರುವುದಕ್ಕೆ ಪ್ರಮುಖ ಮಾನದಂಡವೆಂದರೆ ನಗು. ಸುಂದರವಾದ ನಗು ವ್ಯಕ್ತಿಯ ದೈಹಿಕ, ಮಾನಸಿಕ ಹಾಗೂ ಮೌಖಿಕ ಆರೋಗ್ಯವನ್ನು ಸೂಚಿಸುತ್ತದೆ. ಅಲ್ಲದೆ, ನಮ್ಮ ಸುತ್ತ ಮುತ್ತ ಇರುವವರಿಗೆ ಧನಾತ್ಮಕ ಸಂದೇಶವನ್ನು ರವಾನಿಸುತ್ತದೆ. ಸುಂದರವಾದ ನಗುವನ್ನು ಸಾಧಿಸಲು ನಮ್ಮ ಹಲ್ಲುಗಳು ಸುಂದರವಾಗಿ ಮತ್ತು ಬಿಳಿಯಾಗಿ ಇರಬೇಕೆಂದು ಬಯಸುವುದು ಸಾಮಾನ್ಯ.

ಹಲ್ಲುಗಳು ಏಕೆ ಬಿಳಿಯಾಗಿರುತ್ತದೆ? ಹಲ್ಲುಗಳ ಸಹಜ ಬಣ್ಣ ಯಾವುದು? ಪ್ರತಿಯೊಬ್ಬರ ಚರ್ಮ, ಕೂದಲುಗಳ ಬಣ್ಣ ಒಂದೇ ಆಗಿರುವುದಿಲ್ಲ ಹಾಗೆ ಹಲ್ಲಿನ ಬಣ್ಣವೂ ಬೇರೆ ಬೇರೆಯಾಗಿರುತ್ತದೆ. ಹಲ್ಲು ಎನಾಮಲ್ (ದಂತಕವಚ), ಡೆಂಟಿನ್ (ದಂತದ್ರವ್ಯ), ಪಲ್ಪ್ (ತಿರುಳು), ಸಿಮೆಂಟಿನ್ ಎಂಬ ವಿವಿಧ ಭಾಗಗಳಿಂದ ರಚನೆಯಾಗಿವೆ. ಇವು ಪ್ರತಿಯೊಂದು ಹಲ್ಲಿನ ಬಣ್ಣವನ್ನು ನಿರ್ಣಯಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಎನಾಮೆಲ್​ನ ಸಾಂದ್ರತೆ ಮತ್ತು ಅದು ಎಷ್ಟು ದಪ್ಪ ಇದೆ ಎನ್ನುವುದರ ಮೇಲೆ ಇದು ಅವಲಂಬಿತವಾಗಿರುತ್ತದೆ. ಹಲ್ಲುಗಳ ಮೇಲ್ಮೈ ಎನಾಮೆಲ್ ತೆಳುವಾದ ಪದರದಂತೆ ಇದ್ದು ಅರೆ ಪಾರದರ್ಶಕವಾಗಿದೆ. ಇದರಿಂದ

ಹಲ್ಲುಗಳಿಗೆ ಬಿಳಿ ನೀಲಿ ಬಣ್ಣಗಳನ್ನು ನೀಡುತ್ತದೆ. ಇದರ ಕೆಳಗಿರುವ ಡೆಂಟಿನ್ ಹೆಚ್ಚು ಗಾಢವಾಗಿದ್ದು ಹಳದಿ ಕಂದು ಬಣ್ಣದ್ದಾಗಿರುತ್ತದೆ, ಮತ್ತು ಹಲ್ಲಿನ ಪ್ರಮುಖ ಭಾಗವಾಗಿದೆ. ಇದರ ಮಧ್ಯೆ ಪಲ್ಪ್ ಮೃದುವಾದ ಭಾಗ ರಕ್ತನಾಳಗಳನ್ನು ಹೊಂದಿರುವುದರಿಂದ ಕೆಂಪು ಅಥವಾ ತಿಳಿ ಗುಲಾಬಿ ಬಣ್ಣವನ್ನು ಹೊಂದಿದೆ.

ಹಲ್ಲಿನ ಬಣ್ಣ ಸಾಮಾನ್ಯವಾಗಿ ಲಿಂಗ, ಜನಾಂಗ ಮತ್ತು ಭೌಗೋಳಿಕ ಪ್ರದೇಶಕ್ಕೆ ಅನುಗುಣವಾಗಿ ಬದಲಾಗುತ್ತದೆ. ಸ್ತ್ರೀಯರು ಪುರುಷರಿಗಿಂತ ಹೆಚ್ಚು ಬಿಳಿಯಾದ ಹಲ್ಲುಗಳನ್ನು ಹೊಂದಿರುತ್ತಾರೆ. ಹಾಲುಹಲ್ಲುಗಳು ಶಾಶ್ವತ ಹಲ್ಲುಗಳಿಗಿಂತ ಬಿಳಿಯಾಗಿರುತ್ತದೆ.

ಹಲ್ಲುಗಳ ಬಣ್ಣ ಅನೇಕ ಕಾರಣಗಳಿಂದ ಬದಲಾಗಬಹುದು

  • ನಾವು ಸೇವಿಸುವ ಆಹಾರ- ಟ್ಯಾನಿನ್ ಅಂಶ ಹೆಚ್ಚಿರುವ ಆಹಾರ ಪದಾರ್ಥಗಳ ಸೇವನೆ, ಸರಿಯಾಗಿ ಹಲ್ಲುಗಳನ್ನು ಸ್ವಚ್ಛಗೊಳಿಸದೆ ಇರುವುದು, ತಂಬಾಕು ಉತ್ಪನ್ನಗಳ ಸೇವನೆ, ವೀಳ್ಯದೆಲೆ ಜಗಿಯುವುದು, ಹಲ್ಲುಗಳನ್ನು ಕಬ್ಬಿಣ ಮುಂತಾದ ಲವಣಗಳಿಗೆ ಒಡ್ಡುವುದರಿಂದ ಹಲ್ಲುಗಳು ಹೆಚ್ಚು ಗಾಢವಾಗಿ ಹೊಳಪು ಕಡಿಮೆಯಾದಂತೆ ಕಾಣುತ್ತದೆ.
  • ನೀರಿನಲ್ಲಿ ಸಾಮಾನ್ಯವಾಗಿ ಕಂಡುಬರುವ ಖನಿಜಾಂಶ ಫ್ಲೋರೈಡ್. ಅಧಿಕ ಪ್ರಮಾಣದಲ್ಲಿದ್ದರೆ ಫ್ಲೊರೋಸಿಸ್ ಉಂಟಾಗಬಹುದು. ಹಲ್ಲುಗಳ ಬೆಳವಣಿಗೆಯ ಸಮಯದಲ್ಲಿ ಅತಿಯಾದ ಫ್ಲೋರೈಡ್​ನಿಂದಾಗಿ ಹಲ್ಲುಗಳು ಗಾಢವಾದ ಹಳದಿ ಬಣ್ಣದಿಂದ ಕಂದುಬಣ್ಣದ ಗುಳಿಗಳು ಹಲ್ಲಿನ ಮೇಲೆ ಕಾಣುತ್ತವೆ.
  • ಯಾವುದೇ ರೀತಿಯ ಅಪಘಾತವಾದಾಗ ಅಥವಾ ಹಲ್ಲುಗಳಿಗೆ ಏಟು ಬಿದ್ದಾಗ ಹಲ್ಲಿನ ಬಣ್ಣ ಬದಲಾಗುವ ಸಾಧ್ಯತೆ ಇರುತ್ತದೆ. ಏಟು ಬಿದ್ದು ಕೆಲವು ವಾರಗಳು ಅಥವಾ ತಿಂಗಳ
  • ಬಳಿಕ ಹಲ್ಲಿನ ಬಣ್ಣ ಕಪ್ಪಾಗಬಹುದು.
  • ಕೆಲವು ಆನುವಂಶೀಯ ಕಾಯಿಲೆಗಳು ಇದ್ದಂತಹ ಸಂದರ್ಭದಲ್ಲಿ ಹಲ್ಲಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಉದಾಹರಣೆಗೆ ಎಮೆಲೊಜೆನೆಸಿಸ್ ಇಂಪರ್ಫೆಕ್ಟಾ (amelogenesis imperfecta) ಇದ್ದಲ್ಲಿ ಹಲ್ಲುಗಳು ಬಿಳಿಯಾಗಿರದೆ ಹಳದಿ ಅಥವಾ ಕಂದು ಬಣ್ಣ ವಾಗಿರುತ್ತದೆ.
  • ಇನ್ನು ವಯಸ್ಸಾದಂತೆ ಸೆಕೆಂಡರಿ ಡೆಂಟಿನ್ ರಚನೆಯಾಗುತ್ತದೆ ಜೊತೆಗೆ ಎನಾಮೆಲ್​ನ ಸವೆತ ಉಂಟಾಗುವುದರಿಂದ ಹಲ್ಲುಗಳು ಹಳದಿ ಬಣ್ಣ ಹೊಂದಿರುತ್ತವೆ.
  • ಕೆಲವು ಬ್ಯಾಕ್ಟೀರಿಯಾಗಳ ಕಾರಣ ಹಲ್ಲುಗಳ ಮೇಲೆ ಕಪ್ಪು ಅಥವಾ ಹಸಿರು ಕಲೆಗಳು ಉಂಟಾಗಬಹುದು. ಚಿಕಿತ್ಸಾ ಕ್ರಮವು ಯಾವ ಕಾರಣದಿಂದಾಗಿ ಹಲ್ಲುಗಳ ಬಣ್ಣ ಬದಲಾಗಿದೆ ಎನ್ನುವುದರ ಮೇಲೆ ಅವಲಂಬಿತವಾಗಿದ್ದು ಕಲೆಗಳು ಬಾಹ್ಯ ಅಥವಾ ಆಂತರಿಕ ಎಂದು ನಿರ್ಣಯಿಸುವುದರ ಮೂಲಕ ಸರಿಯಾದ ಚಿಕಿತ್ಸೆಯನ್ನು ನೀಡಬಹುದು. ಕಲೆಯು ಬಾಹ್ಯ (extrensic)ಆಗಿದ್ದಲ್ಲಿ ಡೆಂಟಲ್ prophylaxis ಅಥವಾ ಮಾರುಕಟ್ಟೆಯಲ್ಲಿ ಸಿಗುವ ಹಲ್ಲುಗಳನ್ನು ಬಿಳಿ ಗೊಳಿಸುವ ಟೂತ್​ಪೇಸ್ಟ್​ಗಳ ಸಹಾಯದಿಂದ ಸರಿಪಡಿಸಬಹುದು. ಆಂತರಿಕ ಕಲೆಗಳು (intrensic stains) ಆಗಿದ್ದಲ್ಲಿ ಬ್ಲಿಚಿಂಗ್​ನ ಅವಶ್ಯಕತೆ ಇರುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net