

ಮಾರ್ಚ್ 25 ಮಹತ್ವದ ದಿನ. ಐರ್ಲೆಂಡಿನಿಂದ ಬಂದ ಮಾರ್ಗರೇಟ್ ನೊಬೆಲ್ ವಿವೇಕಾನಂದರ ಬಳಿ ದೀಕ್ಷೆ ಪಡೆದು ನಿವೇದಿತಾ ಆದ ದಿನ. ಮಾರ್ಗರೇಟ್ ನೊಬೆಲ್ ತನ್ನೂರಿನಲ್ಲಿ ಶಿಕ್ಷಕಿಯಾಗಿ, ಧರ್ಮಪ್ರಚಾರಕನ ಮಗಳಾಗಿ, ಕ್ರಾಂತಿಕಾರಿ ಅಜ್ಜನ ಮೊಮ್ಮಗಳಾಗಿ ವಿಭಿನ್ನ ಬಗೆಯ ಅನುಭವಗಳ ಕಂತೆಯಾಗಿದ್ದವಳು. ವಿವೇಕಾನಂದರ ಸಂಪರ್ಕಕ್ಕೆ ಬರುವ ಮುನ್ನ ಅನೇಕ ಗೊಂದಲಗಳನ್ನು ಮನಸ್ಸಿನೊಳಗೆ ಹೊತ್ತಿಕೊಂಡು ಸರಿಯಾದ ದಾರಿ ಕಾಣದೇ ಪರಿತಪಿಸುತ್ತಿದ್ದಳು. ಸ್ವಾಮಿ ವಿವೇಕಾನಂದರು ಸಿಕ್ಕೊಡನೆ ಆಕೆಗೆ ಈ ಪ್ರಶ್ನೆಗಳಿಗೆಲ್ಲ ಉತ್ತರ ಕೊಡುವ ಸಮರ್ಥ ವ್ಯಕ್ತಿಯೇ ತನಗಾಗಿ ಬಂದಿದ್ದಾನೆ ಎನಿಸಿತು. ಆಕೆ ಪ್ರಶ್ನೆಗಳನ್ನು ಕೇಳಿದಳು. ಉತ್ತರ ಸಿಕ್ಕ ಮಾತ್ರಕ್ಕೆ ತೃಪ್ತಿಗೊಳ್ಳಲಿಲ್ಲ. ಆ ಉತ್ತರದ ಕಾರಣದಿಂದಾಗಿ ಹುಟ್ಟಿದ ಪ್ರಶ್ನೆಗಳಿಗೆ ಮತ್ತೆ ಉತ್ತರ ಪಡೆದುಕೊಳ್ಳುವ ಧಾವಂತಕ್ಕೆ ಬಿದ್ದಳು. ಆಕೆಯ ಸಾಮರ್ಥ್ಯವನ್ನು ಹತ್ತಿರದಿಂದ ಗಮನಿಸಿದ್ದ ಸ್ವಾಮಿ ವಿವೇಕಾನಂದರು ಆಕೆಗೆ ಸಮಯ ಕೊಟ್ಟರು. ಪ್ರತಿ ಪ್ರಶ್ನೆಗೂ ಚಿಕ್ಕ ಮಕ್ಕಳಿಗೆ ಉತ್ತರಿಸುವಂತೆ ಉತ್ತರಿಸಿದರು. ಕೊನೆಗೊಮ್ಮೆ, ‘ನಿನ್ನ ಬದುಕಿನ ‘ಆದರೆ’ ಎಂಬ ಅನುಮಾನ ಕೊನೆಗೊಂಡಲ್ಲಿ ನಿನ್ನ ಬದುಕು ಉನ್ನತಿಯಾಗುವುದು’ ಎಂದೂ ಎಚ್ಚರಿಸಿದರು.
ಪ್ರಶ್ನೆಗಳು ಬುಗ್ಗೆಯಾಗಿ ಏಳಬೇಕು ನಿಜ. ಆದರೆ ಉತ್ತರಗಳು ಮನದೊಳಗೆ ಬಿರುಗಾಳಿಯನ್ನೆಬ್ಬಿಸಿ ಅದು ಶಾಂತಗೊಂಡ ಮೇಲೆ ಶ್ರದ್ಧೆ ಮೂಡಬೇಕು. ಇಲ್ಲವಾದರೆ ಪ್ರಶ್ನೆ ಕೇಳುವುದು ಕಾಟಾಚಾರವಾಗುತ್ತದೆ. ಉತ್ತರಿಸುವವನ ಪಾಲಿಗೆ ಕಂಠಶೋಷಣೆಯಾಗುತ್ತದೆ. ಬನ್ನಂಜೆ ಗೋವಿಂದಾಚಾರ್ಯರು ತಮ್ಮ ಕಾರ್ಯಕ್ರಮಗಳ ನಂತರ ಪ್ರಶ್ನೋತ್ತರ ಜೋಡಿಸುತ್ತಲೇ ಇರಲಿಲ್ಲ. ಒಮ್ಮೆಯಂತೂ ಹೊನ್ನಾವರದಲ್ಲಿ ಕಠೋಪನಿಷತ್ತಿನ ಬಗ್ಗೆ ಮಾತನಾಡುತ್ತ ‘ಶ್ರದ್ಧೆಯಿಂದ ನಿಮ್ಮಲ್ಲಿ ಪ್ರಶ್ನೆಗಳು ಉದ್ಭವಿಸಿದರೆ ಮರುದಿನದ ಪ್ರವಚನದಲ್ಲಿ ಅದಕ್ಕೆ ಉತ್ತರ ದಕ್ಕಲೇಬೇಕು’ ಎಂದು ಖಂಡಿತವಾಗಿ ಹೇಳಿದ್ದನ್ನು ನಾನು ಕೇಳಿದ್ದೇನೆ! ಸ್ವಾಮಿ ವಿವೇಕಾನಂದರು ಮಾರ್ಗರೇಟ್ಗೆ ಹಾಗೆಯೇ ಹೇಳಿರಬೇಕು. ಆಕೆಯೊಳಗೆ ಉತ್ತರ ಶ್ರದ್ಧೆಯಾಗಿ ಬದಲಾಯ್ತು. ಈ ಶ್ರದ್ಧೆ ವಿವೇಕಾನಂದರನ್ನು ಗುರುವಾಗಿ ಸ್ವೀಕರಿಸುವಲ್ಲಿ ಮತ್ತು ಗುರು ವಿವೇಕಾನಂದರ ಮೇಲಿನ ಭಕ್ತಿ ಭಾರತಪ್ರೇಮವಾಗಿ ಪರಿವರ್ತಿತವಾಗುವಲ್ಲಿ ಬಹಳ ಕಾಲ ಹಿಡಿಯಲಿಲ್ಲ.
ವಿವೇಕಾನಂದರು ಭಾರತಕ್ಕೆ ಮರಳಿದ ಮೇಲೆ ಪತ್ರಗಳಲ್ಲಿ ಸ್ವಾಮಿ ವಿವೇಕಾನಂದರು ವರ್ಣಿಸುತ್ತಿದ್ದ ಭಾರತವನ್ನು ನೋಡುವ ತವಕ ಹೆಚ್ಚಾಗಿ ಮತ್ತೆ-ಮತ್ತೆ ಭಾರತಕ್ಕೆ ಬರುವ, ಇಲ್ಲಿನ ಜನರ ಸೇವೆ ಮಾಡುವ ಬಯಕೆಯನ್ನು ಮಾರ್ಗರೇಟ್ ನೊಬೆಲ್ ವ್ಯಕ್ತಪಡಿಸಿದಳು. ವಿವೇಕಾನಂದರು ಅನೇಕ ಬಾರಿ ನಿರಾಕರಿಸಿ ಕೊನೆಗೊಮ್ಮೆ ಬರಬಹುದು ಎಂದರು. ಆದರೆ ಸುಮ್ಮನಲ್ಲ. ‘ನನ್ನ ಭಾರತವನ್ನು, ಇಲ್ಲಿನ ಜನರನ್ನು ಒಂದು ಮಾತೂ ದೂಷಿಸುವುದಿಲ್ಲವೆಂದಾದರೆ ಮಾತ್ರ ಬಾ. ನಮಗೆ ನಿಮ್ಮವರಿಂದ ದೂಷಿಸಿಕೊಂಡು ಸಾಕಾಗಿಹೋಗಿದೆ’ ಎಂದು ನಿರ್ಬಂಧ ಹೇರಿದ್ದರು. ಮಾರ್ಗರೇಟ್ ನಿಯಮಕ್ಕೆ ಒಪ್ಪಿಯೇ ಆಗಮಿಸಿದ್ದಳು. ಇಲ್ಲಿನ ಜನರ ಜೀವನವನ್ನು, ನಡೆ-ನುಡಿಯನ್ನು ಹತ್ತಿರದಿಂದ ಕಾಣುತ್ತ, ವಿವೇಕಾನಂದರ ಕಂಗಳಿಂದ ಅದನ್ನು ನೋಡುತ್ತ ತನಗಿದ್ದ ಪ್ರೇಮವನ್ನು ನೂರ್ಮಡಿಗೊಳಿಸಿಕೊಂಡಳು. ಈಗ ಆಕೆಯ ಭಾರತಪ್ರೇಮ ಹಿಮಾಲಯದೆತ್ತರಕ್ಕೇರಿತ್ತು. ಭಾರತೀಯ ಜನರಾದ ನಾವೇ ಆಕೆಯ ಪರಿವಾರವಾಗಿಬಿಟ್ಟೆವು.
ಕಲ್ಕತ್ತಾಗೆ ಪ್ಲೇಗ್ ರೋಗ ಅಮರಿಕೊಂಡಾಗ ವಿವೇಕಾನಂದರು ಇಬ್ಬರು ಸಾಧುಗಳನ್ನು ಸಹಾಯಕ್ಕೆಂದು ಕೊಟ್ಟು ಪ್ಲೇಗ್ ವಿರುದ್ಧ ಹೋರಾಡುವ ಸಾಹಸಕ್ಕೆ ಆಕೆಯನ್ನು ಬಿಟ್ಟರು. ಆಕೆ ಬಂಗಾಳದಲ್ಲಿ ಅಂದಿನ ದಿನಗಳಲ್ಲಿ ಸೇವೆಗೈದ ರೀತಿ ಇದೆಯಲ್ಲ, ಬ್ರಿಟಿಷ್ ಅಧಿಕಾರಿಗಳನ್ನೂ ಮೂಕವಿಸ್ಮಿತಗೊಳಿಸಿತು. ಒಬ್ಬ ಅಧಿಕಾರಿಯಂತೂ, ‘ಒಂದೆಡೆ ಇಡಿಯ ವ್ಯವಸ್ಥೆ ಪ್ಲೇಗ್ನ ವಿರುದ್ಧ ಹೋರಾಡುತ್ತಿದ್ದರೆ, ಮತ್ತೊಂದೆಡೆ ಅದಕ್ಕಿಂತಲೂ ಬಲವಾದ ಹೋರಾಟ ಸಂಘಟಿಸಿರುವುದು ಒನ್ ಮ್ಯಾನ್ ಆರ್ವಿು’ ಎಂದು ಮಾರ್ಗರೇಟ್ ಬಗ್ಗೆ ಹೊಗಳಿದ್ದ. ಮಾರ್ಗರೇಟ್ಳ ಈ ಪರಿಯ ಮನೋಭಾವ ಇದೆಯಲ್ಲ ಇದು ವಿವೇಕಾನಂದರನ್ನಷ್ಟೇ ಅಲ್ಲ, ಇಡಿಯ ಬಂಗಾಳಿಗಳನ್ನು ಸೆಳೆದುಬಿಟ್ಟಿತ್ತು. ಹೀಗಾಗಿಯೇ ಸ್ವಾಮಿ ವಿವೇಕಾನಂದರು ಮಾರ್ಚ್ 25ರಂದು ಆಕೆಗೆ ಮಂತ್ರದೀಕ್ಷೆಯನ್ನಿತ್ತು ಆಕೆಯ ಹೆಸರನ್ನೇ ಬದಲಾಯಿಸಿಬಿಟ್ಟರು. ಅಂದಿನಿಂದ ಆಕೆ ಭಾರತಮಾತೆಗೆ ನಿವೇದನೆಗೊಂಡ ಪುಷ್ಪವಾಗಿ ನಿವೇದಿತೆಯಾದಳು. ಮುಂದೆ ನಿವೇದಿತಾ ತನ್ನ ಹುಟ್ಟಿದ ಹಬ್ಬವನ್ನೇ ಈ ದಿನವಾಗಿ ಬದಲಾಯಿಸಿಕೊಂಡು ‘ಅದು ನನಗೆ ಮರುಹುಟ್ಟು’ ಎನ್ನುತ್ತಿದ್ದಳು!
ತ್ಯಾಗದ ಆದರ್ಶವನ್ನೇ ಉಸಿರಾಗಿಸಿಕೊಂಡ ಭಾರತಕ್ಕೆ ನಿವೇದಿತೆ ಹೊಸತೇನನ್ನೂ ಹೇಳಲು ಬಂದಿರಲಿಲ್ಲ. ಆದರೆ ಆಕ್ರಮಣಗಳ ಕಾಲಘಟ್ಟದಲ್ಲಿ ಯಾವ ಮೌಲ್ಯವನ್ನು ಮರೆತುಹೋಗಿದ್ದೆವೋ ಅದನ್ನು ನೆನಪಿಸಿಕೊಡಲು ಬಂದಿದ್ದಳು. ಕರ್ಮಯೋಗದ ರಹಸ್ಯವನ್ನು ತಾನೂ ಅರಿತು ಇಲ್ಲಿನ ಜನರಿಗೆ ಅದನ್ನು ತಿಳಿಸಿಹೇಳುವ ಪ್ರಯತ್ನವನ್ನು ಮಾಡುತ್ತಿದ್ದಳು. ಸ್ವಾರ್ಥ ಅಸೂಯೆಯನ್ನು ಹುಟ್ಟುಹಾಕಿದರೆ, ಸೇವೆ ನಮ್ಮ ಮಾನಸಾಗಸವನ್ನು ವಿಸ್ತಾರಗೊಳಿಸುತ್ತದೆ ಎಂಬುದನ್ನು ಆಕೆ ಪ್ರತ್ಯಕ್ಷವಾಗಿ ತಿಳಿಸಿಕೊಡುವ ಹಠಕ್ಕೆ ಬಿದ್ದಿದ್ದಳು. ಹಾಗಂತ ಈ ನೆಲದಲ್ಲಿ ಆಕೆಗೆ ಅಚ್ಚರಿಗಳು ಇರಲಿಲ್ಲವೆಂದೇನೂ ಅಲ್ಲ. ಪ್ರವಾಹಪೀಡಿತರ ಸೇವೆಗೆ ಆಕೆ ನಿಂತಾಗ ಆಕೆ ಒಯ್ದಿದ್ದ ಪರಿಹಾರ ಸಾಮಗ್ರಿಗಳು ಖಾಲಿಯಾಗಿಬಿಟ್ಟಿತ್ತು. ಆಕೆಯ ಬರುವಿಗಾಗಿ ಒಂದೂರಿನಲ್ಲಿ ಜನ ಬೆಳಗಿನಿಂದ ಕಾದು ಕುಳಿತಿದ್ದರು. ಅವರನ್ನು ಕಂಡು ನೊಂದುಕೊಂಡ ಅಕ್ಕ ತನ್ನ ಚೀಲದಲ್ಲಿದ್ದ ಒಂದಷ್ಟು ಬಿಸ್ಕತ್ತುಗಳನ್ನು ಅವರಿಗೆಂದು ಕೊಟ್ಟಳು. ಅದು ಅವರಿಗೆ ಖಂಡಿತ ಸಾಕಾಗುವಂಥದ್ದಲ್ಲ. ಆದರೆ ಆಕೆ ಕೊಟ್ಟಿದ್ದನ್ನು ಪ್ರಸಾದವಾಗಿ ಸ್ವೀಕರಿಸಿ ಬಲುಪ್ರೀತಿಯಿಂದ ಅಕ್ಕನಿಗೆ ಆಶೀರ್ವಾದ ಮಾಡಿ ಹೋದದ್ದನ್ನು ಕಂಡು ಆಕೆ ಕಣ್ಣೀರಿನಿಂದ ತೊಯ್ದು ತೊಪ್ಪೆಯಾಗಿದ್ದಳು!
ವಿವೇಕಾನಂದರ ಆದರ್ಶ ಬರಿ ವ್ಯಕ್ತಿಗಳಲ್ಲಿ ಮಾತ್ರವಲ್ಲ ಇಡಿಯ ದೇಶಕ್ಕೂ ಆವರಿಸಿಕೊಂಡಿದೆ. ಭಾರತ ಇಂದು ಜಗತ್ತಿನ ಸೇವೆಗೆ ನಿಂತಿರುವ ಮುಂಚೂಣಿ ರಾಷ್ಟ್ರಗಳಲ್ಲೊಂದು. ಮರೆತುಹೋಗಿದ್ದನ್ನು ನೆನಪಿಸುವೆ. ಕೋವಿಡ್ನ ಎರಡನೇ ಅಲೆ ತೀವ್ರಗೊಂಡಾಗ ನಾವೆಲ್ಲ ತತ್ತರಿಸಿಹೋಗಿದ್ದೆವು. ವೆಂಟಿಲೇಟರ್ಗಳಿಲ್ಲ, ಆಕ್ಸಿಜನ್ ಇಲ್ಲ, ರೆಮ್ೆಸಿವಿರ್ನಂತಹ ಔಷಧಗಳಿಲ್ಲ, ಜನ ಕಂಡ-ಕಂಡಲ್ಲಿ ಸಾಯುತ್ತಿದ್ದಾರೆ ಎನ್ನುವ ವಾತಾವರಣ ನಿರ್ವಣವಾಗಿಬಿಟ್ಟಿತ್ತು. ಈ ಅವಕಾಶವನ್ನು ಬಳಸಿಕೊಂಡ ಕಾಂಗ್ರೆಸ್ಸು, ಅರವಿಂದ ಕೇಜ್ರಿವಾಲ್ರ ಆಮ್ ಆದ್ಮಿ ಪಾರ್ಟಿಗಳು ಎಷ್ಟು ನಿರ್ಲಜ್ಜ ಮಟ್ಟಕ್ಕಿಳಿದವೆಂದರೆ ‘ನಮ್ಮ ಮಕ್ಕಳ ವ್ಯಾಕ್ಸಿನ್ ಅನ್ನು ನೀವು ವಿದೇಶಕ್ಕೇಕೆ ಕಳಿಸಿಕೊಟ್ಟಿರಿ’ ಎಂದು ಪ್ರಧಾನಿ ನರೇಂದ್ರ ಮೋದಿಯವರನ್ನು ಬಹಿರಂಗವಾಗಿ ಪ್ರಶ್ನಿಸುವ ಹಂತಕ್ಕ ಹೋದರು. ದೆಹಲಿಯ ಬೀದಿ-ಬೀದಿಗಳಲ್ಲಿ ಅರವಿಂದ್ ಕೇಜ್ರಿವಾಲ್ ಈ ಕುರಿತ ಪೋಸ್ಟರ್ಗಳನ್ನು ಹಾಕಿಸಿದರು. ನಿಜಕ್ಕೂ ಅದು ವ್ಯಕ್ತಿ ಮತ್ತು ಪಕ್ಷ ಎಷ್ಟು ನೀಚತೆಗಿಳಿಯಬಹುದು ಎನ್ನುವುದಕ್ಕೆ ಪುರಾವೆಯಾಗಿತ್ತು. ಆದರೆ ಅಚ್ಚರಿಯೇನು ಗೊತ್ತೇ? ಈ ಹೊತ್ತಿನಲ್ಲಿ ಜಗತ್ತಿನ ಎಲ್ಲ ರಾಷ್ಟ್ರಗಳೂ ಭಾರತದ ಸಹಕಾರಕ್ಕೆ ನಾ ಮುಂದು ತಾ ಮುಂದು ಎಂದು ಧಾವಿಸಿದವು. ಎಲ್ಲೆಲ್ಲಿಂದ ಆಕ್ಸಿಜನ್ ಬಂತೋ, ಅದನ್ನು ಸಾಗಿಸುವ ಕಂಟೈನರ್ಗಳು ಬಂತೋ, ಬೇಕಾದ ಔಷಧಗಳು ಬಂದವೋ, ಅಗತ್ಯವಿದ್ದ ಸಹಕಾರ ನೀಡಲು ರಾಜತಾಂತ್ರಿಕರು ಹಗಲು-ರಾತ್ರಿ ದುಡಿದರೋ ಇಂದು ಲೆಕ್ಕವಿಡುವುದು ಕಷ್ಟ!
ಹಾಗೆ ನೋಡಿದರೆ ಭಾರತಕ್ಕಿಂತಲೂ ಹೆಚ್ಚು ಕೋವಿಡ್ನ ಪರಿಣಾಮವನ್ನು ಅನುಭವಿಸಿದ ರಾಷ್ಟ್ರ ಬ್ರೆಜಿಲ್. ಆದರೆ ಇಷ್ಟು ಸಹಕಾರ ಬ್ರೆಜಿಲ್ನತ್ತ ಹೋಗಿರಲಿಲ್ಲ. ಭಾರತದತ್ತ ಮಾತ್ರ ಜಗತ್ತು ಧಾವಿಸಿಬಂತು. ಕಾರಣವೇನಿರಬಹುದು? ನಿಸ್ಸಂಶಯವಾಗಿ ಅದು ಮೌಲ್ಯಯುತ ಭಾರತದ ಬದುಕಿನ ರೀತಿ ಮಾತ್ರ. ಮೊದಲಿಗೆ ಈ ದೇಶದ ಪ್ರಧಾನಿ ಈ ರಾಷ್ಟ್ರಗಳೊಂದಿಗೆ ಹೊಂದಿರುವ ಘನಿಷ್ಠ ಸಂಬಂಧ ಇದಕ್ಕೆ ಕಾರಣವಾದರೆ, ಎರಡನೆಯದ್ದು ಈ ರಾಷ್ಟ್ರ ಅವರುಗಳು ಕಷ್ಟಕಾಲದಲ್ಲಿದ್ದಾಗ ಚಾಚಿದ ಸಹಾಯಹಸ್ತವೂ ಇದಕ್ಕೆ ಕಾರಣವೇ.
ಕೋವಿಡ್ನ ಮೊದಲ ಅಲೆಯನ್ನು ಸಮರ್ಥವಾಗಿ ನಿಭಾಯಿಸಿದ ನಾವು ವ್ಯಾಕ್ಸಿನ್ಗಳು ದೊರೆಯುತ್ತಿದ್ದಂತೆ ನಮ್ಮ ಜನರಿಗೆ ಅದನ್ನು ಕೊಡಲಾರಂಭಿಸಿದೆವಲ್ಲ, ಜೊತೆಯಲ್ಲೇ ಜಗತ್ತಿನ ಅನೇಕ ರಾಷ್ಟ್ರಗಳಿಗೆ ವ್ಯಾಕ್ಸಿನ್ ಮೈತ್ರಿಯ ನೆಪದಲ್ಲಿ ಧಾವಿಸಿದೆವು. ಕನಿಷ್ಠಪಕ್ಷ 150 ರಾಷ್ಟ್ರಗಳಿಗೆ ಈ ಸಂದರ್ಭದಲ್ಲಿ ಭಿನ್ನ-ಭಿನ್ನ ಸ್ವರೂಪದ ಸಹಾಯವನ್ನು ನಾವು ಮಾಡಿದ್ದೇವೆ. ಜಗತ್ತು ಗಮನಿಸುವುದಿಲ್ಲ ಎಂದು ಭಾವಿಸಬೇಡಿ. ಅದು ಸಿರಿವಂತ ರಾಷ್ಟ್ರಗಳೊಂದಿಗೆ ತುಲನೆ ಮಾಡಿಯೂ ನೋಡಿಕೊಳ್ಳುತ್ತದೆ. ಅಮೆರಿಕದಂಥ ಶ್ರೀಮಂತ ರಾಷ್ಟ್ರಗಳು ವ್ಯಾಕ್ಸಿನ್ ಅನ್ನು ಹೆಚ್ಚು ಬೆಲೆಗೆ ಮಾರುವುದರಲ್ಲಿ ಆಸಕ್ತಿ ತೋರಿದ್ದಲ್ಲದೆ ಸಣ್ಣ-ಪುಟ್ಟ ರಾಷ್ಟ್ರಗಳ ಬಂದರು, ವಿಮಾನನಿಲ್ದಾಣದಂಥ ಆಸ್ತಿಗಳನ್ನು ಅಡವಿಟ್ಟುಕೊಂಡು ವ್ಯಾಕ್ಸಿನ್ ಕೊಡುವ ಮಾತುಗಳನ್ನಾಡಿತು. ಇನ್ನೂ ಕೆಲವು ರಾಷ್ಟ್ರಗಳು ಅಗತ್ಯವಸ್ತುಗಳ ಬೆಲೆ ಏರಿಸಿ ಈ ಸಂದರ್ಭದಲ್ಲಿ ಲೂಟಿಗೈಯ್ಯುವ ಹಂತದವರೆಗೂ ಹೋದವು. ಭಾರತ ಇವ್ಯಾವುದನ್ನೂ ಮಾಡದೆ ಹಣಕೊಡಲು ಸಾಧ್ಯವಾಗಲಿಲ್ಲವೆಂದರೆ ವ್ಯಾಕ್ಸಿನ್ ಅನ್ನು ಉಚಿತವಾಗಿ ಕೊಡಲೂ ಸಿದ್ಧ ಎಂದು ಅನೇಕ ರಾಷ್ಟ್ರಗಳಿಗೆ ಹಣ ಬಯಸದೆ ವ್ಯಾಕ್ಸಿನ್ ಕಳಿಸಿಕೊಟ್ಟಿತು!
ನಿಜಕ್ಕೂ ಇದು ಒಂದು ಅಪ್ರತಿಮವಾದ ಹೆಜ್ಜೆ. ಇಡಿಯ ಜಗತ್ತು ಭಾರತದೆದುರು ನತಮಸ್ತಕವಾಯ್ತು. ಈ ಪರಿಯ ಹೃದಯವೈಶಾಲ್ಯ ಸಹಸ್ರಮಾನಗಳ ಇತಿಹಾಸವುಳ್ಳ ಭಾರತಕ್ಕೆ ಮಾತ್ರ ಸಾಧ್ಯ ಎಂಬುದು ಅವರಿಗೆ ಅರಿವಾಯ್ತು. ಅದಕ್ಕೆಂದೇ ನಾವು ಕೋವಿಡ್ ಸಂಕಟಕ್ಕೆ ಸಿಲುಕಿದಾಗ ಸಹಾಯ ಮಾಡಿ ಸ್ವಲ್ಪವಾದರೂ ಋಣ ತೀರಿಸುವ ಧಾವಂತಕ್ಕೆ ಅವರು ಬಿದ್ದಿದ್ದು. ಬ್ರೆಜಿಲ್ ವ್ಯಾಕ್ಸಿನ್ ಬೇಕು ಎಂದು ಗೋಳಿಟ್ಟಾಗ ನಾವು ಮುತುವರ್ಜಿ ವಹಿಸಿ ಕಳಿಸಿಕೊಟ್ಟಿದ್ದೆವಲ್ಲ, ಆಗ ಬ್ರೆಜಿಲ್ನ ಅಧ್ಯಕ್ಷ ಟ್ವೀಟ್ ಒಂದರಲ್ಲಿ ಬ್ರೆಜಿಲ್ಗೆ ಸಂಜೀವಿನಿ ತಂದ ಆಂಜನೇಯ ಎಂದು ಹೆಮ್ಮೆಯಿಂದ ಹೇಳಿಕೊಂಡಿದ್ದರು. ಅದೇ ವ್ಯಕ್ತಿ ನಾವು ಸಂಕಟದಲ್ಲಿದ್ದಾಗ ತನ್ನ ಕೈಲಿ ಸಾಧ್ಯವಾದಷ್ಟೂ ಅಗತ್ಯ ವಸ್ತುಗಳನ್ನು ಕಳಿಸಿಕೊಟ್ಟು, ‘ನಿಮ್ಮ ಸಂಕಟದಲ್ಲಿ ನಾವಿದ್ದೇವೆ’ ಎಂದಿದ್ದರಲ್ಲ, ಈ ಪರಿಯ ಪ್ರೀತಿ ಸೇವೆಯ ಕಾರಣದಿಂದ ಮಾತ್ರ ದಕ್ಕಿದಂಥದ್ದು. ಅಕ್ಕ ನಿವೇದಿತಾ ಈ ಮನೋಭಾವನೆಯನ್ನು ಪುನರ್ ಸ್ಥಾಪಿಸಲೆಂದೇ ಬಂದಿದ್ದಳು.
ಭಾರತೀಯ ಮೌಲ್ಯಗಳೊಂದಿಗೆ ಸಂಪರ್ಕವನ್ನೇ ಕಡಿದುಕೊಂಡಿರುವ ಇಲ್ಲಿನ ಕಾಂಗ್ರೆಸ್ಸಿಗರು, ಎಡಪಂಥೀಯರು, ಅನೇಕ ಮುಸಲ್ಮಾನರು ಈ ಒಟ್ಟಾರೆ ಪ್ರಕ್ರಿಯೆಯನ್ನು ಅಂದೂ ಟೀಕಿಸುತ್ತಿದ್ದರು, ಇಂದೂ ಟೀಕಿಸುತ್ತಾರೆ. ಆದರೆ ಅವರಿಗೆ ಗೊತ್ತಿರಬೇಕಾದ ಒಂದೇ ಒಂದು ಸಂಗತಿಯೆಂದರೆ ಮೋದಿ ಬಂದ ನಂತರ ಜಗತ್ತಿನಲ್ಲಿ ಯಾವ ಮೂಲೆಯಲ್ಲಿ ರಂಪಾಟಗಳು ನಡೆದು ಜನ ತೊಂದರೆಗೆ ಸಿಕ್ಕಿಕೊಂಡಾಗಲೂ ಅಂತಹ ಪ್ರದೇಶಗಳಿಂದ ಅವರನ್ನು ಹೊರತರಲು ಸಾಧ್ಯವಾಗುವುದು ನಮಗೆ ಮಾತ್ರ. ಯೆಮನ್ ಗಲಾಟೆಯ ಹೊತ್ತಿನಿಂದ ಹಿಡಿದು ಯೂಕ್ರೇನ್-ರಷ್ಯಾ ಕದನದವರೆಗೂ ಯುದ್ಧದ ನಡುವೆಯೂ ಗ್ರೀನ್ ಕಾರಿಡಾರ್ ನಿರ್ವಣವಾಗುವುದು ನಮ್ಮ ಅಪೇಕ್ಷೆಯ ಮೇಲೆಯೇ. ಮೋದಿ ತಮ್ಮ ನವಿರಾದ ಬಾಂಧವ್ಯದಿಂದ ಇದನ್ನು ಸಾಧ್ಯಮಾಡಿಕೊಂಡಿದ್ದಾರೆ. ಫಿಜಿಯಂಥ ಸಣ್ಣಪುಟ್ಟ ದ್ವೀಪಗಳು ಆಗಾಗ ಭೂಕಂಪಕ್ಕೋ ಪ್ರವಾಹಕ್ಕೋ ಒಳಗಾಗುತ್ತಲೇ ಇರುತ್ತವೆ. ಆಗೆಲ್ಲ ಸಹಾಯದ ಮೊದಲ ಹಸ್ತ ಚಾಚುವುದು ಭಾರತವೇ. ತೀರಾ ಇತ್ತೀಚೆಗೆ ಅಫ್ಘಾನಿಸ್ತಾನ ತಾಲಿಬಾನ್ ತೆಕ್ಕೆಗೆ ಬಿದ್ದನಂತರ ಅನ್ನಕ್ಕಾಗಿ ಹಾಹಾಕಾರ ಶುರುವಾಗಿತ್ತಲ್ಲ, ಆಗ ಟನ್ನುಗಟ್ಟಲೆ ಗೋಧಿಯನ್ನು ರವಾನಿಸಿದ್ದು ಭಾರತವೇ. ಕೆಲವರು ಸೌದಿಯಿಂದ ಇಂಧನ ಆಮದು ಮಾಡಿಕೊಳ್ಳುವ ಭಾರತಕ್ಕೆ ನಾಚಿಕೆಯಾಗಬೇಕು ಎಂದು ವಾದಿಸುತ್ತಾರೆ. ನಾವು ಪೆಟ್ರೋಲ್ ಕೊಳ್ಳುವುದು ದುಡ್ಡು ಕೊಟ್ಟು, ಆದರೆ ಅಫ್ಘಾನಿಸ್ತಾನಕ್ಕೆ ಗೋಧಿಯನ್ನು ಉಚಿತವಾಗಿಯೇ ಕೊಟ್ಟಿದ್ದೆವು. ಇವರುಗಳು ಎಷ್ಟೇ ತಿಪ್ಪರಲಾಗ ಹಾಕಿದರೂ ಭಗವಂತ ಭಾರತದೊಂದಿಗಿದ್ದಾನೆ. ನಾವು ಮಾಡಿದ ಸತ್ಕರ್ಮದ ಫಲವನ್ನು ನಾವು ಉಣ್ಣುತ್ತಲೇ ಇದ್ದೇವೆ. ರಷ್ಯಾ-ಯೂಕ್ರೇನ್ ಗಲಾಟೆಯ ನಡುವೆ ಹೆಚ್ಚು ಗೋಧಿ ರಫ್ತು ಮಾಡುತ್ತಿದ್ದ ಈ ರಾಷ್ಟ್ರಗಳು ಈಗ ಸಪ್ಲೈ ಚೈನ್ ಕಡಿದುಕೊಂಡು ಜಗತ್ತು ಗೋಧಿಗಾಗಿ ತಪಿಸುವಂತೆ ಮಾಡಿಬಿಟ್ಟಿದೆ. ಆ ಜಾಗವನ್ನು ಈಗ ನಾವು ತುಂಬಿದ್ದೇವೆ. ನಮ್ಮ ಉತ್ತಮ ಗುಣಮಟ್ಟದ ಗೋಧಿಗೆ ಎಲ್ಲಿಲ್ಲದ ಬೆಲೆ ಬಂದಿದೆ.
ನೆನಪಿಡಿ, ಕೆಟ್ಟ ಕೆಲಸಗಳು ಕೆಟ್ಟ ಫಲವನ್ನು ಕೊಡಬಹುದಾದರೆ ಒಳ್ಳೆಯ ಕೆಲಸಗಳು ಒಳ್ಳೆಯ ಫಲವನ್ನು ಕೊಡುತ್ತವೆ. ಈ ಒಳ್ಳೆಯ ಕೆಲಸಗಳೇ ನಿಸ್ವಾರ್ಥದ ಸ್ವರೂಪವನ್ನು ಪಡೆದುಕೊಂಡರೆ ಅದು ಕರ್ಮಯೋಗವೆನಿಸಿಕೊಳ್ಳುತ್ತದೆ. ಭಾರತ ಅಂತಹ ಶ್ರೇಷ್ಠ ಕರ್ಮಯೋಗದ ಹಾದಿಯಲ್ಲಿ ನಡೆಯುತ್ತಿದೆ. ಹೆಮ್ಮೆ ಎಂದರೆ ನಮ್ಮ ಕಾಲದಲ್ಲಿ ಈ ಕರ್ಮಯೋಗಕ್ಕೆ ಸೂಕ್ತ ಅಡಿಪಾಯ ನಿರ್ವಿುಸಿಕೊಟ್ಟವರು ಸ್ವಾಮಿ ವಿವೇಕಾನಂದರೇ. ಅವರು ಹೇಳಿದ ಹಾದಿಯಲ್ಲಿ ಭವ್ಯಸೌಧವನ್ನು ನಿರ್ಮಾಣ ಮಾಡಿದ್ದು ಅವರ ಶಿಷ್ಯೆ ಅಕ್ಕ ನಿವೇದಿತೆಯೇ!
(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)