ಅರಿಶಿಣ ಕೃಷಿ, ಲಾಭದ ಖುಷಿ..

Turmeric 1
Published on

| ಜಿ.ಚಂದ್ರಕಾಂತ ಕಲಬುರಗಿ

ಬಿಸಿಲನಾಡು ಕಲಬುರಗಿಯಲ್ಲಿ ಮಳೆ ಬಂತೆಂದರೆ ರೈತರಿಗೆ ಎಲ್ಲಿಲ್ಲದ ಸಂಭ್ರಮ. ತೊಗರಿ ಪ್ರಧಾನ ಬೆಳೆಯಾಗಿರುವ ಜಿಲ್ಲೆ ‘ತೊಗರಿ ಕಣಜ’ ಎಂದೇ ಪ್ರಸಿದ್ಧಿಯಾಗಿದೆ. ಇಂತಹ ಜಿಲ್ಲೆಯಲ್ಲಿ ರೈತರೊಬ್ಬರು ಅರಿಶಿಣ ಬೆಳೆದು, ಕೈತುಂಬಾ ಲಾಭ ಗಳಿಸಿ ಬದುಕು ಹಸನಾಗಿಸಿಕೊಂಡಿದ್ದಾರೆ.

ಕಲಬುರಗಿ ತಾಲೂಕು ಹಾಗರಗಾ ಗ್ರಾಮದ ನಲವತ್ತೆರಡು ವರ್ಷ ವಯೋಮಾನದ ರೈತ ಲಕ್ಷ್ಮೀಕಾಂತ ಹಿಬಾರೆ ಅವರೇ ಈ ಸಾಧಕ. ತನ್ನ ಮೂರೂವರೆ ಎಕರೆ ಬರಡು ಭೂಮಿಯಲ್ಲಿ ಈತ ಸಹಜ ಮತ್ತು ನೈಸರ್ಗಿಕ ಅರಣ್ಯ-ಕೃಷಿ ಕೈಗೊಂಡು ಪರಿಶುದ್ಧ ಔಷಧಯುಕ್ತ ಅರಿಶಿಣವನ್ನು ಮಿಶ್ರ ಬೆಳೆಯಾಗಿ ಬೆಳೆದು ಲಾಭ ಕಂಡುಕೊಂಡಿದ್ದಾರೆ.

ಕೃಷಿ ವಿಜ್ಞಾನ ಕೇಂದ್ರದ ತಂತ್ರಜ್ಞರ ಮಾರ್ಗದರ್ಶನದಂತೆ ಲಕ್ಷ್ಮೀಕಾಂತ, ಅರಿಶಿಣ ಬೇಸಾಯಕ್ಕಾಗಿ ಸೇಲಂ ತಳಿಯ ಅರಿಶಿಣ ಬೀಜದ ಗಡ್ಡೆಗಳನ್ನು ಪ್ರತಿ ಕೆ.ಜಿ.ಗೆ 40 ರೂ.ನಂತೆ 600 ಕೆ.ಜಿ. ತಂದು, ನೈಸರ್ಗಿಕ ಮತ್ತು ಜೈವಿಕ ಗೊಬ್ಬರಗಳಿಂದ ಹದಗೊಳಿಸಿದ ಭೂಮಿಯಲ್ಲಿ 3 ಅಡಿಯ ಏರು ಮಡಿಗಳನ್ನು ಮಾಡಿ, ಸಾಲಿನಿಂದ ಸಾಲಿಗೆ 8 ಅಡಿ ಹಾಗೂ ಬೀಜದಿಂದ ಬೀಜಕ್ಕೆ 1.5 ಅಡಿ ಅಂತರದಲ್ಲಿ 2021ರ ಮೇ ತಿಂಗಳಲ್ಲಿ ನಾಟಿ ಮಾಡಿದರು. ಇದಕ್ಕಾಗಿ ಇವರು ವೆಚ್ಚ ಮಾಡಿದ್ದು ಒಂದು ಲಕ್ಷ ರೂ.

ಹನಿ ನೀರಾವರಿಯಿಂದ ವಾರಕ್ಕೊಮ್ಮೆ ನೀರುಣಿಸುವ ಇವರು, ಅರಿಶಿಣ ಬೆಳೆಗೆ ತಗಲುವ ರೋಗಗಳ ತಡೆಗಾಗಿ ಬೇವಿನೆಣ್ಣೆ, ಟ್ರೈಕೋಡರ್ವ ಮುಂತಾದವನ್ನು ಬಳಸುತ್ತಿದ್ದಾರೆ. ಲಘು ಪೋಷಕಾಂಶ(ಮೈಕ್ರೋ ನ್ಯೂಟ್ರಿಯೆಂಟ್)ಗಳಿಗೆ ಪ್ರಾಶಸ್ತ್ಯ ನೀಡಿದ್ದರಿಂದ ಒಂದೊಂದು ಗಿಡ 6 ಅಡಿಗಿಂತ ಹೆಚ್ಚು ಎತ್ತರ ಸಮೃದ್ಧವಾಗಿ ಬೆಳೆದಿವೆ. ಮೊದಲ ಬೆಳೆಯನ್ನು 10 ತಿಂಗಳಿಗೆ ಕಟಾವು ಮಾಡಲಾಗಿದ್ದು, ಒಂದೂವರೆ ಟನ್ ಇಳುವರಿ ಬಂದಿದೆ.

ಲಕ್ಷ್ಮೀಕಾಂತ ಹಿಬಾರೆ ಬೆಳೆದ ಅರಿಶಿಣವನ್ನು ಭಾರತ ಸರ್ಕಾರದ ಪ್ರಯೋಗಾಲಯದಲ್ಲಿ ಪರೀಕ್ಷೆಗೊಳಪಡಿಸಿದಾಗ ಅದರ ಪ್ರಮುಖ ಅಂಶವಾದ ಕರ್ಕ್ಯುಮಿನ್ ಶೇ.3.66 ಇರುವುದು ದೃಢಪಟ್ಟಿದೆ. ಇದಕ್ಕೆ ಶ್ರೀಗಂಧದ ಆಶ್ರಯದಲ್ಲಿ ಅರಿಶಿಣ ಬೆಳೆದಿರುವುದೇ ಪ್ರಮುಖ ಕಾರಣವಾಗಿದೆ. ಇದು ಕ್ಯಾನ್ಸರ್ ಮತ್ತಿತರ ರೋಗಗಳಿಗೆ ರಾಮಬಾಣವಾಗಿದೆ.

ಅರಿಶಿಣ ಪುಡಿ ತಯಾರಿ: ಪುಡಿ ತಯಾರಿಕೆಗಾಗಿ ಎಲ್ಲ ಅರಿಶಿಣ ಕೊಂಬುಗಳನ್ನು ನೀರಿನಲ್ಲಿ ಚೆನ್ನಾಗಿ ತೊಳೆದು ಇತ್ತೀಚಿನ ತಂತ್ರಜ್ಞಾನದಂತೆ ಕುದಿಸಿ ಒಂದು ತಿಂಗಳ ಕಾಲ ಒಣಗಿಸುವರು. ನಂತರ ಪುಡಿ ತಯಾರಿಕಾ ಯಂತ್ರಗಳಲ್ಲಿ ಹಾಕಿ ಪುಡಿ ಮಾಡಿಸುವರು. ಬಳಿಕ 250 ಗ್ರಾಂ, 500 ಗ್ರಾಂ ಮತ್ತು ಒಂದು ಕೆ.ಜಿ. ಪ್ಯಾಕ್​ಗಳಾಗಿ ಮಾಡಿ, ರಾಜ್ಯದ ಮತ್ತು ನೆರೆಯ ಮಹಾರಾಷ್ಟ್ರದ ಪ್ರಮುಖ ನಗರಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಈವರೆಗೆ 700ಕೆ.ಜಿ. ಅರಶಿಣ ಪುಡಿ ಮಾಡಿದ್ದು, 2 ಲಕ್ಷ ರೂ. ಆದಾಯ ನಿರೀಕ್ಷಿಸಿದ್ದಾರೆ.

ಪ್ರಾಚೀನ ಕಾಲದಿಂದಲೂ ಅರಿಶಿಣವನ್ನು ಸೌಂದರ್ಯವರ್ಧಕ, ಔಷಧ ಮತ್ತು ಎಲ್ಲ ಧಾರ್ವಿುಕ ಕಾರ್ಯಗಳಲ್ಲಿಯೂ ಬಳಸಲಾಗುತ್ತಿದೆ. ಅರಿಶಿಣ ಕೆಲವು ರೋಗಗಳು ಬಾರದಂತೆ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಈ ಬೇಸಾಯದ ಬಗ್ಗೆ ಜನಜಾಗೃತಿ ಮೂಡಿಸಬೇಕಾಗಿದೆ ಎನ್ನುತ್ತಾರೆ ಲಕ್ಷ್ಮೀಕಾಂತ ಹಿಬಾರೆ.

ಕೃಷಿಯಲ್ಲೂ ಮುಂದು: ಲಕ್ಷ್ಮೀಕಾಂತ ಕಳೆದ 10 ವರ್ಷದಿಂದ ಅರಣ್ಯ-ಕೃಷಿಯಲ್ಲಿ ತೊಡಗಿದ್ದಾರೆ. ಇವರ ಹೊಲದಲ್ಲಿ ಬೆಳೆದಿರುವ ಅರಣ್ಯ ಮತ್ತು ತೋಟಗಾರಿಕೆಯ ಬಗೆಬಗೆಯ 3,875 ಗಿಡಗಳಿಗೆ ಈಗ ನಾಲ್ಕು ವರ್ಷವಾಗಿದ್ದು, ಅರಣ್ಯ ಪ್ರದೇಶದ ಅನುಭವ ನೀಡುತ್ತಿವೆ. ಶ್ರೀಗಂಧ ಮತ್ತು ರಕ್ತಚಂದನದ ಸಾಲುಗಳ ಮಧ್ಯೆ ವಿವಿಧ ಮಿಶ್ರಬೆಳೆಗಳನ್ನೂ ಬೆಳೆದು ಲಾಭ ಗಳಿಸುತ್ತಿದ್ದಾರೆ. ಅರಣ್ಯ-ಕೃಷಿ ಸಾಧನೆಗಾಗಿ 2022ರ ಜ.26ರಂದು ಕೃಷಿ ಪಂಡಿತ ಪ್ರಶಸ್ತಿಯಲ್ಲದೆ, ಹಲವು ಸಂಘ-ಸಂಸ್ಥೆಗಳ ಪ್ರಶಸ್ತಿ-ಗೌರವಗಳಿಗೆ ಭಾಜನರಾಗಿದ್ದಾರೆ.

(ಲೇಖಕರು: ನಿವೃತ್ತ ಉಪನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net