

ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ. ಆದರೆ ಮನುಷ್ಯ ತಾನು ಬಯಸಿದ ರೀತಿಯಲ್ಲೇ ಪರಿಹಾರ ಬೇಕು ಎಂದು ಅಂದುಕೊಂಡರೆ ಅದೇ ದೊಡ್ಡ ಸಮಸ್ಯೆ ಮತ್ತು ಆ ಸಮಸ್ಯೆಗೆ ಎಂದೂ ಯಾವ ರೀತಿಯಲ್ಲೂ ಪರಿಹಾರವಿಲ್ಲ. ವೃದ್ಧ, ರೋಗಿ, ಹೆಣಗಳನ್ನು ಕಂಡ ಸಿದ್ಧಾರ್ಥನಿಗೆ, ‘ಇವುಗಳಾವುವೂ ಮನುಷ್ಯನನ್ನು ಕಾಡಬಾರದು ಅದಕ್ಕೆ ತಾನು ಪರಿಹಾರವನ್ನು ಕಂಡುಹಿಡಿಯಲೇ ಬೇಕು’ ಎನ್ನಿಸಿತು. ಆದರೆ ಪರಿಹಾರ ಸಿಕ್ಕಿದ್ದಾದರೂ ಹೇಗೆ! ಸತ್ತ ತನ್ನ ಮಗನನ್ನು ಬದುಕಿಸಿಕೊಡಿ ಎಂದು ಬಂದ ಕಿಸಾ ಗೌತಮಿಯ ಮಗನನ್ನು ಬುದ್ಧ ಬದುಕಿಸಿದನೇ? ‘ಸಾವಿಲ್ಲದ ಮನೆಯ ಸಾಸಿವೆ ತೆಗೆದುಕೊಂಡು ಬಾ’ ಎಂದು ಹೇಳಿ ಕಳಿಸಿದ.
ಅಷ್ಟೆಲ್ಲ ತಪಸ್ಸಿನ ನಂತರ ಅವನು ಕಂಡುಕೊಂಡ ಪರಿಹಾರ ಇಷ್ಟೇ. ಇರುವ ಪರಿಹಾರವಾದರೂ ಅಷ್ಟೇ! ವೃದ್ಧಾಪ್ಯ, ಕಾಯಿಲೆ, ಸಾವು ಅನಿವಾರ್ಯವಾಗಿ ನಾವು ಒಪ್ಪಿಕೊಳ್ಳಲೇಬೇಕಾದ, ಒಪ್ಪಿಕೊಂಡೇ ಜೀವಿಸಬೇಕಾದ ಸತ್ಯಗಳು. ಇದು ಯಾರಿಗೂ ಯಾವ ಕಾಲಕ್ಕೂ ಬಿಟ್ಟಿಲ್ಲ ಎಂದು ಸ್ವೀಕರಿಸುವುದೇ ಪರಿಹಾರ ; ಅರ್ಥಾತ್ ಕೆಲ ವಿಷಯಗಳ ಬಗ್ಗೆ ಜ್ಞಾನಿಯಾಗುವುದು, ಆ ಜ್ಞಾನದ ಆಧಾರದ ಮೇಲೆ ಧೋರಣೆಗಳನ್ನು ಬದಲಾಯಿಸಿಕೊಳ್ಳುವುದು ಇದೊಂದೇ ಪರಿಹಾರ. ಪ್ರತಿ ಜೀವಿಯ ಶರೀರವೂ ಅಸ್ತಿ, ಜಾಯತೇ, ವರ್ಧತೇ, ವಿಪರಿಣಮತೇ, ಅಪಕ್ಲೀಯತೆ, ವಿನಶ್ಯತಿ ಎಂಬ ಷಡ್ವಿಕಾರಗಳನ್ನು ಹೊಂದುತ್ತದೆ ಎಂದು ವೇದಾಂತ ಅಂದೇ ಪ್ರಸ್ತುತಪಡಿಸಿದೆ. ಆದ್ದರಿಂದ ಬಾಹ್ಯಜನ್ಯವಂತೆ ತೋರುತ್ತವಾದರೂ ಸಮಸ್ಯೆಗಳ ಮೂಲ ಇರುವುದು ಮನುಷ್ಯನ ಸಮ್ಯಕ್ ಜ್ಞಾನವನ್ನು ಆಧರಿಸದ ಧೋರಣೆಗಳಲ್ಲಿ. ಆದ್ದರಿಂದ ಪರಿಹಾರಗಳು ಬಹುಮಟ್ಟಿಗೆ ಆಂತರಿಕಜನ್ಯ. subjective ಹೊರತು objective ಅಲ್ಲ. ಈ subjective ಪರಿಹಾರಗಳೂ ಒಂದೇ ಒಂದು ವಿನಾಯಿತಿಯಿಲ್ಲದೆ ತಮ್ಮ ಮೂಲವನ್ನು ಪಡೆದುಕೊಂಡಿರುವುದು ‘ತಾನು ಯಾರು?’ ಎಂದು ಪ್ರತಿಯೊಬ್ಬ ಮನುಷ್ಯನೂ ತಿಳಿದುಕೊಳ್ಳಬೇಕಾದ ಅನಿವಾರ್ಯತೆಯಲ್ಲಿ.
ಸಾವು ಒಂದು ಘಟನೆ. ಅದು ಸಮಸ್ಯೆಯೇ ಅಲ್ಲ. ಅದನ್ನು ಸಮಸ್ಯೆಯಾಗಿ ಪರಿಗಣಿಸಿದ್ದೇ ಸಮಸ್ಯೆಯ ಮೂಲ ಎಂದು ತಿಳಿದಾಗ ಯಾವುದೂ ಒಂದು ಘಟನೆಯ ಮಟ್ಟಕ್ಕಿಂತ ಮೇಲೆ ಏರುವುದೇ ಇಲ್ಲ. ತೀವ್ರತೆಯನ್ನು ಪಡೆಯುವುದೇ ಇಲ್ಲ. ಭಯಾನಕವಾಗಿ ಕಾಣುವುದೇ ಇಲ್ಲ. ಸಾವೇ ಭಯಾನಕವಾಗುವುದಿಲ್ಲ ಎಂದಾಗ ಬೇರೆಯಾವುದಾದರೂ ಆಗುತ್ತೆ ಹೇಗೆ? ಸಾವಿಗಿಂತ ಗಂಭೀರ ಸಮಸ್ಯೆಯಾದರೂ ಯಾವುದಿದೆ? ಸಾವನ್ನು ಮೀರಿದವರು ನಾವು. ಸಾವಿನಾಚೆಗೂ ನಿಲ್ಲಬಲ್ಲವರು ನಾವು. ದೇಹತ್ಯಾಗ ಒಂದು ಘಟನೆ. ಜೀರ್ಣವಾದ ಶರೀರವನ್ನು ಬಿಟ್ಟು ನೂತನ ಶರೀರವನ್ನು ಪಡೆಯುವುದು ದುಃಖದಾಯಕವೇ? ಒಳಿತೇ ಆಯಿತಲ್ಲ ಎಂದು ನಿರ್ಲಿಪ್ತನಾಗಿಯೇ ಅದನ್ನು ನೋಡಬಹುದು. ಯಾವ ಸಮಸ್ಯೆಗೂ ಪರಿಹಾರವಿರುವುದು ನಾವು ಸಮಸ್ಯೆಯನ್ನು ಮೀರಿದವರು ಎಂದು ತಿಳಿಯುವುದರಲ್ಲಿ.
ಎಲ್ಲೇ ಮನಸ್ಸು ಗಾಬರಿಗೊಂಡಿರಲಿ, ಹೆದರಿರಲಿ ಅಲ್ಲೆಲ್ಲ ಪರಿಹಾರ ನಿಮ್ಮ ಮುಂದಿನ ಸವಾಲಿನ ಗಂಭೀರತೆ ನಿಮ್ಮ ಶಕ್ತಿಯನ್ನೂ ಮೀರಿದ್ದೋ ಇಲ್ಲವೇ ಅದಕ್ಕಿಂತ ಕೆಳಮಟ್ಟದ್ದೋ ಎಂದು ತಿಳಿಯುವುದರಲ್ಲೇ ಇದೆ. ತನ್ನ ವ್ಯಾಪಾರದಲ್ಲಿ ಸಾಕಷ್ಟು ನಷ್ಟವನ್ನನುಭವಿಸಿ ನಿದ್ರಾರಹಿತ ರಾತ್ರಿಗಳನ್ನು ಕಳೆಯುತ್ತಿದ್ದ ಬೃಹತ್ ಉದ್ದಿಮೆದಾರ ನ್ಯೂರ್ಯಾಕ್ನಲ್ಲಿ ಸ್ವಾಮಿ ವಿವೇಕಾನಂದರ ಉಪನ್ಯಾಸಗಳನ್ನು ಕೇಳುತ್ತ, ‘ಏನೂ ಚಿಂತಿಸಬೇಕಾಗಿಲ್ಲ, ಎಲ್ಲ ಸರಿಯಾಗಿಯೇ ಇದೆ’ ಎಂದು ಎಂದಿನ ಉತ್ಸಾಹದಿಂದಲೇ ಕೆಲಸಕ್ಕೆ ತೆರಳುತ್ತಿದ್ದುದನ್ನು ಕಂಡ ಸುಪ್ರಸಿದ್ಧ ಅಮೆರಿಕನ್ ಕಾದಂಬರಿಗಾರ್ತಿ ಎಲ್ಲಾ ವೀಲರ್ ವಿಲ್ಕಾಕ್ಸ ಸ್ವಾಮೀಜಿ ಹಾಗೂ ಅವರು ಬೋಧಿಸುತ್ತಿದ್ದ ವೇದಾಂತ ತತ್ವಗಳನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದೇ ಅಲ್ಲದೆ ವೇದಗಳ ಆಮೂಲಾಗ್ರ ಅಧ್ಯಯನದಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾಳೆ ಕೂಡ. ಇಲ್ಲಿ ವಿವೇಕಾನಂದರು ಉದ್ದಿಮೆಯಲ್ಲಿ ಲಾಭಗಳಿಸುವುದು ಹೇಗೆ ಎಂದು ಹೇಳಿಕೊಡಲಿಲ್ಲ. ಅಷ್ಟೇ ಏಕೆ ಪ್ರಪಂಚದ ಯಾವ ಅವತಾರ ಪುರುಷ, ಪ್ರವಾದಿಯೂ, ಯೋಗಿಯೂ ಬೇರಾವ ರೀತಿಯಲ್ಲೂ ಪರಿಹಾರಗಳನ್ನು ಕೊಟ್ಟಿಲ್ಲ.
ಅದು ವೇದ, ಗೀತೆ, ಬೈಬಲ್, ಕುರಾನ್ ಯಾವುದೇ ಆಗಲಿ ಅಲ್ಲೆಲ್ಲೂ ನಾನು ಕಾಣುವುದು ಆತ್ಮಜ್ಞಾನ! ನಾನಾರು? ನನಗೂ ಜಗತ್ತಿಗೂ, ಜಗತ್ತಿನ ಆಗುಹೋಗುಗಳಿಗೂ ಏನು ಸಂಬಂಧ? ಎಷ್ಟರ ಮಟ್ಟಿಗಿನ ಸಂಬಂಧ? ಸಂಬಂಧ ಓತಪ್ರೋತವೋ, ಮಿತಿಗಳನ್ನುಳ್ಳದ್ದೋ? ಈ ಜ್ಞಾನ ಪ್ರತಿಯೊಂದನ್ನೂ ಒಂದು ಘಟನೆಯನ್ನಾಗಿಯೇ ಇರಿಸುತ್ತದೆಯೇ ಹೊರತು ಪೆಡಂಭೂತ ಸಮಸ್ಯೆಯನ್ನಾಗಿಸುವುದಿಲ್ಲ. ಘಟನೆಗಳನ್ನು, ಸಮಸ್ಯೆಗಳನ್ನು ಮೀರಿ ನಿಲ್ಲುವ ಸಾಮರ್ಥ್ಯವೂ ಮನುಷ್ಯನಿಗಿದೆ. ಇದ್ದೇ ಇದೆ! ಅಷ್ಟೇಕೆ? ನಿರ್ಲಿಪ್ತನಾಗಿ ಪ್ರೇಕ್ಷಕನಂತೆ ನಿಂತು ಆನಂದಿಸುವ ಸಾಮರ್ಥ್ಯವೂ ಇದೆ. ಮೊದಲನೆಯದನ್ನು ಪ್ರವೃತ್ತಿ ಎಂದು ಕರೆದರೆ ಎರಡನೆಯದನ್ನು ನಿವೃತ್ತಿ ಎಂದು ಕರೆಯುತ್ತದೆ ವೇದ. ಮನುಷ್ಯನಾದವನು ತನ್ನ ಅಭಿರುಚಿಗೆ ತಕ್ಕಂತೆ ಯಾವುದನ್ನು ಬೇಕಾದರೂ ಆರಿಸಿಕೊಳ್ಳಬಹುದು. ಆತ್ಮವಂಚನೆ ಅಥವಾ ಮಿಥ್ಯಾಚಾರ ಸಲ್ಲ. ಅಷ್ಟೇ! ಅರ್ಜುನನಲ್ಲಿ ಈ ಮಿಥ್ಯಾಚಾರ ಮೆಲ್ಲಗೆ ತಲೆ ಎತ್ತುತ್ತಿದ್ದುದನ್ನು ಕಂಡ ಕೃಷ್ಣ ತನ್ನದೇ ಆದ ವಿಶಿಷ್ಟ ರೀತಿಯಲ್ಲಿ ಎಚ್ಚರಿಸಿದ ಮತ್ತು ಪರಿಹಾರವನ್ನೂ ಕೊಟ್ಟ. ಪ್ರವೃತ್ತಿಯ ಸಾಮರ್ಥ್ಯವೂ ಇದ್ದು ನಿವೃತ್ತಿಯನ್ನು ಅನುಸರಿಸಬೇಕೇ ಹೊರತು ಅಭಾವ ವೈರಾಗ್ಯ, ಸ್ಮಶಾನವೈರಾಗ್ಯಗಳಂತೆ ಆಗಬಾರದು ನಿವೃತ್ತಿ.
ಸ್ವಾಮಿ ವಿವೇಕಾನಂದರು ಭಾರತೀಯರಿಗೆ ಕೊಟ್ಟ ಸಂದೇಶ ‘Face the brutes’! ‘ಎದ್ದು ನಿಂತು ಧೀರನಂತೆ ಎದುರಿಸು’ ಎಂದು. ಇದರ ಹಿನ್ನೆಲೆಯಲ್ಲಿ ಒಂದು ಕುತೂಹಲಕಾರಿ ಘಟನೆಯೂ ಇದೆ. ಒಂದು ದಿನ ಬೆಳಗ್ಗೆ ಸ್ವಾಮೀಜಿ, ವಾರಾಣಸಿಯಲ್ಲಿ ಶ್ರೀದುರ್ಗೆಯ ದರ್ಶನ ಮಾಡಿಕೊಂಡು ಬರುತ್ತಿದ್ದರು. ದಾರಿಯ ಒಂದು ಪಕ್ಕದಲ್ಲಿ ಎತ್ತರದ ಗೋಡೆ, ಇನ್ನೊಂದು ಪಕ್ಕಕ್ಕೆ ವಿಶಾಲವಾದ ಸರೋವರ. ಆಗ ಕೋತಿಗಳ ಹಿಂಡೊಂದು ಎದುರಾಗಿ ಅವರನ್ನು ಮುತ್ತಿಕೊಂಡಿತು. ಅವು ಅವರನ್ನು ಆ ದಾರಿಯಾಗಿ ಮುಂದುವರಿಯಲು ಬಿಡುವಂತೆ ಕಾಣಲಿಲ್ಲ. ಸ್ವಾಮೀಜಿ ಬೇಗ ದಾಪುಗಾಲು ಹಾಕುತ್ತ ಅಲ್ಲಿಂದ ಹಿಂದಿರುಗಲು ನೋಡಿದರು. ಆದರೆ ಆ ಕೋತಿಗಳು-ಬನಾರಸಿನ ಮೂರೂವರೆ ನಾಲ್ಕು ಅಡಿ ಎತ್ತರದ ಬೃಹತ್ ಕೋತಿಗಳು- ಗಟ್ಟಿಯಾಗಿ ಕಿರುಚುತ್ತ, ವಿಚಿತ್ರವಾಗಿ ಹಲ್ಲು ಕಿರಿಯುತ್ತ ಅಟ್ಟಿಸಿಕೊಂಡು ಬಂದವು. ಅವರ ಕಾಲುಹಿಡಿದು ಎಳೆಯಲು ಪ್ರಯತ್ನಿಸಿದವು! ಆಗ ಸ್ವಾಮೀಜಿ ಓಡಲಾರಂಭಿಸಿದರು. ಅವರು ಓಡಿದಂತೆಲ್ಲ ಕೋತಿಗಳು ಇನ್ನೂ ವೇಗವಾಗಿ ಅಟ್ಟಿಸಿಕೊಂಡು ಬಂದು ಕಚ್ಚಲು ಪ್ರಯತ್ನಿಸಿದವು! ಸ್ವಾಮೀಜಿ ಇನ್ನು ಓಡದಾದರು ; ಅವುಗಳ ಕೈಗೆ ಸಿಕ್ಕಿಬೀಳು ವುದೇ ಖಂಡಿತ ಎನ್ನಿಸಿತು. ಈ ಸಮಯಕ್ಕೆ ಸರಿಯಾಗಿ ಎದುರುಗಡೆಯಿಂದ ಬಂದ ವೃದ್ಧ ಸಾಧುವೊಬ್ಬರು ಕೂಗಿದ್ದು ಅವರ ಕಿವಿಗೆ ಬಿತ್ತು: ‘ಆ ಪ್ರಾಣಿಗಳನ್ನು ಎದುರಿಸು’! ‘Face the brutes’! ಈ ಮಾತು ಮಿಂಚಿನಂತೆ ಕೆಲಸಮಾಡಿತು.
ಸ್ವಾಮೀಜಿಗೆ ಏನು ಮಾಡಬೇಕು ಎನ್ನುವುದು ಹೊಳೆಯಿತು. ಕೋತಿಗಳಿಗೆ ಬೆನ್ನು ಮಾಡಿ ಓಡುತ್ತಿದ್ದವರು ಇದ್ದಕ್ಕಿದ್ದಂತೆ ಧೈರ್ಯವಾಗಿ ಎದುರಿಸಿ ನಿಂತರು. ಆತ್ಮರಕ್ಷಣೆಗೆ ಸಿದ್ಧರಾಗಿ ನಿಂತು ಅವುಗಳನ್ನು ದುರುಗುಟ್ಟಿ ನೋಡಿದರು. ಏನಾಶ್ಚರ್ಯ! ತಕ್ಷಣ ಆ ಕೋತಿಗಳು ಓಟಕಿತ್ತವು! ಅಬ್ಬಾ, ಎಂತಹ ಬಿಡಗಡೆ! ವಿಸ್ಮಯ, ಸಂತೋಷಗಳಿಂದ ಸ್ವಾಮೀಜಿ, ಸಕಾಲದಲ್ಲಿ ಸಹಾಯಕ್ಕೊದಗಿದ ಆ ವೃದ್ಧ ಸಾಧುವಿಗೆ ಕೃತಜ್ಞತೆಯಿಂದ ನಮಿಸಿದರು. ಆ ಸಾಧುವೂ ಮುಗುಳ್ನಗುತ್ತ ಪ್ರತಿ ನಮಸ್ಕಾರ ಮಾಡಿ ಹೊರಟು ಹೋದರು. ಈ ಘಟನೆಯಿಂದ ಸ್ವಾಮೀಜಿ ಒಂದು ಅದ್ಭುತವಾದ ಪಾಠವನ್ನು ಕಲಿತರು. ಮುಂದೆ ಅವರು ನ್ಯೂರ್ಯಾನಲ್ಲಿ ಭಾಷಣ ಮಾಡುವಾಗ ಈ ಘಟನೆಯನ್ನು ಉದಾಹರಿಸುತ್ತ ಹೇಳುತ್ತಾರೆ: ‘ನಮ್ಮ ಇಡೀ ಜೀವನಕ್ಕೆ ಅನ್ವಯಿಸುವ ದೊಡ್ಡ ಪಾಠ ಇದು. ಕಷ್ಟಗಳನ್ನು ಧೈರ್ಯವಾಗಿ ಎದುರಿಸಿ. ಭಯಂಕರ ಕಷ್ಟಕಾರ್ಪಣ್ಯಗಳನ್ನು ಕಂಡು ಹೆದರಿ ಓಡಿಹೋಗುವ ಬದಲು ಎದುರಿಸಿ ನಿಂತದ್ದೇ ಆದರೆ, ಅವು ಆ ಕೋತಿಗಳಂತೆಯೇ ಪಲಾಯನ ಮಾಡುತ್ತವೆ. ನಾವು ಬಂಧಮುಕ್ತರಾಗಬೇಕು, ಚಿರಸ್ವಾತಂತ್ರ್ಯ ಗಳಿಸಬೇಕು ಎಂದಿದ್ದರೆ ಅದು ಪ್ರಕೃತಿಯನ್ನು ವಶ ಮಾಡಿಕೊಳ್ಳುವುದರ ಮೂಲಕವೇ ಹೊರತು ಪ್ರಕೃತಿಗೆ ಶರಣಾಗುವುದರಿಂದಲ್ಲ, ಓಡಿಹೋಗುವುದರಿಂದಲ್ಲ.
ಹೇಡಿಗಳು ಎಂದೆಂದಿಗೂ ಜಯಶಾಲಿಗಳಾಗಲಾರರು. ನಮ್ಮಲ್ಲಿರುವ ಭಯ, ಅಜ್ಞಾನಗಳೂ, ನಮ್ಮನ್ನು ಕಿತ್ತುತಿನ್ನುವ ಕಷ್ಟಕಾರ್ಪಣ್ಯಗಳೂ ತೊಲಗಬೇಕಾದರೆ ನಾವು ಅವುಗಳನ್ನು ಎದುರಿಸಿ ಹೋರಾಡಬೇಕು’. ಯಾವ ಕಷ್ಟವನ್ನೂ ನಮ್ಮ ಕಾಲಿನಡಿ ಹಾಕಿಕೊಂಡು ಹೊಸಕಿ ಹಾಕಿ ಬಿಡಬಹುದು. ಇಲ್ಲಿ ಆತ್ಮಜ್ಞಾನದಷ್ಟು ಅರ್ಥಾತ್ ನಾನು ಆತ್ಮನೇ, ಎಂದೆಂದಿಗೂ ಆತ್ಮನೇ ಎಂಬ ನಿಸ್ಸಂಶಯವಾದ ನಂಬಿಕೆಯಷ್ಟು ಪರಿಣಾಮಕಾರಿ ಇನ್ನೊಂದಿಲ್ಲ. ಯಾವುದನ್ನು ಮತ್ತಾವುದೂ ಮೀರಿಸಲಾರದೋ ಅದೇ ಆತ್ಮ. ಕಠೋಪನಿಷತ್ ದಿಗ್ತಟಗಳು ಅನುರಣಿತವಾಗುವಂತೆ ಮೊಳಗುತ್ತವೆ ಇದನ್ನು. ಕೋತಿಗಳು ಕಾಡಿದಾಗ ವಿವೇಕಾನಂದರಿಗೆ ನೆರವಾಗಿದ್ದಾದರೂ ಏನು? ತಮ್ಮೊಳಗಿಂದ ತಾವು ಪಡೆದುಕೊಂಡ ಭರವಸೆಯೇ! ಧೈರ್ಯವೇ! ಅಮೆರಿಕದ ಉದ್ದಿಮೆದಾರನಿಗೆ ಹೊಳೆದ ಭರವಸೆಗಳಾದರೂ ಯಾವ ಮೂಲದ್ದು? ತಾನು ನಿಭಾಯಿಸಬಲ್ಲೆ ಎಂಬ ಆತ್ಮವಿಶ್ವಾಸವೇ! ಆತ್ಮವಿಶ್ವಾಸ, ಇದೇ ದಾರಿ. ಅದು ಧೈರ್ಯವನ್ನು ಕೊಡುತ್ತದೆ, ಧೃತಿಗೆಡದಂತೆ ಮಾಡುತ್ತದೆ, ಹೋರಾಟವನ್ನು ನಿಲ್ಲಿಸದಂತೆ ಮಾಡುತ್ತದೆ. ಸೋಲನ್ನೇ ಒಪ್ಪಿಕೊಳ್ಳದಂತೆ ಮಾಡುತ್ತದೆ. ಅಸಾಧ್ಯಗಳೂ ಸಾಧ್ಯವಾಗುವಂತೆ ಮಾಡುತ್ತದೆ.
ಈ ಸಂದರ್ಭದಲ್ಲಿ ನನಗೆ ಕಣ್ಣೆದುರಿಗೆ ಎದ್ದು ಕಾಣುವ ಇನ್ನೊಂದು ಘಟನೆ ಅಮೆರಿಕದ ನೀಗ್ರೋ ಹುಡುಗಿ ವಿಲ್ಮಾ ರುಡಾಲ್ಪಳದ್ದು. ಸಂಕ್ಷಿಪ್ತವಾಗಿ ಅದರ ವಿವರಣೆ ಪ್ರಸ್ತುತವೆನಿಸುತ್ತದೆ. ಪೊಲಿಯೋದಿಂದ ಕಾಲು ಕಳೆದುಕೊಂಡ ವಿಲ್ಮಾಳಿಗೆ ಇಡೀ ಅಮೆರಿಕದ ವೈದ್ಯ ಸಮುದಾಯ ಹೇಳಿದ್ದು, ‘ನಿನ್ನ ಈ ಜನ್ಮದಲ್ಲಿ ಇನ್ನು ಕಾಲು ಸರಿಯಾಗಲಾರದು. ಕಂಕುಳಲ್ಲಿ ಊರುಗೋಲು (ಇ್ಠ್ಚಛಿಠ) ಇಟ್ಟುಕೊಂಡು ನಡೆಯಬೇಕಷ್ಟೇ’. ಅದಾವ ದೇವರ ಕೃಪೆಯೋ ಅವಳಿಗೆ. ಯಾರು ಎಷ್ಟು ಹೇಳಿದರೂ ಅವಳ ಮನಸ್ಸು ಸೋಲೊಪ್ಪಿಕೊಳ್ಳಲು ತಯಾರಿಲ್ಲ. ಅತ್ತು ಗೋಗರೆಯುತ್ತಿದ್ದ ಅವಳಿಗೆ ಅವಳ ದೈಹಿಕ ಶಿಕ್ಷಣ ತರಬೇತುದಾರ ಹೇಳಿದ್ದು ಪ್ರತಿನಿತ್ಯ ಶಾಲೆಯ ಮೈದಾನದಲ್ಲಿ ಗಂಟೆಗಟ್ಟಲೇ ಅಭ್ಯಾಸ ಮಾಡಿದ್ದೇ ಆದರೆ ಪರಿಸ್ಥಿತಿ ಸುಧಾರಿಸಬಹುದು ಎಂದು. ನೂರಕ್ಕೆ ನೂರು ಈ ಸೂಚನೆಯನ್ನು ಪಾಲಿಸಿದ ವಿಲ್ಮಾ, ಕೆಲವು ವರ್ಷಗಳು ಮುಷ್ಟಿಗಟ್ಟಿ ಛಲದಿಂದ ನಡೆಯುವುದನ್ನು ಅಭ್ಯಾಸ ಮಾಡಿ ಕೊನೆಗೂ ಊರುಗೋಲಿಲ್ಲದೆ ನಡೆದೇ ಬಿಟ್ಟಳು! ಓಡಿಯೂ ಬಿಟ್ಟಳು! ಅಮೆರಿಕದಲ್ಲೇ ಅಷ್ಟೇಕೆ ಇಡೀ ಪ್ರಪಂಚದಲ್ಲೇ ಅತ್ಯಂತ ವೇಗವಾಗಿ ಓಡುವ ಹುಡುಗಿಯೂ ಆದಳು.
ಒಲಂಪಿಕ್ಸ್ನಲ್ಲಿ ತನ್ನ ದೇಶವನ್ನು ಪ್ರತಿನಿಧಿಸಿ ಮೂರ್ನಾಲ್ಕು ಸ್ವರ್ಣ ಪದಕಗಳನ್ನು ಗಿಟ್ಟಿಸಿಯೂಬಿಟ್ಟಳು. ಇದು ಆತ್ಮಶ್ರದ್ಧೆ, ಆತ್ಮವಿಶ್ವಾಸಗಳ ಫಲ. ಪ್ರಕೃತಿಯ ಸವಾಲುಗಳನ್ನು ನಾವು ಸಮಸ್ಯೆಗಳು ಎಂದು ತಪ್ಪಾಗಿ ಅರ್ಥೈಸುತ್ತೇವೆ. ಅವು ಸವಾಲುಗಳೇ ಹೊರತು ಸಮಸ್ಯೆಗಳಲ್ಲ. ನಮ್ಮ ಅಂತಃಸತ್ವವನ್ನು ಹೊರಗೆಳೆಯಲು ಸವಾಲುಗಳು ಬಹಳಷ್ಟು ಸಹಾಯಕಾರಿ, ಅತ್ಯವಶ್ಯ ಎಂದರೂ ಸರಿಯೇ. ಶಾರೀರಿಕ ವೈಕಲ್ಯವಾಗಲಿ, ಸಾವು, ಕಾಯಿಲೆ, ಬಡತನ, ಅವಮಾನ, ಸೋಲು ಇವುಗಳಿಗೆಲ್ಲ ಪ್ರಕೃತಿಯೇ ಮೂಲ. ಪ್ರಕೃತಿಜನ್ಯ, ಆತ್ಮಜನ್ಯವಲ್ಲ. ಪ್ರಕೃತಿ ಯಾವ ಕಾರಣಕ್ಕೂ ಆತ್ಮನಷ್ಟು ಪ್ರಬಲವಲ್ಲ. ಅಷ್ಟೇ ಏಕೆ ಆತ್ಮನ ಶಕ್ತಿಯ ಮುಂದೆ ಶರಣಾಗುವುದೇ ಅದರ ಲಕ್ಷಣ. ಆತ್ಮನಿಂದ ಆಳಲ್ಪಡುವುದಕ್ಕೆ ಅದಕ್ಕೆ ಇಷ್ಟ ಕೂಡ. ‘ಧೀರಾಃ ಭೋಗ್ಯಾ ವಸುಂಧರಾ’ ಎನ್ನುತ್ತದೆ ಆರ್ಯೋಕ್ತಿ, ಅರ್ಥಾತ್ ‘ಪ್ರಕೃತಿ ಧೀರನಿಂದ ಆಳಲ್ಪಡುತ್ತಾಳೆ’. ಧೈರ್ಯವಂತನೇ ಧೀರ. ಜ್ಞಾನಿಯ ಮೊದಲ ಲಕ್ಷಣವೇ ‘ಅಭಯಂ’ ಎನ್ನುತ್ತದೆ ಭಗವದ್ಗೀತೆ.
ಧರ್ಮದ ಹತ್ತು ಲಕ್ಷಣಗಳಲ್ಲಿ ‘ಧೃತಿ’ ಮೊದಲ ಲಕ್ಷಣ ಎನ್ನುತ್ತದೆ ಸ್ಮೃತಿ. ‘ಹೇಡಿ, ಬಲಹೀನನಿಗೆ ಎಂದಿಗೂ ಆತ್ಮನು ಲಭಿಸುವುದಿಲ್ಲ’ ಎನ್ನುತ್ತದೆ ಕಠೋಪನಿಷತ್. ಈ ಆತ್ಮನೇ ನಮ್ಮ ಅಸ್ತಿತ್ವದಲ್ಲಿ ಓತಪೋ›ತವಾಗಿರುವುದು ; ಬೀಜದಲ್ಲಿ ಎಣ್ಣೆ ಇರುವಂತೆ. ಅದರೊಡನೆ ನಮ್ಮನ್ನು ಅನ್ಯೋನ್ಯವಾಗಿಸಿಕೊಳ್ಳುವುದೆ, ಅವಿನಾ ಸಂಬಂಧವನ್ನು ಹೊಂದುವುದೇ, ಅದೇ ನಮ್ಮ ಅಸ್ತಿತ್ವದ ಸಾರವಾಗುವುದೇ ಅರ್ಥಾತ್ ನಾವು ಅದೇ ಆಗುವುದೇ ಆತ್ಮಜ್ಞಾನ, ಆತ್ಮಶ್ರದ್ಧೆ, ಆತ್ಮವಿಶ್ವಾಸ. ವಿಲ್ಮಾ ರುಡಾಲ್ಪ್ ಈಗಿಲ್ಲ, ಅವಳು ತೀರಿಕೊಂಡಾಗ ಅಮೆರಿಕದ ಅಧ್ಯಕ್ಷರು ಅವಳ ಮೃತದೇಹದ ಮುಂದೆ ನಿಂತು, ಹ್ಯಾಟ್ ತೆಗೆದು, ತಲೆ ಬಗ್ಗಿಸಿ ‘ವಿಲ್ಮಾ, ಇಡೀ ಜಗತ್ತೇ ನಿನ್ನನ್ನು ಸ್ಮರಿಸುತ್ತದೆ’ ಎಂದು ಉದ್ಗರಿಸಿದ್ದರು. ಈ ಆತ್ಮವಿಶ್ವಾಸವನ್ನು ಕುರಿತು ಅದೆಷ್ಟು ಹೇಳಿದರೂ ವಿವೇಕಾನಂದರಿಗೆ ತೃಪ್ತಿ ಇಲ್ಲ. ಭಾರತೀಯರಿಗೆ ಅದು ಬಹಳ ಅವಶ್ಯಕವಿದೆ. ಅದೇ ಯಾವುದೇ ಸಾಧಕನಿಗೆ ಬೇಕಾದ ಮೊದಲ ತರಬೇತಿ ಮತ್ತು ಪ್ರಮುಖ ತರಬೇತಿ.