

ಉಡುಪಿಯ ಉದ್ಯಾವರದಿಂದ ಅರ್ಧ ಕಿ.ಮೀ. ಪಯಣಿಸಿದರೆ ಅನಂತನಗರದಲ್ಲಿ ‘ದಾಂತೀಸ್ ನೆಸ್ಟ್’ ಎಂಬ ಮನೆ ಇದೆ. ಅದರ ನಿವಾಸಿ ಜ್ಯೂಲಿಯನ್ ದಾಂತಿ ಪಿತ್ರಾರ್ಜಿತವಾದ ಭೂಮಿಯಲ್ಲಿ ಮುತ್ತಜ್ಜನ ಕಾಲದಿಂದಲೂ ಕೃಷಿಯನ್ನೇ ಮುನ್ನಡೆಸುತ್ತಾ ಬಂದಿದ್ದಾರೆ. ಅವರದು ಕೃಷಿ ಕುಟುಂಬವಾದ್ದರಿಂದ ಮೊದಲಿನಿಂದಲೂ ಕೃಷಿಯಲ್ಲಿ ಆಸಕ್ತಿ.
ಬಿ.ಕಾಂ. ಎಲ್.ಎಲ್.ಬಿ. ಪದವಿ ಹೊಂದಿದ್ದರೂ ತೀವ್ರ ಆಸಕ್ತಿ ಇದ್ದಿದ್ದು ಕೃಷಿಯಲ್ಲಿ! ಮಣಿಪಾಲದ ಸಂಸ್ಥೆಯೊಂದರಲ್ಲಿ ಸುಮಾರು 25 ವರ್ಷ ದುಡಿದು ನಂತರ ಸ್ವಯಂ ನಿವೃತ್ತಿ ಪಡೆದು ಸಂಪೂರ್ಣ ಕೃಷಿಗೆ ತೊಡಗಿಕೊಂಡರು. ತಮ್ಮ ಮನೆಯ ಮುಂಭಾಗದ 4 ಎಕರೆ ಭೂಮಿಯಲ್ಲಿ ಭತ್ತ ಬೆಳೆಸಿದ್ದಾರೆ. ಇಂದಿನ ದಿನಗಳಲ್ಲೂ ಎಲ್ಲರೂ ಅಚ್ಚರಿ ಪಡುವ ರೀತಿಯಲ್ಲಿ ಕೋಣದ ನೆರವಿನಿಂದಲೇ ಭೂಮಿಯನ್ನು ಉತ್ತು ಹದ ಮಾಡುವುದು ಗಮನಾರ್ಹ.
ಕಜೆಜಯಾ, ಎಂ.ಓ4, ಎಂ.ಓ2, ಜ್ಯೋತಿ ಮುಂತಾದ ತಳಿಗಳನ್ನು ನಾಟಿ ಮಾಡಿದ್ದಾರೆ. ಜ್ಯೂಲಿಯನ್ ತಮ್ಮ ನಿವಾಸದ ಎದುರು ಇರುವ ತೋಟದಲ್ಲಿ ಸಹಜ ಕೃಷಿ ಮಾಡುತ್ತಿದ್ದಾರೆ. ತೆಂಗಿಗೆ ಕಾಳುಮೆಣಸು ಬಳ್ಳಿ ಹಾಯಿಸಿದ್ದಾರೆ. ಈ ತೋಟದಲ್ಲಿ ಬಾಳೆ, ಮಾವು, ಗೇರು, ಹುಣಸೆ ಮರಗಳಿದ್ದು, ಅವುಗಳಿಗೆ ಹಟ್ಟಿಗೊಬ್ಬರ ಪೂರೈಸುತ್ತಾರೆ. ಬಿದ್ದ ಹೆಗ್ಗೆ, ತರಗೆಲೆ, ಕಸಕಡ್ಡಿಯನ್ನು ಹಾಗೆಯೇ ಬಿಡುತ್ತಾರೆ.
ತತ್ಪರಿಣಾಮವಾಗಿ ಅವು ಕೊಳೆತು ಗಿಡ ಮರಗಳು ಪೊಗದಸ್ತಾಗಿ ಬೆಳೆಯಲು ಕಾರಣವಾಗಿವೆ. ಇವುಗಳ ಜತೆ ಬೆಂಡೆ, ಬಸಳೆ, ಹರಿವೆ, ಟೊಮ್ಯಾಟೋ ಮುಂತಾದ ತರಕಾರಿಗಳನ್ನು ಬೆಳೆಸುತ್ತಿದ್ದಾರೆ. ಸುಮಾರು 5 ರಿಂದ 8 ತಾಳಿಬೊಂಡದ ಮರಗಳಿವೆ. ಅವುಗಳಲ್ಲಿ ಗೊಂಚಲು ಗೊಂಚಲು ತಾಳಿಬೊಂಡ ಬಾಯಲ್ಲಿ ನೀರೂರಿಸುತ್ತವೆ.
ಸುಮಾರು 5 ದಶಕಗಳಿಂದ ತೆನೆಹಬ್ಬ ಅರ್ಥಾತ್ ಕನ್ಯಾ ಮಾರಿಯಮ್ಮನ ಜನ್ಮದಿನದಂದು ತಮ್ಮಲ್ಲಿ ಬೆಳೆದ ತೆನೆಯನ್ನು ಇಗರ್ಜಿ ಮತ್ತು ದೇವಾಲಯಕ್ಕೆ ವಿತರಿಸುತ್ತಾರೆ. ಅವರ ಕೃಷಿ ಗದ್ದೆಯಲ್ಲಿಯೇ ಸಾಂಸ್ಕೃತಿಕ ವೈಭವ, ಕೆಸರುಗದ್ದೆಯ ಓಟ ಇತ್ಯಾದಿಗಳನ್ನು ಆಯೋಜಿಸುತ್ತಾರೆ. ಇವೆಲ್ಲದರ ಜತೆ ನಾಲ್ಕು ದನಗಳನ್ನು ಸಾಕಿದ್ದು ಹೈನುಗಾರಿಕೆಯನ್ನೂ ನಿರ್ವಹಿಸುತ್ತಿದ್ದಾರೆ. ದನದ ಗೊಬ್ಬರ, ಹಟ್ಟಿಗೊಬ್ಬರ ಸ್ಲರಿಯನ್ನು ತೋಟಕ್ಕೂ ಮತ್ತು ಗದ್ದೆಗೂ ಪೂರೈಸುತ್ತಾರೆ.
ಹಾಲನ್ನು ಮನೆಯ ಉಪಯೋಗಕ್ಕೆ ಮಾತ್ರವಲ್ಲದೆ, ಉಳಿದಿದ್ದನ್ನು ಡೇರಿಗೆ ಕೊಡುತ್ತಾರೆ. ಕೋಳಿ ಸಾಕಣೆಯನ್ನೂ ಮಾಡುತ್ತಿದ್ದು ಅವರ ಬಳಿ ಸ್ಥಳೀಯ ಜಾತೀಯ ಕೋಳಿಗಳಿವೆ. ಮೊಟ್ಟೆಗಳನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಈ ಕೃಷಿ ಕಾಯಕಕ್ಕೆ ತಮ್ಮ ಕೂಡು ಕುಟುಂಬವೇ ಪ್ರೇರಣೆ ಎನ್ನುತ್ತಾರೆ ಜ್ಯೂಲಿಯನ್. ಇತ್ತೀಚೆಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ಇವರಿಗೆ ‘ಪ್ರಗತಿಪರ ರೈತ’ ಪ್ರಶಸ್ತಿ ನೀಡಿ ಸನ್ಮಾನಿಸಿದ್ದಾರೆ. ಸಂರ್ಪಸಿ 9964024082
| ವಿ. ಬಾಲಕೃಷ್ಣ ಶಿರ್ವ