ಅವತಾರವರಿಷ್ಠನ ಅನನ್ಯ ಮಾನುಷಪ್ರೇಮ| ಸ್ವಾಮಿ ವೀರೇಶಾನಂದ ಸ್ವರಸ್ವತೀ ಅವರ ವಿವೇಕಧಾರೆ ಅಂಕಣ

vivekananda
Published on

ಜಗತ್ತು ದಾಖಲಿಸಿದ ಅವತಾರಪುರುಷರಲ್ಲಿ ಭಗವಾನ್ ಶ್ರೀರಾಮಕೃಷ್ಣರು ಶ್ರೇಷ್ಠರೆನಿಸಿದ್ದಾರೆ. ಸ್ವಾಮಿ ವಿವೇಕಾನಂದರು ತಮ್ಮ ಗುರುದೇವ ಶ್ರೀರಾಮಕೃಷ್ಣರನ್ನು, ‘ಹೇ ಪ್ರಭು, ನೀನು ಧರ್ಮಸ್ಥಾಪಕನು, ಸರ್ವಧರ್ಮಸ್ವರೂಪಿಯು ಹಾಗೂ ಅವತಾರಶ್ರೇಷ್ಠನು...’ ಎಂದು ಸ್ತುತಿಸಿದ್ದಾರೆ. ಶ್ರೀರಾಮಕೃಷ್ಣರ ನೇರ ಶಿಷ್ಯರೂ ಸ್ವಾಮಿ ವಿವೇಕಾನಂದರ ಸೋದರ ಸಂನ್ಯಾಸಿಗಳೂ ಆದ ಸ್ವಾಮಿ ಶಾರದಾನಂದರು ತಮ್ಮ ಗುರುವನ್ನು,

ಸರ್ವಧರ್ಮಸ್ಥಾಪಕಸ್ತ್ವಂ ಸರ್ವಧರ್ಮಸ್ವರೂಪಕಃ |

ಆಚಾರ್ಯಾಣಾಂ ಮಹಾಚಾರ್ಯೋ ರಾಮಕೃಷ್ಣಾಯ ತೇ ನಮಃ ||

ಎಂದು ಗೌರವಿಸಿದ್ದಾರೆ. ಈ ಇಬ್ಬರೂ ಮಹಾತ್ಮರ ಆತ್ಮಸಾಕ್ಷಿಯ ಮಾತಿನ ಸಾರಾಂಶವೆಂದರೆ ನಾಸ್ತಿಕ್ಯದ ಕಡೆಗೆ ವಾಲುತ್ತಿದ್ದ, ಅತಿಯಾದ ಪ್ರಾಪಂಚಿಕತೆಗೆ ಶರಣಾಗಲು ಹೊರಟಿದ್ದ, ದೇವರು ಮತ್ತು ಧರ್ಮದ ಬಗ್ಗೆ ಶ್ರದ್ಧೆ, ನಿಷ್ಠೆಗಳನ್ನು ಕಳೆದುಕೊಂಡು ತಮಗರಿವಿಲ್ಲದಂತೆಯೇ ಅನಾಥಪ್ರಜ್ಞೆಯನ್ನು ಸ್ವತಃ ಆಹ್ವಾನಿಸಿಕೊಂಡು ಅಶಾಂತಿ, ಅನಿಶ್ಚಿತತೆಯತ್ತ ಸಾಗುತ್ತಿದ್ದ ಜಗತ್ತಿನ ಜನರನ್ನು ಶ್ರೀರಾಮಕೃಷ್ಣರು ಜೀವನಾದರ್ಶಗಳ ಅಡಿಪಾಯದ ಮೇಲೆ ಸಂಸ್ಥಾಪಿಸಿ, ಜೀವ-ದೇವ ಸಂಬಂಧವನ್ನು ಮನವರಿಕೆ ಮಾಡಿಕೊಟ್ಟು, ಮತಗಳೆಲ್ಲವೂ ಪಥಗಳೆಂಬುದನ್ನು ತಮ್ಮದೇ ಅದ್ಭುತ ಸಾಧನೆ ಮೂಲಕ ಸಾಕ್ಷಾತ್ಕರಿಸಿಕೊಂಡು ಬೋಧಿಸಿದ ಮಹಾತ್ಮರು.

ಇರಾನಿನ ಸಂತಕವಿ ಯೂಸುಫ್ ಮಹಮದ್ ಬಾಗ್ದಾದಿ, ಬಂಗಾಳದ ಸಂತಕವಿ ಖಾಜಿ ನಸರುಲ್ ಇಸ್ಲಾಂ ಮೊದಲಾದವರನ್ನು ಮೊದಲ್ಗೊಂಡು ಜಗತ್ತಿನ ಎಲ್ಲ ಧರ್ಮಗಳ ಸಂತಶ್ರೇಷ್ಠರು ಶ್ರೀರಾಮಕೃಷ್ಣರ ಅವತರಣದ ಶ್ರೇಷ್ಠತೆಯನ್ನು ವಿವರಿಸಿರುವ ವಿಧಾನಗಳು ನಿಜಕ್ಕೂ ಆಧ್ಯಾತಿಕ ಪ್ರಪಂಚದಲ್ಲಿ ಅನನ್ಯವಾದ ವಿಚಾರ.

ಕುವೆಂಪು ಶ್ರೀರಾಮಕೃಷ್ಣರ ನೇರಶಿಷ್ಯರಾದ ಸ್ವಾಮಿ ಶಿವಾನಂದರಿಂದ ಮಂತ್ರದೀಕ್ಷೆ ಪಡೆದವರು, ತಮ್ಮನ್ನು ‘ಶ್ರೀರಾಮಕೃಷ್ಣ ಗೋತ್ರ’ದವನೆಂದು ಘೊಷಿಸಿಕೊಂಡವರು ಮತ್ತು ಶ್ರೀಗುರುದೇವನ ‘ವಚನವೇದ’ ಅತ್ಯಮೂಲ್ಯ ಗ್ರಂಥದ ಕರ್ತವಾದ ಶ್ರೀಮಹೇಂದ್ರನಾಥಗುಪ್ತ (‘ಮ’)ರನ್ನು ಭೇಟಿ ಆಗಿದ್ದವರು, ತಮ್ಮ ಗುರುದೇವ ಶ್ರೀರಾಮಕೃಷ್ಣರನ್ನು ಕುರಿತು ಹೀಗೆ ಹೇಳಿದ್ದಾರೆ: ‘ಶ್ರೀಗುರುದೇವನ ಉಪದೇಶಗಳ ಸಂಗ್ರಹವಾದ ವಚನವೇದವು ಕರತಲ ದೇವಸ್ಥಾನ, ಕರತಲ ತಪೋರಂಗ, ಕರತಲ ಪುಣ್ಯಕ್ಷೇತ್ರ. ಆದರೆ ದೇವಸ್ಥಾನ, ಪುಣ್ಯಕ್ಷೇತ್ರಗಳಂತೆ ತಾನೆಂದಿಗೂ ಕಲುಷಿತವಾಗುವ ಸಂಭವವಿಲ್ಲ, ಶಿಥಿಲವಾಗುವ ಸಂಭವವಿಲ್ಲ. ಯಾವ ಮನೆಯಲ್ಲಿ ಈ ‘ವಚನವೇದ’ ಇರುತ್ತದೆಯೋ ಅದು ಮಂದಿರವಾಗುತ್ತದೆ. ಯಾರ ಕೈ ಇದನ್ನು ಹಿಡಿದಿರುತ್ತದೆಯೋ ಅದು ಭಗವಂತನ ಪಾದಾರವಿಂದವನ್ನೇ ಧರಿಸಿರುತ್ತದೆ. ಯಾರ ಜಿಹ್ವೆ ಅದನ್ನು ಪಠಿಸುತ್ತದೆಯೋ ಅದು ಅಮೃತವನ್ನೇ ಈಂಟುತ್ತಿರುತ್ತದೆ. ಇದು ಆನಂದದ ಆಗರ; ಶಾಂತಿಯ ಸಾಗರ; ದಿವ್ಯಜ್ಞಾನದ ಓಗರ. ಕಷ್ಟದ ಸಮಯದಲ್ಲಿ ಧೈರ್ಯವೀಯುವ ಸಖ; ಸುಖದ ಸಮಯದಲ್ಲಿ ಸಮರ್ಪಣಭಾವವಿತ್ತು ವಿನಯ ಭಕ್ತಿಗಳನ್ನು ಪ್ರಚೋದಿಸುವ ಗುರು; ಕತ್ತಲಲ್ಲಿ ದೀಪ; ದಾರಿಗೆ ಊರೆಗೋಲು. ದಿಕ್ಕುಗೆಡದಂತೆ ಗುರಿದೋರುವ ಧ್ರುವತಾರೆ. ಇಲ್ಲಿ ವೇದವೇದಾಂತ ದರ್ಶನಾದಿ ಸರ್ವಸಾರವಿದೆ. ಓದು ಬರುವ ಅತ್ಯಂತ ಸಾಮಾನ್ಯನೂ ಇದನ್ನು ಓದಿದ ಮೇಲೆ ಯಾವ ಪಂಡಿತನಿಗೂ ಕರುಬುವ ಅವಶ್ಯಕತೆಯಿಲ್ಲ; ಯಾವ ವಿದ್ವತ್ಪೂರ್ಣವಾದ ತತ್ತ್ವಜ್ಞಾನಿಗೂ ಕೀಳೆಂದು ನಾಚಬೇಕಾಗಿಲ್ಲ. ಬದಲಾಗಿ ಭಗವಂತನ ಕೃಪೆಯಿಂದ ತನಗಿಂತಲೂ ಧನ್ಯರಿಲ್ಲ ಎಂದರಿತು ನಿರ್ಮಮನಾಗುತ್ತಾನೆ, ಶಾಂತನಾಗುತ್ತಾನೆ, ಪೂರ್ಣನಾಗುತ್ತಾನೆ. ಆತನಿಗೆ ಗಗನದ ವೈಶಾಲ್ಯ, ಹೈಮಾಚಲದ ಔನ್ನತ್ಯ, ಅಂಬುಧಿಯ ಗಂಭೀರ ಗಾಂಭೀರ್ಯ ಎಲ್ಲವೂ ಸಿದ್ಧಿಸುತ್ತದೆ. ಇಷ್ಟು ಸರ್ವಜನ ಸಾಮಾನ್ಯ ರೂಪದಲ್ಲಿ ಭಗವಂತ ಎಂದೂ ಅವತರಿಸಿರಲಿಲ್ಲ, ಭಗವದ್ವಾಣಿ ತಾನೆಂದೂ ಕೃತಿಗೊಂಡಿರಲಿಲ್ಲ... ಶ್ರೀರಾಮಕೃಷ್ಣರ ‘ವಚನವೇದ’ವು ನಿಜವಾಗಿಯೂ ಸಮನ್ವಯದೃಷ್ಟಿಯನ್ನು ಸರ್ವಪ್ರಜೆಗಳಿಗೂ ಸುಲಭವಾಗಿ ಹೃದಯರ್ಸ³ಯಾಗುವಂತೆ ಬೋಧಿಸುವ ನವೀನ ವೇದ. ಮತಾಂತರಗೊಳಿಸುವುದು, ಪರಮತನಿಂದೆಯಿಂದ ಸ್ವಮತ ಶ್ಲಾಘನೆ ಮಾಡುವುದು, ರಾಜಕೀಯ ಪ್ರಯೋಜನಕ್ಕಾಗಿ ಸ್ವಮತೀಯರ ಸಂಖ್ಯೆಯನ್ನು ಹೆಚ್ಚಿಸುವ ಕುತಂತ್ರಕ್ಕೆ ಕೈ ಹಾಕುವುದು ಮೊದಲಾದ ಕಾಡುಭಾವನೆಗಳನ್ನೆಲ್ಲ ಬೇರುಸಹಿತ ಸುಟ್ಟುಹಾಕುವ ಕಾಳ್ಗಿಚ್ಚಾಗುತ್ತದೆ ಈ ‘ವಚನವೇದ’. ನಮ್ಮ ರಾಜ್ಯದ ರಾಜಕೀಯದ ಸುರತರು ಸುಫಲಸುಮಭರಿತವಾಗಬೇಕಾದರೆ ಜನಹೃದಯ ಮೂಲವಾಗಿರುವ ಅದರ ತಾಯಿಬೇರು ಈ ‘ವಚನವೇದ’ ಸಾರವನ್ನು ಹೀರಿಕೊಂಡಲ್ಲದೆ ಸಾಧ್ಯವಿಲ್ಲ. ನಮ್ಮ ರಾಜಕೀಯ ರಾಜ್ಯಾಂಗಕ್ಕೆ ಪೂರಕವಾಗುವ ಧಾರ್ವಿುಕ ರಾಜ್ಯಾಂಗವಾಗುತ್ತದೆ ಈ ಶ್ರೀರಾಮಕೃಷ್ಣ ವಚನವೇದ!’

ಕುವೆಂಪುರವರ ಈ ಮಾತುಗಳು ಮಂತ್ರಗಳೇ ಸರಿ! ಇಲ್ಲಿ ಜೀವಾತ್ಮನಿಂದ ಪರಮಾತ್ಮನವರೆಗೆ ಅಭ್ಯುದಯದ ಪಥ ಕುರಿತಾದ ಸಾಂಸಾರಿಕ, ಸಾಮಾಜಿಕ, ರಾಷ್ಟ್ರೀಯ, ಧರ್ಮ ಮತ್ತು ಅಧ್ಯಾತ್ಮ ಕ್ಷೇತ್ರಗಳ ಸ್ಪಷ್ಟ ತಿಳಿವಳಿಕೆ ಇದೆ. ಅಲ್ಲದೆ, ‘ನಾನು ಸದಾ ಧ್ಯಾನಸ್ಥನಾಗಿ ನಿರ್ವಿಕಲ್ಪ ಸಮಾಧಿಯಲ್ಲಿ ಆನಂದ ಅನುಭವಿಸಬೇಕು, ಜಗತ್ತಿನ ಗೊಡವೆ ನನಗೆ ಬೇಡ. ವೈಯಕ್ತಿಕ ಮುಕ್ತಿಯೇ ಸವೋಚ್ಚ ಗುರಿ’ ಎಂದು ಭಾವಿಸಿದ್ದ ಶಿಷ್ಯ ನರೇಂದ್ರನಾಥನಿಗೆ ಶ್ರೀರಾಮಕೃಷ್ಣರು, ‘ಕಣ್ಣುಮುಚ್ಚಿ ದೈವವನ್ನು ಕಾಣುವುದಕ್ಕಿಂತ ಕಣ್ಣು ತೆರೆದು ದೇವರನ್ನು ನೋಡು. ನಿನ್ನ ಸ್ವಂತ ಸುಖವನ್ನಷ್ಟೇ ಬಯಸುವುದು ನಾಚಿಕೆಗೇಡಿನ ಸಂಗತಿ. ಮುಕ್ತಿ ಎಂಬುದು ಸಂಕುಚಿತ, ಕ್ಷುದ್ರವಾದದ್ದು. ಭಗವಂತನನ್ನು ಎಲ್ಲಡೆಯಲ್ಲಿಯೂ ಎಲ್ಲ ಬಗೆಗಳಿಂದಲೂ ನೋಡುವುದೇ ನನ್ನ ವೈಶಿಷ್ಟ್ಯ. ಯಾವ ಭಗವಂತನನ್ನು ನಾನು ಸಮಾಧಿಸ್ಥಿತಿಯಲ್ಲಿ ಪರಬ್ರಹ್ಮನಂತೆ ಕಾಣುತ್ತೇನೆಯೋ ಅದೇ ಭಗವಂತನೇ ವಿವಿಧ ಮಾನವರೂಪಗಳಲ್ಲಿ ವಿರಾಜಿಸುತ್ತಿರುವುದನ್ನು ಜಾಗೃತ ಸ್ಥಿತಿಯಲ್ಲೂ ಕಂಡು ಆನಂದಿಸಿದ್ದೇನೆ. ಇಂತಹ ಅತ್ಯುನ್ನತ ಅನುಭವವನ್ನು ನಿನಗೆ ಮಾಡಿಸಿಕೊಡಲು ಸಿದ್ಧನಿರುವಾಗ, ನೀನು ಅಂತಹ ಕ್ಷುದ್ರ ವಸ್ತುವಿಗಾಗಿ ಹಾತೊರೆಯುತ್ತಿದ್ದೀಯಲ್ಲ!’

ಜೀವನಧ್ಯೇಯ: ಶ್ರೀರಾಮಕೃಷ್ಣರೆನ್ನುವಂತೆ ಮಾನವ ಜೀವನದ ಚರಮಧ್ಯೇಯ ಭಗವಂತನ ಸೇವೆ ಮತ್ತು ಭಗವಂತನ ಪಾದಪದ್ಮಗಳಲ್ಲಿ ಭಕ್ತಿ, ಶ್ರದ್ಧೆಗಳನ್ನು ಬೆಳೆಸಿಕೊಳ್ಳುವುದು. ದುರ್ಲಭವಾದ ಮನುಷ್ಯಜನ್ಮವನ್ನು ಲೌಕಿಕ ಆಸೆ, ಆಕಾಂಕ್ಷೆಗಳ ಪೂರೈಕೆಗಷ್ಟೇ ವ್ಯಯ ಮಾಡಬಾರದು. ಅವನು ಕಾಮಕಾಂಚನಗಳ ಭೋಗದಲ್ಲೇ ಮತ್ತನಾದರೆ ತನ್ನ ತಲೆಯ ಮೇಲೆ ರತ್ನವೇ ಇದ್ದರೂ ಕಪ್ಪೆಯನ್ನು ತಿನ್ನುವ ಹಾವಿನಂತಾಗುತ್ತದೆ ಅವನ ಜೀವನ! ಈ ಜಗತ್ತೆಂಬುದು ಭಗವಂತನ ಐಶ್ವರ್ಯವೇ ಹೌದಾದರೂ ಜನರು ಐಶ್ವರ್ಯಕ್ಕೆ ಮರುಳಾಗಿ ಅದರ ಒಡೆಯನನ್ನೇ ಮರೆಯುವುದರಿಂದ ದುಃಖ, ಅಶಾಂತಿಗಳಿಗೆ ತುತ್ತಾಗುತ್ತಾರೆ. ‘ಹಕ್ಕಿಯ ಮರಿ ಮೇವು ಹುಡುಕಲು ಕಲಿತ ನಂತರ ಅದೇನಾದರೂ ಗುಟುಕಿಗಾಗಿ ತಾಯಿ ಹಕ್ಕಿಯ ಬಳಿ ಬಂದರೆ ತಾಯಿ ಹಕ್ಕಿ ಅದನ್ನು ಕುಟುಕಿ ಓಡಿಸುತ್ತದೆ. ಅಂತೆಯೇ ಗೃಹಸ್ಥನಾದವನು ತನ್ನ ಕರ್ತವ್ಯ ಮತ್ತು ಋಣಗಳ ಬಗ್ಗೆ ಅರಿತಿರಬೇಕು. ಅವನಿಗೆ ದೇವಋಣ, ಋಷಿಋಣಗಳಲ್ಲದೆ ಪತ್ನಿಯ ಋಣವೂ ಇದೆ’ ಎಂದಿದ್ದಾರೆ ಶ್ರೀರಾಮಕೃಷ್ಣರು. ಮುಂದುವರಿದು, ‘ವಿವಾಹಿತನು ಸಂಸಾರದ ಅಂಗಡಿಯನ್ನು ತೆರೆದ ಮೇಲೆ ಅದನ್ನು ಮುಚ್ಚುವಂತಿಲ್ಲ. ಕಾಮಕಾಂಚನವೇ ಮಾಯೆ. ಅದರ ಮಧ್ಯೆ ಬಹಳ ಕಾಲವಿದ್ದರೆ ಕ್ರಮೇಣ ಎಚ್ಚರತಪ್ಪಿ ಹೋಗುತ್ತದೆ, ಅದೇ ಆನಂದವಾಗಿ ತೋರುತ್ತದೆ’ ಎಂದಿದ್ದಾರೆ.

ಉದ್ಧಾರದ ಹೆದ್ದಾರಿ: ‘ವಿಷಯ ಚಿಂತನೆ ಮಾಡಿದಷ್ಟು ಅವುಗಳಲ್ಲಿ ಆಸಕ್ತಿ ಬೆಳೆಯುತ್ತ ಸಾಗುತ್ತದೆಯಲ್ಲದೆ ಅದು ಮಾನವನನ್ನು ಕಪಟಿಯನ್ನಾಗಿಸುತ್ತದೆ’ ಎಂದಿರುವ ಶ್ರೀರಾಮಕೃಷ್ಣರು, ‘ಗೃಹಸ್ಥನು ಭಗವನ್ನಾಮ ಸಂಕೀರ್ತನೆಯನ್ನು ಸರ್ವದಾ ಮಾಡುತ್ತಿರಬೇಕು, ಭಗವದ್ಭಕ್ತರ ಮತ್ತು ಸಾಧುಸತ್ಪುರುಷರ ಸತ್ಸಂಗದಲ್ಲಿ ಆಗಾಗ ಒಡನಾಡುತ್ತಿರಬೇಕು. ನಿರ್ಜನ ಪ್ರದೇಶಕ್ಕೆ ಹೋಗಿ ಭಗವಂತನ ಧ್ಯಾನದಲ್ಲಿ ತೊಡಗಬೇಕು’ ಎಂಬ ಸಲಹೆಯಿತ್ತಿದ್ದಾರೆ.

‘ಕಾಮಕಾಂಚನಾಸಕ್ತಿ ಮನುಷ್ಯನನ್ನು ಬಂಧಿಸಿ ಆತನ ಸ್ವಾಧೀನತೆಯನ್ನೇ ಕಸಿದುಬಿಡುತ್ತದೆ. ಕಾಮದ ದೆಸೆಯಿಂದ ಕಾಂಚನದ ಅವಶ್ಯಕತೆ ಉದ್ಭವಿಸುತ್ತದೆ ಮತ್ತು ಪರರ ದಾಸ್ಯತ್ವಕ್ಕೆ ಇಳಿದು ಸ್ವಾಧೀನತೆ ಕಳೆದುಕೊಳ್ಳಬೇಕಾಗುತ್ತದೆ. ಆಗ ಸ್ವಇಚ್ಛೆ ಎಂಬುದೇನೂ ನಡೆಯದು. ಮನಸ್ಸೋ ದುರ್ಬಲವಾದದ್ದು, ಪಾಪಕಾರ್ಯ ಮಾಡುವುದಿಲ್ಲವೆಂಬ ಶಪಥ ತೊಡುವುದಂತೂ ಸುಲಭದ ಮಾತಲ್ಲ! ಸತತ ಸದಸದ್ವಿಚಾರ ಮಾಡುತ್ತಿರಬೇಕು’ ಎಂದು ಎಚ್ಚರಿಸಿದ್ದಾರೆ. ಸದಸದ್ವಿಚಾರ ಎಂದರೆ, ‘ಭಗವಂತನೊಬ್ಬನೇ ಏಕಮಾತ್ರ ಸತ್ಯ; ಕಾಮಕಾಂಚನ ಅನಿತ್ಯ’ ಎಂದು.

ಉಪಾಸನಾ ವಿಧಾನ: ‘ಪ್ರತಿಮಾಪೂಜೆಯ ಅವಶ್ಯಕತೆಯೂ ಇದೆ. ಈ ಜಗತ್ತು ಯಾರದೋ ಅವನೇ ನಮ್ಮ ಅಂತರ್ಯಾಮಿ. ಹಲವಾರು ವಿಧದ ಪೂಜಾಕ್ರಮಗಳನ್ನು ಅವನೇ ವ್ಯವಸ್ಥೆಗೊಳಿಸಿದ್ದಾನೆ. ಭಗವದ್ರೂಪಗಳನ್ನು, ಆಕಾರಗಳನ್ನು ಒಪ್ಪಿಕೊಳ್ಳಬೇಕು. ಅದು ಭಕ್ತರಿಗಾಗಿ ಮಾತ್ರವೇ. ತನ್ನ ಮಕ್ಕಳು ಮಣ್ಣಿನ ಪ್ರತಿಮೆಯಲ್ಲಿ ಪೂಜಿಸುವುದೂ ತನ್ನನ್ನೇ ಎಂಬ ಅರಿವು ಅವನಿಗಿಲ್ಲವೇ? ಜೀರ್ಣಶಕ್ತಿಗೆ ಅನುಸಾರವಾಗಿ ಆಹಾರದ ತಯಾರಿಯಲ್ಲಿ ವೈವಿಧ್ಯತೆಗಳು ಹೇಗೋ ತಿಳಿವಳಿಕೆಯ ಭೇದಕ್ಕನುಗುಣವಾಗಿ ವಿವಿಧ ಪೂಜಾವಿಧಾನಗಳು! ತಂದೆಯ ಭಾವಚಿತ್ರ ತಂದೆಯನ್ನೇ ನೆನಪಿಸುವಂತೆ ಪ್ರತಿಮಾಪೂಜೆ ಮಾಡುತ್ತ ಮುಂದುವರಿದರೆ ಸತ್ಯದ ರೂಪ ಉದ್ದೀಪನವಾಗುತ್ತದೆ! ಜ್ಞಾನಸೂರ್ಯ ಉದಯಿಸಿದ ಮೇಲೆ ಹಿಮಗಡ್ಡೆಗಳೆಲ್ಲ ಕರಗಿ ಎಂದಿನಂತೆ ನೀರಾಗುತ್ತದೆ!’ ಎನ್ನುತ್ತಾರೆ ಶ್ರೀರಾಮಕೃಷ್ಣರು.

‘ಭಗವಂತನು ವಿಭುರೂಪದಲ್ಲಿ ಎಲ್ಲ ಭೂತಗಳಲ್ಲಿಯೂ ಇದ್ದಾನೆ. ಇರುವೆಯಲ್ಲೂ ಇದ್ದಾನೆ, ಆದರೆ ಶಕ್ತಿವಿಶೇಷತೆಯಿಂದ! ಭಕ್ತನ ಹೃದಯದಲ್ಲಿ ವಿಶೇಷವಾಗಿದ್ದಾನೆ. ಕತ್ತಲೆಯ ಮನೆ ಹೇಗೆ ದಾರಿದ್ರ್ಯದ ಲಕ್ಷಣವನ್ನು ಸೂಚಿಸುತ್ತದೆಯೋ ಅಂತೆಯೇ ಹೃದಯದ ಮಧ್ಯಭಾಗದಲ್ಲಿ ಜ್ಞಾನದೀವಿಗೆಯನ್ನು ಹಚ್ಚಿಕೊಂಡು ಕತ್ತಲೆಗೆ ಆಸ್ಪದವೀಯದಂತೆ ಎಚ್ಚರ ವಹಿಸಬೇಕು. ಗುರುವಿನ ಉಪದೇಶಕ್ಕೆ ವಿಧೇಯನಾಗಿ ನಡೆಯಬೇಕು. ಅಡ್ಡದಾರಿ ಹಿಡಿದರೆ ಸರಿದಾರಿಗೆ ಮರಳುವುದು ಅತಿಕಷ್ಟ! ಯುಗಯುಗಗಳಲ್ಲಿಯೂ ಭಗವಂತನು ಗುರುವಿನ ರೂಪದಲ್ಲಿ ಅವತೀರ್ಣನಾಗಿದ್ದಾನೆ. ಸಚ್ಚಿದಾನಂದನೇ ಗುರು. ಹೆತ್ತ ತಾಯಿಯೂ ‘ಗುರು’ ಹಾಗೂ ಅವಳೇ ‘ಬ್ರಹ್ಮಮಯೀ’ ಆಗಿರುವುದರಿಂದ ಅವಳ ಮೇಲೂ ಧ್ಯಾನಮಾಡಬಹುದು’ ಎಂಬ ಶ್ರೀರಾಮಕೃಷ್ಣರ ಸ್ಪಷ್ಟ ಸಂದೇಶ ಸಾಮಾನ್ಯನ ಹೃದಯದಲ್ಲಿ ಭರವಸೆಯ ಅಂಕುರಾರ್ಪಣ ಮಾಡದಿರದು. ‘ಭಗವಂತನಿದ್ದಾನೆ ಎಂಬುದರ ಸ್ವಾತ್ಮಾನುಭವ ಹೊಂದುವುದಕ್ಕೆ ‘ಜ್ಞಾನ’ ಎನ್ನುತ್ತಾರೆ. ಭಗವಂತನೊಡನೆ ಸಲಿಗೆಯಿಂದ ಮಾತನಾಡುವುದಕ್ಕೆ, ಆತನೊಂದಿಗೆ ವಾತ್ಸಲ್ಯ, ಸಖ್ಯ, ದಾಸ್ಯ, ಮಧುರ- ಭಾವಗಳಿಂದ ಆನಂದಪಡುವುದಕ್ಕೆ ‘ವಿಜ್ಞಾನ’ ಎಂದು ಹೆಸರು. ಸತ್ಯವಚನವೇ ಕಲಿಯುಗದಲ್ಲಿ ತಪಸ್ಸು, ಮನುಷ್ಯನು ಸತ್ಯಾರ್ಥಿಯಾಗಿ ಸಾಧನಾನಿರತನಾದಾಗ ಖಂಡಿತವಾಗಿಯೂ ಭಗವಂತನ ಸಾಕ್ಷಾತ್ಕಾರ ದೊರೆಯುತ್ತದೆ’ ಎಂಬ ಶ್ರೀಗುರುದೇವವಚನವು ಅಪೂರ್ವವಾದುದಲ್ಲವೇ?

ಶ್ರದ್ಧೆಯ ಮಹತ್ವ: ಶ್ರೀರಾಮಕೃಷ್ಣರು ಹೇಳುತ್ತಾರೆ: ‘ಸಂಸಾರ ದೋಷವಾದುದೇನಲ್ಲ. ಆದರೆ ಮನಸ್ಸನ್ನು ಭಗವಂತನೆಡೆಗೆ ಕೇಂದ್ರೀಕರಿಸಬೇಕು. ವಿಷಯಾಸಕ್ತ ಮನಸ್ಸೆಂಬುದನ್ನು ಒದ್ದೆ ಬೆಂಕಿಕಡ್ಡಿಗೆ ಹೋಲಿಸಬಹುದು, ಎಷ್ಟೇ ಗೀರಿದರೂ ಹೊತ್ತಿಕೊಳ್ಳುವುದೇ ಇಲ್ಲ, ಬೆಂಕಿಕಡ್ಡಿಗಳೂ ನಷ್ಟ! ಆದರೆ ಭಗವಂತನಲ್ಲಿ ನಮ್ಮ ಪ್ರೀತಿ ವೃದ್ಧಿಸುತ್ತ ಹೋದಂತೆ ಸಂಸಾರಾಸಕ್ತಿ ಮತ್ತು ವಿಷಯಬುದ್ಧಿ ಕ್ಷೀಣಿಸುತ್ತ ಹೋಗುತ್ತದೆ. ಆಗ ಹೆಂಡತಿ ಮತ್ತು ಮಕ್ಕಳ ಮೇಲಿರುವ ಪ್ರೀತಿಯೂ ಮಾಯಾಪ್ರೇರಿತ ಆಕರ್ಷಣೆಯಾಗಿ ಉಳಿಯದು!’

ಭಗವಂತನ ಸಾಕ್ಷಾತ್ಕಾರಕ್ಕೆ ಕೆಲಸವೆಂಬುದು ಸಾಧನವಷ್ಟೇ ಎನ್ನುವ ಶ್ರೀರಾಮಕೃಷ್ಣರು ಸಾಧನೆಯ ಮಹತ್ವವನ್ನು ವಿವರಿಸಿದ್ದು ಹೀಗೆ: ‘ಯಾವಾಗ ನಿನಗೆ ಹರಿನಾಮವನ್ನೊ, ರಾಮನಾಮವನ್ನೊ ಒಮ್ಮೆ ಉಚ್ಚರಿಸಿದ ಮಾತ್ರದಿಂದಲೇ ರೋಮಾಂಚನವಾಗುತ್ತದೆಯೋ, ಪ್ರೇಮಾಶ್ರು ಸುರಿಯುವುದೋ, ಆಗ ನಿಜವಾಗಿ ತಿಳಿದುಕೊಳ್ಳಿ, ಇನ್ನು ನೀವು ಸಂಧ್ಯಾದಿಕರ್ಮಗಳನ್ನು ಮಾಡಬೇಕಾಗಿಲ್ಲ ಎಂದು. ಆಗ ಮಾತ್ರವೇ ನಿಮಗೆ ಕರ್ಮತ್ಯಾಗದ ಅಧಿಕಾರ-ಕರ್ಮ ತನಗೆ ತಾನೇ ನಿಮ್ಮನ್ನು ಬಿಟ್ಟು ತೊಲಗಿ ಹೋಗುತ್ತದೆ. ಆಗ ಕೇವಲ ರಾಮನಾಮವನ್ನೋ, ಹರಿನಾಮವನ್ನೋ ಅಥವಾ ಬರೀ ಓಂಕಾರವನ್ನೇ ಜಪಿಸಿದರೆ ಸಾಕು’. ಪೂರ್ವಜನ್ಮದ ಸಂಸ್ಕಾರವನ್ನು ಸತ್ಯವೆಂದಿರುವ ಶ್ರೀರಾಮಕೃಷ್ಣರು ಆತ್ಮಹತ್ಯೆಯನ್ನು ನಿಸ್ಸಂದೇಹವಾಗಿ ಮಹಾಪಾಪ ಎಂದಿದ್ದಾರೆ. ಅತಿಯಾದ ಬಾಹ್ಯಾಚಾರದ ಅವಶ್ಯಕತೆ ಇಲ್ಲವೆಂಬುದೂ ಅವರ ಅಭಿಮತ. ವಿವೇಕರಹಿತ ಪಾಂಡಿತ್ಯವೂ ನಿಷ್ಪ್ರಯೋಜಕ ಎಂಬುದು ಅವರ ಅಭಿಪ್ರಾಯ. ‘ನಾನು ದೇವರನ್ನು ಕಂಡಿದ್ದೇನೆ, ಅವನೊಂದಿಗೆ ಮಾತನಾಡಿದ್ದೇನೆ, ಜಗತ್ತಿನ ಜನ ಹೆಂಡತಿ-ಮಕ್ಕಳಿಗಾಗಿ ಕೊಡಗಟ್ಟಲೆ ಕಣ್ಣೀರು ಸುರಿಸುತ್ತಾರೆ, ದೇವರಿಗಾಗಿ ಅಳಬಲ್ಲರೇ?’ ಎಂಬ ಅವರ ಮಾತು ಜಗತ್ತನ್ನು ಆಲೋಚಿಸುವಂತೆ ಮಾಡಿಲ್ಲವೇ?

(ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net