ನೀರು ನಿರ್ವಹಣೆ ಜಾಣ್ಮೆ; ನೀರಕಲ್ಲು ತಲಪರಿಗೆಗೆ ಹೊಸ ಹುಟ್ಟು

ಸಯಹ
Published on

ಈ ಭೂಮಿಯ ಅಳಿದುಳಿದ ನೀರಿನ ಸಂಪತ್ತು ನಾಳಿನ ಪೀಳಿಗೆಗೂ ಉಳಿಯುವಂತಾಗಲು ಅನುದಿನವೂ ಜಲ ನಿರ್ವಹಣೆ ಅಗತ್ಯ. ಸುಸ್ಥಿರ ಅಭಿವೃದ್ಧಿಗೆ ಅದೇ ಪೂರಕ. ಆ ನಿಟ್ಟಿನಲ್ಲಿ ನಡೆಯುತ್ತಿರುವ ಕೆಲ ಪ್ರಯತ್ನಗಳ ಪರಿಚಯ ಇಲ್ಲಿದೆ. ಇಂತಹ ಜಾಣ್ಮೆಗಳ ಅಳವಡಿಕೆ ಜತೆಗೆ ನೀರಿನ ಅನವಶ್ಯಕ ದುಂದುಗಾರಿಕೆ, ಮರಳು ಗಣಿಗಾರಿಕೆ, ಅರಣ್ಯ ಧ್ವಂಸ, ನದಿ-ಹಳ್ಳಗಳ ಒತ್ತುವರಿಗೆ ಕಡಿವಾಣ ಹಾಕಲೇಬೇಕಿದೆ. ಹಾಗೆ ಮಾಡಿದಲ್ಲಿ ಮಾತ್ರ ಈ ಭೂಗ್ರಹವೆಂಬ ‘ಹೋಮ್ ಉಳಿಯುತ್ತದೆ. ಇದು ನಮ್ಮ ಮಕ್ಕಳಿಗಾಗಿ ನಾವು ಮಾಡಬಹುದಾದ ಬಹುದೊಡ್ಡ ‘ಹೋಮ್ ವರ್ಕ್’.

ತುಮಕೂರು ಜಿಲ್ಲೆ ತಲಪರಿಗೆಗಳ ತವರು. ಅಂತರ್ಜಲ ಕುಸಿತದಿಂದ ಈ ಪರಂಪರೆ ನಶಿಸುತ್ತಿದ್ದರೂ ಹಲವರ ಶ್ರಮದಿಂದ ಅಲ್ಲಲ್ಲಿ ಉಸಿರಾಡುತ್ತಿವೆ. ಹಲವು ಗ್ರಾಮಗಳ ಜನರು ಸ್ವಇಚ್ಛೆಯಿಂದ ತಮ್ಮೂರ ತಲಪರಿಗೆಗಳನ್ನು ನೆನಪಿಸಿಕೊಂಡು ಅವುಗಳ ಪುನಶ್ಚೇತನಕ್ಕೆ ಕೈಹಾಕಿದ್ದಾರೆ. ಸ್ಥಳೀಯ ಪಂಚಾಯ್ತಿಯ ಸಹಕಾರವೂ ಅಲ್ಲಲ್ಲಿ ದೊರೆತಿದೆ. ಆ ರೀತಿ ಸಮುದಾಯ-ಸರ್ಕಾರ ಕೈಜೋಡಿಸಿ ಹೊಸ ಹುಟ್ಟು ಪಡೆದಿದೆ ಮಧುಗಿರಿ ತಾಲ್ಲೂಕಿನ ನೀರಕಲ್ಲು ಗ್ರಾಮದ ತಲಪರಿಗೆ. ಹಲವು ವರ್ಷಗಳಿಂದ ಬಳಕೆಗೆ ಬಾರದಂತೆ ಹಾಳಾಗಿದ್ದ ಈ ತಲಪರಿಗೆಯನ್ನು ಐದು ವರ್ಷಗಳ ಹಿಂದೆ ಗ್ರಾಮದ ರಾಮಕೃಷ್ಣಪ್ಪ ಮತ್ತಿತರರು ಗುರುತಿಸಿ ಗ್ರಾಮ ಪಂಚಾಯ್ತಿಯ ಗಮನಕ್ಕೆ ತಂದರು. ನರೇಗಾ ಯೋಜನೆಯಡಿ ಪುನರುಜ್ಜೀವನ ನಡೆಯಿತು. ಸುಮಾರು 40 ಅಡಿ ಉದ್ದಗಲ ಹಾಗೂ 10 ಅಡಿಯಷ್ಟು ಆಳದ ತಲಪರಿಗೆಯ ಹೂಳು ತೆಗೆಸಿ ಸುತ್ತಲೂ ಕಲ್ಲು ಕಟ್ಟಡ ನಿರ್ವಿುಸಲಾಯಿತು. ಒಳಗೆ ಇಳಿಯಲು ಮೆಟ್ಟಿಲುಗಳನ್ನು ಮಾಡಿದರು. ಭೂಮಟ್ಟದಿಂದ ಮೂರು ಅಡಿಯಷ್ಟು ಎತ್ತರಕ್ಕೆ ತಡೆಗೋಡೆ ನಿರ್ವಿುಸಿ ಒಂದು ಕಡೆ ಓಡಾಡಲು ಗೇಟು ಇಡಲಾಯಿತು. ಪುನಶ್ಚೇತನದ ನಂತರ ಈಗ ವರ್ಷವಿಡೀ ನೀರು ಲಭ್ಯವಿರುತ್ತದೆ. ಗ್ರಾಮದ ಜನ ಕುಡಿಯಲು ಬಳಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net