‘ಸೆಕ್ಯುಲರಿಸಂ ಎಂಬ ಢೋಂಗೀ ಕಲ್ಪನೆಯ ಮತಹಾವಳಿ!

India 2 March 20
Published on
ಅರುದ್ರಾ’, ಅಮೂಲ್ಯ’, ‘ಅಮೃತ’, ‘ಅಮೋಘ’, ಇನ್ನೂ ಅಕಾರದಿಂದ ಆರಂಭವಾಗುವ ಯಾವ ಯಾವುದೋ ಹೆಸರಿನ ‘ಜಾತ್ಯತೀತ’, ಭಾರತವಿರೋಧೀ ಶಕ್ತಿಗಳು ಇಲ್ಲೆ ‘ಪಾಕಿಸ್ತಾನ ಜಿಂದಾಬಾದ್’ ಎನ್ನುತ್ತ ಭಾರತನಾಶಕ್ಕೆ ಯತ್ನಿಸುತ್ತಿದ್ದರೂ, ನಾವು ಮೂಲ ಭಾರತೀಯರು ಎಚ್ಚೆತ್ತುಕೊಳ್ಳುವ ಲಕ್ಷಣಗಳಿಲ್ಲ. ‘ಒಂದು ಕೂಗು ದೇಶದ್ರೋಹವಾಗುವುದಿಲ್ಲ’ ಎಂದೊಬ್ಬ ವಕೀಲರು ಯಾವ ಯಾವುದೋ ಓಬೀರಾಯನ ಕಾಲದ ಕೋರ್ಟ್ ತೀರ್ಪಗಳನ್ನು ಟಿ.ವಿ. ಚರ್ಚೆಯಲ್ಲಿ ಉದಾಹರಿಸಿದರು. ‘ನಮ್ಮದು ಜಾತ್ಯತೀತ, ಡೆಮಾಕ್ರಟಿಕ್ ಸೋಷಲಿಸ್ಟ್ ರಾಷ್ಟ್ರ’-ನಾಮಕರಣ, ಇಂದಿರಾ ಗಾಂಧಿಯದು. ‘ಅಂತೂ ಛಿದ್ರವಿಚ್ಛಿದ್ರಕಾರಿಗಳಿಗೆ ಇಲ್ಲಿ ಆಶ್ರಯ, ಒತ್ತಾಸೆ ಇದೆ. ಅದರ ಹಿಂದೆ ಇರುವುದು ವೋಟುಬ್ಯಾಂಕು ರಾಜಕೀಯ. ಅದನ್ನು ಉದ್ದಕ್ಕೂ ನೆಟ್ಟು ಬೆಳೆಸಿ ಫಲ ಪಡೆಯುತ್ತ ಬಂದಿರುವುದು ಕಾಂಗ್ರೆಸ್ಸು ಮತ್ತು ಅದರ ಅಸಂಖ್ಯಾತ ಮರುಪಕ್ಷಗಳು!

ಇವರು ಪಾಕ್​ವಿುತ್ರರೂ, ಪಾಕ್ ಆಶ್ರಿತರು, ಕೃಪಾಪೋಷಿತರು, ಆ ನೆಲದಲ್ಲಿ ನಿಂತು ಭಾರತವನ್ನು ಬೈಯ್ಯುವ, ಅಲ್ಲಿನ ಬೈಗುಳ ನಾಯಕರೊಡನೆ, ಕೈ ಜೋಡಿಸುವ ಹಸ್ತಕರು! ಮಣಿಶಂಕರ, ಸ್ಟಾಲಿನ್, ಖುರ್ಷಿದ್, ಗುಲಾಂ ನಬಿ ಆಜಾದ್, ಹಿಂದಣ ಉಪರಾಷ್ಟ್ರಪತಿಯೊಬ್ಬರು, ನಮ್ಮ ಮಾಜಿ ಪ್ರಧಾನಿ ಮನಮೋಹನರು ಎಲ್ಲ ಅಲ್ಲಿ ಕಾನ್​ಫರೆನ್ಸು ಮಾಡಿದರಲ್ಲ? ಇನ್ನೂ ಸೋನಿಯಾ, ವಾದ್ರಾ, ರಾಹುಲರ ಚಟಗಳನ್ನೂ ಗಮನಿಸಿದ್ದೀರಲ್ಲ? ‘ಪುಲ್ವಾಮಾ’ ದಾಳಿಯಲ್ಲಿ 40-50 ಭಾರತೀಯ ಯೋಧರು ಹುತಾತ್ಮರಾದಾಗ ‘ಅದು ನಡೆಯಲೇ ಇಲ್ಲ, ಬರೀ ಸುಳ್ಳು’ ಎಂದು ಮೊದಲು ಹೇಳಿ, ನಂತರ ‘ಅದನ್ನು ಮೋದಿಯವರೇ ಮಾಡಿಸಿದ್ದು’ ಎಂದರಲ್ಲ? ಆಕ್ರಮಿತ ಕಾಶ್ಮೀರ ಪ್ರದೇಶದ ಪಾಕ್ ಸೇನಾ ನೆಲೆಗಳ ಮೇಲೆ ಸರ್ಜಿಕಲ್ ದಾಳಿ ಮಾಡಿದಾಗ, ‘ಇದೆಲ್ಲ ಕಟ್ಟುಕತೆ’ ಎಂದರಲ್ಲ? ಪಠಾಣ್​ಕೋಟ ಸೇನಾನೆಲೆಯ ಮೇಲೆ ಪಾಕ್ ವಿಧ್ವಂಸಕ ಕೃತ್ಯ ನಡೆಸಿದಾಗ ಇವರು ಪಾಕ್ ಪರವೇ ನಿಂತು ಮಾತಾಡಿದರಲ್ಲ?

ಇಂಥದೆಲ್ಲ ‘ಸಹಜ’= ‘ಕೂಡ ಹುಟ್ಟಿ ಬಂದದ್ದು’ ಏಕೆಂದರೆ ಪಾಕ್ ನಿರ್ಮಾಣ, ಈ ಶಿಶು ಜನನ, ಕಾಂಗ್ರೆಸ್ಸು ಮತ್ತು ಮೌಂಟ್ ಬ್ಯಾಟನ್ನರ ವ್ಯಭಿಚರಿತ, ದೇಶದ್ರೋಹದಿಂದ ಹುಟ್ಟಿದ ತಬ್ಬಲಿ.

ಈ ಭಾರತದ್ವೇಷ, ಪಾಕ್ ಪ್ರೇಮ, ಹಿಂದೂದ್ವೇಷ, ಅಸಹಜ ಸೆಕ್ಯುಲರಿಸಂನ ಫಲವಾದ ಇಸ್ಲಾಮಿ, ಈಸಾಯಿ ಪ್ರೇಮ, ಕಾಮ್ರೇಡರ ಗಾಢಸಖ್ಯ, ವಿದೇಶೀ ದ್ರೋಹಿಗಳೊಡನೆ ಕೈಜೋಡಣೆಗೆ ಮುಕ್ತಿ ಎಂದು? ಶಿಶುಪಾಲ ಇದ್ದ ತನಕ ಕೃಷ್ಣದ್ವೇಷ ಬಿಡಲಿಲ್ಲ! ತಲೆ ಹಾರಿಸಿದ ಮೇಲೂ ಹಾರಿದ ತಲೆಯಲ್ಲಿ ಕೃಷ್ಣನಿಂದೆ ಹೊರಬರುತ್ತಿತ್ತಂತೆ! ಅನಂತ ಭಟ್ಟನೆಂಬ ‘ಚಂಪೂ ಭಾರತ’ ಕವಿ ಹೇಳುತ್ತಾನೆ-‘ಶ್ರೀಕೃಷ್ಣ ಪ್ರಯೋಗಿಸಿದ ಚಕ್ರ, ಶಿಶುಪಾಲನ ತಲೆ ತೆಗೆದು, ಮುಚ್ಚಳ ಬಿಚ್ಚಿ ಇನ್ನೂ ಒಳಗೆ ಎಷ್ಟೊಂದು ಕೃಷ್ಣನಿಂದೆ, ಕೃಷ್ಣದ್ವೇಷ ಅಡಗಿದೆಯೋ’ ಎಂದು ಬಗ್ಗೆ ನೋಡಿತಂತೆ! ಅನ್ನ ಬೇಯಿಸುವ ಗೃಹಿಣಿ ಕುಕ್ಕರ್ ಬಂದ್ ಮುನ್ನ ಕಾಲದಲ್ಲಿ ಅನ್ನ ಬೆಂದಿದೆಯೇ? ಹೇಗೆಂದು ಮುಚ್ಚಳ ತೆರೆದು ನೋಡಿದಂತೆ ಎಂದು ಭಾವಿಸಿಕೊಳ್ಳಿ. ಆದುದರಿಂದ ಈ ಪಕ್ಷಗಳ ಭಾರತದ್ವೇಷಕ್ಕೆ ಮುಕ್ತಿ ಎಂದು? ಎಂದರೆ ಮೋದಿ ಹೇಳಿದ ‘ಕಾಂಗ್ರೆಸ್ ಮುಕ್ತ ಭಾರತ’ ಉದಯವಾದಾಗ ಎಂದು ದೃಢವಾಗಿ ಹೇಳಬೇಕಾಗುತ್ತದೆ. ಅದು ಆಗಗೊಡದಂತೆ ಹಿಂದೂ, ಭಾರತದ್ವೇಷಿಗಳೆಲ್ಲ ಈಗ ಒಗ್ಗೂಡುತ್ತಿದ್ದಾರೆ-ಅವರಿಗೆ ಬೇರೆ ದಾರಿಯಿಲ್ಲ. ತುರ್ತಾಗಿ ಮೋದಿಯವರನ್ನು ‘ಇಳಿಸ’ ಬೇಕಾಗುತ್ತೆ. ಅದು ಆಗುತ್ತಿಲ್ಲ, ಸಾಧ್ಯವಿಲ್ಲ. ಇಂಗ್ಲಿಷಿನಲ್ಲಿ 'Driven to the wall' ಎನ್ನುತ್ತಾರೆ. ತುಂಟ ಬೆಕ್ಕನ್ನು ಅಟ್ಟಿಸಿಕೊಂಡು ಹೋದಾಗ, ಅದಕ್ಕೆ ಮುಂದೆ ಓಡಲು ಜಾಗ ಸಿಗದೆ ಗೋಡೆ ಅಡ್ಡಲಾದಾಗ, ಹಿಂಗಾಲ ಮೇಲೆ ಎದ್ದು ನಿಂತು ನಿಮ್ಮ ಮೇಲೆಯೇ ಎರಗಲು, ಭಯಂಕರ ಮುಖ ಮಾಡುವಂತಿದೆ ಕಾಂಗ್ರೆಸ್ಸು+ಮರಿಪಕ್ಷಗಳ ಸ್ಥಿತಿ. ಈಗ ಯುವ, ಯುವತಿಯರನ್ನು ಮುಂದಿಟ್ಟಿಕೊಂಡು ಒಂದು ನಾಚಿಕೆಗೆಟ್ಟ ಹೋರಾಟ. ಸದ್ಯದಲ್ಲೇ ಅದರ ನೇತಾರ ಓವೈಸಿ ಸಾಹೇಬ್ರು. ಇವರ ಪೂರ್ವಜರು ಹಿಂದಣ ನಿಜಾಮನ ಭಂಟರು! ಹೈದ್ರಾಬಾದ್ ವಿಮೋಚನಾ ಪ್ರಸಂಗದಲ್ಲಿ ಖಾಸಿಂ ರಜ್ವಿ ಎಂಬ ಖಳ ನೇತಾರ, ಅವನ ಸೇನೆ ರಜಾಕರರು ಎಂಬ ಭಯೋತ್ಪಾದಕರು ನಡೆಸಿದ ಹಿಂಸಾಚಾರ ನಿಮಗೆ ನೆನಪಿರಲಿಕ್ಕಿಲ್ಲ. ನನಗೆ ಇದೆ. ಆಗ ಅಲ್ಲಿನ ಸರ್ದಾರ್ ಕೆ.ಎಂ.ಮುನ್ಷಿಯವರು ನೆಹ್ರೂ ಧೋರಣೆಯನ್ನು ಧಿಕ್ಕರಿಸಿ, ಪ್ರೋಬ್ ಆಕ್ಷನ್ ಅಂತ ಹೆಸರಿಟ್ಟು, ತಾವು ರಾಜ್ಯಪಾಲರಾಗಿದ್ದು ಈ ದುಷ್ಟ ಸೇನೆಯನ್ನು ನಿರ್ನಾಮ ಮಾಡಿದರು. ಖಾಸಿಂ ರಜ್ವಿಯರು ಜಿನ್ನಾ ಬಿ ಟೀಂ ಅದರ ಅವಶೇಷಗಳು ಭೂಗತವಾಗಿ ಈಗ ಓವೈಸಿ ಸಾಹೇಬ್ರು, ಸೋದರ, ಇತರರು ತಲೆ ಎತ್ತಿದ್ದಾರೆ. ಈ ಪೂರ್ವ ಚರಿತ್ರೆಯೆಲ್ಲ ಅಂತರ್ಜಾಲದಲ್ಲಿ ಈಗ ಲಭ್ಯ. ಸೀರಿಯಲ್ ನೋಡಿ ಕಾಲಹರಣ ಮಾಡುವವರಿಗೆ ಅಲಭ್ಯ.

ಅಕ್ಬರ್​ಉದ್ದೀನ್ ಓವೈಸಿ (ಅಸಾದುದ್ದೀನ ಓವೈಸಿ ಆಣ್ಣ) ಹಿಂದೆ ಹೇಳಿದರು-‘ನಾವು 15 ಕೋಟಿ ಮುಸ್ಲಿಮರು, 125 ಕೋಟಿ ಹಿಂದೂಗಳನ್ನು ಹದಿನೈದು ನಿಮಿಷಗಳಲ್ಲಿ ನಾಶ ಮಾಡುತ್ತೇವೆ, ಪೊಲೀಸ್ ಮತ್ತು ಸೇನೆ ಬರೀ ಹದಿನೈದು ನಿಮಿಷ ಕಣ್ಣುಮುಚ್ಚಿ ಕೂಡಲಿ ಅಂತ! sedition= ರಾಷ್ಟ್ರದ್ರೋಹ! ಶಿಕ್ಷೆ ಆಯ್ತಾ? ಇನ್ನೂ ಹಿಂದೆ ಷಾಹಿ ಇಮಾಂ ಬುಖಾರಿಯವರು ಭಾರತ ರಾಷ್ಟ್ರಧ್ವಜವನ್ನು ಕೆಳಗೆ ಹಾಕಿ ಕಾಲಲ್ಲಿ ತುಳಿದರಲ್ಲ? ಸರ್ಕಾರೀ ವಾರೆಂಟು, ಅರೆಸ್ಟು ಚೀಟಿಗಳನ್ನು ಹರಿದೇ ಹಾಕಿದರಲ್ಲ? ಇಂದಿರಾ, ರಾಜೀವರ ಕಾಲದಲ್ಲಿ? ಏನು ಶಿಕ್ಷೆಯಾಯ್ತು? ಒಬ್ಬ ಮಸೀದಿಯ ಇಮಾಂ! ಚಕ್ರವರ್ತಿಯೇ? ಮೊಗಲ್ ‘ಶಾಹಿ’; ಮುಗಿದ ಮೇಲೆ ಇನ್ನೆಂತಹ ಷಾಹಿ? ಕಾಂಗ್ರೆಸ್ ಶಾಹಿ! ‘ದೇವರೇ! ಷಾಹಿ, ಷಾಹಿ’ ಎನ್ನಬೇಕಲ್ಲವೇ? ತಿಳಿಯಿರಿ-ಕಾಂಗ್ರೆಸ್ಸು ಎಂದೂ ಮುಸ್ಲಿಂ ಪರ, ಕ್ರೖೆಸ್ತ ಪರ, ಹಿಂದೂದ್ವೇಷಿ, ಭಾರತನಾಶಕಪರ! ಇಲ್ಲಿ ತಮಿಳುನಾಡಿನಲ್ಲಿ ತಿರುಮಾವಲವನ್ ಎಂಬ ಮತಾಂಧ ಹಿಂದೂದ್ವೇಷಿ ನಾಯಕ ಹೇಳುತ್ತಾನೆ-‘ಭಾರತದಲ್ಲಿ ಸರ್ವಸಮಾನತೆ ಬರಲು ಎಲ್ಲರೂ ಮುಸ್ಲಿಂರಾಗುವುದೊಂದೇ ದಾರಿ-ಅಲ್ಲಿ ಜಾತಿ, ಪಂಗಡ, ಭಾಷೆ, ಪ್ರಾದೇಶಿಕ ಗಣಿತ, ಐಡೆಂಟಿಟಿ ನಾಶವಾಗುತ್ತದೆ. ಈ ಹಿಂದೂ ಎಂಬುದು ಸರ್ವನಾಶದ ಮೂಲ. ಮತಾಂತರಿತ ಮುಸ್ಲಿಂ ಎಲ್ಲ ಸಂಕುಚತೆಯಿಂದ ದೂರವಿರುತ್ತಾನೆ’ ಅಂತ.

ತಮಿಳರ ‘ದ್ರವಿಡ’ ತಲೆ ತಿರುಕುತನಕ್ಕೆ ಈತನ ಭಾಷ್ಯ. ಈ ಮಹನೀಯರಿಗೂ ಈ ನೆಲೆಗಟ್ಟಿನ ಸೆಕ್ಯುಲರಿಸಂಗೂ ಕೆಲವು ಪ್ರಶ್ನೆಗಳಿವೆ-ಜಿನ್ನಾ ಸಾಹೇಬರ ಸಂಯುಕ್ತ ಪಾಕಿಸ್ತಾನ ಒಡೆದು ಎರಡಾದುದು ಹೇಗೆ? ಏಕೆ? ಅಲ್ಲಿ ಇಸ್ಲಾಂ ಏಕೆ ಏಕೀಕರಿಸಲಿಲ್ಲ? ಉರ್ದು, ಬಂಗಾಳೀ ಭಾಷೆಗಳು ಏಕೆ ಬಿರಿದವು? ಈಗ ಪಾಕಿಸ್ತಾನವೂ ಬಲೂಚಿಸ್ಥಾನ, ಸಿಂಧ್, ಬಾಲ್ಟೀಸ್ಥಾನ, ಗಿಲ್ಗಿಟ್, ಇತ್ಯಾದಿ ಒಡೆಯುತ್ತಿರುವುದೇಕೆ? ದೇಶವಿಭಜನೆಯ ಕಾಲದಲ್ಲಿ ಪಾಕಿಸ್ತಾನಕ್ಕೆ ಓಡಿ ಹೋದ ಮುಸ್ಲಿಂರನ್ನು ಅಲ್ಲಿನ ಪಂಜಾಬಿಗಳು ಇನ್ನೂ ‘ಮಹಜೀರ್’ ಎನ್ನುತ್ತ, ಸೆಕೆಂಡ್ ಗ್ರೇಡಾಗಿ ಕಾಣುತ್ತಿರುವುದೇಕೆ? ಏಕತೆ ಏಕೆ ಬರಲೊಲ್ಲದು? ಅರಬ್ಬಿ ಮುಸ್ಲಿಂರು ಇತರರನ್ನು ಕೀಳಾಗಿ ಕಾಣುತ್ತಿರುವುದೇಕೆ? ಮಧ್ಯ ಏಷ್ಯಾದಲ್ಲಿ ಶಿಯಾ-ಸುನ್ನಿಗಳ ಘೋರ ಕಾಳಗ ನಡೆಯುತ್ತಿರುವುದೇಕೆ? ಸಿರಿಯಾ, ಜೋರ್ಡಾನ್, ಪ್ಯಾಲೆಸ್ಟೀನ್​ಗಳು ಪರಸ್ಪರ ಹೊಡೆದಾಡುತ್ತಿರುವುದೇಕೆ?

ನಮ್ಮ ಅಯೋಧ್ಯಾ ವ್ಯಾಜ್ಯದಲ್ಲೂ ಶಿಯಾ-ಸುನ್ನಿಗಳು ಪರಸ್ಪರ ವಿರುದ್ಧ ನಿಲುವುವು ತಳೆದುದೇಕೆ? ಇಸ್ಲಾಮಿಗಳಿಗೆ 1300 ವರ್ಷಗಳಿಂದ ಹಿಡಿದಿರುವ ಒಳಭಯ ಯಾವುದು? ವಾರವಾರದ ಸಾಮುದಾಯಿಕ ಸಭೆಗಳಲ್ಲಿ, ಸಾಮೂಹಿಕ ಪ್ರಾರ್ಥನೆಯ ನೆಪದಲ್ಲಿ, ಹಿಂದೂ ಮತ್ತಿತರ ‘ಕಾಫಿರರ’ ಮೇಲೆ ವಿಷ ಕಾರುತ್ತಿರುವುದೇಕೆ? ಯಾವ ಭಯ? ‘ಇಸ್ಲಾಂ ಇನ್ ಡೇಂಜರ್’ ಕೂಗು ಪದೇಪದೆ ಕೇಳಿಬರುವುದೇಕೆ? ಜಿನ್ನಾರಿಂದ ಓವೈಸಿ ತನಕ ಹರಡಿರುವ ಒಳಭಯ ಯಾವ ಮೂಲದ್ದು? ‘ಹಿಡಿದಿಡದಿದ್ದರೆ ಮತ ತೊರೆಯುತ್ತಾರೆ’ ಎಂದು, ಕಾಮ್ರೇಡರ ರಿವಿಜನಿಸಂ ರೀತಿಯ ಭಯದ ಅಭದ್ರತೆ, ಇನ್​ಸೆಕ್ಯುರಿಟಿ, ನೆಲಭದ್ರವಿಲ್ಲದ ಭಯ ಯಾವ ಮೂಲದ್ದು? ಇಸ್ಲಾಮಿಯರು ಮತದಾಚೆಗಿನ ಇತರ ಎಲ್ಲರನ್ನೂ, ಸಮುದಾಯಗಳನ್ನೂ ಸೈತಾನನ ಸಂತಾನವೆಂದು ಕಾಣುತ್ತ, ಕಲ್ಲು ಬೀಸುತ್ತ, ಬೀದಿಗಿಳಿದು ಚಳುವಳಿ ಮಾಡುತ್ತಾ ಹಿಂಸಾಚಾರದಲ್ಲಿ ತೊಡಗಿರಲು ಕಾರಣವೇನು? ಕಾರಣರಾರು? ಇದಕ್ಕೆ ಮೂಲಾಧಾರ ಗ್ರಹಿಕೆ ಎಲ್ಲಿಯದು? ಯಾವ ಬೋಧೆಯದು? ಯೋಚಿಸಿ, ಇಲ್ಲಿದೆ ಅಸಹನೆ, ಸಹಬಾಳ್ವೆಯ ಬಗ್ಗೆ ತಿರಸ್ಕಾರ, ಕೋಪ. "Those that are not with me, are against me' ಎಂಬ ಈ ಭಾವನೆಯ ಪ್ರಕಟವಾಣಿ, ಯೇಸುವಿನ ಬಾಯಲ್ಲಿ ಬಂದು ಬೈಬಲ್ಲಿನಲ್ಲಿ ದಾಖಲಿತವಾದದ್ದನ್ನು ಅರುಣ್ ಶೌರಿಯವರು "Harvesting Our Souls' ಎಂಬ ತಮ್ಮ ಅಮೂಲ್ಯ ಗ್ರಂಥದಲ್ಲಿ ಸೋದಾಹರಣವಾಗಿ ಚರ್ಚಿಸಿದ್ದಾರೆ. ಅದೆಲ್ಲ ಸೆಮಿಟಿಕ್ ನಂಬಿಕೆಗಳ ಮೂಲದ್ದು. ಈ ರೋಗ ಕಮ್ಯುನಿಸ್ಟರಿಗೂ ಹರಡಿ ರಷ್ಯಾ, ಸೋವಿಯತ್ ಪ್ರಯೋಗ, ಇರಾನಿನ ಚೀನಾ ಒಳಬೇಗುದಿ, ಇಂಥಲ್ಲಿ ಪ್ರಕಟವಾಗಿಯೇ ಕಾಣುತ್ತಿದೆಯಾಗಿ, ಮಾವಲರ್ವ ಮಾತು ಅನರ್ಥಕರ, ಮಹಾಸುಳ್ಳು, ಒಗ್ಗೂಡಿಸುವ ಶಕ್ತಿ ಖುಷಿದರ್ಶನಕ್ಕೆ ಮಾತ್ರ ಇದೆ. ಶ್ರೀಕೃಷ್ಣ ಗೀತೆಯಲ್ಲಿ ಹೇಳಿದ್ದು’ ಯಾರು ಯಾರು ಯಾವ ಯಾವ ದೇವತೆಯನ್ನು ಹೇಗೆಲ್ಲ ಪೂಜಿಸಿದರೂ ಅದೆಲ್ಲ ನನಗೇ ಬಂದು ಸೇರುತ್ತದೆ’ (ಅಧ್ಯಾಯ-7). ವೇದ ಹೇಳಿತ್ತು ‘ಏಕಂ ಸತ್ ವಿಪ್ರಾ ಬಹುಧಾ ವದಂತಿ’ ಅಂತ. ಬಸವಣ್ಣ ಹೇಳಿದು, ‘ದೇವನೊಬ್ಬ, ನಾಮ ಹಲವು’ ಅಂತ. ಅರ್ಜುನನಿಗೆ ಶ್ರೀಕೃಷ್ಣ ಗೀತೆಯ ಕೊನೆಯಲ್ಲಿ ಹೇಳಿದ್ದು, ‘ನಾನು ಹೇಳಬೇಕಾದ್ದೆಲ್ಲ ಹೇಳಿಯಾಯ್ತು. ಇನ್ನು ನಿನ್ನ ಇಷ್ಟದಂತೆ ನಡೆ’ ಅಂತ. ಈ ಸ್ವಾತಂತ್ರ್ಯ ವಿಚಾರಸ್ವಂತಿಕೆ, ಅನ್ವೇಷಣೆ, ಭಿನ್ನತೆ, ಆಯ್ಕೆ, ದಾರಿಗಳ ವಿವಿಧತೆ ಬೇರೆಲ್ಲಿ ಕಾಣುತ್ತೀರಿ? ಕರ್ನಾಟಕದ ಅಹಿಂದ ಅಯ್ಯನವರೂ, ಅವರ ಪೂರ್ವಜರೂ, ಉತ್ತರಾಧಿಕಾರಿಗಳೂ, ಇತರ ಕಾಂಗ್ರೆಸ್ಸಿಗರೂ ಇತ್ತ ಕಣ್ಣುತೆರೆದರೆ, ಕರ್ನಾಟಕಕ್ಕೆ ಕ್ಷೇಮ. ಕೊಲೆ, ಖಟ್ಲೆ, ವ್ಯರ್ಥ ಚಳವಳಿಗಳು ನಿಲ್ಲಲು ‘ಹಿಂದೂ’ ಒಂದೇದಾರಿ.

‘ಅವರವರ ದಾರಿ ಅವರವರಿಗೆ’ ಎಂಬಲ್ಲಿ, ಹಿಂದೂ ಗ್ರಹಿಕೆಯಲ್ಲೇ ನೈಜ ಸೆಕ್ಯುಲರಿಸಂ ಇದೆ. ಅಲ್ಲೇ ಸ್ವಾತಂತ್ರ್ಯ, ಆವಿಷ್ಕಾರದ ಹಕ್ಕು. ಅಲ್ಲೇ ಸೋದರ್ಯ. ಪ್ರಕೃತಿ ವಿರುದ್ಧ ಸಮಾನತೆ ಬೇಡ. ಸರ್ಕಾರಿ ಬಡವ, ಬಲ್ಲಿದ, ಎಂಬ ರೀತಿಯ, ವೃತ್ತಿಭೇದ ಪ್ರಯುಕ್ತ ಉಂಟಾದ ಭಿನ್ನಶೈಲಿಯ ಜೀವನ ವಿವಿಧತೆಯಲ್ಲೂ ಎಲ್ಲರನ್ನೂ ಸಮವಾಗಿ ಕಾಣಬೇಕು, ಪೋಷಿಸಬೇಕು ಎಂಬ ಬೋಧೆ ರಾಮಾಯಣದಲ್ಲಿದೆ, ಮಹಾಭಾರತದಲ್ಲಿದೆ. ಗೀತೆಯಲ್ಲಿದೆ, ವೇದದಲ್ಲಿದೆ, ಉಪನಿಷತ್ತಿನಲ್ಲಿದೆ. ಅಹಿಂದಯ್ಯನವರೂ, ಭಾರತೀಯ ಮುಸ್ಲಿಂ, ಕ್ರೖೆಸ್ತರು ಇಲ್ಲಿ ಈ ಯಾವುದನ್ನು ಓದಿದ್ದಾರೆ? ಒಬ್ಬ ಹೇಳಿದ, ‘ನಾನು ಹಿಡಿದ ಮೊಲಕ್ಕೆ ಮೂರು ಕಾಲು’ ಅಂತ. ಏಕೆ? ಇನ್ನೊಂದನ್ನು ಅವನ ಕೈಲಿ ಹಿಡಿದಿದ್ದನಲ್ಲ? ಅದು ಲೆಕ್ಕಕ್ಕೆ ಬರಲಿಲ್ಲ! ಹಾಗೆ ತನ್ನದೊಂದೇ ಮತಗ್ರಂಥವನ್ನು ಓದಿ ಕುರುಡಾದವನಿಗೆ ಜಗತ್ತು ಸಣ್ಣದಾಗಿ ಕಾಣುತ್ತ, ಬೇರೆಯವು ಇಲ್ಲವೆಂಬ, ಇದ್ದರೂ ತಿರಸ್ಕಾರಯೋಗ್ಯ ಎಂಬ ಅಪಾಯಕಾರೀ ಭಾವನೆ ಬೇರೂರುತ್ತದೆ. ಅಲ್ಲಲ್ಲಿ ಟೆರರರಿಸಂನ ಮೂಲ! ಈಗ ಬೇಕು ವಿಶಾಲ ಓದು, ವಿಸ್ತಾರ ಅನುಭವ, ಗ್ರಹಿಕೆಗಳ ಹಿಗ್ಗುವಿಕೆ, ವಿಶನ್ ಎಂಬ ಮಹಾ ಸಮಗ್ರ ದರ್ಶನ. ಇದು ಉಪನಿಷತ್ತುಗಳ ದಾರಿ.

ದಾರಾಷಿಕೋ ಎಂಬ ಮೊಗಲ ರಾಜಕುಮಾರ, ಔರಂಗಜೇಬನ ಅಣ್ಣ, ಉಪನಿಷತ್ತುಗಳನ್ನು ಪರ್ಷಿಯನ್ ಭಾಷೆಗೆ ಭಾಷಾಂತರಿಸಿದ! ಈತ ಷಾಜಾನನ ಹಿಂದೂ ಪತ್ನಿಯ ಮಗನಾಗಿ ರಕ್ತಗತವಾಗಿ ಈ ದರ್ಶನ ಅವನಿಗೆ ಸಾಧ್ಯವಾಯ್ತು. ಅದು ಪಶ್ಚಿಮದೇಶಗಳಿಗೆ ಭಾರತೀಯ ತತ್ತ್ವಶಾಸ್ತ್ರದ ಬಾಗಿಲನ್ನೇ ತೆರೆಯಿತಾದರೂ, ಸಹಿಸದೆ ಔರಂಗಜೇಬ ಅವನನ್ನು ಕೊಂದ! ಅದೇ ಟಿಪ್ಪೂ ದಾರಿ! ಅದೇ ಅಬ್ದುಲ್ಲಾ ಅಯ್ಯ, ಓವೈಸಿ ಮುಂತಾದವರ ಮತಾಂಧದಾರಿ, ಈ ‘ದಾರಿ’ಯನ್ನು ತಪ್ಪಿಸಬಹುದಾಗಿದ್ದ ಸ್ವಾತಂತ್ರೋದಯಕಾಲದ ಸುವರ್ಣ ಅವಕಾಶದ ಬಾಗಿಲನ್ನು ನೆಹ್ರೂ ಮತ್ತು ಕಾಂಗ್ರೆಸ್ ಮುಚ್ಚಿ, ಮತ್ತೆ ಔರಂಗಜೇಬನ ದಾರಿಗೆ ಎಣೆಮಾಡಿಕೊಟ್ಟಿತ್ತು. ಅದು ಪೊಳ್ಳು ಸೆಕ್ಯುಲರಿಸಂನ ಉದಯಕಾಲ. ಗಾಂಧಿ ಇದನ್ನು ಪೋಷಿಸಿದರು. ‘ಅಹಿಂಸಾ’ ಮುಸುಕು ಸತ್ಯವನ್ನು ಮರೆಮಾಚಿತ್ತು. ನಿಮಗೆ ನೈಜ ಏಕತೆ, ನೈಜ ಪ್ರಾಕೃತಿಕ ಸಮಾನತೆ ಬೇಕಾದರೆ ಒಂದು ವೃಕ್ಷದ ಉದಾಹರಣೆಯನ್ನು ನೋಡಿ. ವೃಕ್ಷ ಏಕೆ? ಅದು ಸಾವಯವ ಆರ್ಗಾನಿಕ್, ಸಮಾಜ ಡಾಂಬರು ರಸ್ತೆಯೋ ಅಥವಾ ಮರಳುಗಾಡೋ, ಸುಡುಗಾಡೋ ಅಲ್ಲ. ಅದು ತೋಟ, ನದೀತೀರದ ಹುಲ್ಲುಗಾವಲು. ಒಂದು ವೃಕ್ಷದಲ್ಲಿ ಟೊಂಗೆಗಳು, ರೆಂಬೆಗಳು, ಎಲೆ, ಚಿಗುರು, ಕಾಯಿ, ಹಣ್ಣು ಅನೇಕವಿದ್ದರೂ, ಬೊಡ್ಡೆ ಎಂಬ ಕಾಂಡ, ಸ್ಟೆಮ್ ಒಂದೇ ಇರುತ್ತದೆ. ಆಲ, ಮಾವು, ಬೇವು, ಅಶ್ವತ್ಥ, ಕಾಡುಮರಗಳು ಎಲ್ಲೆಲ್ಲೂ ಕಾಂಡ ಒಂದೇ. ಈ ಏಕತ್ವ ತನ್ನ ಬಹುತ್ವವನ್ನು ನಾಶಪಡಿಸುವುದಿಲ್ಲ. ಬೆಳೆಸುತ್ತದೆ. ಅಸಹ್ಯ ಪಡುವುದಿಲ್ಲ, ಐಶ್ವರ್ಯ ಅಂತ ಸದಾ ಬೀಗುತ್ತದೆ. ಬಹುತ್ವವಿಲ್ಲದ ಏಕತ್ವ, ಲೈಟುಕಂಬ ಇದ್ದಂತೆ. ಬೇರು ಇಲ್ಲ, ಬೋಳು ಬೋಳು. ಚಿಗುರುವುದಿಲ್ಲ. ಅಲ್ಲಿ ಲಟ್ಟಣಿಗೆಯಿಂದ ಲಟ್ಟಿಸಿದ ಚಪಾತಿಯಂತೆ ಬುಲ್​ಡೋಜರ್ ಹರಿದು, ಜಲ್ಲಿಯನ್ನು ನೆಲಸಮ ಮಾಡುವಂತೆ, ‘ನೆಲಸಮತಾವಾದ’ ಇದೆ. ಅದು ಕೃತಕ. ಬಹುತ್ವವು ನಮ್ಮಲ್ಲಿ ಕೃತಕವಲ್ಲ. ಸಮಾಜದ ಅಸ್ತಿತ್ವ, ಪ್ರಗತಿ, ನೆಮ್ಮದಿ, ಸುಸ್ಥಿರತೆಗೆ ಬೇಕಾದ ನಾನಾ ವೃತ್ತಿಗಳು ಇಲ್ಲಿ ಸಹಜ ಅದೇ ಹಿಂದಣ ‘ವರ್ಣ’ಕ್ಕೆ ಆಧಾರ. ವೃತ್ತಿಗಳ ಮೇಲೆ ‘ಜಾತಿ’ ಉಂಟಾಯ್ತು. ಗಾಣಿಗ ಹೂ ಮಾರುವುದಿಲ್ಲ. ರೈತ ಯೋಧನಾಗುವುದಿಲ್ಲ, ವ್ಯಾಪಾರಿ ಮೇಷ್ಟ್ರರಾಗುವುದಿಲ್ಲ. ದನಗಾಹಿ, ಹಾಲು ಮಾರುತ್ತಾನೆ, ಕಬ್ಬಿಣ ಅಲ್ಲ. ಬಿಲ್ಡಿಂಗ್ ಕಂಟ್ರಾಕ್ಟರಾಗುವುದಿಲ್ಲ- ಎಂಬೀ ವ್ಯವಸ್ಥೆಯಲ್ಲಿ ‘ಸ್ಟಾಗ್ನೆಂಟ್ ಸೊಸೈಟಿ’ ಕಾಣುವವರಿಗೆ ವೃತ್ತಿ ವೃತ್ತಿಗಳಿಗೆ ಜಗಳ, ಸ್ಪರ್ಧೆ, ಹೋರಾಟ, ಅಪನಂಬಿಕೆ, Leading to terrorism ಇನ್ನಿತರ ಹಾನಿಕರ ಚಳವಳಿಗಳು ಹುಟ್ಟುತ್ತವೆ. ಅದು ಇಂದಿನ ಅವ್ಯವಸ್ಥೆ. ಕೆಲವರಿಗೆ ಅದೇ ಬೇಕು. ನಿರಂತರ ಚುನಾವಣೆಗಳಲ್ಲಿ ಹಣ ಇರುತ್ತದೆ. ‘ಯಾರು ಯಾವುದಕ್ಕೆ ಸರಿ, ಯೋಗ್ಯರು’ ಎಂಬ ಪಾತ್ರದಲ್ಲಿ ಅವ್ಯವಸ್ಥೆ, ಅವನತಿ, ಭ್ರಷ್ಟಾಚಾರ, ತೇಜೋವಧೆ, ಪ್ರತಿಭಾಹಾನಿ ಹಾಗೂ ಹಿತ್ತಲ ಬಾಗಿಲಿನಿಂದ ಜಾತಿಯೇ ತಲೆ ಎತ್ತಿ ಬೇತಾಳನಂತೆ ನಿಮ್ಮನ್ನು ಅಣಕಿಸುತ್ತದೆ, ತಿನ್ನುತ್ತದೆ. ಸಮಾಜದ ಓಟ, ವೇಗದಲ್ಲಿ ಎಲ್ಲರದ್ದೂ ಒಂದೇ ಇರದೆ, ಅಲ್ಲಿ ಏರುಪೇರು ಆದಾಗ, ಸಮಾಜದೊಳಗಿಂದಲೇ ಸರಿಪಡಿಸಬೇಕು. ಅದಕ್ಕೆ ಬೇಕು ವಿವೇಕಾನಂದ, ದಯಾನಂದ, ಬಸವ, ಅಂಬೇಡ್ಕರ್, ರಾಮಾನುಜ, ತುಳಸೀ, ನಾನಕ್, ನಾರಾಯಣಗುರು, ಅಮೃತಾನಂದಮಯಿ, ಇಂಥವರು. ಮಾರ್ಕ್ಸ್, ಲೆನಿನ್, ಸ್ಟಾಲಿನ್ ಮಾವೋ ಅಲ್ಲ.

(ಲೇಖಕರು ಬಹುಶ್ರುತ ವಿದ್ವಾಂಸರು, ವರ್ತಮಾನ ವಿದ್ಯಮಾನಗಳ ವಿಶ್ಲೇಷಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net