

ಏರ್ ಇಂಡಿಯಾ ಬಂಡವಾಳ ಹಿಂತೆಗೆತದ ಕುರಿತ ಚರ್ಚೆ ಜೋರಾಗಿ ನಡೆಯುತ್ತಿದೆ. ಆದರೆ ಅಟಲ್ ಬಿಹಾರಿ ವಾಜಪೇಯಿ ಸರ್ಕಾರದ ಅವಧಿಯಲ್ಲಿ ಕೆಲವೇ ಕೋಟಿಗಳಷ್ಟಿದ್ದ ಸಾಲ ಆನಂತರದ ದಿನಗಳಲ್ಲಿ ಇಷ್ಟು ದೊಡ್ಡಮಟ್ಟಕ್ಕೆ ಬೆಳೆದು ನಿಂತು ಒಂದಿಡೀ ವಿಮಾನ ಸಂಸ್ಥೆಯೇ ಬಿಳಿ ಆನೆಯಂತಾಗಿದ್ದು ಹೇಗೆ ಎಂಬುದನ್ನು ಈ ದೇಶದ ಪ್ರತಿಯೊಬ್ಬರೂ ಕೇಳಿಕೊಳ್ಳಲೇಬೇಕು. ವಾಸ್ತವವಾಗಿ ಜೆಆರ್ಡಿ ಟಾಟಾ ಅವರ ಮಾರ್ಕೆಟಿಂಗ್ ಮುಖ್ಯಸ್ಥ ಬಾಬಿ ಕೂಕಾ ಏರ್ ಇಂಡಿಯಾವನ್ನು ಜಗತ್ತಿನ ಅತ್ಯುತ್ಕೃಷ್ಟ ವಿಮಾನ ಸಂಸ್ಥೆಯಾಗಿ ರೂಪಿಸಿದರು ಎನ್ನುತ್ತಾರೆ. ಅವರ ಹವಾಯಿ ಸುಂದರಿಯರು ಅಂದಿನ ಕಾಲದ ಆಕರ್ಷಣೆಯ ಕೇಂದ್ರವಾಗಿದ್ದರು. ಇದ್ದಕ್ಕಿದ್ದಂತೆ ನೆಹರು ಈ ವಿಮಾನ ಸಂಸ್ಥೆಯನ್ನು ರಾಷ್ಟ್ರೀಕರಣಗೊಳಿಸಿದರು. ಟಾಟಾ ಅವರನ್ನು ಕೇಳದೆಯೇ ನಿರ್ಣಯ ತೆಗೆದುಕೊಂಡೇಬಿಟ್ಟರು. ಮುಂದೊಮ್ಮೆ ನೆಹರು ಕುರಿತಂತೆ ಟಾಟಾ ಅವರನ್ನು ಪ್ರಶ್ನಿಸಿದಾಗ, ‘ಒಳ್ಳೆಯ ಮನುಷ್ಯ. ಆದರೆ ದೇಶದ ಆರ್ಥಿಕ ಸ್ಥಿತಿ ಕುರಿತಂತೆ ಮಾತನಾಡಲು ಆರಂಭಿಸಿದೊಡನೆ ಕಿಟಕಿಯಿಂದ ಹೊರಗೆ ನೋಡುತ್ತ ಕುಳಿತುಬಿಡುತ್ತಿದ್ದರು. ಅವರಿಗೆ ಅದು ರುಚಿಸುತ್ತಿಲ್ಲ ಎಂಬುದು ಸಲೀಸಾಗಿ ಅರ್ಥವಾಗುತ್ತಿತ್ತು’ ಎಂದಿದ್ದರು. ಟಾಟಾ ಅವರನ್ನು ನೆಹರು ಸರ್ಕಾರ ಈ ಸಂಸ್ಥೆಯ ಅಧ್ಯಕ್ಷ ಅಥವಾ ನಿರ್ದೇಶಕರಾಗಿಯಾದರೂ ಮುಂದುವರಿಯಬೇಕು ಎಂದು ಕೇಳಿಕೊಂಡಿತು. ಅದು ನೆಪಮಾತ್ರಕ್ಕೆ ಅಷ್ಟೆ. ಟಾಟಾ ಬರೆದ ಅನೇಕ ಪತ್ರಗಳಿಗೆ ಸರ್ಕಾರ ಉತ್ತರಿಸುವ ಗೋಜಿಗೂ ಹೋಗಿರಲಿಲ್ಲ.
ಅಟಲ್ ಬಿಹಾರಿ ವಾಜಪೇಯಿ ಅಧಿಕಾರದಲ್ಲಿರುವಾಗ ವ್ಯಾಪಾರ ಮಾಡುವ ಹೊಣೆಗಾರಿಕೆ ಸರ್ಕಾರಕ್ಕಿರಬಾರದು ಎಂದು ಭಾವಿಸಿಯೇ ತಜ್ಞರ ಸಮಿತಿ ನೇಮಿಸಿ ಏರ್ ಇಂಡಿಯಾದ ಬಂಡವಾಳವನ್ನು ಹಿಂತೆಗೆದುಕೊಳ್ಳುವ ವರದಿ ತರಿಸಿಕೊಂಡಿದ್ದರು. ಮುಂದೆ, ಜನರು ಈರುಳ್ಳಿ ಬೆಲೆ ಏರಿತೆಂಬ ಕಾರಣ ಮುಂದಿಟ್ಟುಕೊಂಡು ಅಟಲ್ ಬಿಹಾರಿ ವಾಜಪೇಯಿಯವರನ್ನು ಕೆಳಗಿಳಿಸಿ ಸೋನಿಯಾರನ್ನು ಅಧಿಕಾರಕ್ಕೆ ತಂದರು! ಹೌದು ಮತ್ತೆ, ಎಲ್ಲ ನಿರ್ಣಯಗಳನ್ನೂ ತೆಗೆದುಕೊಳ್ಳುತ್ತಿದ್ದ ಸೋನಿಯಾ ಪ್ರಧಾನಿ ಕುರ್ಚಿಯಲ್ಲೊಂದು ಕೂತಿರಲಿಲ್ಲ. ಉಳಿದಂತೆ ಅವರು ಹೇಳಿದ್ದೇ ನಡೆಯುತ್ತಿತ್ತು ಮತ್ತು ಸರ್ಕಾರದ ಮುಖ್ಯಸ್ಥೆಯಂತೆ ಅವರೇ ಅನೇಕ ರಾಷ್ಟ್ರಗಳ ಪ್ರಮುಖರನ್ನು ಭೇಟಿಯಾಗುತ್ತಿದ್ದರು.
ಪ್ರಫುಲ್ ಪಟೇಲ್ ವಿಮಾನಯಾನ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಮೇಲೆ ಏರ್ ಇಂಡಿಯಾ ಪ್ರಪಾತಕ್ಕೆ ಮುಗ್ಗರಿಸಿಬಿತ್ತು. ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ ವಿಮಾನಗಳನ್ನು ಕೊಂಡುಕೊಳ್ಳುವ ಪಟೇಲರ ಯೋಜನೆಯನ್ನು ಅಪರ ಕಾರ್ಯದರ್ಶಿ ಸುಬ್ರಮಣಿಯನ್ ವಿರೋಧಿಸಿದರು. ಮಿಂಚಿನ ವೇಗದಲ್ಲಿ ಅವರನ್ನು ಕಿತ್ತೊಗೆದು ಬೇರೆ ವಿಭಾಗಕ್ಕೆ ಕಳಿಸಲಾಯ್ತು. ಐಎಎಸ್ ಅಧಿಕಾರಿ ಸುನಿಲ್ ಅರೋರಾ ಏರ್ ಇಂಡಿಯಾದ ಹಾಳಾಗಲಿರುವ ಪರಿಸ್ಥಿತಿ ಕುರಿತಂತೆ ಎಚ್ಚರಿಕೆ ಕೊಟ್ಟಿದ್ದಕ್ಕೆ ಅವರ ವಿರುದ್ಧವೇ ಸಿಬಿಐ ವಿಚಾರಣೆ ಆರಂಭಿಸಲಾಯ್ತು. ತಮಗೆ ಬೇಕಾದ ಜೀ ಹುಜೂರ್ ಎನ್ನುವವರನ್ನೇ ಆಯಕಟ್ಟಿನ ಜಾಗದಲ್ಲಿ ಕೂರಿಸಿಕೊಂಡ ಪ್ರಫುಲ್ ಪಟೇಲ್ ಏರ್ ಇಂಡಿಯಾವನ್ನು ನಷ್ಟದ ಕೂಪಕ್ಕೆ ತಳ್ಳಿದರು. ಸಾಕಷ್ಟು ಲಾಭ ತಂದುಕೊಡುತ್ತಿದ್ದ ಮಾರ್ಗಗಳನ್ನು ಯತಿಹಾದ್ ಕಂಪನಿಗೆ ದಾಟಿಸಿದರು. ಏರ್ ಇಂಡಿಯಾ ಸೊರಗಿಹೋಯ್ತು. ಒಮ್ಮೆಯಂತೂ ತಮ್ಮ ಮಗಳು, ಅಳಿಯ ಚಂಡೀಗಢದಿಂದ ಚೆನ್ನೈಗೆ ಹೋಗುವ ಧಾವಂತದಲ್ಲಿದ್ದುದರಿಂದ ದೆಹಲಿಯಿಂದ ಕೊಯ್ಮತ್ತೂರಿಗೆ ಹೋಗಲಿದ್ದ ವಿಮಾನವನ್ನು ರದ್ದುಗೊಳಿಸಿ ಇವರಿಗಾಗಿಯೇ ಅದನ್ನು ಹಾರಾಡಿಸಿದ ಸುದ್ದಿ ಪತ್ರಿಕೆಯಲ್ಲಿ ಬಂದಿತ್ತು. ಮತ್ತೊಮ್ಮೆ ಇದೇ ಮಗಳು, ಅಳಿಯ ಮತ್ತು ಬೀಗರು ಹೋಗಬೇಕಿದ್ದ ವಿಮಾನದಲ್ಲಿ ಬಿಜಿನೆಸ್ ಕ್ಲಾಸ್ ಇರಲಿಲ್ಲವೆನ್ನುವ ಕಾರಣಕ್ಕೆ ಮಾಲ್ಡೀವ್ಸ್ಗೆ ಹೋಗಲಿದ್ದ ವಿಮಾನವನ್ನು ರದ್ದುಗೊಳಿಸಿ ಎಲ್ಲ ಯಾತ್ರಿಕರಿಗೂ ಬೇರೊಂದು ವಿಮಾನದಲ್ಲಿ ವ್ಯವಸ್ಥೆ ಮಾಡಿಸಿ, ಇವರಿಗಾಗಿಯೇ ಅದನ್ನು ಪ್ರತ್ಯೇಕವಾಗಿ ವ್ಯವಸ್ಥೆಗೊಳಿಸಿಕೊಡಲಾಯ್ತು! ಒಂದೇ ಮಾತಿನಲ್ಲಿ ಹೇಳಬೇಕೆಂದರೆ ನಾವು ಕಟ್ಟಿದ ತೆರಿಗೆ ಹಣದಲ್ಲಿ ಪ್ರಫುಲ್ ಪಟೇಲ್ ಇಡಿಯ ಏರ್ ಇಂಡಿಯಾವನ್ನು ಖಾಸಗಿ ವಿಮಾನವಾಗಿ ಬಳಸಿಕೊಳ್ಳುತ್ತಿದ್ದರು. ಇವೆಲ್ಲದರ ಬೆನ್ನಿಗಿದ್ದದ್ದು ಸ್ವತಃ ಸೋನಿಯಾ. ಇದು ಒಂದು ಹಗರಣ ಮಾತ್ರ. ಅಗೆದಷ್ಟೂ ರಾಡಿ ಈ ಕಾಂಗ್ರೆಸ್ಸಿಗರದ್ದು. ಇವರ ಹತ್ತು ವರ್ಷಗಳ ಅವಧಿಯಲ್ಲಿ ಭಾರತ ಕನಿಷ್ಠ 50 ವರ್ಷಗಳಷ್ಟು ಹಿಂದೆಹೋಯ್ತು. ಅಟಲ್ ಬಿಹಾರಿ ವಾಜಪೇಯಿ ಸುರಿಸಿದ್ದ ಬೆವರು, ಹರಿಸಿದ್ದ ರಕ್ತವನ್ನು ಈ ಪರಿವಾರ ಹತ್ತೇ ವರ್ಷಗಳಲ್ಲಿ ಮಣ್ಣುಗೂಡಿಸಿಬಿಟ್ಟಿತು.
ಕರ್ಮಸಿದ್ಧಾಂತ ಬೆನ್ನು ಬಿಡುವುದಿಲ್ಲ. ವ್ಯಕ್ತಿಗೆ ಮೋಸ ಮಾಡಿದರೆ ಅದರ ಫಲವನ್ನುಣ್ಣಲು ಮುಂದಿನ ಜನ್ಮದವರೆಗೆ ಕಾಯಬೇಕೇನೊ. ಆದರೆ ದೇಶಕ್ಕೆ ಮಾಡಿದ ದ್ರೋಹ ಅಲ್ಲೇ ಡ್ರಾ, ಅಲ್ಲೇ ಬಹುಮಾನ. ಕಾಂಗ್ರೆಸ್ ಅನುಭವಿಸುತ್ತಿರುವುದು ಇದರ ಫಲವನ್ನೇ. ನರೇಂದ್ರ ಮೋದಿ ತಮ್ಮ ಅನೇಕ ಚುನಾವಣೆ ರ್ಯಾಲಿಗಳಲ್ಲಿ ‘ಕಾಂಗ್ರೆಸ್ ಮುಕ್ತ ಭಾರತ’ದ ಕುರಿತಂತೆ ಹೇಳುತ್ತಲೇ ಬಂದಿದ್ದರು. ಈ ದೇಶದಲ್ಲಿ ಈ ಕೆಲಸ ಬಿಡಿ, ಇದರ ಆಲೋಚನೆ ಮಾಡುವುದೂ ಅಸಾಧ್ಯ ಎಂದು ಭಾವಿಸುವ ಕಾಲವದು. 2014ರ ಚುನಾವಣೆಯನ್ನು ನರೇಂದ್ರ ಮೋದಿ ಗೆದ್ದು ಕಾಂಗ್ರೆಸ್ಸನ್ನು ಹೀನಾಯ ಸ್ಥಿತಿಗಿಳಿಸಿದ ಮೇಲೆ ಇದು ಸಾಧ್ಯ ಎನಿಸಲಾರಂಭಿಸಿತು. ಅಷ್ಟೇ ಅಲ್ಲ, ಕಾಂಗ್ರೆಸ್ ಚುಕ್ಕಾಣಿ ಹಿಡಿದ ರಾಹುಲ್ ತೆಗೆದುಕೊಳ್ಳುತ್ತಿದ್ದ ನಿರ್ಣಯ, ಆಡುತ್ತಿದ್ದ ಮಾತುಗಳೆಲ್ಲವೂ ಇವರೇ ನರೇಂದ್ರ ಮೋದಿಗಿಂತ ವ್ಯವಸ್ಥಿತವಾಗಿ ಕಾಂಗ್ರೆಸ್ ಮುಕ್ತ ಭಾರತ ಮಾಡುತ್ತಾರೆ ಎಂಬ ವಿಶ್ವಾಸ ಬಂದಿತ್ತು. ಕಾಂಗ್ರೆಸ್ಸು ಅಧಿಕಾರದಲ್ಲಿದ್ದ ವೇಳೆ ಅಹ್ಮದ್ ಪಟೇಲ್ ಮನಮೋಹನರಿಗಿಂತ ಹೆಚ್ಚು ಪ್ರಭಾವಿಯಾಗಿದ್ದರು. ಅನೇಕ ಬಾರಿ ಕಾಂಗ್ರೆಸ್ಸಿಗೆ ಎದುರಾದ ಸಮಸ್ಯೆಗಳನ್ನು ಪರಿಹರಿಸಿದರು.
2008ರಲ್ಲಿ ಪರಮಾಣು ಒಪ್ಪಂದದ ವಿಚಾರದಲ್ಲಿ ವಾಮಪಂಥೀಯರು ಕೈ ಬಿಡುತ್ತಾರೆಂದು ಗೊತ್ತಾದೊಡನೆ ಸಮಾಜವಾದಿ ಪಾರ್ಟಿಯೊಡನೆ ಮೈತ್ರಿ ಮಾಡಿಕೊಂಡು ಸರ್ಕಾರ ಉಳಿಸಿದ್ದು, ತೀರಾ ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ಸರ್ಕಾರ ಮಾಡುವ ವಿಚಾರ ಬಂದಾಗ ಶಿವಸೇನೆಯೊಂದಿಗೆ ಮೈತ್ರಿ ಬೇಡವೆಂದು ಸೋನಿಯಾ ಹೇಳಿದಾಗಲೂ ಮಹಾರಾಷ್ಟ್ರದಲ್ಲಿ ಬಿಜೆಪಿಗೆ ಗತಿ ಕಾಣಿಸಬೇಕೆಂಬ ಹಠಕ್ಕೆ ನಿಂತು ಮೈತ್ರಿ ಸಂಘಟಿಸಿದವರು ಅಹ್ಮದ್ ಪಟೇಲ್. ಸಚಿನ್ ಪೈಲಟ್ರ ಆಂತರಿಕ ಬೇಗುದಿ ಶಮನಗೊಳಿಸಿದ್ದಲ್ಲದೆ ಕಾಂಗ್ರೆಸ್ನ ಹಿರಿಯರ ಗುಂಪು ಜಿ-23 2019ರ ಚುನಾವಣೆ ನಂತರ ಚಡಪಡಿಸುತ್ತಿದ್ದಾಗ ಅದನ್ನು ಶಮನಗೊಳಿಸಿದ್ದು ಈ ಪಟೇಲರೇ. ರಾಹುಲ್ ಮತ್ತು ಪ್ರಿಯಾಂಕಾರೊಂದಿಗೆ ಘನಿಷ್ಠ ಸಂಬಂಧ ಹೊಂದಿಲ್ಲದೇ ಹೋದರೂ ಸೋನಿಯಾರಿಗೆ ಮಾತ್ರ ಬಲುನಿಷ್ಠ. ಸೋನಿಯಾ ವಿದೇಶಿ ಎಂಬ ಗಲಾಟೆ ಜೋರಾಗಿದ್ದಾಗ ಶರದ್ ಪವಾರ್, ಸಂಗ್ಮಾರಂಥವರೂ ಇದಕ್ಕೆ ತುಪ್ಪ ಸುರಿಯುತ್ತಿದ್ದಾಗ, ಮುಲಾಯಂ ಸಿಂಗರನ್ನು ಹಿಡಿದು ‘ದೇಶದ ಸೊಸೆ’ ಎಂಬ ಹೇಳಿಕೆ ಕೊಡಿಸಿದರು. ಅಹ್ಮದ್ ಪಟೇಲರನ್ನು ಕಳೆದುಕೊಂಡಿದ್ದು ಕಾಂಗ್ರೆಸ್ ಪಾಳಯಕ್ಕೆ ಎಷ್ಟು ನಷ್ಟವೆಂದರೆ ಅದರ ಫಲ ಈಗ ಕಣ್ಣಿಗೆ ರಾಚುತ್ತಿದೆ.
ರಾಜಸ್ಥಾನ, ಛತ್ತೀಸ್ಗಢದಲ್ಲಿ ಬಿಟ್ಟರೆ ಕಾಂಗ್ರೆಸ್ಸು ಬಲವಾಗಿದ್ದುದು ಪಂಜಾಬ್ನಲ್ಲೇ. ಆದರೀಗ ಅಲ್ಲೂ ಸ್ಥಿತಿ ನೆಟ್ಟಗಿಲ್ಲ. ಕಳೆದ ಕೆಲವಾರು ದಿನಗಳಿಂದ ಆಂತರಿಕ ಬೇಗುದಿಗೆ ಪಕ್ಷ ಬೇಯುತ್ತಿದೆ. ಕ್ಯಾಪ್ಟನ್ ಅಮರೀಂದರ್ ಸಿಂಗ್ರನ್ನು ಅಧಿಕಾರದಿಂದ ಕೆಳಗಿಳಿಸಿ, ನವಜೋತ್ ಸಿಂಗ್ ಸಿಧು ನೇತೃತ್ವದಲ್ಲಿ ಹೊಸ ಮುಖ್ಯಮಂತ್ರಿಗೆ ಪಟ್ಟಕಟ್ಟಿ, ಚುನಾವಣೆ ಎದುರಿಸುವ ನಿರ್ಧಾರ ಆರಂಭದಲ್ಲಿ ಶಕ್ತಿಶಾಲಿಯಾದದ್ದು ಎಂದೇ ಎಲ್ಲರಿಗೂ ಎನಿಸಿತು. ಕರ್ನಾಟಕದಲ್ಲಿ ಬಸವರಾಜ ಬೊಮ್ಮಾಯಿಯವರ ಕೈಗೆ ಅಧಿಕಾರ ಕೊಟ್ಟ ಬಿಜೆಪಿಯ ಹಾದಿಯನ್ನು ಸವೆಸುವ ಧಾವಂತದಲ್ಲಿದ್ದರು ರಾಹುಲ್ ಗಾಂಧಿ. ಆದರೆ ಹಾಗಾಗಲಿಲ್ಲ ಅಷ್ಟೆ. ಕಾಂಗ್ರೆಸ್ಸು ಹೇಗೆ ಮುಗ್ಗರಿಸಿ ಬಿತ್ತೆಂದರೆ ತನ್ನ ಸ್ವಾರ್ಥ ಈಡೇರಲಿಲ್ಲವೆಂಬ ಕಾರಣಕ್ಕೆ ಸಿಧು ರಾಜೀನಾಮೆ ನೀಡಿದರು. ಮುಖ್ಯಮಂತ್ರಿ ಚನ್ನಿ ಮತ್ತು ಸಿಧು ಇವರೀರ್ವರು ರಾಹುಲ್ ಮತ್ತು ಪ್ರಿಯಾಂಕಾ ಪಾಳಯದಲ್ಲಿ ಹಂಚಿ ಹೋದವರು ಎಂಬ ಸುದ್ದಿ ಹಬ್ಬಲಾರಂಭಿಸಿತು. ಅಲ್ಲಿಗೆ ಜಗಳ ಪಂಜಾಬಿನ ಕಾಂಗ್ರೆಸ್ನಲ್ಲಲ್ಲ, ಸ್ವತಃ ಪರಿವಾರದಲ್ಲೇ ಎಂದು ಸಾಬೀತಾಯ್ತು! ಹಾಗಂತ ರಾಜಸ್ಥಾನದಲ್ಲೂ ಗಲಾಟೆ ಇಲ್ಲವೆನ್ನುವಂತಿಲ್ಲ.
ಅತ್ತ ಛತ್ತೀಸ್ಗಢವೂ ಬಿಜೆಪಿಯಿಂದ ಅಧಿಕಾರ ಕಸಿದಮೇಲೂ ನಿಲ್ಲದೇ ಉರಿಯುತ್ತಿದೆ. ಇವನ್ನು ಸಂಭಾಳಿಸುವ ತಾಕತ್ತು ಸದ್ಯದಮಟ್ಟಿಗೆ ಯಾರಲ್ಲೂ ಇಲ್ಲ. ಕಾಂಗ್ರೆಸ್ಸಿನ ಹಿರಿಯರ ತಂಡ ಜಿ-23ರ ಪ್ರಮುಖರಾದ ಕಪಿಲ್ ಸಿಬಲ್ ಬಹಿರಂಗವಾಗಿಯೇ ನಾಯಕತ್ವದ ವಿರುದ್ಧ ಸಿಡಿದುಬಿದ್ದಿದ್ದಾರೆ. ಸ್ವತಃ ನಿಷ್ಠರೆನಿಸಿಕೊಂಡ ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಕಪಿಲ್ ಸಿಬಲ್ ಬೆಂಬಲಕ್ಕೆ ನಿಂತಿದ್ದಾರೆ. ಅಚ್ಚರಿಯೇನು ಗೊತ್ತೇ? ಬಿಜೆಪಿ ದೂರದಲ್ಲಿ ನಿಂತು ಶಾಂತವಾಗಿ ನೋಡುತ್ತ ಅನಾಯಾಸವಾಗಿ ಗೆಲ್ಲಬಹುದಾದ 2024ರ ಚುನಾವಣೆಯತ್ತ ದೃಷ್ಟಿ ನೆಟ್ಟು ಕುಂತಿದೆ. ಏಕೆಂದರೆ ಬುದ್ಧಿವಾದ ಹೇಳಹೊರಟ ಹಿರಿಯ ಕಾಂಗ್ರೆಸ್ ನಾಯಕರ ವಿರುದ್ಧ ತಿರುಗಿ ಬಿದ್ದಿರುವುದು ಮತ್ಯಾರೂ ಅಲ್ಲ, ಸ್ವತಃ ಕಾಂಗ್ರೆಸ್ಸಿನ ಕಾರ್ಯಕರ್ತರೇ. ಕೆಲಸಕ್ಕೆ ಬಾರದವರನ್ನು ಸೋನಿಯಾ ಮಂತ್ರಿ ಮಾಡಿದಾಗ ಇವರೆಲ್ಲರೂ ಸುಮ್ಮನಿದ್ದರು, ಈಗ ಕಷ್ಟಕಾಲದಲ್ಲಿ ತಿರುಗಿ ಬೀಳುತ್ತಿದ್ದಾರೆ ಎಂದು ಕಾಂಗ್ರೆಸ್ಸಿನ ಯುವನಾಯಕರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಒಂದು ತಂಡವಂತೂ ಕಪಿಲ್ ಸಿಬಲ್ ಮನೆಯ ಹೊರಗೆ ಘೇರಾವ್ ಹಾಕಿ ಅವಾಚ್ಯ ಶಬ್ದಗಳಿಂದಲೂ ನಿಂದಿಸಿಬಿಟ್ಟಿದ್ದಾರೆ. ಸದ್ಯಕ್ಕೆ ಉರಿ ಶಮನವಾಗುವಂತೆ ಕಾಣುತ್ತಿಲ್ಲ. ಆರಂಭದಲ್ಲೇ ಹೇಳಿದೆನಲ್ಲ, ವ್ಯಕ್ತಿಗೆ ಮಾಡಿದ ದ್ರೋಹವಾದರೆ ಫಲಿತಾಂಶಕ್ಕಾಗಿ ಮುಂದಿನ ಜನ್ಮದವರೆಗೂ ಕಾಯಬಹುದು. ದೇಶಕ್ಕೆ ಮಾಡಿದ ದ್ರೋಹ ಸುಲಭಕ್ಕೆ ಜೀರ್ಣವಾಗುವಂಥದ್ದಲ್ಲ. ಕಾಂಗ್ರೆಸ್ಸು ಈಗ ಅದನ್ನು ಅನುಭವಿಸುತ್ತಿದೆ!
ಖಾಸಗಿ ವಾಹಿನಿಯೊಂದರ ನಿರೂಪಕಿ ರಾಹುಲ್ ಕುರಿತಂತೆ ಅಸಂವೈಧಾನಿಕ ಶಬ್ದ ಬಳಸಿದರು ಎಂಬ ಕಾರಣಕ್ಕೇ ಛತ್ತೀಸ್ಗಢದ ಮುಖ್ಯಮಂತ್ರಿ ಭೂಪೇಶ್ ಬಘೇಲ್ ನೀಡಿರುವ ಎಚ್ಚರಿಕೆ ನಿಜಕ್ಕೂ ಭಯಾನಕವಾದದ್ದು. ‘ರಾಹುಲ್ ವಿರುದ್ಧ ಒಂದು ಬೈಗುಳವನ್ನೂ ಸಹಿಸಲಾರೆವು’ ಎಂದು ಉನ್ನತ ಪದವಿಯಲ್ಲಿರುವ ಒಬ್ಬ ವ್ಯಕ್ತಿ ಹೇಳಿರುವ ಮಾತು ಸದ್ಯದ ಕಾಂಗ್ರೆಸ್ನ ಮನಸ್ಥಿತಿಯನ್ನು ತೋರಿಸುತ್ತದೆ. ಗೂಂಡಾವರ್ತನೆಯಿಂದ ಬೆದರಿಸಿ ಅಧಿಕಾರ ಪಡೆದುಕೊಳ್ಳುವ ಕಾಲ ಹಳೆಯದಾಯ್ತು. ಜನರ ಪ್ರೀತಿಯನ್ನು ಗಳಿಸಿಕೊಳ್ಳುವುದನ್ನು ಇನ್ನಾದರೂ ಈ ಮಂದಿ ಕಲಿಯಬೇಕಿದೆ. ಫೇಕ್ ಫೇಸ್ಬುಕ್ ಐಡಿಗಳನ್ನು ಸೃಷ್ಟಿಸಿ ಮನಸೋ ಇಚ್ಛೆ ಬೈದರೆ ಜನ ಸುಮ್ಮನಾಗುತ್ತಾರೆಂದು ಭಾವಿಸುವುದು ಖಂಡಿತ ತಪು್ಪ. ಏಕೆಂದರೆ ಇವರ ಈ ಸಂಸ್ಕೃತಿಯನ್ನು ಹತ್ತಿರದಿಂದ ಗಮನಿಸುವ ಜನ ಸರಿಯಾದ ಸಮಯಕ್ಕೆ ಸರಿಯಾದ ನಿರ್ಣಯ ಕೈಗೊಳ್ಳುತ್ತಾರೆ.
ಅಂದಹಾಗೆ, ಸದ್ಯಕ್ಕೆ ಉತ್ತರ ಪ್ರದೇಶವೇ ಮೊದಲಾದ ರಾಜ್ಯಗಳಲ್ಲಿ ಚುನಾವಣೆ ನಡೆಯಲಿವೆ. ಇನ್ನೊಂದು ವರ್ಷ ಕಳೆದರೆ ಕರ್ನಾಟಕದಲ್ಲೂ. ತಮ್ಮ ತಾವು ತಿದ್ದುಕೊಂಡು ಸಭ್ಯತೆಯ ಚೌಕಟ್ಟಿನಲ್ಲಿ ನಡೆದರೆ ಮತ್ತೆ ಭವಿಷ್ಯವನ್ನು ರೂಪಿಸಿಕೊಳ್ಳಬಹುದೇನೋ. ಇಲ್ಲವಾದರೆ ಪರಿವಾರದ ಕಿತ್ತಾಟ ಕಾಂಗ್ರೆಸ್ಸಿನ ಚರಮಗೀತೆಯಾದೀತು!
(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)