ನಮಗೇನು ಬೇಕು ಎಂದು ನಾವೇ ನಿರ್ಧರಿಸದಿದ್ದರೆ...!

Deshmukh
ಸುಭಾಷ್​ ಘಾಯ್​, ನೇಹಾ ಕಕ್ಕರ್​
Published on
ಹುಡುಕಾಟ ನಿಂತುಹೋಗಿದೆ! ಜೀವನ ಯಾಕೋ ನಿಂತ ನೀರಿನಂತಾಗಿದೆ!

ಬಹುತೇಕರ ಬದುಕಿನ ಸತ್ಯವಿದು. ವಯಸ್ಸಲ್ಲಿ, ಕಷ್ಟಗಳಲ್ಲಿ ಮಾಗಿದ ಜನರು ‘ಜೀವನ ಬೋರಾಗಿದೆ...’ ಎಂದರೆ ಅವರ ಮನಸ್ಸಿನ ನೋವು, ತಳಮಳವನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ, ಚೆನ್ನಾಗಿ ಮೀಸೆ ಮೂಡದ ತರುಣರು, ಜೀವನವನ್ನೇ ಸರಿಯಾಗಿ ಕಾಣದ ಯುವತಿಯರು ಲೈಫ್ ಬೋರಾಗಿದೆ ಎಂದು ಹೇಳಿದರೆ ಅರ್ಥವೇನು? ಸ್ವಲ್ಪ ತಲೆ ಕೆಡಿಸುವ ಪ್ರಶ್ನೆಯೇ! ಖುಷಿ ಬೇರೆ ಆನಂದ ಬೇರೆ. ಯಶಸ್ಸಿನ ಪಯಣ ಭಿನ್ನ, ಆತ್ಮಸಂತೃಪ್ತಿಯ ಗಮ್ಯವೇ ಭಿನ್ನ. ಘಟನೆಗಳಲ್ಲಿ ಜೀವಿಸಬೇಕೋ, ಸಂಭವಿಸಿದ ಘಟನೆಗಳಿಂದ ಜೀವನ ಕಟ್ಟಿಕೊಳ್ಳಬೇಕೋ... ಹೌದು, ಮುಖ್ಯ ಸಮಸ್ಯೆ ಇರೋದು ಇಲ್ಲೇ. ನಮಗೆ ಏನು ಬೇಕು ಅಂತಲೇ ಗೊತ್ತಿಲ್ಲ. ಬರೀ ಖುಷಿ ಸಾಕೋ, ಆನಂದದ ದಿವ್ಯಾನುಭೂತಿ ಬೇಕೋ, ನೆಮ್ಮದಿಯ ನಿಲ್ದಾಣಕ್ಕೆ ತಲುಪಬೇಕೋ ಅಥವಾ ಬೇಕುಗಳ ಸಂತೆಗೆ ಸಾಗಬೇಕೋ, ಯಶಸ್ಸಿನ ಮೇಲೆ ಯಶಸ್ಸು ಬೇಕೋ, ಆತ್ಮಸಂತೃಪ್ತಿ ಅರಸಬೇಕೋ... ಪ್ರಶ್ನಿಸಿಕೊಳ್ಳಲೇಬೇಕಿದೆ.

ಯಾವ ಊರಿಗೆ ಹೋಗಬೇಕು ಎಂದು ಗೊತ್ತಿಲ್ಲದೆ ರೈಲು ಹತ್ತಿ ಕುಳಿತರೆ ಏನು ಪ್ರಯೋಜನ? ಲೈಫ್ ಜರ್ನಿಯೂ ಹಾಗೇ. ನಮಗೇನು ಬೇಕು, ನಾವೆಲ್ಲಿ ಹೋಗಬೇಕು ಎಂದು ನಿಶ್ಚಯಿಸಿಕೊಳ್ಳದಿದ್ದರೆ ‘ಬೋರ್’ ಎಂಬ ಸಿಂಡ್ರೋಮ್ ಕಾಡತೊಡಗುತ್ತದೆ. ಜೀವನ ಸಪ್ಪೆ ಎನಿಸುತ್ತದೆ. ಲೈಫ್ ಎಂಬ ಕ್ಯಾನ್ವಾಸ್​ನ ಚಿತ್ರ ಕೆಲವೊಮ್ಮೆ ಕಪ್ಪು-ಬಿಳುಪಾಗಿ ಕಾಣುತ್ತದೆ, ಮತ್ತೊಮ್ಮೆ ವರ್ಣರಂಜಿತವಾಗಿ! ಮಗದೊಮ್ಮೆ, ಇದು ನಮ್ಮ ಚಿತ್ರವೇ ಅಲ್ಲ ಎನಿಸಿಬಿಡುತ್ತದೆ. ಹೀಗೆ ಈ ಚಿತ್ರಗಳು ಚದುರಿ ಹರಡಿಕೊಂಡಾಗ ಮನಸ್ಸು ಗೊಂದಲಪುರ. ಸಂದರ್ಭಗಳು, ಘಟನೆಗಳು, ಅನುಭವಗಳು ಮನುಷ್ಯನನ್ನು ನಿರ್ವಿುಸುತ್ತವಂತೆ. ಆದರೆ, ಆ ಅನುಭವಗಳು ನಮ್ಮನ್ನು ಅರಳಿಸಬೇಕೆ ಹೊರತು ಖಿನ್ನಗೊಳಿಸಬಾರದು. ನಿನ್ನೆ ಕಳೆದುಹೋಗಿದೆ, ನಿನ್ನೆ ನಡೆದದ್ದು ಮತ್ತೆ ನಡೆಯುವುದಿಲ್ಲ ಎಂಬುದು ಚೆನ್ನಾಗಿ ಗೊತ್ತು. ಆದರೂ, ನಿನ್ನೆಯಲ್ಲೇ ಬದುಕುತ್ತ, ಹೃದಯದಲ್ಲಿ ನೋವಿನ ಗೋಪುರ ನಿರ್ವಿುಸಿಕೊಂಡರೆ ಹೇಗೆ? ಲೈಫ್​ನಲ್ಲಿ ಯಾವುದೂ ಸರಳವಲ್ಲ. ಇಲ್ಲಿ ಯಾವುದೂ ರೆಡಿಮೇಡ್ ಆಗಿ ಸಿಗುವುದಿಲ್ಲ. ಮನಸ್ಸು ಮಂಕಾಗಿ ಕೂತಾಗ ಯಾವುದೇ ಮೋಟಿವೆಷನಲ್ ಕೋಟ್ ಮದ್ದಾಗುವುದಿಲ್ಲ. ಜಗತ್ತೆಲ್ಲ ಚೆನ್ನಾಗಿದೆ, ಎಲ್ಲರೂ ಸುಖಿಗಳಾಗಿ ಬಾಳುತ್ತಿದ್ದಾರೆ, ತನಗೊಬ್ಬನಿಗೆ ಮಾತ್ರ ಕಷ್ಟ ಎಂಬಂತೆ ಮನಸ್ಸು ಕೊರಗುತ್ತಿರುತ್ತದೆ. ಆದರೆ, ಸಮಸ್ಯೆ ಸಂದರ್ಭಗಳದ್ದಲ್ಲ, ಕಹಿಘಟನೆಗಳದ್ದೂ ಅಲ್ಲ. ಯಾವುದೋ ಗಮ್ಯ ಇರಿಸಿಕೊಂಡು, ಮತ್ಯಾವುದೋ ದಾರಿಯಲ್ಲಿ ಕ್ರಮಿಸಿರುತ್ತೇವೆ ಅಷ್ಟೇ. ಮತ್ತೆ ನಮ್ಮ ದಾರಿ ಅರಸಿಕೊಂಡು ಹೋದರೆ ಪಯಣ ಅದ್ಭುತ ಎನಿಸುವಲ್ಲಿ ಅನುಮಾನವಿಲ್ಲ.

ಸುಭಾಷ್ ಘಾಯ್! ಈ ಹೆಸರು ಕೇಳಿದೊಡನೆ ಸಿನಿರಂಗದ ಒಂದು ಅದ್ಭುತ ಪರಂಪರೆಯೇ ಕಣ್ಮುಂದೆ ತೆರೆದುಕೊಳ್ಳುತ್ತದೆ. ಖ್ಯಾತ ನಿರ್ದೇಶಕ, ನಿರ್ಮಾಪಕ, ಚಿತ್ರಕಥೆಗಾರ ಘಾಯ್ ವೃತ್ತಿಜೀವನ ಆರಂಭಿಸಿದ್ದು ನಾಯಕನಟನಾಗಿ! ಆರಂಭದಲ್ಲಿ (1970ರ ದಶಕ) ಅಂಥ ಹೇಳಿಕೊಳ್ಳುವ ಯಶಸ್ಸೇನು ಸಿಕ್ಕಿರಲಿಲ್ಲ. ಆದರೆ, ತನ್ನೊಳಗೆ ಒಬ್ಬ ನಿರ್ದೇಶಕನಿದ್ದಾನೆ, ಆ ಪ್ರತಿಭೆಯನ್ನು ಅನಾವರಣಗೊಳಿಸಬೇಕು ಎಂದು ಘಾಯ್ ನಿರ್ಧರಿಸಿದರೆ ಸುತ್ತಮುತ್ತಲಿನಿಂದ ಬಂದಪ್ಪಳಿಸಿದ್ದು ಘಾಸಿಗೊಳಿಸುವ ಮಾತುಗಳೇ! ‘ನೀನು ನಟನಾಗಿಯೇ ಇರು, ನಿರ್ದೇಶಕನಾಗಿ ಕ್ಯರಿಯರ್ ಹಾಳು ಮಾಡಿಕೊಳ್ಳಬೇಡ’ ಅಂತಲೇ ತುಂಬ ಜನರು ಹೇಳಿದರೆ ಹೊರತು, ‘ನಿರ್ದೇಶನ ಏಕೆ ಇಷ್ಟ, ಆ ನಿಟ್ಟಿನಲ್ಲಿ ತಯಾರಿ, ಕೌಶಲ ಏನೆಲ್ಲ ಇದೆ?’ ಅಂತ ಪ್ರಶ್ನಿಸಲಿಲ್ಲ. ಆದರೆ, ಸುಭಾಷ್ ಘಾಯ್ ಹೃದಯದ ಮಾತನ್ನು ಕೇಳಿಸಿಕೊಂಡರು. ನಿರ್ದೇಶಕರಾಗಿ ಎಷ್ಟು ಸೂಪರ್​ಹಿಟ್ ಚಿತ್ರಗಳನ್ನು ನೀಡಿದ್ದಾರೆ (ಕರ್ಜ್, ರಾಮ್ ಲಖನ್, ಸೌದಾಗರ್, ತ್ರಿಮೂರ್ತಿ, ಪರದೇಸ್, ಓಂ ಶಾಂತಿ ಓಂ ಇತ್ಯಾದಿ) ಎಂದರೆ ಅವರ ದಾಖಲೆಯನ್ನು ಮುರಿಯಲು ಕೆಲ ದಶಕಗಳೇ ಬೇಕಾಗಬಹುದೇನೋ... ಈ ಹಂತದಲ್ಲಿ ಘಾಯ್ ತುಂಬ ಹೋರಾಟ ನಡೆಸಿದ್ದಾರೆ, ಅವಮಾನವನ್ನು ನುಂಗಿದ್ದಾರೆ, ಕಷ್ಟಗಳನ್ನು ಸೋಲಿಸಿದ್ದಾರೆ. ಬಳಿಕವೇ ಯಶಸ್ಸಿನ ದರ್ಶನವಾಗಿದ್ದು!

ಘಾಯ್ ಬದುಕು ಇನ್ನಷ್ಟು ರೋಮಾಂಚಕ ಅನಿಸೋದು ಯಶಸ್ಸಿನ ಘಟ್ಟದ ನಂತರ! ಸೆಲಿಬ್ರಿಟಿ ಪಟ್ಟ, ಹಲವು ಬಾರಿ ಫಿಲ್ಮ್ ಫೇರ್ ಅವಾರ್ಡ್​ಗಳ ಗರಿ ಸಿಕ್ಕಿದ ಮೇಲೆ ಅವರು ಹಾಯಾಗಿ ಇದ್ದುಬಿಡಬಹುದಿತ್ತು. ಹಾಗಾಗಲಿಲ್ಲ, ಏಕೆಂದರೆ ಯಶಸ್ಸು ಎನ್ನುವುದು ಜೀವನದಲ್ಲಿ Ultimate ಅಲ್ಲ ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಇನ್ನೊಂದು ಭಾವನಾತ್ಮಕ ಬಂಧವೂ ಮುಂದಡಿ ಇಡಲು ಕಾರಣವಾಯಿತು. ಅವರ ತಾಯಿ, ‘ನೀನು ಬೆಳೆದ ಮೇಲೆ ನಿಲ್ಲಬೇಡ. ಅಷ್ಟಕ್ಕೆ ಸಂತೃಪ್ತಿಯಾಗಬೇಡ. ನಿನ್ನ ಜತೆಗಿರುವವರನ್ನೂ ಬೆಳೆಸಬೇಕು, ನೀನು ಪಡೆದಿದ್ದು ಸಮಾಜಕ್ಕೆ ವಾಪಸ್ ನೀಡಬೇಕು’ ಎಂದು ಹೇಳಿದರಂತೆ. ಅದಕ್ಕಾಗಿ ಸಿನಿಮಾ ತಯಾರಿಕೆ, ನಟನೆ ಸೇರಿ ಈ ರಂಗದ ಹಲವು ಆಯಾಮಗಳ ಪರಿಪೂರ್ಣ ತರಬೇತಿ ನೀಡುವ ಸಂಸ್ಥೆಯನ್ನು (Whistling Woods) ಮುಂಬೈನಲ್ಲಿ ಸ್ಥಾಪಿಸಿ, ಹೊಸಪ್ರತಿಭೆಗಳನ್ನು ಬೆಳಕಿಗೆ ತರುತ್ತಿದ್ದಾರೆ. ಘಾಯ್ ಮತ್ತು ಅವರ ಪುತ್ರಿ ಈ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ. ಇದು ಆತ್ಮಸಂತೃಪ್ತಿಯ ಗಮ್ಯವಲ್ಲವೇ? ಎಷ್ಟೋ ಬಾರಿ ಯಶಸ್ಸು ನಿಜವಾದ ಖುಷಿ ಕೊಡುವುದಿಲ್ಲ, ಆದರೆ, ಹಿಂದೆ ಆದ ಅವಮಾನಗಳನ್ನು ಜಯಿಸಿ ಬಂದೆವಲ್ಲ ಎಂಬ ಕ್ಷಣಿಕ ಹೆಮ್ಮೆ ಮೂಡಿಸುತ್ತದೆ. ಇದರ ಬಲದ ಮೇಲೆ ಆತ್ಮಸಂತೃಪ್ತಿ ನೀಡುವಂಥ ಕೆಲಸ ಗಳಲ್ಲಿ ತೊಡಗಬೇಕೆ ಹೊರತು ಯಶಸ್ಸಿನ ಅಹಂಕಾರ ಹೆಗಲೇರಲು ಬಿಡಬಾರದು.

ರಿಯಾಲಿಟಿ ಶೋವೊಂದರಲ್ಲಿ ಸುಭಾಷ್ ಘಾಯ್ ಮಹತ್ವದ ಮಾತನ್ನು ಆಡಿದರು-Discover your talent And ReDiscover your talent ಅಂತ! ‘ನಮ್ಮ ಪ್ರತಿಭೆ ಯಾವುದೆಂದು ಹುಡುಕಿಕೊಳ್ಳಬೇಕು (ಮತ್ತು ಅದನ್ನು ಖಾತ್ರಿ ಪಡಿಸಿಕೊಳ್ಳಲು) ಮತ್ತೊಮ್ಮೆ ಶೋಧಿಸಬೇಕು. ಇದನ್ನು ಅರ್ಥಮಾಡಿಕೊಂಡುಬಿಟ್ಟರೆ ಯಾವ ಹಾದಿಯಲ್ಲಿ ಸಾಗಬೇಕು ಎಂಬುದು ಸ್ಪಷ್ಟವಾಗುತ್ತದೆ. ಇಂದಿಲ್ಲ ನಾಳೆ ಗಮ್ಯ ಸಿಕ್ಕೇ ಸಿಗುತ್ತದೆ.

ಹಿಮಾಲಯದ ಮಡಿಲು ಋಷಿಕೇಶದಿಂದ ಬಂದು, ತನ್ನ ಸಿರಿಕಂಠದಿಂದ ಮೋಡಿಗೊಳಿಸಿರುವ ಗಾಯಕಿ ನೇಹಾ ಕಕ್ಕರ್ ಜೀವನಪಯಣವೂ ಅಷ್ಟೇ ಅದ್ಭುತ. 4ನೇ ವಯಸ್ಸಿನಿಂದಲೇ ಹಾಡಲು ಆರಂಭಿಸಿದ ನೇಹಾ ಗಾಯಕಿ ಆಗಬೇಕು ಎಂಬ ಕನಸನ್ನು ಪೋಷಿಸುತ್ತ ಬಂದರು. ಅಕ್ಕ ಸೋನು ಕಕ್ಕರ್, ತಮ್ಮ ಟೋನಿ ಕಕ್ಕರ್ ಜತೆ ನೇಹಾ ಭಜನೆಗಳನ್ನು ಹಾಡುತ್ತ ಬಂದರು. ಅಲ್ಲಿ ಸಿಗುತ್ತಿದ್ದ ಸಣ್ಣ ಸಂಭಾವನೆಯಲ್ಲೇ ಸಂಗೀತಾಭ್ಯಾಸಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರು. ಅಕ್ಕನಂತೂ ಎಲ್ಲ ಸಂದರ್ಭದಲ್ಲೂ ನೆರವಾದರು. 11ನೇ ತರಗತಿಯಲ್ಲಿ ಓದುತ್ತಿದ್ದ ನೇಹಾ ಇಂಡಿಯನ್ ಐಡಲ್ ಸೀಸನ್-2ರಲ್ಲಿ (2006) ಸ್ಪರ್ಧಿಯಾಗಿ ಪಾಲ್ಗೊಂಡು, ವಿಜೇತರಾಗಿ ಹೊಮ್ಮಿದರು! ಯಾವ ಷೋಗೆ ಆಡಿಷನ್ ಕೊಟ್ಟು, ಸ್ಪರ್ಧಿಯಾಗಿದ್ದರೋ ಅದೇ ಇಂಡಿಯನ್ ಐಡಲ್ ಕಾರ್ಯಕ್ರಮಕ್ಕೆ ನೇಹಾ ಹಲವು ವರ್ಷಗಳಿಂದ ತೀರ್ಪಗಾರರಾಗಿದ್ದಾರೆ! ಹಾಗಾಗಿಯೇ, ಯಾವುದೋ ಸಣ್ಣ ಊರಿಂದ ಪ್ರತಿಭಾವಂತ ಗಾಯಕ/ಗಾಯಕಿ ಬಂದರೂ ಅವರ ಕಣ್ಣಲ್ಲೇ ಪ್ರತಿಭೆ, ಭಯ, ಆತಂಕ, ಹಿಂಜರಿಕೆ, ಮುಗ್ಧತೆ... ಇದೆಲ್ಲವನ್ನೂ ಗುರುತಿಸಿ ನೇಹಾ ಬೆಂಬಲ ನೀಡುತ್ತಾರೆ, ಧೈರ್ಯ ತುಂಬುತ್ತಾರೆ. ‘ಕೆಲವೇ ವರ್ಷಗಳ ಹಿಂದೆ ನಾನೂ ಅಲ್ಲಿದ್ದೆ, ಪ್ರಯತ್ನ, ಶ್ರಮದಿಂದ ಇಲ್ಲಿದ್ದೇನೆ’ ಎಂದು ನೇಹಾ ಹೇಳುವಾಗ ಎಂಥವರ ಹಿಂಜರಿಕೆ, ಅಳಕು ಕೂಡ ಮಾಯವಾಗಿ ಆತ್ಮವಿಶ್ವಾಸ ಮೂಡುತ್ತದೆ.

ಇದು ಒಬ್ಬಿಬ್ಬರ ಕಥೆಯಲ್ಲ... ಹೋರಾಟದ ಹಂತದಲ್ಲಿ ಇವರೂ ‘ಜೀವನ ಬೋರಾಗಿದೆ’ ಎಂದು ಕೈಚೆಲ್ಲಿದ್ದರೆ ಈ ಯಶಸ್ಸು, ಸಂತೃಪ್ತಿ, ಜೀವನದ ಗಾಢ ಅನುಭವ ಯಾವುದೂ ದಕ್ಕುತ್ತಿರಲಿಲ್ಲ. ಇವರು ಪದೇಪದೇ ದಾರಿ, ಗುರಿ ಬದಲಿಸಿಕೊಳ್ಳಲಿಲ್ಲ. ಜೀವನವನ್ನೇ ತಪಸ್ಸಾಗಿಸಿಕೊಂಡು, ಮುಂದೆ ಸಾಗಿದರು. ಇವತ್ತು ಯಶಸ್ಸಿನ ಶಿಖರದ ಮೇಲೆ ಅವರಿದ್ದಾರೆ, ಸಂತೃಪ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಆದರೆ, ಇಂದಿನ ಯುವಕರ ಸಮಸ್ಯೆ ಏನೆಂದರೆ ರಾತ್ರಿ ಬೆಳಗಾಗುವುದರಲ್ಲಿ ‘ಹೀರೋ’ ಆಗಿ ಬಿಡಬೇಕು, ತಾವು ಅಂದುಕೊಂಡಿದ್ದು ಆಗಿಹೋಗಬೇಕು. ಹಾಗೇ ಅವಸರದಲ್ಲಿ ಯಶಸ್ಸು ಯಾರಿಗೂ ಸಿಗುವುದಿಲ್ಲ. ಅದನ್ನು ಅರ್ಥ ಮಾಡಿಕೊಳ್ಳದೆ ಈ ವ್ಯವಸ್ಥೆಯನ್ನು, ಹಣೆಬರಹವನ್ನು, ಕೊನೆಗೆ ಜೀವನವನ್ನೇ ದೂಷಿಸುತ್ತಾರೆ.

ಹಾಂ! ನೆನಪಿರಲಿ. ನಾವು ಏನು ಮಾಡಲು ಹೊರಟರೂ, ಅಷ್ಟೇ ಏಕೆ ಒಂದಿಷ್ಟು ಸಾಧನೆ ಮಾಡಿದರೂ ಕೊಂಕು ಮಾತನಾಡುವ, ವಿರೋಧ ಮಾಡುವ ಜನ ಇದ್ದೇ ಇರುತ್ತಾರೆ. ಅದಕ್ಕೆ ಹೆದರಿ ಕಂಗಾಲಾದರೆ, ನಾವು ಅವರ ಉದ್ದೇಶವನ್ನು ಪೂರೈಸಿ, ನಮ್ಮ ಕನಸಿನಿಂದ ವಿಮುಖರಾಗುತ್ತೇವೆ. ‘ನಾನು ದೀಪ. ನನ್ನ ಶತ್ರುತ್ವ ಇರುವುದು ಕೇವಲ ಕತ್ತಲೆಯೊಂದಿಗೆ. ಆದರೆ ಗಾಳಿ ಕಾರಣವಿಲ್ಲದೆ ನನ್ನ ವಿರುದ್ಧವಿದೆ’ ಎಂದಿದ್ದಾರೆ ಕವಿ ಗುಲ್ಜಾರ್. ಅಕ್ಷರಶಃ ನಿಜ. ನಮ್ಮ ಪ್ರತಿಭೆ ನಮಗೆ ಗೊತ್ತಿದ್ದು, ಸವಾಲುಗಳ ಅರಿವಿದ್ದಾಗಲೂ ಕೆಲವರು ಉತ್ಸಾಹವನ್ನು ಹಾಳು ಮಾಡುವಂತೆ ಮಾತನಾಡುತ್ತಾರೆ. ಅದಕ್ಕೆ ತಲೆ ಕೆಡಿಸಿಕೊಳ್ಳದೆ ಮುನ್ನುಗುವ ಛಾತಿ ಬೆಳೆಸಿಕೊಳ್ಳಬೇಕು ಅಷ್ಟೇ.

‘ಜೀವನ ರಹಸ್ಯವೂ ಅಲ್ಲ, ನೈರಾಶ್ಯವೂ ಅಲ್ಲ, ಕೇವಲ ಇವತ್ತು ಏನಿದೆ, ಅದೇ ಜೀವನ’ (ಗುಲ್ಜಾರ್)! ಕೆಲವೊಮ್ಮೆ ಹೃದಯ ಹಠ ಮಾಡುತ್ತದೆ, ರೋದಿಸುತ್ತದೆ. ಅದಕ್ಕೆ ತಾನೇ ‘ದಿಲ್ ತೋ ಬಚ್ಚಾ ಹೈ ಜೀ’ ಅಂತ ಹೇಳಿರೋದು. ಹೃದಯವನ್ನು ಸಂತೈಸುತ್ತ, ನಮಗೇನು ಬೇಕು ಎಂದು ನಿರ್ಧರಿಸಿಕೊಂಡರೆ ಆಗ ದಿಲ್​ಖುಷ್, ಜೀವನವೂ ಕೂಡ!

(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net