

| ಕಾಂತರಾಜ್ ಹೊನ್ನೇಕೋಡಿ ಸಕಲೇಶಪುರ
ಎರಡು ಗುಂಟೆ ಜಾಗದಲ್ಲಿ ಹೆಚ್ಚು ಕಷ್ಟವಿಲ್ಲದೆ ವಾರ್ಷಿಕ ಎರಡು ಲಕ್ಷ ರೂ. ಸಂಪಾದನೆ! ಹೌದು. ಇದು ಆಶ್ಚರ್ಯವಾದರೂ ಸತ್ಯ. ಇಂತಹ ಕಮಾಲ್ ಮಾಡುತ್ತಿರುವುದು ತಾಲೂಕಿನ ಬ್ಯಾಕರವಳ್ಳಿ ಗ್ರಾಮದ ಮಂಜುನಾಥ್. ಇಪ್ಪತ್ತು ವರ್ಷಗಳಿಂದ ವೆನಿಲ್ಲಾ ಬೆಳೆಯುತ್ತಿರುವ ಮಂಜುನಾಥ್, ಕೇವಲ ಎರಡು ಗುಂಟೆ ಜಮೀನಿನಲ್ಲಿ ವಾರ್ಷಿಕ ಎರಡು ಲಕ್ಷ ರೂ.ಗಳಿಗೂ ಅಧಿಕ ಸಂಪಾದನೆ ಮಾಡುತ್ತಿದ್ದಾರೆ. ಮನೆಯ ಸುತ್ತಮುತ್ತಲಿನ ಖಾಲಿ ಜಾಗ ಹಾಗೂ ಕಾಫಿ ತೋಟದ ಗಿಡಗಳ ಮಧ್ಯೆ 250 ವೆನಿಲ್ಲಾ ಬಳ್ಳಿಗಳನ್ನು ನಾಟಿ ಮಾಡಿದ್ದು, ನಾಟಿ ಮಾಡಿದ ಎರಡು ವರ್ಷದಿಂದಲೇ ಫಸಲು ಬಿಡಲು ಆರಂಭಿಸಿದ ನಿರಂತರವಾಗಿ ಯಾವುದೇ ಖರ್ಚಿಲ್ಲದೆ ಲಾಭ ಗಳಿಸುತ್ತಿದ್ದಾರೆ.
ನಿರ್ವಹಣೆ: ಬಳ್ಳಿಗಳಿಗೆ ಕೊಟ್ಟಿಗೆ ಗೊಬ್ಬರ, ಕುರಿಗೊಬ್ಬರ ಹಾಗೂ ಒಣ ಎಲೆಗಳು ಪ್ರಮುಖ ಪೋಷಕಾಂಶ. ಬೆಳೆಗಳಿಗೆ ಯಾವುದೇ ರೋಗಬಾಧೆ ಕಾಡದಿದ್ದರೂ ಮುಂಜಾಗ್ರತಾ ಕ್ರಮವಾಗಿ ವಾರ್ಷಿಕವಾಗಿ ಒಮ್ಮೆ ಮಾತ್ರ ಮೈಲತುತ್ತು ಸುಣ್ಣ ಬೆರಸಿ ಔಷಧ ಸಿಂಪಡಣೆ ಮಾಡಿದರೆ ಬೇರೆ ಯಾವ ಖರ್ಚಿಲ್ಲ. ಬಳ್ಳಿಯ ಹೂವುಗಳಿಗೆ ಸ್ವಯಂ ಪರಾಗಸ್ಪರ್ಶ ಸಾಧ್ಯವಿಲ್ಲದ ಕಾರಣ ಕೈಯಿಂದಲೇ ಪರಾಗಸ್ಪರ್ಶ ಮಾಡಿಸುವುದೊಂದೇ ಈ ಬೆಳೆಯಲ್ಲಿ ಕಷ್ಟದ ಕೆಲಸ ಎನ್ನುತ್ತಾರೆ ಮಂಜುನಾಥ್. ಪ್ರತಿ ಬಳ್ಳಿಯಲ್ಲಿ 10 ಗ್ರಾಂನಿಂದ 3 ಕೆ.ಜಿ.ವರೆಗೆ ಇಳುವರಿ ಪಡೆಯಬಹುದಾಗಿದೆ. ಅಡಕೆ ಮರಗಳಿಗೆ ವೇಗವಾಗಿ ಹಬ್ಬುವುದರಿಂದ ಮೆಣಸಿನ ಬಳ್ಳಿಗಳಿಗೆ ಪರ್ಯಾಯವಾಗಿ ವೆನಿಲ್ಲಾ ಬೆಳೆಯಬಹುದು ಎಂಬುದು ಇವರ ಕಿವಿಮಾತು. ಮಾರ್ಚ್ನಿಂದ ಮೇ ಅಂತ್ಯದವರೆಗೆ ಹೂವು ಬಿಡುವ ಬಳ್ಳಿಗಳಿಂದ ಜನವರಿಯಲ್ಲಿ ಕಾಯಿಗಳನ್ನು ಕಟಾವು ಮಾಡಬಹುದಾಗಿದೆ. ಮಾರ್ಚ್ನಿಂದ ಮುಂಗಾರು ಮಳೆ ಬರುವವರೆಗೆ ಹನಿ ನೀರಾವರಿ ವ್ಯವಸ್ಥೆ ಕಲ್ಪಿಸುವುದು ಉತ್ತಮ ಎಂಬ ಅಭಿಪ್ರಾಯ ಬೆಳೆಗಾರರದ್ದು. ತಮಿಳುನಾಡು, ಆಂಧ್ರಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವೆನಿಲ್ಲಾ ಬೆಳೆಯನ್ನು 8/8 ವಿಸ್ತೀರ್ಣದಲ್ಲಿ ದ್ರಾಕ್ಷಿ ಬೆಳೆಯ ಮಾದರಿಯಲ್ಲಿ ಬೆಳೆಯುತ್ತಾರೆ. ಆದರೆ, ಇಲ್ಲಿ 6/6 ಅಳತೆಯಲ್ಲಿ ನೆರಳಿನ ಮರಗಳಿಗೆ ಬಳ್ಳಿಗಳನ್ನು ಹಬ್ಬಿಸುವ ಮೂಲಕ ಬೆಳೆಯಲಾಗುತ್ತಿದೆ. ಸದ್ಯ ವೆನಿಲ್ಲಾ ಬೀನ್ಸ್ ಪ್ರತಿ ಕೆ.ಜಿ.ಗೆ 1800 ರೂ.ಗಳಿಂದ 2000 ರೂ.ವರೆಗೆ ದರ ಇದೆ. ಈ ಬಾರಿ 250 ಬಳ್ಳಿಗಳಿಂದ 110 ಕೆ.ಜಿ. ವೆನಿಲ್ಲಾ ಬೆಳೆದಿದ್ದು, 1800 ರೂ.ಗಳಂತೆ ಮನೆಗೆ ಬಂದು ಚೆನ್ನೈ ಮೂಲದ ಕಂಪನಿ ಖರೀದಿಸಿದೆ ಎನ್ನುತ್ತಾರೆ ಮಂಜುನಾಥ್.
ಬಳ್ಳಿಗಳ ಮಾರಾಟ: ಡಿಸೆಂಬರ್ನಲ್ಲಿ ಬಳ್ಳಿಗಳನ್ನು ಕಟಾವು ಮಾಡುವ ರೂಢಿಯಿದ್ದು, ಪ್ರತಿ ಮೀಟರ್ ಬಳ್ಳಿಯನ್ನು 60 ರೂ.ಗಳಿಂದ 80 ರೂ.ಗಳಿಗೆ ಮಾರಾಟ ಮಾಡಲಾಗುವುದು. ಸದ್ಯ ಯುವ ಬೆಳೆಗಾರರು ವೆನಿಲ್ಲಾ ಬಗ್ಗೆ ಆಸಕ್ತಿ ತೋರುತ್ತಿದ್ದು ಇತ್ತೀಚಿನ ವರ್ಷಗಳಲ್ಲಿ ಬಳ್ಳಿಗಳ ಖರೀದಿ ಹೆಚ್ಚಿದೆ ಎಂಬುದು ಅವರ ಮಾತು. ಚಾಕೋಲೇಟ್, ಐಸ್ಕ್ರೀಮ್ ಫೇಸ್ಕ್ರೀಮ್ ಸೇರಿದಂತೆ ಹತ್ತು ಹಲವು ವಸ್ತುಗಳನ್ನು ತಯಾರಿಸಲು ವೆನಿಲ್ಲಾ ಬಳಕೆ ಇದ್ದು, ಹೆಚ್ಚಿನ ಬೇಡಿಕೆ ಇರುವ ವೆನಿಲ್ಲಾ ಬೆಳೆಯನ್ನು ಕೇವಲ ಗುಂಟೆಗಳ ಜಾಗದಲ್ಲಿ ಬೆಳೆಯಬಹುದಾಗಿರುವುದರಿಂದ ಸಣ್ಣ ಕೃಷಿಕರಿಗೆ ಇದು ವರದಾನ ಎಂಬುದು ಮಂಜುನಾಥ್ ಅಭಿಪ್ರಾಯ.
ವೆನಿಲ್ಲಾ ಬೆಳೆಯ ಬಗ್ಗೆ ಆಸಕ್ತಿ ಹೊಂದಿದ್ದವರು ಮಂಜುನಾಥ್ ಅವರನ್ನು ಸಂರ್ಪಸಬಹುದು(ಮೊ.ನಂ. 9481080287).