ನೇತಾಜಿಗೆ ಹೊಳಪು ತರಲು ಮೋದಿಯೇ ಬರಬೇಕಾಯ್ತು!

Nethaji
Published on
ಇನ್ನುಮುಂದೆ ಗಣರಾಜ್ಯೋತ್ಸವದೊಂದಿಗೆ ಸುಭಾಷ್​ಚಂದ್ರ ಬೋಸರ ಜಯಂತಿಯ ಆಚರಣೆಯೂ ಸಹಜವಾಗಿ ಬೆಸೆದುಕೊಂಡುಬಿಡುತ್ತದೆ. ಪ್ರತಿ ಶಾಲೆ, ಕಾಲೇಜುಗಳಲ್ಲಿಯೂ ಈ ಹಬ್ಬದ ಆಚರಣೆಯೊಂದಿಗೆ ಸುಭಾಷ್​ಚಂದ್ರ ಬೋಸರ ಚಿಂತನೆಯ ಚರ್ಚೆಯೂ ನಡೆಯುತ್ತದೆ. ದೂರದೃಷ್ಟಿ ಎಂದರೆ ಇದೇ ಅಲ್ಲವೇನು?

ಭಾರತದ ಸ್ವಾತಂತ್ರ್ಯಕ್ಕೆ ನಿಜವಾಗ್ಯೂ ಯಾರು ಕಾರಣ? ಎನ್ನುವ ಪ್ರಶ್ನೆ ಕಳೆದ ಏಳು ದಶಕಗಳಿಂದಲೂ ಕಾಡುತ್ತಲೇ ಬಂದಿದೆ. ಕ್ರೌರ್ಯವನ್ನೇ ಉಸಿರಾಡುತ್ತಿದ್ದ ಬ್ರಿಟಿಷರು ಗಾಂಧೀಜಿಯವರ ಅಸಹಕಾರ ಚಳವಳಿಗೆ, ಶಾಂತಿ-ಅಹಿಂಸೆಗಳಿಗೆ ಬೆದರಿ ದೇಶಬಿಟ್ಟು ಓಡಿಹೋದರು ಎನ್ನುವುದನ್ನು ಸಾರಾಸಗಟಾಗಿ ಒಪ್ಪುವುದು ಕಷ್ಟವೇ. ಸ್ವತಃ ಗಾಂಧೀಜಿ ಕೂಡ 1942ರಲ್ಲಿ ಅನಿವಾರ್ಯವಾಗಿ ‘ಕ್ವಿಟ್ ಇಂಡಿಯಾ’ ಎಂದು ಬ್ರಿಟಿಷರಿಗೆ ಉಚ್ಚಕಂಠದಲ್ಲಿ ಹೇಳಬೇಕಾಗಿ ಬಂದಿತ್ತು. ಹೀಗೆ ಹೇಳಲು ಅವರು ಬಳಸಿಕೊಂಡ ದೇಸೀ ವಾಕ್ಯ ‘ಮಾಡು ಇಲ್ಲವೇ ಮಡಿ’ ಅಂತ. ಅಂದರೆ ಅತ್ಯಂತ ಹಿಂಸಾತ್ಮಕ ಮಾರ್ಗವನ್ನು ಬಳಸಿಯಾದರೂ ಈ ಬ್ರಿಟಿಷರನ್ನು ಓಡಿಸುವುದು ಅನಿವಾರ್ಯ ಎಂಬುದು ಅವರಿಗೆ ಗೊತ್ತಾಗಿಹೋಗಿತ್ತು. ಇಲ್ಲವಾದರೆ ತರುಣ ಪೀಳಿಗೆ ಸ್ವಾತಂತ್ರ್ಯದ ಭರವಸೆಯನ್ನೇ ಕಳೆದುಕೊಳ್ಳುವ ಭಯವಿತ್ತು ಅಥವಾ ಸುಭಾಷರ ಉಗ್ರಪಂಥ ಮೆಚ್ಚುಗೆಯಾಗಲಾರಂಭಿಸಿತ್ತು. ‘ಇಷ್ಟು ಆತುರಾತುರವಾಗಿ ದೇಶಬಿಟ್ಟು ತೊಲಗಿ ಎಂಬ ಘೊಷಣೆ ಏಕೆ?’ ಎಂದು ಗಾಂಧೀಜಿಯನ್ನು ಕೇಳಿದ್ದಕ್ಕೆ, ‘ಹೋಗಿ ಬೋಸರನ್ನು ಕೇಳಿ’ ಎಂದು ಹೇಳಿದ್ದು ದಾಖಲಾಗಿದೆ. ಬೋಸರು ವಿದೇಶದಲ್ಲಿ ಸೈನ್ಯಕಟ್ಟಿದ ಪ್ರಯಾಸ, ಇಂಫಾಲದ ಮೇಲೆ ಆಕ್ರಮಣ, ಬ್ರಿಟಿಷರನ್ನು ಹಣ್ಣುಗಾಯಿ, ನೀರುಗಾಯಿ ಮಾಡಿದ ಐಎನ್​ಎ ವೀರರ ಹೋರಾಟ, ಇವೆಲ್ಲವೂ ಸ್ವಾತಂತ್ರಾ್ಯನಂತರ ಮೂಲೆಗುಂಪಾಗಿಬಿಟ್ಟವು.

ಅಮೆರಿಕ ಯುದ್ಧರಂಗವನ್ನು ಪ್ರವೇಶಿಸಿ ಜಪಾನಿನ ಸಾಮರ್ಥ್ಯವನ್ನು ಕುಸಿಯುವಂತೆ ಮಾಡದೇ ಹೋಗಿದ್ದರೆ, ಪ್ರಾಕೃತಿಕ ವೈಪರೀತ್ಯಗಳು ಐಎನ್​ಎ ಯೋಧರಿಗೆ ಅಡ್ಡಗಾಲಾಗದೇ ಹೋಗಿದ್ದರೆ ಸುಭಾಷರು ಬೀಸಿದ ಬಲೆಗೆ ಬ್ರಿಟಿಷರು ತತ್ತರಿಸಿಹೋಗಿಬಿಡುತ್ತಿದ್ದರು. ಸೇನೆಯ ಒಳ-ಹೊರಗನ್ನು ಚೆನ್ನಾಗಿ ಅರಿತಿದ್ದ ಐಎನ್​ಎ ಸೈನಿಕರನೇಕರು ಭಾರತಕ್ಕೆ ಬಂದು ಭಾರತೀಯ ಸೇನೆಯೊಳಗೆ ವಿದ್ರೋಹದ ಬೆಂಕಿಯನ್ನು ಹೊತ್ತಿಸಿಯಾಗಿತ್ತು. ಈ ಬೆಂಕಿಗೆ ತುಪ್ಪ ಸುರಿದಿದ್ದು ಬ್ರಿಟಿಷರೇ. ಆಜಾದ್ ಹಿಂದ್ ಫೌಜ್​ನ ಸೈನಿಕರನ್ನು ವಶಪಡಿಸಿಕೊಂಡಾಗ ಅವರನ್ನು ಯುದ್ಧಕೈದಿಗಳೆಂದು ಪರಿಗಣಿಸದೇ ದೇಶದ್ರೋಹಿಗಳೆಂದು ಕರೆದು ವಿಚಾರಣೆ ನಡೆಸಿ ಕಠಿಣ ಶಿಕ್ಷೆಕೊಟ್ಟು ಇತರ ಸೈನಿಕರ ಮನೋಬಲವನ್ನು ಉಡುಗಿಸಬೇಕು ಎಂಬ ಇಚ್ಛೆ ಆಳುವ ಸರ್ಕಾರಕ್ಕೆ. ಆದರೆ ಎಲ್ಲೆಲ್ಲೂ ಹರಡಿಕೊಂಡಿದ್ದ ಐಎನ್​ಎ ಗೂಢಚಾರರು ಈ ವಿಚಾರವನ್ನು ಬಳಸಿಕೊಂಡೇ ಸೇನೆಯೊಳಗೆ ವಿದ್ರೋಹದ ಬೆಂಕಿ ಹೊತ್ತಿಸಿಬಿಟ್ಟರು. ಆಗ ನಡೆದ ನೌಕಾಬಂಡಾಯ ಬ್ರಿಟಿಷರ ನಿದ್ದೆ ಕೆಡಿಸಿತ್ತು. ಅದಾಗಲೇ ಜಾಗತಿಕಮಟ್ಟದಲ್ಲಿ ಸುಭಾಷರು ಉಂಟುಮಾಡಿದ ತಲ್ಲಣದಿಂದಾಗಿ ಬ್ರಿಟಿಷರಿಗೆ ಸಾಕಷ್ಟು ಹೊಡೆತ ಉಂಟಾಗಿತ್ತು. ಈಗ ಈ ದಂಗೆ ಅವರಿಗೆ ಮರ್ವಘಾತವಾಗುವ ಎಲ್ಲ ಸಾಧ್ಯತೆಗಳೂ ಇದ್ದವು. ಹೀಗಾಗಿಯೇ ತುರ್ತಾಗಿ ಭಾರತವನ್ನು ಬಿಟ್ಟುಹೋಗುವ ನಿರ್ಧಾರವನ್ನು ತೆಗೆದುಕೊಂಡರು. 1948ರಲ್ಲಿ ಭಾರತವನ್ನು ಬಿಟ್ಟುಹೋಗಬೇಕು ಎಂದು ನಿಶ್ಚಯಿಸಿದ್ದ ಬ್ರಿಟಿಷರು ಅವಸರವಸರವಾಗಿ ಒಂದು ವರ್ಷ ಮುಂಚೆಯೇ ಭಾರತವನ್ನು ಬಿಟ್ಟು ತೆರಳಿದರು! ಹೀಗೆ ಓಡಲು ನಿಸ್ಸಂಶಯವಾಗಿ ಗಾಂಧೀಜಿಯವರ ಪ್ರಯಾಸವೊಂದೇ ಕಾರಣವಾಗಿರಲಿಲ್ಲ. ನೆಹರು ಪಾತ್ರವಂತೂ ಬಲು ದೂರವೇ ಉಳಿಯಿತು. ಒಟ್ಟಿನಲ್ಲಿ ಸ್ವಾತಂತ್ರ್ಯದ ಹೊಸ್ತಿಲಿಗೆ ಭಾರತವನ್ನು ತಂದು ನಿಲ್ಲಿಸಿದ್ದು ಐಎನ್​ಎ ಎಂಬ ವಾದಕ್ಕೆ ಈಗ ನಿಧಾನವಾಗಿ ಪುರಾವೆಗಳು ಸಿಗಲಾರಂಭಿಸಿವೆ. ಭಾರತದ ಇತಿಹಾಸವನ್ನು ಪುನರ್​ರಚಿಸಬೇಕು ಎಂಬ ಕೂಗು ಇತ್ತೀಚೆಗೆ ದೊಡ್ಡದಾಗುತ್ತಿದೆಯಲ್ಲ, ಅದೇನಾದರೂ ಆಚರಣೆಗೆ ಬಂದರೆ ಮೊದಲು ಸ್ವಾತಂತ್ರ್ಯಕ್ಕೆ ಕಾರಣರಾದ ನಿಜ ಮಹಾಪುರುಷರು ಬೆಳಕಿಗೆ ಬರಬೇಕು. ಇಲ್ಲವಾದರೆ ವರ್ಷಗಟ್ಟಲೇ ಕಾಲಾಪಾನಿಯಲ್ಲಿ ಜೀವ ಸವೆಸಿದ ಸಾವರ್ಕರ್​ರನ್ನು ಮಖೇಡಿಗಳು ಕೆಲವರು ಹೇಡಿಗಳೆಂದುಬಿಡುತ್ತಾರೆ ಮತ್ತು ಜೈಲಿನಲ್ಲಿ ಕುಳಿತು ವೈಭವದ ಬದುಕನ್ನು ನಡೆಸಿ ಪುಸ್ತಕ ರಚನೆ ಮಾಡಿದವರನ್ನು ಶ್ರೇಷ್ಠ ಹೋರಾಟಗಾರರು ಎಂದು ಬಿಂಬಿಸಿಬಿಡುತ್ತಾರೆ!

ಕಾಲ ಬದಲಾಗಿದೆ ಮತ್ತು ಹೀಗೆ ನಿಜ ಇತಿಹಾಸಕ್ಕೆ ಬೆಲೆಕೊಡಿಸಲು ನರೇಂದ್ರ ಮೋದಿಯೇ ಬರಬೇಕಾಯ್ತು. ಹೌದು, ಅವರು ಅಧಿಕಾರಕ್ಕೆ ಬಂದ ಆರಂಭದ ದಿನಗಳಿಂದಲೂ ಸುಭಾಷರ ಕುರಿತಂತೆ ಅವರಿಗಿರುವ ಒಲವು ಬೇರೆಯದ್ದೇ. 2015ರ ಅಕ್ಟೋಬರ್ ತಿಂಗಳಲ್ಲಿ ನೇತಾಜಿಯವರ ಕುರಿತಂತೆ ಮೋದಿ ಒಂದು ಮಹತ್ವದ ನಿರ್ಣಯ ಕೈಗೊಂಡರು. ನೇತಾಜಿಯ ಪರಿವಾರದವರು, ಅಭಿಮಾನಿಗಳು ಮತ್ತು ಭಾರತವನ್ನು ಪ್ರೀತಿಸುವ ಅಸಂಖ್ಯ ಜನರ ಕನಸನ್ನು ಈಡೇರಿಸುವ ಹಿನ್ನೆಲೆಯಲ್ಲಿ ನೇತಾಜಿಯವರಿಗೆ ಸಂಬಂಧಪಟ್ಟ ಗುಪ್ತ ಕಡತಗಳನ್ನು ಜನರೆದುರು ತೆರೆದಿಡುವ ಮಹತ್ವದ ಕೆಲಸಕ್ಕೆ ನಾಂದಿ ಹಾಡಿದರು. 2016ರ ಜನವರಿ 23ರಿಂದ ಈ ಕೆಲಸಕ್ಕೆ ಚಾಲನೆಯೂ ಸಿಕ್ಕಿಬಿಟ್ಟಿತು. ಮೋದಿ ಈ ಕಡತಗಳಿಗೆ ಸಂಬಂಧಪಟ್ಟ ರಾಷ್ಟ್ರಗಳನ್ನು ವಿನಂತಿಸಿಕೊಂಡು ತಮ್ಮ ಬಳಿಯಿರುವ ನೇತಾಜಿಯವರ ದಸ್ತಾವೇಜುಗಳನ್ನು ತೆರೆದಿಡುವಂತೆ ಕೋರಿಕೊಂಡರು. ಈ ದಸ್ತಾವೇಜುಗಳು ಒಂದೊಂದಾಗಿಯೇ ಹೊರಬರಲಾರಂಭಿಸಿದಂತೆ ನೇತಾಜಿಯವರ ಸಾವಿನ ಸುತ್ತ ಇದ್ದ ಗೊಂದಲಗಳು ಮರೆಯಾಗುವಂತೆ ಕಂಡರೂ ಜವಾಹರ್​ಲಾಲ್ ನೆಹರು ನೇತಾಜಿಯನ್ನು ಎಷ್ಟು ದ್ವೇಷಿಸುತ್ತಿದ್ದರೆಂಬುದಕ್ಕೆ ಕೆಲವು ಪುರಾವೆಗಳು ದೊರೆತವು. ಅವರು ಇಂಗ್ಲೆಂಡಿನ ಪ್ರಧಾನಿ ಆಟ್ಲಿಗೆ ಪತ್ರ ಬರೆಯುತ್ತ, ‘ನಿಮ್ಮ ವಾರ್ ಕ್ರಿಮಿನಲ್ ಆಗಿರುವ ನೇತಾಜಿಯವರನ್ನು ರಷ್ಯಾಕ್ಕೆ ಪ್ರವೇಶಿಸಲು ಸ್ಟಾ್ಯಲಿನ್ ಅನುಮತಿ ನೀಡಿದ್ದಾನೆ ಎಂಬುದು ನಮಗೆ ನಂಬಲರ್ಹ ಮಾಹಿತಿ. ರಷ್ಯನ್ನರು ಬ್ರಿಟಿಷ್-ಅಮೆರಿಕದವರೊಂದಿಗೆ ಮಾಡುತ್ತಿರುವ ಮೋಸ ಇದು ಎಂಬುದು ನನ್ನ ಅಭಿಪ್ರಾಯ. ಇದನ್ನು ಗಮನಿಸಿ ಮುಂದೆ ತೆಗೆದುಕೊಳ್ಳಬೇಕಾದ ಕ್ರಮ ಕೈಗೊಳ್ಳಬೇಕೆಂಬುದು ನನ್ನ ಅಭಿಮತ’ ಎಂದು ಬರೆದಿದ್ದರು! ಈ ಪತ್ರದಲ್ಲಿ ಗಮನಿಸಬೇಕಾಗಿದ್ದ ಸಂಗತಿಯೆಂದರೆ ಬೋಸರು ತೀರಿಕೊಂಡಿದ್ದಾರೆ ಎಂದು ಭಾವಿಸುವ ಮೂರುವರ್ಷಗಳ ನಂತರ ಅವರು ಈ ಪತ್ರ ಬರೆದಿದ್ದರು. ಅದರರ್ಥ ನೆಹರು ಅವರಿಗೆ ಬೋಸರು ಜೀವಂತವಾಗಿದ್ದಾರೆ ಎನ್ನುವ ಖಚಿತವಾದ ಮಾಹಿತಿಯಿತ್ತು ಎಂದಾಯ್ತು! ಸ್ವಾತಂತ್ರಾ್ಯನಂತರವೂ ಅವರು ಬೋಸರು ತೀರಿಕೊಂಡಿದ್ದಾರೆ ಎಂಬ ಮಂತ್ರವನ್ನೇ ಮತ್ತೆ ಮತ್ತೆ ಜಪಿಸಿದ್ದೇಕೆ? ಮೋದಿಯವರ ಪ್ರಯತ್ನದಿಂದಾಗಿ ಸಮಾಜ ಈ ಪ್ರಶ್ನೆಯನ್ನು ಕೇಳುವಂತಾಯ್ತು. ಆದರೆ ಮೋದಿ ಅಲ್ಲಿಗೇ ನಿಲ್ಲಲಿಲ್ಲ. ಬೋಸರು ಅಂಡಮಾನ್-ನಿಕೋಬಾರ್​ಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡು ಅಲ್ಲಿ ತಿರಂಗಾ ಹಾರಿಸಿದುದರ 75 ವರ್ಷಗಳ ಸವಿನೆನಪಿಗೆ 2018ರಲ್ಲಿ ಮೂರು ದ್ವೀಪಗಳ ಮರುನಾಮಕಾರಣ ಮಾಡಿದರು. ಅಲ್ಲಿನ ಪ್ರಖ್ಯಾತ ದ್ವೀಪಗಳಾದ ರೋಜ್, ನೀಲ್ ಮತ್ತು ಹ್ಯಾವ್​ಲಾಕ್​ಗಳು ಆಳಿದ ಅಧಿಕಾರಿಗಳ ಸ್ಮರಣೆಯನ್ನು ತಂದುಕೊಡುವಂಥವಾಗಿದ್ದವು. ಮೋದಿ ಅಲ್ಲಿಗೇ ಭೇಟಿಕೊಟ್ಟು ರೋಜ್ ದ್ವೀಪವನ್ನು ನೇತಾಜಿ ಸುಭಾಷ್​ಚಂದ್ರ ಬೋಸ್ ದ್ವೀಪವೆಂತಲೂ, ನೀಲ್ ದ್ವೀಪವನ್ನು ಶಹೀದ್ ದ್ವೀಪವೆಂತಲೂ ಮತ್ತು ಹ್ಯಾವ್​ಲಾಕ್ ದ್ವೀಪವನ್ನು ಸ್ವರಾಜ್ ದ್ವೀಪವೆಂತಲೂ ಮರುನಾಮಕರಣ ಮಾಡಿದರು. ಇದು ರಾಷ್ಟ್ರೀಯವಾದಿಗಳಲ್ಲಿ ಸಂಚಲನವುಂಟುಮಾಡಿಬಿಟ್ಟಿತು. ನೆಹರು ಕುಟುಂಬದ ಆರಾಧನೆಯನ್ನೇ ಅನಿ ವಾರ್ಯವಾಗಿ ಮಾಡಿಕೊಂಡು ಬಂದಿದ್ದವರಿಗೆ ಇರಿಸು-ಮುರುಸಾಗಿರಲಿಕ್ಕೂ ಸಾಕು. ಮೋದಿ ಸುಮ್ಮನಿರುವ ಜಾಯಮಾನದವರಲ್ಲವಲ್ಲ. ರಾಜೀವ್ ಗಾಂಧಿ ಹೆಸರಲ್ಲಿದ್ದ ಪ್ರಶಸ್ತಿಯನ್ನು ಧ್ಯಾನ್​ಚಂದ್​ರ ಹೆಸರಿಗೆ ಬದಲಾಯಿಸಿದರು. ನೆಹರು, ಇಂದಿರಾ ಮತ್ತು ಅವರ ಕುಟುಂಬದವರ ಹೆಸರಿನಲ್ಲಿ ಎಷ್ಟೆಲ್ಲ ಆಸ್ತಿಪಾಸ್ತಿಗಳು ಮತ್ತು ಸರ್ಕಾರಿ ಯೋಜನೆಗಳ ನಾಮಕರಣವಾಗಿದೆ ಎಂಬುದನ್ನು ಜನ ತಿಳಿಯುವಂತೆ ಮಾಡಿದರು, ‘ನ್ಯಾಷನಲ್ ಹೆರಾಲ್ಡ್’ ಎಂಬ ಕಾಂಗ್ರೆಸ್ಸಿನ ಮುಖವಾಣಿ ಪತ್ರಿಕೆಯ ಅವ್ಯವಹಾರವನ್ನು ಬಯಲಿಗೆ ತರುವ ವ್ಯವಸ್ಥಿತವಾದ ಯೋಜನೆಯನ್ನೂ ಮಾಡಿದರು. ಇದರ ನಡುವೆಯೇ ಕಳೆದ ಫೆಬ್ರವರಿಯಲ್ಲಿ ಸದನದಲ್ಲಿ ಮಾತನಾಡುತ್ತ ಇದ್ದಕ್ಕಿದ್ದಂತೆ ನೇತಾಜಿ ಸುಭಾಷ್​ಚಂದ್ರ ಬೋಸರನ್ನು ಈ ದೇಶದ ಪ್ರಥಮ ಪ್ರಧಾನಮಂತ್ರಿ ಎಂದೂ ಸಂಬೋಧಿಸಿಬಿಟ್ಟರು! ಕಾಂಗ್ರೆಸ್ಸಿಗರ ದುರಹಂಕಾರಕ್ಕೆ ಇದು ಬಲವಾದ ಪೆಟ್ಟು.

ಸ್ವಾತಂತ್ರ್ಯಕ್ಕಾಗಿ ಹೋರಾಡಿದ, ಈ ರಾಷ್ಟ್ರದ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತ ಸಂಸ್ಥೆ ಎಂದು ಹೇಳಿಕೊಳ್ಳುತ್ತಲೇ ಇಡೀ ಸಂಸ್ಥೆಯನ್ನು ಪರಿವಾರಕ್ಕೆ ಅಡವಿಟ್ಟಿರುವ ಈ ಮಂದಿ ಪರಿವಾರದ ಮೇಲಾಗುವ ಆಘಾತವನ್ನು ಕಾಂಗ್ರೆಸ್ಸಿನ ಮೇಲಿನ ಹೊಡೆತ ಎಂದೇ ಭಾವಿಸುತ್ತಾರೆ. ಹೀಗಾಗಿ ನರೇಂದ್ರ ಮೋದಿಯವರ ಈ ಹೇಳಿಕೆ ಕಾಂಗ್ರೆಸ್ ಟ್ರಾಲುಗಳನ್ನು ಬಡಿದೆಬ್ಬಿಸಿಬಿಟ್ಟಿತ್ತು. ಆದರೆ ಇತಿಹಾಸ ಮೋದಿಯವರ ಪರವಾಗಿತ್ತು. ಸ್ವತಃ ಸುಭಾಷ್​ಚಂದ್ರ ಬೋಸರು ಆರ್ಜಿ ಹುಕೂಮತ್-ಎ-ಹಿಂದ್ ಎಂಬ ಆಜಾದ್ ಹಿಂದ್ ಸರ್ಕಾರವನ್ನು ಸ್ಥಾಪಿಸಿ ಅದಕ್ಕೆ ಅನೇಕ ದೇಶಗಳ ಮಾನ್ಯತೆಯನ್ನೂ ಪಡೆದುಕೊಂಡುಬಿಟ್ಟಿದ್ದರು. ಈ ಸರ್ಕಾರದ ಪ್ರಧಾನಮಂತ್ರಿಯಾಗಿ ಪ್ರಮಾಣವಚನವನ್ನೂ ಸಿಂಗಾಪುರದ ಖ್ಯಾತೆ ಥಿಯೇಟರ್​ನಲ್ಲಿ ಸ್ವೀಕರಿಸಿದ್ದರು. ಸರ್ಕಾರದ ಅಧಿಕೃತ ಜವಾಬ್ದಾರಿಯಿಂದಲೇ ಇತರ ರಾಷ್ಟ್ರಗಳಿಂದ ಸಹಾಯವನ್ನು ಸಾಲದ ರೂಪದಲ್ಲಿ ಪಡೆದುಕೊಂಡಿದ್ದರು. ಯಾವ ದಿಕ್ಕಿನಿಂದ ನೋಡಿದರೂ ಅವರೇ ಭಾರತದ ಮೊದಲ ಪ್ರಧಾನಿ! ನರೇಂದ್ರ ಮೋದಿ ಈ ಚರ್ಚೆಯನ್ನು ಸಮರ್ಥವಾಗಿ ಹುಟ್ಟುಹಾಕಿಬಿಟ್ಟಿದ್ದರು. ಪುಣ್ಯಾತ್ಮ ಅಲ್ಲಿಗೇ ನಿಲ್ಲಲಿಲ್ಲ. ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಇಂಡಿಯಾ ಗೇಟ್​ನಲ್ಲಿ ನೇತಾಜಿಯವರ ಪ್ರತಿಮೆ ಸ್ಥಾಪಿಸುವುದಾಗಿ ಹೇಳಿಕೆ ಕೊಟ್ಟು ಎಲ್ಲರ ಹುಬ್ಬು ಮೇಲೇರುವಂತೆ ಮಾಡಿಬಿಟ್ಟರು. ಕಾಂಗ್ರೆಸ್ಸು ವಿರೋಧಿಸಲಾಗದ, ಸಮರ್ಥಿಸಿಕೊಳ್ಳಲಾಗದ ದಯನೀಯ ಸ್ಥಿತಿಗೆ ಬಂದುಬಿಟ್ಟಿತ್ತು. ವಿರೋಧಿಸಿದರೆ ಜನಸಾಮಾನ್ಯರಿಂದ ವಿರೋಧ ಎದುರಿಸಬೇಕು. ಸಮರ್ಥಿಸಿಕೊಂಡರೆ ತಮ್ಮದ್ದೇ ಪರಂಪರೆಯನ್ನು ಬಿಟ್ಟುಬಿಡಬೇಕು. ಅವರ ಪರಂಪರೆಯಾದರೂ ಯಾವುದು? ಸೋನಿಯಾ ಗಾಂಧಿಯನ್ನು ಮಹಾತ್ಮಾ ಗಾಂಧೀಜಿಯವರ ಮುಂದುವರಿದ ಭಾಗ ಎನ್ನುವುದು ಮತ್ತು ರಾಹುಲ್, ಪ್ರಿಯಾಂಕಾರನ್ನು ಗಾಂಧೀಜಿಯವರ ಇಂದಿನ ಪೀಳಿಗೆ ಎನ್ನುವುದು! ಗಾಂಧೀಜಿಯವರ ಹೆಸರನ್ನು ಬಂಡವಾಳ ಮಾಡಿಕೊಂಡೇ ಈ ಪರಿವಾರ ಇಷ್ಟು ವರ್ಷಗಳ ಕಾಲ ಆಳ್ವಿಕೆ ನಡೆಸಿತ್ತು. ಮುಂದೆಯೂ ಆ ಹೆಸರಿನ ಬಳಕೆಗೆ ಅವರು ಸಜ್ಜಾಗಿಯೇ ಇದ್ದಾರೆ. ಮೋದಿ ಅದನ್ನು ಕಿತ್ತುಕೊಳ್ಳುತ್ತಿದ್ದಾರೆ ಅಷ್ಟೇ. ಗಾಂಧೀಜಿಯವರ ಮೇಲಿನ ತಮ್ಮ ಪ್ರೇಮದಿಂದಾಗಿ ಅವರು ತಾವೂ ಗಾಂಧೀಜಿಯ ಅನುಯಾಯಿಗಳು ಎಂಬುದನ್ನಂತೂ ಅದಾಗಲೇ ಸಾಬೀತುಪಡಿಸಿಬಿಟ್ಟಿದ್ದಾರೆ. ಆದರೆ ಈಗ ಸುಭಾಷ್​ಚಂದ್ರ ಬೋಸರು ಇವರೆಲ್ಲರನ್ನೂ ಮೀರಿದ ವ್ಯಕ್ತಿತ್ವ ಎಂದು ಹಂತ-ಹಂತವಾಗಿ ಸಾಬೀತುಪಡಿಸುವ ಮೂಲಕ ಕಾಂಗ್ರೆಸ್ಸಿಗಿದ್ದ ಬಂಡವಾಳದ ನಿಧಿಯನ್ನೇ ಅಸ್ತವ್ಯಸ್ತಗೊಳಿಸಿಬಿಟ್ಟಿದ್ದಾರೆ! ಇನ್ನು ಮುಂದೆ ಯಾವ ಸರ್ಕಾರ ಬಂದರೂ ಸುಭಾಷರ ಗುಣಗಾನ ಮಾಡುವುದು ಅನಿವಾರ್ಯ. ಏಕೆಂದರೆ ಈ ವರ್ಷದಿಂದ ಗಣರಾಜ್ಯೋತ್ಸವದ ಹಬ್ಬ ಸುಭಾಷರ ಜಯಂತಿಯಿಂದಲೇ ಆರಂಭವಾಗಿ 26ಕ್ಕೆ ಸಮಾಪನಗೊಳ್ಳುವ ನಿರ್ಣಯವನ್ನು ಸರ್ಕಾರ ತೆಗೆದುಕೊಂಡಿದೆ. ಇನ್ನುಮುಂದೆ ಗಣರಾಜ್ಯೋತ್ಸವದೊಂದಿಗೆ ಸುಭಾಷ್​ಚಂದ್ರ ಬೋಸರ ಜಯಂತಿಯ ಆಚರಣೆಯೂ ಸಹಜವಾಗಿ ಬೆಸೆದುಕೊಂಡುಬಿಡುತ್ತದೆ. ಪ್ರತಿ ಶಾಲೆ, ಕಾಲೇಜುಗಳಲ್ಲಿಯೂ ಈ ಹಬ್ಬದ ಆಚರಣೆಯೊಂದಿಗೆ ಸುಭಾಷ್​ಚಂದ್ರ ಬೋಸರ ಚಿಂತನೆಯ ಚರ್ಚೆಯೂ ನಡೆಯುತ್ತದೆ. ದೂರದೃಷ್ಟಿ ಎಂದರೆ ಇದೇ ಅಲ್ಲವೇನು?

ವಿಷಯಕ್ಕೆ ಸಂಬಂಧಿಸಿಲ್ಲವಾದರೂ ಹೇಳಲೇಬೇಕಾದ ಸಂಗತಿಯೊಂದಿದೆ. ಇನ್ನುಮುಂದೆ ಪ್ರತಿವರ್ಷ ಗಣರಾಜ್ಯೋತ್ಸವದ ಅಂಗವಾಗಿ ನಡೆಯುವ ಬೀಟಿಂಗ್ ದ ರಿಟ್ರೀಟ್ ಪರೇಡ್​ನಲ್ಲಿ ಕ್ರಿಶ್ಚಿಯನ್ನರ ಗೀತೆಯ ಬದಲು ‘ಏ ಮೇರೆ ವತನ್ ಕೆ ಲೋಗೋ’ ಗೀತೆಯನ್ನು ಬಳಸಲಾಗುತ್ತದೆ. ನಿಜಕ್ಕೂ ಇದು ಬಲುದೊಡ್ಡ ಸಂದೇಶ. ಈ ದೇಶ ಕಾತರದಿಂದ ಎದುರು ನೋಡುತ್ತಿರುವ ಕ್ಷಣಗಳನ್ನು ಮೋದಿ ನಿರ್ವಿುಸುವತ್ತ ದಾಪುಗಾಲಿಡುತ್ತಿದ್ದಾರೆ. ಈ ಎಲ್ಲ ಸಂಗತಿಗಳಿಂದ ಏನಾದರೂ ಲಾಭವಿದೆಯೇ? ಯಾರ ಮೇಲಾದರೂ ಇವುಗಳ ಪ್ರಭಾವವಾಗುತ್ತದೆಯೇ? ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲುದಿಸಿದರೆ ಭಾರತೀಯರಿಗಷ್ಟೇ ಅಲ್ಲ, ಜಗತ್ತಿನ ಅನೇಕ ಮಂದಿಗೆ ಈ ಸಣ್ಣ-ಸಣ್ಣ ಕಾರ್ಯಗಳು ಬಲುದೊಡ್ಡ ಸಂದೇಶವನ್ನು ಕೊಡುತ್ತವೆ. ಸುಭಾಷರ ಹುಟ್ಟಿದ ಹಬ್ಬದ ದಿನವೇ ತೈವಾನ್ ತಮ್ಮ ಬಳಿಯಿರುವ ಸುಭಾಷರಿಗೆ ಸಂಬಂಧಪಟ್ಟ ದಸ್ತಾವೇಜುಗಳನ್ನು ಬಿಡುಗಡೆ ಮಾಡುವ ಹೇಳಿಕೆಯನ್ನು ನೀಡಿದೆ. ಇದು ನಿಜಕ್ಕೂ ಮಹತ್ವದ ಮೈಲಿಗಲ್ಲು. ಏಕೆಂದರೆ ಇದುವರೆಗೂ ಸುಭಾಷರ ಸಾವಿನ ಕುರಿತಂತೆ ನಡೆದ ಎಲ್ಲ ಚರ್ಚೆಗಳೂ ಜಪಾನಿನಲ್ಲಿ ನಡೆದ ಸಂಶೋಧನೆಯ ಮೇಲೆಯೇ ನಿರ್ಭರವಾಗಿರುವಂಥದ್ದು. ಸುಭಾಷರು ತೈಪೆಯ ವಿಮಾನಾಪಘಾತದಲ್ಲಿ ತೀರಿಕೊಂಡಿದ್ದಾರೆ ಎನ್ನುವಾಗ ಅದು ಜಪಾನಿಗರ ಅಡಿಯಲ್ಲಿತ್ತು. ಆನಂತರ ಪ್ರತ್ಯೇಕವಾಗಿ ಅಲ್ಲಿಗೆ ಸುಲಭಕ್ಕೆ ಹೋಗಿ ದಾಖಲೆಗಳನ್ನು ಸಂಗ್ರಹಿಸುವುದು ಸಾಧ್ಯವಿರಲಿಲ್ಲ; ಅಥವಾ ಈ ದೇಶದ ನಾಯಕರಿಗೆ ಅದು ಬೇಕಿರಲಿಲ್ಲ. ಈಗ ಅವರೇ ಈ ಮಾತನ್ನು ಹೇಳುತ್ತಿರುವುದರಿಂದ ಸುಭಾಷರ ಸಾವಿನ ಸುರುಳಿ ಬಿಚ್ಚಿಕೊಳ್ಳುವುದೇನೋ ಎನಿಸುತ್ತಿದೆ. ಮಹಾನಾಯಕನೊಬ್ಬನ ಸಾವಿನ ನಿಗೂಢತೆಯನ್ನು ಭೇದಿಸಿ ಸತ್ಯವನ್ನು ಹೊರತೆಗೆಯಲು ಮೋದಿಯೇ ಬರಬೇಕಾಯ್ತು ಅಲ್ಲವೇ?!

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net