ಚರ್ಮಗಂಟು ರೋಗಕ್ಕೆ ಜಾಗರೂಕತೆಯೇ ಮದ್ದು

Vittavani
Published on

| ಡಾ.ಎಸ್.ಬಿ. ರವಿಕುಮಾರ್

ಇತ್ತೀಚೆಗೆ ಎಲ್ಲ ಕಡೆ ಜಾನುವಾರುಗಳಲ್ಲಿ ಚರ್ಮಗಂಟು ರೋಗ (lumpy skin disease) ಹರಡುತ್ತಿರುವುದು ರೈತರಲ್ಲಿ ಆತಂಕ ಮೂಡಿಸಿದೆ. ರಾಸುಗಳನ್ನು ಕಳೆದುಕೊಳ್ಳುವ ಭಯ ರಾಸು ಸಾಕಣೆಗಾರರನ್ನು ಕಾಡುತ್ತಿದ್ದರೆ, ಪ್ರತಿದಿನ ಹಾಲು ಉಪಯೋಗಿಸುವ ಜನರಲ್ಲಿ ಹಾಲಿನ ಮೂಲಕ ತಮಗೂ ಕಾಯಿಲೆ ಬರಬಹುದೇ ಎಂಬ ಅನುಮಾನ ಮೂಡಿದೆ.

ಕಾಯಿಲೆಗೆ ಕಾರಣ: ಮೇಕೆಗಳಲ್ಲಿ ಸಿಡುಬು ರೋಗವನ್ನುಂಟು ಮಾಡುವ ವೈರಸ್​ನ ಕುಟುಂಬಕ್ಕೆ ಸೇರಿದ ವೈರಸ್ ಎಮ್ಮೆ ಮತ್ತು ಹಸುಗಳಲ್ಲಿ ಚರ್ಮಗಂಟು ರೋಗವನ್ನು ಉಂಟುಮಾಡುತ್ತದೆ. ಗುಂಪಿನಲ್ಲಿನ ಶೇ.10 ರಿಂದ 20 ಜಾನುವಾರುಗಳಿಗೆ ಚರ್ಮಗಂಟು ರೋಗ ತಗಲುತ್ತದೆ. ಕಾಯಿಲೆ ತಗುಲಿದ ಎಲ್ಲ ರಾಸುಗಳು ಸಾಯುವುದಿಲ್ಲ. ಕಾಯಿಲೆ ಬಂದ ರಾಸುಗಳಲ್ಲಿ ಶೇ.1 ರಿಂದ 5 ರಾಸು ಅಸುನೀಗುತ್ತವೆ.

ರೋಗ ಹರಡುವಿಕೆ: ನೊಣ, ಉಣ್ಣೆ ಮತ್ತು ಸೊಳ್ಳೆಗಳು ಚರ್ಮಗಂಟು ರೋಗವನ್ನು ಹರಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ರೋಗಗ್ರಸ್ತ ಜಾನುವಾರಿಗೆ ಕಚ್ಚಿದ ಸೊಳ್ಳೆ, ಉಣ್ಣೆ ಮತ್ತು ನೊಣ ಆರೋಗ್ಯವಂತ ರಾಸಿಗೆ ಕಚ್ಚುವುದರಿಂದ ಕಾಯಿಲೆ ಹರಡುತ್ತದೆ. ಸೋಂಕಿತ ಉಪಕರಣಗಳು, ಕಲುಷಿತ ನೀರು, ಮೇವಿನ ಸಂಪರ್ಕದಿಂದ ಕಾಯಿಲೆ ಹರಡಬಹುದಾದರೂ ಅದು ವಿರಳ. ರೋಗಗ್ರಸ್ತ ಜಾನುವಾರಿನ ನೇರ ಸಂಪರ್ಕದಿಂದ ಕಾಯಿಲೆ ಹೆಚ್ಚಾಗಿ ಹರಡುವುದಿಲ್ಲ.

ಇಂಕುಬೇಷನ್ ಪೀರಿಯಡ್: ನಾಲ್ಕರಿಂದ 14 ದಿನಗಳು. ಅಂದರೆ, ಚರ್ಮಗಂಟು ರೋಗದ ರೋಗಾಣು ದೇಹ ಸೇರಿದ ಮೇಲೆ ಜಾನುವಾರುಗಳಲ್ಲಿ ರೋಗಲಕ್ಷಣ ಕಂಡುಬರಲು ನಾಲ್ಕರಿಂದ 14 ದಿನ ಬೇಕಾಗುತ್ತವೆ.

ಚಿನ್ಹೆಗಳು: ಕಾಯಿಲೆಗ ತುತ್ತಾದ ರಾಸುಗಳು ಜ್ವರದಿಂದ ನರಳುತ್ತವೆ. ಜ್ವರ ಕಾಣಿಸಿದ ಕೆಲವು ದಿನಗಳಲ್ಲಿ ಚರ್ಮದ ಮೇಲೆ ಗಂಟುಗಳು ಕಾಣಿಸುತ್ತವೆ. ಕೆಲವು ಜಾನುವಾರುಗಳಲ್ಲಿ ಅಲ್ಪ ಗಂಟುಗಳು ಕಂಡುಬಂದರೆ ಇನ್ನೂ ಕೆಲವು ಜಾನುವಾರುಗಳಲ್ಲಿ 1 ಸೆಂಮೀ ನಿಂದ 5 ಸೆಂಮೀ ಗಾತ್ರದ ಗಂಟುಗಳು ಮೈತುಂಬಾ ಕಂಡುಬರುತ್ತವೆ. ಜ್ವರದ ತಾಪದಿಂದ ಜಾನುವಾರು ಮಂಕಾಗುತ್ತದೆ. ಮೇವು ತಿನ್ನುವುದಿಲ್ಲ, ಜೊಲ್ಲು ಸುರಿಸುತ್ತವೆ. ಜತೆಗೆ ಕಣ್ಣು, ಮೂಗುಗಳಿಂದಲೂ ಸ್ರವಿಕೆ ಉಂಟಾಗುತ್ತದೆ. ಹಾಲಿನ ಉತ್ಪಾದನೆ ಕಡಿಮೆಯಾಗುತ್ತದೆ. ಕೆಲವೇ ದಿನಗಳಲ್ಲಿ ಚರ್ಮದಲ್ಲಿನ ಗಂಟು ಸೋಂಕಿನಿಂದ ವ್ರಣವಾಗುತ್ತವೆ. ನೊಣ ಕುಳಿತುಕೊಂಡು ಮೊಟ್ಟೆಯಿಟ್ಟರೆ ವ್ರಣಗಳಲ್ಲಿ ಹುಳುಗಳಾಗಿ ಪರಿಸ್ಥಿತಿ ಹದಗೆಡುತ್ತದೆ. ಗರ್ಭಧರಿಸಿದ ರಾಸುಗಳಲ್ಲಿ ಗರ್ಭಪಾತ ಉಂಟಾಗುತ್ತದೆ. ಮೇವು ತಿನ್ನದೆ ಜಾನುವಾರು ಅಸುನೀಗುತ್ತವೆ.

ಚಿಕಿತ್ಸೆ: ರೋಗಪೀಡಿತ ರಾಸುಗಳನ್ನು ಪ್ರತ್ಯೇಕಿಸಿ, ತಜ್ಞ ವೈದ್ಯರಿಂದ ಚಿಕಿತ್ಸೆ ಕೊಡಿಸಬೇಕು. ಇದು ವೈರಸ್ ಕಾಯಿಲೆಯಾದ್ದರಿಂದ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಕಂಡುಬಂದ ರೋಗಲಕ್ಷಣಕ್ಕೆ ಅನುಗುಣವಾಗಿ ಚಿಕಿತ್ಸೆ ನೀಡಲಾಗುತ್ತದೆ. ಚರ್ಮದ ಗಂಟುಗಳು ಬ್ಯಾಕ್ಟೀರಿಯಾ ಸೋಂಕಿನಿಂದ ವ್ರಣವಾಗುವುದನ್ನು ತಪ್ಪಿಸಲು ಸೂಕ್ತ ಆಂಟಿಬಯಾಟಿಕ್ ಕೊಡಲಾಗುತ್ತದೆ. ವ್ರಣಗಳ ಮೇಲೆ ನೊಣಗಳು ಕುಳಿತುಕೊಳ್ಳದಂತೆ, ಅರಿಷಿಣ ಪುಡಿ ಬೆರೆಸಿದ ಬೇವಿನ ಎಣ್ಣೆ ಅಥವಾ ವೈದ್ಯರು ಶಿಫಾರಸು ಮಾಡಿದ ಮುಲಾಮನ್ನು ಗಾಯಗಳಿಗೆ ಹಚ್ಚಬೇಕು. ಜ್ವರದ ತಾಪ ಕಡಿಮೆಯಾಗಲು ವೈದ್ಯರು ಕೊಟ್ಟ ಮಾತ್ರೆ ತಿನ್ನಿಸಿ ತಾಪ ಕಡಿಮೆಯಾದ ಬಳಿಕ ಹಸಿ ಹುಲ್ಲು ನೀಡಬೇಕು. ಮೇವು ತಿನ್ನದಿದ್ದರೆ ದ್ರವರೂಪದ ಆಹಾರ ಕೊಟ್ಟು ಉಪಚಾರ ಮಾಡಬೇಕು. ಕಾಯಿಲೆಗೆ ತುತ್ತಾದ ದನಕ್ಕೆ ಉಪಚಾರ ಮಾಡಿದವರು ಬೇರೆ ರಾಸುಗಳ ಬಳಿ ಹೋಗಬಾರದು. ಹೋಗಲೇ ಬೇಕಾದಲ್ಲಿ ಕೈಗಳನ್ನು ಸೋಪಿನಿಂದ ಚೆನ್ನಾಗಿ ತೊಳೆದುಕೊಂಡೇ ಹೋಗಬೇಕು. ಕೊಟ್ಟಿಗೆಯನ್ನು ಸ್ವಚ್ಛವಾಗಿಟ್ಟುಕೊಂಡು, ವೈದ್ಯರು ಶಿಫಾರಸು ಮಾಡುವ ಸೋಂಕು ನಿವಾರಕಗಳನ್ನು ಸಿಂಪಡಿಸಬೇಕು. ಅವಶ್ಯಕತೆಯಿದ್ದಲ್ಲಿ ಸೊಳ್ಳೆ ಮತ್ತು ನೊಣಗಳ ಉಪಟಳ ನಿಯಂತ್ರಿಸಲು ಸೊಳ್ಳೆ ಪರದೆ ಬಳಸಬೇಕು.

ಲಸಿಕೆ ಅತ್ಯಗತ್ಯ: ಚರ್ಮಗಂಟು ರೋಗವನ್ನು ತಡೆಯುವ ಲಸಿಕೆ ತಯಾರಿಸಲು ಪ್ರಯತ್ನಗಳು ನಡೆಯುತ್ತಿದೆ. ಮೇಕೆಗಳ ಸಿಡುಬು ರೋಗ ಉಂಟು ಮಾಡುವ ವೈರಸ್​ನ ಕುಟುಂಬಕ್ಕೇ ಚರ್ಮಗಂಟು ರೋಗದ ವೈರಸ್ ಸಹ ಸೇರಿರುವುದರಿಂದ, ಮೇಕೆಗಳ ಸಿಡುಬಿನ ಲಸಿಕೆಯನ್ನು ಉಪಯೋಗಿಸಿ ಜಾನುವಾರುಗಳಲ್ಲಿ ಕಾಯಿಲೆ ನಿಯಂತ್ರಿಸಲಾಗುತ್ತಿದೆ. ಲಸಿಕೆ ಹಾಕಿಸಿದ ಮೇಲೆ ರೋಗನಿರೋಧಕ ಶಕ್ತಿ ಬೆಳವಣಿಗೆಯಾಗಲು 10 ರಿಂದ 21 ದಿನ ಬೇಕಾಗುತ್ತದೆ. ವೈರಸ್ ದೇಹ ಸೇರಿಕೊಂಡಿದ್ದು ಇನ್ನು ಚಿನ್ಹೆಗಳನ್ನು ತೋರದಿರುವ ಜಾನುವಾರಿಗೆ ಲಸಿಕೆ ಹಾಕಿದರೆ ಕೆಲವೇ ದಿನಗಳಲ್ಲಿ ಕಾಯಿಲೆಯ ಲಕ್ಷಣ ಕಾಣಿಸಬಹುದು. ಅಲ್ಲೊಂದು ಇಲ್ಲೊಂದು ಕಂಡುಬರುವ ಇಂಥ ಪ್ರಕರಣಗಳು ಲಸಿಕೆ ಹಾಕಿಸದಿರಲು ಕಾರಣವಾಗಬಾರದು. ಎಲ್ಲ ರೈತರು ಜಾನುವಾರುಗಳಿಗೆ ಲಸಿಕೆ ಹಾಕಿಸಿದರೆ ಮಾತ್ರ ರೋಗವನ್ನು ನಿಯಂತ್ರಿಸಲು ಸಾಧ್ಯ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು. ಲಸಿಕೆ ಹಾಕಿಸಿದ ನಂತರ ದೇಹದಲ್ಲಿ ಬೆಳವಣಿಗೆಯಾಗುವ ರೋಗನಿರೋಧಕ ಶಕ್ತಿ ಒಂದು ವರ್ಷದವರೆಗೂ ಜಾನುವಾರನ್ನು ಕಾಪಾಡುತ್ತದೆ.

ಮುಂಜಾಗ್ರತಾ ಕ್ರಮ: ಕಾಯಿಲೆಗೆ ತುತ್ತಾದ ರಾಸನ್ನು ತಕ್ಷಣ ಬೇರೆ ರಾಸುಗಳಿಂದ ಪ್ರತ್ಯೇಕಿಸಬೇಕು. ರೋಗಗ್ರಸ್ತ ಜಾನುವಾರುಗಳನ್ನು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ತೆಗೆದುಕೊಂಡು ಹೋಗುವುದನ್ನು ನಿಲ್ಲಿಸಬೇಕು. ರೋಗ ಕಂಡು ಬಂದ ಪ್ರದೇಶದಲ್ಲಿನ ನಾಲ್ಕು ತಿಂಗಳ ಮೇಲಿನ ಎಲ್ಲ ಆರೋಗ್ಯವಂತ ರಾಸುಗಳಿಗೆ ಲಸಿಕೆ ಹಾಕಿಸಬೇಕು. ಜಾನುವಾರು ಮಂಕಾಗಿದ್ದರೆ, ರೋಗ ಲಕ್ಷಣ ಕಂಡು ಬಂದಿದ್ದರೆ ಅಂಥ ರಾಸುಗಳಿಗೆ ಲಸಿಕೆ ಹಾಕಿಸಬಾರದು. ಎಲ್ಲ ರಾಸುಗಳಿಗೂ ವೈದ್ಯರ ಶಿಫಾರಸಿನಂತೆ ಔಷಧ ಹಾಕಿ, ಕೊಟ್ಟಿಗೆಗೆ ಸೋಂಕು ನಿವಾರಕ ಸಿಂಪಡಿಸಿ ಉಣ್ಣೆ ನಿಯಂತ್ರಣ ಮಾಡಬೇಕು. ಒಂದು ವೇಳೆ ರೋಗಗ್ರಸ್ತ ಜಾನುವಾರು ಸತ್ತರೆ ಅದನ್ನು ಸೂಕ್ತವಾಗಿ ವಿಲೇವಾರಿ ಮಾಡುವುದು ಬಹಳ ಮುಖ್ಯ. ಸತ್ತ ಜಾನುವಾರನ್ನು ಆಳವಾದ ಗುಂಡಿಯಲ್ಲಿ ಹೂಳಿ ಸೋಂಕು ನಿವಾರಕ ಸಿಂಪಡಿಸಬೇಕು.

ಜನರಿಗೆ ಹರಡದು: ಚರ್ಮಗಂಟು ರೋಗ ಮಾನವರಿಗೆ ಬರುವುದಿಲ್ಲ. ಆದ್ದರಿಂದ ರೋಗಗ್ರಸ್ತ ಹಸು-ಎಮ್ಮೆಯ ಹಾಲಿನಿಂದ ತೊಂದರೆಯಾಗಬಹುದೆಂಬ ಆತಂಕ ಬೇಡ. ಆದರೆ, ಹಾಲನ್ನು ಕಾಯಿಸಿ ಕುಡಿಯುವುದನ್ನು ಮರೆಯಬಾರದು.

(ಲೇಖಕರು- ನಿವೃತ್ತ ಯೋಜನಾ ನಿರ್ದೇಶಕರು, ದಾವಣಗೆರೆ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net