

| ಬೀರಣ್ಣ ನಾಯಕ ಮೊಗಟಾ
ನೂತನ ಪ್ರಯೋಗಗಳು, ಹೊಸ ತಂತ್ರಜ್ಞಾನ,ಆವಿಷ್ಕಾರಗಳು ಕೃಷಿಯಲ್ಲಿ ಅವಶ್ಯಕ ಮತ್ತು ಅನಿವಾರ್ಯ ಕೂಡ. ಅದಕ್ಕೆ ಕೃಷಿ ರಂಗದಲ್ಲಿ ಮುಕ್ತಾಯ ಎಂಬುದೇ ಇಲ್ಲ. ಅಡಕೆ ತೋಟಿಗರಿಗೆ ಭೂಸವಕಳಿ ಎಂಬುದು ಬಳುವಳಿಯಾಗಿ ಬಂದ ಸಮಸ್ಯೆ. ಮಳೆಗಾಲದಲ್ಲಿ ಮಳೆ ನೀರು ತೋಟದ ಮಣ್ಣನ್ನು ಕೊಚ್ಚಿಕೊಂಡು ಹೋಗುವದರ ಜತೆ ಗೊಬ್ಬರವನ್ನೂ ಒಯ್ಯುತ್ತದೆ. ಇದನ್ನು ತಡೆಗಟ್ಟಲು ರೈತರು ಅನೇಕ ಪರಿಹಾರ ಕಂಡು ಕೊಂಡರೂ ಪೂರ್ಣ ಪ್ರಮಾಣದ ಪರಿಹಾರ ಸಿಕ್ಕಿರಲಿಲ್ಲ. ಹಾಗಾಗಿ ಅಡಕೆ ಬೆಳೆಗಾರ ಕಂಡುಕೊಂಡ ಹೊಸ ಆವಿಷ್ಕಾರವೇ ಮಲ್ಚಿಂಗ್ ಪದ್ಧತಿ.
ಈ ಪದ್ಧತಿ ದಿನದಿಂದ ದಿನಕ್ಕೆ ಅಡಕೆ ಬೆಳೆಗಾರನಿಗೆ ಹತ್ತಿರವಾಗುತ್ತಿದೆ. ಸಾಮಾನ್ಯವಾಗಿ ಎಲ್ಲೆಡೆ ದೊರೆಯುವ ಮಲ್ಚಿಂಗ್ ಶೀಟ್ ಅನ್ನು ಮೂರು ಅಡಿ ಅಗಲದಲ್ಲಿ ನಮ್ಮ ಅನುಕೂಲತೆಗೆ ತಕ್ಕಹಾಗೆ ಉದ್ದನೆಯ ಭರಣದ ಕಾಲುವೆ ಗುಂಟ ಹಾಸುತ್ತ ಹೋದರೆ ಮಲ್ಚಿಂಗ್ ಪದ್ಧತಿ ಅಳವಡಿಸಿದಂತಾಗುತ್ತದೆ. ಹೊದಿಕೆ ಸರಿಯದಂತೆ ತೋಟದಲ್ಲಿ ಅನಾಯಾಸವಾಗಿ ಸಿಗುವ ಭಾರವನ್ನು ಹೇರಿದರೆ ಮಲ್ಚಿಂಗ್ ಪದ್ಧತಿ ಮುಗಿದಂತೆ. ಹೆಚ್ಚು ಮಳೆ ಬೀಳುವ ಯಲ್ಲಾಪುರದಂತಹ ಪ್ರದೇಶಗಳಿಗೆ ಈ ಮಲ್ಚಿಂಗ್ ವರದಾನ ಎನ್ನುತ್ತಾರೆ ಶಿಕ್ಷಕರೂ ಆದ ರೈತ ವಿನೋದ ಭಟ್ಟರು. ಅಂದಹಾಗೆ ಮಲ್ಚಿಂಗ್ ಪದ್ಧತಿಯಿಂದ ಮಣ್ಣು ಸವಕಳಿಯಷ್ಟೇ ಅಲ್ಲದೆ, ಸಂಪೂರ್ಣ ಕಳೆ ನಿಯಂತ್ರಣಕ್ಕೆ ಸಹಕಾರಿ.
ವಿನೋದ ಭಟ್ಟರ ಪ್ರಕಾರ ಈ ಮಲ್ಚಿಂಗ್ ಹೊದಿಕೆ ಕೆ.ಜಿ. ಒಂದಕ್ಕೆ 70 ರೂ. ಇದ್ದು ಎಕರೆಗೆ ಸಾಮಾನ್ಯವಾಗಿ 30 ಕೆ.ಜಿ. ಬೇಕಾಗುತ್ತದೆ. ಈ ಪದ್ಧತಿಯಲ್ಲಿ ಕೂಲಿ, ಸಮಯದ ಉಳಿತಾಯ ವಾಗುತ್ತದೆ. ಮಳೆಗಾಲದ ನಂತರ ಈ ಹೊದಿಕೆ ರಕ್ಷಣಾತ್ಮಕವಾಗಿ ತೆಗೆದಿಟ್ಟರೆ ಐದು ವರ್ಷದವರೆಗೆ ಉಪಯೋಗಿಸಬಹುದು ಎಂಬುದು ಅವರ ಅಭಿಪ್ರಾಯ.