

ನಡಿಗೆ ಹೊಸ ಹಾದಿ ತೋರಿಸುತ್ತದೆ. ಹೊಸ ಪಯಣಕ್ಕೆ ಸ್ಪೂರ್ತಿಯಾಗುತ್ತದೆ. ಹೊಸ ಗುರಿಗೆ ಇಂಬು ನೀಡುತ್ತದೆ. ಹೊಸ ಸಾಧ್ಯತೆಗಳನ್ನು ಪರಿಚಯಿಸುತ್ತದೆ. ಇಂಥ ನಡಿಗೆ ಆರೋಗ್ಯಕ್ಕಾಗಿ ಮಾತ್ರವಲ್ಲ, ಸಾಮಾಜಿಕ ಸ್ವಾಸ್ಥ್ಯಕ್ಕೂ ನಾಂದಿ ಹಾಡುತ್ತದೆ ಎಂಬುದಕ್ಕೆ ಸಾಕ್ಷಿಯಾಗಿದ್ದು ‘ವಾಕ್ ವಿಥಿನ್’.
ಸ್ವಾಮಿ ವಿವೇಕಾನಂದ ಯೂತ್ ಮೂವ್ವೆುಂಟ್ ಹಾಗೂ ಗ್ರಾಸ್ ರೂಟ್ ಅಡ್ವೋಕಸಿ ಮೂವ್ವೆುಂಟ್ ವತಿಯಿಂದ ಡಿಸೆಂಬರ್ 22ರಿಂದ 29ರವರೆಗೆ ಮೈಸೂರು ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲಿ ನಡೆದ ‘ವಾಕ್ ವಿಥಿನ್’ ನಡಿಗೆ ಸಮಾಜದ ಧನಾತ್ಮಕ ಸಾಧ್ಯತೆಗಳನ್ನು ಪರಿಚಯಿಸಿತು. ಅಭಿವೃದ್ಧಿಪರ ಚಿಂತಕ ಡಾ. ಆರ್. ಬಾಲಸುಬ್ರಮಣ್ಯಂ ಅವರ ನೇತೃತ್ವದಲ್ಲಿ ಆಯೋಜಿಸಿದ ಗ್ರಾಮೀಣ ಪ್ರದೇಶದ ಈ ನಡಿಗೆಯಲ್ಲಿ ದೇಶದ ಹಲವು ರಾಜ್ಯಗಳ ಅಭಿವೃದ್ಧಿಪರ ಉತ್ಸಾಹಿಗಳು ಭಾಗವಹಿಸಿದ್ದರು.
ಎಂಟು ದಿನಗಳ ಕಾಲ 160 ಕಿ.ಮೀ. ನಡಿಗೆ; ಪ್ರತಿ ದಿನ ಇಪ್ಪತ್ತು ಕಿ.ಮೀ.; ಒಟ್ಟು 41 ಹಳ್ಳಿಗಳಿಗೆ ಭೇಟಿ; ನಿತ್ಯವೂ ಒಂದೊಂದು ವಿಷಯದ ಬಗ್ಗೆ ಗ್ರಾಮಸ್ಥರ ಜತೆ ಸಂವಾದ; ಆ ಮೂಲಕ ಅವರ ಬದುಕನ್ನು ಅರಿತುಕೊಳ್ಳುವ ಪ್ರಯತ್ನ; ಇದು ಈ ನಡಿಗೆಯ ಉದ್ದೇಶ. ದೇಶದ ಆರು ರಾಜ್ಯಗಳ 70ಕ್ಕೂ ಹೆಚ್ಚು ಪ್ರತಿನಿಧಿಗಳು ತಲಾ 10 ಸಾವಿರ ರೂ. ದೇಣಿಗೆ ನೀಡಿ ‘ವಾಕ್ ವಿಥಿನ್’ನಲ್ಲಿ ಪಾಲ್ಗೊಂಡಿದ್ದರು. ಅವರೆಲ್ಲರಿಗೂ ಇದು ಜೀವಿತಾವಧಿಯ ವಿಶೇಷ ಅನುಭವ ಎನ್ನಿಸಿದ್ದು ವಿಶೇಷ.
ನಗರೀಕರಣದ ಪ್ರಭಾವ: ಮೈಸೂರು ನಗರಕ್ಕೆ ಹತ್ತಿರವಿರುವ ಹಳ್ಳಿಗಳಲ್ಲಿ ನಗರೀಕರಣದ ಪರಿಣಾಮದ ಬಗ್ಗೆ ಜನರ ಜತೆ ಸಮಾಲೋಚನೆ ನಡೆಸಲಾಯಿತು. ಕೃಷಿ ಭೂಮಿಗಳನ್ನು ರಿಯಲ್ ಎಸ್ಟೇಟ್ಗೋಸ್ಕರ ಮಾರಾಟ ಮಾಡಿ, ತಕ್ಷಣಕ್ಕೆ ಒಂದಿಷ್ಟು ದೊಡ್ಡ ಮೊತ್ತದ ಹಣ ಪಡೆದ ಜನರ ಜೀವನ ಶೈಲಿ ಬದಲಾಗಿದೆ. ವಿಲಾಸಿ ಜೀವನಕ್ಕೆ ಹೊಂದಿಕೊಂಡ ಹಲವು ಕುಟುಂಬಗಳಲ್ಲಿ ಕೃಷಿ ಭೂಮಿ ಮಾರಾಟದಿಂದ ಬಂದ ಹಣ ಕರಗುತ್ತಿದ್ದಂತೆ ಮುಂದೆ ಜೀವನಕ್ಕೆ ಏನು ಆಧಾರ ಎಂಬ ಚಿಂತೆ ಕಾಡುತ್ತಿದೆ. ರಿಯಲ್ ಎಸ್ಟೇಟ್ ಎಂಬ ಮಾಫಿಯಾ ನಗರಕ್ಕೆ ಹತ್ತಿರವಿರುವ ಹಳ್ಳಿಗಳ ಜನರ ಬದುಕನ್ನು ಕಿತ್ತುಕೊಂಡಿದೆ, ಮಾತ್ರವಲ್ಲ, ಹೊಸ ರೀತಿಯ ಸಮಸ್ಯೆಗಳು ಉದ್ಭವಿಸುವುದಕ್ಕೂ ಕಾರಣವಾಗಿದೆ ಎಂಬುದು ಈ ನಡಿಗೆಯ ವೇಳೆ ಕಂಡ ಸತ್ಯ.
ಗಂಡು-ಹೆಣ್ಣು ತಾರತಮ್ಯ: ಹಳ್ಳಿಗಳಲ್ಲಿ ಶಿಕ್ಷಣಕ್ಕೆ ಎಷ್ಟು ಮಹತ್ವ ನೀಡಲಾಗುತ್ತಿದೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಸಲುವಾಗಿ ಮನೆಯೊಂದಕ್ಕೆ ಭೇಟಿ ನೀಡಲಾಯಿತು. ಸಮಾಜದಲ್ಲಿ ಇಂದಿಗೂ ಲಿಂಗ ತಾರತಮ್ಯ ಎಷ್ಟರಮಟ್ಟಿಗೆ ಜೀವಂತವಾಗಿದೆ ಎಂಬುದು ಅಲ್ಲಿ ಅರಿವಾಯಿತು. ಅದು ಇಬ್ಬರು ಮಕ್ಕಳಿರುವ ಕುಟುಂಬ.
ಅಪ್ಪ-ಅಮ್ಮ ಇಬ್ಬರೂ ಅನಕ್ಷರಸ್ಥರು. ಮಗಳು ದೊಡ್ಡವಳು. ಕಲಿಯುವದರಲ್ಲಿ ಬುದ್ಧಿವಂತೆ. ಆದರೂ ಆಕೆ ಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಓದುತ್ತಾಳೆ. ಮಗ ಕಾನ್ವೆಂಟ್ ಶಾಲೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ ಕಲಿಯುತ್ತಾನೆ. ಏಕೆ ಹೀಗೆ ಎಂದು ವಿಚಾರಿಸಿದರೆ ‘‘ಮಗಳನ್ನು ಸರ್ಕಾರಿ ಶಾಲೆಗೆ ಸೇರಿಸಿದರೆ ಸರ್ಕಾರದ ಭಾಗ್ಯಲಕ್ಷ್ಮಿ ಯೋಜನೆಯ ಅಡಿಯಲ್ಲಿ ಸೌಲಭ್ಯ ಸಿಗುತ್ತೆ. ಎಷ್ಟಾದರೂ ಹೆಣ್ಣು ಮಗಳಲ್ಲವೇ? ಕೊಟ್ಟ ಮನೆಗೆ ಹೋಗುವವಳು’’ ಎಂಬ ಅಭಿಪ್ರಾಯ ಕುಟುಂಬ ಸದಸ್ಯರಿಂದ ಬಂತು.
ಕುಡಿತಕ್ಕೆ ಹೆಂಗಸರಿಂದ ಬೆಂಬಲ: ಪುರುಷರು ಮದ್ಯಪಾನ ಮತ್ತಿತರ ದುಶ್ಚ್ಚಗಳಿಗೆ ಬಲಿಯಾಗಿ ಕುಟುಂಬಗಳನ್ನು ಕಷ್ಟಕ್ಕೆ ದೂಡಿದ್ದರೆ, ಅಂಥ ದುಶ್ಚಟಗಳನ್ನು ಮಹಿಳೆಯರೇ ಬೆಂಬಲಿಸುತ್ತಿರುವುದು ಸೋಜಿಗ. ‘‘ಶ್ರಮದ ಕೆಲಸ ಮಾಡುವ ಪುರುಷರಿಗೆ ನಿದ್ದೆ ಬರೋದಿಲ್ಲ. ನಿದ್ದೆ ಬರಬೇಕೆಂದರೆ ಮದ್ಯಪಾನ ಅವಶ್ಯ’’ ಎಂದು ಸಮರ್ಥಿಸುವ ಮಹಿಳೆಯರೂ ಹಳ್ಳಿಗಳಲ್ಲಿ ಕಾಣಸಿಕ್ಕರು. ಆಧುನಿಕ ಜೀವನ ಪದ್ಧತಿಯಲ್ಲಿ ಹಲವು ಹೊಸ ಸವಾಲುಗಳನ್ನು ಗ್ರಾಮೀಣ ಪ್ರದೇಶದ ಜನ ಎದುರಿಸಿದರೂ, ಮಾನವೀಯತೆ ಮತ್ತು ಸಂಸ್ಕೃತಿ ಉಳಿದಿರುವುದು ಹಳ್ಳಿಗಳಲ್ಲಿಯೇ ಎಂಬ ಅನುಭವ ನಡಿಗೆದಾರರಿಗೆ ಆಯಿತು.
ಎಷ್ಟೆಲ್ಲ ಸಮಸ್ಯೆಗಳ ಮಧ್ಯೆಯೂ ಹಳ್ಳಿಗರಲ್ಲಿ ಅಂತಃಕರುಣ, ಮಾನವೀಯತೆ ಉಳಿದಿರುವುದು ಮೆಚ್ಚಬೇಕಾದಂಥದ್ದು. ಅನುಕರಣೀಯವಾದದ್ದು. ‘‘ಬಿಸಿಲಿನಲ್ಲಿ ನಡೆಯುತ್ತಿದ್ದೀರಿ, ನೀರು ಕುಡೀರಿ. ಕಾಫಿ ಮಾಡಿಸ್ತೀನಿ ಬನ್ನಿ. ದಣಿವಾರಿಸಿಕೊಂಡು ಹೋಗಿ’’ ಎಂದು ನಡಿಗೆದಾರರನ್ನು ಕರೆಯುವ ಜನ ಎಲ್ಲೆಡೆ ಸಿಗುತ್ತಿದ್ದರು. ‘‘ನಮ್ಮ ತೋಟದಲ್ಲಿ ಬೆಳೆದ ಬಾಳೆಹಣ್ಣು ಇದು. ತಗೊಳ್ಳಿ. ನಿಮ್ಮವರಿಗೆಲ್ಲ ಹಂಚಿ’’ ಎಂದು ಪ್ರೀತಿಯಿಂದ ಬಾಳೆಗೊನೆಗಳನ್ನು ನೀಡುತ್ತಿದ್ದ ರೈತರು. ಊಟ- ಉಪಾಹಾರ ನೀಡಲು ಕಾತರದಿಂದ ಕಾಯುತ್ತಿದ್ದ ಜನ. ಇಂಥ ವಾತಾವರಣವನ್ನು ಕಂಡ ನಡಿಗೆದಾರರಿಗೆ ಹೃದಯ ತುಂಬಿ ಬಂತು.
ಕೆರೆಯ ನೀರನು ಕೆರೆಗೆ ಚೆಲ್ಲಿ...
ನಡಿಗೆಯ ಮಾರ್ಗಮಧ್ಯೆ ಮೈಸೂರಿನ ಮಾನಸಿಕ ಅಸ್ವಸ್ಥ ಮಹಿಳೆಯರ ವಸತಿ ಆರೈಕೆ ಕೇಂದ್ರಕ್ಕೆ (ಚಿಗುರು) ತಂಡ ಭೇಟಿ ನೀಡಿತು. ನಡಿಗೆಯಲ್ಲಿ ಸಂಗ್ರಹವಾದ 5 ಲಕ್ಷ ರೂ. ದೇಣಿಗೆಯ ಪೈಕಿ 2.5 ಲಕ್ಷ ರೂ.ಗಳನ್ನು ಈ ಆಶ್ರಮಕ್ಕೆ ನೀಡಲಾಯಿತು. ಇದನ್ನು ನಡೆಸುತ್ತಿರುವ 28 ವರ್ಷ ವಯಸ್ಸಿನ ಯುವತಿ ಸುಷ್ಮಾ ಅವರ ಮಾನವೀಯ ಕಾರ್ಯ ಇಡೀ ತಂಡಕ್ಕೆ ಸ್ಪೂರ್ತಿ ನೀಡಿತು.
‘ನಮ್ಮ ನೋವು ನಮಗೆ ಗೊತ್ತಾದರೆ ನಾವು ಬದುಕಿದ್ದೇವೆ ಎಂದರ್ಥ, ಪರರ ನೋವು ನಮಗೆ ಅರ್ಥವಾದರೆ ನಾವು ಮನುಷ್ಯರಾಗಿದ್ದೇವೆ ಎಂದರ್ಥ’ ಎಂದು ಆಶ್ರಮದಲ್ಲಿ ಬರೆದಿದ್ದ ಸಾಲುಗಳು ಗಮನ ಸೆಳೆದವು. ನಂತರ, ದೀರ್ಘ ಕಾಲದ ಕಾಯಿಲೆಯಿಂದ ನರಳುತ್ತಿರುವವರಿಗೆ ಆರೈಕೆ ನೀಡುವ ಮೈಸೂರಿನ ಕೇಂದ್ರವೊಂದಕ್ಕೆ ತೆರಳಿದ ನಡಿಗೆದಾರರು ಅದಕ್ಕೂ ಎರಡೂವರೆ ಲಕ್ಷ ರೂ. ದೇಣಿಗೆ ನೀಡಿದರು.
ಸರ್ಕಾರದ ಸೌಲಭ್ಯಗಳು ಗ್ರಾಮೀಣ ಜನರಿಗೆ ತಲುಪುವಂತೆ ಕೆಲಸ ಮಾಡಬೇಕು ಎಂಬ ಪ್ರೇರಣೆಯನ್ನು ‘ನಮ್ಮೊಳಗಿನ ನಡಿಗೆ’ (ವಾಕ್ ವಿಥಿನ್) ನನಗೆ ನೀಡಿದೆ. | ಅಮೃತ ಕುಲಕರ್ಣಿ ಚಿಕ್ಕೋಡಿ ಆಂತರಿಕ ನಡಿಗೆಯ ಮೂಲಕ ಗ್ರಾಮೀಣ ಭಾರತದ ಅರಿವಿನಿಂದ ನಮ್ಮ ಅಂತರಾಳವನ್ನು ಉತ್ತೇಜಿಸಲು ಹಾಗೂ ಮುಂದಿನ ಕಾರ್ಯಗಳಿಗೆ ಪ್ರೇರಣೆ ನೀಡುವ ಅಪೂರ್ವ ಅನುಭವವನ್ನು ‘ನಮ್ಮೊಳಗಿನ ನಡಿಗೆ’ ನಮಗೆ ನೀಡಿತು. | ಡಾ. ಗೋಪಾಲ ಕಮಲಾಪುರ ಧಾರವಾಡ
| ಕೆ.ಎಸ್. ಜಯಂತ್ (ಲೇಖಕರು ಧಾರವಾಡದ ಸಾಮಾಜಿಕ ಕಾರ್ಯಕರ್ತರು)