

ಸಾವರ್ಕರ್ ವಿರುದ್ಧ ನಿಂದನೆಯ ಕೂರಂಬುಗಳು ನಿಲ್ಲುತ್ತಲೇ ಇಲ್ಲ. ಹಾಗಂತ ನಿಂದನೆ ಸಮಾಜದ ಸಭ್ಯರಿಂದ, ಸಜ್ಜನರೆನಿಸಿಕೊಂಡವರಿಂದ ಬರುತ್ತಿರುವುದೇನಲ್ಲ. ಜಾತಿ-ಮತಗಳ ಹೆಸರಿನಲ್ಲಿ ವಿಭಜನೆ ಮಾಡುತ್ತಾ ಮತಗಳಿಗಾಗಿ ಯಾವ ಮಟ್ಟಕ್ಕೆ ಬೇಕಿದ್ದರೂ ಇಳಿಯಬಲ್ಲ ಮಂದಿಯೇ ಸಾವರ್ಕರ್ ಮೇಲೆ ಗೂಬೆ ಕೂರಿಸುತ್ತಿರುವುದು. ಅವರ ಆರೋಪಗಳಲ್ಲಿ ಹೊಸತೇನೂ ಇಲ್ಲ. ಈ ಹಿಂದೆ ಮಾಡಿದ ಆರೋಪಗಳು, ಅದಕ್ಕೆ ಅದಾಗಲೇ ನೀಡಿರುವ ಉತ್ತರಗಳು, ಪ್ರತೀ ಬಾರಿಯೂ ಉತ್ತರ ದೊರೆತೊಡನೆ ಪಲಾಯನ ಮಾಡುವ ಈ ಮಂದಿ ಮತ್ತೊಮ್ಮೆ ನಾಲ್ಕಾರು ವರ್ಷಗಳ ನಂತರ ನಿಂದನೆಯ ಹೊಸ ತುತ್ತೂರಿಯೊಂದಿಗೆ ಬರುತ್ತಾರೆ. ಇವರನ್ನು ಮತ್ತೆ ಅಟ್ಟಾಡಿಸಿಕೊಂಡು ಹೋಗಬೇಕು. ಇದೊಂದು ಪದ್ಧತಿಯಂತಾಗಿಬಿಟ್ಟಿದೆ. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಇವರು ಸಾವರ್ಕರರಂತಹ ಮಹಾತ್ಮರ ವಿರುದ್ಧ ಅರಚಾಡುವುದನ್ನು ಕಂಡಾಗ ನಿಜಕ್ಕೂ ಬೇಸರವೆನಿಸುತ್ತದೆ.
ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರಷ್ಟೇ ಅಲ್ಲ. ಒಂದು ಕಾಲಘಟ್ಟದ ಸ್ವಾತಂತ್ರ್ಯ ಹೋರಾಟದ ದಿಕ್ಕನ್ನು ರೂಪಿಸಿದವರೂ ಹೌದು. ಅದರಲ್ಲೂ 1885ರಲ್ಲಿ ಅಲೆನ್ ಅಕ್ಟೋವಿಯನ್ ಹ್ಯೂಮ್ ಎಂಬ ಬ್ರಿಟೀಷ್ ಅಧಿಕಾರಿ ದೇಶದ ಸ್ವಾತಂತ್ರ್ಯ ಹೋರಾಟವನ್ನು ನಿಯಂತ್ರಿಸಲೆಂದು ಕಟ್ಟಿದ ಕಾಂಗ್ರೆಸ್ಸು ಬ್ರಿಟೀಷರಿಗೆ ಅರ್ಜಿ ಗುಜರಾಯಿಸುತ್ತಾ ಬೇಡಿಕೆಗಳನ್ನು ಮುಂದಿರಿಸಿ ಇಡಿಯ ಹೋರಾಟವನ್ನು ಬ್ರಿಟೀಷರ ಪದತಲಕ್ಕೆ ಸಾಷ್ಟಾಂಗವೆರಗುವತ್ತ ತಂದು ನಿಲ್ಲಿಸಿಬಿಟ್ಟಿತ್ತಲ್ಲ, ಆಗ ಹೋರಾಟಕ್ಕೆ ಹೊಸ ಕಾವು ಕೊಟ್ಟವರು ಸಾವರ್ಕರ್. ಬ್ರಿಟೀಷ್ ದೊರೆ ಭಾರತಕ್ಕೆ ಬರುವುದನ್ನು ಸ್ವಾಗತಿಸಿ ಅವನ ಸ್ವಾಗತಕ್ಕೆ ಸಂಭ್ರಮದ ಆಚರಣೆಯನ್ನು ಕಾಂಗ್ರೆಸ್ ಮಾಡಹೊರಟಾಗ ಬಾಲಕ ಸಾವರ್ಕರ್ ತಮ್ಮೂರಿನ ಗೋಡೆಗಳ ಮೇಲೆಲ್ಲ ಆತನ ವಿರುದ್ಧ ಹೇಳಿಕೆಗಳು ಪ್ರಕಟವಾಗುವಂತೆ ನೋಡಿಕೊಂಡಿದ್ದರಲ್ಲ, ಅದು ಅವರ ಕೆಚ್ಚಿಗೆ ಸಾಕ್ಷಿ. ಬಾಲ್ಯದಲ್ಲಿಯೇ ಅಭಿನವ ಭಾರತ ಕಟ್ಟಿ ಅದಕ್ಕೂ ಮುಂಚೆ ಉಗ್ರ ತರಬೇತಿಗೆಂದು ರೂಪಿಸಿದ್ದ ರಾಷ್ಟ್ರಭಕ್ತ ಸಮೂಹಕ್ಕೆ ಮಿತ್ರಮೇಳವೆಂಬ ಮುಖವಾಣಿ ಸಂಘಟನೆ ರೂಪಿಸಿ ಹೊರಗೆ ಸಾಮಾಜಿಕ ಚಟುವಟಿಕೆಗಳನ್ನು, ಒಳಗೆ ಕ್ರಾಂತಿಕಾರ್ಯವನ್ನು ಮಾಡುತ್ತಿದ್ದವರು ಸಾವರ್ಕರ್. ಆಗೆಲ್ಲ, ಮುಂದೆ ದೇಶದ ಚುಕ್ಕಾಣಿ ಹಿಡಿದು ಮೆರೆದ ನೆಹರೂರಂಥವರೆಲ್ಲ ಐಷಾರಾಮಿ ಬದುಕಿನ ಆನಂದದ ಲೋಕದಲ್ಲಿದ್ದವರು. ಸಾವರ್ಕರರಿಗೆ ಶಿವಾಜಿ ಬಲುದೊಡ್ಡ ಪ್ರೇರಣೆ. ಮಹಾರಾಷ್ಟ್ರದ ಕ್ರಾಂತಿಕಾರ್ಯಕ್ಕೆ ಹೊಸ ಚೈತನ್ಯ ತುಂಬಿದ ತಿಲಕರು ಜೀವಂತವಾದ ಶಕ್ತಿ ತುಂಬಿದವರು. ಹಾಗೆಯೇ ಬ್ರಿಟೀಷರ ವಿರುದ್ಧದ ಕದನಕ್ಕೆ ಬಂದೂಕಿನಿಂದ ಉರಿಹಚ್ಚಿದ ಫಡ್ಕೆ, ಚಾಫೇಕರ್ ಸಹೋದರರು ಸಾವರ್ಕರರ ಆರಾಧ್ಯದೈವವಾಗಿದ್ದರು. ಅವರಿಗೆ ಮರಾಠಾ ಪರಂಪರೆಯ ಕುರಿತಂತೆ ಗೌರವವಿತ್ತು. ರಾಷ್ಟ್ರದ ಹಿತಕ್ಕಾಗಿ ತಮ್ಮನ್ನೇ ತಾವು ಸಮರ್ಪಿಸಿಕೊಳ್ಳುವ ಈ ಪರಂಪರೆಯ ಕುರಿತಂತೆ ಹೆಮ್ಮೆಯಿಂದ ಹೇಳಿಕೊಳ್ಳುತ್ತಿದ್ದರಲ್ಲದೆ, ತಾನೂ ಅದೇ ರೀತಿ ರಾಷ್ಟ್ರಕ್ಕಾಗಿ ಬಲಿದಾನವಾಗುವ ಅವಕಾಶವನ್ನು ಅವರೆಂದಿಗೂ ಬಿಟ್ಟುಕೊಡಲಿಲ್ಲ. ಹೀಗಾಗಿಯೇ ಭಾರತದಲ್ಲಿ ಕ್ರಾಂತಿಕಾರ್ಯ ಸಾಲದೆಂದು ಬ್ರಿಟೀಷರ ಕೋಟೆಗೇ ನುಗ್ಗಿ ಅವರನ್ನು ಬಡಿಯುವ ಸಂಕಲ್ಪದಿಂದ ಲಂಡನ್ನಿಗೆ ಹೋಗಿದ್ದು. ಅಲ್ಲಿಯೂ ಸುಮ್ಮನಿರದೆ ಮ್ಯಾಜಿನಿಯ ಆತ್ಮಕಥೆಯನ್ನು ಬರೆದು 1857ರ ಸಿಪಾಯಿದಂಗೆಗೆ ‘ಪ್ರಥಮ ಸ್ವಾತಂತ್ರ್ಯ ಸಂಗ್ರಾಮ’ವೆಂದು ನಾಮಕರಣ ಮಾಡಿ ಹೊಸ ಶಕ್ತಿ ಸಂಚಾರ ಮಾಡಿದ್ದು. ಆಗೆಲ್ಲ ಕಾಂಗ್ರೆಸ್ಸಿಗೆ ಸ್ವಾತಂತ್ರ್ಯ ಹೋರಾಟದ ನಿಜಸ್ವರೂಪದ ಪರಿಚಯವೇ ಆಗಿರಲಿಲ್ಲ. 1905ರಲ್ಲಿ ಬಂಗಾಳದ ವಿಭಜನೆಯಾಗದೇ ಹೋಗಿದ್ದರೆ ಅರವಿಂದರಾದಿಯಾಗಿ ಅನೇಕ ಕ್ರಾಂತಿಕಾರಿಗಳಿಗೆ ಮುಂಚೂಣಿಯ ರಂಗಭೂಮಿಗೆ ಬರಲು ಅವಕಾಶವೇ ಸಿಗುತ್ತಿರಲಿಲ್ಲ. ನಾಯಕತ್ವದ ಮೇಲೆ ಕಾಂಗ್ರೆಸ್ಸಿಗರ ಹಿಡಿತ ಅಂಥದ್ದಿತ್ತು! ಸಾವರ್ಕರ್ ಈಗ ಅದಕ್ಕೊಂದು ರಾಷ್ಟ್ರೀಯ ಸ್ವರೂಪವನ್ನಲ್ಲದೆ, ಅಂತಾರಾಷ್ಟ್ರೀಯ ವಿಸ್ತಾರವನ್ನೂ ಕೊಟ್ಟಾಗಿತ್ತು. ಮುಂದೆ ವಿದೇಶದಲ್ಲಿ ನಡೆದ ಗದರ್ ಹೋರಾಟಗಳಿಗೆ ಹಿಂದಿನ ಶಕ್ತಿಯಾಗಿದ್ದವರು ಸಾವರ್ಕರರೇ. ಆ ಹೋರಾಟದ ನೇತೃತ್ವ ವಹಿಸಿದ್ದ ಲಾಲಾ ಹರದಯಾಳ್ ಸಾವರ್ಕರ್ರೊಂದಿಗೆ ಲಂಡನ್ನಿನಲ್ಲಿದ್ದವನೇ. ಕರ್ಜನ್ವೈಲಿಯ ಹತ್ಯೆಗೆ, ಭಾರತದಲ್ಲಿ ಕಲೆಕ್ಟರ್ ಜಾಕ್ಸನ್ನ ಹತ್ಯೆಗೆ ಕಾರಣವಾದವರು ಇದೇ ಸಾವರ್ಕರ್. ದುರಂತವೇನು ಗೊತ್ತೇ? ಸಾವರ್ಕರ್ರನ್ನು ದ್ವೇಷಿಸಬೇಕೆಂಬ ಧಾವಂತದಲ್ಲಿ ತನ್ನ ನಯವಾದ ಮಾತುಗಳಿಂದ ಭಾರತೀಯರನ್ನು ವಂಚಿಸಿ ಕ್ರಾಂತಿಕಾರಿಗಳ ಸುಳಿವು ಪಡೆದುಕೊಳ್ಳುತ್ತಿದ್ದ ಕಲೆಕ್ಟರ್ ಜಾಕ್ಸನ್ನ ಸಮರ್ಥನೆಗೆ ಕಾಂಗ್ರೆಸ್ಸಿಗರು ನಿಂತುಬಿಟ್ಟಿದ್ದಾರೆ. ಸಾವರ್ಕರ್ ಯಾರಿಗೂ ಸೊಪ್ಪು ಹಾಕಿದವರಲ್ಲ. ಅವರಿಗೆ ರಾಷ್ಟ್ರಹಿತವಷ್ಟೇ ಮುಖ್ಯವಾಗಿತ್ತು. ಅವರು ಇತರೆಲ್ಲರಂತೆ ಮನಸ್ಸು ಮಾಡಿದ್ದರೆ ಬ್ರಿಟೀಷರಿಂದ ತಪ್ಪಿಸಿಕೊಂಡು ಫ್ರಾನ್ಸ್ನಲ್ಲಿಯೇ ಉಳಿದು ಕ್ರಾಂತಿಕಾರ್ಯಕ್ಕೆ ಬೇಕಾಗಿರುವ ಆಜ್ಯವನ್ನು ಸುರಿಯಬಹುದಿತ್ತು. ಆದರೆ, ಪ್ರತ್ಯಕ್ಷ ಯುದ್ಧದಲ್ಲಿ ನಿಲ್ಲಬೇಕೆಂಬ ಕಾರಣದಿಂದಲೇ ಮೇಡಂ ಕಾಮಾರ ಪ್ರೀತಿಯ ಆಣತಿಯನ್ನು ಧಿಕ್ಕರಿಸಿ ಲಂಡನ್ಗೆ ಬಂದು ಬ್ರಿಟೀಷರ ಕೈವಶವಾಗಿದ್ದು. ಲಂಡನ್ನಿನ ಜೈಲುಗಳಿಂದ ತಪ್ಪಿಸಿಕೊಳ್ಳುವ, ಭಾರತಕ್ಕೆ ಬರುವಾಗ ಹಡಗಿನಿಂದ ತಪ್ಪಿಸಿಕೊಳ್ಳುವ ಅವರ ಪ್ರಯಾಸವಿದೆಯಲ್ಲ, ಅದು ಅವರಿಗೆ ಗೌರವವನ್ನು ತಂದುಕೊಟ್ಟಿತಾದರೂ ಬ್ರಿಟೀಷರು ಅವರ ಕುರಿತಂತೆ ಎಚ್ಚರಿಕೆಯಿಂದ ಹೆಜ್ಜೆ ಇಡುವಂತೆ ಮಾಡಿಬಿಟ್ಟಿತು. ಕಾಲಾಪಾನಿಯೆಂಬ ಯಮಲೋಕ ಸದೃಶವಾದ ಆ ಜೈಲಿನಲ್ಲಿ ಐವತ್ತು ವರ್ಷ ಕಳೆಯುವುದಿರಲಿ ಐವತ್ತು ದಿನ ಕಳೆದಿದ್ದರೂ ನೆಹರೂ ಆದಿಯಾಗಿ ಕಾಂಗ್ರೆಸ್ ನಾಯಕರೆಲ್ಲರ ಎದೆಯೊಡೆಯುತ್ತಿತ್ತೇನೊ!
ಜೀವಮಾನದಲ್ಲಿ ಒಮ್ಮೆಯಷ್ಟೆ ನಭಾ ಜೈಲಿನಲ್ಲಿ ಕಠಿಣ ಶಿಕ್ಷೆ ಅನುಭವಿಸಿದ ನೆಹರೂ ತನ್ನ ತಂದೆಯ ಮುಂದೆ ಹೇಗೆ ಕಣ್ಣೀರಿಟ್ಟಿದ್ದಿರಬಹುದೆಂದು ನೀವು ಊಹಿಸಲೂ ಸಾಧ್ಯವಿಲ್ಲ. ಇನ್ನು ಮುಂದೆ ಅತ್ತ ತಲೆಹಾಕಿಯೂ ಮಲಗುವುದಿಲ್ಲವೆಂದು ಕ್ಷಮಾಪಣೆ ಬರೆದುಕೊಡುವ ಅನಿವಾರ್ಯತೆಗೆ ಸಿಲುಕಿಕೊಂಡಿದ್ದರು ಅವರೆಲ್ಲ. ಹನ್ನೊಂದೇ ದಿನಗಳ ಜೈಲುವಾಸ ಅವರನ್ನು ಇಂತಹ ಪರಿಸ್ಥಿತಿಗೆ ತಂದೊಡ್ಡಿದ್ದು. ಆದರೆ, ಸಾವರ್ಕರ್ ಕಾಲಾಪಾನಿಯ ಕಠಿಣ ಶಿಕ್ಷೆ ಸಹಿಸಿಕೊಂಡಿದ್ದಲ್ಲದೆ, ರಾಷ್ಟ್ರಕಾರ್ಯಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳದೇ ಉಳಿದಿದ್ದರಲ್ಲ ಅದೇ ವಿಶೇಷವಾದದ್ದು. ಮಾನಸಿಕವಾಗಿ ಜಝುರಿತಗೊಳಿಸಬೇಕೆಂದು ಆಗಾಗ ಅವರನ್ನು ಏಕಾಂತವಾಸಕ್ಕೆ ತಳ್ಳಲಾಗುತ್ತಿತ್ತು. ಉಳಿದೆಲ್ಲದಕ್ಕಿಂತಲೂ ಭಯಾನಕವಾದ ಯಾತನೆ ಅದು. ತಿಂಗಳುಗಟ್ಟಲೆ ಯಾರ ಸಂಪರ್ಕವೂ ಇಲ್ಲದಂತೆ, ಯಾರೊಂದಿಗೂ ಮಾತಾಡದೇ, ಯಾರನ್ನೂ ನೋಡಲಾಗದೇ ಜೈಲಿನ ಒಳಗೆ ಮಲ-ಮೂತ್ರ ವಿಸರ್ಜನೆ ಮಾಡಿಕೊಳ್ಳುತ್ತಾ ಕಠಿಣ ಕೆಲಸಗಳಿಂದ ದೇಹವನ್ನು ದಂಡಿಸಿಕೊಳ್ಳುವ ಪರಿ ಇದೆಯಲ್ಲ, ಬಲು ಯಾತನಾಮಯ. ಘಟಾನುಘಟಿಗಳು ಸಹ ಈ ಶಿಕ್ಷೆಗೆ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದರು. ಉಲ್ಲಾಸ್ಕರ್ ದತ್ತ ಎಂಬ ಕ್ರಾಂತಿಕಾರಿ ಜಝುರಿತವಾಗಿ ಅರೆಹುಚ್ಚನಾಗುವ ಸ್ಥಿತಿಗೆ ಬಂದುಬಿಟ್ಟಿದ್ದ. ಅನೇಕರು ಈ ಶಿಕ್ಷೆಗಳ ನಂತರ ಹೋರಾಟದ ಕಲ್ಪನೆಯನ್ನು ಕೈಬಿಟ್ಟುಬಿಡುತ್ತಿದ್ದರು. ಸಾವರ್ಕರ್ ಕೈಚೆಲ್ಲಲಿಲ್ಲ. ಜೈಲಿನೊಳಗೆ ಸುಧಾರಣೆಯ ಹೋರಾಟ ಆರಂಭಿಸಿದರು. ತಮ್ಮೊಡನಿದ್ದ ಕ್ರಾಂತಿಕಾರಿಗಳನ್ನು ಮಾನಸಿಕವಾಗಿ ಬಲವಾಗಿಡುತ್ತಾ ಉಪವಾಸ ಸತ್ಯಾಗ್ರಹಗಳಿಂದ ದೇಹತ್ಯಾಗದ ಕಲ್ಪನೆ ಕಟ್ಟಿಕೊಂಡಿದ್ದವರಿಗೆ ಚೆನ್ನಾಗಿ ಊಟ ಮಾಡಿ, ಕೊಬ್ಬಿ ಬೆಳೆಯಿರಿ, ಆದರೆ, ಕೆಲಸ ಮಾಡಬೇಡಿ ಎಂದು ಕಿವಿಮಾತು ಹೇಳುತ್ತಿದ್ದರು. ಸಾವರ್ಕರ್ ಆಗಮನದ ನಂತರ ಕಾಲಾಪಾನಿ ನಾಡಿನ ಕೇಂದ್ರಬಿಂದುವಾಯ್ತು. ಹೀಗಾಗಿ, ಈ ಜೈಲಿನ ಕುರಿತ ಚರ್ಚೆಯೂ ದೇಶ-ವಿದೇಶಗಳಲ್ಲಿ ಭಿನ್ನ-ಭಿನ್ನ ಸ್ವರೂಪದಲ್ಲಿ ಆರಂಭವಾಯ್ತು. ಜೈಲಿನೊಳಗೆ ಅನಿವಾರ್ಯವಾಗಿ ಸುಧಾರಣೆಯ ಗಾಳಿಬೀಸಿತು. ಕೈದಿಗಳಿಗೆ ಊಟ, ಕೆಲಸದಲ್ಲಿ ಬದಲಾವಣೆಯಾಯ್ತು, ಉತ್ತಮ ಗ್ರಂಥಾಲಯದ ವ್ಯವಸ್ಥೆ ರೂಪುಗೊಂಡಿತು. ಆದರೆ, ಸಾವರ್ಕರ್ ಸ್ಥಿತಿ ಮಾತ್ರ ಬದಲಾಗಲಿಲ್ಲ. ಇತರೆಲ್ಲರಿಗೆ ವರ್ಷಕ್ಕೊಮ್ಮೆಯಾದರೂ ಪರಿವಾರದವರು ಬಂದು ನೋಡಿಕೊಂಡು ಹೋಗುವ ಅವಕಾಶವಿತ್ತು. ಸಾವರ್ಕರ್ ಪರಿವಾರದವರಿಗೆ ಈ ಅವಕಾಶ ಸಿಕ್ಕಿದ್ದು ಎಂಟು ವರ್ಷಗಳ ನಂತರ. ಅದೂ ಸಾವರ್ಕರ್ರ ಅತ್ತಿಗೆ ನಿರಂತರವಾಗಿ ಬ್ರಿಟೀಷ್ ಸರ್ಕಾರಕ್ಕೆ ಅರ್ಜಿಗಳನ್ನು ಗುಜರಾಯಿಸಿದ ನಂತರ. ದುರಂತವೆಂದರೆ, ಕೊನೆಗೂ ಅನುಮತಿ ದಕ್ಕಿದ್ದು ಅತ್ತಿಗೆ ತೀರಿಕೊಂಡ ಎರಡು ದಿನಗಳ ನಂತರವಷ್ಟೆ! ಈಗ ಹೇಳಿ, ಮೇಲಿಂದ ಮೇಲೆ ಕ್ಷಮಾಪಣಾ ಪತ್ರ ಬರೆಯುತ್ತಿದ್ದ ಸಾವರ್ಕರ್ ಕುರಿತಂತೆ ಬ್ರಿಟೀಷರು ಇಷ್ಟು ಕಠಿಣವಾಗಿ ನಡೆದುಕೊಂಡದ್ದಾದರೂ ಏಕೆ? ಇತರೆಲ್ಲ ಕ್ರಾಂತಿಕಾರಿಗಳಿಗೆ ಕೆಲವು ವರ್ಷ ಕಠಿಣವಾದ ಗಾಣಸುತ್ತುವ ಕೆಲಸದ ನಂತರ ಕಾಲಾಪಾನಿ ಜೈಲಿನ ಹೊರಗೆ ಹೋಗಿ ಕೆಲಸ ಮಾಡುವ ಅವಕಾಶ ದೊರೆಯುತ್ತಿತ್ತು. ಸಾವರ್ಕರ್ರಿಗೆ ಮಾತ್ರ ದಕ್ಕಲಿಲ್ಲವೇಕೆ? ಏಕೆಂದರೆ, ಅವರ ಪತ್ರಗಳನ್ನು ಬ್ರಿಟೀಷರು ನಂಬಲೇ ಇಲ್ಲ. ಒಮ್ಮೆಯಂತೂ ಸರ್ ರೆಜಿನಾಲ್ಡ್ ಕ್ರೆಡಾಕ್ ಎಂಬ ಸರ್ಕಾರದ ಗೃಹ ಕಾರ್ಯದರ್ಶಿಯನ್ನು ಸಾವರ್ಕರರ ಮನಃಪರಿವರ್ತನೆಯಾಗಿದೆಯೇ ಎಂಬುದನ್ನು ತಿಳಿದುಕೊಳ್ಳಲೋಸುಗ ಕಳಿಸಿಕೊಟ್ಟಿದ್ದರು. ‘ಈತನದ್ದು ಬರಿಯ ನಾಟಕ. ಭಾರತದ ಜೈಲಿಗೆ ಇವನನ್ನು ಕಳಿಸಿದರೆ ಆ ಕ್ಷಣವೇ ತಪ್ಪಿಸಿಕೊಂಡು ಬಿಡುತ್ತಾನೆ. ಅಂಡಮಾನಿನ ಹೊರಗೇನಾದರೂ ಕೆಲಸಕ್ಕೆಂದು ಅವಕಾಶಕೊಟ್ಟರೆ ವಿದೇಶೀ ಕ್ರಾಂತಿಕಾರಿಗಳು ಬಂದು ಇವನನ್ನು ಹಾರಿಸಿಕೊಂಡು ಹೋಗಿಬಿಡುತ್ತಾರೆ’ ಎಂದು ಕ್ರೆಡಾಕ್ ವರದಿ ಕೊಟ್ಟಿದ್ದ. ಬಿಡಿ, ಇದೆಲ್ಲ ಕಾಂಗ್ರೆಸ್ ನಾಯಕರಿಗೆ ಅರ್ಥವಾಗುವಂತಿದ್ದರೆ ಅವರು ಈ ಬಗೆಯಲ್ಲಿ ರಾಷ್ಟ್ರವನ್ನು ಮಾರಿಯಾದರೂ ಅಧಿಕಾರವನ್ನು ಉಳಿಸಿಕೊಳ್ಳುವ ಹಪಾಪಿತನಕ್ಕೆ ಬಿದ್ದಿರುತ್ತಿರಲಿಲ್ಲ.
ಗಾಂಧಿ ಹತ್ಯೆಯಲ್ಲಿ ಸಾವರ್ಕರ್ ಪಾತ್ರವಿದೆ ಎಂದು ಕಾಂಗ್ರೆಸ್ಸಿಗರು ಈಗಲೂ ಆರೋಪಿಸುತ್ತಾರೆ. ಸುಳ್ಳು ಹೇಳುವುದನ್ನು ಮತ್ತು ಅದನ್ನೇ ಪುನರುಚ್ಚರಿಸಿ ಸತ್ಯವೆಂಬಂತೆ ಬಿಂಬಿಸುವುದನ್ನು ಕಾಂಗ್ರೆಸ್ಸಿಗರಿಗೆ ಹೇಳಿಕೊಡಬೇಕೇನು? ಅವರ ಇತಿಹಾಸವೇ ಇದಕ್ಕೆ ಸಾಕ್ಷಿ. ಸಾವರ್ಕರ್ ಹೂಡಿಕೆ ಮಾಡಿದ್ದ ಪತ್ರಿಕೆಯೊಂದಕ್ಕೆ ಗೋಡ್ಸೆ ಬರೆಯುತ್ತಿದ್ದ ಎಂಬ ಏಕೈಕ ಕಾರಣಕ್ಕೆ ಸಾವರ್ಕರ್ರನ್ನು ಅಪರಾಧಿ ಎಂದು ಕೋರ್ಟಿನ ಕಟಕಟೆಯಲ್ಲಿ ನಿಲ್ಲಿಸುವಾಗಲೂ ನೆಹರೂಗೆ ನಾಚಿಕೆ ಎನಿಸಲಿಲ್ಲ. ಶತಾಯಗತಾಯ ತನ್ನೊಬ್ಬ ಶತ್ರುವನ್ನು ದೂರಮಾಡಿಕೊಂಡರೆ ಅವರಿಗೆ ಸಾಕಿತ್ತು. ಆದರೆ, ಕೋರ್ಟು ಅವರ ಪರವಾಗಿ ನಿಂತು ಗೌರವದಿಂದ ಬಿಡುಗಡೆ ಮಾಡಿತು. ಮಾತೆತ್ತಿದರೆ ಸಂವಿಧಾನ ಎನ್ನುವ ಕಾಂಗ್ರೆಸ್ಸಿಗರು ಕೋರ್ಟಿನ ನಿರ್ಣಯದ ಕುರಿತಂತೆ ಗೌರವ ಇಲ್ಲದಂತೆ ವರ್ತಿಸುವುದೇಕೆ? ಇಷ್ಟಕ್ಕೂ ಸ್ವಾತಂತ್ರಾ್ಯನಂತರ ಗಾಂಧೀಜಿ ನಿಜವಾದ ಶತ್ರುವಾಗಿ ಕಂಡುಬಂದಿದ್ದು ಸಾವರ್ಕರ್ರಿಗಲ್ಲ, ಸ್ವತಃ ಜವಾಹರ್ಲಾಲ್ ನೆಹರೂಗೆ! ಇಡಿಯ ಜಗತ್ತು ನೆಹರೂರನ್ನು ಗಾಂಧೀಜಿಯವರ ರಬ್ಬರ್ಸ್ಟಾಂಪ್ ಎಂದೇ ಭಾವಿಸುತ್ತಿತ್ತು. ಈ ಕಳಂಕದಿಂದ ಪಾರಾಗಬೇಕಾಗಿದ್ದುದು ನೆಹರೂಗೆ ಎನ್ನುವುದನ್ನು ಹೇಳಬೇಕಿಲ್ಲ ಅಲ್ಲವೇ? ಪಾಕಿಸ್ತಾನದ ಕಲ್ಪನೆಯುಳ್ಳ ದ್ವಿರಾಷ್ಟ್ರ ಸಿದ್ಧಾಂತದ ಚಿಂತನೆ ಸಾವರ್ಕರ್ ಪ್ರಣೀತ ಎಂದು ಕಾಂಗ್ರೆಸ್ಸಿಗರು ಆರೋಪಿಸುತ್ತಾರೆ. ಇವರ ಪಾಲಿಗೆ ಅಪಾರ ಗೌರವದ ಕವಿಯಾಗಿರುವ ಅಲ್ಲಮ ಇಕ್ಬಾಲ್ ದಶಕಗಳ ಮೊದಲೇ ಲಂಡನ್ನಿನಲ್ಲಿ ಈ ಕಲ್ಪನೆ ಹೊರಹಾಕಿದ್ದು ಈಗ ಇತಿಹಾಸ. ಮುಸ್ಲಿಂ ಯುನಿವರ್ಸಿಟಿಯ ಮೂಲಕ ಮೇಲ್ಜಾತಿಯ ಮುಸಲ್ಮಾನರಿಗೋಸ್ಕರ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದ ಸರ್ ಸಯ್ಯದ್ ಅಹ್ಮದ್ಖಾನ್ ಇಂತಹದ್ದೇ ವಿಚಾರಗಳನ್ನು ಸಾಕಷ್ಟು ಬಾರಿ ಹೊರಹಾಕಿದ್ದರು ಎಂದರೆ ತಪ್ಪೇನಲ್ಲ. ಪಾಕಿಸ್ತಾನವೆಂದು ಪ್ರತ್ಯೇಕ ಭೂಭಾಗ ಕೊಡುವುದನ್ನು ಸಾವರ್ಕರ್ ಒಪ್ಪಿರಲೇ ಇಲ್ಲ. ಭಾರತವನ್ನು ಪಿತೃಭೂಮಿ, ಪುಣ್ಯಭೂಮಿ ಎಂದು ಭಾವಿಸದ ಮಂದಿ ದೇಶಬಿಟ್ಟು ಹೋದರೆ ಹೋಗಲಿ ಎಂಬುದು ಅವರದ್ದಷ್ಟೇ ಅಲ್ಲ, ಪ್ರತಿಯೊಬ್ಬ ದೇಶಭಕ್ತನ ವಾದ ಕೂಡ. ಆದರೆ, ಮುಂದೆ ಅಂಬೇಡ್ಕರರು ಪಾಕಿಸ್ತಾನವೆಂಬ ಭೂಭಾಗವನ್ನು ಕೊಟ್ಟು ಎಲ್ಲ ಮುಸಲ್ಮಾನರನ್ನೂ ಅತ್ತ ಅಟ್ಟಿಬಿಟ್ಟರೆ ಹಿಂದೂಗಳು ತಮ್ಮ ವಿಕಾಸದ ಹಾದಿಯನ್ನು ರೂಪಿಸಿಕೊಳ್ಳಬಹುದು ಎಂಬ ಜನಸಂಖ್ಯಾ ಹಂಚಿಕೆಯ ಸೂತ್ರ ಕೊಟ್ಟರಲ್ಲ, ಸಾವರ್ಕರರು ಅದಕ್ಕೆ ತಲೆಬಾಗಿದರು. ಆಗಲೇ ‘ಅನೇಕ ಶಕಸ್ಥಾನ, ಹೂಣಸ್ಥಾನಗಳನ್ನು ನುಂಗಿರುವ ಹಿಂದುಸ್ಥಾನಕ್ಕೆ ಈ ಪಾಕಿಸ್ತಾನ ಯಾವ ಲೆಕ್ಕ!’ ಎಂದಿದ್ದು.
ಕಾಂಗ್ರೆಸ್ಸಿಗರ ನಿಜವಾದ ಬಂಡವಾಳ ಬಯಲಿಗೆ ಬರುವುದು ಯಾವಾಗ ಗೊತ್ತೇನು? ಸಾವರ್ಕರರು ಸ್ವಾತಂತ್ರ್ಯ ಹೋರಾಟಗಾರರಲ್ಲ ಹಿಂದುತ್ವದ ಪ್ರತಿಪಾದಕರು ಎಂದು ಕಾಂಗ್ರೆಸ್ ಆರೋಪಿಸುವಾಗ. ಅವರಿಗೆ ದ್ವೇಷವಿರುವುದೇ ಅಲ್ಲಿ. ಸಾವರ್ಕರ್ರು ಹಿಂದೂ ಧರ್ಮದ ಒಳಗಿರುವ ಜಾತಿ-ಮತ-ಪಂಥದ ಭೇದವನ್ನು ತೊಡೆದು ಹಾಕಿ ಅಸ್ಪಶ್ಯತೆಯ ವಿರುದ್ಧ ಮಹತ್ವದ ಹೋರಾಟ ಸಂಘಟಿಸಿದರಲ್ಲ ಅವರಿಗದು ಸಹಿಸಲು ಸಾಧ್ಯವಾಗಲೇ ಇಲ್ಲ. ಅಂಬೇಡ್ಕರರನ್ನು ಕಾಂಗ್ರೆಸ್ ದ್ವೇಷಿಸಿದ್ದು ಇದೇ ಕಾರಣಕ್ಕೆ. ಹಿಂದೂಗಳೆಲ್ಲ ಒಟ್ಟಾಗಿ ಬಲವಾಗಿ ನಿಂತುಬಿಟ್ಟರೆ ತಾವು ಅಧಿಕಾರಕ್ಕೆ ಬರುವುದು ಸಾಧ್ಯವೇ ಇಲ್ಲವೆಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಈಗಲೂ ಗೊತ್ತಿದೆ. ಸಿದ್ದರಾಮಯ್ಯನವರಂತೂ ಮುಸಲ್ಮಾನರ ತುಷ್ಟೀಕರಣಕ್ಕೆ ಯಾವ ಹಂತಕ್ಕೆ ಬೇಕಿದ್ದರೂ ಹೋಗಬಲ್ಲರು. ಈ ರಾಷ್ಟ್ರದ ವಿರುದ್ಧ ಕೃತ್ಯವೆಸಗಿ ಜೈಲಿಗೆ ಹೋಗಿದ್ದವರಿಗೆ ತಮ್ಮ ಅಧಿಕಾರಾವಧಿಯಲ್ಲಿ ಬಿಡುಗಡೆಯ ಭಾಗ್ಯ ಕೊಟ್ಟವರಲ್ಲವೇ ಅವರು? ಇವರಿಂದ ಸಾವರ್ಕರ್ ದೇಶಪ್ರೇಮಕ್ಕೆ ಸರ್ಟಿಫಿಕೇಟ್ ಪಡೆದುಕೊಳ್ಳಬೇಕೇನು? ಇದು ನಮಗೆಲ್ಲರಿಗೂ ಸವಾಲಿನ ಕಾಲ. ನಾವು ಯಾರೆಲ್ಲರ ಕಾರಣಕ್ಕಾಗಿ ಈ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆಯೋ ಅವರೆಲ್ಲರ ಋಣವನ್ನು ಒಂದಿನಿತಾದರೂ ತೀರಿಸುವ ಸಂದರ್ಭ. ಬನ್ನಿ, ಜೊತೆಯಾಗೋಣ. ಇವರೆಲ್ಲರ ಸುಳ್ಳು ಆರೋಪಗಳನ್ನು ಸಮಾಜದ ಮುಂದಿರಿಸಿ ಇವರ ನಿಜಬಣ್ಣ ಬಯಲುಗೊಳಿಸೋಣ.
(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)