ಮತದಾರರ ಪಟ್ಟಿ ಶುದ್ದೀಕರಣ!

Election Commission
Published on

ಪೋಕರ್​: ದೇಶಾದ್ಯಂತ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್​ಐಆರ್) ಮುಂದಿನ ವಾರದಿಂದ ಆರಂಭವಾಗಲಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಹೇಳಿದ್ದಾರೆ. ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳ, ತಮಿಳುನಾಡು ಸೇರಿದಂತೆ ಐದು ರಾಜ್ಯಗಳಲ್ಲಿ ಈ ಪ್ರಕ್ರಿಯೆ ಮೊದಲಿಗೆ ಆರಂಭವಾಗಲಿದೆ. ಈ ಪ್ರಕ್ರಿಯೆ ಹೇಗೆ ನಡೆಯಲಿದೆ, ಚುನಾವಣಾ ಆಯೋಗ ಈ ಹಿಂದೆ ಅನುಸರಿಸಿದ ವಿಧಾನವೇನು? ರಾಜಕೀಯ ವಿರೋಧದ ಹೊರತಾಗಿ ಇದು ಯಶಸ್ಸು ಕಾಣಬಹುದೆ...? ಈ ಕುರಿತಾದ ವಿವರ ಇಲ್ಲಿದೆ.

ಬಿಹಾರದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯ (ಖಟಛ್ಚಿಜಿಚ್ಝ ಐಠಿಛ್ಞಿಠಜಿಡಛಿ ್ಕಡಜಿಠಜಿಟ್ಞ (ಖಐ) ಟ್ಛ ಡಟಠಿಛ್ಟಿಠ) ಪ್ರಕ್ರಿಯೆ ಯಶಸ್ವಿಗೊಂಡ ಬೆನ್ನಲ್ಲೇ, ದೇಶಾದ್ಯಂತ ಎಸ್​ಐಆರ್ ಜಾರಿಗೆ ಚುನಾವಣಾ ಆಯೋಗ ಮುಂದಾಗಿದೆ. ಈ ಸಂಬಂಧ ಕೇಂದ್ರ ಚುನಾವಣಾ ಆಯೋಗ ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಚುನಾವಣಾ ಆಯುಕ್ತರೊಂದಿಗೆ ಹಲವು ಸುತ್ತಿನ ಸಭೆ ಸಭೆ ನಡೆಸಿದೆ. ಅಕ್ಟೋಬರ್ ಕೊನೆಯ ವಾರ ಅಥವಾ ನವೆಂಬರ್ ಮೊದಲ ವಾರದಲ್ಲಿ ದೇಶಾದ್ಯಂತ ಎಸ್​ಐಆರ್​ಗೆ ಚಾಲನೆ ಸಿಗಲಿದೆ. 2026ರಲ್ಲಿ ವಿಧಾನಸಭೆ ಚುನಾವಣೆ ನಡೆಯಲಿರುವ ಅಸ್ಸಾಂ, ತಮಿಳುನಾಡು, ಪುದಿಚೇರಿ, ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ಮೊದಲಿಗೆ ಮತದಾರರ ಪಟ್ಟಿಯ ಪರಿಷ್ಕರಣೆ ನಡೆಯಲಿದ್ದು, ಆ ಬಳಿಕ ಹಂತ-ಹಂತವಾಗಿ ಇತರ ರಾಜ್ಯಗಳಲ್ಲಿ ನಡೆಯಲಿದೆ. ಬಿಹಾರದಲ್ಲಿ ಈ ಪ್ರಕ್ರಿಯೆ ಪೂರ್ಣಗೊಂಡು ಸೆಪ್ಟೆಂಬರ್ 30ರಂದು 7.42 ಕೋಟಿ ಮತದಾರರ ಅಂತಿಮ ಪಟ್ಟಿಯನ್ನು ಪ್ರಕಟಿಸಲಾಯಿತು. ಬಿಹಾರ ವಿಧಾನಸಭೆಗೆ ನವೆಂಬರ್ 6 ಮತ್ತು 11ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದ್ದು, ನ.14ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ‘ಎಲ್ಲ ರಾಜ್ಯಗಳಲ್ಲಿ ಎಸ್​ಐಆರ್​ಗೆ ಸಿದ್ಧತೆ ನಡೆಯುತ್ತಿದೆ’ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಬಿಹಾರ ವಿಧಾನಸಭಾ ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸುವ ಸಂದರ್ಭದಲ್ಲೇ ಹೇಳಿದ್ದರು. ಅಲ್ಲದೆ, ಆಯಾ ರಾಜ್ಯಗಳಲ್ಲಿ ಕೊನೆಯದಾಗಿ ಎಸ್​ಐಆರ್ ಪ್ರಕ್ರಿಯೆ ನಡೆದ ಬಳಿಕ ಪ್ರಕಟಿಸಲಾಗಿರುವ ಮತದಾರರ ಪಟ್ಟಿಯನ್ನು ಸಿದ್ಧವಾಗಿಡುವಂತೆ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ಕೇಂದ್ರ ಚುನಾವಣಾ ಆಯೋಗ ನಿರ್ದೇಶನ ನೀಡಿದೆ. ಅದರಂತೆ, ಕೆಲ ರಾಜ್ಯಗಳು ಮತದಾರರ ಪಟ್ಟಿಯನ್ನು ವೆಬ್​ಸೈಟ್​ನಲ್ಲಿ ಪ್ರಕಟಿಸಿವೆ.

ಪ್ರಸ್ತುತ ಸ್ಥಿತಿ

ದೇಶದಲ್ಲಿ ಈಗ ಒಟ್ಟು ಮತದಾರರ ಸಂಖ್ಯೆ 99 ಕೋಟಿ 10 ಲಕ್ಷ ಎನ್ನಲಾಗಿದೆ. ಇದರಲ್ಲಿ ಬಿಹಾರದ 8 ಕೋಟಿ ಜನರ ಎಸ್​ಐಆರ್ ಪೂರ್ಣಗೊಂಡಿದೆ. 2002ರಿಂದ 2004ರ ಅವಧಿಯ ಎಸ್​ಐಅರ್ ಪ್ರಕ್ರಿಯೆಯಲ್ಲಿ 70 ಕೋಟಿ ಜನರು ಭಾಗಿಯಾಗಿದ್ದರು. ಈಗ 21 ಕೋಟಿ ಮತದಾರರಷ್ಟೇ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕಿದೆ ಎಂದಿವೆ ಮೂಲಗಳು.

ತಮಿಳುನಾಡಿನಲ್ಲಿ ಮುಂದಿನ ವಾರ ಎಸ್​ಐಆರ್ ಆರಂಭ

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ತಮಿಳುನಾಡಿನಲ್ಲಿ ಮುಂದಿನ ವಾರ ಆರಂಭಗೊಳ್ಳಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಮದ್ರಾಸ್ ಹೈಕೋರ್ಟ್​ಗೆ ಶುಕ್ರವಾರ ತಿಳಿಸಿದೆ. ಚೆನ್ನೈನ ಟಿ.ನಗರ ವಿಧಾನಸಭಾ ಕ್ಷೇತ್ರದ 229 ಬೂತ್​ಗಳಲ್ಲಿ ಸಂಪೂರ್ಣವಾಗಿ, ಪಾರದರ್ಶಕವಾಗಿ ಮತದಾರರ ಪಟ್ಟಿಯ ಮರುಪರಿಶೀಲನೆ ನಡೆಸುವಂತೆ ಎಐಎಡಿಎಂಕೆಯ ಮಾಜಿ ಶಾಸಕ ಬಿ. ಸತ್ಯನಾರಾಯಣ್ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ತಮಿಳುನಾಡು ಸೇರಿದಂತೆ ದೇಶದಾದ್ಯಂತ ಚುನಾವಣೆ ಎದುರಿಸಲಿರುವ ರಾಜ್ಯಗಳಲ್ಲಿ ಬಿಹಾರ ಮಾದರಿಯಲ್ಲಿಯೇ ಎಸ್​ಐಆರ್ ಪ್ರಕ್ರಿಯೆ ಮುಂದಿನ ವಾರ ಆರಂಭಗೊಳ್ಳಲಿದೆ ಎಂದು ಮದ್ರಾಸ್ ಹೈಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಹಾಗೂ ನ್ಯಾಯಮೂರ್ತಿ ಜಿ.ಅರುಳ್ ಮುರುಗನ್ ಅವರ ಮುಂದೆ ಆಯೋಗವು ದಾಖಲೆಗಳನ್ನು ಸಲ್ಲಿಸಿದೆ

2024ರಲ್ಲಿ ನಡೆದ ಲೋಕಸಭೆ ಚುನಾವಣೆಯ ಪ್ರಮುಖ ಸಂಗತಿಗಳು

- 2019ರ ಲೋಕಸಭೆ ಚುನಾವಣೆಯ ವೇಳೆ ನೋಂದಣಿಯಾದ ಮತದಾರರ ಸಂಖ್ಯೆ 91.19 ಕೋಟಿ. 2024ರ ಲೋಕಸಭಾ ಚುನಾವಣೆಯ ಮುನ್ನ ಇದು ಶೇಕಡ 7.43ರಷ್ಟು ಹೆಚ್ಚಳ ಕಂಡು 97.97 ಕೋಟಿಗೆ ತಲುಪಿತು. ಈ ಪೈಕಿ ಮಹಿಳಾ ಮತದಾರರ ಸಂಖ್ಯೆ 47.63 ಕೋಟಿ.

- 2019ರಲ್ಲಿ 61.40 ಕೋಟಿ ಜನರು ಮತಹಕ್ಕು ಚಲಾಯಿಸಿದರೆ, 2024ರಲ್ಲಿ 64.64 ಕೋಟಿ ಜನರು ಮತದಾನ ಮಾಡಿದರು.

- ಮತದಾನ ಕೇಂದ್ರಗಳ ಸಂಖ್ಯೆ 2019ರಲ್ಲಿ 10.37 ಲಕ್ಷ ಇದ್ದದ್ದು 2024ರಲ್ಲಿ 10.52 ಲಕ್ಷಕ್ಕೆ ಏರಿಕೆ ಕಂಡಿತು. ಉತ್ತರಪ್ರದೇಶ ಅತಿ ಹೆಚ್ಚು 1.62 ಲಕ್ಷ ಮತಗಟ್ಟೆಗಳನ್ನು ಹೊಂದಿದ್ದರೆ, ಅತಿ ಕಡಿಮೆ (55) ಲಕ್ಷದ್ವೀಪದಲ್ಲಿದ್ದವು.

ಏನಿದು ಎಸ್​ಐಆರ್?

ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಯು ಚುನಾವಣಾ ಆಯೋಗದ ಪ್ರಕ್ರಿಯೆ ಆಗಿದ್ದು, ಇದರಲ್ಲಿ 18 ವರ್ಷ ಮೇಲ್ಪಟ್ಟ ಹೊಸ ಮತದಾರರ ಹೆಸರನ್ನು ಸೇರ್ಪಡೆಗೊಳಿಸಲಾಗುತ್ತದೆ. ಮೃತರಾದವರ, ಶಾಶ್ವತವಾಗಿ ವಲಸೆ ಹೋದವರ ಹೆಸರುಗಳನ್ನು ತೆಗೆದು ಹಾಕಲಾಗುತ್ತದೆ. ಅಷ್ಟೇ ಅಲ್ಲ, ಮತದಾರರ ಪಟ್ಟಿಯಲ್ಲಿ ಹೆಸರು, ವಿಳಾಸದಲ್ಲಾದ ತಪು್ಪಗಳನ್ನು ಕೂಡ ಸರಿಪಡಿಸಲಾಗುತ್ತದೆ. ಬಿಎಲ್​ಒ ಮನೆ-ಮನೆಗೆ ತೆರಳಿ ಅರ್ಜಿ ಭರ್ತಿ ಮಾಡಿಸುತ್ತಾರೆ. ಈ ಸಮೀಕ್ಷೆ ಬಹುತೇಕ ಎರಡು ದಶಕದ ಬಳಿಕ ನಡೆಯುತ್ತಿದ್ದು, ಸಾಕಷ್ಟು ಲೋಪಗಳನ್ನು ಸರಿಪಡಿಸಬೇಕಿದೆ. ಅರ್ಹ ಮತದಾರರನ್ನು ಪಟ್ಟಿಗೆ ಸೇರಿಸಬೆಕಿದೆ. ಆಂಧ್ರಪ್ರದೇಶದಲ್ಲಿ 2003-04ರಲ್ಲಿ 5.5 ಕೋಟಿ ಮತದಾರರಿದ್ದರು. ಈಗ ಈ ಸಂಖ್ಯೆ 6.6 ಕೋಟಿಗೆ ತಲುಪಿದೆ. ಉತ್ತರಪ್ರದೇಶದಲ್ಲಿ 2003ರಲ್ಲಿ 11.5 ಕೋಟಿ ಮತದಾರರಿದ್ದರು. ಪ್ರಸ್ತುತ ಅದು 15.9 ಕೋಟಿಗೆ ಏರಿಕೆ ಕಂಡಿದೆ. ರಾಜಧಾನಿ ದೆಹಲಿಯಲ್ಲಿ 2008ರಲ್ಲಿ 1.1 ಕೋಟಿ ಇದ್ದ ಮತದಾರರ ಸಂಖ್ಯೆ ಪ್ರಸ್ತುತ 1.5 ಕೋಟಿಯಷ್ಟಾಗಿದೆ.

ಏಕೆ ಅವಶ್ಯ?

1. ದೇಶದ ನಾಗರಿಕರಲ್ಲದವರ ಹೆಸರುಗಳು, ಮೃತರ ಹೆಸರುಗಳು, ಶಾಶ್ವತವಾಗಿ ಸ್ಥಳಾಂತರಗೊಂಡವರ ಹೆಸರು, ಒಂದಕ್ಕಿಂತ ಹೆಚ್ಚು ಕ್ಷೇತ್ರಗಳಲ್ಲಿರುವ ಹೆಸರುಗಳನ್ನು ತೆಗೆದುಹಾಕುವುದು ಅತ್ಯಂತ ಅಗತ್ಯವಾಗಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಮತದಾರ ಪಟ್ಟಿ ಪರಿಷ್ಕರಣೆ ಸ್ವಾಗತಾರ್ಹ ಕ್ರಮವಾಗಿದೆ.

2. ಹಲವು ರಾಜ್ಯಗಳಲ್ಲಿ ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ ಕೆಲ ದಶಕಗಳಿಂದ ನಡೆದಿಲ್ಲ. ಹೀಗಾಗಿ, ಗೊಂದಲಗಳು ಮತ್ತು ದೋಷಗಳ ಪ್ರಮಾಣ ಹೆಚ್ಚಾಗಿದೆ. ಅದನ್ನು ಸರಿಪಡಿಸಬೇಕಿದೆ.

3. ಪಶ್ಚಿಮ ಬಂಗಾಳ ಮತ್ತು ಅಸ್ಸಾಂನಂಥ ರಾಜ್ಯಗಳಲ್ಲಿ ಬಾಂಗ್ಲಾದೇಶ ಹಾಗೂ ಮ್ಯಾನ್ಮಾರ್​ನಿಂದ ಅಕ್ರಮವಾಗಿ ನುಸುಳಿದವರು ಕೂಡ ಮತಪಟ್ಟಿಗೆ ಸೇರ್ಪಡೆಯಾಗಿದ್ದಾರೆ ಎಂಬ ಗಂಭೀರ ಸಂಗತಿ ಕೆಲ ವರ್ಷಗಳಿಂದ ಚರ್ಚೆಯಲ್ಲಿ ಇದೆ. ಆದರೆ, ಮತದಾರರ ಪಟ್ಟಿಯ ಶುದ್ಧೀಕರಣ ಕಾರ್ಯ ಸಾಧ್ಯವಾಗದೆ ಇರುವುದರಿಂದ, ಗಂಭೀರ ಲೋಪಗಳು ಹಾಗೆಯೇ ಉಳಿದುಕೊಂಡಿವೆ.

4. ದೇಶದಲ್ಲಿ 1952ರಲ್ಲಿ ಮೊದಲ ಸಾರ್ವತ್ರಿಕ ಚುನಾವಣೆ ನಡೆದ ಸಮಯದಿಂದ ಈವರೆಗೂ ಚುನಾವಣೆ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆಗಳು ಮತ್ತು ಸುಧಾರಣೆಗಳು ಆಗಿವೆ. ಆದ್ದರಿಂದ, ಪಕ್ಷಗಳು ಬರೀ ರಾಜಕೀಯ ಲಾಭ ಅಥವಾ ಮತಬ್ಯಾಂಕಿನ ಚಿಂತೆ ಮಾಡದೆ ವ್ಯವಸ್ಥೆಯ ಶುದ್ಧೀಕರಣಕ್ಕೆ ಆದ್ಯತೆ ನೀಡಬೇಕು. ಎಸ್​ಐಆರ್​ನಿಂದಾಗಿಯೇ ಬಿಹಾರದಲ್ಲಿ 65 ಲಕ್ಷ ಅಕ್ರಮ ಮತದಾರರು ಪತ್ತೆಯಾಗಿದ್ದರು ಎಂಬುದು ಗಮನಾರ್ಹ.

ಮುಖ್ಯಾಂಶಗಳು

- ಬಹುತೇಕ ರಾಜ್ಯಗಳಲ್ಲಿ 2003-2004ರ ನಂತರ ಮತದಾರರ ಪಟ್ಟಿಯ ಸಮಗ್ರ ಅಥವಾ ತೀವ್ರ ಪರಿಷ್ಕರಣೆ ನಡೆದಿಲ್ಲ. ಹಾಗಾಗಿ, ಕಳೆದ ಎರಡು ದಶಕದ ಅವಧಿಯಲ್ಲಿನ ಪ್ರಮಾದ, ಲೋಪಗಳನ್ನು ಪತ್ತೆ ಹಚ್ಚಿ, ಮತದಾರರ ಪಟ್ಟಿಯನ್ನು ಇಂದುಗೊಳಿಸುವುದು ಸವಾಲಿನ ಕೆಲಸವೇ ಹೌದು.

- ಕೆಲ ರಾಜ್ಯಗಳು ಅಕ್ರಮ ನುಸುಳುಕೋರರನ್ನು ಮತದಾರ ಯಾದಿಯಲ್ಲಿ ಸೇರಿಸಿದ್ದು, ಈಗ ಎಸ್​ಐಆರ್​ಗೆ ವಿರೋಧ ವ್ಯಕ್ತಪಡಿಸುತ್ತಿವೆ. ಇಂಥ ರಾಜ್ಯಗಳ ಅಸಹಕಾರ ಮತದಾರರ ಪಟ್ಟಿ ಪರಿಷ್ಕರಣೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು.

- ಆಧಾರ್ ಸಂಖ್ಯೆಯನ್ನು ಸೂಕ್ತ ದಾಖಲೆಯಾಗಿ ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಹೇಳಿದ್ದು, ಉಳಿದ ರಾಜ್ಯಗಳಲ್ಲಿ ಜನರಿಗೆ ಪೌರತ್ವ ಸಾಬೀತು ಪಡಿಸಲು ಮತ್ತೆ ತೊಂದರೆ ಅಥವಾ ಗೊಂದಲ ಸೃಷ್ಟಿಯಾಗಬಾರದು.

ಸವಾಲುಗಳು

- ಭೌಗೋಳಿಕವಾಗಿ ವಿಶಾಲವಾಗಿರುವ ಭಾರತ ಬುಡಕಟ್ಟು ರಾಜ್ಯಗಳನ್ನೂ ಒಳಗೊಂಡಿದ್ದು, ಇಲ್ಲಿ ಗುರುತಿಗೆ ಪ್ರತ್ಯೇಕ ದಾಖಲೆಗಳನ್ನು ಬಳಸಲಾಗುತ್ತದೆ. ನಿಜವಾದ ಮತದಾರರಿಗೆ ಅವರ ಮತದಾನ ಹಕ್ಕು ತಪ್ಪಿ ಹೋಗದಂತೆ ಆಯೋಗ ಎಚ್ಚರಿಕೆ ವಹಿಸಬೇಕಿದೆ.

- ಪಶ್ಚಿಮ ಬಂಗಾಳ, ತಮಿಳುನಾಡು ಸೇರಿ ಕೆಲ ರಾಜ್ಯಗಳು ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆಗೆ ವಿರೋಧ ವ್ಯಕ್ತಪಡಿಸುತ್ತಿವೆ. ಚುನಾವಣಾ ಆಯೋಗ ಸಾಂವಿಧಾನಿಕ ಸಂಸ್ಥೆ. ಹಾಗಾಗಿ, ಇಡೀ ದೇಶಕ್ಕೆ ಅನ್ವಯವಾಗುವಂತೆ ಎಸ್​ಐಆರ್ ಕೈಗೊಂಡಲ್ಲಿ ಅದು ಮಹತ್ವದ ಹೆಜ್ಜೆ. ಆದರೆ, ರಾಜಕೀಯ ವಿರೋಧವನ್ನು ಎದುರಿಸಿ ಈ ಪ್ರಕ್ರಿಯೆ ಸುಗಮವಾಗಿ ಮತ್ತು ಪಾರದರ್ಶಕವಾಗಿ ನಡೆಸಬೇಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net