ಬಿಸಿಲ ಬೇಗೆಯಲ್ಲಿ ಪರೀಕ್ಷೆ ಬರೆಯುವ ಮಕ್ಕಳಿಗೆ ಓದಿನ ಜತೆಯಿರಲಿ ಶುದ್ಧ ನೀರು

ed
Published on

ದಿನದಿಂದ ದಿನಕ್ಕೆ ತಾಪಮಾನ ಹೆಚ್ಚಾಗುತ್ತಿದೆ. ಬೇಸಿಗೆಯ ಬಿಸಿಲು ನೆತ್ತಿ ಸುಡುತ್ತಿದೆ. ಎಷ್ಟು ನೀರು ಕುಡಿದರೂ ದಾಹ ಇಂಗುತ್ತಿಲ್ಲ ಇದರ ನಡುವೆಯೇ ಪರೀಕ್ಷೆ ಎದುರಾಗುತ್ತಿದೆೆ. ಆರೋಗ್ಯವನ್ನು ಜೋಪಾನವಾಗಿ ಇಟ್ಟುಕೊಳ್ಳುವುದು ಈಗ ಮುಖ್ಯ. ಓದು ಬರಹಕ್ಕೆ ಕೊಟ್ಟ ಮಹತ್ವವನ್ನು ನಿಮ್ಮ ಸ್ವಾಸ್ಥ್ಯ ರಕ್ಷಣೆಗೂ ಕೊಟ್ಟದ್ದೇ ಆದಲ್ಲಿ ಪರೀಕ್ಷೆಗಳನ್ನು ಸರಾಗವಾಗಿ ಎದುರಿಸಲು ಸಹಕಾರಿಯಾಗುತ್ತದೆ.

ಬೇಸಿಗೆ ಅಡಿಯಿಡುತ್ತಿದ್ದಂತೆಯ ಸಾಂಕ್ರಾಮಿಕ ರೋಗಗಳು ಮಕ್ಕಳಿಗೆ ಬಹುಬೇಗ ಕೆಮ್ಮು, ವಾಂತಿ, ಜ್ವರ- ಹೀಗೆ ಒಂದಲ್ಲಾ ಒಂದು ಸಮಸ್ಯೆ ಬರುತ್ತದೆ.

ಇದಕ್ಕೆ ಕಾರಣಗಳು ಹಲವಾರಿದ್ದರೂ ಮುಖ್ಯ ಕಾರಣಗಳಲ್ಲಿ ಒಂದು ನೀರು. ನಮ್ಮ ಆರೋಗ್ಯಕ್ಕೂ, ಬೇಸಿಗೆಗೂ, ನೀರಿಗೂ ಸಾಕಷ್ಟು ಸಂಬಂಧವಿದ್ದು, ಬಹುಪಾಲು ರೋಗ ಹುಟ್ಟುವುದೇ ಇದರಿಂದ. ದೇಹದ ಒಟ್ಟಾರೆ ತೂಕದ ಅರ್ಧಪಾಲು ನೀರೇ ಇದೆ. ನಮ್ಮ ಎಲ್ಲ ಅಂಗಾಂಗಳಿಗೆ, ಜೀವಕೋಶಗಳಿಗೆ ಪೋಷಕಾಂಶಗಳನ್ನು ಸರಬರಾಜು ಮಾಡುವ ಮತ್ತು ವ್ಯರ್ಥ ವಸ್ತುಗಳನ್ನು ಹೊರತಳ್ಳುವ ದ್ರವದಲ್ಲಿ ನೀರಿನದ್ದೇ ಸಿಂಹಪಾಲು. ನಮ್ಮ ಹೃದಯ, ಕಣ್ಣು, ಹೊಟ್ಟೆ, ಇವೆಲ್ಲದರಲ್ಲೂ ಹರಿಯುತ್ತಿರುವುದು ದ್ರವ.

ಕುಡಿಯುವುದು ನೀರನ್ನೇ. ಹೊರಬಿಡುವ ಮೂತ್ರ ನೀರು. ಮೈಯಿಂದ ಹೊರಹೊಮ್ಮುವ ಬೆವರು ನೀರು. ನೀರು ಕುಡಿಯದಿದ್ದರೆ ಉಂಡದ್ದು ಜೀರ್ಣವಾಗುವುದಿಲ್ಲ. ನಮ್ಮ ದೇಹದೊಳಗಿನ ಕೈಕಾಲು ಸೇರಿದಂತೆ ಪ್ರತಿ ಸಂದುಗಳ ಕೀಲು ಕೆಲಸ ಮಾಡಲು ಅಗತ್ಯ ತೈಲ ಸಿದ್ಧಗೊಳ್ಳಲು ನೀರು ಬೇಕೇಬೇಕು. ದೇಹದಲ್ಲಿ ಹರಿಯುವ ರಕ್ತವೂ ನೀರು. ಕಣ್ಣೊಳಗೆ ಮಡುಗಟ್ಟುವುದು ನೀರು, ಗಂಟಲಲ್ಲಿರುವ ಕಫ, ಮೂಗಿನೊಳಗೆ ಸುರಿಯುವ ಸಿಂಬಳ ಎಲ್ಲವೆಂದರೆ ಎಲ್ಲದರಲ್ಲೂ ನೀರಿನ ಅಂಶ ಇದ್ದೇ ಇರುತ್ತದೆ. ಯಾವ ಸಮಸ್ಯೆ ಬಂದರೂ ಮೊದಲು ದೇಹದಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಇರಲೇಬೇಕು.

ದೇಹ ಮತ್ತು ನೀರು: ಶೀತ, ಜ್ವರ,ವಾಂತಿ ಭೇದಿ..ಹೀಗೆ ನಾವು ಕಿರಿಕಿರಿ ಎಂದುಕೊಳ್ಳುವ ಸಣ್ಣಪುಟ್ಟ ಕಾಯಿಲೆಗಳೆಲ್ಲವೂ ಅವು ಉಪದ್ರವ ಕೊಡಲಿಕ್ಕಾಗಿಯೇ ನಮಗೆ ಬಂದಿವೆ ಎಂದುಕೊಳ್ಳಬೇಕಿಲ್ಲ. ದೇಹದಲ್ಲಿನ ಜಲದ ಮಟ್ಟ ಕಾಯ್ದುಕೊಳ್ಳುವ ಸಹಜ ಪ್ರಕ್ರಿಯೆಗಳಾಗಿ ನಮಗೆ ಇಂಥ ರೋಗ ಕಾಣಿಸಿಕೊಳ್ಳುತ್ತವೆ. ಅದು ಮಿತಿ ಮೀದರೆ ಅಪಾಯ. ಹಾಗಾಗಿ ಬೇಸಿಗೆಯ ಎಲ್ಲ ರೋಗಗಳಿಗೂ ಹೆದರಬೇಕಿಲ್ಲ. ಆದರೆ ಮುನ್ನೆಚ್ಚರಿಕೆ ವಹಿಸಿ ದೇಹದ ನೀರಿನ ಮಟ್ಟ ರಕ್ಷಿಸಿಕೊಳ್ಳಬೇಕು.

ಹೀಗೆ ಮಾಡಿದರೆ ಕ್ಷೇಮ ...:

  • ಆಗಾಗ್ಗೆ ಶುದ್ಧ ನೀರು ಕುಡಿಯುತ್ತಿರಿ. ಇದರಿಂದ ನಿಮ್ಮ ಲವಲವಿಕೆ ಹೆಚ್ಚುತ್ತದೆ.
  • ಎಂಥದ್ದೇ ರೋಗವಿರಲಿ, ಯಾವುದೇ ಕಾಲವಿರಲಿ, ನೀರಿನಿಂದ ದೂರವಿರುವ ಅಗತ್ಯವಿಲ್ಲ. ಯಾವುದೇ ರೋಗಕ್ಕೆ ನೀರಿನ ಸೇವನೆ ನಿಷಿದ್ಧ ಎಂಬ ಪ್ರಮೇಯವೇ ಇಲ್ಲ.
  • ಒಬ್ಬ ಮನುಷ್ಯನ ತೂಕ 70 ಕಿ.ಗ್ರಾಂ ಇದ್ದರೆ, ಆತನ ದೇಹದಲ್ಲಿ 47 ಲೀಟರ್ ನೀರು ಇರುತ್ತದೆ. ಹಾಗಾಗಿ ನೀರನ್ನು ನಿರ್ಲಕ್ಷ್ಯ ಮಾಡಬೇಡಿ.
  • ಬೆಳಗ್ಗೆ ಎದ್ದ ಕೂಡಲೇ ಬಾಯಿ ತೊಳೆದು ಖಾಲಿ ಹೊಟ್ಟೆಗೆ ನಿಮಗೆ ಸಾಧ್ಯವಾದಷ್ಟು ನೀರು ಕುಡಿಯಿರಿ. ನಂತರವೂ ಸಾಧ್ಯವಾದಾಗಲೆಲ್ಲ ನೀರು ಸೇವಿಸಿ ಚರ್ಮದ ಅಂದ, ಮುಖದ ಕಾಂತಿ, ಕಣ್ಣಿನ ಹೊಳಪು ಹೆಚ್ಚುತ್ತದೆ.
  • ನೀರು ಅಶುದ್ಧವೆನಿಸಿದರೆ ಬಿಳಿ ಬಟ್ಟೆಯಿಂದ ಸೋಸಿ. ಕುದಿಸಿಟ್ಟುಕೊಳ್ಳಲೂಬಹುದು. ಫಿಲ್ಟರ್ ನೀರಾದರೂ ಆಯಿತು. ಅದೆಲ್ಲ ಶುದ್ಧವಾದ ನೀರೇ ಆಗಿದ್ದು, ಉಪಯೋಗಿಸಬಹುದು. ಮಾರುಕಟ್ಟೆಯಲ್ಲಿ ಸಿಗುವ ಬಾಟಲಿ ನೀರಿನಿಂದ ಸಲ್ಪ ದೂರವೇ ಇರುವುದು ಒಳಿತು.
  • ಬೇಕರಿ- ಹೋಟೆಲ್​ಕಡೆ ಸದ್ಯಕ್ಕೆ ಮುಖ ಮಾಡಬೇಡಿ. ಫಾಸ್ಟ್ ಫುಡ್​ಗೆ ಗುಡ್​ಬೈ ಹೇಳಿ. ಮನೆಯಲ್ಲೇ ತಯಾರಿಸಿದ ತಾಜಾ ಆಹಾರವೇ ಬಹು ಸೂಕ್ತ.

ಐಸ್ ಒಳ್ಳೆಯದಲ್ಲ: ಪರೀಕ್ಷೆಗಳನ್ನು ಎದುರಿಸುತ್ತಿರುವ ಈ ಸಂದರ್ಭ ದಾಹ ತಣಿಸಲು ಫ್ರಿಜ್​ನಲ್ಲಿರುವ ಪದಾರ್ಥಗಳನ್ನು ಸೇವಿಸಬೇಡಿ. ಹಣ್ಣಿನ ರಸಗಳಿಗೆ ಐಸ್ ಬಳಸಬೇಡಿ. ಯಾವತ್ತೋ ಬಾಟಲಿಗಳಲ್ಲಿ ತುಂಬಿಟ್ಟ ಕೂಲ್​ಡ್ರಿಂಕ್ಸ್ ಸಹವಾಸವಂತೂ ಬೇಡವೇ ಬೇಡ. ಕಲ್ಲಂಗಡಿ, ಕರಬೂಜ, ಸೌತೇಕಾಯಿ ಇತ್ಯಾದಿ ಹಣ್ಣುಗಳನ್ನು ಮನೆಗೆ ತಂದು, ಉಪ್ಪು ನೀರಿನಲ್ಲಿ ತೊಳೆದು ಸೇವಿಸಬಹುದು. ಹಾದಿ ಬೀದಿಯಲ್ಲಿ ಕತ್ತರಿಸಿ ಇಟ್ಟ ಹಣ್ಣುಗಳನ್ನು ತಿನ್ನಲು ಮುಂದಾಗಬೇಡಿ. ಓದುವ ಸಂದರ್ಭ ಬಾಯಾರಿಕೆಯಾದರೆ ಕಾಫಿ, ಟೀ ಸೇವನೆಗಿಂತಾ ನೀರು, ಎಳನೀರು, ಮಜ್ಜಿಗೆ, ಮನೆಯಲ್ಲೇ ತಯಾರಿಸಿದ ಪಾನಕ ಬೆಸ್ಟ್.

ಗಟ್ಟಿ ಪದಾರ್ಥಗಳು ಸಲ್ಲದು: ಪರೀಕ್ಷಾ ಸಂದರ್ಭದಲ್ಲಿ ವಿದ್ಯಾರ್ಥಿಗಳು ಓದಲು ಬಹಳ ಹೊತ್ತು ಕುಳಿತುಕೊಳ್ಳುವುದರಿಂದ ಗಟ್ಟಿ ಪದಾರ್ಥಗಳು ಬೇಗ ಅರಗುವುದಿಲ್ಲ. ಹಾಗಾಗಿ ಬೇಗ ಜೀರ್ಣವಾಗುವ, ಹಿತಮಿತ ಆಹಾರ ಸೇವನೆಎಡೆಗೆ ಗಮನ ಹರಿಸುವುದು ಸೂಕ್ತ. ಕರಿದ ಪದಾರ್ಥಗಳು, ಹೋಟೆಲ್-ಬೇಕರಿ ತಿನಿಸುಗಳು, ಅತಿಯಾದ ಹುಳಿ, ಖಾರ, ತಂಗಳು, ಅತಿಯಾದ ಸಿಹಿ ತಿಂಡಿಗಳ ಸೇವನೆ ಬೇಡವೇ ಬೇಡ. ತರಕಾರಿ, ಹಸಿರು ಸೊಪ್ಪು, ಅನ್ನದ ಗಂಜಿ, ಮಜ್ಜಿಗೆ ಇತ್ಯಾದಿಗಳನ್ನು ಸೇವಿಸಿ.

ಎಸ್​ಎಸ್​ಎಲ್​ಸಿ ಮಕ್ಕಳೇ...: ಪರೀಕ್ಷಾ ಹಾಲ್​ಗೆ ಹೋಗುವ ಒಂದು ತಾಸು ಮೊದಲೇ ಉಪಾಹಾರ ಸೇವಿಸಿ. ಅತಿಯಾಗಿ ತಿಂದರೆ ನಿದ್ದೆ ಬರುತ್ತದೆ, ಆಲಸ್ಯ ಕಾಡುತ್ತದೆ. ಉತ್ತರ ಬರೆಯುವ ಲವಲವಿಕೆ ಇರುವುದಿಲ್ಲ. ಹೊಟ್ಟೆಗೆ ಹಿತ ಎನಿಸುವ ಮಿತಾಹಾರವೇ ಸೂಕ್ತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net