

ದೇಶ ವಿದೇಶಗಳಲ್ಲಿ ರಿಟೇಲ್ ಮತ್ತು ಆನ್ಲೈನ್ ರಿಟೇಲ್ ಉದ್ಯಮ ಬೆಳೆಯುತ್ತಿರುವಂತೆ, ಈ ಉದ್ಯಮಕ್ಕೆ ಅಗತ್ಯವಾದ ಗೋದಾಮುಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದರ ಬೇಡಿಕೆ ಹೆಚ್ಚುತ್ತಿದ್ದಂತೆಯೇ ಉದ್ಯೋಗಾವಕಾಶಗಳೂ ಹೆಚ್ಚಿವೆ. ಕನ್ನಡಿಗರಿಗೆ ಹೆಚ್ಚು ಚಿರಪರಿಚಿತವಿಲ್ಲದ ಈ ಅವಕಾಶಗಳ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.
ಅತ್ಯಾಧುನಿಕ ತಂತ್ರಜ್ಞಾನ, ಉತ್ತಮ ನಿರ್ವಹಣೆ ವ್ಯವಸ್ಥೆಯನ್ನು ಹೊಂದಿರುವ ವೇರ್ಹೌಸ್ಗಳು ವಿಶ್ವಾದಂತ್ಯ ವರ್ಷಕ್ಕೆ ಸುಮಾರು 1 ಲಕ್ಷ 36 ಸಾವಿರ ಕೋಟಿ ರೂಪಾಯಿಗಳಷ್ಟು ವ್ಯವಹಾರ ನಡೆಸುತ್ತಿವೆ. ಇಂತಹ ವೇರ್ಹೌಸ್ಗಳಲ್ಲಿ ತಾಂತ್ರಿಕ ಶಿಕ್ಷಣ, ಮ್ಯಾನೇಜ್ವೆುಂಟ್ ಮತ್ತು ಪದವಿ ವಿದ್ಯಾರ್ಥಿಗಳಿಗೆ ಸಾವಿರಾರು ಉದ್ಯೋಗವಕಾಶಗಳು ದೊರೆಯುತ್ತಿದ್ದು, ಆಸಕ್ತ ಕನ್ನಡಿಗರು ಇಂತಹ ಅವಕಾಶಗಳನ್ನು ಪಡೆದುಕೊಳ್ಳಲು ಮುಂದಾಗಬೇಕಾಗಿದೆ.
ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ವೇರ್ಹೌಸ್ಗಳು ಹಲವು ಲಕ್ಷ ಚದರ ಅಡಿ ಪ್ರದೇಶದಲ್ಲಿ ನಿರ್ವಣವಾಗಿರುತ್ತವೆ. ಉದಾಹರಣೆಗೆ ಇ-ಕಾಮರ್ಸ್ ದೈತ್ಯ ಅಮೇಜಾನ್ ಭಾರತದಲ್ಲಿ 60ಕ್ಕೂ ಹೆಚ್ಚು ವೇರ್ಹೌಸ್ಗಳನ್ನು ಹೊಂದಿದೆ. ಇವುಗಳಲ್ಲಿ ಹೈದರಾಬಾದ್, ಬೆಂಗಳೂರು ಮತ್ತು ಮುಂಬೈ ಸಮೀಪದ ಭಿವಂಡಿಯಲ್ಲಿ ಭಾರತದಲ್ಲಿ ಅತಿ ದೊಡ್ಡ ವೇರ್ಹೌಸ್ಗಳಿವೆ (ಅಮೇಜಾನ್ ಇವುಗಳನ್ನು ಫುಲ್ಫಿಲ್ವೆುಂಟ್ ಸೆಂಟರ್ಗಳೆಂದು ಕರೆಯುತ್ತದೆ). ಹೈದರಾಬಾದಿನಲ್ಲಿರುವ ಫುಲ್ಫಿಲ್ವೆುಂಟ್ ಸೆಂಟರ್ ವಿಸ್ತರಣೆಯ ಯೋಜನೆ ಪ್ರಗತಿಯಲ್ಲಿದ್ದು, ಮುಂಬರುವ ದಿನಗಳಲ್ಲಿ ಇದು 5,80,000 ಚದರ ಅಡಿಗಳಷ್ಟಿರುವ ಬೃಹತ್ ವೇರ್ಹೌಸ್ ಆಗಲಿದೆ.
ವಿದೇಶಗಳಲ್ಲಿ 23ರಿಂದ 25 ಲಕ್ಷ ಚದರ ಅಡಿಗಳಷ್ಟಿರುವ ಬೃಹತ್ ವೇರ್ಹೌಸ್ಗಳನ್ನು ಕೆಲವು ರಿಟೇಲ್ ಉದ್ಯಮಗಳು ಹೊಂದಿವೆ. ಭಾರತದಲ್ಲಿ ಕೂಡ 2 ಮತ್ತು 3ನೇ ಹಂತದ ನಗರಗಳಲ್ಲಿ ರಿಟೇಲ್ ಹಾಗೂ ಇ-ಕಾಮರ್ಸ್ ಸಂಸ್ಥೆಗಳು ತಮ್ಮ ವಹಿವಾಟು ವಿಸ್ತರಿಸುತ್ತಿರುವುದರಿಂದ, ಮುಂಬರುವ ದಿನಗಳಲ್ಲಿ ಇಂತಹ ಅಧುನಿಕ ವೇರ್ಹೌಸ್ಗಳಿಗೆ ಬೇಡಿಕೆ ಹೆಚ್ಚಾಗಲಿದೆ. ಹೀಗಾಗಿ ಈ ಕ್ಷೇತ್ರದಲ್ಲಿ ನವೋದ್ಯಮಿಗಳಾಗ ಬಯಸುವವರಿಗೆ ಮತ್ತು ಉದ್ಯೋಕಾಂಕ್ಷಿಗಳಾದವರಿಗೆ ಹೊಸ ಅವಕಾಶಗಳು ದೊರೆಯಲಿವೆ. ಅಧುನಿಕ ವೇರ್ಹೌಸ್ಗಳಲ್ಲಿ ಹಲವು ಲಕ್ಷ ಮತ್ತು ಕೆಲವು ಕಡೆ ಹಲವು ಕೋಟಿಗಳಷ್ಟು ಉತ್ಪನ್ನಗಳನ್ನು ವ್ಯವಸ್ಥಿತವಾಗಿ ಜೋಡಿಸಿಡುವ ಸೌಲಭ್ಯಗಳು ಇರುತ್ತವೆ. ವೇರ್ಹೌಸ್ನಲ್ಲಿ ಯಾವ ಉತ್ಪನ್ನವನ್ನು ಎಲ್ಲಿ ಇಡಬೇಕು ಮತ್ತು ಹೇಗೆ ಇಡಬೇಕು ಎಂದು ನಿರ್ಧರಿಸುವಲ್ಲಿ ಮ್ಯಾನೇಜ್ವೆುಂಟ್ ಪದವಿ ಹೊಂದಿದವರ ಪಾತ್ರ ಪ್ರಮುಖವಾಗುತ್ತದೆ.
ಯಾವುದೇ ಉತ್ಪನ್ನ, ಯಾವಾಗ ವೇರ್ಹೌಸ್ಗೆ ಬಂದಿದೆ, ವೇರ್ಹೌಸ್ನಲ್ಲಿ ಎಲ್ಲಿ ಜೋಡಿಸಿಡಲಾಗಿದೆ ಮೊದಲಾದ ಮಾಹಿತಿಯನ್ನು ನೀಡುವ ವೇರ್ಹೌಸ್ ನಿರ್ವಹಣೆ ತಂತ್ರಾಂಶಗಳನ್ನು ವೇರ್ಹೌಸ್ನಲ್ಲಿ ಬಳಸಲಾಗುತ್ತದೆ. ಇಂತಹ ತಂತ್ರಾಂಶವನ್ನು ಬಳಸುವ ಅನುಭವ ಹೊಂದಿರುವವರಿಗೆ ಹಾಗೂ ಈ ತಂತ್ರಾಂಶದ ನಿರ್ವಹಣೆ ಮತ್ತು ಬೇಕಾದಾಗ ಈ ತಂತ್ರಾಂಶದಲ್ಲಿ ಅಗತ್ಯ ಮಾರ್ಪಾಡು ಮಾಡುವ ಕೌಶಲವಿರುವ ಮಾಹಿತಿ ತಂತ್ರಜ್ಞಾನ ಪರಿಣತರಿಗೆ ಉದ್ಯೋಗವಕಾಶಗಳು ದೊರೆಯುತ್ತವೆ. ದೇಶ ವಿದೇಶಗಳಲ್ಲಿರುವ ಹೆಸರಾಂತ ರಿಟೇಲ್ ಉದ್ಯಮಗಳಲ್ಲಿ ವೇರ್ಹೌಸ್ ನಿರ್ವಹಣೆ ತಂತ್ರಾಂಶ, ಕ್ಲೌಡ್ ತಂತ್ರಜ್ಞಾನ, ಅರ್ಟಿಫಿಷಿಯಲ್ ಇಂಟೆಲಿಜೆನ್ಸ್, ಕಂಪ್ಯೂಟರ್ ವಿಷನ್, ಮಷಿನ್ ಲರ್ನಿಂಗ್, ಮಾಹಿತಿ ಸುರಕ್ಷತೆ ಹಾಗೂ ಡೇಟಾಬೇಸ್ ನಿರ್ವಹಣೆಯಲ್ಲಿ ಕೌಶಲ ಹಾಗೂ ಅನುಭವ ಹೊಂದಿರುವವರಿಗೆ ಉದ್ಯೋಗವಕಾಶಗಳು ದೊರೆಯುತ್ತವೆ. ಸಾಮಾನ್ಯವಾಗಿ ಇ-ಕಾಮರ್ಸ್ ಸಂಸ್ಥೆಗಳಲ್ಲಿ, ವೇರ್ಹೌಸ್ನಿಂದ ವಿವಿಧ ನಗರಗಳಲ್ಲಿರುವ ಡೆಲಿವೆರಿ ಕೇಂದ್ರಗಳಿಗೆ ಉತ್ಪನ್ನಗಳನ್ನು ಕಳುಹಿಸುತ್ತಾರೆ. ಇಂತಹ ಡೆಲಿವರಿ ಕೇಂದ್ರಗಳಿಂದ ಗ್ರಾಹಕರಿಗೆ ಅವರು ಆನ್ಲೈನ್ ಮೂಲಕ ಖರೀದಿಸಿರುವ ಉತ್ಪನ್ನಗಳ ವಿತರಣೆಯಾಗುತ್ತದೆ. ರಿಟೇಲ್ ಸಂಸ್ಥೆಯ ಅಗತ್ಯಕ್ಕೆ ತಕ್ಕಂತೆ ವೇರ್ಹೌಸ್ ಅಥವಾ ಡೆಲಿವರಿ ಸೆಂಟರ್ಗಳಲ್ಲಿ ಗ್ರಾಹಕರು ಖರೀದಿಸಿರುವ ಉತ್ಪನ್ನಗಳನ್ನು ಪ್ಯಾಕಿಂಗ್ ಮಾಡಲು ಅತ್ಯಾಧುನಿಕ ಪ್ಯಾಕಿಂಗ್ ಸ್ಟೇಷನ್ಗಳನ್ನು ಬಳಸಲಾಗುತ್ತದೆ. ಇದೇ ರೀತಿ ಗ್ರಾಹಕರು ನೀಡಿರುವ ವಿಳಾಸವನ್ನು ಲೇಬಲ್ ಮೂಲಕ ಮುದ್ರಿಸುವ ಲೇಬಲಿಂಗ್ ಯಂತ್ರಗಳು ಕೂಡಾ ಹಲವೆಡೆ ಬಳಕೆಯಲ್ಲಿವೆ. ಇಂತಹ ಪ್ಯಾಕಿಂಗ್, ಲೇಬಲಿಂಗ್ ಯಂತ್ರಗಳನ್ನು ನಿರ್ವಹಿಸುವುದನ್ನು ಸಾಮಾನ್ಯ ಪದವಿ ಪಡೆದವರೂ ಕೂಡ ಮಾಡಬಹುದಾಗಿದೆ. ಹೀಗಾಗಿ ರಿಟೇಲ್ ಉದ್ಯಮದ ಸಹಕಾರದೊಂದಿಗೆ ಆಸಕ್ತ ವಿದ್ಯಾರ್ಥಿಗಳಿಗೆ ಇಂತಹ ಕೌಶಲವನ್ನು ಕಲಿಸಲು ಶಿಕ್ಷಣ ಸಂಸ್ಥೆಗಳು ಮುಂದಾಗಬೇಕಾಗಿದೆ.
ಗ್ರಾಹಕರು ವಿವಿಧ ಕಾರಣಗಳಿಂದಾಗಿ ಹಿಂತಿರುಗಿಸಿದ ಉತ್ಪನ್ನಗಳನ್ನು ಸಂಗ್ರಹಿಸುವುದು ಡೆಲಿವರಿ ಸೆಂಟರ್ ಅಥವಾ ಕೆಲವೊಮ್ಮೆ ವೇರ್ಹೌಸ್ ಮೂಲಕ ಮಾಡಲಾಗುತ್ತದೆ. ಹೀಗೆ ಹಿಂದಿರುಗಿಸಲಾದ ಉತ್ಪನ್ನಗಳ ಮಾಹಿತಿಯನ್ನು ಹಾಗೂ ಅವುಗಳನ್ನು ವಿಲೇವಾರಿ ಮಾಡಿದ ವಿಧಾನವನ್ನು ವಿಶ್ಲೇಷಣೆ ಮಾಡುವುದು ಮತ್ತು ಇದರಿಂದ ಸಂಸ್ಥೆಗೆ ಆದ ನಷ್ಟ ( ಆರ್ಥಿಕ ಹಾಗೂ ಗ್ರಾಹಕ ಸಂತೃಪ್ತಿ) ಲೆಕ್ಕ ಮಾಡುವುದು, ಹೀಗೆ ವಿವಿಧ ಕೆಲಸಗಳಲ್ಲಿ ಮ್ಯಾನೇಜ್ವೆುಂಟ್ ಮತ್ತು ಕಾಮರ್ಸ್ ಪದವಿ ಪಡೆದವರಿಗೆ ಉದ್ಯೋಗವಕಾಶಗಳು ದೊರೆಯುತ್ತವೆ. ವೇರ್ಹೌಸ್ನಿಂದ ಡೆಲಿವರಿ ಸೆಂಟರ್ ಹಾಗೂ ಡೆಲಿವರಿ ಸೆಂಟರ್ನಿಂದ ಗ್ರಾಹಕರಿಗೆ ಉತ್ಪನ್ನಗಳನ್ನು ತಲುಪಿಸಲು ವಿವಿಧ ವಾಹನಗಳನ್ನು ಬಳಸಲಾಗುತ್ತದೆ. ವಿದ್ಯುತ್ ಚಾಲಿತ ಅಥವಾ ಚಾಲಕರಹಿತ ವಾಹನಗಳು ಮುಂಬರುವ ದಿನಗಳಲ್ಲಿ ಈ ಕೆಲಸವನ್ನು ಮಾಡುವ ಸಾಧ್ಯತೆ ಇದೆ. ಹೀಗಾಗಿ ಇಂತಹ ನವೋದ್ಯಮ ಸ್ಥಾಪಿಸಲು ಅಸಕ್ತಿ ಇರುವವರಿಗೆ ಕೂಡ ಅವಕಾಶಗಳು ಲಭ್ಯವಿದೆ. ರಾಜ್ಯದಲ್ಲಿ ವಿವಿಧೆಡೆ ವಿಮಾನ ನಿಲ್ದಾಣಗಳು ಸ್ಥಾಪನೆಯಾಗುತ್ತಿವೆ.
ಬೆಂಗಳೂರಿನಲ್ಲಿರುವಂತೆ ಸರಕು ನಿರ್ವಹಣೆ ವ್ಯವಸ್ಥೆ, ಬೇರೆ ವಿಮಾನ ನಿಲ್ದಾಣಗಳಲ್ಲಿ ಕೂಡಾ ಮುಂದೆ ಆರಂಭವಾಗಬಹುದು. ಆದ್ದರಿಂದ ರಾಜ್ಯದಲ್ಲಿ ವಿಮಾನ ನಿಲ್ದಾಣಗಳಲ್ಲಿರುವ ಸ್ಥಳಗಳಲ್ಲಿ ಅಧುನಿಕ ವೇರ್ಹೌಸ್ ಸ್ಥಾಪಿಸಲು ಅವಕಾಶವಿದೆ.
ರೀಟೇಲ್ ಉದ್ಯಮದಲ್ಲಿ ವೇರ್ಹೌಸ್ ವ್ಯವಸ್ಥೆ ಹೇಗೆ ಕೆಲಸ ಮಾಡುತ್ತದೆ, ಬಾರ್ಕೋಡಿಂಗ್, ಆರ್ಎಫ್ಐಡಿ, ಮೊದಲಾದವುಗಳನ್ನು ಹೇಗೆ ಬಳಸಲಾಗುತ್ತದೆ ಎಂದು ತಿಳಿದುಕೊಂಡು ದೇಶ ವಿದೇಶಗಳಲ್ಲಿರುವ ವೇರ್ಹೌಸ್ಗಳಲ್ಲಿ ಉದ್ಯೋಗಕ್ಕಾಗಿ ಪ್ರಯತ್ನಿಸಬೇಕು. ಇಂತಹ ಪೂರ್ವಭಾವಿ ಮಾಹಿತಿ, ಮಾರ್ಗದರ್ಶನವನ್ನು ಆಯಾ ಜಿಲ್ಲೆಯ ಮಟ್ಟದಲ್ಲಿ ಆಸಕ್ತ ವಿದ್ಯಾರ್ಥಿಗಳಿಗೆ ನೀಡಲು ರಾಜ್ಯ ಸರ್ಕಾರ ಮುಂದಾಗಬೇಕು.
ಅಧುನಿಕ ವೇರ್ಹೌಸ್ಗಳಲ್ಲಿ ರೋಬೋಗಳನ್ನು ಬಳಸಲಾಗುತ್ತಿದೆ. ಹಲವು ಲಕ್ಷ ವಿಸ್ತೀರ್ಣ ಹೊಂದಿರುವ ಬೃಹತ್ ವೇರ್ಹೌಸ್ಗೆ ಬರುವ ಉತ್ಪನ್ನಗಳು ವೇರ್ಹೌಸ್ನಲ್ಲಿ ಜೋಡಿಸುವುದು, ಡೆಲಿವರಿ ಸೆಂಟರ್ ಅಥವಾ ಗ್ರಾಹಕರಿಗೆ ತಲುಪಿಸಲು ವೇರ್ಹೌಸ್ನಿಂದ ವಿವಿಧ ಉತ್ಪನ್ನಗಳನ್ನು ತರುವುದು, ಹೀಗೆ ಪ್ರತಿದಿನ ಒಬ್ಬ ವ್ಯಕ್ತಿ ಸರಿಸುಮಾರು 50 ಮೈಲಿಗಳಷ್ಟು ನಡೆಯಬೇಕಾಗುತ್ತದೆ. ಇದರಿಂದಾಗುವ ದೈಹಿಕ ಶ್ರಮ ಹಾಗೂ ಉತ್ಪನ್ನಗಳನ್ನು ಎತ್ತಿ ಇಳಿಸುವಾಗ ಆಗುವ ಅಪಘಾತಗಳನ್ನು ತಡೆಯಲು ಉದ್ಯಮ ಶ್ರೇಣಿಯ ರೋಬೋಗಳನ್ನು ಅಭಿವೃದ್ಧಿಪಡಿಸಿ ವೇರ್ಹೌಸ್ಗಳಲ್ಲಿ ಬಳಸಲಾಗುತ್ತಿದೆ. ಇಂತಹ ರೋಬೋಗಳನ್ನು ಬಳಸಿ ಹೇಗೆ ತಮ್ಮ ಕೆಲಸ ಮಾಡುವುದು ಎಂದು ವೇರ್ಹೌಸ್ ಸಿಬ್ಬಂದಿಗೆ ಅಗತ್ಯ ತರಬೇತಿ ನೀಡಲಾಗುತ್ತದೆ. ಇದರಿಂದಾಗಿ ಸಿಬ್ಬಂದಿಗೆ ದೈಹಿಕ ಶ್ರಮ ಕಡಿಮೆಯಾಗುತ್ತದೆ ಮತ್ತು ಸುರಕ್ಷತೆ ಹೆಚ್ಚಾಗುತ್ತದೆ ಎಂದು ಉದ್ಯಮ ಪರಿಣತರು ಅಭಿಪ್ರಾಯ ಪಡುತ್ತಾರೆ. ಇಂತಹ ರೋಬೋಗಳನ್ನು ಭಾರತದಲ್ಲಿರುವ ಕೆಲವು ವೇರ್ಹೌಸ್ಗಳಲ್ಲಿ ಬಳಸಲಾಗುತ್ತಿದೆ. ಆದ್ದರಿಂದ ಇಂತಹ ರೋಬೋಗಳ ವಿನ್ಯಾಸ, ತಯಾರಿಕೆ ಮತ್ತು ನಿರ್ವಹಣೆ ಮಾಡಲು ನವೋದ್ಯಮಿಗಳಿಗೆ ಅವಕಾಶಗಳು ದೊರೆಯುತ್ತಿವೆ.
ಇ-ಕಾಮರ್ಸ್ ಉದ್ಯಮದ ಪ್ರಮುಖ ಸಂಸ್ಥೆಗಳು, ತಮ್ಮ ಗ್ರಾಹಕರು ಆನ್ಲೈನ್ ಮೂಲಕ ಖರೀದಿಸಿದ ಉತ್ಪನಗಳನ್ನು ಅದೇ ದಿನ ತಲುಪಿಸುವ ಸೌಲಭ್ಯವನ್ನು ನೀಡುತ್ತಿರುವುದರಿಂದ, ಡೆಲಿವೆರಿ ಕೇಂದ್ರಗಳಿಂದ ಗ್ರಾಹಕರಿಗೆ ಉತ್ಪನ್ನಗಳನ್ನು ಡ್ರೋನ್ ಮೂಲಕ ತಲುಪಿಸುವ ಸೌಲಭ್ಯವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಭಾರತದಲ್ಲಿ ಕೂಡ ವಾಣಿಜ್ಯ ಬಳಕೆಯ ಡ್ರೋನ್ಗಳ ಕುರಿತು ನೀತಿ ನಿಯಮಗಳು ಅನುಷ್ಠಾನವಾಗಲಿದ್ದು, ಮುಂಬರುವ ದಿನಗಳಲ್ಲಿ ನಮ್ಮ ದೇಶದಲ್ಲಿ ಕೂಡ ಡ್ರೋನ್ಗಳ ಮೂಲಕ ಗ್ರಾಹಕರಿಗೆ ಉತ್ಪನ್ನಗಳ ಡೆಲಿವರಿ ಸಾಧ್ಯವಾಗುತ್ತದೆ. ಹೀಗಾಗಿ ವೇರ್ಹೌಸ್, ಡೆಲಿವರಿ ಕೇಂದ್ರಗಳಲ್ಲಿ ವಾಣಿಜ್ಯ ಬಳಕೆಯ ಡ್ರೋನ್ಗಳ ನಿರ್ವಹಣೆ, ದುರಸ್ತಿ ಕೌಶಲಗಳನ್ನು ಹೊಂದಿರುವವರಿಗೆ ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತವೆ.
| ಉದಯ ಶಂಕರ ಪುರಾಣಿಕ