

ರಾಜ್ಯದ ರೈತರ ಪಾಲಿಗೆ ಈ ವರ್ಷದ ಮುಂಗಾರು ತುಸು ಆಶಾದಾಯಕವಾಗಿತ್ತು. ಅಗತ್ಯಕ್ಕೆ ತಕ್ಕಂತೆ ಮಳೆ ಸುರಿದಿದ್ದರಿಂದ ನಿಗದಿತ ಗುರಿಗಿಂತ ಅಧಿಕ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿತ್ತು. ಇದೀಗ ಮುಂಗಾರಿನಲ್ಲಿ ಬಿತ್ತನೆಯಾಗಿದ್ದ ಭತ್ತ, ರಾಗಿ, ಜೋಳ ಕಟಾವಿಗೆ ಬಂದಿದ್ದು, ಇನ್ನೇನು ಕೆಲದಿನಗಳಲ್ಲೇ ಒಕ್ಕಣೆ ಕಾರ್ಯ ಆರಂಭವಾಗಬೇಕಿದೆ. ಅಕ್ಟೋಬರ್ ತಿಂಗಳ ದಾಖಲೆ ಮಳೆಯಿಂದಾಗಿ ಫಸಲು ಕೈಸೇರುವ ಹಂತದಲ್ಲಿ ರೈತರು ಕಂಗಾಲಾಗಿದ್ದಾರೆ. ಆದರೆ ಬಿತ್ತನೆ ಚಟುವಟಿಕೆಗಳಿಗೆ ಹಿಂಗಾರು ಮಳೆ ಪೂರಕವಾಗಿದ್ದು, ಬಿರುಸಿನಿಂದ ಕೃಷಿ ಚಟುವಟಿಕೆ ನಡೆದಿದೆ.
ಗುರಿಗಿಂತ ಅಧಿಕ ಸಾಧನೆ
ರಾಜ್ಯದಲ್ಲಿ ಮುಂಗಾರು ಪೂರ್ವ ಹಾಗೂ ಮುಂಗಾರು ಮಳೆ ಉತ್ತಮವಾಗಿದ್ದರಿಂದ ನಿಗದಿಗಿಂತ ಅಧಿಕ ಪ್ರಮಾಣದಲ್ಲಿ ಬಿತ್ತನೆಯಾಗಿತ್ತು. ಸರ್ಕಾರದಿಂದ ಒಟ್ಟು 77 ಲಕ್ಷ ಹೆಕ್ಟೇರ್ ಬಿತ್ತನೆ ಗುರಿ ಹೊಂದಿತ್ತು. ಆದರೆ, 78.20 ಲಕ್ಷ ಹೆಕ್ಟೇರ್ ಬಿತ್ತನೆಯಾಗುವ ಮೂಲಕ ಶೇ.102 ಸಾಧನೆಯಾಗಿತ್ತು.
ಹಿಂಗಾರು ಬಿತ್ತನೆ ಚುರುಕು
ಹಿಂಗಾರು ಮಳೆ ನಿರೀಕ್ಷೆಗಿಂತ ಅಧಿಕವಾಗಿ ಸುರಿಯುತ್ತಿದೆ. ಈಗಾಗಲೆ ಶೇ.15 ಹಿಂಗಾರು ಬಿತ್ತನೆಯೂ ಪೂರ್ಣಗೊಂಡಿದೆ. ರಾಜ್ಯದಲ್ಲಿ ವಾರ್ಷಿಕ ಹಿಂಗಾರು ಬಿತ್ತನೆ ಗುರಿಯನ್ನು 28 ಲಕ್ಷ ಹೆಕ್ಟೇರ್ ಎಂದು ಅಂದಾಜು ಮಾಡಲಾಗಿದೆ. ದಕ್ಷಿಣ ಒಳನಾಡಿನ ಚಾಮರಾಜನಗರ, ತುಮಕೂರು, ಮಂಡ್ಯ, ಮೈಸೂರು, ಕರಾವಳಿ ತೀರ ಪ್ರದೇಶಗಳಲ್ಲಿ ಬಿತ್ತನೆ ಚಟುವಟಿಕೆ ಆರಂಭವಾಗಿದೆ. ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಮುಂಗಾರು ಬೆಳೆಗಳ ಕಟಾವು ಮತ್ತು ಒಕ್ಕಲು ಕಾರ್ಯ ಚುರುಕಾಗಿ ನಡೆಯುತ್ತಿದ್ದು, ತಿಂಗಳಾಂತ್ಯಕ್ಕೆ ಬಿತ್ತನೆ ಚಟುವಟಿಕೆಗೆ ವೇಗ ಸಿಗಲಿದೆ. ಹಿಂಗಾರು ಬಿತ್ತನೆ ಸರ್ಕಾರ ನಿಗದಿ ಮಾಡಿದ್ದಕ್ಕಿಂತ ಸುಮಾರು 5 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹೆಚ್ಚಳವಾಗುವ ನಿರೀಕ್ಷೆಯಿದೆ ಎಂದು ಕೃಷಿ ತಜ್ಞರು ಮಾಹಿತಿ ನೀಡಿದ್ದಾರೆ.
ದಿಢೀರ್ ಮಳೆಯಿಂದ ಸಂಕಷ್ಟ
ಮುಂಗಾರು ಆರಂಭದಲ್ಲಿ ಅಬ್ಬರಿಸಿತ್ತಾದರೂ ಆ ಬಳಿಕ ಎಲ್ಲೂ ಹಾನಿ ಉಂಟುಮಾಡುವಂಥ ಮಳೆಯಾಗಲಿಲ್ಲ. ಆದರೆ ಹಿಂಗಾರು ಆರಂಭವಾಗುತ್ತಿದ್ದಂತೆ ಧಾರಾಕಾರ ಮಳೆ ಸುರಿಯುತ್ತಿದೆ. ನಿರಂತರ ಮಳೆಯಿಂದ 2.74 ಲಕ್ಷ ಹೆಕ್ಟೇರ್ ಕೃಷಿ ಮತ್ತು ತೋಟಗಾರಿಕೆ ಬೆಳೆ ನಾಶವಾಗಿವೆ. ಜತೆಗೆ ಬಹುತೇಕ ಕಡೆಗಳಲ್ಲಿ ಮುಂಗಾರಿನಲ್ಲಿ ಬಿತ್ತನೆಯಾಗಿದ್ದ ಬೆಳೆಗಳು ಕಟಾವಿನ ಹಂತಕ್ಕೆ ಬಂದಿದ್ದು, ಮಳೆ ಹೀಗೆ ಮುಂದುವರಿದರೆ ಕೈಗೆ ಬಂದ ತುತ್ತು ಬಾಯಿಗಿಲ್ಲ ಎಂಬಂತಾಗುತ್ತದೆ. ಅದರಲ್ಲೂ ಈರುಳ್ಳಿ, ಮೆಕ್ಕೆಜೋಳ, ಹತ್ತಿ, ನೆಲಗಡಲೆ, ರಾಗಿ ಬೆಳೆದಿರುವ ರೈತರಿಗೆ ಆತಂಕ ಕಾಡುತ್ತಿದೆ. ಬಿಳಿಜೋಳ ಮಳೆಗೆ ಸಿಕ್ಕು ಕಪ್ಪಾಗುತ್ತಿದ್ದು, ಬೆಲೆ ಕಸಿತದ ಭೀತಿ ಎದುರಾಗಿದೆ. ಕೆಲವೆಡೆ ಭತ್ತ ಕಟಾವಿಗೆ ಬಂದಿದ್ದರೂ, ಕೊಯ್ಲು ಮಾಡಲು ಸಾಧ್ಯವಾಗುತ್ತಿಲ್ಲ. ಇನ್ನು ದ್ವಿದಳ ಧಾನ್ಯ ಬೆಳೆಗಳು, ಕಡಲೆ, ಅಡಕೆ, ಕಾಳುಮೆಣಸು ಸೇರಿ ಹಲವು ಬೆಳೆಗಳು ರೋಗ ಬಾಧೆಯಿಂದ ನಾಶವಾಗಿವೆ.
ಜಿಲ್ಲಾವಾರು ಕೃಷಿ ದರ್ಶನ
ಎಲ್ಲೆಲ್ಲಿ ಎಷ್ಟೆಷ್ಟು ನಷ್ಟ?
ಬೀದರ್ 1.6 ಲಕ್ಷ ಹೆಕ್ಟೇರ್, ತುಮಕೂರು 50 ಸಾವಿರ, ವಿಜಯಪುರ 40 ಸಾವಿರ, ಶಿವಮೊಗ್ಗ 6 ಸಾವಿರ, ಯಾದಗಿರಿ 3 ಸಾವಿರ, ಉತ್ತರ ಕನ್ನಡ 2,700, ಹಾವೇರಿ 2 ಸಾವಿರ, ಬೆಳಗಾವಿ 2,550, ದಾವಣಗೆರೆ 2,162, ದಕ್ಷಿಣ ಕನ್ನಡ 1,500, ಬಳ್ಳಾರಿ 338, ಚಿತ್ರದುರ್ಗ 310 ಹಾಗೂ ಕೊಪ್ಪಳ 202 ಹೆಕ್ಟೇರ್ ಬೆಳೆ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಇನ್ನು ಕೆಲವು ಜಿಲ್ಲೆಗಳಲ್ಲಿ ಇನ್ನಷ್ಟೇ ನಷ್ಟದ ಸಮಿಕ್ಷೆ ಕಾರ್ಯ ಆರಂಭವಾಗಬೇಕಿದ್ದು, ಪ್ರಮಾಣ ಇನ್ನೂ ಅಧಿಕವಾಗುವ ಮುನ್ಸೂಚನೆಯಿದೆ.
ಮೈಸೂರು ಭಾಗ ಆಶಾದಾಯಕ
ಹಾಸನ ಜಿಲ್ಲೆಯಲ್ಲಿ ವಿವಿಧ ಬೆಳೆಗಳ ಬಿತ್ತನೆ ಪೂರ್ಣಗೊಂಡಿದ್ದು, ಶೇ.111 ಸಾಧನೆಯಾಗಿದೆ. ಸಕಲೇಶಪುರ, ಅರಕಲಗೂಡು ತಾಲೂಕುಗಳಲ್ಲಿ ಕಾಫಿ, ಮೆಣಸು, ಹೊಗೆಸೊಪ್ಪು, ಬಾಳೆ ಬೆಳೆಗಳಿಗೆ ಹಿಂಗಾರು ಮಳೆ ಕಂಟಕವಾಗಿದೆ. ಮಂಡ್ಯ ಜಿಲ್ಲೆಯ ಕೆಲವೆಡೆ ಟೊಮಾಟೋ ಸೇರಿ ತರಕಾರಿ ಬೆಳೆಗೆ ನೀರು ತುಂಬಿಕೊಂಡಿದೆ. ಭತ್ತ ಕಾಳುಕಟ್ಟುವ ಸಮಯವಾದ್ದರಿಂದ ಸಮಸ್ಯೆಯಾಗುತ್ತಿದೆ. ಮೈಸೂರು ಜಿಲ್ಲೆಯಲ್ಲಿ ಕೃಷಿ ಚಟುವಟಿಕೆ ಆಶಾದಾಯಕವಾಗಿದೆ. ಶೇ.90ಕ್ಕಿಂತ ಅಧಿಕ ಬಿತ್ತನೆಯಾಗಿದೆ. ಭತ್ತ, ರಾಗಿ, ಮುಸುಕಿನ ಜೋಳ, ಹತ್ತಿ, ಹೊಗೆಸೊಪ್ಪು ಹೆಚ್ಚಿನ ಪ್ರಮಾಣದಲ್ಲಿ ಬಿತ್ತನೆ ಮಾಡಲಾಗಿದ್ದು, ಕೊಡಗು ಜಿಲ್ಲೆಯ 20,000 ಹೆಕ್ಟೇರ್ನಲ್ಲಿ ಭತ್ತ, 2,000 ಹೆಕ್ಟೇರ್ನಲ್ಲಿ ಮುಸುಕಿನ ಜೋಳ ಬೆಳೆಯಲಾಗಿದೆ.