ಕೆಂಪು ಭೂಮಿಯಲ್ಲಿ ಕೊನರಿದ ಸೇಬು..

Viittavani
Published on

| ಜಿ.ಚಂದ್ರಕಾಂತ ಕಲಬುರಗಿ

ಗುಲಾಬಿ ಕುಟುಂಬದಲ್ಲಿನ (ರೋಸೇಸೀ) ಮೇಲಸ್ ಡೊಮೆಸ್ಟಿಕಾಕ್ಕೆ ಸೇರಿದ ಮತ್ತು ಸಮಶೀತೋಷ್ಣ ವಲಯದ ಕಾಶ್ಮೀರಿ ಸೇಬು 35 ರಿಂದ 40 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರುವ ಬೀದರ್ ಜಿಲ್ಲೆಯಲ್ಲೂ ಬೆಳೆಯಬಹುದೆಂದು ಯಾರೂ ಊಹಿಸಿರಲಿಲ್ಲ. ಆದರೆ, ನಮ್ಮ ನೆಲದಲ್ಲಿಯೂ ಸೇಬನ್ನು ಬೆಳೆಯಬಹುದು ಎಂದು ಹುಮನಾಬಾದ್ ತಾಲೂಕು ಘಾಟಬೋರಳ ಗ್ರಾಮದ ಅಪ್ಪಾರಾವ ದಿಗಂಬರರಾವ ಭೋಸಲೆ ತೋರಿಸಿಕೊಟ್ಟಿದ್ದಾರೆ. ಬಡ ಕೃಷಿಕ ಕುಟುಂಬದ 51 ವರ್ಷ ವಯಸ್ಸಿನ ಅಪ್ಪಾರಾವ, ತನ್ನ ಏಳು ಎಕರೆ ಭೂಮಿಯಲ್ಲಿ ಮೊದಲು ಹೀರೇಕಾಯಿ, ಕುಂಬಳಕಾಯಿ, ಜೋಳ, ತೊಗರಿ ಮುಂತಾದ ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಿದ್ದರು. ಬಳಿಕ ಪಂಜಾಬ್, ಹರಿಯಾಣ, ಮಹಾರಾಷ್ಟ್ರ, ಆಂಧ್ರಪ್ರದೇಶ, ಬೆಂಗಳೂರು, ಮೈಸೂರು ಮುಂತಾದೆಡೆ ಪ್ರಯಾಣ ಮಾಡಿ ಸೇಬು ಮತ್ತಿತರ ತೋಟಗಾರಿಕೆ ಬೆಳೆಗಳ ಮಾಹಿತಿ ಸಂಗ್ರಹಿಸಿದರು. ಕೃಷಿಯಲ್ಲಿ ಪ್ರಯೋಗಶೀಲತೆ ಮತ್ತು ಹೊಸತನ ಕಂಡುಕೊಳ್ಳುವ ಛಲ, ಬದ್ಧತೆ ಹಾಗೂ ವಿಶ್ವಾಸದೊಂದಿಗೆ ಒಂದು ಎಕರೆ ಕೆಂಪು ಮತ್ತು ಬರಡು ಭೂಮಿಯಲ್ಲಿ ಸಿಮ್ಲಾ(ಹಿಮಾಚಲ ಪ್ರದೇಶ)ದ ಎಚ್​ಆರ್​ಎಂಎನ್-99(ಹರಿಮನ್) ತಳಿಯ ಸೇಬನ್ನು ಬೆಳೆದು ಯಶಸ್ವಿಯಾಗಿದ್ದಾರೆ.

ಬೆಳೆಯುವ ವಿಧಾನ: ಸೇಬಿನ ಸಸಿಗಳನ್ನು ಗಿಡದಿಂದ ಗಿಡಕ್ಕೆ 1414 ಅಡಿ ಅಂತರದಲ್ಲಿ ನಾಟಿ ಮಾಡಿದ್ದು, ಕೊಟ್ಟಿಗೆ ಗೊಬ್ಬರ, ಕೋಕೋವಿಟ್ ಗೊಬ್ಬರ ಹಾಕಿದ್ದಾರೆ. ರೋಗ ನಿವಾರಣೆಗೆ ಕೋನಿಕಾ ಔಷಧ ಸಿಂಪಡಿಸಿದ್ದಾರೆ. ಎರಡು ತೆರೆದ ಬಾವಿಗಳಿಂದ ಹನಿ ನೀರಾವರಿ ಅಳವಡಿಸಿಕೊಂಡಿದ್ದು, ಸೇಬಿನ ಸಸಿಗಳಿಗೆ ತಂಪು ವಾತಾವರಣ ಕಲ್ಪಿಸಲು ಅನುವಾಗುವಂತೆ ಮಿಶ್ರಬೆಳೆಯಾಗಿ ಗಂಗಾ ತಳಿಯ ತೆಂಗನ್ನೂ ಬೆಳೆದಿದ್ದಾರೆ. ಇಪ್ಪತ್ತು ದಿನಕ್ಕೊಮ್ಮೆ ಕಾಲುವೆಯ ಮೂಲಕ ಮತ್ತು ಪ್ರತಿದಿನ ಒಂದು ಗಂಟೆ ಹನಿ ನೀರಾವರಿ ಮೂಲಕ ನೀರುಣಿಸುತ್ತಾರೆ. ಜಾನುವಾರುಗಳ ತ್ಯಾಜ್ಯದಿಂದ ಜೀವಾಮೃತ ತಯಾರಿಸಿ 20 ದಿನಕ್ಕೊಮ್ಮೆ ಸಿಂಪಡಿಸುತ್ತಿದ್ದಾರೆ. ಇಲ್ಲಿನ ಹವಾಗುಣಕ್ಕನುಗುಣವಾಗಿ 15 ತಿಂಗಳ ಸೇಬಿನ ಗಿಡಗಳು ಏಳೆಂಟು ಅಡಿ ಎತ್ತರ ಬೆಳೆದು ನಳನಳಿಸುತ್ತಿವೆ. ಈವರೆಗೆ ಸೇಬಿನ ಬೇಸಾಯಕ್ಕಾಗಿ 5.50 ಲಕ್ಷ ರೂ. ವೆಚ್ಚವಾಗಿದ್ದು, 7-8 ಲಕ್ಷ ರೂ. ಆದಾಯ ನಿರೀಕ್ಷಿಸಿದ್ದಾರೆ. ಇವರು ಸೇಬು ಬೆಳೆ ಜತೆಗೆ ಗುಜರಾತಿನ ವಿಶೇಷ ಸಪೋಟಾ, ಗಂಗಾ ತಳಿಯ ತೆಂಗು, ವಿವಿಧ ತಳಿಯ ಮಾವು, ನಾಗಪುರ ಕಿತ್ತಳೆ, ಅಂಜೂರ, ನೇರಳೆ, ಲಿಂಬೆ ಮತ್ತು ಗಜಲಿಂಬೆ, ಗೋಡಂಬಿ ಗಿಡಗಳನ್ನು ಸಹ ಬೆಳೆದು ಲಾಭ ಪಡೆಯುತ್ತಿದ್ದಾರೆ. ಹಿಮಾಲಯ ಪರ್ವತದ ತಪ್ಪಲು ಪ್ರದೇಶದಲ್ಲಿ ಸೇಬು ವರ್ಷಕ್ಕೊಮ್ಮೆ ಬಂದರೆ ನಾವು ಬೆಳೆದ ಸೇಬು ಇಲ್ಲಿನ ವಾತಾವರಣದಲ್ಲಿ ವರ್ಷಕ್ಕೆರಡು ಸಲ ಅಂದರೆ ಡಿಸೆಂಬರ್ ಮತ್ತು ಮೇ ತಿಂಗಳಲ್ಲಿ ಇಳುವರಿ ಕೊಡುವುದು ವಿಶೇಷ. ಸೇಬು ಗಿಡಗಳನ್ನು ಸರಿಯಾಗಿ ನಿರ್ವಹಣೆ ಮಾಡಿದರೆ ಅವುಗಳ ಜೀವಿತಾವಧಿ ಸುಮಾರು 25 ವರ್ಷವಿರುತ್ತದೆ ಎನ್ನುತ್ತಾರೆ ಅಪ್ಪಾರಾವ ಭೋಸಲೆ.

(ಲೇಖಕರು: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿವೃತ್ತ ಉಪನಿರ್ದೇಶಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net