ಬಾಳು ಬೆಳಗುತ್ತಿರುವ ಬಾಳೆ ದಿಂಡು; ಯೂಟ್ಯೂಬ್​ನಲ್ಲಿ ಪ್ರಧಾನಿ ಮೋದಿ ಕೊಟ್ಟ ಐಡಿಯಾ..

Vittavani Lead 1
Published on
ತೆಂಗಿನಂತೆ ಈಗೀಗ ಬಾಳೆಯೂ ಬಹೂಪಯೋಗಿಯಾಗುತ್ತಿದ್ದು, ಬಾಳೆ ಹಣ್ಣು, ಬಾಳೆ ಎಲೆಗಳ ಬಳಿಕ ಇದೀಗ ಬಾಳೆದಿಂಡಿನ ಸದುಪಯೋಗವು ನಡೆಯುತ್ತಿದೆ. ಬಾಳೆ ಬೆಲೆ ಕುಸಿತದಿಂದ ಸಂಕಷ್ಟಕ್ಕೀಡಾಗುತ್ತಿದ್ದ ರೈತರಿಗೆ ಬಾಳೆಕಾಯಿ ಹುಡಿ ಮಾಡಿ ಮೌಲ್ಯವರ್ಧನೆ ಮಾಡುವ ಪ್ರಯೋಗಗಳು ನಡೆದಿದ್ದವು.ಇದನ್ನು ಮೈದಾಹಿಟ್ಟಿಗೆ ಪರ್ಯಾಯವಾಗಿ ಬಳಸಲಾಗುತ್ತಿದೆ. ಇದೀಗ ಕಾಯಿ ಬಿಟ್ಟ ನಂತರ ಕಡಿದು ಹಾಕುವ ಬಾಳೆ ದಿಂಡಿನಿಂದ ವಿವಿಧ ಉತ್ಪನ್ನಗಳನ್ನು ತಯಾರಿಸುವ ಪ್ರಯತ್ನಗಳು ಆರಂಭವಾಗಿವೆ. ಅನುಪಯುಕ್ತವಾಗಿ ಬಿಸಾಡುವ ಬಾಳೆದಿಂಡುಗಳು ರೈತರಿಗೆ ಒಂದಿಷ್ಟು ಆದಾಯ ತಂದುಕೊಡಬಹುದು.

| ರಾಜು ಹೊಸೂರು ಸಂತೇಮರಹಳ್ಳಿ

ಬಳಕೆಯಾಗದೆ ಬಿಸಾಡುವ ಅಥವಾ ಬೆಂಕಿ ಹಚ್ಚಿ ಸುಟ್ಟುಹಾಕುವ ಬಾಳೆ ದಿಂಡಿನಿಂದಲೂ ಉಪಯೋಗಗಳಿವೆ. ಇವುಗಳಿಂದ ಉತ್ಪನ್ನಗಳನ್ನು ತಯಾರಿಕೆ ಮಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಕೊಟ್ಟ ಸಲಹೆಯನ್ನು ಯೂಟ್ಯೂಬ್​ನಲ್ಲಿ ನೋಡಿದ ಮಹಿಳೆ ಈಗ ಉದ್ಯಮಿಯಾಗಿ ಹೊರಹೊಮ್ಮಿದ್ದಾರೆ. ಮೂಲತಃ ಗುಂಡ್ಲುಪೇಟೆ ತಾಲೂಕು ಆಲಹಳ್ಳಿ ಗ್ರಾಮದ ಎಂ.ಟೆಕ್ ಪದವೀಧರೆ ವರ್ಷಾ ಬಾಳೆ ದಿಂಡಿನಿಂದ ಉತ್ಪನ್ನಗಳ ತಯಾರಿಕೆ ಮಾಡುವ ಉದ್ಯಮ ಶುರು ಮಾಡಿದ್ದಾರೆ. ಅದಕ್ಕಾಗಿ ಚಾಮರಾಜನಗರ ತಾಲೂಕಿನ ಉಮ್ಮತ್ತೂರು ಗ್ರಾಮದಲ್ಲಿ ‘ಆಕೃತಿ ಇಕೋ ಫ್ರೆಂಡ್ಲಿ ಎಂಟರ್​ಪ್ರೖೆಸಸ್’ ಘಟಕ ಸ್ಥಾಪನೆ ಮಾಡಿದ್ದಾರೆ. ಮೈಸೂರಿನ ಖಾಸಗಿ ಕಂಪನಿಯ ಉದ್ಯೋಗಿ ಶ್ರೀಕಂಠಸ್ವಾಮಿ ಮತ್ತು ವರ್ಷಾ ದಂಪತಿ ಕರೊನಾ 2ನೇ ಲಾಕ್​ಡೌನ್ ಸಂದರ್ಭದಲ್ಲಿ ಹೊಸದಾಗಿ ಉದ್ಯಮ ಶುರು ಮಾಡಬೇಕೆಂದು ಯೋಚಿಸಿದ್ದರು. ಐಡಿಯಾಗಳಿಗಾಗಿ ಯೂಟ್ಯೂಬ್ ನೋಡುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರ ಹಿನ್ನೆಲೆ ಧ್ವನಿ ಮತ್ತು ಬಾಳೆ ದಿಂಡಿನಿಂದ ಉತ್ಪನ್ನ ತಯಾರಿಸುವ ಉದ್ಯಮ ನಡೆಯುತ್ತಿರುವ ಹಳ್ಳಿಗಳ ವಿಡಿಯೋ ಕಣ್ಣಿಗೆ ಬಿದ್ದಿದೆ. ಅನುಪಯುಕ್ತವೆಂದು ಪರಿಗಣಿಸುವ ಬಾಳೆ ದಿಂಡಿನಿಂದ ಪೇಪರ್ ಕಪ್, ದಾರ, ಚಾಪೆ, ಬಗೆಬಗೆಯ ತಿಂಡಿ-ತಿನಿಸುಗಳನ್ನು ಸಿದ್ಧಪಡಿಸುವ ಮಾಹಿತಿ ಆ ದೃಶ್ಯಾವಳಿಯಲ್ಲಿ ಇತ್ತು. ಅದರಿಂದ ಪ್ರೇರಣೆಗೊಂಡ ದಂಪತಿ, ಬಾಳೆ ದಿಂಡಿನ ಉತ್ಪನ್ನ ತಯಾರಿಕೆಯ ಉದ್ಯಮ ಶುರು ಮಾಡಲು ಚಿಂತನೆ ನಡೆಸಿದರು. ಗೂಗಲ್​ನಲ್ಲಿ ಹುಡುಕಾಟ ನಡೆಸಿದಾಗ ಜಿಲ್ಲೆಯ ಸಮೀಪದಲ್ಲೇ ಇರುವ ತಮಿಳುನಾಡಿನ ಕೊಯಮತ್ತೂರಿನಲ್ಲಿ ಇಕೋ ಗ್ರೀನ್ ಯೂನಿಟ್ ಸ್ಥಾಪಿಸಿರುವುದು ತಿಳಿಯಿತು. ಅಲ್ಲಿಗೆ ಹೋದ ದಂಪತಿಗೆ ಪ್ರತ್ಯಕ್ಷ ಅನುಭವವಾಯಿತು. ಬ್ಯಾಂಕ್​ನಿಂದ ಸಾಲ ಪಡೆಯದೆ ತಮ್ಮ ಬಳಿ ಇದ್ದ 3 ಲಕ್ಷ ರೂ. ಬಂಡವಾಳ ಹೂಡಿ 2 ಯಂತ್ರೋಪಕರಣಗಳನ್ನು ಖರೀದಿ ಮಾಡಿದರು. ಬಾಳೆ ದಿಂಡಿನಿಂದ ಉತ್ಪನ್ನಗಳನ್ನು ತಯಾರಿಸುವ ಘಟಕವನ್ನು ಉಮ್ಮತ್ತೂರಿನಲ್ಲಿ ಸ್ಥಾಪಿಸಿ ಕೆಲಸ ಶುರು ಮಾಡಿದ್ದಾರೆ.

ಕಲ್ಪವೃಕ್ಷ ಬಾಳೆ: ತೆಂಗು ಮಾತ್ರವಲ್ಲದೆ ಬಾಳೆಯೂ ಕಲ್ಪವೃಕ್ಷ ಎನ್ನುವುದನ್ನು ಸಾಬೀತು ಮಾಡಲು ಹೊರಟಿದೆ ‘ಆಕೃತಿ ಇಕೋ ಫ್ರೆಂಡ್ಲಿ ಎಂಟರ್​ಪ್ರೖೆಸಸ್’. ಸದ್ಯಕ್ಕೆ ತಿನ್ನಲು ಬಾಳೆಹಣ್ಣು, ಊಟಕ್ಕೆ ಎಲೆ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮುಂದುವರಿದು ಬಾಳೆ ದಿಂಡಿನಿಂದ ಚಾಪೆ ತಯಾರಿಕೆಯಾಗುತ್ತಿದೆ. ಇದಲ್ಲದೆ, ಬಾಳೆ ದಿಂಡಿನ ರಸದಲ್ಲಿ ಪೊಟ್ಯಾಷಿಯಂ ಅಂಶ ಇರುವುದನ್ನು ವರ್ಷಾ ಅವರು ಗುರುತಿಸಿದ್ದು, ಇದರಿಂದ ಸಾವಯವ ಪೊಟ್ಯಾಷಿಯಂ, ದಿಂಡಿನಿಂದ ಬರುವ ಗಟ್ಟಿ ಕಸವನ್ನು ಭೂಮಿಗೆ ಹಾಕಿ ಕೊಳೆಸಿ ಸಾವಯವ ಗೊಬ್ಬರ ಮಾಡá-ವ ಚಿಂತನೆ ಮಾಡಿದ್ದಾರೆ. ಜತೆಗೆ, ಬಾಳೆ ದಿಂಡಿನ ರಸದಿಂದ ವೈನ್ ತಯಾರಿಕೆ ಮಾಡಬಹುದು ಎಂಬುದನ್ನೂ ಕಂಡುಕೊಂಡಿದ್ದಾರೆ.

ಬಾಳೆದಿಂಡಿನಿಂದ ಚಾಪೆ ತಯಾರಿಕೆ: ಸಾಮಾನ್ಯವಾಗಿ ರೈತರು ಬಾಳೆ ಬೆಳೆದ ಬಳಿಕ ದಿಂಡನ್ನು ಕತ್ತರಿಸಿ ಅದಕ್ಕೆ ಜಮೀನಿನಲ್ಲೇ ಬೆಂಕಿ ಹಚ್ಚುತ್ತಾರೆ, ಇಲ್ಲದಿದ್ದರೆ ಬಿಸಾಡುತ್ತಾರೆ. ಆದರೆ ಇವುಗಳನ್ನು ‘ಆಕೃತಿ ಇಕೋ ಫ್ರೆಂಡ್ಲಿ ಎಂಟರ್​ಪ್ರೖೆಸಸ್’ ಬಳಕೆ ಮಾಡಿಕೊಂಡು ಚಾಪೆ, ದಾರ, ಮ್ಯಾಟ್ ತಯಾರು ಮಾಡುತ್ತಿದೆ. ಉಮ್ಮತ್ತೂರು ಸುತ್ತಮುತ್ತಲಿನ ಜಮೀನುಗಳಲ್ಲಿ ಕೆಲಸ ಮಾಡುವ ಕೂಲಿಕಾರರನ್ನು ಸಂರ್ಪಸಿ ಬಾಳೆ ಕಟಾವು ಮಾಡಿಸುವ ಜಮೀನು ಮಾಲೀಕರ ಮಾಹಿತಿ ಪತ್ತೆ ಮಾಡಿ, ಬಳಿಕ ಅವರಿಗೆ ತಾವು ಶುರು ಮಾಡಿರುವ ಉದ್ಯಮದ ಬಗ್ಗೆ ತಿಳಿಸಿ, ಅನುಪಯುಕ್ತ ಬಾಳೆ ದಿಂಡನ್ನು ಪಡೆದುಕೊಳ್ಳುತ್ತಿದ್ದಾರೆ. 2 ಯಂತ್ರಗಳಲ್ಲಿ ದಿನಕ್ಕೆ 4 ಮೀಟರ್ ಚಾಪೆ ಸಿದ್ಧವಾಗುತ್ತಿದೆ. ಕೊಯಮತ್ತೂರಿನ ಇಕೋ ಗ್ರೀನ್ ಯೂನಿಟ್​ನವರು ಚಾಪೆಯನ್ನು ತಿಂಗಳಿಗೊಮ್ಮೆ ಖರೀದಿ ಮಾಡಲಿದ್ದು, ಬ್ಯಾಗ್, ಯೋಗ ಮ್ಯಾಟ್, ದಾರ ಇತರ ಉತ್ಪನ್ನಗಳನ್ನೂ ಸಿದ್ಧಪಡಿಸಿ ಮಾರಾಟ ಮಾಡುತ್ತಿದ್ದಾರೆ.

ಬ್ಯಾಂಕ್ ನೆರವಿಗಾಗಿ ಅಲೆದಾಟ: ಬಾಳೆ ದಿಂಡಿನ ಉತ್ಪನ್ನ ತಯಾರಿಕಾ ಘಟಕ ಸ್ಥಾಪನೆಗೆ ಬಂಡವಾಳ ಹೂಡಲು ಸಾಲ ಸೌಲಭ್ಯಕ್ಕಾಗಿ ವರ್ಷಾ ಅವರು ಬ್ಯಾಂಕ್ ಸಂರ್ಪಸಿದ್ದಾರೆ. ಸಾಲ ಪಡೆಯಲು ಅನುಸರಿಸಬೇಕಾದ ನಿಯಮಗಳು, ಷರತ್ತುಗಳ ಪ್ರಕಾರ ದಾಖಲೆ ಒದಗಿಸುವಿಕೆಗೆ ಅಡ್ಡಿಗಳು ಉಂಟಾಗಿದೆ. ಸುಲಭವಾಗಿ ಬ್ಯಾಂಕ್​ನಿಂದ ಸಾಲ ಸೌಲಭ್ಯ ಪಡೆಯಲು ಸಾಧ್ಯವಿಲ್ಲ ಎಂದು ತಿಳಿದ ವರ್ಷಾ ಅವರು 3 ಲಕ್ಷ ರೂ. ಬಂಡವಾಳವನ್ನು ಕೈಯಿಂದ ಭರಿಸಿ ಉದ್ಯಮ ಶುರು ಮಾಡಿದ್ದಾರೆ.

ಬದುಕಲು ನೂರೆಂಟು ದಾರಿಗಳಿವೆ. ಒಳ್ಳೆಯ ಸಂಬಳಕ್ಕಾಗಿ ಸರ್ಕಾರಿ ಕೆಲಸ, ಖಾಸಗಿ ಕಂಪನಿಗಳಿಗೆ ಸೇರಬೇಕೆಂದಿಲ್ಲ. ವಿಭಿನ್ನ ಆಲೋಚನೆಗಳನ್ನು ಕಾರ್ಯರೂಪಕ್ಕಿಳಿಸಿದರೆ ಲಾಭದಾಯಕ ಉದ್ಯಮ ಶುರು ಮಾಡಬಹುದು. ಪ್ಲಾಸ್ಟಿಕ್​ಗೆ ಪರ್ಯಾಯ ಬಾಳೆಯಿಂದ ತಯಾರಿಸಿದ ಬ್ಯಾಗ್​ಗಳನ್ನು ಬಳಕೆ ಮಾಡಬಹುದು. ಈ ನಿಟ್ಟಿನಲ್ಲಿ ಹೊಸ ಉದ್ಯಮ ಶುರು ಮಾಡಿದ್ದೇನೆ. | ವರ್ಷಾ ಶ್ರೀಕಂಠಸ್ವಾಮಿ

ಮಾರುಕಟ್ಟೆ ಸೃಷ್ಟಿ ಪ್ಲ್ಯಾನ್​: ಸದ್ಯಕ್ಕೆ ಕೊಯಮತ್ತೂರಿನ ಇಕೋ ಗ್ರೀನ್ ಯೂನಿಟ್​ಗೆ ಬಾಳೆದಿಂಡಿನಿಂದ ಹೆಣೆದ ಚಾಪೆಯನ್ನು ಪೂರೈಕೆ ಮಾಡಲು ತೀರ್ವನಿಸಲಾಗಿದೆ. ಮುಂದಿನ ದಿನಗಳಲ್ಲಿ ಮೈಸೂರು ಮತ್ತು ಚಾಮರಾಜನಗರದಲ್ಲಿ ಮಳಿಗೆ ತೆರೆದು ಬಾಳೆ ದಿಂಡಿನಿಂದ ಸಿದ್ಧಪಡಿಸಿದ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಯೋಜನೆಯನ್ನು ವರ್ಷಾ ಹೊಂದಿದ್ದಾರೆ.

ಉದ್ಯಮ ವಿಸ್ತರಣೆ ಕನಸು: ವರ್ಷಾ ಅವರ ಹೊಸ ಉದ್ಯಮಕ್ಕೆ ಪತಿ ಶ್ರೀಕಂಠಸ್ವಾಮಿ ಸಾಥ್ ನೀಡಿದ್ದಾರೆ. ಗುಂಡ್ಲುಪೇಟೆ ತಾಲೂಕಿನ ಆಲಹಳ್ಳಿಯ ಲೇ.ಪುಟ್ಟಣ್ಣಶೆಟ್ಟಿ ಮತ್ತು ಜಯಲಕ್ಷ್ಮೀ ದಂಪತಿ ತಮ್ಮ ಪುತ್ರ ಶ್ರೀಕಂಠಸ್ವಾಮಿ, ತಮ್ಮ ವಿದ್ಯಾಭ್ಯಾಸಕ್ಕಾಗಿ ಇದ್ದ ಜಮೀನು ಮಾರಿದ್ದರು. ಅಂದಿನಿಂದಲೂ ಜಮೀನು ಖರೀದಿ ಮಾಡಬೇಕೆಂಬ ಆಸೆ ಇತ್ತು. ಅಂತೆಯೆ, ಉಮ್ಮತ್ತೂರಿನಲ್ಲಿ 3 ಎಕರೆ ಜಮೀನು ಖರೀದಿ ಮಾಡಿದ್ದಾರೆ. ಇಲ್ಲಿ ಬಾಳೆ, ಮಾವು, ತೆಂಗು ಹಾಕಿದ್ದು, ಜತೆಗೆ ಬಾಳೆ ದಿಂಡಿನಿಂದ ಉತ್ಪನ್ನಗಳನ್ನು ತಯಾರಿಕೆ ಮಾಡುವ ಘಟಕ ಸ್ಥಾಪಿಸಿದ್ದಾರೆ. ಇದರಿಂದ ಐವರಿಗೆ ಉದ್ಯೋಗ ಸಿಕ್ಕಿದೆ. ಜಿಲ್ಲೆಯಲ್ಲಿ ಬಾಳೆ ಬೆಳೆಯುವ ರೈತರ ಸಂಖ್ಯೆ ಹೆಚ್ಚಿದೆ. ಫಲ ಕೈಸೇರಿದ ಮೇಲೆ ಬಿಸಾಡುವ ದಿಂಡುಗಳನ್ನು ಆರಂಭದಲ್ಲಿ ರೈತರಿಂದ ಉಚಿತವಾಗಿ ಪಡೆದುಕೊಳ್ಳಲಾಗುತ್ತಿತ್ತು. ಉದ್ಯಮ ದೊಡ್ಡ ಮಟ್ಟಕ್ಕೆ ಬೆಳೆದರೆ ರೈತರಿಗೆ ಒಂದು ದಿಂಡಿಗೆ 8ರಿಂದ 10 ರೂ. ನೀಡಿ ಖರೀದಿ ಮಾಡುವ ಚಿಂತನೆಯೂ ಇದೆ. ಉದ್ಯಮ ಶುರು ಮಾಡಿ ಕೇವಲ 15 ದಿನಗಳಾಗಿವೆ. 6 ತಿಂಗಳು ಕನಿಷ್ಠ 20 ಸಾವಿರ ರೂ. ಆದಾಯ ದೊರೆಯಬಹುದೆಂದು ನಿರೀಕ್ಷೆ ಇದೆ. ಬಾಳೆ ದಿಂಡಿನಿಂದ ತಯಾರಿಸಿದ ಚಾಪೆಯನ್ನು ಕೊಯಮತ್ತೂರಿನ ಕಂಪನಿ ನಮ್ಮಿಂದ ಖರೀದಿ ಮಾಡುತ್ತದೆ. ಒಂದು ಮೀಟರ್ ಚಾಪೆಗೆ 120ರಿಂದ 130 ರೂ. ಕೊಡುತ್ತದೆ. ಮುಂದಿನ ದಿನಗಳಲ್ಲಿ ಉತ್ಪಾದನೆ ಹೆಚ್ಚಳ ಮಾಡಿ ಆದಾಯ ದ್ವಿಗುಣಗೊಳಿಸಿಕೊಳ್ಳುತ್ತೇವೆ ಎಂಬುದು ವರ್ಷಾ ಅವರ ಹೇಳಿಕೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net