

ಸ್ವಾಮಿ ವಿವೇಕಾನಂದರದ್ದು ಒಂದು ವಿರಾಟ ಮತ್ತು ವಿಶೇಷ ವ್ಯಕ್ತಿತ್ವ. ಅವರ ಅಸೀಮ ವಿಚಾರಧಾರೆಯ ವ್ಯಾಪ್ತಿ, ವೈವಿಧ್ಯಮಯ ಜ್ಞಾನರಾಶಿ, ಅಭೂತಪೂರ್ವ ಆಧ್ಯಾತ್ಮಿಕ ಸಾಧನೆ, ದೇಶವ್ಯಾಪಿ ಸಂಚಲನ, ವಿಶ್ವವ್ಯಾಪಿ ಚಲನವಲನಗಳ ಮೂಲಕ ಅವರು ಪಡೆದ ದರ್ಶನಗಳನ್ನು ನೋಡಿದರೆ ಅವರು ಒಬ್ಬ ವ್ಯಕ್ತಿಯಲ್ಲ ಒಂದು ವಿರಾಟ ಶಕ್ತಿಯ ಆವಿರ್ಭಾವ ಎಂಬುದನ್ನು ಮನಗಾಣಬಹುದು. ರಾಷ್ಟ್ರಕವಿ ಕುವೆಂಪು ಅವರು ಸ್ವಾಮಿ ವಿವೇಕಾನಂದರ ಅಭೂತಪೂರ್ವ ವ್ಯಕ್ತಿತ್ವವನ್ನು ಚಿಂತಿಸಿ, ಧ್ಯಾನಿಸುತ್ತಿದ್ದಾಗ ಅವರ ವಿವೇಕಪೂರ್ಣ ಮನಸ್ಸಿನಲ್ಲಿ ಆಶ್ಚರ್ಯಚಕಿತವಾಗಿ ಉದ್ಭವವಾದ ಪ್ರಶ್ನೆ.... ‘ಯಾರಿವನು?..ಯಾರಿವನು?’ ಇದೇ ಅವರು ಬರೆದ ‘ಸ್ವಾಮಿ ವಿವೇಕಾನಂದ’ ಎಂಬ ಜೀವನಚರಿತ್ರೆಯ ಮೊದಲ ಅಧ್ಯಾಯ. ಎಚ್ಚೆತ್ತ ಮನಸ್ಸುಳ್ಳವರು ವಿಶ್ವದ ಯಾವ ಜನಾಂಗದವರು ಓದಿದರೂ ಸ್ವಾಮೀಜಿಯ ಅಸಾಧಾರಣ ವ್ಯಕ್ತಿತ್ವದ ಬಗ್ಗೆ ಒಂದು ರೀತಿಯ ಆಶ್ಚರ್ಯ ಮತ್ತು ಸ್ಪೂರ್ತಿಯ ಕಂಪನವಾಗುವುದನ್ನು ನಾವು ನೋಡಬಹುದು.
ಮಹಾತ್ಮಾ ಗಾಂಧಿಯವರು ಹೀಗೆಂದಿದ್ದಾರೆ-‘ಸ್ವಾಮಿ ವಿವೇಕಾನಂದರ ಕೃತಿಗಳನ್ನು ಓದಿದ ನಂತರ ನನ್ನ ದೇಶಪ್ರೇಮ ಸಾವಿರಪಟ್ಟು ಹೆಚ್ಚಾಯಿತು...’
ನೇತಾಜಿ ಸುಭಾಷ್ ಚಂದ್ರ ಬೋಸರು, ‘ಅವರು ಈಗ ಜೀವಂತವಾಗಿದ್ದಿದ್ದರೆ ನಾನು ಅವರ ಪದತಲದಲ್ಲಿ ಇರುತ್ತಿದ್ದೆ. ನನ್ನ ಜೀವನದಲ್ಲಿ ಹೊಸಜಾಗೃತಿ ಮೂಡಿದ್ದು ಶ್ರೀರಾಮಕೃಷ್ಣ ಮತ್ತು ವಿವೇಕಾನಂದರ ಪವಿತ್ರ ಪ್ರಭಾವಕ್ಕೆ ಒಳಗಾದ ನಂತರ. ಅವರಿಬ್ಬರನ್ನು ಅಗೋಚರವಾದ ಒಂದೇ ದೈವೀ ವ್ಯಕ್ತಿತ್ವದ ಎರಡು ಆಯಾಮಗಳೆಂದು ಪರಿಗಣಿಸುತ್ತೇನೆ.’
ಮಾರಿಯ ಆರೊಕಿಯಮ್ ಕನಗ ಎಂಬ ಇಟಲಿಯ ಮಹಿಳೆ ರಚಿಸಿದ ಪ್ರಬಂಧ ಪುಸ್ತಕಕ್ಕೆ ‘Man Without Frontiers: The Ultimate Concern of Swami Vivekananda’ ಎಂಬ ಶೀರ್ಷಿಕೆಯನ್ನು ಇಟ್ಟಿದ್ದು ಅರ್ಥಪೂರ್ಣ.
ಸ್ವಾಮಿ ವಿವೇಕಾನಂದರ ಸಮಗ್ರ ಜೀವನ ಮತ್ತು ಸಂದೇಶಗಳನ್ನು ನೋಡಿದರೆ ಅವರು ಯುವಶಕ್ತಿಯ ಸಾಕಾರ ಸ್ವರೂಪ ಮಾತ್ರವಲ್ಲ, ಸಮಗ್ರ ಭಾರತದ ಅಭ್ಯುದಯ ಮಾತ್ರವಲ್ಲ, ಮಾನವ ಜನಾಂಗದ ಶ್ರೇಯಸ್ಸಿನ ದೃಷ್ಟಾರರು ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ‘ನನ್ನನ್ನು ಕೇವಲ ಭಾರತಕ್ಕೆ ಸೇರಿದವನೆಂದು ತಿಳಿಯದಿರಿ. ನಾನು ಸಮಸ್ತ ವಿಶ್ವಕ್ಕೆ ಸೇರಿದವನು’ ಎಂದು ಸ್ವಾಮೀಜಿಯವರು ಉದ್ಘೋಷಿಸಿದರು, ತನ್ಮೂಲಕ ವಿಶ್ವಭ್ರಾತೃತ್ವದ, ವಿಶ್ವಶಾಂತಿಯ ಮತ್ತು ವಿಶ್ವಾತ್ಮಭಾವದ ಬೀಜವನ್ನು ಬಿತ್ತಿದರು.
ಸ್ವಾಮೀಜಿ ತಮ್ಮ ಜೀವನದ ಉದ್ದೇಶದ ಬಗ್ಗೆ ಸ್ಪಷ್ಟಪಡಿಸುತ್ತಾ ಹೇಳಿದ್ದಾರೆ: “My ideal, indeed can be put into a few words, and that is to preach unto mankind their inherent Divinity, and make it manifest in every movement of life.”
ಸ್ವಾಮೀಜಿಯವರ ವಿಚಾರಧಾರೆಯನ್ನು ಅನುಸರಿಸಿದರೆ ನಾವು ಎಂದೂ ಪತನ ಹೊಂದುವುದಿಲ್ಲ. ಅದಕ್ಕೆ ಬದಲು ಅಚಲವಾದಂತಹ ಆತ್ಮಶ್ರದ್ಧೆ ಮತ್ತು ಪ್ರಗತಿಶೀಲ ಆತ್ಮಶಕ್ತಿ ನಮ್ಮಲ್ಲಿ ಮೂಡಿಬರುವುದು. ಚಾರಿತ್ರ್ಯವಂತರಾದ ಘನತೆಯುಳ್ಳ ಮನುಷ್ಯರನ್ನಾಗಿ ಮಾಡುವ ವಿದ್ಯಾಭ್ಯಾಸವನ್ನು ನಮ್ಮ ದೇಶದ ಪ್ರತಿಯೊಂದು ಪ್ರಜೆಗೆ ದೊರಕಿಸಿದರೆ ಮಾತ್ರ ಭಾರತದ ಪ್ರಗತಿ ಸಾಧ್ಯ ಎಂಬುದರಲ್ಲಿ ಅವರಿಗೆ ದೃಢ ವಿಶ್ವಾಸವಿತ್ತು.
ಸಮಗ್ರ ರಾಷ್ಟ್ರೀಯತೆಯ ದೃಷ್ಟಿಕೋನ: ವಿವೇಕಾನಂದ ಎಂಬ ಹೆಸರು ಒಂದು ವ್ಯಕ್ತಿಯದಲ್ಲ, ಒಂದು ಸಂಸ್ಥೆಯದಲ್ಲ, ಒಂದು ಬೃಹತ್ ಜ್ಞಾನರಾಶಿ, ಕ್ರಿಯಾಶಕ್ತಿಯ ಹೆಸರು; ಮಹಾನ್ ಆದರ್ಶದ ಹೆಸರು. ಅವರು ಮಂತ್ರದೃಷ್ಟಾರ. ‘ದರಿದ್ರದೇವೋಭವ’ ‘ಆತ್ಮನೋ ಮೋಕ್ಷಾರ್ಥಂ ಜಗದ್ಧಿತಾಯ ಚ’ ಎಂಬುದು ರಾಮಕೃಷ್ಣ ಸಂಘದ ಆದರ್ಶ ಮಾತ್ರವಲ್ಲ, ಇದು ಪ್ರತಿಯೊಬ್ಬ ಪ್ರಜ್ಞಾವಂತ, ಎಚ್ಚೆತ್ತ ಮಾನವನ ಗುರಿಯಾಗಬೇಕು. ‘ಆತ್ಮಕಲ್ಯಾಣದ ಜೊತೆಗೆ ಲೋಕಕಲ್ಯಾಣ’ ಎಂಬ ಸಂದೇಶವು ಸಂನ್ಯಾಸಿಗಳಿಗಿಂತ ಹೆಚ್ಚು ಗೃಹಸ್ಥರಿಗೆ ಅವಶ್ಯಕ. ಆತ್ಮಕಲ್ಯಾಣದ ಮೂಲಸೂತ್ರದ ಹಿಂದೆ ಲೋಕಕಲ್ಯಾಣದ ಸ್ಪೂರ್ತಿ ಶಕ್ತಿ ಇದೆ. ಅಲ್ಲದೆ ಅಧ್ಯಾತ್ಮನಿಷ್ಠ ಪ್ರಾಮಾಣಿಕ ಭಾವದಲ್ಲಿ ಲೋಕಕಲ್ಯಾಣದ ಮಾರ್ಗದಲ್ಲಿ ಮುಂದೆ ಸಾಗುವವನ ಆತ್ಮಕಲ್ಯಾಣವಾಗದೆ ಇರಲಾರದು. ವ್ಯಕ್ತಿ-ಕುಟುಂಬ-ಸಮಾಜ-ದೇಶ- ವಿಶ್ವ ಹೀಗೆ ವ್ಯಕ್ತಿತ್ವವು ವಿಕಾಸವಾಗುತ್ತ ಹೋಗಬೇಕು. ಆದ್ದರಿಂದ ಸ್ವಾಮಿ ವಿವೇಕಾನಂದರು ಹೇಳುತ್ತಿದ್ದರು: ‘ವಿಕಸನವೇ ಜೀವನ, ಸಂಕುಚಿತತೆಯೇ ಮರಣ.’
ಸ್ವಾಮಿ ವಿವೇಕಾನಂದರ ರಾಷ್ಟ್ರಜಾಗೃತಿ-ರಾಷ್ಟ್ರಪ್ರೇಮ ಹಾಗೂ ಆಧ್ಯಾತ್ಮಿಕ ರಾಷ್ಟ್ರೀಯತೆಯು (Spiritual Nationalism) ಭಾರತೀಯ ಆಧ್ಯಾತ್ಮಿಕ ಮೌಲ್ಯಗಳೊಂದಿಗೆ ತಾದಾತ್ಮ್ಯವಿದ್ದಂತಹ ರಾಷ್ಟ್ರೀಯ ಭಾವ. ಸರ್ವಸಮ್ಮತವಾದ, ಎಲ್ಲರಿಗೂ ಅವಶ್ಯಕವಾಗಿರುವ ಆಧ್ಯಾತ್ಮಿಕ ತಳಹದಿಯಲ್ಲಿ ರಾಷ್ಟ್ರೀಯತೆಯನ್ನು ಕಟ್ಟುವ ಪ್ರಯತ್ನ ಮಾಡಿದರು.
ಗುರುದೇವ ರವೀಂದ್ರನಾಥ ಟಾಗೋರು Condensed India ‘ಘನೀಭೂತ ಭಾರತ’ ಎಂದು ಕರೆದು ಸ್ವಾಮಿ ವಿವೇಕಾನಂದರನ್ನು ಗೌರವಿಸಿದ್ದಾರೆ. ಭಾರತವನ್ನು ಸರಿಯಾಗಿ ತಿಳಿದುಕೊಳ್ಳಬೇಕಾದರೆ ಸ್ವಾಮಿ ವಿವೇಕಾನಂದರ ಜೀವನ ಸಂದೇಶಗಳನ್ನು ಓದಬೇಕು ಎಂದು ಟಾಗೋರ್ ಹೇಳಿದ್ದರು. ಅವರು ನಿಜವಾಗಿಯೂ ಭಾರತೀಯ ಆಧ್ಯಾತ್ಮಿಕತೆ ಮತ್ತು ಪಾಶ್ಚಾತ್ಯ ವೈಜ್ಞಾನಿಕತೆಯ ಸಮ್ಮಿಲನದ ಮತ್ತು ಸಮನ್ವಯದ ಮೂರ್ತಸ್ವರೂಪವೆಂದು ಕೂಡ ಹೇಳಬಹುದು. ಅರ್ಥಹೀನ ಪಾಶ್ಚಾತ್ಯ ಅನುಕರಣೆಯನ್ನು ಸ್ವಾಮೀಜಿಯವರು ಖಂಡಿಸಿದ್ದಾರೆ. ಅದರ ಬದಲಾಗಿ ಪಾಶ್ಚಾತ್ಯರ ಸಂಘಟನಾ ಶಕ್ತಿ, ವೈಜ್ಞಾನಿಕತೆ ಹಾಗೂ ಕ್ರಿಯಾಶೀಲತೆಯನ್ನು ನಾವು ಅನುಸರಿಸಿ, ನಮ್ಮದನ್ನಾಗಿ ಮಾಡಿಕೊಳ್ಳುವಂತೆ ಪ್ರೇರೇಪಿಸಿದ್ದಾರೆ.
ಸ್ವಾಮಿ ವಿವೇಕಾನಂದರು ಭಾರತ ಮತ್ತು ಭಾರತೀಯರ ಸೇವೆಯನ್ನು ಸರ್ವಶ್ರೇಷ್ಠವೆಂದು ತಿಳಿದಿದ್ದರು. ಜತೆಗೆ, ಜಗತ್ಹಿತ, ವಿಶ್ವಕಲ್ಯಾಣ ಮತ್ತು ಇಡೀ ಮಾನವಕೋಟಿಯ ಕಲ್ಯಾಣ ಅವರ ಉದ್ದೇಶವಾಗಿತ್ತು. ‘ವಸುಧೈವ ಕುಟುಂಬಕಂ’ ಎಂಬ ನಮ್ಮ ಸನಾತನವಾದ ಉದಾತ್ತ ವಿಚಾರವನ್ನು ಆಧರಿಸಿ ಅವರು ‘ಆತ್ಮನೋ ಮೋಕ್ಷಾರ್ಥಂ ಜಗದ್ದಿತಾಯ ಚ’ ಎಂಬ ಧ್ಯೇಯವಾಕ್ಯವನ್ನು ರಾಮಕೃಷ್ಣ ಮಹಾಸಂಘಕ್ಕೆ ಕೊಟ್ಟರು. ಹೀಗೆ ಅವರು ಸಮಗ್ರ ದೃಷ್ಟಿಕೋನದಿಂದ ವಿಶ್ವಭ್ರಾತೃತ್ವದ- ವಿಶ್ವಶಾಂತಿಯ ಮತ್ತು ವಿಶ್ವಾತ್ಮಭಾವದೊಡನೆ ರಾಷ್ಟ್ರಪ್ರೇಮವನ್ನು ಆಧ್ಯಾತ್ಮಿಕ ರಾಷ್ಟ್ರೀಯತೆಯೊಡನೆ ಮೇಳೈಸಿದರು.
ಮೈಸೂರು ನಂಟು: ಮೈಸೂರಿಗೂ ಸ್ವಾಮಿ ವಿವೇಕಾನಂದರಿಗೂ ಒಂದು ವಿಶೇಷವಾದ ಸಂಬಂಧವಿತ್ತು. ಅವರು ಶೇಷಾದ್ರಿ ಅಯ್ಯರ್ಗೆ ಬರೆದ ಪತ್ರದಲ್ಲಿ ಹೀಗೆನ್ನುತ್ತಾರೆ, “To the people of south India, I owe much and not a small part of that to Mysore.” ಮೈಸೂರು ಮಹಾರಾಜರಿಗೆ ಅನೇಕ ರೀತಿಯಲ್ಲಿ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದ್ದಾರೆ. ಒಂದು ಪತ್ರದಲ್ಲಿ ಹೀಗೆ ಬರೆಯುತ್ತಾರೆ, “Through your Highness’ kind help it has been possible for me to come to this country (USA).” (CW, Vol. 4, p 361).
ಸ್ವಾಮೀಜಿಯವರು ಮೈಸೂರು ಮಹಾರಾಜರಿಗೆ ಬರೆದ ಮತ್ತೊಂದು ಪತ್ರದಲ್ಲಿ ‘ಯಾರು ಇತರರಿಗೋಸ್ಕರ ಬಾಳುತ್ತಾರೋ ಅವರದು ಮಾತ್ರ ನಿಜವಾದ ಜೀವನ, ಉಳಿದವರೆಲ್ಲ ಜೀವಂತ ಶವದಂತೆ’ ಎಂದು ಹೇಳಿದ್ದಾರೆ.
ಸ್ವಾಮಿ ವಿವೇಕಾನಂದರು ಒಂದು ಶತಮಾನದ ಹಿಂದೆಯೇ ದೇಶದ ಉದ್ದಗಲಕ್ಕೂ ಸಂಚರಿಸಿ, ಅಧೋಗತಿಗಿಳಿದ, ಭಾರತದ ಜನಜೀವನವನ್ನು ಪ್ರತ್ಯಕ್ಷವಾಗಿ ಕಂಡರು. ನಮ್ಮ ದೇಶದ ಪುನರುಜ್ಜೀವನಕ್ಕಾಗಿ ಅವರು ಕೊಟ್ಟ ಕಾರ್ಯಪ್ರಣಾಳಿಕೆಯಲ್ಲಿ ಧರ್ಮ-ಕರ್ಮ ಸಮನ್ವಯಕ್ಕೆ ಹೆಚ್ಚಿನ ಪ್ರಾಧಾನ್ಯ ಕೊಟ್ಟಿದ್ದಾರೆ.
ಷಿಕಾಗೊ ವಿಶ್ವಧರ್ಮ ಸಮ್ಮೇಳನಕ್ಕೆ ಹೋಗುವ ಆಲೋಚನೆ ಮೈಸೂರಿನ ಮಹಾರಾಜರು ಮತ್ತು ಇತರ ಹಿತೈಷಿಗಳ ಸಲಹೆಯ ಮೇರೆಗೆ ಅವರಲ್ಲಿ ಮೊದಲ ಬಾರಿಗೆ ಮೈಸೂರಿನಲ್ಲಿಯೇ ಮೂಡಿಬಂದಿತ್ತು. ಮತ್ತು ಮೈಸೂರಿನ ಮಹಾರಾಜರು ಧನಸಹಾಯ ಮಾಡಲು ಮುಂದೆ ಬಂದಿದ್ದರು. ಆದ್ದರಿಂದ ಮೈಸೂರಿನಲ್ಲಿ ಅವರು ತಂಗಿದ್ದ ತಾಣ ನಿರಂಜನ ಮಠ/ಆಗಿನ ಅನಾಥಾಲಯ ಮತ್ತು ಮುಂಬರುವ ಈಗಿನ ವಿವೇಕ ಸ್ಮಾರಕವು ಅವರು ವಿಶ್ವಧರ್ಮ ಸಮ್ಮೇಳನಕ್ಕೆ ಹೋಗಲು ನಿರ್ಧರಿಸಿದ ವಿಶಿಷ್ಟ ಸಂಕಲ್ಪಭೂಮಿ ಎಂಬುವುದು ಹೆಮ್ಮೆಯ ವಿಷಯ.
ಸ್ವಾಮಿ ವಿವೇಕಾನಂದರು ಶ್ರೀರಾಮಕೃಷ್ಣರ ನೇರಶಿಷ್ಯರಲ್ಲಿ ಅಗ್ರಗಣ್ಯರು ಹಾಗೂ ವಿಶೇಷ ಕೃಪೆಗೆ ಪಾತ್ರರಾದವರು. ಶ್ರೀರಾಮಕೃಷ್ಣರು ತಾವು ದೇಹತ್ಯಾಗ ಮಾಡುವ ಮೊದಲು ತಮ್ಮ ತಪಶ್ಶಕ್ತಿಯನ್ನೆಲ್ಲಾ ಸ್ವಾಮೀಜಿಯವರಿಗೆ ಧಾರೆಯೆರೆದು, ಮುಂದೆ ಲೋಕಕಲ್ಯಾಣಕ್ಕೋಸ್ಕರ ಅವರನ್ನು ಅಣಿ ಮಾಡಿದರು.
ವಿವೇಕಾನಂದ-ರಾಮಕೃಷ್ಣರು - ನರನಾರಾಯಣರು, ಕೃಷ್ಣಾರ್ಜುನರಂತೆ. ವಿವೇಕಾನಂದರು ಧರ್ಮಸ್ಥಾಪನೆಗೋಸ್ಕರ ಬಂದ ಅವತಾರವರಿಷ್ಠರ ವರಿಷ್ಠ ಶಿಷ್ಯರು. ಸ್ವಾಮಿ ವಿವೇಕಾನಂದರನ್ನು ‘ಅವತಾರಕಲ್ಪ’ ಎಂದು ಬಲ್ಲವರು ಕರೆದಿದ್ದಾರೆ.
ಜ್ಞಾನರಾಶಿ-ತತ್ತ್ವಗಳ ಸಮನ್ವಯ: ಅವರೊಬ್ಬ ಅಧ್ಯಾತ್ಮ ಪಿಪಾಸು, ಆತ್ಮಸಾಕ್ಷಾತ್ಕಾರ ಪಡೆದ ಜ್ಞಾನಿ, ಸಾಹಿತಿ, ವಿದ್ವಾಂಸ, ಬರಹಗಾರ, ಅತ್ಯುತ್ತಮ ವಾಗ್ಮಿ, ಸಮಾಜ ಸುಧಾರಕ, ಸಂಗೀತ ವಿದ್ವಾಂಸ, ಆಂಗ್ಲ ಮತ್ತು ಸಂಸ್ಕೃತ ಭಾಷೆ ಮತ್ತು ವ್ಯಾಕರಣಗಳ ಪ್ರಾವೀಣ್ಯತೆ ಹಾಗೂ ತತ್ತ್ವಶಾಸ್ತ್ರ, ವಿಜ್ಞಾನ ಇತಿಹಾಸ, ನ್ಯಾಯ ಮುಂತಾದವನ್ನು ತಲರ್ಸ³ಯಾಗಿ ತಿಳಿದುಕೊಂಡವರು.
ಸ್ವಾಮೀಜಿಯವರ ಜೀವನ ಮತ್ತು ಸಂದೇಶದಲ್ಲಿ ನಾವು ವಿಭಿನ್ನ ಜ್ಞಾನರಾಶಿಗಳ ತತ್ತ್ವಗಳು ಸಮನ್ವಯ ಮತ್ತು ಸಮುಚ್ಚಯಗಳನ್ನು ಗಮನಿಸಬಹುದು. ಅವುಗಳಲ್ಲಿ ಮುಖ್ಯವಾದುವುಗಳು: 1. ಪುರಾತನ- ಆಧುನಿಕ, 2. ಸಾಂಪ್ರದಾಯಿಕ - ನವೀನ, 3. ಧರ್ಮ-ವಿಜ್ಞಾನ, 4. ಕರ್ಮ- ಪೂಜೆ, 5. ಲೌಕಿಕ - ಪಾರಮಾರ್ಥಿಕ, 6. ನಂಬಿಕೆ- ವಿವೇಚನೆ, 7. ಭಕ್ತಿ -ಜ್ಞಾನ, 8. ದೇಶಭಕ್ತಿ -ವಿಶ್ವಪ್ರೇಮ, 9. ವ್ಯಕ್ತಿಹಿತ -ಸಮಾಜಹಿತ, 10. ವಿವೇಚನೆ-ಅನುಷ್ಠಾನ, 11. ಮೋಕ್ಷ-ಸೇವೆ.
ಅವರ ಪ್ರತಿಭೆಯ ಅಭಿವ್ಯಕ್ತಿಯಲ್ಲಿ ಆಂತರಿಕವಾದ ಆತ್ಮಜ್ಞಾನ ಹಾಗೂ ಸಮಾಜಕಲ್ಯಾಣ, ಈ ಎರಡು ಆಯಾಮಗಳನ್ನು ಒಳಗೊಂಡಿರುವುದರಿಂದ ಅವರು ರಾಮಕೃಷ್ಣ ಮಹಾಸಂಘದ ಹಾಗೂ ಮಾನವ ಜನಾಂಗದ ಆತ್ಯಂತಿಕ ಧ್ಯೇಯವನ್ನು ‘ಆತ್ಮನೋಮೋಕ್ಷಾರ್ಥಂ ಜಗದ್ದಿತಾಯ ಚ’ ಎಂದು ಉದ್ಘೋಷಿಸಿದರು. ರಾಮಕೃಷ್ಣರಲ್ಲಿ ಕಂಡುಬರುವ ಭಗವತ್ ವ್ಯಾಕುಲತೆಯ ಜೊತೆಗೆ ಸ್ವಾಮಿ ವಿವೇಕಾನಂದರು ತಮ್ಮ ಜೀವನಾದರ್ಶವಾದ ಸಮಾಜ ಹಿತವನ್ನು ಸೇರಿಸಿ ಭಾವಸಂಚಲನ ಉಂಟುಮಾಡಿದರು. ಮನುಷ್ಯನ ನಿಜವಾದ ಪರಿವರ್ತನೆ, ತನ್ಮೂಲಕ ಸಮಾಜದ ಹಾಗೂ ವಿಶ್ವದ ಪರಿವರ್ತನೆ- ಇದನ್ನು ಆಧ್ಯಾತ್ಮಿಕ ಜ್ಞಾನಪ್ರಸಾರ, ಸೇವೆ, ಅನುಕಂಪ ಮತ್ತು ಪ್ರೀತಿಯ ಮೂಲಕ ಸಾಧಿಸುವುದನ್ನು ಧ್ಯೇಯವನ್ನಾಗಿಸಿಕೊಂಡಿದ್ದರು ಸ್ವಾಮೀಜಿ. ಅವರ ಜೀವನ, ಜ್ಞಾನಪೂರ್ಣ ವಿಚಾರ, ಬೋಧನೆಗಳ ಸ್ಮರಣೆಯಿಂದ ನಮ್ಮ ಬಾಳು ಪರಿವರ್ತನೆಗೊಂಡು ಹೊಸ ಉತ್ಸಾಹವನ್ನೂ ಚೈತನ್ಯವನ್ನೂ ಪಡೆಯುತ್ತದೆ ಎಂಬುದು ಅನೇಕ ಜನರಿಗೆ ಅನುಭವಗಮ್ಯವಾದುದು.
(ಲೇಖಕರು ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರು)