

‘ಸದ್ಗುರು ಅವರು ನನಗೆ ಅವಕಾಶ ನೀಡಿದ್ದೇ ದೊಡ್ಡ ಮಾತು. ಅಷ್ಟು ದೊಡ್ಡ ಜನಸಮೂಹದ ಮುಂದೆ ನನ್ನ ಬಗ್ಗೆ ಮಾತನಾಡಬೇಕು ಅಂತ ಏನೂ ಇರಲಿಲ್ಲ. ಆದರೂ ಮೆಚ್ಚುಗೆಯ ಮಾತುಗಳನ್ನು ಆಡಿದರು. ಇವಳು ನನ್ನ ಹೃದಯ ಕದ್ದಳು ಎಂದು ಪ್ರಶಂಸಿಸಿದರು. ಅಷ್ಟು ಜನರ ಮುಂದೆ ಅವರು ಭಾವುಕರಾಗಿದ್ದು ಅಚ್ಚರಿ. ತಾವು ಕಣ್ಣೀರು ಹಾಕಿದಾಗ ಜನರು ಏನು ಅಂದುಕೊಳ್ಳುತ್ತಾರೋ ಎಂಬ ಯಾವುದೇ ಅಂಜಿಕೆ ಇಲ್ಲದೆ ಅವರು ಆನಂದಬಾಷ್ಪ ಸುರಿಸಿದ್ದಕ್ಕೆ ನಾನು ಹೇಗೆ ಪ್ರತಿಕ್ರಿಯಿಸಬೇಕೋ ಗೊತ್ತಾಗುತ್ತಿಲ್ಲ. ಆ ದಿನ ಕಾರ್ಯಕ್ರಮ ಮುಗಿಸಿ ನಾನು ಹೊರಟುಬಂದೆ. ಅಲ್ಲಿ ಅವರು ಏನು ಹೇಳಿದರು ಎಂಬುದೇ ಗೊತ್ತಾಗಲಿಲ್ಲ. ತುಂಬ ನರ್ವಸ್ ಆಗಿದ್ದೆ. ಮನೆಗೆ ಬಂದು ವಿಡಿಯೋ ನೋಡಿದ ನಂತರವೇ ಇದೆಲ್ಲ ಗೊತ್ತಾಗಿದ್ದು.’
ನಾಲ್ಕೈದು ವರ್ಷಗಳ ಹಿಂದೆ ಕೊಯಮತ್ತೂರಿನ ಈಶ ಯೋಗಕೇಂದ್ರದ ಶಿವರಾತ್ರಿ ಮಹೋತ್ಸವದಲ್ಲಿ ‘ಸೋಜುಗದ ಸೂಜಿಮಲ್ಲಿಗೆ ಮಾದೇವ ನಿನ್ನ...’ ಹಾಡು ಹಾಡಿ ಮನೆಮಾತಾದ, ಆ ಹಾಡನ್ನೂ ಜನಪ್ರಿಯತೆಯ ಉತ್ತುಂಗಕ್ಕೇರಿಸಿದ ಗಾಯಕಿ ಅನನ್ಯಾ ಭಟ್ ಸಂದರ್ಶನವೊಂದರಲ್ಲಿ ಹೇಳಿದ ಮಾತುಗಳಿವು. ಲಕ್ಷಗಟ್ಟಲೆ ಪ್ರೇಕ್ಷಕರು ಸೇರಿದೆಡೆ, ಸದ್ಗುರುಗಳ ಸಾನ್ನಿಧ್ಯದಲ್ಲಿ ವೇದಿಕೆಯೇರಿ ಹಾಡುವಾಗ ಅಂತಹ ಅನುಭವಿ ಗಾಯಕಿಯೇ ನರ್ವಸ್ ಆದರೆಂದರೆ ತುಸು ಆಶ್ಚರ್ಯವೇ. ಆದರೂ ಬೇಕಿದ್ದರೆ ಗಮನಿಸಿ- ವಿರಾಟ್ ಕೊಹ್ಲಿಯಂಥ ಕ್ರಿಕೆಟ್ ವೀರರೂ ತಮ್ಮ ಮೊದಮೊದಲ ಪಂದ್ಯಗಳ ಬಗ್ಗೆ ನೆನಪು ಮಾಡಿಕೊಳ್ಳುತ್ತ ಆಗ ನಾನು ನರ್ವಸ್ ಆಗುತ್ತಿದ್ದೆ ಎನ್ನುತ್ತಾರೆ. ಹತ್ತಾರು ಚಿತ್ರಗಳಲ್ಲಿ ನಟಿಸಿದ ನಟಿಯರೂ ‘ಅಣ್ಣಾವ್ರ ಜೊತೆ ಮೊದಲ ಬಾರಿ ಅಭಿನಯಿಸುವಾಗ ನರ್ವಸ್ ಆಗಿದ್ದೆ’ ಎನ್ನುತ್ತಾರೆ. ಬೇರೆಬೇರೆ ಕ್ಷೇತ್ರಗಳಲ್ಲಿ ಸಾಧನೆಯ ಕೀರ್ತಿಶಿಖರ ಏರಿದವರೆಲ್ಲ ಒಂದಲ್ಲಒಂದು ಸಂದರ್ಭದಲ್ಲಿ ನರ್ವಸ್ನೆಸ್ ಅನುಭವಿಸಿದವರೇ. ಅಂದಮೇಲೆ ನಮ್ಮನಿಮ್ಮಂಥ ಸಾಮಾನ್ಯರಿಗೆ ಯಾವುದೋ ಒಂದು ಮಹತ್ಕಾರ್ಯ ಮಾಡುವಾಗ ಹಾಗಾಗುವುದು ಸಹಜವೇ.
ಅಂತಹ ಸ್ಥಿತಿಯನ್ನು ಕನ್ನಡದಲ್ಲಿ ಯಾವ ಪದದಿಂದ ಸೂಚಿಸಬಹುದು? ಇಂಗ್ಲಿಷ್ನಲ್ಲಿ nervous ಎಂಬ ಪದ ಐದಾರು ಶತಮಾನಗಳ ಹಿಂದೆ, ನರಗಳಿಗೆ ಸಂಬಂಧಿಸಿದ್ದು ಎಂಬ ಸೀಮಿತ ಅರ್ಥದಲ್ಲಿ, ಮಾನವಶರೀರ ಶಾಸ್ತ್ರದಲ್ಲಿ ಬಳಕೆಯಾಗುತ್ತಿದ್ದದ್ದು. ಕಾಲಾಂತರದಲ್ಲಿ restless, agitated, lacking nerve, weak, timid, afraid ಮುಂತಾದ ಏರುಪೇರುಗಳನ್ನೆಲ್ಲ nervous ಎಂದು ಕರೆಯಲಾಯಿತು. ಅಷ್ಟೇಅಲ್ಲ, ಮಾನವಶರೀರ ಶಾಸ್ತ್ರದಲ್ಲಿ ನರಗಳಿಗೆ ಸಂಬಂಧಿಸಿದ ಎಂಬ ಸೀಮಿತ ಅರ್ಥಕ್ಕೆ neurological ಎಂಬ ಪ್ರತ್ಯೇಕ ಪದವನ್ನೇ ಸೃಷ್ಟಿಸಬೇಕಾಯಿತು. ಆದ್ದರಿಂದಲೇ ಸರ್ವವ್ಯಾಪಿ nervous ಪದಕ್ಕೆ ಕನ್ನಡದಲ್ಲಿ- ಕಳವಳ, ತಳಮಳ, ನಡುಕ, ಕಾತರ, ದಿಗಿಲು, ಮಿಡುಕು, ಅಂಜಿಕೆ, ಹಿಂಜರಿಕೆ, ಅಯೋಮಯ, ಆತಂಕ, ಗಾಬರಿ, ಗಲಿಬಿಲಿ, ಉದ್ವಿಗ್ನತೆ ಮುಂತಾದ ಪದಗಳೆಲ್ಲವೂ ಸ್ವಲ್ಪಮಟ್ಟಿಗೆ ಸರಿಹೊಂದುತ್ತವೆ. ಬೇರೆಬೇರೆ ಓದುಗರು ಇವೆಲ್ಲವನ್ನೂ ಸೂಚಿಸಿದ್ದಾರೆ ಕೂಡ. ಆದರೆ ಸಂಖ್ಯಾದೃಷ್ಟಿಯಿಂದ ಹೆಚ್ಚು ಪ್ರವೇಶಿಕೆಗಳು ಬಂದಿರುವುದು ‘ಅಧೀರ’ ಪದಕ್ಕೆ (ಪಿ.ಜೆ. ರಾಘವೇಂದ್ರ ಮೈಸೂರು, ಪ್ರಭುಪ್ರಸಾದ್ ನಡುತೋಟ, ಎನ್.ಕೆ ಸುಬ್ಬಣ್ಣ, ಶ್ರೀಧರ ಸೊಪ್ಪಿಮಠ, ಶೋಭಾ ಕುಮಾರಸ್ವಾಮಿ, ಸುರೇಂದ್ರ ಪೈ, ಮಂಜುಳಾ ಎಸ್.ಎನ್., ವಿಲಾಸ ಹುದ್ದಾರ, ಸಂಜೀವ ಜೋಶಿ, ಯಶೋದಾ ಎಂ. ಗೋಪಿ, ಜಿ. ನಾರಾಯಣ ರಾವ್, ವೇದವತಿ ಕೆ.ವಿ ಮುಂತಾದವರು). ಅಂದಹಾಗೆ ಕೆಜಿಎಫ್ ಚಲನಚಿತ್ರ ಸರಣಿಯಲ್ಲಿ ಖಳನಾಯಕನ ಹೆಸರು ಕೂಡ ‘ಅಧೀರ’ ಅಂತಿದ್ದುದನ್ನು ನಾವಿಲ್ಲಿ ಸ್ಮರಿಸಬಹುದು.
‘ಅಳುಕು’ (ಯು.ಪರಮೇಶ್ವರ ಭಟ್, ಜ್ಯೋತಿ ಎಂ., ಮಿಸ್ಕಿನ್ ಕುಟುಂಬ ಸದಸ್ಯರು) ಸಹ ಸರಿಹೊಂದುವ ಪದವೇ. ಹಳಗನ್ನಡದಲ್ಲಿ ಅದು ‘ಅಳ್ಕು’ ಎಂಬ ರೂಪದಲ್ಲೂ ಬಳಕೆಯಲ್ಲಿತ್ತೆಂದು ಕಾಣುತ್ತದೆ. ‘ಪರಸೈನ್ಯ ಭೈರವನ ಬರವಿಂಗಳ್ಕಿ ಗಾಳಿಗೊಡ್ಡಿದ ಸೊಡರಂತೆ ನಡನಡ ನಡುಗುವ ಕುರುಧ್ವಜಿನಿಯಂ ಕಂಡು ಸುಯೋಧನಂಗೆ ಗಾಂಗೇಯನಿಂತೆಂದಂ...’ ಎಂದು ಪಂಪಭಾರತದಲ್ಲೊಂದು ಸನ್ನಿವೇಶ. ‘ಅರ್ಜುನನ ಬರುವಿಕೆಯನ್ನು ಕಂಡು ಅಳುಕುತ್ತ ಗಾಳಿಗೊಡ್ಡಿದ ದೀಪದ ಹಾಗೆ ಗಡಗಡ ನಡುಗುತ್ತಿರುವ ಕೌರವಸೈನ್ಯವನ್ನು ಕಂಡು ದುರ್ಯೋಧನನಿಗೆ ಭೀಷ್ಮನು ಹೀಗೆಂದನು...’ ಎಂದು ವಿವರಣೆ. ಅದೇ ಅಳುಕನ್ನು ಆಧುನಿಕ ನವ್ಯ ಶೈಲಿಯ ಕವಿತೆಯಲ್ಲಿ ಹೊಸೆದಿದ್ದಾರೆ ಕಾಸರಗೋಡಿನ ತೇಜಸ್ವೀ ಕೆ.ಯಂ., ಈ ರೀತಿಯಾಗಿ: ‘ವೃತ್ತಿಪೂರ್ವ ಸಂದರ್ಶನಕಾಗಿ ಬಂದ ಅಭ್ಯರ್ಥಿಯು| ಹಾಕಲೆತ್ನಿಸುವನು ಮನದ ಮೂಲೆಯಲ್ಲಿ ಮೆಲುಕು| ಕುರ್ಚಿ ಮೇಲೆ ಕುಳಿತು ದೃಷ್ಟಿ ಸಂದರ್ಶಕನತ್ತ ಬೀರೆ| ನೆನಪು ಖಾಲಿ; ಸರ್ವಾಂಗವ ತುಂಬುವುದದು ಅಳುಕು|’ ಹಾಗೆಯೇ, ಉದ್ವಿಗ್ನತೆಗೆ ಎದೆಯಲ್ಲಿ ಉಂಟಾಗುವ ಕಾವು, ರಕ್ತ ಬಿಸಿಯಾದ ಹಾಗೆ ಅನಿಸುವ ಒತ್ತಡ ಭಾವ ಎಂಬರ್ಥದಲ್ಲಿ ‘ಎದೆಗಾವು’ (ಛಾಯಾ ಭಗವತಿ), ‘ಎದೆಗುದಿ’ (ಸಿದ್ದನಗೌಡ ಸೋ. ಮುದಿಗೌಡ್ರ) ಮತ್ತು ‘ಎದೆಹದುಗು’ (ಶ್ರೀನಿವಾಸ ರಂ.ಗು.) ಪದಗಳೂ ಚೆನ್ನಾಗಿವೆ. ಪರವಶ ಎನ್ನುವಂತೆ ನರವಶ ಎನ್ನಬಹುದಲ್ವಾ ಎಂಬ ಶಿವಶಂಕರ ಪ್ರಭು ಅವರ ತರ್ಕವೂ ಚೆನ್ನಾಗಿದೆ; Nervous ಪದದ ಮೂಲ ಅರ್ಥ-ಉಚ್ಚಾರಗಳೆರಡಕ್ಕೂ ಹತ್ತಿರವಾಗಿಯೂ ಇದೆ; ‘ಪರಮಾತ್ಮ’ ಚಿತ್ರಕ್ಕೆಂದು ಜಯಂತ ಕಾಯ್ಕಿಣಿಯವರು ಬರೆದಿದ್ದಕ್ಕೆ ಅಣಕವಾಡು ರೀತಿಯಲ್ಲಿ ‘ನರವಶನಾದೆನು ಅರಿಯುವ ಮುನ್ನವೇ...’ ಎಂದು ಹಾಡುವಂತೆಯೂ ಇದೆ!
ಕಳೆದಸಲ ಕೇಳಿದ್ದ ಎರಡನೆಯ ಪದ Punch. ಇಂಗ್ಲಿಷ್ನಲ್ಲಿ ಇದಕ್ಕೆ ಸಂದರ್ಭಾನುಸಾರ ಬೇರೆಬೇರೆ ಅರ್ಥಗಳಿವೆ. ಮುಷ್ಟಿಯಿಂದ ಕೊಡುವ ಬಲವಾದ ಹೊಡೆತ a forceful hit with a fist ಮೊದಲನೆಯ ಅರ್ಥ. ಎರಡನೆಯದಾಗಿ, ಬರಹದಲ್ಲಿ/ ಭಾಷಣದಲ್ಲಿ ಆಸಕ್ತಿಕರ ಮತ್ತು ಪರಿಣಾಮಕಾರಿ ಅಂಶವಿದ್ದರೆ ಅದು ಕೂಡ ಪಂಚ್ ಎಂದು ಕರೆಸಿಕೊಳ್ಳುತ್ತದೆ. ಹಾಸ್ಯಸಂಭಾಷಣೆಗಳಲ್ಲಿ, ಹನಿಗವನಗಳಲ್ಲಿ ಪಂಚ್ ಇರಲೇಬೇಕು. ಹಾಗೆ ನೋಡಿದರೆ ಅದೂ ಒಂಥರದಲ್ಲಿ ಹೊಡೆತವೇ, ನೋವು ತರುವಂಥದಲ್ಲ ನಗೆಯುಕ್ಕಿಸುವಂಥದು. ಹಾಸ್ಯಸಾಹಿತಿ ಡುಂಡಿರಾಜ್ ಅವರ ‘ಪಂಚ್-ಕಾ-ಒಟಢ’ ಅಂಕಣ ವಿಜಯವಾಣಿಯಲ್ಲಿ ಪ್ರಕಟವಾಗುತ್ತಿದ್ದದ್ದು ನಿಮಗೆ ನೆನಪಿರಬಹುದು. ಮೂರನೆಯದಾಗಿ, ಕಾಗದ ಅಥವಾ ಲೋಹದ ತೆಳು ಹಾಳೆಯ ಮೇಲೆ ರಂಧ್ರ ಮಾಡುವ ಉಪಕರಣವನ್ನೂ ಪಂಚ್ ಎನ್ನಲಾಗುತ್ತದೆ. ಈ ಮೂರೂ ಸಂದರ್ಭಗಳಲ್ಲಿ ನಾಮಪದ ಮತ್ತು ಕ್ರಿಯಾಪದವಾಗಿಯೂ ಪಂಚ್ ಬಳಕೆ ಸಾಧ್ಯವಿದೆ. ನಾಲ್ಕನೆಯದಾಗಿ- ಹಣ್ಣಿನರಸ, ನೀರು, ಅಮಲುಪದಾರ್ಥ, ಸಕ್ಕರೆ, ಮತ್ತು ಮಸಾಲೆ ಬೆರೆಸಿ ತಯಾರಿಸಿದ ಪೇಯವನ್ನೂ ಪಂಚ್ ಎನ್ನುತ್ತೇವೆ. ಸ್ವಾರಸ್ಯವೆಂದರೆ ಈ ನಾಲ್ಕನೆಯ ಅರ್ಥಕ್ಕೆ ಸಂಸ್ಕೃತದ ಪಂಚ (ಪೇಯದ ತಯಾರಿಯಲ್ಲಿ ಐದು ವಸ್ತುಗಳ ಬಳಕೆ) ಮೂಲ ಎಂಬ ಅಭಿಪ್ರಾಯವೂ ಇದೆ.
ನಾಲ್ಕೂ ಸಂದರ್ಭಗಳಿಗೆ ಹೊಂದುವಂತೆ ಒಂದೇ ಕನ್ನಡ ಪದ ಕಂಡುಕೊಳ್ಳಲಿಕ್ಕಾಗದು. ಮೊದಲ ಎರಡನ್ನಷ್ಟೇ ಪರಿಗಣಿಸಿದರೆ ಗುದ್ದು ಸೂಕ್ತವೆನಿಸುತ್ತದೆ. ಬಹಳಷ್ಟು ಓದುಗರು- ಶಂಕರ ಹೆಬ್ಬಾರ್, ಶಿವಪ್ರಕಾಶ ಎಚ್.ಆರ್., ರಾಜಶೇಖರ ಗುತ್ತಿ, ಎಂ. ಬಾಲಕೃಷ್ಣ ಭಟ್, ಬಿ.ಕೆ. ಶಿವಕುಮಾರ್, ನವೀನಕೃಷ್ಣ, ಬಿ.ವಿ. ಕುಲಕರ್ಣಿ, ಟಿ.ಕೆ. ರಂಗನಾಥ, ಶೈಲಶ್ರೀ ರಾವ್, ಷಡಕ್ಷರಮುನಿ ಸ್ವಾಮೀಜಿ, ಶಿವಬಸು ಯೋಗಿಮಠ, ಜ್ಯೋತಿಮಧು, ಗಿರೀಶ ಫಡ್ಕೆ, ಅಂಬುಜಾ ಕುಲಕರ್ಣಿ, ಅಂಜನಾ ತುಮಕೂರು, ಆನಂದ ಗೋಡಸೆ, ಹೇಮಂತ ಸಂಪಗಾಂವಕರ, ರಾಜೇಂದ್ರ ಕಳಸಣ್ಣವರ, ಎಂ.ಕೆ. ರಮೇಶ್, ರುದ್ರೇಶ ಕೆ.ಬಿ., ಗಣೇಶ ದಾವಣಗೆರೆ, ಕಾಡೇಶ ವಿ.ಬಿ., ಚಂದ್ರಿಕಾ ಹೆಗಡೆ, ವಸಂತಲಕ್ಷ್ಮಿ ರಾಮಚಂದ್ರ, ಭ.ನಿಂ. ಗೋಪಿನಾಥ್, ಭಾಗ್ಯಶ್ರೀ ಕೆ.ಸಿ., ನಾಗಮಣಿ ಎಸ್.ಎನ್., ನರಸಿಂಹಯ್ಯ ಬಾಳಿಲ, ಶಾಂತಿನಿ ಮಂಜುನಾಥ್, ಸತೀಶ ಕಬೇಕೋಡಿ, ಎನ್.ಎಚ್. ದೇಶಪಾಂಡೆ, ಪ್ರಕಾಶ ಉಮರಾಣಿ, ಕೃಷ್ಣ ಬರ್ವೆ, ನಟರಾಜು ಬಿ.ಎಸ್., ಚಂಪಾವತಿ ಜೋಶಿ, ಸಣ್ಣಪ್ಪ ನಾಯಕ್, ಜಿ.ಕೆ. ಶಶಿಕಲಾ, ಪುಷ್ಪಲತಾ ಸಂಪಂಗಿರಾಮನಗರ, ಲೋಕೇಶ ಮಠದ, ಎ.ಪಿ. ಉಡುಪ, ಶೋಭಾ ತಿಪಟೂರು, ಡಾ. ಸಂಗಮೇಶ ಸುರಭಿ ಮುಂತಾದವರು ‘ಗುದ್ದು’ ತಮ್ಮ ಆಯ್ಕೆಯೆಂದು ತಿಳಿಸಿದ್ದಾರೆ.
ಇಂಗ್ಲಿಷ್ನ ಪಂಚ್ನಂತೆಯೇ ಕನ್ನಡದ ಗುದ್ದು ಸಹ ನಾಮಪದವಾಗಿಯೂ ಕ್ರಿಯಾಪದವಾಗಿಯೂ ಬಳಕೆ ಸಾಧ್ಯವಿದೆ. ಗುದ್ದಿನ ಇನ್ನೊಂದು ವೈಶಿಷ್ಟ್ಯವೆಂದರೆ ಅದೇನೂ ಮಾರಣಾಂತಿಕ ಪ್ರಹಾರವಲ್ಲ. ಸಿಟ್ಟಿನಿಂದಲೇ ಆಗಬೇಕೆಂದಿಲ್ಲ, ಸ್ನೇಹ-ಸಲುಗೆಯ ಅಭಿವ್ಯಕ್ತಿಯೂ ಆದೀತು. ಬೇರೆ ಗಮನಾರ್ಹ ಪ್ರವೇಶಿಕೆಗಳೆಂದರೆ- ‘ಚುರುಕೇಟು’ (ಡಾ. ಜಿ.ಎಸ್. ವೇಣುಗೋಪಾಲ್), ‘ಇಕ್ಕು’ (ದೇಶವಂತ ಜಿ.ವಿ.) ಮತ್ತು ‘ಮುಷ್ಟಿಘಾತ’ (ಬಿ.ಆರ್. ಚಂದ್ರಮೌಳಿ, ಹೆಮ್ಮಿಗೆ ಗೋಪಾಲಕೃಷ್ಣ). ಕೊನೆಯದಾಗಿ Walkie-Talkie. ಪ್ರೇಷಕನೂ ಗ್ರಾಹಕನೂ ತಮ್ಮತಮ್ಮ ಕೈಯಲ್ಲಿ ಹಿಡಿದುಕೊಂಡು ಸೀಮಿತ ವ್ಯಾಪ್ತಿಯಲ್ಲಿ ದೂರಸಂವಹನಕ್ಕೆ ಬಳಸುವ ಉಪಕರಣ. ಕೆನಡಾದ ಡೊನಾಲ್ಡ್ ಹಿಂಗ್ಸ್ ಎಂಬಾತ ಸೇನೆಯಲ್ಲಿ ಬಳಕೆಗೆಂದೇ 1937ರಲ್ಲಿ ಮಾಡಿದ ಆವಿಷ್ಕಾರ. ಆರಂಭದಲ್ಲಿ ಅದನ್ನು ಹ್ಯಾಂಡ್ಹೆಲ್ಡ್ ರೇಡಿಯೊ ಕಮ್ಯುನಿಕೇಷನ್ ಎನ್ನಲಾಗುತ್ತಿತ್ತು. 1939ರಲ್ಲಿ ಎರಡನೆಯ ಪ್ರಪಂಚಯುದ್ಧ ಆರಂಭವಾದ ಮೇಲೆ ಅದರ ಬಳಕೆ ಹೆಚ್ಚಿತು. ಕೈಯಲ್ಲಿ ಹಿಡಿದುಕೊಂಡು ನಡೆದಾಡುತ್ತ ಮಾತನಾಡಬಹುದಾದ್ದರಿಂದ ಸೈನಿಕರು ಅದನ್ನು ವಾಕಿ-ಟಾಕಿ ಎಂದು ಕರೆದರು. ಈಗ ಪ್ರಪಂಚದಾದ್ಯಂತ ಮಿಲಿಟರಿಗಳಲ್ಲಷ್ಟೇ ಅಲ್ಲದೇ, ಸುರಕ್ಷಾ ಕಾರ್ಯಾಚರಣೆ, ಪೌರಾಡಳಿತ, ಸಮಾರಂಭಗಳ ನಿರ್ವಹಣೆಗಳಲ್ಲೂ, ಚಿಕ್ಕಮಕ್ಕಳಿಗೆ ಆಟಿಕೆಯಾಗಿಯೂ ಉಪಯೋಗವಾಗುತ್ತದೆ.
ಬಳಸುವಾಗ ನಡೆಯುತ್ತಾ ನುಡಿಯಬಹುದಾದ, ನುಡಿಯುತ್ತಾ ನಡೆಯಬಹುದಾದ ಸೌಕರ್ಯ ಗಮನಿಸಿ ‘ನಡೆ-ನುಡಿ’ ಎಂಬ ಪದಜೋಡಿಯನ್ನು ಬಹಳಷ್ಟು ಓದುಗರು ಸೂಚಿಸಿದ್ದಾರೆ. ರಾಜಲಕ್ಷ್ಮಿ ನಾಗರಾಜ್, ರಾಜೇಂದ್ರ ದೇಶಪಾಂಡೆ, ಕಿರಣ ಕುಮಾರ್, ವೈ. ನಾಗೇಂದ್ರಪ್ರಸಾದ್, ಸತ್ಯಮಾಧವ ಲಿಂಗದಹಳ್ಳಿ, ರವೀಂದ್ರ ಬಿ.ಡಿ., ವಾಸುದೇವ ಭಟ್, ವಿದ್ಯಾಶಂಕರ ಶರ್ಮ, ಗಂಗಾಧರ ಕಾಟೇನಹಳ್ಳಿ, ವಿದ್ಯಾ ಪ್ರಕಾಶ್, ವಿ. ವಿಜಯೇಂದ್ರ ರಾವ್, ಕೆ.ವಿ. ಶ್ರೀನಿವಾಸಮೂರ್ತಿ, ಅಶೋಕ ಪೂಜಾರ, ಗಿರೀಶ ಕೆ.ಎಸ್., ರಾಜೀವಲೋಚನ, ಮನೋನ್ಮಣಿ ಕೆ.ವಿ., ಮಮತಾ ನಾಗರಾಜ್, ಎಸ್.ಕೆ. ಶಿವಪ್ಪ, ಸುರೇಶ್ ಪುರಾಣಿಕ್ ಮುಂತಾದವರು. ಆದರೆ ‘ನಡೆನುಡಿ’ ಎಂಬ ಪದಪುಂಜ ಈಗಾಗಲೇ ಕನ್ನಡಸಾಹಿತ್ಯದಲ್ಲಿ ಒಳ್ಳೆಯದೊಂದು ಅರ್ಥಕ್ಕಾಗಿ ಬಳಕೆಯಲ್ಲಿದೆ. ‘ನಡೆನುಡಿ ಸಿದ್ಧಾಂತವಾದಲ್ಲಿ ಕುಲ ಹೊಲೆ ಸೂತಕವಿಲ್ಲ. ನುಡಿ ಲೇಸು ನಡೆಯಧಮವಾದಲ್ಲಿ, ಅದು ಬಿಡುಗಡೆಯಿಲ್ಲದ ಹೊಲೆ...’ ಎಂದು ಮಾದಾರ ಚೆನ್ನಯ್ಯನ ವಚನವೂ ಇದೆ. ನಮ್ಮ ನಡತೆಯು ನಮ್ಮ ಸಿದ್ಧಾಂತವಾಗಬೇಕು; ಮಾತು ಮತ್ತು ಕೃತಿ ಒಂದೇ ಆಗಿರಬೇಕು ಎಂಬ ಉನ್ನತ ಆಶಯ ಅದರಲ್ಲಿದೆ.
ಅದಕ್ಕಿಂತ, ವಾಕಿ-ಟಾಕಿ ಉಪಕರಣವನ್ನು ‘ನಡೆನುಡಿಕೆ’ ಎಂದು ಕರೆಯಬಹುದೆಂಬ ಸಲಹೆ- ಹುಬ್ಬಳ್ಳಿಯ ಶಾಂತಿನಾಥ ಕೆ. ಹೋತಪೇಟಿ ಮತ್ತು ಬೆಂಗಳೂರಿನ ಮಂಜುನಾಥ ಡಿ.ಎಸ್. ಅವರಿಂದ ಬಂದಿರುವುದು- ಹೆಚ್ಚು ಸ್ವೀಕಾರಾರ್ಹವೆನಿಸುತ್ತದೆ. ಕೈಯಲ್ಲಿ ಹಿಡಿದು ಶಬ್ದಸಂವಹನಕ್ಕೆ ಬಳಸುವ ಉಪಕರಣವಾದ್ದರಿಂದ, ಮತ್ತು ಪದರೂಪದಲ್ಲೂ ಬುಡುಬುಡಿಕೆಯನ್ನು ಹೋಲುವುದರಿಂದ, ‘ನಡೆನುಡಿಕೆ’ ತರ್ಕಬದ್ಧ ಆಯ್ಕೆಯಾಗುತ್ತದೆ.ಅದೇರೀತಿ ‘ಚಲಿ-ಉಲಿ’ (ದಾಮೋದರ ಭಟ್, ವಿಶ್ವನಾಥ ಮೊಸಳೆ, ಎ.ಬಿ. ಪ್ರಕಾಶ್, ವಿಲಾಸಿನಿ ಭಟ್) ಸಹ ಆಕರ್ಷಕವಾಗಿದೆ. ಪದ ಕಟ್ಟುವ, ಹುಡುಕುವ ಚಟುವಟಿಕೆಯಲ್ಲಿ ಅತ್ಯಂತ ಉತ್ಸಾಹದಿಂದ ಕ್ರಿಯಾಶೀಲರಾಗಿ ಭಾಗವಹಿಸುತ್ತಿರುವ ಎಲ್ಲರಿಗೂ ಅಭಿನಂದನೆಗಳು.
ಈ ವಾರದ ಮೂರು ಪದಗಳು
1. Busy: ಬ್ಯುಸಿ, ಬಿಜಿ, ಬಿಸಿ ಅಂತೆಲ್ಲ ಬರೆದು ಇಂಗ್ಲಿಷ್ ಪದದಲ್ಲೇ ನಿಭಾಯಿಸುತ್ತೇವೆ. ಕನ್ನಡದಲ್ಲಿ ಹೇಳಬಾರದೇ?
2. Expiry Date: ಖಾದ್ಯಪದಾರ್ಥಗಳನ್ನು, ಔಷಧಗಳನ್ನು ಕೊಂಡು ಕೊಳ್ಳುವಾಗ ಯಾವತ್ತಿನವರೆಗೆ ಬಾಳುತ್ತದೆ ಎಂದು ನೋಡುತ್ತೇವಲ್ಲ ಅದೇ.
3. Sample: ಯಾವುದರದೇ ಗುಣ ತೋರಿಸುವ ಅದರದೇ ಒಂದು ಚಿಕ್ಕ ಭಾಗ ಎಂಬ ಅರ್ಥ ಕೊಡುವ ಕನ್ನಡ ಪದ ಬೇಕಾಗಿದೆ!
ಓದುಗರು ಪ್ರತಿಯೊಂದು ಆಂಗ್ಲ ಪದಕ್ಕೆ ತಲಾ ಒಂದರಂತೆ ಕನ್ನಡ ಪದ ತಿಳಿಸಬೇಕು. ತಮ್ಮ ಹೆಸರು ಮತ್ತು ಊರಿನ ಹೆಸರನ್ನೂ ಬರೆಯಬೇಕು. ಪದಗಳನ್ನು ಕಳುಹಿಸಲಿಕ್ಕೆ ಗಡುವು: ಮುಂದಿನ ಶನಿವಾರ ಸಂಜೆ 6 ಗಂಟೆಯೊಳಗೆ. ವಾಟ್ಸ್ಆಪ್ ಸಂಖ್ಯೆ: +12404010945