

ಊರಿಗೆ ಊರೇ ದಹಿಸುತ್ತಿದೆ. ಸತ್ತವರ ಸುಡಲು ಚಿತಾಗಾರಗಳೇ ಸಾಲದಾಗಿದೆ. ಹಾಗಂತ ಎದೆಗುಂದುವುದಕ್ಕೆ ಆಗುತ್ತದೆಯೇ? ಕರೊನಾ ವಿರುದ್ಧದ ನಿರ್ಣಾಯಕ ಹೋರಾಟದ ನಾಯಕತ್ವವನ್ನು ಯುವಕರು ಹೊರದಿದ್ದರೆ ಮತ್ಯಾರಿಗೆ ಸಾಧ್ಯ? ನಿಮ್ಮ ಕುಟುಂಬ, ನೀವಿರುವ ಊರು ನಿಮ್ಮದೇ ಹೊಣೆ. ಅಯ್ಯೋ ನನ್ನಿಂದಾಗುವುದೇ ಎಂಬ ಅಸಹಾಯಕತೆ ಕಿತ್ತೆಸೆದು ಯಾಕಾಗದೆಂಬ ಛಲ ಹೊತ್ತು ಬನ್ನಿ.
ಅಯ್ಯೋ ದೇವರೆ, ಸ್ವಲ್ಪವೂ ಕರುಣೆ ಇಲ್ಲವೇ? ನನ್ನ ಅಮ್ಮನನ್ನು ಕರೆಸಿಕೊಳ್ಳಲು ಏನಿತ್ತು ಅಷ್ಟು ಆತುರ? ನನಗೆ ಸ್ವಲ್ಪ ಗೊತ್ತಾಗಿದ್ರೂ ಉಳಿಸಿಕೊಳ್ತಿದ್ದೆ... ತಲೆ ಸಿಡಿಸುತ್ತಿದ್ದ ಬಿರುಬಿಸಿಲಿನಲ್ಲಿ ಆಗಷ್ಟೇ ಆಂಬುಲೆನ್ಸ್ ನಿಂದ ಕೆಳಗಿಳಿಸಿದ ಪ್ಲಾಸ್ಟಿಕ್ ಕವರ್ನಲ್ಲಿ ಮಾಂಸದ ಮುದ್ದೆಯಾಗಿ ಮಲಗಿದ್ದ ಹೆತ್ತಮ್ಮನ ಕಂಡ ಆ ನಾಲ್ಕು ಮಕ್ಕಳ ಆಕ್ರಂದನ ಚಿತಾಗಾರದಲ್ಲಿ ಕೇಳಿಬರುತ್ತಿತ್ತು. ನಿತ್ಯೋಪಯೋಗಿ ವಸ್ತುಗಳನ್ನು ತರಲು ಅಂಗಡಿಗೆ ಹೋಗುವುದಕ್ಕೆ ‘ನಾ ಒಲ್ಲೆ, ನೀ ಒಲ್ಲೆ’ ಅಂತ ಜಗಳ ಆಡುತ್ತಿದ್ದ ಮಕ್ಕಳ ಬದಲಿಗೆ ತಾನೇ ಹೋಗುತ್ತಿದ್ದ ಆ ತಾಯಿ ‘ಕರೊನಾ ಎಲ್ಲಿಂದ ಬಂದು ಅಟಕಾಯಿಸಿಕೊಂಡಿತು’ ಎಂದು ಯೋಚಿಸುವಷ್ಟರಲ್ಲಿ ಅರೆಜೀವ ಆಗಿದ್ದರು. ಜ್ವರ, ಶೀತದ ಜತೆಗಿದ್ದ ಕೆಮ್ಮನ್ನು ಉದಾಸೀನ ಮಾಡಿ 2 ಮಾತ್ರೆ ನುಂಗಿ ಮಲಗಿದ್ದ ಆಕೆ ವಾರ ಕಳೆಯುವ ಮೊದಲೇ ಆಸ್ಪತ್ರೆಯಲ್ಲಿ ಉಸಿರು ಚೆಲ್ಲಿದ್ದರು. ಇದಕ್ಕೆ ಯಾರು ಹೊಣೆ? ಕೊಂಚವೂ ಸುಳಿವು ನೀಡದ ಕರೊನಾದ ತಪ್ಪೇ? ಅಥವಾ ಅಪಾಯದ ಅರಿವಿದ್ದರೂ ವಯಸ್ಸಾದ ಅಮ್ಮನನ್ನು ಅಂಗಡಿಗೆ ಕಳುಹಿಸಿದ ಮಕ್ಕಳ ತಪ್ಪೇ? ಇಲ್ಲಿ ಯಾರದು ತಪ್ಪು ಎಂಬುದಕ್ಕಿಂತ ನಮ್ಮ ಯುವಪೀಳಿಗೆಯ ಹೊಣೆಗಾರಿಕೆಯ ಬಗ್ಗೆ ಪ್ರಶ್ನೆ ಮೂಡುತ್ತದೆ.
ನಿಮ್ಮ ಕೈಯಲ್ಲೇ ಇದೆ: ವೈದ್ಯರು, ಸರ್ಕಾರ, ಸಂಘ, ಸಂಸ್ಥೆ, ಔಷಧಾಲಯ ಸಿಬ್ಬಂದಿ, ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡುವ ವಾರಿಯರ್ಸ್, ಆಂಬುಲೆನ್ಸ್ನಲ್ಲಿ ಚಿಕಿತ್ಸೆಗೆ ಕರೆದೊಯ್ಯುವ ಚಾಲಕರು ಹೀಗೆ ಅವರವರ ವ್ಯಾಪ್ತಿಯಲ್ಲಿ ಅವರವರಿಗೆ ಮೀರಿದ ಶಕ್ತಿ ಹಾಕಿ ಕರೊನಾ ವಿರುದ್ಧ ಸೇನಾನಿಗಳು ದುಡಿಯುತ್ತಿದ್ದಾರೆ. ಇವರೆಲ್ಲರೂ ಕರೊನಾ ಬಂದ ಮೇಲೆ ರಕ್ಷಣೆಗೆ ನಿಲ್ಲುವವರೇ ಹೊರತು ಕರೊನಾ ಬರದ ಹಾಗೆ ತಡೆಯಲಾರರು. ಈ ಕಾರ್ಯವನ್ನು ಯುವಪೀಳಿಗೆ ಸಮರ್ಥವಾಗಿ ಮಾಡಬಲ್ಲದು.
ಕುಟುಂಬದೊಳಗೆ ನಿಮ್ಮ ಕರ್ತವ್ಯ
ಅಪ್ಪ, ಅಮ್ಮ, ಅಜ್ಜಿ, ತಾತ ಹೀಗೆ ಮನೆಯಲ್ಲಿರುವ ಹಿರಿಯರ ಬಗ್ಗೆ ಕಾಳಜಿ ವಹಿಸಿ, ಅವರ ಬೇಕು, ಬೇಡ ಎಲ್ಲದರ ಬಗ್ಗೆ ಮುತುವರ್ಜಿ ವಹಿಸಿ, ಅನವಶ್ಯಕವಾಗಿ ಮನೆಯಿಂದ ಹೊರಹೋಗದಂತೆ ನೋಡಿಕೊಳ್ಳಿ. ? ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಗಮನವಿಡಿ, ವಿನಾಕಾರಣ ಆಸ್ಪತ್ರೆ ಮೆಟ್ಟಿಲೇರುವುದಕ್ಕೆ ಅವಕಾಶವಾಗದಂತೆ ನಿಗಾ ವಹಿಸಿ. ? ಜ್ವರ, ಕೆಮ್ಮು ಮತ್ತಿತರ ಸಣ್ಣಪುಟ್ಟ ಸಮಸ್ಯೆ ಕಾಣಿಸಿಕೊಂಡಲ್ಲಿ ನೀವೇ ವೈದ್ಯರ ಬಳಿ ಕರೆದೊಯ್ಯಿರಿ, ಅಲ್ಲಿ ಕರೊನಾ ಸೋಂಕು ತಗುಲದಂತೆ ಜಾಗರೂಕರಾಗಿರಿ, ಚಿಕಿತ್ಸೆ ಬಳಿಕ ಮನೆಗೆ ಕರೆದುಕೊಂಡು ಬನ್ನಿ. ? ಒಂದೊಮ್ಮೆ ಮನೆಯವರಿಗೆ ಸೋಂಕು ಖಚಿತಪಟ್ಟಲ್ಲಿ ಮಾನಸಿಕ ಸ್ಥೈರ್ಯ ತುಂಬಿ. ಹಾಸಿಗೆಯಲ್ಲೇ ಇರಲು ಬಿಡದೆ ಅವರ ದೈಹಿಕ ಚಟುವಟಿಕೆ ಬಗ್ಗೆ ಗಮನ ಹರಿಸಿ, ವೈದ್ಯರ ಜತೆ ಸಂಪರ್ಕ ಇಟ್ಟುಕೊಂಡು ಅವರ ಸೂಚನೆ ಪಾಲಿಸಿ. ? ನಿಮ್ಮ ಆತ್ಮವಿಶ್ವಾಸ, ಧೈರ್ಯ ಅವರನ್ನು ಚಿಕಿತ್ಸೆ ಇಲ್ಲದೆ ಗುಣಪಡಿಸುವಷ್ಟು ಪ್ರಭಾವ ಬೀರುತ್ತದೆ ಎಂಬುದನ್ನು ನೆನಪಿಡಿ.
ಒಂದು ದಿನದ ಹೋರಾಟವಲ್ಲ
ಕರೊನೋತ್ತರ ದಿನಗಳಲ್ಲಿ ಬದಲಾದ ಜೀವನಶೈಲಿ, ಹೋರಾಟದ ಬದುಕಿಗೆ ನಾವು ಹೊಂದಿಕೊಳ್ಳಲೇಬೇಕಿದೆ. ಏಕೆಂದರೆ ತಜ್ಞರ ಪ್ರಕಾರ ಕನಿಷ್ಠ ಇನ್ನೆರಡು ವರ್ಷ ಇದೇ ಮಾದರಿಯ ಪರಿಸ್ಥಿತಿ ಇರಲಿದೆ. ಹೀಗಾಗಿ ರಸ್ತೆ ಸುತ್ತುವ, ಹೋಟೆಲ್ನಲ್ಲಿ ತಿನ್ನುವ, ಜಾಲಿ ರೈಡ್ ಹೋಗುವ ಆಸೆಗಳನ್ನೆಲ್ಲ ಸದ್ಯಕ್ಕೆ ಗಂಟುಮೂಟೆ ಕಟ್ಟಿ ಇಡಲೇಬೇಕಾಗುತ್ತದೆ. ಸಮಾಜಕ್ಕಾಗಿ, ವೈಯಕ್ತಿಕ ಬದುಕಿಗಾಗಿ ಇಷ್ಟು ತ್ಯಾಗ ಮಾಡಲೇಬೇಕಿದೆ. ಇಂದು ನಾವೆಲ್ಲ ಸೇರಿ ಕರೊನಾ ಗೆದ್ದರೆ ನಮ್ಮ ಮುಂದಿನ ಭವಿಷ್ಯವೂ ಸುಖಕರವಾಗಲಿದೆ. ಈ ವಿಚಾರವನ್ನು ಮುಖ್ಯವಾಗಿ ನಮ್ಮ ಯುವಪೀಳಿಗೆ ಅರ್ಥ ಮಾಡಿಕೊಳ್ಳಬೇಕಿದೆ.
ನಿಮ್ಮ ಜೀವವೂ ಮುಖ್ಯ
ಕರೊನಾ ವಿರುದ್ಧ ಸಮರ ಸಾರುವುದಕ್ಕೆ ನಿಮ್ಮಲ್ಲೂ ಆರೋಗ್ಯದ ಬಗ್ಗೆ ಕಾಳಜಿ ಇರಲೇಬೇಕು. ಹೀಗಾಗಿ ನಿಮ್ಮ ಬಗೆಗಿನ ಆತ್ಮವಿಶ್ವಾಸ ಅತಿಯಾಗದಿರಲಿ. ನಿಮ್ಮ ಯಾವುದೇ ಸಮಾಜಮುಖಿ ಕಾರ್ಯಕ್ಕೂ ಕರೊನಾ ಜಾಗೃತಿ ಮಾರ್ಗಸೂಚಿಯಾಗಿರಲಿ. ಸಣ್ಣಪುಟ್ಟ ಸುಸ್ತು, ಜ್ವರ ಇದ್ದರೂ ಅಲಕ್ಷಿಸಬೇಡಿ. ಸೋಂಕು ಬಂದ ಮೇಲೆ ಎಚ್ಚೆತ್ತುಕೊಳ್ಳುವುದಕ್ಕಿಂತ ಬರದಂತೆ ಎಚ್ಚರ ವಹಿಸುವುದು ಜಾಣತನ. ನಿಮ್ಮನ್ನೇ ಅವಲಂಬಿಸಿರುವ ಕುಟುಂಬಕ್ಕೆ ನೀವು ಮಾಡಬಹುದಾದ ಉಪಕಾರ ಇದು.
ಸಮಾಜಕ್ಕೆ ನಿಮ್ಮ ಸಹಕಾರ
ಸ್ನೇಹಿತರ ಗುಂಪೊಂದನ್ನು ರಚನೆ ಮಾಡಿಕೊಳ್ಳಿ. ನಿಮ್ಮ ಬೀದಿಯಲ್ಲಿ/ ಊರಿನಲ್ಲಿ ಮನೆಯಿಂದ ಅನಗತ್ಯವಾಗಿ ಹೊರ ಬರುವವರಿಗೆ ಅದರಿಂದಾಗುವ ಅಪಾಯಗಳನ್ನು ಮನವರಿಕೆ ಮಾಡಿಕೊಡಿ. ?ಮಾಸ್ಕ್ ಹಾಕದವರಿಗೆ ಅದರಿಂದಾಗುವ ಪ್ರಯೋಜನ/ಅಪಾಯಗಳ ಬಗ್ಗೆ ಜಾಗೃತಿ ಮೂಡಿಸಿ. ?ನಿಮ್ಮ ರಸ್ತೆಯಲ್ಲಿ ಯಾರಿಗಾದರೂ ಸೋಂಕು ಕಾಣಿಸಿಕೊಂಡರೆ ಅಂಥವರು ಮನೆಯಿಂದ ಹೊರಹೋಗಿ ಬೇರೆಯವರ ಜತೆ ಬೆರೆಯದಂತೆ ಕಣ್ಣಿಡಿ. ಅಗತ್ಯಬಿದ್ದರೆ ಅವರಿಗೆ ಸಹಾಯ ಮಾಡಿ, ಅವರು ಕೇಳಿದ ವಸ್ತುಗಳನ್ನು ತಂದುಕೊಡಿ. ?ಆಸ್ಪತ್ರೆಗೆ ಹೋಗಿ ಬರುವವರ ಮೇಲೆ ನಿಗಾ ಇರಲಿ. ಕೆಲವರು ಸಮಾಜಕ್ಕೆ ಹೆದರಿ ಸೋಂಕನ್ನು ಮುಚ್ಚಿಡುವ ಸಾಧ್ಯತೆ ಇರುತ್ತದೆ? ಹಣಕಾಸಿನ ಅಗತ್ಯವಿರುವವರಿಗೆ ಎಲ್ಲರೂ ಸೇರಿ ಕೈಲಾದ ಸಹಾಯ ಮಾಡಿ.
ಪೊಲೀಸರು ಏನು ಹೇಳ್ತಾರೆ?
ಜನತಾ ಕರ್ಫ್ಯೂ ಯಶಸ್ಸಿಗಾಗಿ ಹಗಲೂರಾತ್ರಿ ನಿದ್ದೆಗೆಟ್ಟಿರುವ ಪೊಲೀಸರಿಗೆ ಯುವಕರದ್ದೇ ಹೆಚ್ಚು ತಲೆನೋವು. ಅನಗತ್ಯವಾಗಿ ಮನೆಯಿಂದ ಹೊರಬರಬೇಡಿ ಎಂದು ಎಷ್ಟು ಹೇಳಿದರೂ ಕೆಲವರು ಮಾತು ಕೇಳುತ್ತಿಲ್ಲ. ಹೀಗೆ ಕರ್ಫ್ಯೂ ಉಲ್ಲಂಘಿಸಿ ಹೊರಬರುವ ನೂರಾರು ಜನರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ವಿಪರ್ಯಾ ಸವೆಂದರೆ ಇಂತಹ ಕೇಸ್ಗಳಲ್ಲಿ ಯುವಕರೇ ಶೇ. 90ರಷ್ಟಿದ್ದಾರೆ. ಯುವಕರು ಹೊಣೆಯರಿತು ನಡೆದರೆ ಕರೊನಾದ ಅರ್ಧ ತೀವ್ರತೆಯನ್ನು ಕಟ್ಟಿ ಹಾಕಬಹುದೆಂಬುದು ಖಾಕಿ ಪಡೆಯ ಅಭಿಪ್ರಾಯ