ಎಲೆಕ್ಟ್ರಿಕಲ್ ವೆಹಿಕಲ್​ಗಳತ್ತ ಜನರ ಚಿತ್ತ: e ವಾಹನ ಜಮಾನಾ..

Electric Vehicles
Published on

| ಕೀರ್ತಿನಾರಾಯಣ ಸಿ. ಬೆಂಗಳೂರು

ಬದಲಾವಣೆ ಜಗದ ನಿಯಮ. ಇಂದು ಇರುವ ಅಭಿರುಚಿ ನಾಳೆಗೆ ಬದಲಾಗಿ ಹೋಗಿರುತ್ತದೆ. ಅದರಲ್ಲೂ ವಾಹನ ಉದ್ಯಮ ಕ್ಷೇತ್ರದಲ್ಲಿ ಬದಲಾವಣೆ ನಿರಂತರ. ಇಲ್ಲಿ ನಿತ್ಯವೂ ಹೊಸ ಹೊಸ ಆವಿಷ್ಕಾರಗಳು ನೂತನ ಟ್ರಂಡ್ ಸೃಷ್ಟಿಯಾಗುತ್ತಲೇ ಇರುತ್ತದೆ. ಇದೀಗ ಇ-ವಾಹನಗಳ ಜಮಾನಾ ಶುರುವಾಗಿದೆ. ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆಗೆ ತತ್ತರಿಸಿ ಹೋಗಿರುವ ಜನ ‘ಇ ವಾಹನ’ಗಳತ್ತ ಚಿತ್ತ ಹರಿಸಿದ್ದಾರೆ. ವರ್ಷದಿಂದ ವರ್ಷಕ್ಕೆ ಎಲೆಕ್ಟ್ರಿಕ್ ವಾಹನಗಳ ಖರೀದಿ ಹಾಗೂ ಬುಕ್ಕಿಂಗ್ ಹೆಚ್ಚುತ್ತಿದ್ದು, ಪ್ರಸ್ತುತ ಕರ್ನಾಟಕದಲ್ಲಿ 1,20,532 ವಾಹನಗಳು ಸಂಚರಿಸುತ್ತಿವೆ. ಸಾರ್ವಜನಿಕ ಸಾರಿಗೆಯಲ್ಲೂ ಇ ಬಸ್​ಗಳ ಹವಾ ಶುರುವಾಗಿದೆ. ಬಿಎಂಟಿಸಿಯಲ್ಲಿ ಈಗಾಗಲೆ 90 ಇ ಬಸ್​ಗಳು ಓಡಾಡುತ್ತಿದ್ದು, ಕೆಎಸ್ಸಾರ್ಟಿಸಿಯಲ್ಲಿ ಡಿಸೆಂಬರ್ ವೇಳೆಗೆ ಬೆಂಗಳೂರಿನಿಂದ ಮೈಸೂರು ಸೇರಿ ವಿವಿಧ ನಗರಗಳಿಗೆ 50 ಬ್ಯಾಟರಿ ಚಾಲಿತ ಬಸ್​ಗಳ ಸಂಚಾರ ಆರಂಭವಾಗಲಿದೆ.

ದೇಶಾದ್ಯಂತ 13.34 ಲಕ್ಷ ಇ ವಾಹನಗಳು ನೋಂದಣಿಯಾಗಿವೆ. ಉತ್ತರ ಪ್ರದೇಶದಲ್ಲಿ 3 ಲಕ್ಷ ದಾಟಿದ್ದರೆ ಕರ್ನಾಟಕ, ಮಹಾರಾಷ್ಟ್ರ ಮತ್ತು ದೆಹಲಿಯಲ್ಲಿ ಬ್ಯಾಟರಿ ಚಾಲಿತ ವಾಹನಗಳ ಸಂಖ್ಯೆ 1 ಲಕ್ಷ ದಾಟಿದೆ. ಇ ವಾಹನಗಳ ಬೇಡಿಕೆ ಹೆಚ್ಚಿದಂತೆ ಅದಕ್ಕೆ ಪೂರಕವಾಗಿ ದೇಶಾದ್ಯಂತ 2877 ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. 2022ರ ಜ.1ರವರೆಗಿನ ಮಾಹಿತಿ ಅನ್ವಯ ಕರ್ನಾಟಕದಲ್ಲಿ 100 ಬ್ಯಾಟರಿ ಚಾರ್ಜಿಂಗ್ ಕೇಂದ್ರಗಳು ಆರಂಭ ವಾಗಿದ್ದು, ಹೊಸದಾಗಿ 172 ಕೇಂದ್ರಗಳ ಸ್ಥಾಪನೆ ಪ್ರಕ್ರಿಯೆ ಪ್ರಗತಿಯಲ್ಲಿದೆ. 2030ರ ವೇಳೆಗೆ ದೇಶದಲ್ಲಿ ವಾಣಿಜ್ಯ ಬಳಕೆಯ ವಾಹನಗಳಲ್ಲಿ ಇ-ವಾಹನಗಳ ಪಾಲು ಶೇ.70, ಖಾಸಗಿ ವಾಹನಗಳಲ್ಲಿ ಶೇ.30, ಬಸ್​ಗಳಲ್ಲಿ ಶೇ.40 ಮತ್ತು ದ್ವಿಚಕ್ರ ಹಾಗೂ 3 ಚಕ್ರದ ವಾಹನಗಳಲ್ಲಿ ಶೇ.80 ಇ- ವಾಹನಗಳಾಗಿರಬೇಕು ಎಂದು ಕೇಂದ್ರ ಸರ್ಕಾರ ಗುರಿ ಹೊಂದಿದ್ದು,ಅದಕ್ಕೆ ಪೂರಕ ವಾತಾವರಣ ಸೃಷ್ಟಿಸಿದೆ. 2070ರ ವೇಳೆಗೆ ಇಂಧನ ಬಳಕೆಯ ವಾಹನಗಳೇ ಓಡಾಡಬಾರದು ಎಂಬ ಗುರಿ ಇಟ್ಟುಕೊಳ್ಳಲಾಗಿದೆ. ಈಗಾಗಲೆ ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಹಾಗೂ ಕಾರುಗಳ ಮೂಲಕ ಮಾರುಕಟ್ಟೆಗೆ ಪ್ರವೇಶಿಸಲು ಪ್ರತಿಷ್ಠಿತ ಕಂಪನಿಗಳು ಆಸಕ್ತಿ ತೋರಿದ್ದು, ವಿವಿಧ ಆಫರ್​ಗಳ ಮೂಲಕ ಬುಕ್ಕಿಂಗ್ ಆರಂಭಿಸಿವೆ. ಕೇಂದ್ರ ಸರ್ಕಾರವೂ ಎಲೆಕ್ಟ್ರಿಕ್ ವಾಹನಗಳ ಮೇಲಿನ ಸರಕು ಸೇವಾ ತೆರಿಗೆ (ಜಿಎಸ್​ಟಿ)ಯನ್ನು ಶೇ.12ರಿಂದ ಶೇ.5ಕ್ಕೆ ಹಾಗೂ ಚಾರ್ಜಿಂಗ್ ಕೇಂದ್ರಗಳ ಮೇಲಿನ ಜಿಎಸ್​ಟಿ ಯನ್ನು ಶೇ.18ರಿಂದ ಶೇ.5ಕ್ಕೆ ಇಳಿಕೆ ಮಾಡಿದೆ.

ಹೈವೇಗಳಲ್ಲಿ ಚಾರ್ಜಿಂಗ್ ಪಾಯಿಂಟ್: ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್​ವೇಯಲ್ಲಿ 14 ಮತ್ತು ಬೆಂಗಳೂರು-ಚೆನ್ನೈ ಎಕ್ಸ್​ಪ್ರೆಸ್ ವೇಯಲ್ಲಿ 30 ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ ಅನುಮತಿ ಸಿಕ್ಕಿದೆ. ಉಳಿದಂತೆ ಮುಂಬೈ-ಬೆಂಗಳೂರು ಹೈವೇಯಲ್ಲಿ 100, ಚೆನ್ನೈ-ಬಳ್ಳಾರಿ ಹೈವೇಯಲ್ಲಿ 62 ಚಾರ್ಜಿಂಗ್ ಸೆಂಟರ್​ಗಳ ಆರಂಭಿಸಲು ಕೇಂದ್ರ ಸರ್ಕಾರ ಅನುಮತಿ ಕೊಟ್ಟಿದೆ.

ಈ ಹೈವೇಗಳಲ್ಲಿ ಹೆಚ್ಚು ಚಾರ್ಜಿಂಗ್ ಕೇಂದ್ರ: ದೆಹಲಿ-ಕೋಲ್ಕತ್ತಾ-160, ಮುಂಬೈ-ದೆಹಲಿ-124, ಕೋಲ್ಕತ್ತಾ-ನಾಗಪುರ- 120, ಚೆನ್ನೈ-ನಾಗಪುರ - 114, ಮುಂಬೈ-ಬೆಂಗಳೂರು- 100, ಚೆನ್ನೈ-ಭುವನೇಶ್ವರ ಹೈವೇಯಲ್ಲಿ 120 ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಒಟ್ಟಾರೆ 9 ಎಕ್ಸ್​ಪ್ರೆಸ್​ವೇ ಹಾಗೂ 16 ಹೈವೇಗಳಲ್ಲಿ 1576 ಕೇಂದ್ರಗಳ ಸ್ಥಾಪನೆಯಾಗಲಿವೆ.

ಕೆಎಸ್ಸಾರ್ಟಿಸಿಗೆ 50 ಬಸ್: ಹೈದರಾಬಾದ್ ಕಂಪನಿ ಮೂಲಕ 50 ಎಲೆಕ್ಟ್ರಿಕ್ ಬಸ್​ಗಳ ಖರೀದಿಗೆ ಕೆಎಸ್ಸಾರ್ಟಿಸಿ ಒಪ್ಪಂದ ಮಾಡಿಕೊಂಡಿದೆ. ಮೊದಲ ಹಂತದಲ್ಲಿ ಡಿಸೆಂಬರ್​ಗೆ 25 ಬಸ್​ಗಳು ಬರಲಿದ್ದು, ಉಳಿದ 25 ಬಸ್​ಗಳು 2023ಕ್ಕೆ ಬರಲಿವೆ. ಮೊದಲಿಗೆ ಬೆಂಗಳೂರು-ಮೈಸೂರು ಮಾರ್ಗವಾಗಿ ಬ್ಯಾಟರಿ ಚಾಲಿನ ಪರಿಸರ ಸ್ನೇಹಿ ಬಸ್​ಗಳು ಓಡಾಡಲಿವೆ. ನಂತರ ಬೆಂಗಳೂರಿನಿಂದ ವಿರಾಜಪೇಟೆ, ಮಡಿಕೇರಿ, ದಾವಣಗೆರೆ, ಕೋಲಾರ, ಶಿವಮೊಗ್ಗ, ಚಿಕ್ಕಮಗಳೂರು ಮಾರ್ಗಗಳಲ್ಲಿ ಸಂಚಾರ ಆರಂಭಿಸಲಿವೆ.

ಬಿಎಂಟಿಸಿ 90 ಇ-ಬಸ್: ಸ್ಮಾರ್ಟ್ ಸಿಟಿ ಯೋಜನೆಯಡಿ ಬಿಎಂಟಿಸಿ ಈಗಾಗಲೆ 90 ಇ ಬಸ್ ಹಾಗೂ ಕೇಂದ್ರದ ಫೆಮ್ 2 ಯೋಜನೆಯಡಿ 12 ನಾನ್ ಎಸಿ ಬಸ್​ಗಳನ್ನು ಖರೀದಿಸಿದೆ. ಕೇಂದ್ರ ಸರ್ಕಾರದ ಗ್ರಾ್ಯಂಡ್ ಚಾಲೆಂಜ್ ಯೋಜನೆಯಡಿ ಮುಂದಿನ 3 ವರ್ಷಗಳಲ್ಲಿ ಬೆಂಗಳೂರಲ್ಲಿ ಸಂಚಾರಕ್ಕಾಗಿ 1500 ಇ ಬಸ್​ಗಳ ಖರೀದಿಗೆ ಯೋಜನೆ ಇದೆ. ಒಟ್ಟಾರೆ ಅಂದಾಜು 2000ಕ್ಕೂ ಹೆಚ್ಚು ಎಲೆಕ್ಟ್ರಿಕ್ ಬಸ್​ಗಳು ಬಿಎಂಟಿಸಿ ವಾಹನಗಳಾಗಿ ಸಂಚರಿಸಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net