

ಮುಸಲ್ಮಾನರಲ್ಲದ ರಾಷ್ಟ್ರವೊಂದನ್ನು ಮುಸ್ಲಿಂ ರಾಷ್ಟ್ರದ ಮುಖ್ಯಸ್ಥರು ಬೆಂಬಲಿಸಿದರೆ ಆ ಪ್ರಮುಖರು ಮುಸಲ್ಮಾನರಾಗಿಯೇ ಉಳಿಯುವರೇ? ಆ ರಾಷ್ಟ್ರವನ್ನು ಇಸ್ಲಾಮಿನ ದೃಷ್ಟಿಯಿಂದ ಗೌರವಿಸಲಾಗುವುದೇ? ಇಸ್ಲಾಂ ರಾಷ್ಟ್ರದ ಮೇಲೆ ಆಕ್ರಮಣ ಮಾಡಿರುವ ಸೈನ್ಯವೊಂದರ ಸೇನೆಯಲ್ಲಿರುವ ಮುಸ್ಲಿಂ ಸೈನಿಕರು ತಮ್ಮದೇ ಜನರ ವಿರುದ್ಧ ಮಾಡುವ ಶೋಷಣೆಯನ್ನು ಇಸ್ಲಾಮಿಕ್ ಎಂದು ಕರೆಯಬಹುದೇ? ಈ ಸೈನಿಕರದ್ದು ಧರ್ಮಯುದ್ಧವೋ ಅಥವಾ ಇವರನ್ನು ತಡೆಯಲು ಪ್ರಯತ್ನಿಸುತ್ತಿರುವ ಸ್ಥಳೀಯ ಮುಸಲ್ಮಾನರದ್ದು ನಿಜವಾದ ಧರ್ಮಯುದ್ಧವೋ? ಇಸ್ಲಾಮಿಕ್ ಖಲೀಫಾನನ್ನು ಒಪ್ಪದೇ ಪಶ್ಚಿಮದ ಮಾದರಿಯ ಸರ್ಕಾರದ ಅನುಯಾಯಿಯಾಗಿರುವ ಮುಸಲ್ಮಾನ ಮುಸಲ್ಮಾನನಾಗಿಯೇ ಇರುವನೇ? ಪಶ್ಚಿಮದ ಮಾದರಿಯ ಜೀವನ ಪದ್ಧತಿ, ಉದಾರವಾದ, ಸಾಮಾಜಿಕ ಚಿಂತನೆಗಳನ್ನು ತನ್ನದಾಗಿಸಿಕೊಂಡಿರುವ ವ್ಯಕ್ತಿಯನ್ನು ಮುಸಲ್ಮಾನ ಎಂದು ಒಪ್ಪಿಕೊಳ್ಳಬಹುದೇ? ಈ ಪ್ರಶ್ನೆಗಳು ಇಂದಿನದ್ದಲ್ಲ. ಹತ್ತಾರು ವರ್ಷಗಳಿಂದಲೂ ಸಮಾಜವನ್ನು ಕಾಡುತ್ತಲೇ ಬಂದಿದೆ. ಈಗ ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಳ್ಳುವುದರೊಂದಿಗೆ ಈ ಪ್ರಶ್ನೆಗಳು ಮತ್ತೆ ಚರ್ಚೆಗೆ ಬರುತ್ತಿವೆ. ಏಕೆಂದರೆ ನಿಜವಾದ ಕಟ್ಟರತೆ ಯಾರದ್ದೆಂಬುದು ಮುಸಲ್ಮಾನರಲ್ಲೇ ಗೊಂದಲದ ಗೂಡು. ಅಲ್ಲವೇ ಮತ್ತೆ? ಹೆಣ್ಣುಮಕ್ಕಳು ಕಡ್ಡಾಯವಾಗಿ ಬುರ್ಖಾ ಧರಿಸಬೇಕು, ಮನೆಯಿಂದ ಹೊರಬರುವಾಗ ಪುರುಷನೊಬ್ಬ ಜೊತೆಗಿರಲೇಬೇಕು, ಕೆಲಸಕ್ಕೆ ಹೋಗಲೇಬಾರದು ಎನ್ನುವ ಕಟ್ಟರ್ಪಂಥಿ ತಾಲಿಬಾನ್ಗಳನ್ನು ಭಾರತದ ಸ್ವತಂತ್ರ ವಾತಾವರಣದಲ್ಲಿದ್ದು ಟಿವಿ ಡಿಬೇಟ್ಗಳಲ್ಲಿ ಕುಳಿತುಕೊಂಡು ಹೆಣ್ಣುಮಕ್ಕಳು ಮುಕ್ತವಾಗಿ ಸಮರ್ಥಿಸುತ್ತಾರಲ್ಲ, ಹೇಗೆ ಸಾಧ್ಯ?
ತಾಲಿಬಾನಿಗಳ ವಂಶಜರು ಭಾರತದಲ್ಲೇನಾದರೂ ಅಧಿಕಾರ ಸ್ಥಾಪಿಸಿದರೆ ಈ ಸಮರ್ಥಕರು ಈ ರೀತಿ ಮುಕ್ತವಾಗಿ ಸಂಚರಿಸುವುದು ಸಾಧ್ಯವೇ? ಈ ಪ್ರಶ್ನೆ ಕೇಳಿಕೊಂಡಾಗಲೇ ನಮಗೆ ಸಮಸ್ಯೆಯ ನಿಜವಾದ ಆಳ ಅರ್ಥವಾಗುವುದು. ಏಕೆಂದರೆ ವಾಸ್ತವವಾಗಿ ಭಾರತಕ್ಕೆ ಸಮಸ್ಯೆ ಇರುವುದು ತಾಲಿಬಾನಿಗಳದ್ದಲ್ಲ, ಆದರೆ ತಾಲಿಬಾನಿಗಳ ಸಮರ್ಥನೆ ಮಾಡುವ ಭಾರತೀಯರದ್ದೇ. ಸೈನ್ಯದಲ್ಲಿ ಯುದ್ಧ ಮಾಡುವಾಗ ಮುನ್ನುಗ್ಗುವವರೆಗೆ ಶತ್ರುಗಳ ಗುಂಡಿನಿಂದ ರಕ್ಷಣೆ ಕೊಡಿಸಲು ‘ಕವರಿಂಗ್ ಫೈರ್’ ನೀಡಲಾಗುತ್ತದೆ. ಬುದ್ಧಿಜೀವಿಗಳೆನಿಸಿಕೊಂಡ ಈ ಮಂದಿ ಭಾರತದಲ್ಲಿ ಕುಳಿತು ತಾಲಿಬಾನಿಗಳಿಗೆ ಕವರಿಂಗ್ ಫೈರ್ ಕೊಡುವ ರೀತಿ ನೋಡಿದರೆ ನಾವು ಕಾದಾಡಬೇಕಾದ ಮಂದಿ ಅಫ್ಘಾನಿಸ್ತಾನದಲ್ಲಿಲ್ಲ, ಭಾರತದಲ್ಲೇ ಇದ್ದಾರೆ ಎಂಬುದು ಎಂಥವನಿಗೂ ಸ್ಪಷ್ಟವಾಗುತ್ತದೆ.
ಇಷ್ಟಕ್ಕೂ ತಾಲಿಬಾನಿಗಳು ಭಾರತಕ್ಕೆ ಸಮಸ್ಯೆಯಲ್ಲವೇ? ಖಂಡಿತ ಹೌದು. ಏಕೆಂದರೆ ತಾಲಿಬಾನಿಗಳ ಕಿರಿಕಿರಿ ತಾಳಲಾಗದೆ ಸ್ವತಃ ಮುಸಲ್ಮಾನ ರಾಷ್ಟ್ರಗಳೇ ಅವರಿಂದ ಎಚ್ಚರಿಕೆಯ ಅಂತರ ಕಾಯ್ದುಕೊಂಡಿವೆ. ಮುಕ್ತವಾಗಿ ತಾಲಿಬಾನಿಗಳನ್ನು ಬೆಂಬಲಿಸುತ್ತಿರುವ ಟರ್ಕಿಯೇ ನೂರಾರು ಮೈಲುಗಳುದ್ದದ ಗೋಡೆಯನ್ನೆಬ್ಬಿಸಿ ಅಫ್ಘಾನಿಸ್ತಾನದ ನಿರಾಶ್ರಿತರು ಬರದಂತೆ ತಡೆಗಟ್ಟಿದೆ. ಗ್ರೀಸ್ ಟರ್ಕಿಯ ಗಡಿಗೆ ಹೊಂದಿಕೊಂಡಂತೆ 40 ಕಿ.ಮೀ. ಉದ್ದದ ಗೋಡೆಯನ್ನು ನಿರ್ಮಾಣ ಮಾಡಿ ಅತ್ಯಾಧುನಿಕ ಕ್ಯಾಮರಾಗಳನ್ನು ಅಳವಡಿಸಿ ಒಳನುಗ್ಗುವ ಮಂದಿಯ ಮೇಲೆ ಗಮನವಿಟ್ಟಿದೆ. ಪಾಕಿಸ್ತಾನದ ಪೂರ್ಣ ಬೆಂಬಲ ಪಡೆದಿರುವ ತಾಲಿಬಾನಿಗಳು ಸಹಜವಾಗಿಯೇ ಭಾರತಕ್ಕೆ ಆತಂಕವೇ ಆಗಲಿದ್ದಾರೆ. ಒಮ್ಮೆ ಅಫ್ಘಾನಿಸ್ತಾನವನ್ನು ತೆಕ್ಕೆಗೆ ಹಾಕಿಕೊಂಡ ನಂತರ ಅವರ ದೃಷ್ಟಿ ನಿಸ್ಸಂಶಯವಾಗಿ ಭಾರತದ ಕಡೆಗೆ ತಿರುಗಲಿದೆ. ಹೆಚ್ಚು-ಹೆಚ್ಚು ಪಾಕಿಸ್ತಾನಿಯರನ್ನು ತಮ್ಮ ಪಡೆಗೆ ಸ್ವಯಂಸೇವಕರಾಗಿ ಸೇರಿಸಿಕೊಳ್ಳಬೇಕೆಂದರೆ ತಾಲಿಬಾನ್ ಕಾಶ್ಮೀರದ ಮುಕ್ತಿಯ ಮಾತುಗಳನ್ನಾಡಲೇಬೇಕು.
ಮತಾಂಧ ಪಾಕಿಸ್ತಾನಿಗಳಿಗೆ ಕಾಶ್ಮೀರವೆನ್ನೋದು ಅಫೀಮಿದ್ದಂತೆ. ಅದನ್ನು ತಿನ್ನಿಸಿಯೇ ಪಾಕಿಸ್ತಾನದ ಸೇನೆ ಇಷ್ಟೂ ದಿನ ಪಾಕಿಸ್ತಾನಿಗಳನ್ನು ದುಡಿಸಿಕೊಂಡಿರುವುದು. ಪಾಕಿಸ್ತಾನದ ಅಧ್ಯಕ್ಷರಾದವರು ಈ ಅಫೀಮಿನ ಬಲದ ಮೇಲೆಯೇ ಅಧಿಕಾರ ನಡೆಸುವುದು. ಈಗ ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ತಮ್ಮ ಪ್ರಭುತ್ವ ಬಲವಾಗಿರಿಸಿಕೊಳ್ಳಬೇಕೆಂದರೆ ಅವರಿಗೆ ಬೇಕಾಗುವ ಶಕ್ತಿಯನ್ನು ಪಾಕಿಸ್ತಾನದಿಂದಲೇ ಪಡೆಯಬೇಕು. ಮತ್ತು ಅದಕ್ಕೆ ಇಂಧನ ಕಾಶ್ಮೀರವೇ. ಹೀಗಾಗಿ ನಮ್ಮ ಮುಂದಿನ ಸವಾಲು ದೊಡ್ಡದಿದೆ. ಅಷ್ಟೇ ಅಲ್ಲ, ತಾಲಿಬಾನ್ ಅಫ್ಘಾನಿಸ್ತಾನದ ನೇತೃತ್ವವನ್ನು ಮರಳಿ ಪಡೆಯುವ ಲಕ್ಷಣಗಳು ಗೋಚರವಾಗುತ್ತಿದ್ದಂತೆ ಜಗತ್ತಿನ ಮೂಲೆ-ಮೂಲೆಯಲ್ಲಿ ಮತಾಂಧ ಶಕ್ತಿಗಳು ಗೆಲುವಿನ ಕನಸು ಕಾಣುತ್ತ ಮತ್ತೆ ಜಾಗೃತವಾಗಿಬಿಟ್ಟಿವೆ. ಇದು ಕೂಡ ಆತಂಕದ ವಿಚಾರವೇ. ಪ್ರತ್ಯೇಕತೆಗೆ ಬೆಂಬಲ ಕೊಡುವ ಮಂದಿ ಭಾರತದಲ್ಲೇನು ಕಡಿಮೆಯಿಲ್ಲ. ಕೇರಳದಂತಹ ರಾಜ್ಯಗಳಿಂದ ಪ್ರತ್ಯಕ್ಷ ಐಸಿಸ್ಗೆ ಸೇರಿಕೊಂಡವರ ಸಂಖ್ಯೆ ಇನ್ನೂ ಲೆಕ್ಕಕ್ಕೆ ಸಿಗುತ್ತಿಲ್ಲ. ಕಾಶ್ಮೀರದ ಕಥೆಯಂತೂ ಕೇಳಲೇಬೇಡಿ.
ಹಾಗಂತ ಭಾರತ ಕೈಕಟ್ಟಿ ಕುಳಿತಿಲ್ಲ. ಅಮೆರಿಕವು ಅಫ್ಘಾನಿಸ್ತಾನವನ್ನು ಬಿಟ್ಟುಹೋಗುವ ಮಾತನಾಡಿದೊಡನೆ ಭಾರತ ತಾಲಿಬಾನಿಗಳೊಂದಿಗೆ ಮಾತುಕತೆಗೆ ವೇದಿಕೆ ರೂಪಿಸಿಕೊಂಡಿತ್ತು. ತಾಲಿಬಾನಿಗಳೊಂದಿಗೆ ಕತಾರ್, ಇರಾಕ್, ಇರಾನ್, ಪಾಕಿಸ್ತಾನ, ಚೀನಾ, ರಷ್ಯಾಗಳು ಸುಮಧುರ ಬಾಂಧವ್ಯ ಹೊಂದಿವೆ. ಇವುಗಳಲ್ಲಿ ಚೀನಾ ಒಂದನ್ನು ಹೊರತುಪಡಿಸಿದರೆ ಉಳಿದೆಲ್ಲ ರಾಷ್ಟ್ರಗಳು ನಮ್ಮೊಂದಿಗೆ ಸೌಹಾರ್ದ ಸಂಬಂಧವನ್ನೇ ಹೊಂದಿವೆ. ಹೀಗಾಗಿಯೇ ಅಮೆರಿಕದಿಂದ ಮರಳಿ ಬರುತ್ತಿದ್ದ ವಿದೇಶಾಂಗ ಸಚಿವ ಜೈಶಂಕರ್ ಕತಾರ್ನ ಹಣಕಾಸು ಸಚಿವರನ್ನು ಭೇಟಿಮಾಡಿ ರ್ಚಚಿಸಿದ್ದಾರೆ. ಚರ್ಚೆಯ ವಿವರಗಳು ಪೂರ್ಣವಾಗಿ ಲಭ್ಯವಿಲ್ಲವಾದರೂ ಅಫ್ಘಾನಿಸ್ತಾನ ಚರ್ಚೆಯ ವಿಷಯವಾಗಿತ್ತು ಎನ್ನುವುದನ್ನಂತೂ ಇಬ್ಬರೂ ಹೇಳಿಕೊಂಡಿದ್ದಾರೆ. ತಾಲಿಬಾನಿಗಳು ಅಧಿಕಾರಕ್ಕೆ ಬಂದರೆ ಅದನ್ನು ನಿಯಂತ್ರಿಸುವಲ್ಲಿ ನಾವು ಅನುಸರಿಸಬೇಕಾದ ಬಳಸುಮಾರ್ಗವನ್ನು ಆಗಲೇ ಭಾರತ ಹುಡುಕಾಡಲು ಶುರುಮಾಡಿದೆ. ಇರಾನ್ನೊಂದಿಗಿನ ನಮ್ಮ ಬಾಂಧವ್ಯ ಕೆಟ್ಟದಾಗೇನೂ ಇಲ್ಲ. ಅಮೆರಿಕ ಆರ್ಥಿಕ ದಿಗ್ಬಂಧನ ಹೇರಿದಾಗಲೂ ನಾವು ಅವರೊಂದಿಗೆ ಸುಮಧುರವಾದ ವ್ಯವಹಾರವನ್ನೇ ನಡೆಸಿದ್ದೇವೆ. ಈಗ ಅದು ಖಂಡಿತವಾಗಿಯೂ ಬಳಕೆಗೆ ಬರಲಿದೆ. ಹಾಗೆ ನೋಡಿದರೆ, ರಷ್ಯಾ ನಮ್ಮೊಂದಿಗೆ ಘನಿಷ್ಠವಾದ ಸಂಪರ್ಕದಲ್ಲಿದೆ. ತಾಲಿಬಾನ್ ಮೇಲೆ ರಷ್ಯಾ ಹೊಂದಿರುವ ಹಿಡಿತದ ಆಧಾರದ ಮೇಲೆ ನಮಗೆ ಬರಬಹುದಾಗಿರುವ ಸಮಸ್ಯೆಯನ್ನು ಎದುರಿಸಲು ಸಾಕಷ್ಟು ಸುಲಭವಾಗಬಹುದು ಎನಿಸುತ್ತದೆ. ಸಂತಸದ ಸಂಗತಿ ಎಂದರೆ ಭಾರತ ರಷ್ಯಾದ ಮೇಲೆಯಷ್ಟೇ ನಿರ್ಭರವಾಗದೆ ಇತರ ರಾಷ್ಟ್ರಗಳ ಮೂಲಕವೂ ಅಫ್ಘಾನಿಸ್ತಾನದೊಂದಿಗಿನ ಬಾಂಧವ್ಯವನ್ನು ಚೆನ್ನಾಗಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ.
ಸಮಸ್ಯೆ ಇರೋದು ತಾಲಿಬಾನಿಗೇ. ವಾಸ್ತವವಾಗಿ ತಾಲಿಬಾನ್ ಎನ್ನೋದು ಅಫ್ಘಾನಿಸ್ತಾನದ ಬಹುಸಂಖ್ಯಾತ ಪುಶ್ತೂನಿಗಳ ಸಂಘಟನೆ. ಮುಕ್ಕಾಲುಪಾಲು ಪುಶ್ತೂನಿಗಳು ಅಫ್ಘಾನಿಸ್ತಾನದಲ್ಲಿದ್ದರೆ ಕಾಲುಭಾಗದಷ್ಟು ಜನ ಪಾಕಿಸ್ತಾನದಲ್ಲಿದ್ದಾರೆ. ಹೀಗಾಗಿ ಅಫ್ಘಾನಿಸ್ತಾನದ ಬೆಳವಣಿಗೆಗಳು ಪಾಕಿಸ್ತಾನವನ್ನು ನೇರವಾಗಿ ಪ್ರಭಾವಿಸಲಿವೆ. ನಿಮಗೆಲ್ಲ ಅಲ್ ಕೈದಾ ನೆನಪಿರಬೇಕು. ಒಸಾಮಾ ಬಿನ್ ಲಾಡೆನ್ ಹುಟ್ಟುಹಾಕಿದ ಭಯೋತ್ಪಾದಕ ಸಂಘಟನೆ ಅದು. ಒಂದು ಕಾಲದಲ್ಲಿ ಇಡೀ ಜಗತ್ತನ್ನು ಒಂದು ಜಾಲದಲ್ಲಿ ಬೆಸೆದಿತ್ತು ಅಲ್ ಕೈದಾ. ಲಾಡೆನ್ ಬೆರಳತುದಿಯಲ್ಲಿ ಜಗತ್ತನ್ನು ಕುಣಿಸುತ್ತಿದ್ದ. ರಷ್ಯಾದ ವಿರುದ್ಧ ಪಿತೂರಿ ನಡೆಸಲೆಂದೇ ಅಮೆರಿಕ ಅಲ್ ಕೈದಾಕ್ಕೆ ಹಣ, ಶಸ್ತ್ರ ಮತ್ತು ತರಬೇತಿಯನ್ನು ಒದಗಿಸಿತ್ತು. ರಷ್ಯಾ ಅಫ್ಘಾನಿಸ್ತಾನದಿಂದ ಕಾಲ್ತೆಗೆಯುವುದರೊಂದಿಗೆ ಅಮೆರಿಕದ ಉದ್ದೇಶ ಪೂರ್ಣಗೊಂಡಿತ್ತು ನಿಜ. ಆದರೆ ಕಟ್ಟರ್ಪಂಥಿಗಳ ನಿಶೆ ಇಳಿದಿರಲಿಲ್ಲ. ಅವರು ತಮ್ಮ ಯುದ್ಧ ಮುಂದುವರಿಸಲೇಬೇಕಾಗಿತ್ತು. ಅವರಿಗೆ ಆಗ ಗೋಚರಿಸಿದ್ದು ಅಮೆರಿಕ. ಅಲ್ ಕೈದಾ ತನ್ನದೇ ಆದ ಇಸ್ಲಾಮಿನ ನಿಯಮಗಳನ್ನು ರೂಪಿಸಿಕೊಂಡಿತು. ಅಮೆರಿಕದ ಪರವಾಗಿರುವ ಮುಸ್ಲಿಂ ರಾಷ್ಟ್ರಗಳನ್ನೂ ವಿರೋಧಿಸಲಾರಂಭಿಸಿತು. ಮಧ್ಯ ಏಷ್ಯಾದ ಖುರಾಸಾನ್ ಪ್ರಾಂತ್ಯದಲ್ಲಿ ಚಟುವಟಿಕೆಯನ್ನು ತೀವ್ರಗೊಳಿಸಿ ಪಶ್ಚಿಮ ರಾಷ್ಟ್ರಗಳನ್ನಷ್ಟೇ ಅಲ್ಲದೆ, ವಿರೋಧಿ ಇಸ್ಲಾಮಿಕ್ ರಾಷ್ಟ್ರಗಳನ್ನೂ ಎದುರು ಹಾಕಿಕೊಂಡರು. ಒಂದು ಹಂತದಲ್ಲಂತೂ ಸೌದಿಯ ರಾಜರುಗಳ ತೆಕ್ಕೆಯಿಂದ ಮಕ್ಕಾವನ್ನೇ ಕಿತ್ತುಕೊಳ್ಳುವ ಪ್ರಯತ್ನ ನಡೆದಿತ್ತು. ಸೌದಿ ಈ ಪ್ರಯತ್ನವನ್ನು ಮಟ್ಟ ಹಾಕಿತಾದರೂ ಅಲ್ ಕೈದಾ ಸದ್ದು ಅಡಗಲಿಲ್ಲ. ಅಮೆರಿಕ ತುಂಬ ತಲೆಕೆಡಿಸಿಕೊಂಡಿರಲಿಲ್ಲ. ಆಗಲೇ ಅವಳಿ ಕಟ್ಟಡಗಳ ಮೇಲೆ ದಾಳಿ ನಡೆದಿದ್ದು. ಒಂದು ಕಾರಣಕ್ಕಾಗಿ ಕಾಯುತ್ತಿದ್ದ ಅಮೆರಿಕ ಅಫ್ಘಾನಿಸ್ತಾದ ಮೇಲೆ ಮುಲಾಜಿಲ್ಲದೆ ದಾಳಿ ಮಾಡಿತು. ಕೆಲವೇ ದಿನಗಳಲ್ಲಿ ತನ್ನ 10-12 ಸೈನಿಕರನ್ನು ಕಳೆದುಕೊಂಡು ಈ ಉಗ್ರಪಡೆಗೆ ಸೇರಿದ್ದ ಸಾವಿರಾರು ಮಂದಿಯನ್ನು ನಾಶಗೊಳಿಸಿತು. ಲಾಡೆನ್ ಸೇರಿ ಅಲ್ ಕೈದಾದ ಅನೇಕ ಪ್ರಮುಖರು ಪಾಕಿಸ್ತಾನಕ್ಕೆ ಹೋಗಿ ಆಶ್ರಯ ಪಡೆದರು. ಅಮೆರಿಕ ಪಾಕಿಸ್ತಾನಕ್ಕೆ ಒಂದಷ್ಟು ಧನಸಹಾಯ ಮಾಡುವುದರ ಮೂಲಕ ಈ ಉಗ್ರರ ಮಟ್ಟಹಾಕಲು ಸಹಕಾರ ಪಡೆದುಕೊಂಡಿತು. ಯಾವ ಉಗ್ರವಾದಿಗಳ ಸೃಷ್ಟಿಗೆ ಪಾಕಿಸ್ತಾನ ಸಹಕಾರ ನೀಡಿತೋ ಈಗ ಅದೇ ಉಗ್ರವಾದಿಗಳನ್ನು ಮಟ್ಟಹಾಕಲು ಪಾಕಿಸ್ತಾನ ಅಮೆರಿಕದ ಕೈಜೋಡಿಸಿತು. ಅಲ್ ಕೈದಾದ ಮುಂದುವರಿದ ಭಾಗದಂತಿರುವ ತಾಲಿಬಾನಿಗಳ ಕಥೆಯೂ ಇದಕ್ಕಿಂತ ಭಿನ್ನವೇನೂ ಆಗಿರುವುದಿಲ್ಲ. ಇಂದಂತೂ ನೆಪಮಾತ್ರಕ್ಕೆ ತಾಲಿಬಾನಿಗಳು ಇದ್ದಾರೆ. ಅದಕ್ಕೆ ಬೇಕಾಗಿರುವ ಅಷ್ಟೂ ಸೈನ್ಯ ಪಡೆಯನ್ನು ಒದಗಿಸಿರುವುದು ಪಾಕಿಸ್ತಾನವೇ. ಈಗ ಪಾಕಿಸ್ತಾನಕ್ಕೆ ಚೀನಾ ಬೆನ್ನಿಗಿದೆ. ಇಂದು ತಾಲಿಬಾನಿಗಳನ್ನು ತಲೆಯಮೇಲೆ ಹೊತ್ತುಕೊಂಡು ತಿರುಗಾಡುತ್ತಿರುವ ಪಾಕಿಸ್ತಾನಕ್ಕೆ ಇದೇ ತಾಲಿಬಾನಿಗಳನ್ನು ಮಟ್ಟಹಾಕಿ ಮುಗಿಸುವುದು ದೊಡ್ಡ ಕೆಲಸವೇನೂ ಅಲ್ಲ. ಹೀಗಾಗಿಯೇ ತಾಲಿಬಾನಿಗಳು ಎಚ್ಚರಿಕೆಯಿಂದ ಹೆಜ್ಜೆ ಇಡುತ್ತಿದ್ದಾರೆ. ತಮಗೆ ಬೇಕಾದ ಜಾಗತಿಕ ಗೌರವಗಳನ್ನೆಲ್ಲ ಪಾಕಿಸ್ತಾನದ ಮೂಲಕ ಪಡೆದುಕೊಳ್ಳುತ್ತಿದ್ದಾರೆ. ಪಾಕಿಸ್ತಾನವನ್ನೇ ಮಧ್ಯವರ್ತಿಯಾಗಿಸಿಕೊಂಡು ಚೀನಾದೊಂದಿಗೆ ಬಾಂಧವ್ಯ ಬೆಳೆಸಿಕೊಂಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ಬಲೂಚಿಸ್ತಾನದ ಭಾಗದಲ್ಲಿ ತನ್ನ ಹಿತಾಸಕ್ತಿ ಕಾಯ್ದುಕೊಳ್ಳಲು ಚೀನಾ ನೇರವಾಗಿ ತಾಲಿಬಾನಿಗಳೊಂದಿಗೆ ಒಪ್ಪಂದ ಮಾಡಿಕೊಂಡರೆ ಅಚ್ಚರಿ ಪಡಬೇಕಿಲ್ಲ. ಆಗ ಪಾಕಿಸ್ತಾನ ಖಂಡಿತವಾಗಿಯೂ ಮೂಲೆಗುಂಪಾಗಲಿದೆ. ಸಹಜವಾಗಿಯೇ ತಾಲಿಬಾನಿಗಳು ಪಾಕಿಸ್ತಾನವನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡರೂ ವಿಶೇಷವೇನಿಲ್ಲ.
ನಿಜವಾಗಿಯೂ ಸಮಸ್ಯೆ ಇರುವುದು ಭಾರತೀಯ ಮುಸಲ್ಮಾನರಿಗೆ. (ಹುಬುಲ್ ವತನ್ ಮಿನಲ್ ಇಮಾನ್) ‘ನೀವು ಹುಟ್ಟಿದ ಸ್ಥಳವನ್ನು ಮೊದಲು ಪ್ರೀತಿಸಿರಿ’ ಎನ್ನುವ ಪ್ರವಾದಿಯವರ ಮಾತನ್ನು ಪದೇಪದೆ ಉಚ್ಚರಿಸುವ ಭಾರತೀಯ ಮುಸಲ್ಮಾನ ಜಗತ್ತಿನಲ್ಲೆಲ್ಲಾದರೂ ರಾಷ್ಟ್ರಭಕ್ತ ಮುಸಲ್ಮಾನರಿರುವುದನ್ನು ತೋರಿಸಲು ಸೋತುಹೋಗುತ್ತಾನೆ. ಇಂದು ಫ್ರಾನ್ಸ್, ಜರ್ಮನಿ, ಇಂಗ್ಲೆಂಡುಗಳಲ್ಲಿ ಮುಸಲ್ಮಾನರು ಅಲ್ಲಿನ ಆಡಳಿತದ ವಿರುದ್ಧ ಕಿಡಿಯಾಗಿರುವುದು ಏಕೆ? ಆಸ್ಟ್ರೇಲಿಯಾದಲ್ಲಿ ತಮಗೆ ಷರಿಯತ್ ಬೇಕು ಎಂದು ಒತ್ತಾಯಿಸುತ್ತಿರುವುದು ಏಕೆ? 1947ರಲ್ಲಿ ಭಾರತವನ್ನು ವಿಭಜಿಸಿ ಪ್ರತ್ಯೇಕ ರಾಷ್ಟ್ರ ಮಾಡುವ ಆತುರ ತೋರಬಾರದಿತ್ತು. ಎಲ್ಲ ಬಿಡಿ, ತಾಲಿಬಾನಿಗಳು ಮಾನವೀಯತೆ ವಿರುದ್ಧದ ಪಥದಲ್ಲಿ ನಡೆದಿದ್ದಾಗ ಅದನ್ನು ಬೆಂಬಲಿಸಿ ಕೇಕೆ ಹಾಕಬಾರದಿತ್ತು. ಹೇಳಿದೆನಲ್ಲ, ಈ ಶಾಸ್ತ್ರವಾಕ್ಯ ಇತರರಿಗೆ ತಾವು ಸಭ್ಯರು ಎಂದು ತೋರಿಸಿಕೊಳ್ಳಲು ಇರುವ ಮಾರ್ಗವಷ್ಟೇ. ಆರಂಭದಲ್ಲಿ ಕೇಳಿರುವ ಪ್ರಶ್ನೆಗಳನ್ನು ಮತ್ತೊಮ್ಮೆ ಓದಿನೋಡಿ. ಕಟ್ಟರ್ ಇಸ್ಲಾಂ ಎಂದರೆ ಆತ ಇಸ್ಲಾಮಲ್ಲದ ಬೇರೆ ರಾಷ್ಟ್ರವನ್ನು ಒಪ್ಪದಿರುವುದು, ಅಥವಾ ದಾರುಲ್ ಹರ್ಬ್ ಅನ್ನು ದಾರುಲ್ ಇಸ್ಲಾಂ ಆಗಿ ಪರಿವರ್ತಿಸುವುದು. ಕಟ್ಟರ್ಪಂಥಿ ಎಂದರೆ ಆತ ಇಸ್ಲಾಮಿನ ಆಕ್ರಮಣದ ಎದುರಿಗೆ ಹೋರಾಡದಿರುವುದು. ಈ ಚಿಂತನೆಯನ್ನು ಮುಂದಿಟ್ಟುಕೊಂಡೇ ಜಿಲಾನಿ ಸಹೋದರರು ವಿಜಯನಗರ ಸಾಮ್ರಾಜ್ಯದ ವಿರುದ್ಧ ಚೂರಿ ಇರಿದಿದ್ದು.
ತಾಲಿಬಾನಿಗಳು ಸುದೀರ್ಘವಾಗಿ ಬದುಕುವುದಿಲ್ಲ. ಅದಾಗಲೇ ಅಫ್ಘಾನಿಸ್ತಾನದ ಮುಸಲ್ಮಾನರೇ ಅವರನ್ನು ಮಟ್ಟಹಾಕಲು ಜೊತೆಯಾಗುತ್ತಿದ್ದಾರೆ. ಆದರೆ ತಾಲಿಬಾನಿಗಳು ನಾಶವಾಗುವುದರೊಂದಿಗೆ ಮತ್ತೊಂದು ಕಟ್ಟರ್ಪಂಥಿ ಪಂಗಡದ ಉಗಮಕ್ಕೆ ಅದು ಕಾರಣವೂ ಆಗಲಿದೆ, ಸಮಸ್ಯೆ ಇರುವುದು ಈ ಕಟ್ಟರ್ಪಂಥಿ ಚಿಂತನೆಯಲ್ಲಿಯೇ. ದುರದೃಷ್ಟವೇನು ಗೊತ್ತೇ? ತಾಲಿಬಾನಿಗಳಿಗೆ ಈ ಚಿಂತನೆಯ ಮೂಲವನ್ನು ಒದಗಿಸಿಕೊಟ್ಟಿರುವುದು ಭಾರತದ ದೇವ್ಬಂಧಿಗಳೇ. ಆರಂಭದಲ್ಲೇ ಹೇಳಿದೆನಲ್ಲ, ನಾವು ಹೆದರಬೇಕಾದ್ದು ತಾಲಿಬಾನಿಗಳಿಗಲ್ಲ, ಅವರನ್ನು ಅಲ್ಲಿನ ಮಂದಿಯೇ ಮಟ್ಟಹಾಕಿಬಿಡುತ್ತಾರೆ. ಇಲ್ಲಿ ಅಡಗಿ ಕುಳಿತಿರುವ ತಾಲಿಬಾನಿಗಳ ಕುರಿತೇ ನಾವು ಎಚ್ಚರ ವಹಿಸಬೇಕಿರೋದು. ಈ ಹೋರಾಟದಲ್ಲಿ ಪ್ರಧಾನಮಂತ್ರಿ, ರಕ್ಷಣಾಮಂತ್ರಿ ಎಲ್ಲವೂ ನಾವು ಮತ್ತು ನೀವೇ. ಮೈಯೆಲ್ಲ ಕಣ್ಣಾಗಿರಬೇಕು ಅಷ್ಟೇ!
(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)