

ಮಾನವ ಜೀವನವನ್ನು ಪ್ರಗತಿಪಥದಲ್ಲಿ ಕೊಂಡೊಯ್ದು ಪರಿಪೂರ್ಣ ಸಾರ್ಥಕತೆ ನೀಡುವ ಮಹಾ ಆದರ್ಶಗಳಿಗೆ ಭಾರತದಲ್ಲಿ ಎಂದಿಗೂ ಕೊರತೆಯಿಲ್ಲ. ಈ ನಮ್ಮ ಸಂಸ್ಕೃತಿಯ ಸಾವಿರಾರು ವರ್ಷದ ಇತಿಹಾಸದಲ್ಲಿ ಅಂತಹ ಅನೇಕ ತತ್ತ್ವ, ಆದರ್ಶ ಮತ್ತು ಪರಂಪರೆಗಳನ್ನು ಸ್ಪಷ್ಟವಾಗಿ ಗುರುತಿಸಬಹುದು. ಈ ಆದರ್ಶಗಳು ಕಾಲದ ಪರೀಕ್ಷೆಯನ್ನು ಗೆದ್ದುನಿಂತ ದೀಪಸ್ತಂಭಗಳಂತಿವೆ. ಇವು ಕೇವಲ ಸೈದ್ಧಾಂತಿಕವಲ್ಲ; ಪೊಳ್ಳು ಆಚಾರವಲ್ಲ; ಅವು ಅತ್ಯಂತ ಪರಿಣಾಮಕಾರಿಯೂ, ಪ್ರಾಯೋಗಿಕವೂ ಆಗಿವೆ. ಈ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಅಭ್ಯಸಿಸಿ, ಅನುಷ್ಠಾನ ಮಾಡಿ ಯಶಸ್ಸನ್ನು ಕಂಡ ನಮ್ಮ ಧೀರ ಸತ್ಪುರುಷರು ಅವುಗಳ ಸಾಕಾರ ರೂಪವಾಗಿ, ಜೀವಂತ ನಿದರ್ಶನಗಳಾಗಿ, ಭಾರತೀಯ ಸಂಸ್ಕೃತಿಯ ಔನ್ನತ್ಯವನ್ನು ಸಾರಿದ್ದಾರೆ. ಇವು ಪ್ರಾಯೋಗಿಕವಾಗಿ ನಮ್ಮ ನಿತ್ಯ ಜೀವನಪದ್ಧತಿಯನ್ನು ಧರ್ಮ, ಅಧ್ಯಾತ್ಮದೊಡನೆ ಮೇಳೈಸಿ ಸತತವಾಗಿ ಹರಿದು ಬಂದು, ಕುಟುಂಬದ ಬದುಕನ್ನು ಮತ್ತು ವ್ಯಕ್ತಿತ್ವವನ್ನು ಸಶಕ್ತಗೊಳಿಸಿದ ಆದರ್ಶಗಳು. ಇದರಲ್ಲಿ ಗೃಹಸ್ಥ ಧರ್ಮ ಮತ್ತು ಋಷಿ ಆದರ್ಶ ಸ್ಪಷ್ಟವಾಗಿ ಗುರುತಿಸಬಹುದಾದ ಸನಾತನ ಸಂಸ್ಕೃತಿಯ ಎರಡು ಪ್ರಮುಖ ಘಟಕಗಳು. ಇವು ನಮ್ಮ ವ್ಯವಹಾರಿಕ ಜೀವನ ಮತ್ತು ಕೌಟುಂಬಿಕ ಜೀವನವನ್ನು ಅಧ್ಯಾತ್ಮದೊಡನೆ ಅರ್ಥಪೂರ್ಣವಾಗಿ ಅಳವಡಿಸಿಕೊಂಡುಬಂದ ಸಮನ್ವಯ ಆದರ್ಶಗಳು.
ಆಧುನಿಕ ಸಮಾಜ ಸಶಕ್ತವಾದ ಮತ್ತು ಅತ್ಯಾವಶ್ಯಕವಾದ ಈ ಎರಡು ಆದರ್ಶಗಳನ್ನು ಮರೆತು, ಪಾಶ್ಚಿಮಾತ್ಯರ ಅಂಧಾನುಕರಣೆ, ಸ್ವೇಚ್ಛಾಚಾರ, ಜಡವಾದಗಳಿಂದ ಆವರಿಸಲ್ಪಟ್ಟ ಕುಟುಂಬ ಜೀವನ, ಅಜ್ಞಾನ, ಅಸಹನೆ, ಕ್ರೋಧ, ದುಃಖ, ಮತ್ತು ಅಶಾಂತಿಯ ತಾಣವಾಗಿ ಮಾರ್ಪಡುತ್ತಿದೆ. ದೇಶದ ಪ್ರಗತಿ ಮತ್ತು ಸಂಸ್ಕೃತಿ ಸಮಾಜದ ಮುಖ್ಯ ಘಟಕವಾದ ಕುಟುಂಬ ಜೀವನದ ಮೇಲೆ ಅವಲಂಬಿಸಿದೆ; ಕುಟುಂಬಗಳು ವ್ಯಕ್ತಿಗಳನ್ನು ಅವಲಂಬಿಸಿವೆ; ವ್ಯಕ್ತಿ ಜೀವನ ಬಾಲ್ಯದಿಂದ ದೊರಕುವ ಶಿಕ್ಷಣ, ಪರಿಸರ ಮತ್ತು ಕೌಟುಂಬಿಕ ಸಂಸ್ಕಾರಗಳನ್ನು ಅವಲಂಬಿಸಿದೆ.
ಕೌಟುಂಬಿಕ ಜೀವನದ ಮೇಲೆ ಆಧುನಿಕತೆಯ ಪರಿಣಾಮಗಳು: ಕುಟುಂಬವೇ ಸಮಾಜದ ಭದ್ರಬುನಾದಿಯೂ, ಸಾಮಾಜಿಕ ಸೌಧದ ಗಟ್ಟಿ ಇಟ್ಟಿಗೆಯೂ ಆಗಿದೆ. ಆಧುನಿಕತೆಯ ಹೆಸರಿನಲ್ಲಿ ವ್ಯಾಪಕವಾಗಿರುವ ಶಿಕ್ಷಣ ಯಾವುದೇ ಉನ್ನತ ಮೌಲ್ಯ, ಅನುಕರಣೀಯ ಆದರ್ಶವನ್ನು ಯುವ ಮನಸ್ಸುಗಳಲ್ಲಿ ಸ್ಥಾಪಿಸಲು ವಿಫಲವಾಗಿರುವುದನ್ನು ಕಾಣುತ್ತಿದ್ದೇವೆ. ಆದರೆ ಈ ರೀತಿಯ ಮೌಲ್ಯವಿಹೀನ ಶಿಕ್ಷಣವೇ ಸಮಾಜವನ್ನು ಪ್ರಭಾವಿಸಲು ಆರಂಭಿಸಿಬಿಟ್ಟದೆ. ನಗರೀಕರಣದ ಧಾವಂತ, ಗ್ರಾಹಕರಲ್ಲಿ ನಿತ್ಯ ಪೋಷಿಸಲ್ಪಡುತ್ತಿರುವ ಕೊಳ್ಳುಬಾಕದಾಹ, ಅಶ್ಲೀಲತೆಯನ್ನು ವಿಜೃಂಭಿಸುತ್ತಿರುವ ಸ್ವೇಚ್ಛಾಚಾರದ ನವಸಮಾಜ... ಇವು ಋಣಾತ್ಮಕವಾದ, ಅಪಾಯಕಾರಿಯಾದ ಪರಿಣಾಮಗಳನ್ನು ಮಕ್ಕಳು, ಯುವಕರು ಮತ್ತು ಗೃಹಸ್ಥಜೀವನದ ಮೇಲೆ ಬೀರುತ್ತಿರುವುದು ಸುಸ್ಪಷ್ಟ.
ಇದನ್ನು ಎದುರಿಸುವ ಬಗೆ ಹೇಗೆ? ಸನಾತನ ಧರ್ಮದ ಮುಖ್ಯ ಘಟಕವಾದ ಕುಟುಂಬದ ಜೀವನದ ಸ್ವಾಸ್ಥ್ಯ, ಸಂಸ್ಕೃತಿಯನ್ನು ಸಂರಕ್ಷಿಸುವುದು ಹೇಗೆ? ಎಂಬ ಪ್ರಶ್ನೆಗಳಿಗೆ ಸಾಮಾಜಿಕ ಕಳಕಳಿಯುಳ್ಳ ರಾಷ್ಟ್ರಪ್ರೇಮಿಗಳು ಉತ್ತರ ಕಂಡುಕೊಳ್ಳಲೇಬೇಕಾದ ತುರ್ತು ಪರಿಸ್ಥಿತಿ ಬಂದೊದಗಿದೆ. ಅದಕ್ಕಾಗಿ ಗೃಹಸ್ಥಧರ್ಮದ ಮೌಲ್ಯಗಳು ಮತ್ತು ಸನಾತನ ಋಷಿ ಆದರ್ಶವನ್ನು ಪುನರುಜ್ಜೀವನಗೊಳಿಸಬೇಕಾದ ಅಗತ್ಯ ಇಂದು ಹಿಂದೆಂದಿಗಿಂತಲೂ ಹೆಚ್ಚಾಗಿರುವುದನ್ನು ಮನಗಾಣದಿದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಆದ್ದರಿಂದ ಈ ಸಂದರ್ಭಕ್ಕೆ ಅತ್ಯಗತ್ಯವಾದ ಸ್ಪೂರ್ತಿಯನ್ನೂ, ಶಕ್ತಿಯನ್ನೂ, ಮಾರ್ಗದರ್ಶನವನ್ನೂ ಸನಾತನ ಸಂಸ್ಕೃತಿಯ ಜ್ಞಾನದ ಗಣಿಗಳಾದ ಭಗವದ್ಗೀತೆ, ಉಪನಿಷತ್ತುಗಳು, ರಾಮಾಯಣ, ಮಹಾಭಾರತ, ಮಹಾ ಸಂತರ ಜೀವನ ಚರಿತ್ರೆಗಳು, ಶ್ರೀರಾಮಕೃಷ್ಣ- ಶ್ರೀಮಾತೆ ಶಾರದಾದೇವಿ, ಸ್ವಾಮಿ ವಿವೇಕಾನಂದರ ಜೀವನ, ವ್ಯಕ್ತಿತ್ವ, ಸಂದೇಶಗಳಿಂದ ಪಡೆಯಲು ಹಿಂಜರಿದರೆ ಘೊರ ದುರಂತವೇ ಸಮಾಜವನ್ನು ನುಂಗಲು ಕಾಯುತ್ತಿದೆ ಎಂಬ ಅರಿವು ವ್ಯಾಪಕವಾಗಬೇಕಾಗಿದೆ. ಮಕ್ಕಳ ಭವಿಷ್ಯ ಉಜ್ವಲವಾಗಬೇಕು; ಯುವಜನಾಂಗ ಕತ್ತಲೆಯಲ್ಲಿ ನರಳಿ ಕೆಸರಿನಲ್ಲಿ ಬೀಳಬಾರದು; ಗೃಹಸ್ಥ ಜೀವನ ಮರಳಿ ತನ್ನ ಗಟ್ಟಿತನವನ್ನು ಪಡೆಯಬೇಕು.
ಭಾರತದ ಸನಾತನ ಸಂಸ್ಕೃತಿಯನ್ನೂ, ರಾಷ್ಟ್ರಜೀವನವನ್ನೂ ನಿರ್ದೇಶಿಸಿದ ಹಲವು ಆದರ್ಶಗಳಲ್ಲಿ ಗೃಹಸ್ಥ ಮತ್ತು ಋಷಿ ಆದರ್ಶಗಳು ಪ್ರಧಾನ. ಇವು ರಾಷ್ಟ್ರೀಯ ಸಂಸ್ಕೃತಿಯನ್ನು ಶತಶತಮಾನಗಳಿಂದಲೂ ಪ್ರಭಾವಿಸುತ್ತ ಬಂದಿವೆ. ಲೌಕಿಕ ಆಭ್ಯುದಯ ಮತ್ತು ಆಧ್ಯಾತ್ಮಿಕ ಉನ್ನತಿಯನ್ನು ಸಾಧಿಸಲು ನೆರವಾಗುತ್ತ ಬಂದಿವೆ. ವಾಸ್ತವವಾಗಿ ಗೃಹಸ್ಥ ಧರ್ಮ ಮತ್ತು ಋಷಿ ಆದರ್ಶಗಳು- ಭಾರತ ಸನಾತನ ಸಂಸ್ಕೃತಿಯ ಕೇಂದ್ರದಲ್ಲಿರುವ ಆಧಾರ ಸ್ತಂಭಗಳಾಗಿವೆ. ಗೃಹಸ್ಥ ಧರ್ಮದ ಪ್ರಧಾನ ಧ್ಯೇಯವೆಂದರೆ ಲೌಕಿಕ ಮತ್ತು ಆಧ್ಯಾತ್ಮಿಕ ಶಿಕ್ಷಣಗಳ ಸಮನ್ವಯ. ಆಧ್ಯಾತ್ಮಿಕ ಸಾಧನೆ ಅಭ್ಯಾಸ, ಧರ್ಮ ಮತ್ತು ಪ್ರಕೃತಿ ನಿಯಮಗಳ ಹದವಾದ ಸಂಯೋಜನೆಯಿಂದ ಸಂಸಾರದ ಲೌಕಿಕ ಕರ್ತವ್ಯ ಮತ್ತು ಅವಶ್ಯಕತೆಗಳನ್ನು ಸಂಯಮದಿಂದ ಪೂರೈಸಬೇಕು. ತನ್ಮೂಲಕ ಹಂತ-ಹಂತವಾಗಿ ಆಧ್ಯಾತ್ಮಿಕ ಧ್ಯೇಯದೊಡನೆ ಸಾಗಿ ಋಷಿತ್ವವನ್ನು ಪಡೆಯುವುದೇ ಪರಿಪೂರ್ಣ ಗೃಹಸ್ಥ ಜೀವನವೆನ್ನಬಹುದು.
‘ಆರ್ಯಮಾತೆಯ ಅಮೃತಪುತ್ರರಾದ ನೀವೆಲ್ಲರೂ ಋಷಿ ಸಂತಾನರು ಎಂಬುದನ್ನು ಮರೆಯದಿರಿ’ ಎಂದು ಸ್ವಾಮಿ ವಿವೇಕಾನಂದರು ನಮ್ಮನ್ನು ಎಚ್ಚರಿಸುತ್ತಾರೆ. ‘ಪ್ರತಿಯೊಬ್ಬರೂ ಋಷಿಯಾಗಿ ಋಷಿತ್ವವನ್ನು ಪಡೆಯಲೇಬೇಕು. ಇದು ನಿಮ್ಮ ಜನ್ಮಸಿದ್ಧ ಹಕ್ಕು’ ಎಂದು ವೀರವೇದಾಂತಿ ಸ್ವಾಮಿ ವಿವೇಕಾನಂದರು ಉದ್ಘೋಷಿಸಿದ್ದಾರೆ.
ಅಧ್ಯಾತ್ಮ ಮತ್ತು ಗೃಹಸ್ಥ ಜೀವನದ ಸಮನ್ವಯವೆ ಋಷಿ ಆದರ್ಶ. ಗೃಹಸ್ಥಜೀವನದ ಲೌಕಿಕ ಧರ್ವಧಾರಿತ ಸಾಧನೆ ಮತ್ತು ಕರ್ತವ್ಯಗಳನ್ನು ಪತಿ, ಪತ್ನಿ, ಮಕ್ಕಳು ಆಧ್ಯಾತ್ಮಿಕ ಗುರಿಯಿಂದ- ಇವುಗಳನ್ನು ನಿತ್ಯಜೀವನದಲ್ಲಿ ಸಮನ್ವಯೀಕರಿಸಿ ಲೌಕಿಕದಿಂದ ಧಾರ್ವಿುಕತೆಯೆಡೆಗೆ, ಧಾರ್ವಿುಕತೆಯಿಂದ ಆಧ್ಯಾತ್ಮಿಕತೆಯೆಡೆಗೆ ಸಾಗುವುದೇ ಋಷಿ ಆದರ್ಶ. ನಮ್ಮ ಶಾಸ್ತ್ರಗಳು ಸಾರಿದ ಧರ್ಮ-ಅರ್ಥ- ಕಾಮ-ಮೋಕ್ಷಗಳ ಸಮನ್ವಯ ಜೀವನಸೂತ್ರವೆ ಋಷಿ ಆದರ್ಶ.
ಭಾರತದ ಶೇಕಡ 99 ಭಾಗ ಜನರು ಸ್ವೀಕರಿಸಿರುವ ಜೀವನವಿಧಾನವಾದ ಗೃಹಸ್ಥ ಧರ್ಮ ಭಾರತೀಯ ಸಂಸ್ಕೃತಿಯ ಮುಖ್ಯವಾದ ತಳಹದಿಯೂ, ಮೂಲ ಸತ್ವವೂ ಆಗಿದೆ. ಆದ್ದರಿಂದ ಕುಟುಂಬ ಜೀವನ ಆಧ್ಯಾತ್ಮೀಕರಣಗೊಳ್ಳದಿದ್ದರೆ ಸಾಮಾಜಿಕ ಪರಿವರ್ತನೆ ಈಡೇರದ ಕನಸಾಗಿಯೇ ಉಳಿದುಬಿಡುತ್ತದೆ. ಸನಾತನ ಧರ್ಮವನ್ನು ಸಂರಕ್ಷಿಸಿ ಬೆಳೆಸಲು ಈ ಎರಡು ಆದರ್ಶಗಳನ್ನೂ ಸಶಕ್ತಗೊಳಿಸಬೇಕು; ಸಬಲ ಗೊಳಿಸಲು ಸರ್ವಪ್ರಯತ್ನವನ್ನು ವರ್ತಮಾನದ ಸನ್ನಿವೇಶದಲ್ಲಿ ಮಾಡಲೇಬೇಕಾದ ಅಗತ್ಯವಿದೆ. ತನ್ಮೂಲಕ ಧಾರ್ವಿುಕ ಮತ್ತು ಆಧ್ಯಾತ್ಮಿಕ ಆದರ್ಶಗಳನ್ನೂ, ಹಂಬಲವನ್ನೂ ಸರ್ವರ ಹೃನ್ಮನದಲ್ಲಿ ಬಾಲ್ಯದಿಂದಲೇ ಬೆಳೆಸಬೇಕಾಗಿದೆ.
ದೈವಕೇಂದ್ರಿತ ದಿನಚರಿ ಅಗತ್ಯ: ಆಧ್ಯಾತ್ಮಿಕ ಗುರಿಯನ್ನಿಟ್ಟುಕೊಂಡು ಗೃಹಸ್ಥಧರ್ಮವನ್ನು ಪರಿಪಾಲಿಸಿದರೆ, ಕ್ರಮೇಣವಾಗಿ ನಾವು ಋಷಿಗಳಾಗಿ ವಿಕಾಸ ಹೊಂದುತ್ತೇವೆ. ಇದರ ತರಬೇತಿ ಮತ್ತು ಮಾರ್ಗದರ್ಶನ ಮಾತ್ರ ಬಾಲ್ಯದಿಂದಲೇ ಆರಂಭವಾಗಬೇಕು. ಆಧ್ಯಾತ್ಮಿಕ ಸಂಸ್ಕಾರಗಳ ಮುದ್ರೆಯನ್ನು ಎಳೆಯ ಮನಸ್ಸುಗಳ ಮೇಲೆ ಅಚ್ಚೊತ್ತಬೇಕು. ಕ್ರಮಬದ್ಧವಾದ, ಉತ್ಸಾಹಭರಿತ ಮತ್ತು ಆನಂದದಾಯಕವಾದ ದೈವಕೇಂದ್ರಿತ ದಿನಚರಿಯನ್ನು ಮಕ್ಕಳಿಗಾಗಿ ರೂಪಿಸಬೇಕು. ಬಾಲಕೃಷ್ಣ, ಬಾಲರಾಮನನ್ನು ಸ್ಮರಿಸುವ ಪ್ರಸಂಗಗಳ ಅಭಿನಯ, ಸ್ನಾನದ ನಂತರ, ಆಹಾರ ಸೇವಿಸುವ ಮುನ್ನ, ನಿದ್ರೆಗೆ ಜಾರುವ ಮುಂಚೆ ಸರಳ ಶ್ಲೋಕಗಳ ಮೂಲಕ ದೇವರ ಸ್ಮರಣೆ, ಸ್ಪೂರ್ತಿದಾಯಕ ಕಥೆಗಳ ಶ್ರವಣ ಮುಂತಾದ ವಿಧಾನಗಳು ಮನಸ್ಸು ಸುಸಂಸ್ಕೃತಗೊಳ್ಳಲು ಪರಿಣಾಮಕಾರಿಯಾಗಿವೆ. ಹೀಗೆ ಅಧ್ಯಾತ್ಮಯುಕ್ತ ಗೃಹಸ್ಥ ಜೀವನ ಋಷಿ ಆದರ್ಶದ ಕಡೆಗೆ ಕರೆದೊಯ್ಯುವ ಮೆಟ್ಟಲಾಗಿದೆ. ಶತಮಾನಗಳ ಹಿಂದೆಯೇ ಆಧ್ಯಾತ್ಮಿಕ ಸಾಕ್ಷಾತ್ಕಾರ ಪಡೆದ ಮಹಾಪುರುಷರು ನಮಗೆ ಋಷಿ ಆದರ್ಶವನ್ನು ನೀಡಿದ್ದಾರೆ. ಈ ಋಷಿ ಆದರ್ಶವು ಉನ್ನತ ಸಾಕ್ಷಾತ್ಕಾರವನ್ನೂ ಮತ್ತು ಸ್ವಾನುಭವವನ್ನೂ ಪಡೆಯುವ ಸಾಧ್ಯತೆಗಳನ್ನು ಲೌಕಿಕ ವ್ಯಾವಹಾರಿಕ ಜೀವನದಲ್ಲಿ ಮಗ್ನರಾದ ಗೃಹಸ್ಥರ ಮುಂದಿಡುತ್ತದೆ. ಗೃಹಸ್ಥ ಧರ್ಮದ ಕರ್ತವ್ಯಗಳನ್ನೂ ಮತ್ತು ಸೂಕ್ಷ್ಮ ಆಧ್ಯಾತ್ಮಿಕ ಸಾಧನೆಗಳನ್ನೂ ಸಮರ್ಥವಾಗಿ ಸಮನ್ವಯಗೊಳಿಸುವುದು ಸಾಧ್ಯ. ಅಭ್ಯಾಸವನ್ನು ಬಾಲ್ಯದಿಂದಲೇ ಆರಂಭಿಸಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಆದರೆ ನೋವಿನ ಸಂಗತಿ ಎಂದರೆ ಈ ಎರಡೂ ಆದರ್ಶಗಳು ಸಮಾಜದಲ್ಲಿ ಬಹುಪಾಲು ನಿರ್ಲಕ್ಷಿತವಾಗಿ, ಜನರ ಅವಜ್ಞೆಗೆ ಒಳಗಾಗಿರುವುದನ್ನು ಕಾಣುತ್ತಿದ್ದೇವೆ.
ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಋಷಿ ಆದರ್ಶ: ಸ್ವಾಮಿ ವಿವೇಕಾನಂದರು ಹೇಳುತ್ತಾರೆ: ‘ಈ ಋಷಿತ್ವ ಕಾಲ, ದೇಶ, ಲಿಂಗ ಅಥವಾ ಯಾವುದೇ ಜನಾಂಗದ ಪರಿಮಿತಿಗೆ ಒಳಪಟ್ಟಿಲ್ಲ. ವಾತ್ಸ್ಯಾಯನ ಋಷಿ ಧೈರ್ಯವಾಗಿ ಘೊಷಿಸುವುದೇನೆಂದರೆ, ಈ ಋಷಿತ್ವ ಋಷಿ ಕುಲದ ಪುತ್ರರ, ಆರ್ಯರ, ವಿದೇಶೀಯರ ಸರ್ವ ಸಾಮಾನ್ಯ ಸಂಪತ್ತಾಗಿದೆ. ಇದು ವೇದಗಳಲ್ಲಿರುವ ಸಾಧುತ್ವ. ಭಾರತದ ಈ ಧಾರ್ವಿುಕ ಆದರ್ಶವನ್ನು ನಾವೆಲ್ಲರೂ ಸತತವಾಗಿ ನೆನಪಿನಲ್ಲಿಡಬೇಕು. ಜಗತ್ತಿನ ಅನ್ಯ ದೇಶಗಳ ಜನರೂ ಇದನ್ನು ಅರಿತು ನೆನಪಿಟ್ಟುಕೊಂಡರೆ, ಕದನ, ಹೋರಾಟಗಳು ಕಡಿಮೆಯಾಗಬಹುದು’.