ವಿವೇಕ ಸೂರ್ಯನಲ್ಲಿ ಪ್ರತಿಬಿಂಬಿತವಾದ ಸುಭಾಷ ಚಂದ್ರ

-67912ca49ef73
Published on
ಎರಡನೇ ವಿಶ್ವಯುದ್ಧ ಸಾಗುತ್ತಿರುವ ಸಂದರ್ಭದಲ್ಲೇ ಸುಭಾಷ್ ಆಗಿಂದಾಗ್ಗೆ ಸಿಂಗಾಪುರ ಹಾಗೂ ರಂಗೂನ್ ರಾಮಕೃಷ್ಣಾಶ್ರಮಗಳಲ್ಲಿ ಭಗವಾನ್ ಶ್ರೀರಾಮಕೃಷ್ಣರ ಮೂರ್ತಿಯ ಮುಂದೆ ಧ್ಯಾನಸ್ಥರಾಗುತ್ತಿದ್ದರು. ಕೋಲ್ಕತ್ತಾದ ರಾಮಕೃಷ್ಣ ಮಿಷನ್​ನ ಸ್ಟೂಡೆಂಟ್ಸ್ ಹೋಮ್ ಸೇವಾಪ್ರತಿಷ್ಠಾನ ಮತ್ತು ದೇವಘರ್​ನ ವಿದ್ಯಾಪೀಠಗಳ ಸೇವಾಕಾರ್ಯಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಹತ್ತೊಂಬತ್ತನೇ ಶತಮಾನದ ಉತ್ತರಾರ್ಧ ಮತ್ತು ಇಪ್ಪತ್ತನೇ ಶತಮಾನದ ಪೂರ್ವಾರ್ಧದಲ್ಲಿ ಇಡೀ ಭಾರತದೇಶವನ್ನು ಸ್ಪೂರ್ತಿಗೊಳಿಸಿ ಜಾಗೃತಪಥದಲ್ಲಿ ಸಾಗುವಂತೆ ಮಾಡುವಲ್ಲಿ ಯಶಸ್ವಿಯಾದ ಈರ್ವರು ಮಾರ್ಗದರ್ಶಕರನ್ನು ಜಗತ್ತು ದಾಖಲಿಸಿದೆ. ದೂರದರ್ಶಿತ್ವ ಹೊಂದಿದ್ದ ತನ್ಮೂಲಕ ಆತ್ಮಜಾಗೃತಿಗೆ ಪ್ರೇರಕಶಕ್ತಿಯಾಗಿದ್ದ ಸ್ವಾಮಿ ವಿವೇಕಾನಂದರು ಮೊದಲಿಗರಾದರೆ ಅವರ ತ್ಯಾಗ-ವೈರಾಗ್ಯ ಜೀವನಕ್ಕೆ ಮನಸೋತು, ಮಾತೃಭೂಮಿ ಭಾರತವನ್ನು ದಾಸ್ಯದ ಶೃಂಖಲೆಯಿಂದ ಪಾರು ಮಾಡುವವರೆಗೂ ಯಶಸ್ವಿಯಾಗಿ ಅಹರ್ನಿಶಿ ಹೋರಾಡಿ ಶ್ರಮಿಸಿದ ಸ್ವಾತಂತ್ರ್ಯ ಹೋರಾಟದ ವೀರಸೇನಾನಿ ಸುಭಾಷ್​ಚಂದ್ರ ಬೋಸರು ಎರಡನೆಯವರು.

ಸನಾತನ ಧರ್ಮವು ಮಾನವನ ಅಭ್ಯುದಯದ ದೃಷ್ಟಿಯಲ್ಲಿ ಮುನ್ನೆಲೆಯಲ್ಲಿಟ್ಟ ‘ಬ್ರಹ್ಮತೇಜ’ ಮತ್ತು ‘ಕ್ಷಾತ್ರವೀರ್ಯ’ದ ಮಹಾನ್ ಮೌಲ್ಯಗಳ ಸಾಕ್ಷಾತ್ ಸ್ವರೂಪರಾದ ಇವರೀರ್ವರೂ ಮಾತೃಭೂಮಿಯನ್ನು ಸರ್ವವಿಚಾರಗಳಲ್ಲೂ ಶಕ್ತಗೊಳಿಸಿ ಜಗತ್ತನ್ನು ಬೆರಗುಗೊಳಿಸಿದರಷ್ಟೇ ಅಲ್ಲದೆ ಜಗತ್ತು ಉದ್ಧಾರವಾಗಲು ‘ಯೋಗ್ಯವಾದ ಮಾದರಿ’ಯಾಗಿ ತಮ್ಮ ದೇಶವನ್ನು ಮುಂದಿರಿಸಿದರು. ಸ್ವಾಮಿ ವಿವೇಕಾನಂದರೆಂಬ ‘ಸೂರ್ಯ’ನನ್ನು ಸಾಕ್ಷಾತ್ತಾಗಿ ಕಂಡರಿಯದಿದ್ದರೂ ‘ಕೇಳರಿತು’, ಅವರ ಮಹಾನ್ ಆದರ್ಶದ ದರ್ಪಣದಲ್ಲಿ ತನ್ನನ್ನು ಪ್ರತಿಬಿಂಬಿಸಿಕೊಂಡ ಸುಭಾಷ್​ಚಂದ್ರ ಬೋಸರು ಆತ್ಮೋದ್ಧಾರ ಮತ್ತು ಜಗತ್ತಿನ ಹಿತವನ್ನು ತಮ್ಮ ಜೀವನದಲ್ಲಿ ಸಮಾನಾಂತರವಾಗಿ ಸಾಧಿಸಿ ಕೃತಕೃತ್ಯತೆಯನ್ನು ಮೆರೆದಿದ್ದಾರೆ.

ಭಗವಾನ್ ಶ್ರೀರಾಮಕೃಷ್ಣರು, ‘ಲೋಕಶಿಕ್ಷಣಕ್ಕಾಗಿ ಜಗನ್ಮಾತೆಯಿಂದ ನಿಯೋಜಿಸಲ್ಪಟ್ಟ ತ್ಯಾಗ-ವೈರಾಗ್ಯ ಮೂರ್ತಿ ಇವನು’ ಎಂದು ಸ್ವಾಮಿ ವಿವೇಕಾನಂದರ ಬಗ್ಗೆ ನಿಖರವಾಗಿ ನುಡಿದಿದ್ದರು. ನಿಜಕ್ಕೂ ಇದೊಂದು ಸದಾಶಯ ಅಥವಾ ಭವಿಷ್ಯವಾಣಿ ಎಂದಷ್ಟೇ ಸೀಮಿತ ಪರಿಧಿಯಲ್ಲಿ ವಿಶ್ಲೇಷಿಸದೆ ಅವತಾರವರಿಷ್ಠರೆಂದೇ ಗೌರವಿಸಲ್ಪಡುವ ಶ್ರೀರಾಮಕೃಷ್ಣ ಪರಮಹಂಸರ ದಿಟ್ಟನುಡಿಯ ಗಾಂಭೀರ್ಯಪೂರ್ಣ ಸತ್ಯವಚನವನ್ನಿಲ್ಲಿ ಪರಾಮಶಿಸಬೇಕು.

ಭಾರತದ ‘ನೂತನ ಇತಿಹಾಸದ ನಿರ್ವತೃ’ ಎಂದೆನಿಸಿದ ಸುಭಾಷರು ಆದರ್ಶ ಮಾನವತಾವಾದಿ ಆಗಿದ್ದರು. ಸ್ವಾಮಿ ವಿವೇಕಾನಂದರ ದಿವ್ಯಜೀವನ ಹಾಗೂ ಸಂದೇಶಗಳಿಂದ ಪ್ರಭಾವಿತರಾಗಿದ್ದರು. ಕರ್ಮಸಂನ್ಯಾಸದ ಮೂಲಕ ಭಾರತದ ರಾಜಕೀಯ ಕ್ಷೇತ್ರದಲ್ಲಿ ‘ಧಗಧಗಿಸುವ ವಿವೇಕಾನಂದ’ರಂತೆ ಪ್ರಜ್ವಲಿಸುತ್ತ ಸಾಗಿದವರು. ಸಾವಿಗೂ ಅಂಜದೆ ಅದನ್ನೆದುರಿಸಲು ಸಜ್ಜಾದ ನಚಿಕೇತರಾಗಿದ್ದರು. ಸ್ವಾಮಿ ವಿವೇಕಾನಂದರ ಪವಿತ್ರ ಧ್ಯೇಯಾದರ್ಶಗಳಿಂದ ಆವರಿಸಲ್ಪಟ್ಟಿದ್ದ ಸುಭಾಷರ ಬದುಕಿನಲ್ಲಿ ಸ್ವಾಮೀಜಿ ‘ದಿವ್ಯಶಾಶ್ವತ ಸಂಗಾತಿ’ಯಾದರು. ಆತ್ಮವಿಶ್ವಾಸದ ವಿಷಯದಲ್ಲಿ ಸುಭಾಷ್ ತಮ್ಮ ಸಮಕಾಲೀನ ದಿಗ್ಗಜರೆನಿಸಿದ್ದ ಹಿಟ್ಲರ್, ಮುಸಲೋನಿ, ಟೋಚೋ ಮೊದಲಾದವರನ್ನು ಹಿಂದಿಕ್ಕಿದ್ದರು. ಥಾಯ್ಲ್ಯಾಂಡ್​ನ ಪ್ರಧಾನಿ ಪೀಪುಲ್ ಸೋನೆಗ್ರಾಮ್ವರು ನೇತಾಜಿಯನ್ನು ‘ಬುದ್ಧ’ನಿಗೆ ಹೋಲಿಸಿದ್ದಾರೆ.

ಭಗವಾನ್ ಶ್ರೀರಾಮಕೃಷ್ಣರಿಂದ ಆಧ್ಯಾತ್ಮಿಕ ದೀಕ್ಷೆ ಪಡೆದ ವಿವೇಕಾನಂದರು, ‘ಕಣ್ಣು ಮುಚ್ಚಿ ದೇವರನ್ನು ಕಾಣುವುದಕ್ಕಿಂತ ಕಣ್ಣು ತೆರೆದು ದೇವರನ್ನು ಕಾಣು’ ಎಂಬ ನೂತನ ವೇದಾಂತವನ್ನು ಅರ್ಥೈಸಿಕೊಂಡು ತಮ್ಮ ‘ಬದುಕು ಜಗತ್ತಿನ ಜನರ ಒಳಿತಿಗಾಗಿ’ ಎಂಬ ಸತ್ಯವರಿತು ತ್ಯಾಗ-ವೈರಾಗ್ಯ ಜೀವನಕ್ಕೆ ಪದಾರ್ಪಣೆಗೈದರು.

ಪಾಶ್ಚಾತ್ಯ ರಾಷ್ಟ್ರಗಳಲ್ಲಿ ದಿಗ್ವಿಜಯ ಸಾಧಿಸಿ ಸ್ವಾಮಿ ವಿವೇಕಾನಂದರು ಮಾತೃಭೂಮಿಯ ಮೇಲೆ ಪದಾರ್ಪಣೆಗೈದಾಗ (1897ರ ಜನವರಿ 26) ಸುಭಾಷ್ ಮೂರು ದಿನಗಳ ಶಿಶು. ತಾಯಿ ಪ್ರಭಾವತಿ ದೇವಿ ‘ಶ್ರೀರಾಮಕೃಷ್ಣ ಕಥಾಮೃತ’ ಸದ್ಗ›ಂಥದ ಉಪಾಸಕಳಾಗಿದ್ದಳು. ತಂದೆ ಜಾನಕಿನಾಥ ಬೋಸ್ ಮಗನ ಬದುಕನ್ನು ರೂಪಿಸುವಲ್ಲಿ ವಿಶೇಷ ಪಾತ್ರ ವಹಿಸಿದರು.

ಶಾಲಾ ಮುಖ್ಯ ಶಿಕ್ಷಕ ವೇಣಿ ಮಾಧವದಾಸ್, ಧುರೀಣರಾದ ಚಿತ್ತರಂಜನ್ ದಾಸ್ ಮತ್ತು ರವೀಂದ್ರನಾಥ ಟ್ಯಾಗೋರ್ ಸುಭಾಷರ ವ್ಯಕ್ತಿತ್ವದ ಮೇಲೆ ಮತ್ತು ಸ್ವಾಮಿ ವಿವೇಕಾನಂದರು ಒಂದಿಷ್ಟು ಪ್ರಭಾವ ಬೀರಿದ್ದರಾದರೂ ‘ಯುಗಪ್ರವಾದಿ ಶ್ರೀರಾಮಕೃಷ್ಣರು, ಯುಗಮಾತೆ ಶ್ರೀಶಾರದಾದೇವಿ ಮತ್ತು ಯುಗನೇತಾರ ಸ್ವಾಮಿ ವಿವೇಕಾನಂದರಿಂದ ನನ್ನ ಬದುಕಿಗೆ ಉತ್ಸಾಹಪೂರಿತ ಧ್ಯೇಯಾದರ್ಶಗಳ ಬೆಂಬಲ ದೊರಕಿತು’ ಎಂದಿದ್ದಾರೆ ಸುಭಾಷ್.

ಮೆಕಾಲೆಯ ‘ದ ಹಿಸ್ಟರಿ ಆಫ್ ಇಂಗ್ಲೆಂಡ್’ ಎಂಬ ಪುಸ್ತಕವನ್ನು ಆಮೂಲಾಗ್ರವಾಗಿ ಅಧ್ಯಯನಗೈದಿದ್ದ ಸುಭಾಷ್ ಎಂಟೇ ತಿಂಗಳ ಪರಿಶ್ರಮದ ಅಧ್ಯಯನದಿಂದ ಐಸಿಎಸ್ ಪರೀಕ್ಷೆಯಲ್ಲಿ ನಾಲ್ಕನೇ ರ್ಯಾಂಕ್ ಪಡೆದರು. ಹದಿನೆಂಟನೇ ವಯಸ್ಸಿನಲ್ಲಿ ತರುಣ ಸುಭಾಷ್ ಹೇಳಿದ್ದುಂಟು: "My life is not meant for enjoyment, my life is a mission, a duty’

ಧ್ಯೇಯನಿಷ್ಠ ಜೀವನಾದರ್ಶ: ಸ್ವಾಮಿ ವಿವೇಕಾನಂದರು ಧರ್ಮ-ಅಧ್ಯಾತ್ಮವನ್ನು ಸಾಮಾಜಿಕ ಬದುಕಿಗೆ ಹತ್ತಿರವಾಗಿಸಿದವರು. ‘"Brave, bold men, these are what we want, what we want is, vigour in the blood, strength in the nerves, iron muscles and nerves of steel, not softening namby-pamby ideas - Avoid all these. Avoid all miseries... your country requires heroes; be heroes....' ಮತ್ತು ಸ್ವಾಮಿ ವಿವೇಕಾನಂದರು ಪ್ರತಿಪಾದಿಸಿದ ‘ನಿರ್ಭಯತೆ’ಯ ಮಹಾಮೌಲ್ಯಕ್ಕೆ ಸುಭಾಷ್ ಜ್ವಲಂತ ಉದಾಹರಣೆಯಾದರು.

ಸ್ತ್ರೀಯರ ಶಿಕ್ಷಣ: ‘ಸಮಾಜದ ಅರ್ಧದಷ್ಟಿರುವ ಸ್ತ್ರೀಯರನ್ನು ನಿರ್ಲಕ್ಷಿಸಿದ್ದೇ ಭಾರತದ ಅವನತಿಗೆ ಕಾರಣವಾಯಿತು. ಹಿಂದಿನ ನಾಗರಿಕತೆಗಳನ್ನು ಪುರುಷರು ನಿರ್ವಿುಸಿದರೆ ಮುಂದಿನ ನಾಗರಿಕತೆಗಳನ್ನು ಸ್ತ್ರೀಯರು ನಿರ್ವಿುಸುತ್ತಾರೆ’ ಎಂಬ ವಿವೇಕವಾಣಿಯು ಸುಭಾಷರ ಬದುಕಿನಲ್ಲಿ ಮಹತ್ವಪೂರ್ಣ ಪ್ರಭಾವ ತಂದಿತು. ಸ್ತ್ರೀಯರ ಅಭ್ಯುದಯಕ್ಕೆ ಅವರಿತ್ತ ಸಲಹೆಗಳು: ‘ಬಾಲ್ಯವಿವಾಹ ಮತ್ತು ಬಹುಪತ್ನಿತ್ವ ಪದ್ಧತಿಯ ನಿಷೇಧ, ಸ್ತ್ರೀಯರು ಆಜನ್ಮಬ್ರಹ್ಮಚಾರಿಣಿಯರಾಗಿ ಜೀವಿಸಲು ಹಕ್ಕು, ಕಡ್ಡಾಯ ಶಿಕ್ಷಣ, ಘೊಷಾ ಪದ್ಧತಿಯನ್ನು ನಿಷೇಧಿಸುವುದು, ಸ್ತ್ರೀಯರಿಗೆ ಅಂಗಸಾಧನೆ, ಲಾಠಿ ಬೀಸುವ ಕಲೆ ಮತ್ತು ಕತ್ತಿ ವರಸೆ ಇವುಗಳಲ್ಲಿ ತರಬೇತಿ ನೀಡುವುದು, ವಿಧವಾ ವಿವಾಹಕ್ಕೆ ಅನುಮತಿ, ಜೀವನಾವಶ್ಯಕತೆಗಳನ್ನು ಪೂರೈಸುವುದರೊಂದಿಗೆ ಸ್ವಾವಲಂಬನೆಯನ್ನೊದಗಿಸುವ ಶಿಕ್ಷಣ, ಸ್ತ್ರೀಯರಿಗೂ ಪುರುಷರಂತೆ ಹಕ್ಕು ಮತ್ತು ಗೌರವಗಳನ್ನೀಯುವುದು, ಪುರುಷ-ಸ್ತ್ರೀಯರ ವೈವಾಹಿಕ ವಯಸ್ಸನ್ನು ಹೆಚ್ಚಿಸುವುದು ಹಾಗೂ ವರದಕ್ಷಿಣಾ ಪದ್ಧತಿಯನ್ನು ನಿಯಂತ್ರಿಸುವುದೇ’ ಮೊದಲಾದವು.

ದೇಶವನ್ನು ಪರಕೀಯರ ದುರಾಡಳಿತದಿಂದ ಮುಕ್ತಗೊಳಿಸಲು ಸುಭಾಷ್​ರು ಸ್ಥಾಪಿಸಿದ ಇಂಡಿಯನ್ ನ್ಯಾಷನಲ್ ಆರ್ವಿುಯಲ್ಲಿ ‘ರಾಣಿ ಝಾನ್ಸಿ ವಾಹಿನಿ’ ಎಂಬ ಸ್ತ್ರೀಯರಿಗೆ ಮೀಸಲಾದ ವಿಭಾಗದಲ್ಲಿ ಶಸ್ತ್ರ ತರಬೇತಿ ಪಡೆದಿದ್ದ ಐದುನೂರು ಸ್ತ್ರೀಯರು ಸೇವೆ ಸಲ್ಲಿಸುತ್ತಿದ್ದರು.

ಸಮಾಜಸೇವೆ: ದಾನ ಮಾಡಬೇಕಾದ ಅನಿವಾರ್ಯತೆಯ ಒತ್ತಡದಲ್ಲಿ ದಾನ ಮಾಡುವ ಪ್ರಕ್ರಿಯೆಯು ವಿವೇಕಜನ್ಯವಾಗದು. ಸಹಾಯ ಪಡೆದ ಬಡವರು ಪ್ರತಿಯಾಗಿ ಯಾವುದಾದರೊಂದು ಉತ್ತಮ ಮಾರ್ಗದಲ್ಲಿ ಶ್ರಮಿಸಿ ನೆರವನ್ನು ಮರುಪಾವತಿಸುವ ಜೀವನ ಕಲೆಯನ್ನು ಅವರಿಗೆ ಮನವರಿಕೆ ಮಾಡಿಕೊಡದಿದ್ದಲ್ಲಿ ನಾವು ಅವರುಗಳ ಆತ್ಮಗೌರವಕ್ಕೆ ಧಕ್ಕೆ ತಂದಂತೆ! ಎಂದು ಸುಭಾಷರು ಎಚ್ಚರಿಸಿದ್ದಾರೆ.

ಸ್ವಾಮಿ ವಿವೇಕಾನಂದರ, ‘ದೀನರು, ದರಿದ್ರರು, ಅಶಕ್ತರು, ರೋಗಿಗಳು ನಿಮ್ಮ ದೇವರಾಗಲಿ’ ಎಂಬ ಸಂದೇಶದಿಂದ ಪ್ರೇರಣೆಗೊಂಡ ಸುಭಾಷ್ ಹೇಳುತ್ತಾರೆ: ‘ನಾವಿಂದು ಅಸ್ಪೃ್ಯತೆಯನ್ನು ನಿರ್ದಾಕ್ಷಿಣ್ಯವಾಗಿ ತ್ಯಜಿಸಿ ನಿರ್ಲಕ್ಷಿತರನ್ನು ನಮ್ಮ ಸ್ವಂತದವರೆಂದರಿತು ಸೇವೆಗೈಯ್ಯಬೇಕಿದೆ. ಇಲ್ಲಿಯವರೆಗೆ ನಿದ್ರಿಸುತ್ತಿದ್ದ ನಮ್ಮ ದೇವರುಗಳು ಇದೀಗ ಜಾಗೃತಗೊಂಡಿರುವುದು ಶ್ರೀಮಂತರಲ್ಲಲ್ಲ, ಅನುಕೂಲಸ್ಥರಲ್ಲಲ್ಲ! ನಿರ್ಲಕ್ಷಿತರಲ್ಲಿ!! ಅವರುಗಳನ್ನು ದೇವರುಗಳೆಂದೆಣಿಸಿ ಸೇವೆಗೈಯ್ಯೋಣ’.

‘ಬ್ರಿಟಿಷರ ಸೋಗಿನ ಸೇವಾ ಚಟುವಟಿಕೆಗಳು ಭಾರತದ ಕಲೆ, ಕೈಗಾರಿಕಾ ಕ್ಷೇತ್ರಗಳನ್ನು ನಾಶಮಾಡಿತಲ್ಲದೆ ಭಾರತೀಯ ರೈತರಿಗೆ ವೈಜ್ಞಾನಿಕ ದೃಷ್ಟಿಕೋನವನ್ನೀಯದೆ ರೈತರನ್ನು ಮತ್ತಷ್ಟು ಬಡತನದತ್ತ ದೂಡಿದ್ದು ಅಮಾನವೀಯ. ಬಡತನ ನಿಮೂಲನೆ ಮತ್ತು ನಿರುದ್ಯೋಗ ಸಮಸ್ಯೆಯ ನಿವಾರಣೆ ಇಂದು ಭಾರತೀಯರ ತುರ್ತು ಅಗತ್ಯತೆಗಳಾಗಿವೆ. ಬ್ರಿಟಿಷರ ಆಗಮನಕ್ಕೆ ಮೊದಲು ಜಗತ್ತಿನ ಶ್ರೀಮಂತ ರಾಷ್ಟ್ರಗಳಲ್ಲಿ ತನ್ನನ್ನು ಗುರುತಿಸಿಕೊಂಡಿದ್ದ ಭಾರತವಿಂದು ಬಡರಾಷ್ಟ್ರದ ಪಂಕ್ತಿ ಸೇರಿದೆ! ನೈಸರ್ಗಿಕವಾಗಿಯೂ ನಮ್ಮದು ಬಡರಾಷ್ಟ್ರವಲ್ಲ! ಬ್ರಿಟಿಷರ ದರೋಡೆ, ದಬ್ಬಾಳಿಕೆಯ ಪ್ರವೃತ್ತಿಗಳು ಭಾರತವನ್ನು ಬಡರಾಷ್ಟ್ರವಾಗಿಸಿದೆ! ಭಾರತವು ಬಡರಾಷ್ಟ್ರವಾಗಿದ್ದು ಹುಟ್ಟಿನಿಂದಲ್ಲ, ಬ್ರಿಟಿಷರ ಹುನ್ನಾರದಿಂದ!’ ಎಂದಿದ್ದಾರೆ ಸುಭಾಷ್.

‘ಒಗ್ಗಟ್ಟು, ನಿಷ್ಠೆ ಮತ್ತು ತ್ಯಾಗ’- ಈ ಆದರ್ಶಗಳ ಮೇಲೆ ರೂಪುಗೊಂಡ ಇಂಡಿಯನ್ ನ್ಯಾಷನಲ್ ಆರ್ವಿುಯ ಸ್ಥಾಪಕರಾದ ಸುಭಾಷ್​ರು,"Be Bold, you are born to lead... stick to your guns, dead or alive' ಎಂದು ಎಚ್ಚರಿಸುತ್ತಾರೆ. ‘ಸಾಹಸವಿಲ್ಲದ, ಆದರ್ಶ ಒಲ್ಲದ ಜೀವನವು ಜೀವನವೇ ಅಲ್ಲ. ನಾನು ಏನನ್ನಾದರೂ ಸಹಿಸಬಲ್ಲೆ, ಆದರೆ ಹೇಡಿಗಳನ್ನು ಕಂಡಾಗ ನನ್ನ ರಕ್ತ ಕುದಿಯುತ್ತದೆ!’ ಎಂದರು.

ಪ್ರಾತಃಸ್ಮರಣೀಯ: ಎರಡನೇ ವಿಶ್ವಯುದ್ಧ ಸಾಗುತ್ತಿರುವ ಸಂದರ್ಭದಲ್ಲೇ ಸುಭಾಷ್ ಆಗಿಂದಾಗ್ಗೆ ಸಿಂಗಾಪುರ ಹಾಗೂ ರಂಗೂನ್ ರಾಮಕೃಷ್ಣಾಶ್ರಮಗಳಲ್ಲಿ ಭಗವಾನ್ ಶ್ರೀರಾಮಕೃಷ್ಣರ ಮೂರ್ತಿಯ ಮುಂದೆ ಧ್ಯಾನಸ್ಥರಾಗುತ್ತಿದ್ದರು. ಕೋಲ್ಕತ್ತಾದ ರಾಮಕೃಷ್ಣ ಮಿಷನ್​ನ ಸ್ಟೂಡೆಂಟ್ಸ್ ಹೋಮ್ ಸೇವಾಪ್ರತಿಷ್ಠಾನ ಮತ್ತು

ದೇವಘರ್​ನ ವಿದ್ಯಾಪೀಠಗಳ ಸೇವಾಕಾರ್ಯಗಳನ್ನು ಮುಕ್ತಕಂಠದಿಂದ ಶ್ಲಾಘಿಸಿ, ಆರ್ಥಿಕ ಸಹಾಯವಿತ್ತು ಧನ್ಯತೆ ಮೆರೆದಿದ್ದಾರೆ.

ಚಿತ್ತರಂಜನ್ ದಾಸರ ಮರಣಾನಂತರ ಇಡೀ ದೇಶದಲ್ಲಿ ಎಮ್​ಕೆ.ಗಾಂಧಿಯವರಿಗೆ ಪರ್ಯಾಯ ಶಕ್ತಿ ಎನ್ನಿಸಿದವರು ಸುಭಾಷ್ ಒಬ್ಬರೇ! 1934ರಲ್ಲಿ ಗಾಂಧಿಯವರ ಬೆಂಬಲದಿಂದ ಮತ್ತು 1939ರಲ್ಲಿ ಗಾಂಧಿಯವರ ವಿರೋಧದ ನಡುವೆಯೂ ರಾಷ್ಟ್ರೀಯ ಕಾಂಗ್ರೆಸ್​ನ ಅಧ್ಯಕ್ಷರಾಗಿದ್ದರು. ಸಮಾಜಸೇವೆ ಅವರಿಗೆ ಅದೆಷ್ಟು ಹಿತವೆನಿಸಿತ್ತೆಂದರೆ, ‘ನಾನು ಕಾಂಗ್ರೆಸ್​ನನ್ನಾದರೂ ತ್ಯಜಿಸುವೆ ಆದರೆ ಸೇವಾಶ್ರಮದ ಕಾರ್ಯವನ್ನು ಮಾತ್ರ ತ್ಯಜಿಸಲಾರೆ’ ಎಂದಿದ್ದರು. ‘ರಾಮಕೃಷ್ಣ-ವಿವೇಕಾನಂದರು ಪ್ರತಿಪಾದಿಸಿದ ಸರ್ವಧರ್ಮ ಸಮನ್ವಯ ತತ್ತಾ ್ವುಷ್ಠಾನ ಮಾತ್ರದಿಂದಷ್ಟೇ ಭಾರತವು ಸ್ವಾತಂತ್ರ್ಯ ಪಡೆದು ಮುನ್ನಡೆಯಲು ಸಾಧ್ಯ’ ಎಂದಿದ್ದಾರೆ ಸುಭಾಷ್.

‘ನೀವು ಜಪಾನಿಗೆ ಹೋಗಿ ನಿಮ್ಮ ಕೆಲಸವನ್ನು ಮುಂದುವರಿಸಬಹುದು. ಆದರೆ ಮಾರ್ಗವಂತೂ ದುರ್ಗಮವಾಗಿದೆ. ನಿಮ್ಮ ಜೀವವು ಸುರಕ್ಷಿತವೆಂದು ನಾವು ಭರವಸೆ ನೀಡಲಾಗದು’ ಎಂದು ಜಪಾನ್ ಸುಭಾಷ್​ರನ್ನು ಎಚ್ಚರಿಸಿದಾಗ ಅವರು, ‘ನನ್ನ ಪ್ರಾಣವು ಭಾರತಮಾತೆಯ ಪವಿತ್ರ ಪದತಲದಲ್ಲಿ ಸಮರ್ಪಿತವಾಗಬಹುದಾದರೆ ಮುಂದಿಟ್ಟ ಹೆಜ್ಜೆಯನ್ನು ಹಿಂದೆ ಸರಿಸೆನು! ಯಾವ ಘೊರ ಸನ್ನಿವೇಶಕ್ಕೂ ನಾನು ತಲೆಕೊಡಲು ಸಿದ್ಧ’ ಎಂದರು.

ಎರಡನೇ ಮಹಾಯುದ್ಧದಲ್ಲಿ ಬ್ರಿಟಿಷ್ ಸೇನಾ ದಂಡನಾಯಕರಾಗಿದ್ದ ಮತ್ತು ತದನಂತರದಲ್ಲಿ ಬ್ರಿಟಿಷ್ ಪ್ರಧಾನ್ ಆಗಿದ್ದ ಜನರಲ್ ಆಟ್ಲೀ ಹೇಳಿದ್ದು ಹೀಗೆ: ‘ಸುಭಾಷರ ಪ್ರಭಾವದಿಂದ ಬ್ರಿಟಿಷರು ಭಾರತದಲ್ಲಿ ಸೇನಾದಳ ಮತ್ತು ನೌಕಾದಳಗಳ ಮೇಲಿನ ಹಿಡಿತವನ್ನು ಕಳೆದುಕೊಂಡಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಬರಲು ಹೆಚ್ಚಿನ ಪ್ರಭಾವ ನಿಸ್ಸಂದೇಹವಾಗಿ ಸುಭಾಷರೇ ಕಾರಣ. ನೀವು ಕೇಳಬಹುದು ಹಾಗಾದರೆ ಗಾಂಧಿಯವರ ಕ್ವಿಟ್ ಇಂಡಿಯಾ ಮೂಮೆಂಟ್​ನ ಪ್ರಭಾವವೇನು? ಎಂದು. ಅದರ ಪ್ರಭಾವ Minimal' ಎಂದು.

ಶ್ರೀರಾಮಕೃಷ್ಣರ ನೇರ ಶಿಷ್ಯರಾದ ತುರೀಯಾನಂದರು ಹೇಳುತ್ತಾರೆ: ‘ಮನುಷ್ಯನೇ, ಸಂತಮಹಾತ್ಮರ ಸಾನ್ನಿಧ್ಯವನ್ನು ಪಡೆದುಕೋ. ಅವರ ದಿವ್ಯಸಂದೇಶಗಳನ್ನು ಅಧ್ಯಯನ ಮಾಡು. ಅವರನ್ನೇ ಕುರಿತು ಆಲೋಚಿಸುತ್ತ ಜೀವಿಸು. ಏಕೆಂದರೆ Mind Controls Mind!'ಸುಭಾಷರ ಜೀವನವು ಈ ವಾಣಿಗೆ ಜ್ವಲಂತ ಉದಾಹರಣೆ. ತಾನು ಕಂಡರಿಯದ, ಆದರೆ ಕೇಳರಿತ ಮತ್ತು ಅವರನ್ನೇ ಅನುಸರಿಸುವುದರ ಮೂಲಕ ಸ್ವಾಮಿ ವಿವೇಕಾನಂದರ ದಿವ್ಯಾಶೀರ್ವಾದಗಳಿಗೆ ಸತ್ಪಾತ್ರರಾದ ಸುಭಾಷ್ ಇಂದು ಪ್ರಾತಃಸ್ಮರಣೀಯರು. ಅವರೊಬ್ಬ ಹುಟ್ಟಾ ಭಾರತರತ್ನ, ವಿವೇಕಾನಂದರ ಅಧ್ಯಾತ್ಮ ಸುತ. ವಿವೇಕಾನಂದರು ‘ಸೂರ್ಯ’ನಾದರೆ ಅವರಲ್ಲಿ ಪ್ರತಿಫಲನಗೊಂಡವರೇ ನಮ್ಮ ಸುಭಾಷ‘ಚಂದ್ರ’!

(ಲೇಖಕರು ತುಮಕೂರು ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net