

ಶರೀರಕ್ಕೂ, ಮನಸ್ಸಿಗೂ, ಅಹಂಭಾವಕ್ಕೂ ಅತೀತವಾದ ನಮ್ಮ ವ್ಯಕ್ತಿತ್ವದ, ಈ ಸೃಷ್ಟಿಯ ಹಿನ್ನೆಲೆಯಲ್ಲಿರುವ ಪರಮಾತ್ಮ ತತ್ತ ್ವ ಅನುಭವವನ್ನು ಧ್ಯಾನ ಮತ್ತು ಸಮಾಧಿ ಎಂಬ ಆತ್ಯಂತಿಕ ಸ್ಥಿತಿಯ ಮೂಲಕ ಪಡೆಯಲು, ದೇಹ-ಮನಸ್ಸನ್ನು ಪರಿಷ್ಕರಿಸಿ, ಅವುಗಳನ್ನು ಆಧ್ಯಾತ್ಮಿಕ ಸಾಕ್ಷಾತ್ಕಾರದ ಸ್ಥಿತಿಗೆ ಸಿದ್ಧಪಡಿಸುವ ಪದ್ಧತಿ ಯನ್ನು ಸಮಗ್ರವಾಗಿ ‘ಯೋಗ’ವೆನ್ನಬಹುದು. ಇದನ್ನು ಪತಂಜಲಿ ಮಹರ್ಷಿ, ಅಷ್ಟಾಂಗ ಯೋಗವೆಂದೂ, ಕ್ರಿಯಾಯೋಗವೆಂದೂ; ಸ್ವಾಮಿ ವಿವೇಕಾನಂದರು ಜ್ಞಾನಯೋಗ, ಭಕ್ತಿಯೋಗ, ಕರ್ಮಯೋಗ ಮತ್ತು ರಾಜಯೋಗ ಎಂದೂ ಸ್ಪಷ್ಟವಾಗಿ ನಿರ್ದೇಶಿಸಿದ್ದಾರೆ. ಇವುಗಳ ಗುರಿ, ವಿಧಿ ವಿಧಾನಗಳನ್ನು ವಿವರಿಸಿ ಹೇಳಿದ್ದಾರೆ. ಜೀವನದ ಎಲ್ಲ ಆಯಾಮಗಳಲ್ಲಿ ಯೋಗಭ್ಯಾಸವನ್ನು, ಯೋಗತತ್ತ ್ವಳನ್ನು ಅಳವಡಿಸಿಕೊಂಡಿರುವ ಜೀವನವೇ ಆದರ್ಶವಾದ ಸಮಗ್ರ ಯೋಗಜೀವನ. ಸ್ವಾಮಿ ವಿವೇಕಾನಂದರು, ಜನಕ ಮಹಾರಾಜ, ಶುಕದೇವ, ಸಂತ ಜ್ಞಾನೇಶ್ವರ, ಶ್ರೀಅರವಿಂದರು ಮುಂತಾದವರು ಇಂತಹ ಯೋಗಜೀವನಕ್ಕೆ ನಾವು ಕಂಡುಕೊಳ್ಳಬಹುದಾದ ಮಹಾನ್ ಆದರ್ಶ ಪುರುಷರು.
ಯೋಗದ ವಿಶ್ವಮಾನ್ಯತೆ: ಯೋಗವೆಂಬುದು ಸಂಸ್ಕೃತ ಶಬ್ದವಾಗಿದ್ದರೂ, ಅದು ಸಾರ್ವತ್ರಿಕಗೊಂಡು ವಿಶ್ವಮಾನ್ಯವಾಗಿ ಅದು ಇಂಗ್ಲಿಷ್ ಶಬ್ದಕೋಶವನ್ನು ಹಲವು ವರ್ಷಗಳ ಹಿಂದೆ ಪ್ರವೇಶಿಸಿದೆ. ಮಾತ್ರವಲ್ಲದೆ ಕೆಲವು ವರ್ಷಗಳಿಂದ ವಿಶ್ವದಾದ್ಯಂತ ಅಂತಾರಾಷ್ಟ್ರೀಯ ಯೋಗ ದಿನವನ್ನು ಕೂಡ ಆಚರಿಸಲಾಗುತ್ತಿದೆ. ಯೋಗಶಿಕ್ಷಣದಿಂದ ದೈಹಿಕ ಆರೋಗ್ಯ ರಕ್ಷಣೆಯಾಗುವುದು, ಮಾನಸಿಕ ಶಾಂತಿ ಮತ್ತು ಶಕ್ತಿ ಲಭಿಸುವುದು ಮತ್ತು ಸಾಧಕನಲ್ಲಿ ಸದಾಚಾರ, ಸದ್ವರ್ತನೆ ಬೆಳೆದು, ಉತ್ತಮ ಸಮಾಜದ ಬೆಳವಣಿಗೆಗೆ ಯೋಗ್ಯವಾದ ತಳಪಾಯ ಹಾಕಿದಂತಾಗುವುದು. ಆದುದರಿಂದ ಪ್ರತಿಯೊಬ್ಬ ವ್ಯಕ್ತಿ ಯೋಗಶಿಕ್ಷಣ ಪಡೆಯಬೇಕಾಗಿರುವುದು ಆವಶ್ಯಕ.
ಯೋಗದ ಪರಿಣಾಮ: ಆಧುನಿಕ ಸಮಾಜದಲ್ಲಿ ಮನುಷ್ಯ ದೈನಂದಿನ ಬೇಡಿಕೆಗಳನ್ನು ಹೆಚ್ಚಿಸಿಕೊಳ್ಳುತ್ತಲಿದ್ದಾನೆ. ಜೀವನಮಟ್ಟವನ್ನು ಸುಧಾರಿಸಲು ಅಗತ್ಯವಲ್ಲದ ಕೃತಕ ಸೌಲಭ್ಯಗಳನ್ನು ಮಿತಿಮೀರಿ ಬಳಸುತ್ತಿದ್ದಾನೆ. ಇದರಿಂದಾಗಿ ದೈಹಿಕ ಶ್ರಮ ಕಡಿಮೆಯಾಗಿ, ವಿರಾಮ ಹೆಚ್ಚಾಗಿದೆ. ಈ ಅನಪೇಕ್ಷಿತ ವಿರಾಮದಿಂದ ಮನುಷ್ಯ ಸೋಮಾರಿಯಾಗಿದ್ದಾನೆ. ದೇಹದಲ್ಲಿ ಕೊಬ್ಬು ಶೇಖರಣೆಯಾಗಿ, ಜಡವಾಗುತ್ತ, ನಾನಾ ರೀತಿಯ ರೋಗಗಳಿಂದ ಬಳಲುತ್ತಿದ್ದಾನೆ. ಇನ್ನೊಂದು ಕಡೆ ಮಿತಿ ಮೀರಿದ ದುಡಿಮೆಯಿಂದ ವಿಶ್ರಾಂತಿ ಇಲ್ಲದೆ, ದೇಹದ ಶ್ರಮ ಹೆಚ್ಚಾಗಿದೆ. ಅಲ್ಲದೆ ಹಲವರು ಅಂಜಿಕೆ, ಕಳವಳ, ಭಯ ಮೊದಲಾದ ಮಾನಸಿಕ ಆತಂಕಗಳಿಂದಾಗಿ ರಕ್ತದೊತ್ತಡ, ನರದೌರ್ಬಲ್ಯ, ಅಲ್ಸರ್ ಮೊದಲಾದ ರೋಗಗಳಿಂದ ಬಳಲುತ್ತಿದ್ದಾರೆ.
ಯೋಗಶಿಕ್ಷಣವು ನಮಗೆ ಆಧ್ಯಾತ್ಮಿಕ ಸಾಧನೆಯಲ್ಲಿ ಮಾರ್ಗದರ್ಶನ ನೀಡುವುದಲ್ಲದೆ, ದೈಹಿಕ, ಮಾನಸಿಕ ಆರೋಗ್ಯವನ್ನು ಸುಧಾರಿಸಬಲ್ಲ ಚಿಕಿತ್ಸಾ ವಿಧಾನವೂ ಆಗಿದೆ. ಅಲ್ಲದೆ ಜೀವನವನ್ನು ಪರಿಶುದ್ಧಗೊಳಿಸಲು, ಶಾಂತಿ ಮತ್ತು ಉತ್ಸಾಹದಿಂದ ಕೂಡಿದ ಸರ್ವಾಂಗೀಣ ಪ್ರಗತಿಗೆ ನಮ್ಮ ಋಷಿಮುನಿಗಳು ತೋರಿಸಿಕೊಟ್ಟ ಮಾರ್ಗವಿದು.
ಯೋಗಜೀವನದ ಮೂಲತತ್ತ್ವಗಳು: ಯೋಗ ಶಬ್ದದ ಮೂಲ ಧಾತುವಾದ ‘ಯುಜ್’ನ ಅರ್ಥವನ್ನು ಎರಡು ರೀತಿಯಲ್ಲಿ ವಿಶ್ಲೇಷಿಸಲಾಗಿದೆ. ಒಂದನೆಯದು ‘ಯುಜ್ ಸಮಾಧೌ’ ಅಂದರೆ ಮನಸ್ಸಿನಲ್ಲಿ ಉದ್ಭವವಾಗುವ ವೃತ್ತಿಗಳನ್ನು ಏಕಾಗ್ರಗೊಳಿಸುವುದು ಎಂದು. ಈ ಅರ್ಥ ಮತ್ತು ವಿಶ್ಲೇಷಣೆ ಪಾತಂಜಲ ಯೋಗಸೂತ್ರದ ಆಧಾರವಾಗಿದೆ. ಎರಡನೆಯ ಅರ್ಥ ‘ಯುಜಿರ್ ಯೋಗೇ’. ಇದು ಯುಜ್ ಧಾತುವಿನ ಇನ್ನೊಂದು ವಿವರಣೆ. ಇದು ಜೀವಾತ್ಮ-ಪರಮಾತ್ಮರ ಐಕ್ಯತೆಯನ್ನು ಸೂಚಿಸುವ ಇತರ ಯೋಗಮಾರ್ಗಗಳಾದ ಭಕ್ತಿಯೋಗ, ಕರ್ಮಯೋಗ ಮುಂತಾದ ಯೋಗಗಳಿಗೆ ಆಧಾರ.
ಇಂದ್ರಿಯಗಳಿಂದ ಬಂದ ಸಂವೇದನೆಗಳು ಮನಸ್ಸಿನಲ್ಲಿ ಅಲೆಯನ್ನು ಎಬ್ಬಿಸುವುದು- ಇದನ್ನೇ ವೃತ್ತಿ ಎನ್ನುತ್ತಾರೆ. ಅಂದರೆ ಚಿತ್ತದಲ್ಲಿ ಉದ್ಭವವಾಗುವ ಚಿಂತನೆಯ ಅಲೆಗಳೇ ‘ವೃತ್ತಿ’ಗಳು. ಶ್ರೀಶಂಕರರು ಚಿತ್ತವೃತ್ತಿಯನ್ನು ಪ್ರತ್ಯಯ ಎಂದು ಕರೆದಿದ್ದಾರೆ. ಚಿತ್ತದಲ್ಲಿ ಏಳುವ ವೃತ್ತಿಗಳ ಮೂಲಕ ಮಾತ್ರ ಪ್ರಪಂಚದಲ್ಲಿರುವ ವಿಷಯಗಳ ಮತ್ತು ವಸ್ತುಗಳ ಜ್ಞಾನವುಂಟಾಗುವುದು. ವೃತ್ತಿಗಳನ್ನು ಎರಡು ವಿಧಗಳಾಗಿ ವಿಂಗಡಿಸಬಹುದು: ಕ್ಲಿಷ್ಟವೃತ್ತಿ ಮತ್ತು ಅಕ್ಲಿಷ್ಟವೃತ್ತಿ. ಕ್ಲೇಶ ಮತ್ತು ಮನೋವಿಕಾರ ಗಳಿಂದ ಉಂಟಾದ ಜಟಿಲ ವೃತ್ತಿಗಳನ್ನು ಕ್ಲಿಷ್ಟವೃತ್ತಿ ಎನ್ನುತ್ತಾರೆ. ರಾಗದ್ವೇಷಗಳಿಗೆ ಒಳಗಾಗುವ ಸಾಮಾನ್ಯ ಜನರಲ್ಲಿ ಕ್ಲಿಷ್ಟವೃತ್ತಿ ಉಂಟಾಗುವುದು. ಮನಸ್ಸನ್ನು ಶಾಂತಗೊಳಿಸಿದ ಕ್ಲೇಶರಹಿತ ಯೋಗಿಯ, ಸಂತರ ಚಿತ್ತವು ಅಕ್ಲಿಷ್ಟವೃತ್ತಿಗಳ ಸಹಜವಾದ ನೆಲೆಯಾಗಿರುತ್ತದೆ. ಕ್ಲೇಶದಿಂದ ಹಾಗೂ ಅದಕ್ಕೆ ಕಾರಣೀಭೂತವಾದ ಕ್ಲಿಷ್ಟವೃತ್ತಿಗಳಿಂದ ಮುಕ್ತರಾಗುವುದು ಯೋಗದ ಗುರಿ.
ಮನಸ್ಸು ಇಂದ್ರಿಯಗಳಿಂದ ಬಂದ ಸಂವೇದನೆಗಳನ್ನು ಒಟ್ಟು ಸೇರಿಸಿ, ಸ್ವೀಕರಿಸಿ ಸ್ಮೃತಿಪಟಲದಲ್ಲಿಡುವುದು. ಬುದ್ಧಿಯು ಈ ಸಂವೇದನೆಗಳನ್ನು ವಿಶ್ಲೇಷಿಸಿ ಪ್ರತಿಕ್ರಿಯೆ ವ್ಯಕ್ತಪಡಿಸುವುದು. ಅಹಂಕಾರವು (ಅಹಂತತ್ತ್ವ) ಈ ಸಂವೇದನೆಗಳನ್ನು ತನ್ನದಾಗಿ ಮಾಡಿಕೊಂಡು ಅದನ್ನು ವೈಯಕ್ತಿಕ ಜ್ಞಾನವಾಗಿ ಶೇಖರಿಸಿಡುವುದು. ಈ ಮನಸ್ಸು, ಬುದ್ಧಿ ಹಾಗೂ ಅಹಂಕಾರದ ಒಕ್ಕೂಟವನ್ನೇ ಯೋಗದ ಋಷಿ ‘ಪಾತಂಜಲಿ ಚಿತ್ತ’ ಎಂದು ಕರೆಯುತ್ತಾರೆ.
ಧ್ಯಾನದ ಶಕ್ತಿ: ಭಾರತೀಯ ಆಧ್ಯಾತ್ಮಿಕ ಸಂಸ್ಕೃತಿಯ ಮತ್ತು ಯೋಗಜೀವನದ ಕೇಂದ್ರಬಿಂದು ಮತ್ತು ಪ್ರಾಯೋಗಿಕವಾದ ಮುಖ್ಯ ಪ್ರಕ್ರಿಯೆ ಧ್ಯಾನವೆಂದು ಹೇಳಬಹುದು. ಧ್ಯಾನವೆಂದರೆ ಧ್ಯೇಯ ವಸ್ತುವಿನ ಮೇಲೆ ನಿರಂತರವಾದ ಮತ್ತು ಏಕರೀತಿಯ ಪ್ರತ್ಯಯಗಳ ಪ್ರವಾಹ. ಈ ಪ್ರವಾಹ ಅನ್ಯ ಪ್ರತ್ಯಯಗಳಿಂದ ಬಾಧಿತವಾಗುವುದಿಲ್ಲ. ಮನಸ್ಸಿನಲ್ಲಿ ಏಕಪ್ರಕಾರವಾದ ಸ್ವಾಭಾವಿಕ ವೃತ್ತಿಗಳು ಹರಿಯುವಂತೆ ಮಾಡುವುದೇ ಧ್ಯಾನ. ಇಂತಹ ಏಕಪ್ರಕಾರದ ಧ್ಯಾನದ ವೃತ್ತಿಯನ್ನು ಶ್ರೀರಾಮಾನುಜಾಚಾರ್ಯರು ‘ಅನುವೃತ್ತಿ’ ಎಂದು ಕರೆದಿದ್ದಾರೆ. ಧ್ಯಾನವು ಸಿದ್ಧಿಯಾದಾಗ ಮನಸ್ಸು ಆನಂದದಲ್ಲಿ ಮುಳುಗುವುದು ಮತ್ತು ಕ್ರಮೇಣ ಸಮಾಧಿಮಗ್ನವಾಗುವುದು. ಶ್ರೀರಾಮಕೃಷ್ಣರು ಹೇಳಿದಂತೆ ಶುದ್ಧ ಮನಸ್ಸೇ ಶುದ್ಧ ಆತ್ಮ. ವ್ಯಾಕುಲತೆ, ಏಕಾಗ್ರತೆ, ಪವಿತ್ರತೆ- ಈ ಮೂರೂ ಲಕ್ಷಣಗಳನ್ನು ಸಮರ್ಥವಾಗಿ ಬೆಳೆಸಿಕೊಂಡರೆ ಮಾತ್ರ ನಿಜವಾದ ಧ್ಯಾನಸ್ಥಿತಿ ಪ್ರಾಪ್ತವಾಗುವುದು; ಆಧ್ಯಾತ್ಮಿಕ ಅನುಭೂತಿ ದೊರಕುವುದು.
ಮಿದುಳಿನ ಮೇಲೆ ಯೋಗದ ಪರಿಣಾಮ: ಮನುಷ್ಯನ ಮಿದುಳಿನಲ್ಲಿ ಜೀವವಿಕಾಸದ ನಿಯಮಕ್ಕನುಸಾರವಾಗಿ ಮುಖ್ಯವಾಗಿ ಮೂರು ಸ್ತರಗಳಿವೆ. ಮೊದಲನೆಯದು ಜೈವಿಕ ಪ್ರಕ್ರಿಯೆಗಳನ್ನು ನಿಯಂತ್ರಿಸುವ, ಪ್ರಾಣಿಗಳ ಸ್ವಭಾವ ನಿರ್ಮಾಣ ಮಾಡುವ ಒಳಮಿದುಳು (Limbic system). ಅದರ ಮೇಲೆ (Mid brain) ಮನುಷ್ಯ ಸ್ವಭಾವದ ಸಾಮಾನ್ಯ ಬುದ್ಧಿಶಕ್ತಿ ಅಭಿವ್ಯಕ್ತಿಗೊಳಿಸುವ ಮಧ್ಯಭಾಗದ ಮಿದುಳಿನ ಸ್ತರ. ಅದರ ನಂತರದ, ಮೇಲಿನ ಸ್ತರದಲ್ಲಿ ಸೃಜನಶೀಲತೆ, ವೈಜ್ಞಾನಿಕ ಸಂಶೋಧನೆ ಮತ್ತು ಆಧ್ಯಾತ್ಮಿಕ ಪ್ರಜ್ಞೆ ಜಾಗೃತಗೊಳಿಸುವ, ಇವುಗಳ ನೆಲೆಯಾದ ಇಂದ್ರಿಯಾತೀತವಾದ ವಿಷಯವನ್ನು ಗ್ರಹಿಸಲು ಸಾಧ್ಯವಾಗುವ ಉತ್ಕೃಷ್ಟವಾದ ಮಿದುಳಿನ ಮೇಲ್ಪದರವಿರುವುದು. Cortex ಎಂದು ಕರೆಯಲ್ಪಡುವ ಇದು ಮನಸ್ಸಿನ ಆಧ್ಯಾತ್ಮಿಕ ಶಕ್ತಿಯ ಉನ್ನತ ಹೊರವಲಯ.
ನಮ್ಮ ಮಿದುಳಿಗೆ ಹೇಗೆ ಸುದ್ದಿಗಳು ತಲುಪುತ್ತವೆ ಹಾಗೂ ಮಿದುಳು ಹೇಗೆ ಆದೇಶವನ್ನು ರವಾನಿಸುತ್ತದೆೆ ಎಂಬುದನ್ನು ಯೋಗ ಮತ್ತು ತಂತ್ರಶಾಸ್ತ್ರಗಳು ವಿವರಿಸುತ್ತವೆ. ಅವು ಮನುಷ್ಯನ ಬೆನ್ನುಮೂಳೆಯಲ್ಲಿ ಇಡಾ ಮತ್ತು ಪಿಂಗಳಾ ಎಂಬ ಎರಡು ನರಗಳ ಪ್ರವಾಹವನ್ನು ಗುರುತಿಸುತ್ತವೆ. ಅವುಗಳ ಮಧ್ಯದಲ್ಲಿ ಹರಿಯುವ ಟೊಳ್ಳು ನಾಳವೇ ಸುಷುಮ್ನಾ. ಇಡಾ ನಾಡಿ ಸುದ್ದಿಯನ್ನು ಮಿದುಳಿಗೆ ಒಯ್ಯುವುದು. ಪಿಂಗಳಾ ನಾಡಿ ಮಿದುಳಿನಿಂದ ಆಯಾ ಭಾಗಗಳಿಗೆ ಸುದ್ದಿಯನ್ನು ತರುವುದು. ಒಂದು ಜ್ಞಾನೇಂದ್ರಿಯ, ಇನ್ನೊಂದು ಕರ್ವೇಂದ್ರಿಯ. ಒಂದು ಕೇಂದ್ರಾಕರ್ಷಕ, ಇನ್ನೊಂದು ಕೇಂದ್ರಾಪಕರ್ಷಕ. ಈ ರೀತಿ ಎಲ್ಲ ಚಲನೆಗಳೂ ಮತ್ತು ಅವುಗಳ ಸಂವೇದನೆಗಳೂ ಈ ನರತಂತುಗಳ ಮೂಲಕ ಮಿದುಳಿಗೆ ಹೋಗುತ್ತವೆ ಮತ್ತು ಮಿದುಳಿನಿಂದ ಹೊರಬರುತ್ತವೆ. ಇವುಗಳ ಮಧ್ಯೆ ಸುಷುಮ್ನಾ ಕಾಲುವೆ ಇದೆ. ಈ ಕಾಲುವೆ ಮೂಲಕ ಮಾನಸಿಕ ಶಕ್ತಿ ಹರಿದರೆ, ಯಾವುದೇ ನರತಂತುಗಳ ಅವಶ್ಯಕತೆ ಇಲ್ಲದೆ, ಎಲ್ಲ ಜ್ಞಾನವೂ ಒದಗಿಬರುವುದು. ಮಿದುಳ ಬಳ್ಳಿಯ ಅಂದರೆ ಸುಷುಮ್ನಾ ಕಾಲುವೆ ಉದ್ದಕ್ಕೂ ಇರುವ ಅನೇಕ ನರಗ್ರಂಥಿಗಳು ಸಾಧಕನು ತನ್ನ ಅನುಭವಕ್ಕೆ ತಂದುಕೊಳ್ಳುವ ಚಕ್ರಗಳನ್ನು ಸೂಚಿಸುತ್ತವೆ. ಅವುಗಳಲ್ಲಿ ಅತ್ಯಂತ ಕೆಳಗಿರುವುದು ಮೂಲಾಧಾರ; ಅತ್ಯಂತ ಮೇಲಿರುವುದು ಮಿದುಳಿನಲ್ಲಿರುವ ಸಹಸ್ರಾರ. ಹೊಕ್ಕಳಿನ ಸಮೀಪ ಇರುವ ಚಕ್ರ ಮಣಿಪುರ. ದೀರ್ಘಕಾಲದ ಅಭ್ಯಾಸ ಮತ್ತು ನಿರಂತರ ಏಕಾಗ್ರತೆ ಮೂಲಕ ಮೂಲಾಧಾರದಲ್ಲಿರುವ ಸುಪ್ತ ಕುಂಡಲಿನಿ ಶಕ್ತಿ ಜಾಗೃತಗೊಳ್ಳುತ್ತದೆ. ಆಗ ಅಲ್ಲಿ ಸುಪ್ತವಾಗಿರುವ ಶಕ್ತಿ ಕಾರ್ಯೂೕನ್ಮುಖವಾಗಿ ಕ್ರಮವಾಗಿ ಮೇಲ್ಮುಖವಾಗಿರುವ ಒಂದು ಚಕ್ರದಿಂದ ಇನ್ನೊಂದು ಚಕ್ರಕ್ಕೆ ಸಾಗುತ್ತ ಪ್ರಚಂಡ ಪ್ರತಿಕ್ರಿಯೆಯನ್ನು ಉಂಟುಮಾಡುವುದು. ಭಗವಂತನ ಮೇಲಿನ ಭಕ್ತಿ, ವಿಶೇಷವಾಗಿ ಏಕಾಗ್ರತೆಯಿಂದ ಮಾಡಲ್ಪಡುವ ನಾಮಜಪ ಅಥವಾ ಮಂತ್ರಜಪ ಮತ್ತು ಧ್ಯಾನದ ಮೂಲಕ ಈ ಶಕ್ತಿ ಜಾಗೃತವಾಗಬಹುದು.
ಯೋಗದ ಆತ್ಯಂತಿಕ ಅನುಸಂಧಾನ: ಯೋಗವು ಮನಸ್ಸಿನ ಪ್ರಕ್ರಿಯೆಗಳನ್ನು ಆಳವಾಗಿ ಅರಿತು ಆಧ್ಯಾತ್ಮಿಕ ಸಾಧನೆಗೆ ಮಾರ್ಗದರ್ಶನ ಮಾಡುವ ಪ್ರಾಯೋಗಿಕ ಜ್ಞಾನರಾಶಿ ಎನ್ನಬಹುದು. ಈ ಮನಸ್ಸಿನ ಸ್ವರೂಪವನ್ನೂ, ಅದರ ಸೂಕ್ಷ್ಮ ಗತಿಗಳನ್ನೂ ಅದರ ವಿವಿಧ ಕಾಯಕಗಳನ್ನೂ ಕೂಲಂಕಷವಾಗಿ ಚರ್ಚಿಸುವುದೇ ಯೋಗಶಾಸ್ತ್ರ. ಮನುಷ್ಯನ ಮನಸ್ಸು ಸರೋವರವಿದ್ದಂತೆ ಅದಕ್ಕೆ ಹೊರಗಡೆಯಿಂದ ಪಂಚೇಂದ್ರಿಯಗಳ ಮೂಲಕ ಹಲವು ಸಂವೇದನೆಗಳೆಂಬ ಕಲ್ಲು ಬಿದ್ದು ಅಲೆಯನ್ನು ಎಬ್ಬಿಸುವುದು. ಮನುಷ್ಯ ಮತ್ತು ಅವನ ಮನಸ್ಸನ್ನು ಏನು ಎಂದು ವಿವೇಕಪೂರ್ಣವಾಗಿ ನಾವೆಲ್ಲರೂ ಪ್ರಶ್ನಿಸಿ, ಈ ಜೀವನದ ಒಳಮರ್ಮ ಹಾಗೂ ಸತ್ಯಾಸತ್ಯತೆಯನ್ನು ತಿಳಿಯುವುದೇ ಯೋಗದ ಮೂಲ ಉದ್ದೇಶ. ನಮ್ಮ ವ್ಯಕ್ತಿತ್ವದ ಹೊರಗೆ ಇರುವುದೇ ದೇಹ. ಅದರ ಹಿಂದೆ ಇಂದ್ರಿಯಗಳಿವೆ. ಮನಸ್ಸು, ಅಹಂಕಾರ ಮತ್ತು ಬುದ್ಧಿ ಇವುಗಳ ಕಾರ್ಯದ ಮತ್ತು ಮಾಧ್ಯಮದ ಮೂಲಕ ಸ್ಮೃತಿ ಉಂಟಾಗುವುದು. ಚಿತ್ತದಲ್ಲಿ ಎಲ್ಲ ಜೀವನಾನುಭವಗಳ ಸಂಸ್ಕಾರಗಳೂ ಹುದುಗಿರುವುದರಿಂದ ನೆನಪು, ಚಿಂತನೆ ಮತ್ತು ಅರ್ಥಪೂರ್ಣ ಮಾತುಕತೆ ಸಾಧ್ಯವಾಗುವುದು. ನಮ್ಮ ದೇಹ, ಮನಸ್ಸುಗಳಿಗಿಂತಲೂ ಭಿನ್ನವಾದ ಹಾಗೂ ನಮ್ಮ ಅರಿವಿನ ಮೂಲವಾದ ‘ಚೈತನ್ಯ ತತ್ತ್ವದ ಕಲ್ಪನೆ’ -ಜಗತ್ತಿಗೆ, ಯೋಗ-ವೇದಾಂತವು ಕೊಟ್ಟ ವಿಶಿಷ್ಟ ಕೊಡುಗೆಯಾಗಿದೆ. ಬದುಕಿನ ಬಹುತೇಕ ಸಮಸ್ಯೆಗಳಿಗೆ ಲೌಕಿಕ ಪರಿಹಾರಗಳಿಲ್ಲವೆಂದೂ ಆದರೆ ಅವುಗಳನ್ನು ಅತಿಕ್ರಮಿಸಬಹುದೆಂದೂ ಭಾರತೀಯ ಮನಃಶಾಸ್ತ್ರ ಮತ್ತು ಯೋಗಶಾಸ್ತ್ರ ಸ್ಪಷ್ಟವಾಗಿ ತಿಳಿಸುತ್ತದೆ. ಭಾರತೀಯ ಯೋಗಶಾಸ್ತ್ರದ ಗುರಿ ಪಾರಮಿತೆ-Transcendence, ಪ್ರಕೃತಿ ಮತ್ತು ಪುರುಷರನ್ನು(ಜೀವಾತ್ಮ) ಬೇರ್ಪಡಿಸಿ ಪ್ರಕೃತಿಗೆ ಅತೀತವಾದ ದಿವ್ಯಾನುಭವ ಪಡೆಯುವುದು. ನಾವು ಇಂತಹ ಯೋಗದಲ್ಲಿ ಆಸಕ್ತಿಯುಳ್ಳವರಾದರೆ, ನಮ್ಮ ಬದುಕು ಸುರಕ್ಷಿತ ಮತ್ತು ಶ್ರೇಯಸ್ಕರವಾಗುವುದೆಂಬುದು ಖಚಿತ. ಕಾರಣ ಯೋಗವು ಆತ್ಮಸಂಯಮ ಹಾಗೂ ವಿವೇಕಯುಕ್ತ ಚಿಂತನ-ಮನನಗಳ ಬದುಕನ್ನು ಬಾಳಲು ಆಂತರಿಕ ತುಡಿತವನ್ನು ಮೂಡಿಸುತ್ತದೆ.
(ಲೇಖಕರು ಮೈಸೂರು ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷರು)