

ಈ ಭೂಮಿಯ ಅಳಿದುಳಿದ ನೀರಿನ ಸಂಪತ್ತು ನಾಳಿನ ಪೀಳಿಗೆಗೂ ಉಳಿಯುವಂತಾಗಲು ಅನುದಿನವೂ ಜಲ ನಿರ್ವಹಣೆ ಅಗತ್ಯ. ಸುಸ್ಥಿರ ಅಭಿವೃದ್ಧಿಗೆ ಅದೇ ಪೂರಕ. ಆ ನಿಟ್ಟಿನಲ್ಲಿ ನಡೆಯುತ್ತಿರುವ ಕೆಲ ಪ್ರಯತ್ನಗಳ ಪರಿಚಯ ಇಲ್ಲಿದೆ. ಇಂತಹ ಜಾಣ್ಮೆಗಳ ಅಳವಡಿಕೆ ಜತೆಗೆ ನೀರಿನ ಅನವಶ್ಯಕ ದುಂದುಗಾರಿಕೆ, ಮರಳು ಗಣಿಗಾರಿಕೆ, ಅರಣ್ಯ ಧ್ವಂಸ, ನದಿ-ಹಳ್ಳಗಳ ಒತ್ತುವರಿಗೆ ಕಡಿವಾಣ ಹಾಕಲೇಬೇಕಿದೆ. ಹಾಗೆ ಮಾಡಿದಲ್ಲಿ ಮಾತ್ರ ಈ ಭೂಗ್ರಹವೆಂಬ ‘ಹೋಮ್ ಉಳಿಯುತ್ತದೆ. ಇದು ನಮ್ಮ ಮಕ್ಕಳಿಗಾಗಿ ನಾವು ಮಾಡಬಹುದಾದ ಬಹುದೊಡ್ಡ ‘ಹೋಮ್ ವರ್ಕ್’.
ಇಳಿಜಾರನ್ನು ನೋಡಿಕೊಂಡು ಒಂದು ಎಕರೆ ವ್ಯಾಪ್ತಿಯಲ್ಲಿ ಬೃಹತ್ ಕೆರೆ ನಿರ್ವಿುಸಲಾಗಿದೆ. ಇದು 25 ಲಕ್ಷ ಲೀಟರ್ ನೀರನ್ನು ಹಿಡಿಯುವ ಸಾಮರ್ಥ್ಯ ಹೊಂದಿದೆ. ಜತೆಗೆ ಕೆರೆಯ ಮೇಲ್ಭಾಗದ ಎರಡೂ ಬದಿಯಿಂದ ತಲಾ ಮೂರರಂತೆ ಆರು ಸಣ್ಣ ಹೊಂಡಗಳನ್ನು ಒಂದಾದ ಮೇಲೊಂದರಂತೆ ಮಾಡುತ್ತಾ ಬಂದಿದ್ದು ಅವುಗಳ ನೀರು ಕೆರೆಗೆ ಸೇರುತ್ತದೆ. ಹೊಂಡಗಳು ಒಂದು ಗುಂಟೆ ವ್ಯಾಪ್ತಿಯಲ್ಲಿವೆ. ಇವು ಒಮ್ಮೆ ತುಂಬಿದರೆ ತಲಾ ಒಂದು ಲಕ್ಷ ಲೀಟರ್ ನೀರನ್ನು ಹಿಡಿದು ಇಂಗಿಸುತ್ತವೆ, ಜತೆಗೆ ಹೂಳನ್ನೂ ತಡೆಯುತ್ತವೆ.
ಹೊಂಡಗಳಲ್ಲಿ ಸಂಗ್ರಹವಾದ ನೀರು ಹೂಳನ್ನು ಅಲ್ಲೇ ಉಳಿಸಿ ಸೋಸಿಕೊಂಡು ಬಂದು ಕೆರೆ ಸೇರುವುದರಿಂದ ಕೆರೆಯಲ್ಲಿ ಹೂಳು ತುಂಬುವ ಸಂಭವ ತೀರಾ ಕಡಿಮೆ ಎನ್ನುತ್ತಾರೆ ಇಲ್ಲಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ವಿ. ಹಿರೇಮಠ್. ಈ ಎಲ್ಲಾ ರಚನೆಗಳನ್ನೂ ಇಂಜಿನಿಯರುಗಳ ಯೋಜನೆ ಪ್ರಕಾರವೇ ಮಾಡಿದ್ದಾರೆ. ಕೆರೆ ಹಾಗೂ ಆರು ಹೊಂಡಗಳು ನೆಕ್ಲೇಸ್ನಂತೆ ಕಾಣುತ್ತವೆ.
‘‘2013ರಲ್ಲಿ ಈ ಇಕೋ ವಿಲೇಜ್ ಕೆಲಸ ಆರಂಭವಾಯಿತು. 850 ಮಿ.ಮೀ. ಸರಾಸರಿ ಮಳೆಯ ಈ ಭಾಗದಲ್ಲಿ ನೀರ ಸುಸ್ಥಿರತೆಗೆ ಮೊದಲ ಆದ್ಯತೆ ನೀಡುವ ತೀರ್ಮಾನ ಕೈಗೊಳ್ಳಲಾಯಿತು. ಅದಕ್ಕಾಗಿ ಇಡೀ ಜಮೀನಿನ ನೀರ ಹಾದಿಗಳಲ್ಲಿ ಅಡ್ಡಾಡಿ ನೀರ ಹರಿವಿನ ನಕಾಶೆ ಮಾಡಿದೆವು’’ ಎಂದು ನೆನೆಯುತ್ತಾರೆ ಯೋಜನಾ ವಿಭಾಗದ ಮುಖ್ಯಸ್ಥ ಹರ್ಷವರ್ಧನ ಶೀಲವಂತ್. ಕೆರೆ ಹಾಗೂ ಹೊಂಡಗಳ ನಿರ್ವಣಕ್ಕೆ 18 ಲಕ್ಷ ರೂ. ವೆಚ್ಚವಾಗಿದೆ. ಮೂರು ತಿಂಗಳ ಕೆಲಸ. ಇದರ ಪರಿಣಾಮ ಇಲ್ಲಿನ ಮೂರು ಕೊಳವೆ ಬಾವಿಗಳು ಹಾಗೂ ಸುತ್ತಮುತ್ತಲ ರೈತರ ಹಲವು ಕೊಳವೆಬಾವಿಗಳೂ ಮರುಪೂರಣಗೊಂಡಿವೆ. ಅಂತರ್ಜಲ ಮಟ್ಟ ಹೆಚ್ಚಿದೆ. ಇಕೋ ಗ್ರಾಮದಲ್ಲಿ 16 ವಿವಿಧ ರೀತಿಯ ಸುಸ್ಥಿರ ಅಭಿವೃದ್ಧಿ ಮಾದರಿಗಳ ಪ್ರಾತ್ಯಕ್ಷಿಕೆ ಇದೆ. ಮಳೆ ನೀರು ಸಂಗ್ರಹ, ಛಾವಣಿ ನೀರು ಹಿಡಿಯುವುದು, ತೆರೆದ ಬಾವಿ ಮತ್ತು ಕೊಳವೆ ಬಾವಿಗಳ ಪುನಶ್ಚೇತನ, ತಾರಸಿ ತೋಟ, ತರಕಾರಿ ಹಿತ್ತಿಲು, ವಿವಿಧ ರೀತಿಯ ಸಾವಯವ ಗೊಬ್ಬರಗಳು, ಅಡುಗೆ ಮನೆ ತ್ಯಾಜ್ಯದಿಂದ ಗ್ಯಾಸ್ ಉತ್ಪಾದನೆ ಮತ್ತು ಬಳಕೆ, ಅಡುಗೆ ಮನೆ ಕೊಳಾಯಿಯ ನೀರನ್ನು ತರಕಾರಿ ತೋಟಕ್ಕೆ ಸಂರ್ಪಸುವುದು, ಮನೆ ಬಳಕೆಗೆ ಬೇಕಾದ ಔಷಧೀಯ ಸಸ್ಯಗಳ ಕಿರು ಉದ್ಯಾನ ಇತ್ಯಾದಿಗಳು ಅದರಲ್ಲಿ ಸೇರಿವೆ. ಉದ್ದೇಶ ಏನೆಂದರೆ ಒಂದು ಕುಟುಂಬಕ್ಕೆ ಕಡಿಮೆ ವೆಚ್ಚದಲ್ಲಿ ಜೀವಿಸಲು ಅಗತ್ಯವಾದ ಮಾದರಿಗಳನ್ನು ಪರಿಚಯಿಸುವುದು. ಇಕೋ ಗ್ರಾಮಕ್ಕೆ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಪ್ರವೇಶವಿದೆ. ಕಳೆದ ಮೂರು ವರ್ಷಗಳಲ್ಲಿ ಸುಮಾರು 3500 ಸರ್ಕಾರಿ ಶಾಲೆಯ ಮಕ್ಕಳು ಭೇಟಿ ನೀಡಿದ್ದಾರೆ. ಇತರರಿಗೆ ಪ್ರವೇಶ ಶುಲ್ಕ ಉಂಟು.