

| ಕೃಷ್ಣ ಕುಲಕರ್ಣಿ ಕಲಬುರಗಿ
ಹೊಸ ಹೊಸ ಆವಿಷ್ಕಾರದ ಮೂಲಕ ಸದ್ದು ಮಾಡುತ್ತಿರುವ ಆಳಂದ ತಾಲೂಕಿನ ಕೋರಳ್ಳಿ ಗ್ರಾಮದ ಯುವ ರೈತ ಬಸವರಾಜ ಪಾಟೀಲ್ ಕೃಷಿ ಕ್ಷೇತ್ರದಲ್ಲಿ ಮತ್ತೊಂದು ಕ್ರಾಂತಿಗೆ ಸಿದ್ಧರಾಗಿದ್ದಾರೆ. ರಾಜ್ಯದಲ್ಲಿಯೇ ಪ್ರಥಮ ಬಾರಿಗೆ ಹಳದಿ ಕಲ್ಲಂಗಡಿ ಬೆಳೆದು ಸಾಕಷ್ಟು ಸುದ್ದಿಯಲ್ಲಿದ್ದ ಪಾಟೀಲ್, ಇದೀಗ ಮೂರು ವಿಭಿನ್ನ ರೀತಿಯ ಕಲ್ಲಂಗಡಿ ಬೆಳೆದಿದ್ದಾರೆ. ನಿವೃತ್ತ ನೌಕರನಾಗಿರುವ ತಂದೆ ಶ್ರೀಕಾಂತ ಪಾಟೀಲ್ ಸಹ ಕೃಷಿ ಕೆಲಸದಲ್ಲಿ ತೊಡಗಿದ್ದಾರೆ. ಪಾಟೀಲ್ಗೆ ಕೃಷಿಯಲ್ಲಿ ಏನಾದರೂ ಹೊಸದು ಮಾಡಬೇಕು ಎಂಬ ತುಡಿತವಿದ್ದು, ನಿತ್ಯ ಸಂಶೋಧನೆ ನಡೆಸುತ್ತಲೇ ಇರುತ್ತಾರೆ.
ಹೊಲದಿಂದಲೇ ಗ್ರಾಹಕರ ಕೈಗೆ: ರಾಸಾಯನಿಕ ಕಡಿಮೆ ಬಳಸಿ ಸಗಣಿ ಮತ್ತು ಎರೆಹುಳು ಗೊಬ್ಬರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಯಾವುದೇ ಸ್ಪ್ರೇ ಬಳಸಿಲ್ಲ. ಇದೊಂದು ಪಕ್ಕಾ ಸಾವಯವ ಫಸಲು ಎನ್ನಬಹುದು. ಹಳದಿ, ಕೆಂಪು ಹಾಗೂ ಹಳದಿ ಮೇಲ್ಮೈ ಇದ್ದರೂ ಒಳಗಡೆ ಕೆಂಪಿರುವ ಕಲ್ಲಂಗಡಿ ಸೇರಿದ ಪ್ಯಾಕ್ ನೇರವಾಗಿ ಹೊಲದಿಂದಲೇ ಗ್ರಾಹಕರ ಕೈಗೆ ಹಣ್ಣು ಸೇರಲಿದೆ.
ಬಿಕಾಂ ಪದವೀಧರನ ಕಾಯಕ ಮಾದರಿ: ಬಿಕಾಂ ಪದವೀಧರರಾದ ಬಸವರಾಜ ಪಾಟೀಲ್ ಈ ಮೊದಲು ಸ್ವಂತ ಉದ್ಯಮ ದಲ್ಲಿ ತೊಡಗಿಸಿಕೊಂಡಿದ್ದರು. ಅದೇಕೋ ಕೃಷಿ ಕ್ಷೇತ್ರದ ಮೇಲೆ ಆಕರ್ಷಣೆ ಹೆಚ್ಚಿತು. ಕೃಷಿಯಲ್ಲಿ ಏನಾದರೂ ಹೊಸ ಆವಿಷ್ಕಾರ ಮಾಡಬೇಕೆಂಬ ಕನಸು ನನಸಾಗಿಸಲು ಸಾಕಷ್ಟು ಶ್ರಮ ವಹಿಸುತ್ತಿದ್ದು, ಹಳದಿ ಕಲ್ಲಂಗಡಿ ಬೆಳೆದು ಎಲ್ಲರ ಮನೆ ಮಾತಾಗಿದ್ದಾರೆ. ಈ ಮೂಲಕ ಸಾಕಷ್ಟು ಯುವ ರೈತರಿಗೆ ಮಾದರಿಯೂ ಆಗಿದ್ದಾರೆ.
ಕಲ್ಲಂಗಡಿ ಹಣ್ಣು, ಪೈನಾಪಲ್ ಟೇಸ್ಟ್: ಅರೆ ಇದು ಕಲ್ಲಂಗಡಿ. ಆದರೆ ಪೈನಾಪಲ್ ಟೇಸ್ಟ್ ಹೆಂಗೆ ಬರುತ್ತೆ ಅಂತ್ತಿದ್ದೀರಾ? ಹೌದು ಇಂಥದ್ದೊಂದು ವಿಶೇಷ ಆವಿಷ್ಕಾರಕ್ಕೆ ಕೈ ಹಾಕಿದ್ದಾರೆ ಬಸವರಾಜ ಪಾಟೀಲ್. ದೇಶದಲ್ಲೇ ಮೊದಲ ಸಲ ವಿಭಿನ್ನ ಕಲ್ಲಂಗಡಿಯನ್ನು ಕೊರಳ್ಳಿಯಲ್ಲಿ ಬೆಳೆಯಲಾಗುತ್ತಿದೆ. ತೈವಾನ್ ಮೂಲದ ಕೃಷಿ ತಂತ್ರಜ್ಞರು ರೈತ ಪಾಟೀಲ್ ಅವರನ್ನು ಸಂರ್ಪಸಿ, ನಾವು ಪೈನಾಪಲ್ನ ರುಚಿಯ ಕಲ್ಲಂಗಡಿ ಹಣ್ಣಿನ ಬಗ್ಗೆ ಸಂಶೋಧನೆ ಮಾಡಿದ್ದೇವೆ. ಈ ಬೆಳೆಯನ್ನು ನಿಮ್ಮಲ್ಲಿ ಬೆಳೆಯಬೇಕು ಎಂದು ಸಲಹೆ ನೀಡಿದ್ದಾರೆ. ಶೀಘ್ರದಲ್ಲಿಯೇ ಹೊಸ ಕೃಷಿ ಆರಂಭವಾಗಲಿದೆ. ಈ ಕಲ್ಲಂಗಡಿಯಲ್ಲಿ ಬೀಜಗಳು ಇರುವುದಿಲ್ಲ ಎನ್ನುತ್ತಾರೆ ಪಾಟೀಲ್.
ಆರೆಂಜ್ ಬಣ್ಣದಲ್ಲೂ ವಾಟರ್ವೆುಲನ್!: ಹಳದಿ ಕಲ್ಲಂಗಡಿಯೊಂದಿಗೆ ಕ್ರಾಂತಿ ಮಾಡಲಾಗಿದೆ. ಇದರೊಂದಿಗೆ ಆರೆಂಜ್ ಬಣ್ಣದ ಕಲ್ಲಂಗಡಿಯನ್ನೂ ಬೆಳೆಯಲು ತಯಾರಿ ಮಾಡಿಕೊಳ್ಳುತ್ತಿದ್ದು, ತೈವಾನ್ ದೇಶದಿಂದ ಬೀಜ ತರಿಸಿಕೊಳ್ಳಲಾಗುತ್ತಿದೆ. ಇದು ದೇಹಕ್ಕೆ ಒಳ್ಳೆಯ ಪೌಷ್ಟಿಕಾಂಶ ನೀಡಲಿದೆ. ವಿಟಮಿನ್ ಸಿ ಮತ್ತು ಎ, ಬೀಟಾ ಕ್ಯಾರೋಟಿನ್, ಕಾಬೋಹೈಡ್ರೇಟ್, ಫೈಬರ್ ಅಂಶಗಳು ಹೆಚ್ಚಿವೆ. ಶೇ.90 ನೀರಿನಂಶವಿದೆ. ಬಿಸಿಲಿನಿಂದ ರಕ್ಷಿಸಿಕೊಳ್ಳಲು ಉತ್ತಮ ಹಣ್ಣು ಇದಾಗಿದ್ದು, ಈ ಬಗ್ಗೆ ಸಾಕಷ್ಟು ಸಂಶೋಧನೆಯೂ ನಡೆದಿವೆ ಎಂದು ಪಾಟೀಲ್ ವಿವರಿಸಿದರು.