ಶ್ವಾಸಕೋಶದ ಆರೋಗ್ಯ ಕಾಪಾಡುವ ನಾನಾ ಮಾರ್ಗಗಳು

Lungs
Published on
ಕರೊನಾ ವೈರಸ್ ಶ್ವಾಸಕೋಶವನ್ನು ತಿಂದು ಹಾಕುತ್ತದೆ ಎಂಬುದು ತುಂಬಾ ಜನರ ಕಲ್ಪನೆ. ಆದರೆ ವೈರಸ್ ಅನ್ನು ಹೊಡೆಯಲು ಹೋಗಿ ನಮ್ಮ ರೋಗ ನಿರೋಧಕ ಶಕ್ತಿಯೇ ಶ್ವಾಸಕೋಶವನ್ನು ನಾಶಪಡಿಸಿಬಿಡುತ್ತದೆ. ಈ ಕಾರಣದಿಂದಾಗಿ ಆಕ್ಸಿಜನ್​ನ ಕೊರತೆ ದೇಹಕ್ಕಾಗುತ್ತದೆ. ಹಾಗಾಗಿ ನಮ್ಮ ಶ್ವಾಸಕೋಶವನ್ನು ಬಲಪಡಿಸುವ ಹಾಗೂ ತನ್ಮೂಲಕ ಶ್ವಾಸಕೋಶವನ್ನು ಕಾಡುವ ಹಲವಾರು ಕಾಯಿಲೆಗಳಿಂದ ನಮ್ಮನ್ನು ರಕ್ಷಿಸಿಕೊಳ್ಳುವ ಹಲವಾರು ದಾರಿಗಳಿವೆ. ಅಂಥ ಮಾರ್ಗಗಳ ಬಗ್ಗೆ ಒಂದಿಷ್ಟು ಮಾಹಿತಿ ನಿಮಗಾಗಿ ಇಲ್ಲಿವೆ.

ಶ್ವಾಸಕೋಶದ ಆರೋಗ್ಯ ರಕ್ಷಣೆ ವಿಷಯದಲ್ಲಿ ಅತ್ಯಂತ ಉಪಯೋಗಿಯಾದದ್ದು ಮತ್ತು ಸಾಧ್ಯವಾದಷ್ಟೂ ಚಿಕ್ಕ ವಯಸ್ಸಿನಿಂದಲೇ ರೂಢಿಸಿಕೊಳ್ಳಬೇಕಾದ್ದೆಂದರೆ ಯೋಗಾಸನಗಳ ಅಭ್ಯಾಸ. ಸೂರ್ಯ ನಮಸ್ಕಾರ, ಭುಜಂಗಾಸನ, ತ್ರಿಕೋನಾಸನ, ಮತ್ಸ್ಯಾಸನದಂಥ ಬಹಳಷ್ಟು ರೀತಿಯ ಆಸನಗಳು ನಮ್ಮ ಶ್ವಾಸಕೋಶಗಳ ಬಲವನ್ನು ಹೆಚ್ಚಿಸುತ್ತವೆ. ಇಂದು ಕರೊನಾವಾದರೆ ಇನ್ನೊಂದಿಷ್ಟು ವರ್ಷಗಳ ನಂತರ ಇನ್ನೊಂದು ಯಾವುದೋ ನಮ್ಮನ್ನು ಕಾಡಿಯೇ ಕಾಡುತ್ತದೆ. ಹಾಗಾಗಿ ನಮ್ಮ ಮಕ್ಕಳಿಗಾದರೂ ಈಗಿಂದಲೇ ಯೋಗಾಭ್ಯಾಸದ ಹುಚ್ಚನ್ನು ಬೆಳೆಸಬೇಕು. ಪ್ರಾಣಾಯಾಮವಂತೂ ಹೆಸರೇ ಹೇಳುವಂತೆ ಉಸಿರಿಗೇ ಸಂಬಂಧಿಸಿದ್ದು. ಪ್ರಾಣಾಯಾಮವನ್ನು ಸರಿಯಾದ ರೀತಿಯಲ್ಲಿ ನಿತ್ಯವೂ ಅಭ್ಯಾಸ ಮಾಡುವವನಿಗೆ ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳು ಬರುವುದು ಅಷ್ಟು ಸುಲಭವಲ್ಲ. ಶ್ವಾಸಕೋಶ ಹಾಳಾಗುತ್ತಿರುವಾಗ, ದೇಹದಲ್ಲಿ ಆಮ್ಲಜನಕದ ಕೊರತೆ ಆಗುತ್ತಿರುವಾಗ ಕೂಡ ಅನುಲೋಮ-ವಿಲೋಮದಂತಹ ಪ್ರಾಣಾಯಾಮಗಳು ಸಹಕಾರಿ ಎಂಬ ವಾದ ಕೇಳಿಬರುತ್ತಿದೆ. ಇದರ ಸತ್ಯಾಸತ್ಯತೆ ಏನೇ ಇದ್ದರೂ ಪ್ರಾಣಾಯಾಮ ಸಹಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. ಯೋಗ ಗುರುಗಳ ಹತ್ತಿರ ಸರಿಯಾದ ರೀತಿಯಲ್ಲಿ ಕಲಿತು ಆಸನ, ಪ್ರಾಣಾಯಾಮ, ಮುದ್ರೆಗಳನ್ನು ಮಾಡುವುದು ಒಳ್ಳೆಯದು.

ಆಹಾರ ಹೇಗಿರಬೇಕು?

ನಾವು ಸೇವಿಸುವ ಆಹಾರ ನಮ್ಮ ದೇಹದ ಕಣಕಣದ ಆರೋಗ್ಯವನ್ನೂ ನಿರ್ಧರಿಸುತ್ತದೆ. ಹಾಗಾಗಿ ನಮ್ಮ ಶ್ವಾಸಕೋಶದ ಆರೋಗ್ಯ ಚೆನ್ನಾಗಿರಬೇಕೆಂದರೆ ನಮ್ಮ ಆಹಾರ ಸರಿಯಾಗಿರಲೇಬೇಕು. ತೊಂದರೆಯಾದಾಗಲೊಮ್ಮೆ ಅಥವಾ ಸಾಂಕ್ರಾಮಿಕ ರೋಗ ಹರಡಿದಾಗ ಮಾತ್ರ ಆಹಾರದಲ್ಲಿ ಕಾಳಜಿ ವಹಿಸುವುದಲ್ಲ. ಸರಿಯಾದ ಆಹಾರ ಪದ್ಧತಿ ನಮ್ಮ ಜೀವನಶೈಲಿಯೇ ಆಗಿಬಿಡಬೇಕು. ಪದೇ ಪದೇ ಕರಿದ ಪದಾರ್ಥಗಳನ್ನು ತಿನ್ನುವುದು, ಹೇರಳವಾಗಿ ರಾಸಾಯನಿಕಗಳನ್ನು ಹಾಕಿರುವ ಸಿದ್ಧ ಆಹಾರಗಳನ್ನು ಸೇವಿಸುವುದು, ರಾಸಾಯನಿಕ ಭರಿತ ತಂಪು ಪಾನೀಯಗಳನ್ನು ಸೇವಿಸುವುದು ಶ್ವಾಸಕೋಶದ ಮೇಲೆ ತುಂಬಾ ದೊಡ್ಡ ಪ್ರಮಾಣದಲ್ಲಿ ಕೆಟ್ಟ ಪರಿಣಾಮವನ್ನು ಉಂಟುಮಾಡುತ್ತವೆ. ಪ್ರತಿನಿತ್ಯ ಒಂದಿಲ್ಲೊಂದು ರೀತಿಯಲ್ಲಿ ಹೆಚ್ಚು ಹೆಚ್ಚಾಗಿ ಶುಂಠಿ, ಕಾಳುಮೆಣಸು, ಜೀರಿಗೆ ಮುಂತಾದ ಎಲ್ಲ ರೀತಿಯ ಸಾಂಬಾರ ಪದಾರ್ಥಗಳನ್ನು ಬಳಸಿದರೆ ದೇಹದಲ್ಲಿ ಕಫ ಕಡಿಮೆಯಾಗಿ ಶ್ವಾಸಕೋಶದ ಆರೋಗ್ಯ ಹೆಚ್ಚುತ್ತದೆ. ಒಳ್ಳೆಯ ಕೊಬ್ಬಿನ ಸೇವನೆ ಕೂಡ ಈ ವಿಷಯದಲ್ಲಿ ಸಹಕಾರಿ. ಇನ್ನು, ನಮ್ಮ ದಿನಚರಿ ಕೂಡ ಈ ವಿಷಯದಲ್ಲಿ ಮುಖ್ಯವಾದುದು. ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದು, ದೈಹಿಕ ವ್ಯಾಯಾಮ, ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಇವೆಲ್ಲ ತುಂಬ ಅನುಕೂಲಕರ. ಅತಿಯಾದ ಭೋಜನ, ಪದೇ ಪದೇ ಆಹಾರ ಸೇವಿಸುವುದು, ಹಗಲುನಿದ್ದೆ, ರಾತ್ರಿ ತಡವಾಗಿ ಊಟ ಮಾಡುವುದು, ಊಟ ಮಾಡಿದ ತಕ್ಷಣ ಮಲಗುವುದು ಇವೆಲ್ಲ ನಿಧಾನವಾಗಿ ಶ್ವಾಸಕೋಶವನ್ನು ಹಾಳು ಮಾಡುತ್ತ ಹೋಗುತ್ತವೆ.

ಮನಸ್ಸಿನ ನಿಯಂತ್ರಣ: ಆಹಾರದಂತೆಯೇ ಮನಸ್ಸು ಸಹ ಇಡೀ ದೇಹದ ಮೇಲೆ ಪರಿಣಾಮ ಬೀರುತ್ತದೆ. ಸಿಟ್ಟು, ಕಿರಿಕಿರಿ, ದುರಾಸೆ, ದಾವಂತಗಳು ದುಷ್ಪರಿಣಾಮ ಬೀರಿದರೆ ತೃಪ್ತಿ, ಕರುಣೆ, ಪ್ರೇಮದ ಭಾವನೆಗಳು ಧನಾತ್ಮಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯವನ್ನು ಕಾಪಾಡುತ್ತವೆ. ಇಡೀ ದಿನದಲ್ಲಿ ಸ್ವಲ್ಪ ಸಮಯ ಮಾಡಿಕೊಂಡು ತುಳಸಿ, ಅಶ್ವತ್ಥ ಅಥವಾ ಪರಿಮಳಯುಕ್ತ ಹೂಗಳಿರುವ ಪ್ರದೇಶದಲ್ಲಿ ನಡಿಗೆ, ಧ್ಯಾನ ಮುಂತಾದ ಕ್ರಿಯೆಗಳನ್ನು ಮಾಡುವುದರಿಂದ ಭಯ ಸೃಷ್ಟಿಸುವ ಇಂತಹ ವಾತಾವರಣದಲ್ಲಿ ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಕಾರಿಯಾಗುತ್ತವೆ.

ವಾರಕ್ಕೊಮ್ಮೆ ಅಥವಾ 15 ದಿನಕ್ಕೊಮ್ಮೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಉಪ್ಪು ನೀರು ಕುಡಿದು ವಾಂತಿ ಮಾಡುವುದರಿಂದ ಕಫದ ವಾಂತಿಯಾದರೆ ಅನುಕೂಲವಾಗುತ್ತದೆ. (ಹೃದ್ರೋಗ, ಅಲ್ಸರ್​ನಂತಹ ಸಮಸ್ಯೆಗಳಿರುವವರು ಮಾಡುವುದು ಬೇಡ) ವಮನ, ವಿರೇಚನದಂತಹ ಪಂಚಕರ್ಮ ಚಿಕಿತ್ಸೆಗಳನ್ನು ವರ್ಷಕ್ಕೊಮ್ಮೆ ಮಾಡಿಸುವುದರಿಂದ ಶ್ವಾಸಕೋಶಕ್ಕೆ ಸಂಬಂಧಿಸಿದ ರೋಗಗಳು ವಾಸಿಯಾಗುವುದಲ್ಲದೇ ಶ್ವಾಸಕೋಶದ ಬಲವೃದ್ಧಿಯೂ ಆಗುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net