

ಅಮೆರಿಕದ ಬೌದ್ಧಿಕ ವಲಯವು, ‘ಓಹ್, ಸ್ವಾಮಿ ವಿವೇಕಾನಂದರ ದಿವ್ಯಬೋಧನೆಗಳಿಂದ ಪರಮಸತ್ಯದ ಇಣುಕುನೋಟವನ್ನು ಕಾಣುವಂತಾಯಿತು, ಅದಾಗಲೇ ನಮ್ಮಲ್ಲಿ ಮೇಳೈಸಿದ್ದ ಅರ್ಥಹೀನವಾದುದನ್ನು ಕಳಚಿ, ಕೊಡವಿಹಾಕಲು ಸಾಧ್ಯವಾಯಿತು. ನಾವು ಹಳೆಯ ‘ನಾವು’ ಆಗಿ ಉಳಿಯದೇ ಪರಿಪೂರ್ಣ ಮಾನವೀಯತೆ ಮತ್ತು ವಿಶ್ವಭ್ರಾತೃತ್ವದ ವಿಶಾಲ ಭರವಸೆಯಲ್ಲಿ ಅಭ್ಯಸಿಸಿ ಬದುಕಲು ಮುಂದಾದೆವು’ ಎಂದಿತು. ಐರೋಪ್ಯರ ಬೌದ್ಧಿಕವಲಯವು, ‘ಇಲ್ಲಿಯವರೆಗೂ ನಮ್ಮ ಸಮಾಜದ ಆರಾಧನೆಗಳ ಮತ್ತು ಬೋಧನೆಗಳ ಸಪ್ಪೆತನ, ಸತ್ವಹೀನತೆಯಿಂದ ನಿರುತ್ಸಾಹದ ಕಾಮೋಡ ಕವಿದಿದ್ದು, ಸ್ವಾಮಿ ವಿವೇಕಾನಂದರ ದಿವ್ಯ ಬೋಧನೆಗಳು ಧರ್ಮವೆಂಬುದು ಸತ್ಯ, ಅದು ಜೀವಂತ, ಅದು ಬದುಕಿಗೆ ಹೊಸಬೆಳಕನ್ನು ಅನುಗ್ರಹಿಸುತ್ತ ಸಾಗುತ್ತದೆ ಹಾಗೂ ಅದೊಂದೇ ಮನುಷ್ಯನ ಪರಿಪೂರ್ಣ ಪರಿವರ್ತನೆಗೆ ಯೋಗ್ಯವಾದದ್ದು ಎಂದು ಆತ್ಮಸಾಕ್ಷಿ ಒಪು್ಪತ್ತಿದೆ’ ಎಂದಿತು.
ಒಮ್ಮೆ ಬೇಲೂರು ಮಠದಲ್ಲಿ ವಾಸ್ತವ್ಯ ಹೂಡಿದ್ದಾಗ ಸ್ವಾಮೀಜಿ ಮಧ್ಯರಾತ್ರಿ ಎರಡು ಗಂಟೆಯ ವೇಳೆಗೆ ಇದ್ದಕ್ಕಿದ್ದಂತೆ ಎಚ್ಚರಗೊಂಡರು, ದುಃಖಿತರಾಗಿ ವರಾಂಡದಲ್ಲಿ ಶತಪಥ ಅಡ್ಡಾಡುತ್ತಿದ್ದಾರೆ. ಅವರಿಗೆ ಜಗತ್ತಿನ ಯಾವುದೋ ಭಾಗದಲ್ಲಿ ಭೀಕರ ಅನಾಹುತ ಸಂಭವಿಸಿ ಜನರು ಯಾತನೆ ಪಡುತ್ತಿರುವಂತೆ ಭಾಸವಾಯ್ತು. ಅವರ ದುಃಖವು ಅಸಹನೀಯವೇ ಆಗಿತ್ತು. ಏನಾಶ್ಚರ್ಯ! ಮಾರನೇ ದಿನ ವೃತ್ತಪತ್ರಿಕೆಗಳು ಫಿಜಿದ್ವೀಪದಲ್ಲಿ ಭೂಕಂಪವಾಗಿ ನೂರಾರು ಜನರು ಮೃತರಾದ ವಿಷಯವನ್ನು ದಾಖಲಿಸಿದ್ದವು! ಸ್ವಾಮಿ ವಿವೇಕಾನಂದರ ಹೃದಯವು ಸಿಸ್ಮೋಗ್ರಾಫ್ಗಿಂತಲೂ ಉತ್ತಮವಾಗಿ ಸ್ಪಂದಿಸಿತ್ತು!
ಸಮಗ್ರ ಜಗತ್ತಿನ ಇತಿಹಾಸ, ಮಾನವೋತ್ಥಾನಕ್ಕೆ ಪೂರಕವಾದ ಧರ್ಮ, ಅಧ್ಯಾತ್ಮದ ತಿಳುಹು ಮತ್ತು ಹೊಳಹುಗಳ ಪೂರ್ಣ ಅರಿವಿದ್ದ ಸ್ವಾಮೀಜಿ ತಮ್ಮ ಬದುಕಿನುದ್ದಕ್ಕೂ ಮಾನವ ನಿರ್ಮಾಣ ಧರ್ಮ ಮತ್ತು ಸಂಸ್ಕೃತಿಗಳಿಗೇ ಒತ್ತು ನೀಡುತ್ತ ಬಂದರು. ಅವರೆನ್ನುತ್ತಾರೆ: ‘ವೇದಾಂತ ಮತ್ತು ಆಧುನಿಕ ವಿಜ್ಞಾನಗಳೆಲ್ಲವೂ ಸ್ವಯಂ ವಿಕಾಸ ಹೊಂದುವ ತತ್ತ್ವವನ್ನೇ, ರಹಸ್ಯವನ್ನೇ ಒತ್ತಿ ಹೇಳುತ್ತವೆ. ಎಲ್ಲ ನಿಮಿತ್ತಗಳೂ ಅದರಲ್ಲೇ ಇವೆ. ವಿಜ್ಞಾನ ಮತ್ತು ಧರ್ಮವು ಪರಸ್ಪರ ಹಸ್ತಲಾಘವ ಮಾಡಿಕೊಳ್ಳುತ್ತವೆ. ಕಲೆ, ವಿಜ್ಞಾನ ಮತ್ತು ಧರ್ಮವು ಏಕಸತ್ಯದ ಅಭಿವ್ಯಕ್ತಿಗಳೇ ಆಗಿವೆ. ಆದರೆ ಈ ಸತ್ಯವನ್ನು ಅರ್ಥಮಾಡಿಕೊಳ್ಳಬೇಕಾದರೆ ಭವಿಷ್ಯ ಮಾನವನ ಪ್ರದೀಪ್ತ ಧರ್ಮವಾದ ಅದ್ವೈತ ಸಿದ್ಧಾಂತದ ಜ್ಞಾನವೊಂದೇ ಮಾರ್ಗ...’
ಇತಿಹಾಸದ ಕಟುಸತ್ಯ: ಭಾರತೀಯ ವೇದಾಂತ ಧರ್ಮವು ಪ್ರತಿಯೊಂದು ಜೀವಿಯಲ್ಲೂ ಚೈತನ್ಯವೇ ಹುದುಗಿದೆಯೆಂದು ಪ್ರತಿಪಾದಿಸಿ ಮೂಲಭೂತವಾಗಿ ಧರ್ಮವೆಂಬುದು ಒಂದೇ ಆದರೂ ಅದರ ಅನುಷ್ಠಾನಕ್ಕೆ ನೆರವಾಗುವ ವಿವಿಧ ಉಪಾಸನಾಕ್ರಮಗಳನ್ನು ಒಪ್ಪಿಕೊಳ್ಳಲೇಬೇಕು. ಅಂತರಂಗ ಚೈತನ್ಯದ ಬಹಿರಂಗ ವ್ಯಕ್ತತೆಗೆ ವೈಯಕ್ತಿಕ, ಕೌಟುಂಬಿಕ, ಸಾಮಾಜಿಕ, ಆರ್ಥಿಕ ಆಯಾಮಗಳು ನಮ್ಮ ಮುಂದಿದ್ದು ಈ ನಿಟ್ಟಿನಲ್ಲಿ ವೈವಿಧ್ಯಮಯವಾಗಿ ಚಿಂತಿಸುವ ಸ್ವಾತಂತ್ರ್ಯವನ್ನೂ ವೇದಾಂತವು ನಮಗೆ ನೀಡಿದೆ ಎಂದು ನಿಶ್ಚಿತವಾಗಿ ಪ್ರತಿಪಾದಿಸುವ ಸ್ವಾಮೀಜಿ, ‘ಜನರ ಧಾರ್ವಿುಕ ಭಾವಪ್ರಪಂಚಕ್ಕೆ ವಿನಾಕಾರಣ ಮೂಗುತೂರಿಸಿ, ದರೋಡೆಕೋರರಂತೆ ಆಕ್ರಮಿಸಿದ ಪಠಾಣ, ಮೊಗಲ ಮತ್ತು ಬ್ರಿಟಿಷ್ ಸಾಮ್ರಾಜ್ಯಗಳು ಸೋಲನ್ನು ದಾಖಲಿಸಿಕೊಂಡವು’ ಎಂದಿದ್ದಾರೆ.
ವರ್ಣಾಶ್ರಮಗಳು ಉತ್ತಮ ಮೌಲ್ಯಗಳನ್ನು ಹೊಂದಿದ್ದಾಗ್ಯೂ ಅದರದೇ ನಿರ್ವಣದಿಂದೊಡಮೂಡಿದ ಜಾತಿಪದ್ಧತಿಯ ವಿಕೃತ ಚಲಾವಣೆ ಸಮಾಜದ ಅಸಹನೀಯ ವಿಚಾರವಾದ ಅಸ್ಪ ೃ್ಯತೆಗೆ ದಾರಿಮಾಡಿಕೊಟ್ಟಿದ್ದು ಒಂದೆಡೆಯಾದರೆ ಜಗತ್ತಿನ ರಕ್ಷಣೆಗೆ ಪ್ರಯತ್ನಶೀಲರು ಹಾಗೂ ಬುದ್ಧಿವಂತರು ತಮ್ಮ ಆರ್ಥಿಕ ಮುನ್ನಡೆಯ ಕಾರ್ಯದಲ್ಲಿ ಯಶಸ್ಸು ಕಂಡರೂ ದುರದೃಷ್ಟಶಾಲಿಗಳನ್ನು, ಪ್ರಯತ್ನಹೀನರನ್ನು ಉಪವಾಸ ಕೆಡವಿ ಅವರ ಆರ್ಥಿಕ ವ್ಯವಸ್ಥೆ ಕುಸಿಯಲು ಕಾರಣವಾದದ್ದು ದುರಂತ! ಆಧ್ಯಾತ್ಮಿಕ ಜೀವನವೆಂಬುದು ಅತ್ಯುಚ್ಚವಾದ ಜೀವನಸಂಶೋಧನೆ ಎಂದೆನಿಸಿದರೂ ಜೀವನದಲ್ಲಿ ಇಂದ್ರಿಯಸುಖವೇ ಸರ್ವಸ್ವ ಅಲ್ಲದಿದ್ದರೂ ಆದಕ್ಕೂ ಒಂದು ಸ್ಥಾನವಿರುವುದರಿಂದ ಲೋಕದ ಹಿತದೃಷ್ಟಿಯಿಂದ ಮಾನವರೆಲ್ಲರೂ ಅವರವರ ವೈಯಕ್ತಿಕ ವಾಸ್ತವ ನೆಲೆಗಟ್ಟಿನಲ್ಲಿ ಸುಖವಾಗಿರಬೇಕು, ಮಾನವನ ಅಸ್ತಿತ್ವಕ್ಕೆ ಆಧಾರಸ್ತಂಭಗಳಾದ ಸಾಮಾಜಿಕ, ಆರ್ಥಿಕ, ರಾಜಕೀಯ ಬಲಗಳನ್ನು ಉಪೇಕ್ಷಿಸುವಂತಿಲ್ಲ ಎಂಬ ಸ್ವಾಮೀಜಿಯವರ ಅದ್ಭುತ ಚಿಂತನೆ ಜಗತ್ತನ್ನು ಎಚ್ಚರಿಸಿತು.
ನವನಾಗರಿಕತೆಯ ಪಿಡುಗು:: ಪಾಶ್ಚಾತ್ಯರ ಆಡಳಿತಕ್ಕೆ ತುತ್ತಾದ ಭಾರತದಲ್ಲಿ ಪಾಶ್ಚಾತ್ಯ ಶಿಕ್ಷಣ ಮತ್ತು ಸಂಸ್ಕೃತಿಯ ಭೀಕರ ಅಲೆಗೆ ದೇಶದ ಅಲ್ಲಲ್ಲಿ ಅಲ್ಪಸ್ವಲ್ಪ ಪ್ರತಿರೋಧ ವ್ಯಕ್ತವಾದರೂ ಭಾರತೀಯ ವೇದಾಂತ ತತ್ತ ್ವ ಅಡಿಪಾಯದಲ್ಲಿ ನಿಂತು ದೇಶೀಯ ಸಂಸ್ಕೃತಿಯ ದೀವಟಿಗೆಯನ್ನು ಮುಗಿಲವರೆಗೆ ಎತ್ತಿಹಿಡಿದ, ಪಾಶ್ಚಾತ್ಯರೊಂದಿಗೆ ವೇದಾಂತಾಧಾರಿತ ವೈಚಾರಿಕ ಯುದ್ಧ ಮೊದಲಿಗೆ ಸಾರಿದವರು ಸ್ವಾಮಿ ವಿವೇಕಾನಂದರು! ಭಾರತೀಯರು ಗತಕಾಲದ ಪ್ರಾತಃಸ್ಮರಣೆಯನ್ನೇ ಆನಂದಿಸುವವರೆಂಬ ಪಾಶ್ಚಾತ್ಯರ ಟೀಕೆಗೆ, ಅವರದೇ ಐತಿಹಾಸಿಕ ತಪು್ಪಗಳಿಗೆ ತಿದ್ದುಪಡಿ ಹಾಕಿ ಅವರುಗಳು ತಮ್ಮ ಆಲೋಚನಾ ಲಹರಿಯನ್ನೇ ಸಕಾರಾತ್ಮಕವಾಗಿ ಬದಲಿಸಿಕೊಳ್ಳಲು ಸ್ವಾಮಿ ವಿವೇಕಾನಂದರು ಪ್ರೇರಕರಾದರು. ವಿವೇಕಾನಂದರ ದಿಟ್ಟ ಉತ್ತರ ಹೀಗಿದೆ: ‘ಭಾರತವು ಪಾಶ್ಚಾತ್ಯರಿಂದ ಕಲಿಯಬೇಕಾದ ವಿಷಯಗಳಿವೆ, ನಿಜ. ಆದರೆ ಪಾಶ್ಚಾತ್ಯರಿಗೆ ಕಲಿಸಲು ಸಾಕಷ್ಟು ಸರಕುಗಳೂ ಭಾರತದಲ್ಲಿವೆ. ನಮ್ಮ ದೇಶದ ಮೇಲೆ ದಾಳಿ ನಡೆಸಿದ ಎಲ್ಲ ರಾಷ್ಟ್ರಗಳೂ ನಮ್ಮ ಸಾಂಸ್ಕೃತಿಕ ಸಂಪನ್ನತೆಯನ್ನು ಒಯ್ದು ತಮ್ಮ ದೇಶಗಳ ಇತಿಹಾಸಗಳಲ್ಲಿ ಗುರುತರ ತಿರುವನ್ನು ದಾಖಲಿಸಿವೆ! ಏಷ್ಯಾ ಖಂಡದಲ್ಲುದಿಸಿದ ನಾಗರಿಕತೆಗಳು ನದಿಗಳ, ಫಲವತ್ತಾದ ಪ್ರದೇಶಗಳಲ್ಲಿ ವ್ಯವಸಾಯಗೈದು ಶಾಂತಿ, ನೆಮ್ಮದಿ, ಅಭಿವೃದ್ಧಿ ಸಾಧಿಸಿವೆ. ಪ್ರಕೃತಿಯ ಅಪಾರ ಆಶೀರ್ವಾದದ ಫಲವಾಗಿ ಭಾರತವು ಕಲೆ, ವಿಜ್ಞಾನ, ತತ್ತ ್ವ ಹಾಗೂ ಆಧ್ಯಾತ್ಮಿಕ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆಗೈದಿದೆ. ಆದರೆ ಸಮುದ್ರ ತೀರ ಹಾಗೂ ಗುಡ್ಡಗಾಡುಗಳಲ್ಲೇ ವಾಸಿಸುತ್ತ ಬಂದ ಐರೋಪ್ಯರ ಮೂಲನಿವಾಸಿಗಳಿಗೆ ಗೊತ್ತಿದ್ದುದು ಕಳ್ಳತನ ಮತ್ತು ದರೋಡೆಕೋರತನ! ಅಸುರೀ ಪ್ರವೃತ್ತಿಯ ಐರೋಪ್ಯರು ಏಷ್ಯಾ ರಾಷ್ಟ್ರಗಳೊಡನೆ ದಂಡಯಾತ್ರೆ ಮಾಡಿದ್ದು ಸತ್ಯವೇ ಆದರೂ ಅವರು ಅರ್ಥಾತ್ ಬಿಳಿಯರು ಇಲ್ಲಿನ ಜನರೊಂದಿಗೆ ಅವಿನಾ ಸಂಬಂಧ ಬೆಳೆಸಿ ತಾವೂ ಸುಸಂಸ್ಕೃತರಾಗಲು ಕಾರ್ಯಪ್ರವೃತ್ತರಾದರು. ಬ್ರಿಟಿಷರು ಭಾರತದಲ್ಲಿ ನವನಾಗರಿಕತೆಯ ಹೆಸರಿನಲ್ಲಿ ನಡೆಸಿದ್ದು ವ್ಯವಸ್ಥಿತ ದರೋಡೆ. ನವನಾಗರಿಕತೆಯೆಂಬ ಪಿಡುಗಿನಿಂದ ಭಾರತದಲ್ಲಿ ಬಡತನ ನಿಮೂಲನೆ ಸಾಧ್ಯವಾಗದೇ ಹೋಯ್ತಲ್ಲ! ಏಷ್ಯಾರಾಷ್ಟ್ರಗಳು ಬಡತನ- ಅಜ್ಞಾನಗಳಿಂದ ನಲುಗಿದರೆ ಪಾಶ್ಚಾತ್ಯರು ಸಿರಿಸಂಪತ್ತಿನ ಕ್ರೋಢೀಕರಣದಿಂದ ಸಾಧಿಸಿದ್ದು ರಾಕ್ಷಸೀ ಭೌತಿಕ ಅಹಂಕಾರ ಮತ್ತು ಆಧ್ಯಾತ್ಮಿಕ ಅವನತಿಯನ್ನು!’
ಮತಾಂತರ ಸಹ್ಯವೇ?: ಆಕ್ಸ್ಫರ್ಡ್ನ ಸರ್ ಮೋನಿಯರ್ ವಿಲಿಯಮ್್ಸ ಹಿಂದೂ ಧರ್ಮವನ್ನು ಹೀಗೆ ಶ್ಲಾಘಿಸಿದ್ದಾನೆ: ‘ಜಗತ್ತಿನ ಇತಿಹಾಸದಲ್ಲಿ ಹಿಂದೂಧರ್ಮವು ಎಂದೂ ಮತಾಂತರದ ಅವಶ್ಯಕತೆಯನ್ನಾಗಲಿ ಅಥವಾ ಮತಾಂತರಕ್ಕೆ ಪ್ರಯತ್ನವನ್ನಾಗಲಿ ಸಮ್ಮತಿಸಿಲ್ಲ. ಏಕೆಂದರೆ ಹಿಂದೂ ಧರ್ಮಕ್ಕೆ ಮತಾಂತರದ ಅವಶ್ಯಕತೆಯಿಲ್ಲ’. ಇದಕ್ಕೆ ಕಾರಣಗಳನ್ನು ಪಟ್ಟಿಮಾಡಬಹುದಾದರೆ,
1. ಹಿಂದೂಧರ್ಮದ ಚಿರಂತನ ವಿಕಸಿತ ವ್ಯಾಪ್ತಿಯಲ್ಲಿ ಜಗತ್ತಿನ ಎಲ್ಲ ಧರ್ಮಗಳನ್ನು ಒಗ್ಗೂಡಿಸುವ ಮಹತ್ಕಾರ್ಯವು ಹಿಂದೂಧರ್ಮಕ್ಕೆ ಎಂದೂ ಕ್ಲಿಷ್ಟವೆನಿಸಿಲ್ಲ. ಎಲ್ಲರ ಮನಸ್ಸುಗಳಿಗೂ ಸರಿಕಾಣುವ ಅದ್ಭುತತತ್ತ ್ವ ಹಿಂದೂಧರ್ಮದ್ದಾಗಿದೆ. ಮಾನವ ಸ್ವಭಾವಗಳ, ಮಾನವ ಪ್ರಣವತೆಗಳ ಅಸಂಖ್ಯ ವೈವಿಧ್ಯಗಳಿಗೆ ಹೊಂದಿಕೊಂಡು ಸಕಾರಾತ್ಮಕವಾಗಿ ಮುನ್ನಡೆಯುವ ಸಾಮರ್ಥ್ಯದ ಸಂಜೀವಿನೀ ಶಕ್ತಿ ಹಿಂದೂಧರ್ಮದಲ್ಲಿದೆ.
2. ಹಿಂದೂಧರ್ಮದಲ್ಲಿ ತಾತ್ವಿಕ ಮನೋಭಾವದವರಿಗೆ ಬೇಕಾದ ಆಧ್ಯಾತ್ಮಿಕ ಮತ್ತು ಅಪೂರ್ವ ಮುಖವಿದೆ.
3. ಕವಿಹೃದಯದವರಿಗೆ ಸಂವೇದನೀಯ ಕಾರ್ಯಾಚರಣೆಗಳಿಗೆ ಅವಕಾಶಗಳಿವೆ.
4. ಹಿಂದೂಧರ್ಮ ಶಾಂತಿ ಹಾಗೂ ಏಕಾಂತವನ್ನಾಪೇಕ್ಷಿಸುವವರಿಗೆ ಸಾಮಗ್ರಿಗಳನ್ನೊದಗಿಸುವ ಶಾಶ್ವತ ನೆಲೆ ಆಗಿದೆ.
ಸ್ವಾಮಿ ವಿವೇಕಾನಂದರು ಸರ್ ಮೋನಿಯರ್ ವಿಲಿಯಮ್ಸ್ರ ಮಾತುಗಳನ್ನು ಪಾಶ್ಚಾತ್ಯರಿಗೆ ಮನವರಿಕೆ ಮಾಡಿಕೊಟ್ಟರು. ವಿವೇಕಾನಂದರು ಹಾರ್ವರ್ಡ್ ವಿಶ್ವವಿದ್ಯಾಲಯದ ಪ್ರೊ.ಜಾನ್ಹೆನ್ರಿ ರೈಟ್ರಿಗೆ ಹೇಳಿದ್ದು: ‘ಭಾರತವು ಶತಶತಮಾನಗಳಿಂದ ಹಲವಾರು ದೇಶಗಳ ಆಕ್ರಮಣಕ್ಕೆ ಒಳಗಾಗಿ ಅಂತಿಮವಾಗಿ ಬ್ರಿಟಿಷರ ಹೇಯ ಆಕ್ರಮಣಕ್ಕೂ ಒಳಗಾಯಿತು. ನಮ್ಮ ಇತಿಹಾಸ ದಾಖಲಿಸಿದ್ದು ಭಾರತದಲ್ಲಿ ಹಿಂದೂರಾಜರ ಆಡಳಿತಗಳು ನಾಡಿಗೆ ಬಿಟ್ಟುಹೋಗಿದ್ದು ಅಚ್ಚರಿಯ, ಪುಣ್ಯಕ್ಷೇತ್ರಗಳೆನಿಸಿದ ದೇವಾಲಯಗಳನ್ನು! ಮುಸಲ್ಮಾನರು ಸುಂದರ ಅರಮನೆಗಳನ್ನು! ಬ್ರಿಟಿಷ್ರು ರಾಶಿರಾಶಿ ಮದ್ಯದ ಬಾಟಲಿಗಳನ್ನು!! ಭಾರತದ ಹಳ್ಳಿಹಳ್ಳಿಗಳಲ್ಲಿ ಕೋಟ್ಯಂತರ ಜನರು ಅನ್ನಾಹಾರಗಳಿಲ್ಲದೆ ಉಪವಾಸವಿದ್ದಾಗ್ಯೂ ಕೋಟಿಕೋಟಿ ಹಣ, ಸಂಪತ್ತನ್ನು ದೋಚಿದವರು ಬ್ರಿಟಿಷರು. ಬಡವನ ರಕ್ತದ ಕೊನೆಯ ಹನಿಯನ್ನು ಹೀರಿದ ದುರಳರವರು! ದೇವರು ಸೇಡು ತೀರಿಸಿಕೊಳ್ಳುತ್ತಾನೋ ಇಲ್ಲವೋ... ಬಿಡಿ; ಆದರೆ ಇತಿಹಾಸವಂತೂ ಸೇಡನ್ನು ತೀರಿಸಿಕೊಂಡೇ ತೀರುತ್ತದೆ!’
ವಿಶ್ವಧರ್ಮ ಸಮ್ಮೇಳನದಲ್ಲಿ- ‘ಕ್ರೈಸ್ತಧರ್ಮವೇ ಸರ್ವಶ್ರೇಷ್ಠ ಧರ್ಮ’ ಎಂದು ಪಾದ್ರಿ ರೆವರೆಂಡ್ ಜೋಸೆಫ್ರು ಪ್ರಸ್ತಾಪಿಸಿದಾಗ, ಸ್ವಾಮೀಜಿ ಹೇಳಿದರು: ‘ಯಾವ ಧರ್ಮದ ಪವಿತ್ರ ಭಾಷೆಗೆ ‘ಬಹಿಷ್ಕಾರ’ ಎಂಬ ಪದವನ್ನು ಅನುವಾದಿಸಲು ಸಾಧ್ಯವೇ ಇಲ್ಲವೋ ಅಂತಹ ಧರ್ಮಕ್ಕೆ ಸೇರಿದವನೆಂಬ ಹೆಮ್ಮೆ ನನ್ನದು. ಕ್ರಿಶ್ಚಿಯನ್ ಧರ್ಮ ಜನರನ್ನು ಪಾಪಿಗಳೆಂದು ಜರಿಯುತ್ತದೆ. ಅವರನ್ನು ಹೀಗೆ ಕರೆಯಲು ನಿಮಗೆ ಅಧಿಕಾರವಿತ್ತವರ್ಯಾರು? ಇತರರನ್ನು ‘ಪಾಪಿ’ ಎಂದು ಕರೆಯುವುದೇ ಮಹಾಪಾಪ! ಅದು ಮಾನವ ಸ್ವಭಾವಕ್ಕೆ ಎಸಗುವ ಘೊರದ್ರೋಹ!’ ಎಂದಿದ್ದಾರೆ.
‘ಏನೂ ಇಲ್ಲದೆ ಇರುವುದಕ್ಕಿಂತ ಚೂರು ರೊಟ್ಟಿ ಮೇಲು ಎಂಬ ಕಾರಣಕ್ಕಷ್ಟೇ ನಾನು ಸಮಾಜವಾದವನ್ನು ಒಪು್ಪತ್ತೇನೆಯೇ ಹೊರತು ಅದು ಖಂಡಿತವಾಗಿಯೂ ಪರಿಪೂರ್ಣ ವ್ಯವಸ್ಥೆಯೆಂದಲ್ಲ. ಸಮಾಜವಾದ ಯಶಸ್ವಿಯಾಗಲೇಬೇಕಾದರೆ ಅದು ನೈತಿಕ ಹಾಗೂ ಆಧ್ಯಾತ್ಮಿಕ ತಳಹದಿ ಮೇಲೆ ತನ್ನನ್ನು ಪ್ರತಿಷ್ಠಾಪಿಸಿಕೊಳ್ಳಬೇಕು. ಶಂಕರಾಚಾರ್ಯರ ನಿರಾಕಾರ ನಿರಪೇಕ್ಷೆ, ರಾಮಾನುಜರ ಭಕ್ತಿಮಾರ್ಗ ಮತ್ತು ಬುದ್ಧನ ಮಾನವೀಯತೆಯ ಸಮನ್ವಯ ಸಂಗಮವೇ ಭಾರತೀಯ ಧಾರ್ವಿುಕ ಪರಂಪರೆ’ ಎಂದಿದ್ದಾರೆ ಸ್ವಾಮೀಜಿ.
ಲೌಕಿಕ ವೈಭೋಗದಲ್ಲಿ ಮೈಮರೆತಿದ್ದ ಪಾಶ್ಚಾತ್ಯರಿಗೆ ಅಧ್ಯಾತ್ಮವನ್ನು ಜೀವನದಲ್ಲಿ ತ್ವರಿತವಾಗಿ ಅಳವಡಿಸಿಕೊಳ್ಳದಿದ್ದರೆ ಅದಾಗಲೇ ಜ್ವಾಲಾಮುಖಿ ಮೇಲೆ ಕುಳಿತಿರುವ ಅವರು ಯಾವ ಕ್ಷಣದಲ್ಲೂ ಸಿಡಿದು ಭಸ್ಮವಾಗಬಹುದೆಂದು ಸ್ವಾಮೀಜಿ ಎಚ್ಚರಿಸಿದ್ದರು. ಅವರ ಮಾತುಗಳನ್ನು ಬದ್ಧತೆಯಿಂದ ಪರಿಗಣಿಸದ ಜಗತ್ತು ಮುಂದಿನ ಅರ್ಧ ಶತಮಾನದಲ್ಲಿ ಎರಡು ವಿಶ್ವಯುದ್ಧಗಳನ್ನು ದಾಖಲಿಸಿತು. ಲಕ್ಷಾಂತರ ಜನರ ಪ್ರಾಣಹಾನಿಗೆ ನಾಂದಿಯಾಯ್ತು! ಆನಂತರವೇ ಜಗತ್ತಿಗೆ ಅವಶ್ಯಕವೆನಿಸಿದ್ದು ವಿಶ್ವಸಂಸ್ಥೆಯ ಸ್ಥಾಪನೆ!
ಜಗತ್ತಿನ ಆಗುಹೋಗುಗಳಲ್ಲಿ ಭಾರತಕ್ಕೆ ಮಹತ್ತರ ಸ್ಥಾನವಿದೆಯೆಂದು ಕಂಡುಕೊಂಡಿದ್ದ ಸ್ವಾಮೀಜಿ, ವ್ಯಕ್ತಿಗೆ ಅಸ್ತಿತ್ವ ಬೇಕು, ಆದರೆ ಜೀವನದ ಧ್ಯೇಯ ಔನ್ನತ್ಯ ಸಾಧಿಸುವುದು. ಲೋಕಶಿಕ್ಷಣ ನೀಡಲು ಭಾರತವಷ್ಟೇ ಸಮರ್ಥವಾದ್ದರಿಂದ ರಾಜಕೀಯ ಸ್ವಾತಂತ್ರ್ಯ ತುರ್ತಅಗತ್ಯ ಎಂದರು. ಜಗದೋದ್ಧಾರಕ್ಕೆ ಭಾರತವು ಮುಂಚೂಣಿಯಲ್ಲಿ ನಿಂತು ಹೋರಾಡಬೇಕೆಂದು ಸೂಚಿಸಿದ ಸ್ವಾಮೀಜಿ ಪ್ರಶ್ನಿಸುತ್ತಾರೆ: ‘ಭಾರತ ಬದುಕಿ ಉಳಿದರೆ ಯಾರು ಸಾಯುತ್ತಾರೆ? ಆದರೆ, ಭಾರತ ಸತ್ತು ಹೋದರೆ ಬದುಕಿ ಉಳಿಯುವವರ್ಯಾರು?’ ಅಬ್ಬ! ಇದಲ್ಲವೇ ಜಗದೋದ್ಧಾರಕ್ಕೆ ಬೇಕಾದ ವಿವೇಕಪ್ರಜ್ಞೆ? ಇದಲ್ಲವೇ ಈಶ್ವರಾಜ್ಞೆ? ಯೋಚಿಸಿ.
(ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)