ತಾಳೆ ಬೆಳೆಯ ವಿಸ್ತರಣೆ, ರೈತರ ಆದಾಯ ಸೃಜನೆ: ತಾಳೆಗಾಗಿ ಪ್ರತ್ಯೇಕ ನೀತಿ ರಚಿಸಿದ ರಾಜ್ಯ ಸರ್ಕಾರ..

Palm
Published on

| ಅರವಿಂದ ಅಕ್ಲಾಪುರ ಶಿವಮೊಗ್ಗ

ರಾಜ್ಯದಲ್ಲಿ 90ರ ದಶಕದಲ್ಲಿ ಸದ್ದು ಮಾಡಿದ್ದ ತಾಳೆ ಬೆಳೆ ಈಗ ಮತ್ತೆ ರೈತರ ಆಕರ್ಷಣೆಯ ಕೇಂದ್ರಬಿಂದುವಾಗಿದೆ. ಬದಲಾದ ಅಂತಾರಾಷ್ಟ್ರೀಯ ಮಾರುಕಟ್ಟೆ ತಾಳೆ ಬೆಳೆಗೆ ಸೂಕ್ತವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳೂ ತಾಳೆ ಬೆಳೆಗಾರರ ಬೆನ್ನಿಗೆ ನಿಂತಿವೆ. ತಾಳೆ ಬೆಳೆಗೆ ಅವಶ್ಯಕವಾಗಿರುವ ನೀರು, ಪೋಷಕಾಂಶಯುಕ್ತ ಭೂಮಿ ಗುರುತಿಸುವ ಕಾರ್ಯ ತೋಟಗಾರಿಕೆ ಇಲಾಖೆಯಿಂದ ನಡೆಯುತ್ತಿದೆ. ಆಂಧ್ರಪ್ರದೇಶ ಮಾದರಿಯಲ್ಲೇ ರಾಜ್ಯಕ್ಕೆ ಪ್ರತ್ಯೇಕವಾದ ತಾಳೆ ಬೆಳೆ ನೀತಿ ರೂಪಿಸಲು ಕರಡು ಸಿದ್ಧಗೊಂಡಿದೆ. ಪ್ರಸ್ತುತ 8 ಸಾವಿರ ಹೆಕ್ಟೇರ್​ನಲ್ಲಿರುವ ತಾಳೆಯನ್ನು ಮುಂದಿನ ಐದು ವರ್ಷಗಳಲ್ಲಿ 25 ಸಾವಿರ ಹೆಕ್ಟೇರ್​ಗೆ ವಿಸ್ತರಿಸಲು ರಾಜ್ಯ ಸರ್ಕಾರ ಮುಂದಾಗಿದೆ.

ಸರ್ಕಾರದ ಪ್ರಯತ್ನಕ್ಕೆ ಬೆಳೆಗಾರರಿಂದಲೂ ಬೆಂಬಲ ಸಿಗುತ್ತಿದೆ. ತಾಳೆ ಬೆಳೆ ಬಗ್ಗೆ ಜಾಗೃತಿ ಹೆಚ್ಚುತ್ತಿದೆ. ಏರುತ್ತಿರುವ ಧಾರಣೆ ರೈತರನ್ನು ಆಕರ್ಷಿಸುತ್ತಿದೆ. ಅಡಕೆಯಂತೆ ಇದೂ ಅಸ್ಥಿರ ಮಾರುಕಟ್ಟೆಯಾದರೂ ಬೆಳೆಗಾರರು ಕೈಸುಟ್ಟುಕೊಳ್ಳುವ ಪ್ರಮೇಯ ತೀರಾ ಕಡಿಮೆ. ಮೇಲಾಗಿ ವರ್ಷಪೂರ್ತಿ ಆದಾಯ ತಂದುಕೊಡುವ ಬೆಳೆಯಾಗಿರುವುದರಿಂದ ರೈತರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ.

10 ಜಿಲ್ಲೆಯಲ್ಲಿ ತಾಳೆ: ಕೊಡಗು, ಬಾಗಲಕೋಟೆ, ಹಾಸನ, ಶಿವಮೊಗ್ಗ, ಮಂಡ್ಯ, ಮೈಸೂರು, ಬೆಳಗಾವಿ, ಕೊಪ್ಪಳ, ವಿಜಯಪುರ, ಕಲಬುರಗಿ ಜಿಲ್ಲೆಗಳಲ್ಲಿ ಪ್ರಸ್ತುತ ತಾಳೆ ಬೆಳೆಯಲಾಗುತ್ತಿದೆ. ವಿಶೇಷವೆಂದರೆ ತಾಳೆ ಯಾವುದೇ ಜಿಲ್ಲೆಯ ಸಾಂಪ್ರದಾಯಿಕ ಬೆಳೆಯಲ್ಲ. ಇದು ಸಂಪೂರ್ಣ ಜಿಲ್ಲೆಯನ್ನೂ ಆಕ್ರಮಿಸಿಕೊಂಡಿಲ್ಲ. ಕೆಲವು ಭಾಗಗಳಲ್ಲಷ್ಟೇ ಪಸರಿಸಿದೆ. ಇದೀಗ ಯಾದಗಿರಿ, ರಾಯಚೂರು, ಸಿರಗುಪ್ಪ, ಗಂಗಾವತಿ ಮುಂತಾದ ಕಡೆಗಳಲ್ಲೂ ತಾಳೆಯತ್ತ ರೈತರು ಆಕರ್ಷಿತರಾಗುತ್ತಿದ್ದಾರೆ. ಈಗಾಗಲೆ ತಾಳೆ ಸಸಿಗಳಿಗಾಗಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ತೋಟಗಾರಿಕೆ ಇಲಾಖೆ ನಿರಂತರವಾಗಿ ತಾಳೆ ಬೆಳೆ ಕುರಿತು ಜಾಗೃತಿ ಮೂಡಿಸುತ್ತಿದೆ.

ಹೊಸ ತಾಳೆ ನೀತಿಯೇನು?: ಆಂಧ್ರಪ್ರದೇಶದಲ್ಲಿ ತಾಳೆ ಬೆಳೆ ಇತ್ತೀಚಿನ ವರ್ಷಗಳಲ್ಲಿ ವ್ಯಾಪಕವಾಗುತ್ತಿದೆ. ರಾಜ್ಯದ ತೋಟಗಾರಿಕೆ ಇಲಾಖೆ ಅಧಿಕಾರಿಗಳ ತಂಡ ಆಂಧ್ರದಲ್ಲಿ ಅಧ್ಯಯನ ನಡೆಸಿ ಅಲ್ಲಿನ ಹಲವು ಅಂಶಗಳನ್ನು ಇಲ್ಲಿ ಅಳವಡಿಸಿ ಹೊಸ ತಾಳೆ ನೀತಿ ರೂಪಿಸಿದೆ. ತಾಳೆ ಗಿಡಗಳನ್ನು ಪೂರೈಕೆ ಮಾಡುವ ಕಂಪನಿಗಳ ಸಹಭಾಗಿತ್ವ ಪಡೆಯುವುದು, ರೈತರು-ತೋಟಗಾರಿಕೆ ಇಲಾಖೆ-ಕಂಪನಿ ಹೀಗೆ ಮೂವರ ಸಮನ್ವಯದಿಂದ ಕಾರ್ಯನಿರ್ವಹಿಸುವುದು ಈ ನೀತಿಯ ಪ್ರಮುಖ ಅಂಶ. ತಾಳೆಗೆ ಸೂಕ್ತ ಪೋಷಕಾಂಶ ಇರುವ ಭೂಮಿ ಗುರುತಿಸುವುದು, ಪೂರಕವಾಗಿ ನೀರಾವರಿ ವ್ಯವಸ್ಥೆ ಇರುವಂತೆ ನೋಡಿಕೊಳ್ಳುವುದು ಈ ನೀತಿಯಲ್ಲಿ ಸೇರಿದೆ.

ಎಲ್ಲಿ ಸಂಪರ್ಕಿಸುವುದು?: ತಾಳೆ ಬೆಳೆಯಲು ಮುಂದಾಗುವ ರೈತರು ತಾಲೂಕು ತೋಟಗಾರಿಕೆ ಇಲಾಖೆಯನ್ನು ಸಂರ್ಪಸಿದರೆ ಪ್ರಾಥಮಿಕ ಮಾಹಿತಿ ದೊರೆಯುತ್ತದೆ. ಅಲ್ಲಿಂದಲೇ ಜಿಲ್ಲೆ ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳನ್ನು ಸಂರ್ಪಸಿ ಸಮನ್ವಯ ಸಾಧಿಸಲಾಗುತ್ತದೆ. ಬಳಿಕ ತಾಳೆ ಉತ್ಪಾದಕ ಕಂಪನಿಗಳು ರೈತರನ್ನು ಸಂರ್ಪಸಲಿವೆ.

ತಾಳೆ ಬೆಳೆ ವಿಸ್ತರಣೆಗಾಗಿ ರಾಜ್ಯಕ್ಕೆ ಪ್ರತ್ಯೇಕ ನೀತಿ ರೂಪಿಸಲಾಗುತ್ತಿದೆ. ಈಗಾಗಲೆ ಮುಂದಿನ ಎರಡು ವರ್ಷಗಳಲ್ಲಿ ತಾಳೆ ಬೆಳೆ ವಿಸ್ತರಣೆಗೆ ಕ್ರಮ ಕೈಗೊಂಡು ಆಸಕ್ತ ರೈತರ ಪಟ್ಟಿ ಮಾಡಲಾಗಿದೆ. ಐದು ವರ್ಷಗಳಲ್ಲಿ 25 ಸಾವಿರ ಹೆಕ್ಟೇರ್​ಗೆ ತಾಳೆ ವಿಸ್ತರಣೆ ಮಾಡಬೇಕೆಂಬ ಸಿಎಂ ಬಸವರಾಜ ಬೊಮ್ಮಾಯಿ ಆಶಯದಂತೆ ಯೋಜನೆ ಸಿದ್ಧಗೊಂಡಿದೆ. | ಡಾ. ಪಿ.ಎಂ.ಸೊಬರದ ತೋಟಗಾರಿಕೆ ಇಲಾಖೆ ಅಪರ ನಿರ್ದೇಶಕ (ತಾಳೆ ಬೆಳೆ) ಶಿವಮೊಗ್ಗ ಕೃಷಿ ಹಾಗೂ ತೋಟಗಾರಿಕೆ ವಿವಿಯು 2015ರಿಂದ ತಾಳೆ ಬೆಳೆ ಕುರಿತು ಸಂಶೋಧನೆ, ಪೋಷಕಾಂಶಗಳ ನಿರ್ವಹಣೆ ಕುರಿತು ಅಧ್ಯಯನ ನಡೆಸಲು ಬಾವಿಕೆರೆ ಸಂಶೋಧನಾ ಕೇಂದ್ರದಲ್ಲಿ ವ್ಯವಸ್ಥೆ ಮಾಡಿಕೊಂಡಿದೆ. ಇಲ್ಲಿ 20 ಎಕರೆ ಪ್ರದೇಶದಲ್ಲಿ ತಾಳೆ ಬೆಳೆಯಲಾಗುತ್ತಿದೆ. ಪೋಷಕಾಂಶಗಳ ಕುರಿತ ಸಂಶೋಧನೆ ಬಾವಿಕೆರೆಯಲ್ಲಿ ಹೊರತುಪಡಿಸಿದರೆ ಆಂಧ್ರದ ಪೆಡವಗಿಯಲ್ಲಿ ಮಾತ್ರ ನಡೆಯುತ್ತಿದೆ. | ಡಾ. ನಾಗರಾಜಪ್ಪ ಅಡಿವೆಪ್ಪರ್ ತಾಳೆ ಬೆಳೆ ಪ್ರಧಾನ ವಿಜ್ಞಾನಿ

ಗಿಡಗಳಿಗೆ ವ್ಯಾಪಕ ಬೇಡಿಕೆ: ತಾಳೆ ಗಿಡಗಳನ್ನು ಉತ್ಪಾದಿಸುವ ನಾಲ್ಕು ಬೀಜೋತ್ಪಾನಾ ಕೇಂದ್ರಗಳಿವೆ. ಇಂತಹ ಒಂದು ಕೇಂದ್ರ ಮೈಸೂರಿನಲ್ಲಿದೆ. ರಾಜ್ಯದಲ್ಲಿ ಅಗತ್ಯವಿರುವ ತಾಳೆ ಗಿಡಗಳ ಪೈಕಿ ಕೇವಲ ಶೇ.15 ಉತ್ಪಾದನೆಯಾಗುತ್ತಿದೆ. ಉಳಿದ ಶೇ.85 ಅನ್ನು ಥಾಯ್ಲೆಂಡ್, ಕೋಸ್ಟರಿಕಾ, ಮಲೇಷ್ಯಾ, ಇಂಡೋನೇಷ್ಯಾ ಮುಂತಾದ ಕಡೆಯಿಂದ ಆಮದು ಮಾಡಿಕೊಳ್ಳಬೇಕು. ಅಲ್ಲಿಂದ ಗಿಡಗಳನ್ನು ತಂದು ಅವುಗಳನ್ನು ಸಂರಕ್ಷಿಸಿ ಬೆಳೆಗಾರರಿಗೆ ಒದಗಿಸಲು 22 ತಿಂಗಳು ಬೇಕಾಗುತ್ತದೆ. ಇದೇ ಕಾರಣಕ್ಕೆ ಮುಂಚಿತವಾಗಿ ರೈತರ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಈಗ ನೋಂದಣಿ ಮಾಡಿಕೊಂಡವರಿಗೆ ಗಿಡಗಳನ್ನು ಪೂರೈಸಲು ಎರಡು ವರ್ಷ ಬೇಕಾಗಬಹುದು.

ತಾಳೆ ಬೆಳೆ ಏನು? ಎತ್ತ?

  • ಒಂದು ಎಕರೆ ಭೂಮಿಯಲ್ಲಿ 43 ತಾಳೆ ಗಿಡ ನೆಡಬಹುದು
  • ಗಿಡ 5ನೇ ವರ್ಷದಿಂದಲೇ ಫಸಲು ನೀಡುತ್ತದೆ
  • 8ನೇ ವರ್ಷಕ್ಕೆ ಇಳುವರಿ ಉತ್ತಮವಾಗುತ್ತದೆ
  • ಪ್ರತಿ ಎಕರೆಗೆ ವರ್ಷವೊಂದಕ್ಕೆ ಗರಿಷ್ಠ 12 ಟನ್ ಬೆಳೆ ಸಿಗುತ್ತದೆ
  • ಪ್ರಸ್ತುತ ಪ್ರತಿ ಟನ್​ಗೆ 18 ಸಾವಿರ ರೂ. ಧಾರಣೆ ಇದೆ

ಮೂರು ಕಂಪನಿಗಳ ಸಹಭಾಗಿತ್ವ: ಈಗಾಗಲೆ ಅನೇಕ ರಾಜ್ಯಗಳಲ್ಲಿ ತಾಳೆ ಬೆಳೆ ಉತ್ಪಾದನೆಗೆ ಬೆಂಬಲ ನೀಡುತ್ತಿರುವ 3-ಎಫ್, ಕಲ್ಪವೃಕ್ಷ ಹಾಗೂ ಪತಂಜಲಿ ಫುಡ್ ಪ್ರಾಡಕ್ಟ್ ಕಂಪನಿಗಳು ಕರ್ನಾಟಕದಲ್ಲೂ ಕಾರ್ಯನಿರ್ವಹಿಸುತ್ತಿವೆ. ತೋಟಗಾರಿಕೆ ಇಲಾಖೆ ಈ ಕಂಪನಿಗಳೊಂದಿಗೆ ಒಡಬಂಡಿಕೆ ಮಾಡಿಕೊಂಡಿದ್ದು ತಾಳೆ ವಿಸ್ತರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಕಂಪನಿಗಳು ರೈತರಿಗೆ ತಾಳೆ ಬೆಳೆಯ ತಾಂತ್ರಿಕ ಸಲಹೆ, ಗಿಡಗಳ ಪೂರೈಕೆ ಮಾಡುವುದರ ಜತೆಗೆ ಬೆಳೆ ಸಂದರ್ಭದಲ್ಲಿ ರೈತರಿಗೆ ಸೂಕ್ತ ಮಾರ್ಗದರ್ಶನ ನೀಡುತ್ತವೆ. ಮಾರುಕಟ್ಟೆ ಸೌಲಭ್ಯವನ್ನೂ ಒದಗಿಸುತ್ತವೆ.

ಅಂತರ ಬೆಳೆಗೂ ಅವಕಾಶ: ಕಬ್ಬು, ಭತ್ತ ಬೆಳೆಯುವ ಭೂಮಿಯನ್ನು ತಾಳೆ ಬೆಳೆಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ತಾಳೆಯೊಂದಿಗೆ ಅಂತರ ಬೆಳೆಗೂ ಅವಕಾಶವಿರುವುದನ್ನು ವಿಜ್ಞಾನಿಗಳು ದೃಢಪಡಿಸಿದ್ದಾರೆ. ಆರಂಭದ ನಾಲ್ಕು ವರ್ಷದವರೆಗೆ ತರಕಾರಿ, ಕೆಲವು ಹಣ್ಣಿನ ಗಿಡಗಳನ್ನು ಅಂತರ ಬೆಳೆಯಾಗಿ ನೆಡಬಹುದು. ತಾಳೆ ಮರ ದೊಡ್ಡದಾದ ಬಳಿಕ ಪೊದೆ ರೂಪದಲ್ಲಿ ಬೆಳೆಯುವ ಕಾಳುಮೆಣಸಿನ ಗಿಡ ನೆಡಬಹುದು.

ತಾಳೆ ಬೆಳೆಗೇಕೆ ಪ್ರಾಮುಖ್ಯತೆ?: ವಿಶ್ವದಲ್ಲೇ ನಮ್ಮ ದೇಶದಲ್ಲಿ ಅತಿ ಹೆಚ್ಚು ಖಾದ್ಯ ತೈಲ ಬಳಕೆ ಮಾಡಲಾಗುತ್ತದೆ. ಪ್ರಸ್ತುತ ಪ್ರತಿ ವ್ಯಕ್ತಿ ವಾರ್ಷಿಕ 19 ಲೀಟರ್ ಖಾದ್ಯ ತೈಲ ಬಳಕೆ ಮಾಡುತ್ತಾನೆ ಎಂದು ಸಂಶೋಧನೆಯೊಂದು ದೃಢಪಡಿಸಿದೆ. ಯೂಕ್ರೇನ್-ರಷ್ಯಾ ಯುದ್ಧದ ಸಂದರ್ಭದಲ್ಲಿ ಖಾದ್ಯ ತೈಲ ಬೆಲೆ ಹೆಚ್ಚಾಗಿತ್ತು. ಭಾರತದಲ್ಲಿ ವಾರ್ಷಿಕ ಸುಮಾರು 25 ಮಿಲಿಯನ್ ಟನ್ ಖಾದ್ಯ ತೈಲ ಬಳಸಲಾಗುತ್ತದೆ. ಆದರೆ, ನಮ್ಮ ದೇಶದಲ್ಲಿ ಉತ್ಪಾದನೆಯಾಗುವುದು ಕೇವಲ 11 ಮಿಲಿಯನ್ ಟನ್. ಪ್ರತಿ ವರ್ಷ ಖಾದ್ಯ ತೈಲ ಆಮದಿಗೆ 1.40 ಲಕ್ಷ ಕೋಟಿ ರೂ. ವಿದೇಶಿ ವಿನಿಮಯ ವ್ಯಯವಾಗುತ್ತಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆ ಆಧರಿಸಿ ಖಾದ್ಯ ತೈಲದ ಬೆಲೆ ಏರಿಳಿತವಾಗುತ್ತದೆ. ಹೀಗಾಗಿ ಖಾದ್ಯ ತೈಲ ಉತ್ಪಾದನೆಯಲ್ಲಿ ಭಾರತ ಸ್ವಾವಲಂಬನೆ ಸಾಧಿಸಬೇಕು. ಹೀಗಾಗಿ ತಾಳೆ ಬೆಳೆ ವಿಸ್ತರಣೆ ಅನಿವಾರ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net