

| ಶ್ರೀಕಾಂತ್ ಶೇಷಾದ್ರಿ ಬೆಂಗಳೂರು
ಬೃಹತ್ ಜನಸಂಖ್ಯೆ ಇರುವ, ಅದರಲ್ಲೂ ಯುವ ಜನತೆಯನ್ನು ಹೊಂದಿರುವ ಭಾರತದಲ್ಲಿ ನಿರುದ್ಯೋಗದ್ದೇ ಸಮಸ್ಯೆ. ಉದ್ಯೋಗ, ಕೌಶಲದ ಬಗ್ಗೆ ರಾಜಕೀಯ ಪಕ್ಷಗಳು ದೊಡ್ಡ ದೊಡ್ಡ ಭರವಸೆ ನೀಡುತ್ತವೆ, ಬಣ್ಣ ಬಣ್ಣದ ಕಸನು ಬಿತ್ತುತ್ತವೆ. ಆದರೆ, ಅಧಿಕಾರದ ಅವಕಾಶ ಸಿಕ್ಕಾಗ ಅದನ್ನು ಈಡೇರಿಸುವಲ್ಲಿ ಎಡವುತ್ತವೆ. ಇದಕ್ಕೊಂದು ತಾಜಾ ಇಲ್ಲಿದೆ. ಕೌಶಲದ ಅಂತರ ಪರಿಹರಿಸಲು ಮತ್ತು ಐಟಿ, ಐಟಿಇಎಸ್ ವಲಯದಲ್ಲಿ ಖಚಿತವಾದ ಉದ್ಯೋಗ ನಿಯೋಜನೆಗಳಿಗಾಗಿ ಕರ್ನಾಟಕ ಇನ್ನೋವೇಷನ್ ಆಂಡ್ ಟೆಕ್ನಾಲಜಿ (ಕಿಟ್ಸ್) ಮೂಲಕ 43,000 ಮತ್ತು ಕಿಯೋನಿಕ್ಸ್ ಮುಖೇನ 67 ಸಾವಿರ ಸೇರಿ 1.10 ಲಕ್ಷ ಮಂದಿಗೆ ಕೌಶಲ ತರಬೇತಿ ನೀಡಲು ‘ಯುವಯುಗ’ ಕಾರ್ಯಕ್ರಮವನ್ನು ಸರ್ಕಾರ 2017ರಲ್ಲಿ ಘೋಷಿಸಿತ್ತು. ಆದರೆ, ಇದು ಸಂಪೂರ್ಣ ಮಕಾಡೆ ಮಲಗಿದ್ದು, ಈಗ ಬೆಳಕಿಗೆ ಬಂದಿದೆ. ಅಂದಹಾಗೆ ಹಣ ಮಾತ್ರ ಖರ್ಚಾಗಿದೆ. 2017ರ ಜೂನ್ನಲ್ಲಿ ಮಾರ್ಗಸೂಚಿಯು ತರಬೇತಿ ಕೇಂದ್ರಗಳ ಮಾನ್ಯತೆ ಕಲ್ಪಿಸಿತ್ತು. 18 ತರಬೇತಿ, ಉದ್ಯಮ ಪಾಲುದಾರರನ್ನು ಕಿಟ್ಸ್ ನೇಮಿಸಿದ್ದರೆ, ತರಬೇತಿ ನೀಡಲು ಅಸ್ತಿತ್ವದಲ್ಲಿರುವ ಫ್ರಾಂಚೈಸಿಗಳನ್ನು ಕಿಯೋನಿಕ್ಸ್ ತೊಡಗಿಸಿತು. ಕಿಟ್ಸ್ ಮತ್ತು ತರಬೇತು ಪಾಲುದಾರರ ನಡುವಿನ ಎಮ್ಎ ಕೋರ್ಸ್ ಶುಲ್ಕದ ಮೇಲೆ ಹಂತಹಂತದ ಪಾವತಿ ಮಾಡಿದ್ದು, ನೋಂದಣಿಯಲ್ಲಿ 10 ಪ್ರತಿಶತ, ತರಬೇತಿ ಪೂರ್ಣಗೊಳಿಸಿದ ನಂತರ 70 ಪ್ರತಿಶತ, ಉದ್ಯೋಗಾವಕಾಶ ಒದಗಿಸಿದ ಮೇಲೆ 20 ಪ್ರತಿಶತ ನೀಡುವುದೆಂದು ನಿರ್ಧಾರವಾಗಿತ್ತು. ಇಲಾಖೆಯು ಈ ಕಾರ್ಯಕ್ಕೆ 11.81 ಕೋಟಿ ರೂ. ಮುಡುಪಾಗಿರಿಸಿದ್ದು (2017-18), 1.42 ಕೋಟಿ ರೂ. ವೆಚ್ಚವಾಗಿದೆ. 10.39 ಕೋಟಿ ಬಾಕಿ ಮೊತ್ತವನ್ನು ಮಾರ್ಚ್ 2021ರಲ್ಲಿ ಕಿಟ್ಸ್ ಉಳಿತಾಯ ಖಾತೆಯಲ್ಲಿ ಉಳಿದಿದೆ. ಸದ್ಯ 23,225 ಜನರಿಗೆ (2017-18)ತರಬೇತಿ ಪೂರ್ಣಗೊಳಿಸಿದೆ ಎಂದು ವರದಿ ಬಿಟ್ಟರೆ, ಹೆಚ್ಚಿನ ಮಾಹಿತಿ ಇಲ್ಲ.
ಇನ್ನೊಂದು ಗಂಭೀರ ವಿಚಾರ ಎಂದರೆ ಯಾವುದೇ ತರಬೇತಿ ಕೇಂದ್ರಗಳು ಅಥವಾ ಫ್ರಾಂಚೈಸಿಗಳು ನ್ಯಾಷನಲ್ ಸ್ಕಿಲ್ ಡೆವಲಪ್ವೆುಂಟ್ ಕಾರ್ಪೆರೇಷನ್, ಸೆಕ್ಟರ್ ಸ್ಕಿಲ್ ಕೌನ್ಸಿಲ್ನಿಂದ ಮಾನ್ಯತೆ ಪಡೆದಿರಲಿಲ್ಲ. ಇದರಲ್ಲಿ ಹಲವಾರು ತರಬೇತಿ ಕಾರ್ಯಕ್ರಮಗಳು ಕಾಲೇಜು ವಿದ್ಯಾರ್ಥಿಗಳಿಗೆ ಪೂರಕ ಕೋರ್ಸ್ಗಳಾಗಿವೆ ಮತ್ತು ನಿರ್ದಿಷ್ಟವಾಗಿ ಉದ್ಯೋಗದ ಕಡೆಗೆ ನಿರ್ದೇಶಿಸಲಾಗಿಲ್ಲ ಎಂಬ ಸಂಗತಿಯನ್ನು ಕೌಶಲಾಭಿವೃದ್ಧಿ ಪ್ರಾಧಿಕಾರ ವಿವರಿಸಿರುವುದು ಮತ್ತೊಂದು ಸೋಜಿಗದ ಸಂಗತಿ. ಕಿಟ್ಸ್ನ ತರಬೇತು ಪಾಲುದಾರರಿಗೆ ಕೋರ್ಸ್ ಶುಲ್ಕದ ಶೇ.80 ಪಾವತಿಸಲಾಗಿದೆ. ಅಂದರೆ 39.55 ಲಕ್ಷ ಮತ್ತು ಅವರಿಗೆ ಉದ್ಯೋಗಾವಕಾಶ ದೊರೆತ ನಂತರ ಪಾವತಿಸಬೇಕಾದ ಬಾಕಿ ಶೇ.20 ತ್ಯಜಿಸಲು ನಿರ್ಧರಿಸಿ ಕಾಲ್ಕಿತ್ತರು. ಹೀಗಾಗಿ ತರಬೇತಿ ಪಡೆದವರು ಯೋಜನೆಯ ಪ್ರಧಾನ ಉದ್ದೇಶವಾಗಿದ್ದ ಉದ್ಯೋಗಾವಕಾಶದಿಂದ ವಂಚಿತರಾಗಿದ್ದಾರೆ. ಇಲಾಖೆ ಮಾತ್ರ, ಹೆಚ್ಚಿನ ವಿದ್ಯಾರ್ಥಿ ಗಳು ಉನ್ನತ ಶಿಕ್ಷಣ, ಸ್ವಯಂ ಉದ್ಯೋಗ ಇತ್ಯಾದಿಗಳಿಗೆ ಹೋದ ಕಾರಣ ಯಾವುದೇ ನೇಮಕಾತಿ ವರದಿ ಮಾಡಿಲ್ಲ ಎಂದು ಹೇಳಿದೆ. ಎಷ್ಟು ವಿದ್ಯಾರ್ಥಿಗಳು ಈ ರೀತಿ ಉನ್ನತ ಶಿಕ್ಷಣಕ್ಕೆ ಹೋಗಿದ್ದಾರೆಂಬ ದತ್ತಾಂಶ ಇಲಾಖೆ ಬಳಿ ಇಲ್ಲ.
ಶ್ರೇಷ್ಠತೆ ಕೇಂದ್ರಗಳ ಕನಿಷ್ಠ ಪ್ರಗತಿ: ಅಭಿವೃದ್ಧಿ ಹೊಂದುತ್ತಿರುವ ತಂತ್ರಜ್ಞಾನಗಳನ್ನು ಗಮನದಲ್ಲಿಟ್ಟುಕೊಂಡು ಸಾಮರ್ಥ್ಯ ನಿರ್ವಣಕ್ಕೆ ಒತ್ತು ನೀಡಲು ಮತ್ತು ಕೈಗಾರಿಕೆಗಳು, ಉದ್ಯಮಿಗಳ ಸಹಯೋಗದೊಂದಿಗೆ ಕೌಶಲಾಭಿವೃದ್ಧಿಯ ಮೂಲಕ ಅಗತ್ಯ ತಾಂತ್ರಿಕ ಸಂಪನ್ಮೂಲಗಳನ್ನು ರಚಿಸಲು ಇಲಾಖೆಯು ಸೆಂಟರ್ ಫಾರ್ ಎಕ್ಸಲೆನ್ಸ್ ಗಳನ್ನು ಸ್ಥಾಪಿಸಿದೆ. ಅವು ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಹಣ ಮಾತ್ರ ಖರ್ಚಾಗಿದೆ. ನ್ಯಾಸ್ಕಾಮ್ ಡಸಾಲ್ಟ್, ಐಐಐಟಿ ಬೆಂಗಳೂರು ಮತ್ತು ಅಸೋಸಿಯೇಷನ್ ಆಫ್ ಬೆಂಗಳೂರು ಅನಿಮೇಷನ್ ಇಂಡಸ್ಟ್ರಿ ನಂತರ ಪ್ರಮುಖ ಉದ್ಯಮ ಪಾಲುದಾರರು ಶ್ರೇಷ್ಠತಾ ಕೇಂದ್ರಗಳನ್ನು ನಿರ್ವಹಿಸುತ್ತಾರೆ. ಬೆಂಗಳೂರಿನಲ್ಲಿ 74.04 ಕೋಟಿ ರೂ. ವೆಚ್ಚದಲ್ಲಿ ಐದು ಸಿಇಒಗಳನ್ನು ಸ್ಥಾಪಿಸಲಾಗಿತ್ತು.