ರೈತ ಮಿತ್ರ: ವಿಜಯವಾಣಿ ಪ್ರಶ್ನೋತ್ತರಗಳು

agriculture
Published on

* ತರಕಾರಿ ಬೆಳೆಗಳಲ್ಲಿ ಪ್ಲಾಸ್ಟಿಕ್​ ಹೊದಿಕೆ ಬಳಕೆ ವಿಧಾನ ಹಾಗೂ ಇದರಿಂದಾಗುವ ಅನುಕೂಲಗಳೇನು?

-ಸುದರ್ಶನ್​, ನಂಜನಗೂಡು ತಾಲೂಕು

- ತರಕಾರಿ ಬೆಳೆಗಳಲ್ಲಿ ಇತ್ತೀಚೆಗೆ ನಿಖರ ಬೇಸಾಯ ಪದ್ಧತಿಯನ್ನು ರೈತರು ಅಳವಡಿಸಿಕೊಂಡು ಬರುತ್ತಿದ್ದಾರೆ. ಈ ಪದ್ಧತಿಯ ಕೆಲ ತಂತ್ರಜ್ಞಾನಗಳಲ್ಲಿ ಪ್ಲಾಸ್ಟಿಕ್​ ಹೊದಿಕೆ ಬಳಕೆಯು ಒಂದು. ಮೊದಲಿಗೆ ಭೂಮಿಯನ್ನು ಚೆನ್ನಾಗಿ ಉಳುಮೆ ಮಾಡಿಕೊಂಡು ನಂತರ 100 ಸೆಂ.ಮೀ. ಅಗಲವಿರುವ ಏರು ಮಡಿಗಳನ್ನು 40 ಸೆಂ.ಮೀ. ಅಂತರದಲ್ಲಿ ತಯಾರಿಸಿ, ಆ ಮಡಿಗಳ ಮೇಲೆ ಹನಿ ನೀರಾವರಿ ಪದ್ಧತಿ ಅಳವಡಿಸಿಬೇಕು. ನಂತರ ಅದರ ಮೇಲೆ 30 ಮೈಕ್ರಾನ್​ನ ಸಿಲ್ವರ್​ ಮತ್ತು ಕಪ್ಪು ಅಥವಾ ಕಪ್ಪು ಪ್ಲಾಸ್ಟಿಕ್​ ಹೊದಿಕೆಯನ್ನು ಎಳೆದು ಎರಡೂ ಬದುಗಳಲ್ಲಿ ಮಣ್ಣನ್ನು ಏರು ಹಾಕಬೇಕು. ನಾಟಿ ಮಾಡುವ ಮೊದಲು ಏರು ಮಡಿಗಳನ್ನು ಹನಿ ನೀರಾವರಿ ಮುಖಾಂತರ ಚೆನ್ನಾಗಿ ತೋಯಿಸಬೇಕು. ಇದಾದನಂತರ ಏರು ಮಡಿಗಳ ಮೇಲೆ 2.0 ಅಡಿ ಅಂತರದಲ್ಲಿ ರಂಧ್ರಗಳನ್ನು ಮಾಡಿ ಆ ರಂಧ್ರಗಳ ಮಧ್ಯ ಭಾಗದಲ್ಲಿ ಸಸಿಗಳನ್ನು ಪ್ಲಾಸ್ಟಿಕ್​ ಹೊದಿಕೆಗೆ ತಾಕದಂತೆ ನಾಟಿ ಮಾಡಬೇಕು. ಪ್ರತಿ ಎಕರೆಗೆ ಸುಮಾರು 300 (100 ಕೆ.ಜಿ.) ಮೀಟರ್​ ಉದ್ದನೆಯ ಪ್ಲಾಸ್ಟಿಕ್​ ಹೊದಿಕೆ ಬೇಕಾಗುತ್ತದೆ.

ಉಪಯೋಗ: ಕಳೆಗಳನ್ನು ನಿಯಂತ್ರಣ ಮಾಡಬಹುದು. ಇದರಿಂದ ಕಳೆ ತೆಗೆಯಲು ಕೂಲಿ ಕಾಮಿರ್ಕರ ಅವಶ್ಯಕತೆ ಇರುವುದಿಲ್ಲ. ಶೇ.20-30 ನೀರಿನ ಉಳಿತಾಯ ಮಾಡಬಹುದು. ಉತಷ್ಟವಾದ ಇಳುವರಿ ಪಡೆಯಬಹುದು.

| ಡಾ. ಶಾಲಿನಿ ಎಂ., ತೋಟಗಾರಿಕೆ ತಜ್ಞರು

* ಹುರುಳಿಕಾಯಿ ಬೆಳೆಯಲ್ಲಿ ಹೇನುಗಳ ಹಾವಳಿ ಕಂಡುಬರುತ್ತಿದ್ದು, ಅದನ್ನು ನಿಯಂತ್ರಿಸುವುದು ಹೇಗೆ?

- ವೇಣು, ಹೊಸಕೋಟೆ ತಾಲೂಕು

- ಎಲೆ, ಎಳೆಯದಾದ ಕುಡಿ ಮತ್ತು ಕಾಯಿಗಳಿಂದ ಹೇನುಗಳು ರಸ ಹೀರುತ್ತವೆ. ಈ ಭಾಗಗಳಲ್ಲಿ ನಂತರ ಕಪ್ಪು ಬೂಷ್ಟ್​ ಬೆಳವಣಿಗೆ ಆಗುತ್ತದೆ. ಬಿತ್ತಿದ 2 ವಾರಗಳ ನಂತರ 0.5 ಮಿ.ಲೀ. ಇಮಿಡಾಕ್ಲೋಪ್ರಿಡ್​ ಅಥವಾ 1.7 ಮಿ.ಲೀ. ಡೈಮಿಥೋಯೆಟ್​ 30 ಇ.ಸಿ. ಅಥವಾ 1.3 ಮಿ.ಲೀ. ಆಕ್ಸಿಡೆಮೆಟಾನ್​ ಮಿಥೈಲ್​ 25 ಇ.ಸಿ. ಪ್ರತಿ ಲೀಟರ್​ ನೀರಿಗೆ ಬೆರೆಸಿ ಸಿಂಪಡಿಸಬೇಕು. ಅವಶ್ಯವಿದ್ದಲ್ಲಿ ಇದೇ ಸಿಂಪಡಣೆಯನ್ನು 15 ದಿನಗಳ ನಂತರ ಪುನರಾವತಿರ್ಸಬೇಕು.

|ಪ್ರಿಯಾಂಕ ಬಿ. ಸಸ್ಯರೋಗ ತಜ್ಞರು

* ನೈಸಗಿರ್ಕ ಕೃಷಿಯಲ್ಲಿ ದ್ರವರೂಪದ ಸಾವಯವ ಗೊಬ್ಬರಗಳ ಮಹತ್ವವೇನು?

- ಪ್ರಭುದೇವ, ಬಬ್ಬೂರು, ಹಿರಿಯೂರು ತಾಲೂಕು

- ಸ್ಥಳಿಯವಾಗಿ ಸಿಗುವ ಕೃಷಿ ತ್ಯಾಜ್ಯ ವಸ್ತುಗಳು, ಸಸ್ಯ ಜನ್ಯ ಮತ್ತು ಪ್ರಾಣಿ ಜನ್ಯ ಪದಾರ್ಥಗಳನ್ನು ಬಳಸಿ ಚೆನ್ನಾಗಿ ಕಳಿಸಿ ತಯಾರಿಸಿದ ಮಿಶ್ರಣಗಳೇ ದ್ರವರೂಪ/ದ್ರಾವಣ ರೂಪದ ಸಾವಯವ ಗೊಬ್ಬರಗಳು.

ಪ್ರಚಲಿತವಾಗಿ ಬಳಕೆಯಲ್ಲಿರುವ ದ್ರಾವಣ ರೂಪದ ಸಾವಯವ ಗೊಬ್ಬರಗಳು: ಬೀಜಾಮೃತ, ಜೀವಾಮೃತ, ಪಂಚಗವ್ಯ, ದಸಗವ್ಯ, ಅಮೃತಪಾನಿ, ಮೀನು ಟಾನಿಕ್​, ಜೈವಿಕ ಅನಿಲ ಬಗ್ಗಡ, ಜೀರ್ಣಕ್ರಿಯಾ ಟಕದ ದ್ರಾವಣ.

ಇವುಗಳನ್ನು ಸಸ್ಯ ಪೋಷಕಾಂಶಗಳಾಗಿ, ಬೆಳೆ ವರ್ಧಕಗಳಾಗಿ, ಕೀಟನಾಶಕಗಳಾಗಿ, ಪೀಡೆನಾಶಕಗಳಾಗಿ ಮತ್ತು ಶಿಲಿಂಧ್ರನಾಶಕಗಳಾಗಿ ಬಳಸಬಹುದು. ಅಲ್ಲದೆ, ಈ ದ್ರಾವಣ ರೂಪದ ಗೊಬ್ಬರಗಳನ್ನು ಸೋಸಿ ಸೂಕ್ತವಾದ ಕಾಲ ಮತ್ತು ಪ್ರಮಾಣದ ನೀರಿನೊಂದಿಗೆ ಮಿಶ್ರಣ ಮಾಡಿ ಸಿಂಪಡಣೆಗೆ ಅಥವಾ ನೀರಾವರಿ ಮೂಲಕ ಬಳಸಬಹುದಾಗಿದ್ದು, ಇವು ಪರಿಸರ ಸ್ನೇಹಿಯಾಗಿವೆ.

| ಹರ್ಷಕುಮಾರ್​ ಎಸ್​.ಎಸ್​., ಬೇಸಾಯ ತಜ್ಞರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net