

ಭಾರತದಲ್ಲಿ ವಿಶೇಷವಾಗಿ ನಮ್ಮ ಪೂರ್ವಜರು ಇಂತಹ ವ್ಯಾಧಿಗಳನ್ನು, ಸಾಂಕ್ರಾಮಿಕ ರೋಗಗಳನ್ನು ದೂರ ಇಡುವುದಕ್ಕಾಗಿ ಹಾಗೂ ಆರೋಗ್ಯಪೂರ್ಣ ದೀರ್ಘಾಯುಷ್ಯವಂತರಾಗುವುದಕ್ಕಾಗಿ ಸಂಪ್ರದಾಯ ಅಥವಾ ಆಚರಣೆಗಳನ್ನಿಟ್ಟುಕೊಂಡಿದ್ದರು. ಮುಖ್ಯವಾಗಿ ವ್ಯಕ್ತಿಗತ ಸ್ವಚ್ಛತೆ- ಆರೋಗ್ಯದತ್ತ ಗಮನ. ಅಂದರೆ ದೇಹ ಮತ್ತು ಇಂದ್ರಿಯ ಹತೋಟಿ. ಅದರ ಜೊತೆಗೆ ತಾತ್ವಿಕವಾಗಿ ಆತ್ಮವನ್ನು ಶುದ್ಧವಾಗಿ ಇಟ್ಟುಕೊಳ್ಳುವುದು. ಆತ್ಮವು ನಿತ್ಯಶುದ್ಧವಾದರೂ ಅದಕ್ಕೆ ಅಂಟಿಕೊಂಡ ಮಲವನ್ನು ದೂರಮಾಡಿಕೊಂಡು ಬದುಕುವುದೆಂದರ್ಥ. ಈ ವಿಚಾರವನ್ನು ವಿಮಶಿಸಿದಾಗ ಮುಖ್ಯವಾಗಿ ತ್ರಿಕರಣ ಶುದ್ಧತೆಗೆ ಹೆಚ್ಚಿನ ಪ್ರಾಶಸ್ತ್ಯ ಬರುತ್ತದೆ. ವಾಕ್, ಕಾಯ, ಮನಸ್ಸು ಎಂಬ- ಈ ತ್ರಿಕರಣವನ್ನು ಏಕಸೂತ್ರತೆಯಲ್ಲಿ ಇಟ್ಟುಕೊಳ್ಳುವುದು. ಅನೇಕರು ಇದನ್ನು ಮಡಿ ಎಂದು ಕಲ್ಪನೆ ಮಾಡಿಕೊಂಡು ಮೂಗು ಮುರಿದದ್ದೂ ಇದೆ. ದೇವಸ್ಥಾನಗಳಿಗೆ ಹೋಗುವಾಗ ಸ್ನಾನ ಮಾಡಿ, ಮಡಿ ಬಟ್ಟೆ ಉಟ್ಟುಕೊಂಡು ಹೋಗುವ ಸಂಪ್ರದಾಯ ಈಗಲೂ ಕೆಲವೆಡೆ ಇದೆ.
ದೇವಸ್ಥಾನಕ್ಕೆ ಹೋಗುವಾಗ ಅನೇಕರು ವ್ರತಧಾರಿಗಳಾಗುತ್ತಾರೆ. ಅಂದರೆ ಮದ್ಯ-ಮಾಂಸವನ್ನು ಬಿಟ್ಟು ಶುಚಿರ್ಭತರಾಗಿ ಹೋಗುವುದು. ಅನೇಕರು ದೇವಸ್ಥಾನಕ್ಕೆ ಅಲ್ಲಿಯ ಕಲ್ಯಾಣಿಯಲ್ಲಿ ಅಥವಾ ನದಿಯಲ್ಲಿ ಕೈ-ಕಾಲುಗಳನ್ನು ತೊಳೆದುಕೊಂಡು ಅಥವಾ ಸ್ನಾನ ಮಾಡಿ ಶುಚಿರ್ಭತರಾಗಿ ಹೋಗುತ್ತಾರೆ. ಧರ್ಮಸ್ಥಳಕ್ಕೆ ಬರುವ ಅನೇಕ ಭಕ್ತರು ನೇತ್ರಾವತಿ ನದಿಯಲ್ಲಿ ಪವಿತ್ರತೀರ್ಥ ಸ್ನಾನ ಮಾಡಿ ಕಾಲ್ನಡಿಗೆಯಲ್ಲಿ ಶ್ರೀ ಮಂಜುನಾಥ ಸ್ವಾಮಿ ಸನ್ನಿಧಿಗೆ ಆಗಮಿಸುತ್ತಾರೆ. ಕಾಯ ಶುದ್ಧಿಯ ಜೊತೆಗೆ ವಚನ ಶುದ್ಧಿ, ಮನಸ್ಸನ್ನು ಶುದ್ಧಿ ಮಾಡಿಕೊಂಡು ಬರುತ್ತಾರೆ. ಸರ್ವರೋಗದಿಂದ ಮುಕ್ತವಾಗುವುದಕ್ಕೆ ತ್ರಿಕರಣ ಶುದ್ಧಿಯೇ ಪರಮೋಚ್ಚವಾದ ದಾರಿ ಎಂದು ಈಗ ಮತ್ತೆ ಪ್ರತಿಪಾದಿಸಲಾಗುತ್ತಿದೆ.
ದೇವಸ್ಥಾನಗಳಿಗೆ ಹೋಗುವಾಗ ಮಾರ್ಗದಲ್ಲಿ ಉಗುಳಬಾರದು, ಎಂಜಲು ಮಾಡಬಾರದು ಎಂಬ ನಂಬಿಕೆ ನಮ್ಮದು. ಮಡಿ ಅಂದರೆ ವೈಯಕ್ತಿಕ ಮನಸ್ಸು, ವಚನ ಕಾಯದ ಶುದ್ಧಿ. ಪೂಜೆಗೆ ಪೂರ್ವತಯಾರಿ ಎಂದರೆ ಸ್ನಾನ.
ಸಂತನೋರ್ವ ರಾಜಧಾನಿಯ ಬಳಿಯ ಅರಣ್ಯದಲ್ಲಿ ಇದ್ದ. ದಿನವೂ ಅವನ ಬಳಿ ಹೋಗುವ ಯಾಚಕರ ಅಥವಾ ಭಕ್ತರ ಸಂಖ್ಯೆ ಹೆಚ್ಚಾಗುತ್ತಿತ್ತು. ರಾಜನಿಗೆ ವರದಿ ಹೋಯಿತು. ಆ ಸಂತ ತನ್ನ ಪ್ರಜೆಗಳಿಗೆ ದರ್ಶನ, ಆಶೀರ್ವಾದ ಮಾಡುತ್ತಿದ್ದಾನೆ. ರಾಜನಾದ ನನ್ನ ಬಳಿ ಬರದಿದ್ದರೆ ಅವಮಾನವಲ್ಲವೇ ಎಂದು ಭಾವಿಸಿ, ಅರಮನೆಗೆ ಬಂದು ಸತ್ಕಾರ ಸ್ವೀಕರಿಸಬೇಕೆಂದು ಮಂತ್ರಿಗಳನ್ನು ಸಂತರಲ್ಲಿಗೆ ಕಳುಹಿಸುತ್ತಾನೆ. ಸಂತ ತನಗೆ ಅರಮನೆಯ ಸತ್ಕಾರ ಬೇಡವೆಂದರೂ ಕೇಳುವುದಿಲ್ಲ. ಸಂತ ಅರಮನೆಗೆ ಬಂದಾಗ ಸ್ವಾಗತವಾಗುತ್ತದೆ. ರಾಜ ಮತ್ತು ಕುಟುಂಬದವರು ಚಿನ್ನದ ಪಾತ್ರೆಯಲ್ಲಿ ಸುಭಕ್ಷ್ಯಗಳನ್ನು ತಯಾರಿಸಿ ಭಿಕ್ಷೆ ಹಾಕಲು ಮುಂದಾಗುತ್ತಾರೆ. ಸಂತ ತನ್ನ ಪಾತ್ರೆಯನ್ನು ಮುಂದಿಟ್ಟಾಗ ಅದರಲ್ಲಿ ಧೂಳು ಕಸಗಳಿರುತ್ತವೆ. ರಾಜ ಇದನ್ನು ಗಮನಕ್ಕೆ ತಂದಾಗ, ‘ಇದು ನಿನ್ನ ಮನಸ್ಸಿನ ಪ್ರತೀಕ. ಈ ಪಾತ್ರೆಯಲ್ಲಿ ಧೂಳು ಕಸಗಳಿರುವಂತೆಯೇ ನಿನ್ನಲ್ಲೂ ಅಹಂಕಾರ ಹಮ್ಮುಬಿಮ್ಮುಗಳಿವೆ. ಭಕ್ತಿ, ಶ್ರದ್ಧೆಗಿಂತಲೂ ನಿನ್ನ ಅಂತಸ್ತಿನ ಪರಿಜ್ಞಾನವಿದೆ. ಭೋಗದ ಪ್ರತೀಕವಾದ ನಿನ್ನಿಂದ ಆಹಾರ ಸ್ವೀಕರಿಸಿದರೆ ಅಥವಾ ಈ ಪಾತ್ರೆಯಲ್ಲಿರುವಂತೆಯೇ ನಿನ್ನ ಮನಸ್ಸಿನ ಅಶುದ್ಧತೆಯಿಂದ ನನ್ನ ತಪಸ್ಸು ಕೆಡಬಹುದು. ಆಚಾರ ವಿಚಾರಗಳು ಭ್ರಷ್ಟವಾಗಬಹುದು’ ಎಂದು ಸಂತ ಹೇಳಿದ. ಚಿನ್ನದ, ನವರತ್ನದ ಪಾತ್ರೆಯಲ್ಲಿ ಆಹಾರವನ್ನಿತ್ತರೆ ಶ್ರೇಷ್ಠವಲ್ಲ. ಮನಃಶುದ್ಧಿ, ಭಾವಶುದ್ಧಿ ಭಕ್ತಿಗಳೇ ಪ್ರಧಾನ ಎಂಬ ಸಂದೇಶ ದೊರಕಿತು.
ಕ್ಷೇತ್ರಗಳಿಗೆ ಬಂದಾಗ ಅನೇಕ ಮಂದಿ ಮಡಿ ಅಂದರೆ ಶುದ್ಧಿಯನ್ನು ಅಪೇಕ್ಷಿಸುತ್ತಾರೆ. ದೇವಸ್ಥಾನದಲ್ಲಿರುವ ಪೈಪುಗಳನ್ನು, ಇತರ ವಸ್ತುಗಳನ್ನೂ ಮುಟ್ಟುವುದಿಲ್ಲ. ಯಾಕೆಂದು ವೈಜ್ಞಾನಿಕವಾಗಿ ವಿಮರ್ಶೆ ಮಾಡಿದರೆ- ಕೆಲವರು ಮೂಗು ತುರಿಸ್ತಾರೆ, ಕೆಲವರು ಕೈ ಹಿಡಿದು ಕೆಮ್ಮುತ್ತಾರೆ, ಬಾಯಿಯನ್ನು ಒರೆಸಿಕೊಳ್ಳುತ್ತಾರೆ. ಅನೇಕ ವಸ್ತುಗಳನ್ನು ಮುಟ್ಟುತ್ತಾರೆ. ಬೇರೆಯವರು ಆ ವಸ್ತು ಮುಟ್ಟಿದರೆ, ಸಾಂಕ್ರಾಮಿಕ ವೈರಾಣುಗಳಿದ್ದರೆ ಇವರಿಗೆ ಅಂಟಬಹುದು. ಕೈಬೆರಳು, ಕಾಲು ಕೈ ಉಗುರುಗಳ ಮೂಲಕ ಅನೇಕ ವ್ಯಾಧಿಗಳು ಬರುತ್ತವೆ ಎಂದು ಹೇಳುತ್ತಾರೆ.
ಕ್ರಿಕೆಟ್ನಲ್ಲಿ ಹಿಂದೆ ಚೆಂಡಿಗೆ ಹೊಳಪು ಬರಬೇಕೆಂದು ನಾಲಗೆಯ ಎಂಜಲನ್ನು ಮುಟ್ಟಿ ಉಜ್ಜುತ್ತಿದ್ದರು. ನನಗಂತೂ ತುಂಬಾ ಅಸಹ್ಯ ಅನಿಸುತ್ತಿತ್ತು. ಈಗ ಎಂಜಲು ಹಾಕಿ ಬೌಲ್ ಮಾಡಬಾರದು ಎಂಬ ನಿಯಮವನ್ನೇ ತಂದಿದ್ದಾರೆ. ಪರಸ್ಪರ ಹಸ್ತಲಾಘವವನ್ನೂ (ಹ್ಯಾಂಡ್ಶೇಕ್)ಕೊಡಬಾರದು. ಅದರ ಬದಲು ಮುಷ್ಟಿ ಹಿಡಿದು ಅಭಿನಂದಿಸಬಹುದು ಎಂದೂ ನಿಯಮ ಮಾಡಿದ್ದಾರೆ. ಇಂತಹ ಪರಿವರ್ತನೆಗಳು ಆಗಿದ್ದು ಖಂಡಿತವಾಗಿ ಕರೊನಾದಿಂದಲೇ. ಮನೆಗೆ ಬಂದವರಿಗೆ ಕೈ-ಕಾಲು ತೊಳೆದುಕೊಳ್ಳಲು ನೀರಿಡುವ ಪದ್ಧತಿ ಹಿಂದೆ ಇತ್ತು. ಧರ್ಮಸ್ಥಳದಲ್ಲಿ ಬಿಂದಿಗೆಯಲ್ಲಿ ನೀರಿಡುವ ಪದ್ಧತಿ ಈಗಲೂ ಇದೆ. ಕೆಲವು ದೇವಸ್ಥಾನದಲ್ಲಿ ಪ್ರವೇಶದ್ವಾರದ ಮುಂದುಗಡೆ ಕಾಲು ತೊಳೆದುಕೊಂಡು ಒಳಗೆ ಹೋಗುವ ವ್ಯವಸ್ಥೆ ಇದೆ. ನಾವು ಕೂಡ ಧರ್ಮಸ್ಥಳದಲ್ಲಿ ಇದನ್ನು ಮಾಡಿದ್ದೆವು. ಆದರೆ ಸಾವಿರಾರು ಭಕ್ತರು ಕಾಲು ತೊಳೆದ ನೀರು ಅವರು ಮುಂದೆ ಹೋಗುವಾಗ ಅಲ್ಲಲ್ಲಿ ಅಂಟಿಕೊಳ್ಳುವುದರಿಂದ ವಾಸನೆ ಬರುತ್ತಿತ್ತು. ಹಾಗಾಗಿ ಅದನ್ನು ರದ್ದುಮಾಡಿದ್ದೆವು. ಇನ್ನು, ಮನೆ ವಿಷಯದಲ್ಲಿ ಹೇಳುವುದಾದರೆ, ಕೆಲವರು ಮನೆ ಒಳಗೆ ಚಪ್ಪಲಿ ಹಾಕಿಕೊಂಡು ಓಡಾಡುತ್ತಾರೆ.
ಪ್ರಾಥಮಿಕ ಶಿಕ್ಷಣದಲ್ಲೇ ವೈಯಕ್ತಿಕ ಹಾಗೂ ಸಾರ್ವಜನಿಕ ಜೀವನದ ಉತ್ತಮ ಆಚರಣೆಗಳು (ಮ್ಯಾನರಿಸಮ್ ಅಭ್ಯಾಸವಾದರೆ ಬದುಕಿನುದ್ದಕ್ಕೂ ಉಳಿಯುತ್ತದೆ. ನಗರವಾಸಿಯೊಬ್ಬರು ಹೇಳಿದ ಘಟನೆಯಿದು. ತಾಯಿಯೊಂದಿಗೆ ಮೂರು ವರ್ಷದ ಮಗು ನಡೆದುಕೊಂಡು ಹೋಗುತ್ತಿರುವಾಗ, ಅವರ ಮುಂದೆ ಹೋಗುತ್ತಿದ್ದವರು ಕೈಯಲ್ಲಿದ್ದ ಖಾಲಿ ಪೊಟ್ಟಣವನ್ನು ರಸ್ತೆಯಲ್ಲಿ ಬಿಸಾಡಿದರು. ತಾಯಿಯ ಕೈ ಕೊಡವಿಕೊಂಡು ಓಡಿದ ಮಗುವು ಆ ವ್ಯಕ್ತಿಯ ಬಳಿಗೆ ಹೋಗಿ ‘ನೀವು ರಸ್ತೆಯಲ್ಲಿ ಪೊಟ್ಟಣವನ್ನು ಬಿಸಾಡಬಾರದು’ ಎಂದು ಹೇಳುತ್ತದೆ. ಆ ವ್ಯಕ್ತಿ ಸಿಟ್ಟಾದರೆ ಏನು ಮಾಡುವುದೆಂದು ತಾಯಿಗೆ ಗಾಬರಿ. ಆಕೆ ಓಡಿಹೋಗಿ ‘ಕ್ಷಮಿಸಿ, ಮಗುವಿಗೆ ತಿಳುವಳಿಕೆಯಿಲ್ಲ’ ಎಂದಾಗ ಆ ವ್ಯಕ್ತಿ ‘ಖಂಡಿತಾ ಮಗು ಮಾಡಿದು ್ದಪ್ಪಲ್ಲ. ನನ್ನದೇ ತಪ್ಪು. ಈ ಮಗುವಿಗೆ ಚಿಕ್ಕಂದಿನಿಂದಲೇ ಇಂತಹ ಸಂಸ್ಕಾರ ಬಂದಿದೆಯಲ್ಲ, ಅದಕ್ಕೆ ಹೆಮ್ಮೆಪಡುತ್ತೇನೆ’ ಎಂದಾಗ ತಾಯಿ ನಿಟ್ಟುಸಿರನ್ನು ಬಿಟ್ಟಳಂತೆ. ನನ್ನ ಮೊಬೈಲ್ ಫೋನಲ್ಲಿ ಸಂದೇಶವೊಂದನ್ನು ಕೇಳಿದೆ.-ಗಛಿ ಚ್ಟಛಿ ಜಛ್ಟಿಛಿ ಠಿಟ ಞಚkಛಿ ಚ ಚಿಛಿಠಿಠಿಛ್ಟಿ ಡಿಟ್ಟ್ಝ. ಅಂದರೆ ‘ಇನ್ನೂ ಉತ್ತಮ ವಿಶ್ವದ ನಿರ್ವಣಕ್ಕಾಗಿ ನಾವು ಇಲ್ಲಿ ಬಂದಿದ್ದೇವೆ.’ ಹಾಗಾಗಿ ಉತ್ತಮ ಸಮಾಜ ನಿರ್ವಣಕ್ಕಾಗಿ ನಮ್ಮ ಕೊಡುಗೆಯನ್ನು ನೀಡಲೇಬೇಕಲ್ಲ.
ವಿದೇಶೀಯರು ಸಾಮಾನ್ಯವಾಗಿ ಮೂಗು, ಬಾಯಿ ಮತ್ತು ದೇಹದ ಇತರ ಭಾಗವನ್ನು ಮುಟ್ಟಿಕೊಳ್ಳುವುದಿಲ್ಲ. ಅದು ಅಲ್ಲಿಯ ರೂಢಿ. ಶೇಕ್ಹ್ಯಾಂಡ್ ಮಾಡಿದರೆ ಕೈಯಿಂದ ಕೈಗೆ ಅನೇಕ ರೋಗಗಳು ದಾಟಬಹುದು. ಆದ್ದರಿಂದ ಭಾರತದ ನಮಸ್ಕಾರವೇ ಸರ್ವಶ್ರೇಷ್ಠವಾದುದು ಎಂಬ ಭಾವನೆ ಇದೆ. ಆದರೆ ಇತ್ತೀಚೆಗೆ ಯುವಜನತೆಯಲ್ಲಿ, ಕೆಲವು ಸಿನಿಮಾಗಳಲ್ಲಿ ಅಥವಾ ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಕೆನ್ನೆಗೆ ಮುತ್ತುಕೊಡುವುದು, ಅಪ್ಪಿಕೊಳ್ಳುವುದು ಮುಂತಾದ ಪಾಶ್ಚಾತ್ಯ ರೂಢಿ ಅನುಕರಿಸುತ್ತಾರೆ. ಗ್ರಾಮೀಣದಲ್ಲೂ ಇಂಥದು ಕಂಡುಬರುತ್ತಿದೆ. ಇದರಲ್ಲಿ ಗಂಡು-ಹೆಣ್ಣು ಭೇದ ಇಲ್ಲ. ಇದರಿಂದ ಹೊಸ ಪರಂಪರೆ ಸೃಷ್ಟಿಯಾಗಿ, ಹೊಸ ಸಮಸ್ಯೆ ಹುಟ್ಟುತ್ತಿದೆ. ಕರೊನಾ ಸಂದರ್ಭದಲ್ಲಂತೂ ಇಂಥವು ಅಪಾಯಕಾರಿ ನಡವಳಿಕೆ.
ಯೋಗ ಮತ್ತು ಪ್ರಾಣಾಯಾಮದ ಬಗ್ಗೆ ಇಡೀ ವಿಶ್ವ ವಿಶೇಷವಾದ ಗೌರವವನ್ನು ಹೊಂದಿದ್ದರೆ ಅದಕ್ಕೆ ಭಾರತ ಕಾರಣ. ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಯುನೆಸ್ಕೋ ಮೂಲಕ ಯೋಗದ ಶ್ರೇಷ್ಠತೆಯನ್ನು ಪರಿಚಯಿಸಿದರು. ಮುಸ್ಲಿಂ ರಾಷ್ಟ್ರಗಳಲ್ಲಿ ಮತ್ತು ಗಲ್ಪ್ ರಾಷ್ಟ್ರಗಳಲ್ಲಿ ಕೂಡಾ ಧಾರ್ವಿುಕ ದೃಷ್ಟಿಯಲ್ಲಿ ನೋಡದೆ ಆರೋಗ್ಯ-ಸ್ವಾಸ್ಥ್ಯ ರಕ್ಷಣೆ ದೃಷ್ಟಿಯಲ್ಲಿ ಯೋಗ ಮತ್ತು ಪ್ರಾಣಾಯಾಮಗಳನ್ನು ಮಾಡುತ್ತಿದ್ದಾರೆ. ಪ್ರಾಣಾಯಾಮವು ಅನೇಕ ಸೋಂಕುಗಳ ನಿವಾರಣೆಗೂ ಸಹಕಾರಿ. ಜನರು ಇಂದು ಎಚ್ಚೆತ್ತು ಕೊಂಡಿರುವುದು, ಇಂದ್ರಿಯ ನಿಗ್ರಹ ಮಾಡಿಕೊಳ್ಳುತ್ತಿರುವುದು, ಯುಕ್ತಾಹಾರ ವಿಹಾರವನ್ನು ಅನುಸರಿಸುತ್ತಿರುವುದು ಇವೆಲ್ಲ ಕರೊನಾದಿಂದ ಆಗಿರುವ ಪ್ರಯೋಜನಗಳು.
ರಸ್ತೆಯಲ್ಲಿ ಉಗುಳುವುದು, ಬೀಡಿ-ಸಿಗರೇಟ್ ಸೇದುವುದು, ತ್ಯಾಜ್ಯವಸ್ತುವನ್ನು ಎಲ್ಲೆಂದರಲ್ಲಿ ಹಾಕುವುದು ಇನ್ನೂ ನಡೆಯುತ್ತಲೇ ಇದೆ. ಒಮ್ಮೆ ಕ್ಷೇತ್ರದಿಂದ ಹೊರಟಾಗ ಮಹಾದ್ವಾರದ ಬಳಿ ಮುಂದೆ ಸಾಗುತ್ತಿದ್ದ ಕಾರನ್ನು ನಿಲ್ಲಿಸಿದ್ದರು. ಇದ್ದಕ್ಕಿದ್ದಂತೆ ವಾಹನದ ಕಿಟಕಿಯಿಂದ ಒಂದು ಪೊಟ್ಟಣ ಹೊರ ಬಂದು ರಸ್ತೆಗೆ ಬಿತ್ತು. ನಾನು ಕಾರು ನಿಲ್ಲಿಸಿ ‘ಈ ತರಹ ರಸ್ತೆಗೆ ತ್ಯಾಜ್ಯಗಳನ್ನು ಬಿಸಾಡಬಾರದು’ ಎಂದು ಹೇಳಿದಾಗ, ಕಾರಲ್ಲಿದ್ದವರು, ‘ಅವರು ಹಿರಿಯರು, ವಯಸ್ಸಾದವರು ಅವರಿಗೆೆ ಗೊತ್ತಾಗಲಿಲ್ಲ’ ಎಂದರು. ‘ಅವರಿಗೆ ನೀವು ಎಚ್ಚರಿಕೆ, ಮಾಹಿತಿ ನೀಡಿ, ಜ್ಞಾನಕೊಡಿ’ ಎಂದೆ. ಈಗ ವಾಹನದೊಳಗೆ ಚಾಕಲೇಟ್ ಸಿಪ್ಪೆಗಳು, ತಿಂಡಿಯ ಶೇಷ ಭಾಗಗಳನ್ನು ಇಡಲು ವ್ಯವಸ್ಥೆಗಳಿವೆ, ವೇಸ್ಟ್ ಹಾಕಲು ಸಣ್ಣ ಕಪ್ಗಳು ಬಂದಿವೆ. ವಿದೇಶಕ್ಕೆ ಹೋದಾಗ ಬಸ್ಗಳಲ್ಲಿ ಮೂರು ದಿವಸ ಕಾಲ ದೀರ್ಘ ಪ್ರಯಾಣ ಮಾಡುವ ಸಂದರ್ಭಗಳೂ ಬರುತ್ತಿತ್ತು. ‘ತ್ಯಾಜ್ಯ ವಸ್ತುಗಳನ್ನು ಈ ಪೆಟ್ಟಿಗೆಯಲ್ಲಿ ಹಾಕಿ’ ಎಂದು ಅವರು ಮೊದಲೇ ಹೇಳುತ್ತಿದ್ದರು. ವಾಹನದ ಚಾಲಕ ಗುರಿಮುಟ್ಟಿದ ನಂತರ ತ್ಯಾಜ್ಯವನ್ನು ಬಿಸಾಡಿ ಪೆಟ್ಟಿಗೆಯನ್ನು ಸ್ವಚ್ಛ ಮಾಡುತ್ತಿದ್ದ.
ಕರೊನಾ ಸಂಕಟ ತಂದಿದ್ದು ಹೌದಾದರೂ, ಈ ನೆಪದಲ್ಲಾದರೂ ಸತ್ಸಂಕಲ್ಪ, ಒಳ್ಳೆಯ ಅಭ್ಯಾಸಗಳು ಬರಲಿ, ವ್ಯಕ್ತಿಯ ಪರಿವರ್ತನೆಯಿಂದ ಸಮಾಜದಲ್ಲೂ, ದೇಶದಲ್ಲೂ ಮತ್ತು ಆ ಮೂಲಕ ಇಡೀ ವಿಶ್ವದಲ್ಲಿ ಸಾತ್ವಿಕ ಪರಿವರ್ತನೆ ಉಂಟಾಗಿ, ದುರಭ್ಯಾಸಗಳು ದೂರವಾಗಲಿ ಎಂದು ಆಶಿಸುತ್ತೇನೆ.
(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು)