

| ಡಾ.ಗಣಪತಿ ಆರ್. ಭಟ್
ಸಂಗೀತವನ್ನು ಕಲಿಯಬೇಕೆಂಬ ಆಸಕ್ತಿಯಿಂದ ಬಂದ ವಿದ್ಯಾರ್ಥಿಯೊಬ್ಬನಿಗೆ ಗುರುಗಳು ಅನೇಕ ದಿನಗಳವರೆಗೆ ಸ್ವರಾಭ್ಯಾಸವನ್ನೇ ಪದೇಪದೆ ಮಾಡಿಸಲಾಗಿ, ಕ್ರಮೇಣ ಅವನಿಗೆ ಒಂದನ್ನೇ ಪುನರಾವರ್ತನೆ ಮಾಡಲು ಬೇಸರವೆನಿಸಿತು. ಗುರುಗಳ ಬಳಿ ಧೈರ್ಯ ಮಾಡಿ ಕೇಳಿದ- ‘ನಾನು ಎಷ್ಟೇ ಅಭ್ಯಾಸ ಮಾಡಿದರೂ ನೀವು ಇದುವರೆಗೂ ನನಗೆ ಮೂಲಸ್ವರಗಳನ್ನು ಮಾತ್ರವೇ ಕಲಿಸಿದ್ದೀರಿ. ಎಲ್ಲರಂತೆ ನಾನೂ ರಾಗಗಳನ್ನು ಕಲಿತು ಹಾಡುವಂತಾಗುವುದು ಯಾವಾಗ?’ ಗುರುಗಳು ಮರುಕ್ಷಣ ಮಾತನಾಡಲಿಲ್ಲ. ತಾನು ಕೇಳಿದ್ದು ತಪ್ಪಾಯಿತೇನೋ ಎಂಬ ಅಳುಕು ಆ ಕೂಡಲೇ ಶಿಷ್ಯನಲ್ಲಿ ಮೂಡಿತು.
ಶಿಷ್ಯನಲ್ಲಿದ್ದ ಮುಗ್ಧತೆಯನ್ನು ಗಮನಿಸಿದ ನಂತರ ಗುರುಗಳು ಹೇಳಿದರು- ‘ನೋಡು, ನೀನಿನ್ನೂ ಆರಂಭಿಕ ಹಂತದಲ್ಲಿಯೇ ಇದ್ದೀಯಾ. ಪ್ರತಿ ಸ್ವರದ ಉಚ್ಚಾರವನ್ನು ಸರಿಯಾಗಿ ಕಲಿಯದೇ ಹೋದರೆ ಮುಂದೆ ಸರಿಯಾದ ಕ್ರಮದಲ್ಲಿ ನೀನು ಹಾಡುವುದು ಹೇಗೆ? ಅವಸರದಲ್ಲಿ ಕಲಿತು ಅಬದ್ಧವಾಗಿ ಹಾಡಿದರೆ, ಜನ ನಿನ್ನನ್ನೂ ನನ್ನನ್ನೂ ಒಪು್ಪವರೆ? ಕಲಿಯುವಾಗ ತಾಳ್ಮೆ ಇರಬೇಕು. ಗುರುಗಳು ಹೇಳಿಕೊಡುವುದರಲ್ಲಿ ನಂಬಿಕೆ ಇರಬೇಕು. ಆಗ, ತಾನೇ ತಾನಾಗಿ ಕಲಿಯುವ ಆಸಕ್ತಿಯೂ ಹೆಚ್ಚುವುದು. ತಾಳ್ಮೆಯಿಲ್ಲದೇ ಕಲಿಯುವವರಿಗೆ ಇಲ್ಲಿ ಜಾಗವಿಲ್ಲ’.
ಗುರುಗಳ ಮಾತು ನಿಷ್ಠುರವಾಗಿದ್ದರೂ ಶಿಷ್ಯನಿಗೆ ಸತ್ಯದರ್ಶನ ಮಾಡಿಸಿತ್ತು. ಶ್ರದ್ಧೆಯಿಂದ ಕಲಿಯುವೆನೆಂದು ಕಾಲಿಗೆ ಬಿದ್ದ. ಆಶ್ಚರ್ಯವೆಂದರೆ, ಆತನ ಕಲಿಕೆ ಈಗ ವೇಗ ಪಡೆದುಕೊಂಡಿತ್ತು. ತಾಳ್ಮೆಯೆಂಬುದು ಜೀವನದ ಪ್ರತಿಯೊಂದು ಹಂತದಲ್ಲಿಯೂ ಅವಶ್ಯ. ಕೋಪದಿಂದ ಮತಿ ಕೆಟ್ಟೋ, ಚಾಪಲ್ಯಕ್ಕೆ ಮನಸು ಕೊಟ್ಟೋ ಅನೇಕರು ಸಹನೆಯನ್ನೇ ಕಳೆದುಕೊಳ್ಳುತ್ತಾರೆ. ಪರಿಣಾಮ, ಅವಘಡ ಸಂಭವಿಸಬಹುದು. ಸಂಬಂಧಗಳು ಶಿಥಿಲವಾಗಬಹುದು. ಬದುಕಿನಲ್ಲಿ ಅವಕಾಶಗಳೇ ಮಾಯವಾಗಬಹುದು. ತಾಳ್ಮೆಯಿಂದ ವರ್ತಿಸದ ಮನುಷ್ಯನಿಗೆ ಸಮಾಜದಲ್ಲಿ ಬೆಲೆಯಾದರೂ ಎಲ್ಲಿ?
ನಂದಿನಿಯೆಂಬ ಹಸುವನ್ನು ಆಯುಧಬಲದಿಂದ ಕಸಿದುಕೊಳ್ಳಲು ಬಂದ ವಿಶ್ವಾಮಿತ್ರನನ್ನು ವಸಿಷ್ಠರು ತಾಳ್ಮೆಯಿಂದ ವ್ಯವಹರಿಸಿ ಗೆದ್ದರು. ತಾಳ್ಮೆಗಿಂತಲೂ ದೊಡ್ಡ ಆಯುಧ ಯಾವುದಿದೆ? ಕಲ್ಮಷಪಾದನೆಂಬ ರಾಜನಿಗೂ ವಸಿಷ್ಠರ ಮಗ ಶಕ್ತಿಗೂ ವಾಗ್ವಾದ ನಡೆದು ಶಕ್ತಿಯು ಕಲ್ಮಷಪಾದನನ್ನು ಶಪಿಸಿದನು. ವೈಷಮ್ಯ ಮುಂದುವರಿದು ಶಾಪಗ್ರಸ್ತ ಕಲ್ಮಷಪಾದನಿಂದ ಶಕ್ತಿಯು ಹತನಾದ. ಮುಂದೆ ಶಕ್ತಿಯ ಮಗ ಪರಾಶರನು ಆತನ ಮೇಲೆ ಸೇಡು ತೀರಿಸಿಕೊಳ್ಳಲು ಮುಂದಾದ. ಸಹನೆ ಕಳೆದುಕೊಂಡು ವ್ಯವಹರಿಸಿದರೆ ಕೊನೆಗುಳಿಯುವುದು ದ್ವೇಷ ಮಾತ್ರ. ವಸಿಷ್ಠರು ತಾಳ್ಮೆವಹಿಸಿ ಕಲ್ಮಷಪಾದನನ್ನು ಶಾಪದಿಂದ ವಿಮೋಚನೆಗೊಳಿಸಿ ದ್ವೇಷವನ್ನು ಕೊನೆಗಾಣಿಸಿದರು. ಇಂದ್ರಿಯ ಚಪಲಕ್ಕೆ ತುತ್ತಾಗಿ ಅಹಲ್ಯೆ ತಪ್ಪೆಸಗಿದಳು. ಪತಿ ಗೌತಮ ಮಹರ್ಷಿಗಳು ಶಾಪಕೊಟ್ಟಾಗ ಆಕೆ ಸಹನೆ ಕಳೆದುಕೊಳ್ಳಲಿಲ್ಲ. ಸಾವಿರಾರು ವರ್ಷಗಳನ್ನು ಆಶಾವಾದಿಯಾಗಿ ಕಳೆದು ರಾಮದರುಶನ ಪಡೆದು ತನ್ನ ಪಾವಿತ್ರ್ಯವನ್ನು ಜಗತ್ತಿಗೆ ಸಾರಿದಳು. ಧರ್ಮನಿಷ್ಠಳಾದ ಶಬರಿ ಸಹನೆಯಿಂದ ತನ್ನ ಗುರು ಮತಂಗ ಮುನಿಗಳ ಸೇವೆಗೈದಳು. ಸದ್ಗತಿಗಾಗಿ ಬಹುಕಾಲ ರಾಮನ ಆಗಮನಕ್ಕಾಗಿ ಕಾಯ್ದಳು. ಅವಳ ಸಹನಶಕ್ತಿಯನ್ನು ಮೆಚ್ಚಿದ ಶ್ರೀರಾಮನು ಅವಳನ್ನು ಹರಸಿ ಉದ್ಧರಿಸಿದ. ಸಹನೆಯಿಂದಲೇ ಸಾಧನೆ ಸಫಲವಾಗುವುದು ಮತ್ತು ವ್ಯಕ್ತಿಯೂ ಬೆಳಗುವನು ಎಂಬುದನ್ನು ಮರೆಯಬಾರದು.
(ಲೇಖಕರು ಸಂಸ್ಕೃತ ಉಪನ್ಯಾಸಕರು ಹಾಗೂ ರೇಡಿಯೋ ನಿರೂಪಕರು)
(ಪ್ರತಿಕ್ರಿಯಿಸಿ: manollasavv@gmail.com)