

ಕಳೆದ ಒಂದು ತಿಂಗಳಲ್ಲಿ ಭಾರತ ಸಂಭ್ರಮಿಸಬೇಕಾದ ಅನೇಕ ಸಂಗತಿಗಳು ನಡೆದಿವೆ. ಬರೆದರೆ ಒಂದೊಂದು ಸಂಗತಿಯೂ ಒಂದೊಂದು ಲೇಖನಕ್ಕಾಗುವಷ್ಟು. ವಿಸ್ತರಿಸದೇ ಎಲ್ಲವನ್ನೂ ಒಂದೇ ಲೇಖನದಲ್ಲಿ ಸಂಕಲಿಸಿಕೊಡುವ ಪ್ರಯತ್ನ ಮಾಡುತ್ತಿದ್ದೇನೆ.
1
ಕೆಲವು ದಿನಗಳ ಹಿಂದೆಯಷ್ಟೇ, ಜಗತ್ತಿನ ಕಾಫಿ ದುನಿಯಾದ ದೈತ್ಯನೆನಿಸಿಕೊಂಡ ಸ್ಟಾರ್ಬಕ್ಸ್ ಕಂಪನಿ ಜಾಗತಿಕ ಸಿಇಒ ಆಗಿ ಭಾರತೀಯ ಮೂಲದ ಲಕ್ಷ್ಮಣ್ ನರಸಿಂಹನ್ರನ್ನು ಆರಿಸಿಕೊಂಡಿದೆ. ಈ ಹಿಂದೆ ರೆಕಿಟ್ನ ಸಿಇಒ ಆಗಿದ್ದ ಲಕ್ಷ್ಮಣ್ ಅದಕ್ಕೂ ಮುನ್ನ ಪೆಪ್ಸಿಯಲ್ಲಿದ್ದರು. ಪುಣೆ ವಿಶ್ವವಿದ್ಯಾಲಯದಲ್ಲಿ ಪದವಿ ಪೂರೈಸಿದ ಲಕ್ಷ್ಮಣ್ ಜರ್ಮನಿ ಮತ್ತು ಪೆನ್ಸಿಲ್ವೇನಿಯಾದಲ್ಲಿ ಉನ್ನತ ಅಧ್ಯಯನ ಮಾಡಿದ್ದರು. ಪೆಪ್ಸಿಕೊದಲ್ಲಿ ಕಮರ್ಷಿಯಲ್ ಆಫೀಸರ್ ಆಗಿ ದುಡಿದು ರೆಕಿಟ್ನ ಮಾರುಕಟ್ಟೆಯನ್ನು ಕೋವಿಡ್ ಕಾಲದಲ್ಲಿಯೂ ಎತ್ತರಕ್ಕೇರಿಸಿ ಹೆಸರು ಮಾಡಿದ್ದರು. ಈಗ ಸ್ಟಾರ್ಬಕ್ಸ್ನ ಜವಾಬ್ದಾರಿ ಅವರ ಹೆಗಲಿಗೇರಿದೆ. ಇದರೊಟ್ಟಿಗೆ ಗೂಗಲ್, ಮೈಕ್ರೊಸಾಫ್ಟ್, ಫೆಡೆಕ್ಸ್, ಅಡೋಬ್, ಟ್ವಿಟರ್, ಮಾಸ್ಟರ್ಕಾರ್ಡ್, ಪೆಪ್ಸಿ, ಐಬಿಎಮ್ ಮೈಕ್ರಾನ್, ನೊಕಿಯಾ ನೊವಾರ್ಟಿಸ್ ಕಂಪನಿಗಳ ಸಾಲಿಗೆ ಭಾರತೀಯ ಸಿಇಒ ಹೊಂದಿರುವ ಕಂಪನಿಯಾಗಿ ಸ್ಟಾರ್ಬಕ್ಸ್ ಕೂಡ ಸೇರಿಕೊಂಡಂತಾಗಿದೆ. ವಿದೇಶದಲ್ಲಿರುವ ಭಾರತೀಯ ಮೂಲದ ಮಂದಿ ಎಷ್ಟರ ಮಟ್ಟಿಗೆ ಭಾರತೀಯರು ಎಂಬುದರ ಜಿಜ್ಞಾಸೆಗೆ ನಾನು ಹೋಗುವುದಿಲ್ಲವಾದರೂ ಜಗತ್ತಿನ ದೊಡ್ಡ ದೊಡ್ಡ ಉದ್ದಿಮೆಗಳನ್ನು ನಿರ್ವಹಿಸುವ ಸಾಮರ್ಥ್ಯದ ಭಾರತೀಯರನ್ನು ಜಗತ್ತು ಗುರುತಿಸುತ್ತಿರುವುದು ಹೆಮ್ಮೆಯೇ ಅಲ್ಲವೇನು?
2
ಭಾರತ ಕಳೆದ ವಾರವಷ್ಟೇ ತನ್ನನ್ನು ಇನ್ನೂರು ವರ್ಷಗಳ ಕಾಲ ಆಳಿದ ಇಂಗ್ಲೆಂಡನ್ನು ಹಿಂದಿಕ್ಕಿ ಐದನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿರುವುದು ಸಂಭ್ರಮಿಸಬೇಕಾದ ಸಂಗತಿಯೇ. ಜಿಡಿಪಿ ಆಧಾರದ ಮೇಲೆ ಐಎಂಎಫ್ ಕೊಟ್ಟಿರುವ ವರದಿಯನ್ನು ಅಡಿಪಾಯವಾಗಿರಿಸಿಕೊಂಡು ಈ ಲೆಕ್ಕಾಚಾರ ನೀಡಲಾಗಿದೆ. ಕಳೆದ ಅಕ್ಟೋಬರ್ನ ತ್ರೈಮಾಸಿಕ ಅವಧಿಯಲ್ಲಿ ಭಾರತ ಇಂಗ್ಲೆಂಡನ್ನು ಹಿಂದಿಕ್ಕುವ ಪ್ರಕ್ರಿಯೆ ಶುರುವಾಗಿದ್ದು 2022ರ ಮೊದಲ ತ್ರೈಮಾಸಿಕದಲ್ಲಿ ಈ ಸಾಧನೆಯನ್ನು ಮಾಡಿಯೇಬಿಟ್ಟಿದೆ. ಪ್ರಧಾನಮಂತ್ರಿ ಭಾರತದ ಆರ್ಥಿಕತೆಯನ್ನು ಐದು ಟ್ರಿಲಿಯನ್ ಡಾಲರ್ಗಳಿಗೆ ಏರಿಸುವ ಕನಸು ಕಾಣುತ್ತಿರುವ ಹೊತ್ತಿನಲ್ಲೇ ಈ ಸಾಧನೆ ಗೌರವದ ಗರಿಯಾಗಿ ಬಂದಿದೆ. ಎಡಪಂಥೀಯ ಬುದ್ಧಿಜೀವಿಗಳಿಗೆ ಇದೆಷ್ಟು ಕಿರಿಕಿರಿಯಾಗಿದೆ ಎಂದರೆ ಕರೊನಾ ಸಾವಿನ ಸಂದರ್ಭದಲ್ಲಿ ಭಾರತ ಮತ್ತು ಇಂಗ್ಲೆಂಡುಗಳ ಜನಸಂಖ್ಯೆಯನ್ನು ಲೆಕ್ಕಹಾಕಿ ಅದಕ್ಕೆ ಪೂರಕವಾದ ಅಂಕಿ-ಅಂಶ ಕೊಡಲು ಹಿಂದೇಟು ಹಾಕಿದ್ದ ಮಂದಿಯೇ ಈಗ ತಲಾದಾಯವನ್ನು ಲೆಕ್ಕಹಾಕಿ ಭಾರತದ ಸಾಧನೆ ವಿಶಿಷ್ಟವಲ್ಲ ಎಂದು ಸಾಧಿಸಲು ಹೊರಟಿದ್ದಾರೆ. ಆದರೆ, ಭಾರತದಲ್ಲಿ ಅತಿ ಕಡಿಮೆ ವರಮಾನದಲ್ಲಿಯೂ ಎಷ್ಟು ಸಮೃದ್ಧವಾಗಿ ಬದುಕಬಹುದೋ ಪಶ್ಚಿಮದಲ್ಲಿ ಅದು ಸಾಧ್ಯವಿಲ್ಲ ಎಂಬುದರ ಸಾಮಾನ್ಯಜ್ಞಾನವೂ ಅವರಿಗಿಲ್ಲ ಎಂಬುದಷ್ಟೇ ಗಮನಿಸಬೇಕಾದ ಸಂಗತಿ.
3
ಈ ನಡುವೆಯೇ ಚೀನಾಕ್ಕೆ ಯುದ್ಧ ಮಾಡಲು ಬೇಕಾಗಿರುವ ಅನೇಕ ಕಾರಣಗಳನ್ನು ಅಮೆರಿಕಾ ರೂಪಿಸಿಕೊಡುತ್ತಿದೆ. ಈ ಹಿಂದೆ ತನ್ನ ಕಾರ್ಯದರ್ಶಿಯೊಬ್ಬರನ್ನು ತೈವಾನ್ಗೆ ಕಳಿಸಿತ್ತು. ಈಗ ಒಂದು ಶತಕೋಟಿ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ತೈವಾನ್ಗೆ ನೀಡುವ ಯೋಜನೆ ಪ್ರಕಟಿಸಿದೆ. ಸಹಜವಾಗಿಯೇ ಮೈಯೆಲ್ಲಾ ಪರಚಿಕೊಂಡಿರುವ ಚೀನಾ ತನ್ನ ಧ್ವಜದ ಬಣ್ಣವನ್ನು ಮುಖಕ್ಕೇರಿಸಿಕೊಂಡಿದೆ. ಮೊದಲೆಲ್ಲಾ ಇಷ್ಟು ವಿಚಾರಕ್ಕೆ ರಂಪಾಟ ನಡೆಸುತ್ತಿದ್ದ ಚೀನಾ ಈಗ ಬಾಲ ಮುದುರಿಕೊಂಡು ಕುಳಿತಿರುವುದು ನೋಡಿದರೆ ಭಾರತ ತನ್ನ ಗಡಿಯಲ್ಲಿ ಸೇನೆಯನ್ನು ಬಲಗೊಳಿಸಿರುವುದು ಚೀನಾವನ್ನು ಕಟ್ಟಿ ಹಾಕಿದಂತಿರುವುದರಲ್ಲಿ ಅನುಮಾನವಿಲ್ಲ. 1965ರಲ್ಲಿ ಪಾಕಿಸ್ತಾನದೊಂದಿಗಿನ ನಮ್ಮ ಯುದ್ಧ ಅನಿವಾರ್ಯ ಸಂಧಾನದಲ್ಲಿ ಮುಗಿಯಲು ಗಡಿಯಲ್ಲಿ ಚೀನಾ ತೆಗೆದ ಕ್ಯಾತೆಯೇ ಕಾರಣವಾಗಿತ್ತು ಎನ್ನುವುದನ್ನು ಸ್ಮರಿಸುವುದಾದರೆ ಈಗ ತೈವಾನಿನೆದುರು ಯುದ್ಧ ಮಾಡಲಾಗದ ದೈನೇಸಿ ಸ್ಥಿತಿಗೆ ಚೀನಾ ಬಂದಿರುವುದಕ್ಕೆ ಗಡಿಯಲ್ಲಿ ಬಲವಾಗಿ ನಿಂತಿರುವ ಭಾರತೀಯ ಸೈನಿಕರೇ ಕಾರಣ ಎಂಬುದನ್ನು ಹೋಲಿಸಿಕೊಂಡು ನೋಡಬಹುದು. ಚೀನಾ ಈ ರೀತಿ ವಿಲವಿಲ ಒದ್ದಾಡುವುದು ಅದರ ಆಕ್ರಮಣ ನೀತಿಯ ಅರಿವಿರುವ ಪ್ರತಿಯೊಬ್ಬ ಭಾರತೀಯ ಸೈನಿಕನಿಗೂ ಹೆಮ್ಮೆ ತರುವ ಸಂಗತಿಯೇ.
4
ಚೀನಾದ ಈ ಗಲಾಟೆಗಳ ನಡುವೆಯೇ ಪ್ರಧಾನಿ ನರೇಂದ್ರ ಮೋದಿ 262 ಮೀಟರ್ ಉದ್ದದ, 62 ಮೀಟರ್ ಅಗಲದ, 30 ಏರ್ಕ್ರಾಫ್ಟ್ಗಳನ್ನು ಮತ್ತು 1600 ಸೈನಿಕರನ್ನು ಏಕಕಾಲಕ್ಕೆ ಹೊತ್ತೊಯ್ಯಬಲ್ಲ ಐಎನ್ಎಸ್ ವಿಕ್ರಾಂತ್ ಅನ್ನು ದೇಶಕ್ಕೆ ಸಮರ್ಪಿಸಿದ್ದಾರೆ. ಭಾರತದ ಆತ್ಮನಿರ್ಭರತೆಯ ಕನಸು ದೇಸೀ ನಿರ್ವಿುತ ಈ ನೌಕೆಯಿಂದ ನನಸಾಗುತ್ತಿದೆ. ಇದೇ ವೇಳೆ ಬ್ರಿಟಿಷರ ನೆನಪು ತರುವಂತಿದ್ದ ನೌಕಾಧ್ವಜವನ್ನು ಬದಲಾಯಿಸಿ ಭಾರತೀಯ ಸ್ವರೂಪ ನೀಡಲಾಗಿದೆ. ಛತ್ರಪತಿ ಶಿವಾಜಿ ಮಹಾರಾಜರ ಪ್ರೇರಣೆ ಪಡೆದ ಈ ಹೊಸ ಲೋಗೊ ಮನಸೂರೆಗೊಳ್ಳುವಂತಿದೆ. ಸಮುದ್ರ ಕಾವಲಿನಲ್ಲಿ ಭಾರತ ಶಕ್ತಿ ವೃದ್ಧಿಸಿಕೊಂಡು ಪಕ್ಕದ ಶತ್ರುರಾಷ್ಟ್ರಗಳಿಗೆ ನಡುಕ ಹುಟ್ಟಿಸುತ್ತಿದೆಯಲ್ಲದೆ, ಇಂಡೊ-ಪೆಸಿಫಿಕ್ ಸಮುದ್ರ ತೀರದಲ್ಲಿ ಹಿಡಿತವನ್ನು ಹೆಚ್ಚುಗೊಳಿಸಿಕೊಂಡಿದೆ.
5
ಆತ್ಮನಿರ್ಭರತೆಯ ಕಥೆ ಇಲ್ಲಿಗೇ ಮುಗಿದಿಲ್ಲ. ಭಾರತ ನಿರ್ವಿುಸಿರುವ ಲಘು ಯುದ್ಧವಿಮಾನಗಳಲ್ಲಿ ಮುಂಚೂಣಿ ಸಾಲಿನಲ್ಲಿರುವ ತೇಜಸ್ ಏರ್ಕ್ರಾಫ್ಟ್ ಗಳನ್ನು ಮಲೇಷಿಯಾ ಖರೀದಿಸುತ್ತಿರುವುದು ಹಳೆಯ ವಿಚಾರ. ಅಮೆರಿಕಾ, ಆಸ್ಟ್ರೇಲಿಯಾ, ಇಂಡೋನೇಷಿಯಾ, ಫಿಲಿಪ್ಪೀನ್ಸ್ ಸೇರಿದಂತೆ ಆರು ರಾಷ್ಟ್ರಗಳು ಖರೀದಿಗೆ ಮನಸ್ಸು ಮಾಡಿರುವುದು ಹೊಸ ಬೆಳವಣಿಗೆ. ಹಿಂದೂಸ್ತಾನ್ ಏರೊನಾಟಿಕ್ಸ್ ಲಿಮಿಟೆಡ್ ನಿರ್ವಿುಸಿರುವ ಈ ವಿಮಾನಗಳು ಸಿಂಗಲ್ ಇಂಜಿನ್ ಮಲ್ಟಿರೋಲ್ ಫೈಟರ್ಗಳೆಂದೇ ಖ್ಯಾತವಾದವು. ಅದಾಗಲೇ ಭಾರತೀಯ ಸೇನೆ 48,000 ಕೋಟಿ ರೂಪಾಯಿಯ ಯೋಜನೆಯನ್ನು ಘೊಷಿಸಿ 83 ತೇಜಸ್ಗಳನ್ನು ಸೇರ್ಪಡೆಗೊಳಿಸಿಕೊಳ್ಳುತ್ತಿರುವ ಸಂಗತಿಯನ್ನು ಕೇಳಿಯೇ ಇದ್ದೇವೆ. ಇದು ಕಿರೀಟಕ್ಕೆ ಮತ್ತೊಂದು ಗರಿಯಷ್ಟೆ. ಅನ್ಯ ರಾಷ್ಟ್ರಗಳು ತೇಜಸ್ನಲ್ಲಿ ಆಸಕ್ತಿ ವ್ಯಕ್ತಪಡಿಸುತ್ತಿರುವುದು ಇದೇ ಮೊದಲಲ್ಲವಾದರೂ ಈ ಬಾರಿ ಪೂರೈಕೆ ಮಾಡುವ ಹೆಚ್ಚಿನ ವಿಶ್ವಾಸ ಭಾರತೀಯರಿಗೆ ಇದೆ ಎನ್ನುವುದು ಸತ್ಯ.
6
ಕಳೆದ ತಿಂಗಳ ಕೊನೆಯಲ್ಲಿ ಬಂದ ಮತ್ತೊಂದು ಮಹತ್ವದ ಸುದ್ದಿ ಎಂದರೆ ಡಾಲರ್ ಎದುರು ರೂಪಾಯಿಯ ಕುಸಿತದ್ದು. ಆರಂಭದ ದಿನಗಳಲ್ಲಿ ಟ್ರೋಲಿಗರಿಗೆ ಮೋದಿಯನ್ನು ಹಳಿಯಲು ಇದು ಹಬ್ಬದೂಟವಾಗಿತ್ತು. ಕಾಲ ಕಳೆದಂತೆ ಅಚ್ಚರಿಯ ಸಂಗತಿಗಳು ಹೊರಬರಲಾರಂಭಿಸಿದವು. ಯುದ್ಧದ ವಾತಾವರಣದ ನಂತರ ಡಾಲರ್ನ ಬೇಡಿಕೆ ಹೆಚ್ಚಾಗಿ ಹಿಂದೆಂದಿಗಿಂತಲೂ ಹೆಚ್ಚು ಶಕ್ತವಾಗತೊಡಗಿತು. ಈ ಕಾರಣಕ್ಕೆ ಜಗತ್ತಿನ ಅನೇಕ ಕರೆನ್ಸಿಗಳು ಮೌಲ್ಯ ಕಳೆದುಕೊಂಡು ಕುಸಿಯಲಾರಂಭಿಸಿದವು. ಸ್ವೀಡನ್ನಿನ ಕ್ರೊನಾ 5.2ರಷ್ಟು ಕುಸಿತ ಕಂಡರೆ, ಇಂಗ್ಲೆಂಡಿನ ಪೌಂಡು 4.5ರಷ್ಟು ಕೆಳಕ್ಕಿಳಿಯಿತು. ಜಪಾನಿನ ಯೆನ್ನಿಂದ ಹಿಡಿದು ಚೀನಾದ ರೆನ್ ಮಿನ್ಬಿಯವರೆಗೂ ಕುಸಿತ ಸುಮಾರು ಶೇಕಡಾ 4 ರಿಂದ ಹಿಡಿದು ಶೇಕಡಾ 2ರವರೆಗೂ ಇತ್ತು. ಭಾರತದ ಕುಸಿತ ಶೇಕಡಾ 0.2ರಷ್ಟು ಮಾತ್ರ. ಜೂನ್ 31ಕ್ಕೆ ಪ್ರತಿ ಡಾಲರ್ಗೆ 79.3 ರೂಪಾಯಿನಷ್ಟಿದ್ದರೆ ಆಗಸ್ಟ್ 31ರ ವೇಳೆಗೆ ಅದು 79.5ಕ್ಕಿಳಿದಿತ್ತು ಅಷ್ಟೆ. ಇದು ಜಾಗತಿಕ ಮಟ್ಟದಲ್ಲಿ ಸವಾಲಿನದ್ದೆಂದು ಗುರುತಿಸಲ್ಪಡುತ್ತಿದೆ.
7
ಈ ಕಾರಣಕ್ಕಾಗಿಯೇ ಜಗತ್ತು ಭಾರತದ ಆರ್ಥಿಕ ಸ್ಥಿತಿಯ ಬಗ್ಗೆ ಹೆಚ್ಚು ವಿಶ್ವಾಸ ವ್ಯಕ್ತಪಡಿಸುತ್ತಿದೆ. ಮ್ಯಾಕಿನ್ಸೆ ಸಿಇಒ ಬಾಬ್ಸ್ಟರ್ನ್ ಫೆಲ್ಸ್ ಮುಂದಿನ ದಶಕವಷ್ಟೇ ಅಲ್ಲ, ಮುಂದಿನ ಶತಕವೇ ಭಾರತಕ್ಕೆ ಸೇರಿದ್ದು ಎಂದು ಹೇಳುವ ಮೂಲಕ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ. 2047ರ ವೇಳೆಗೆ ಭಾರತ ಜಗತ್ತಿನ ಶೇಕಡಾ 20ರಷ್ಟು ಕಾರ್ವಿುಕರನ್ನು ಹೊಂದಿರುತ್ತದೆ. ಜಗತ್ತಿನ ನಿಜವಾದ ಕರ್ಮಭೂಮಿಯಾಗಿ ಭಾರತ ನಿರ್ವಣಗೊಂಡಿರುತ್ತದೆ. ಕರೊನಾ ಸಂದರ್ಭ ದಲ್ಲೂ ಭಾರತ ಆರ್ಥಿಕ ಸ್ಥಿತಿಯನ್ನು ಕಾಪಾಡಿಕೊಂಡು ಬಂದಿರುವ ರೀತಿ ಹುಬ್ಬೇರಿಸುವಂಥದ್ದು. ಭವಿಷ್ಯದ ಪ್ರತಿಭೆಯ ಫ್ಯಾಕ್ಟರಿ ಭಾರತವೇ ಆಗಿರುತ್ತದೆ. ಈ ಕಾರಣಕ್ಕಾಗಿ ನಾವು ಅನೂಹ್ಯವೆನಿಸುವಷ್ಟು ವಾಗ್ದಾನವನ್ನು ಭಾರತಕ್ಕೆ ನೀಡಲಿದ್ದೇವೆ ಎಂದೂ ಅವರು ಹೇಳಿದ್ದಾರೆ. ಉರಿಯುವವರಿಗೆ ಈ ಮಾತಿನಿಂದ ಇನ್ನಷ್ಟು ಉರಿ ಜಾಸ್ತಿಯಾಗಿರಲು ಸಾಕು. ಸಾಧಾರಣವಾದ ಬರ್ನಾಲ್ಗೆ ಉರಿ ಆರುವಂತೆ ಕಾಣುವುದಿಲ್ಲ.
8
ಆರ್ಥಿಕ ಸ್ಥಿತಿ ಬಲವಾಗುವುದರೊಂದಿಗೆ ನಿರುದ್ಯೋಗ ಸಮಸ್ಯೆ ಕಡಿಮೆಯಾಗುತ್ತಿರುವುದು ಪ್ರತಿಪಕ್ಷಗಳ ವಾದಕ್ಕೆ ಸೋಲುಣಿಸಲು ಸಾಕಾಗುವಂತಿದೆ. ಪಿರಿಯಾಡಿಕ್ ಲೇಬರ್ ಫೋರ್ಸ್ ಸರ್ವೆಸ್ ಕಳೆದ ತಿಂಗಳ ಕೊನೆಯಲ್ಲಿ ಬಿಡುಗಡೆ ಮಾಡಿರುವ ವರದಿಯ ಪ್ರಕಾರ ನಿರುದ್ಯೋಗ ದರ ಶೇಕಡಾ 7.6ರಷ್ಟಿದೆ. 2021ರ ಜೂನ್ ತ್ರೈಮಾಸಿಕದಲ್ಲಿ ಇದು ಶೇಕಡಾ 12.6ರಷ್ಟಿತ್ತು. ಕಳೆದ ನಾಲ್ಕು ವರ್ಷಗಳಲ್ಲೇ ನಿರುದ್ಯೋಗದ ದರ ಇಷ್ಟು ಕಡಿಮೆಯಾಗಿರುವುದನ್ನು ವರದಿ ದಾಖಲಿಸಿದೆ. ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಯಾಗುತ್ತಿರುವುದು ಸರ್ಕಾರದ ಮೇಲೆ ಹೆಚ್ಚು ಭರವಸೆಯನ್ನು ಮೂಡಿಸುತ್ತಿದೆ. ಮತ್ತು ಪ್ರತಿಪಕ್ಷಗಳ ಬಲವಾದ ಅಸ್ತ್ರವೊಂದನ್ನು ಕಿತ್ತುಕೊಳ್ಳುತ್ತಿದೆ.
9
ಅಸ್ತ್ರ ಎಂದಾಗ ನೆನಪಾಯ್ತು, ‘ಬ್ರಹ್ಮಾಸ್ತ್ರ’ ಎಂಬ ಚಲನಚಿತ್ರ ಬಿಡುಗಡೆಯಾಗಿದೆ. ಹಿಂದೂವಿರೋಧಿ ವಿಚಾರಧಾರೆಯನ್ನಿಟ್ಟುಕೊಂಡ ಅಮೀರ್ ಖಾನರ ಲಾಲ್ಸಿಂಗ್ ಛಡ್ಡಾಕ್ಕೆ ಮಣ್ಣುಮುಕ್ಕಿಸಿದ ನಂತರ ಸಮಾಜ ಬ್ರಹ್ಮಾಸ್ತ್ರಕ್ಕೊಂದು ಗತಿ ಕಾಣಿಸಲು ಮುಂದಾಗಿದ್ದಾರೆ. ಹಿಂದೂ ಭಾವನೆಗಳನ್ನು ಸದಾ ಮೂದಲಿಸುತ್ತಿದ್ದ ಬಾಲಿವುಡ್ನ ಮಂದಿ ಮಂಡಿಯೂರಿ ಕ್ಷಮೆ ಕೇಳಲು ನಿಲ್ಲುವಂತಾಗಿರುವುದು ಸ್ವಾತಂತ್ರ್ಯಾನಂತರದ ಮಹತ್ವದ ವಿದ್ಯಮಾನ. ಮಾಫಿಯಾಗಳೊಂದಿಗೆ ನಿರಂತರ ಸಂಬಂಧ ಹೊಂದಿದ್ದ ಬಾಲಿವುಡ್ನ ಮಂದಿ ಈಗ ಅನಿವಾರ್ಯವಾಗಿ ಭಾರತದ ಕಡೆ ತಿರುಗುವಂತಾಗಿರುವುದು ಕಳೆದ ಒಂದು ತಿಂಗಳಲ್ಲಿ ನಡೆದಿರುವ ಮಹತ್ವದ ಬೆಳವಣಿಗೆ.
10
ಇನ್ನು, ಭಯೋತ್ಪಾದನಾ ಚಟುವಟಿಕೆ ನಿಲ್ಲಿಸುವವರೆಗೆ ಯಾವ ವ್ಯಾಪಾರವೂ ಇಲ್ಲವೆಂದು ಹೇಳುವ ಮೂಲಕ ಮೋದಿ ಸರ್ಕಾರ ಪಾಕಿಸ್ತಾನದ ಆತಂಕವನ್ನು ಹೆಚ್ಚಿಸಿದೆ. 2019ರಲ್ಲಿ ಇಮ್ರಾನ್ ಖಾನ್ ಆರ್ಟಿಕಲ್ 370 ರದ್ದತಿಯ ಹಿನ್ನೆಲೆಯಲ್ಲಿ ಭಾರತದೊಂದಿಗೆ ವ್ಯಾಪಾರ ಸಂಬಂಧ ಕಡಿದುಕೊಂಡಿದ್ದರು. ಆದರೆ, ಕೋವಿಡ್ ಅಪ್ಪಳಿಸಿದಮೇಲೆ ಪಾಕಿಸ್ತಾನ ಆರ್ಥಿಕವಾಗಿ ಯಾವ ಮಟ್ಟಿಗೆ ಕುಸಿಯಿತೆಂದರೆ ಪ್ರಧಾನಿಯಲ್ಲದೆ, ಸೇನೆಯ ಪ್ರಮುಖರೂ ಜಗತ್ತಿನ ಮುಂದೆ ಭಿಕ್ಷಾಪಾತ್ರೆ ಹಿಡಿದುಕೊಂಡೇ ತಿರುಗಾಡಲಾರಂಭಿಸಿದ್ದರು. ಈಗಂತೂ ಪಾಕಿಸ್ತಾನ ಸೇನೆ ಕಂಡ ಕಂಡ ರಾಷ್ಟ್ರಗಳ ಮುಂದೆ ಆರ್ಥಿಕ ಸಹಕಾರ ನೀಡುವಂತೆ ಗೋಗರೆಯುತ್ತಿದೆ. ಆದರೆ, ಭಾರತದೊಂದಿಗೆ ವೈರತ್ವ ಕಟ್ಟಿಕೊಳ್ಳಲು ಬಯಸದ ರಾಷ್ಟ್ರಗಳು ಪಾಕಿಸ್ತಾನಕ್ಕೆ ಸಹಾಯ ಮಾಡಲು ಹಿಂದೇಟು ಹಾಕುತ್ತಿವೆ. ಈ ಹೊತ್ತಿನಲ್ಲಿ ಭಾರತದೊಂದಿಗೆ ವ್ಯಾಪಾರ ಮಾಡುವುದೆಂದರೆ ಜಗತ್ತಿನ ಮಂದಿಯ ಪ್ರೀತಿ ಗಳಿಸುವುದು ಎಂದು ಪಾಕಿಸ್ತಾನಕ್ಕೆ ಗೊತ್ತಿರುವುದರಿಂದ ನಮ್ಮ ಕಾಲಿಗೆ ಬಿದ್ದು ಅಂಗಲಾಚುತ್ತಿದೆ. ಆದರೆ, ಸಂಕಟದಲ್ಲಿರುವ ಪಾಕಿಸ್ತಾನಕ್ಕೆ ಔಷಧಿಯನ್ನು ದಾನವಾಗಿ ಕೊಡುತ್ತಿರುವ ಭಾರತ ವ್ಯಾಪಾರವನ್ನು ನಿರಾಕರಿಸುತ್ತಿರುವುದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ಎನಿಸುವ ಸಂಗತಿಯೇ.
11
ಕಳೆದ ಒಂದು ವರ್ಷದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆಯಾಗಿ ರುವ ಏಕೈಕ ರಾಷ್ಟ್ರ ಭಾರತ ಎಂಬುದು ವಿರೋಧಪಕ್ಷಗಳಿಗೆ ನುಂಗಲಾರದ ತುತ್ತು. ಮುಂದುವರಿದ ರಾಷ್ಟ್ರಗಳಲ್ಲಿ ಇಂಧನದ ಬೆಲೆ ಶೇಕಡಾ 40 ರಿಂದ 60ರಷ್ಟು ಹೆಚ್ಚಾಗಿದೆ. 2021ರ ಆಗಸ್ಟ್ನಲ್ಲಿ ಬೆಂಗಳೂರಿನಲ್ಲಿ ಸುಮಾರು 105 ರೂ. ಇದ್ದ ಪೆಟ್ರೋಲ್ ಬೆಲೆ 2022ರ ಆಗಸ್ಟ್ ವೇಳೆಗೆ 101 ರೂಪಾಯಿಗೆ ಬಂದಿದೆ ಎನ್ನುವುದೇ ಇದಕ್ಕೆ ಸಾಕ್ಷಿ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ದೂರದೃಷ್ಟಿಯ ವಿದೇಶೀ ನೀತಿಯೇ ಇದಕ್ಕೆ ಮುಖ್ಯ ಕಾರಣವೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.
12
ಇನ್ನು ಬುದ್ಧಿಜೀವಿಗಳು ತಮ್ಮನ್ನೇ ಪರಚಿಕೊಂಡು ಆಗಿರುವ ಗಾಯದ ಮೇಲೆ ಸ್ವಲ್ಪ ಉಪ್ಪು ಹಾಕದಿದ್ದರೆ ಹೇಗೆ? ಇವರೆಲ್ಲ ಕಂಠಮಟ್ಟ ವಿರೋಧಿಸುವ ಗೌತಮ್ ಅದಾನಿ ಈಗ ಜಗತ್ತಿನ ಮೂರನೇ ದೊಡ್ಡ ಶ್ರೀಮಂತರಾಗಿ ಹೊರಹೊಮ್ಮಿದ್ದಾರೆ. ಎಲಾನ್ ಮಸ್ಕ್ ಮತ್ತು ಜೆಫ್ ಬೆಜೋಸ್ ಹಿಂದಿರುವ ಅದಾನಿ 137 ಬಿಲಿಯನ್ ಡಾಲರುಗಳ ಒಟ್ಟು ಆಸ್ತಿಯಿಂದ ಸಿರಿವಂತಿಕೆಯ ಉತ್ತುಂಗದಲ್ಲಿದ್ದಾರೆ. ಇನ್ನು 16 ಬಿಲಿಯನ್ ಡಾಲರುಗಳನ್ನು ತಮ್ಮ ಆಸ್ತಿಗೆ ಅವರು ಸೇರಿಸಿದರೆ ಜಗತ್ತಿನ ಎರಡನೇ ಸಿರಿವಂತರಾಗಿ ದಾಖಲಾಗಿಬಿಡುತ್ತಾರೆ. ಅಂಬಾನಿ ಸಮೂಹವೂ ಏರಲಾಗದ ಎತ್ತರವನ್ನು ಅದಾನಿ ಏರಿದ್ದಾರೆ. ಮೋದಿ ಮತ್ತು ಅದಾನಿ ಸಂಬಂಧದ ಕುರಿತು ಬಹುವಾಗಿ ಮಾತನಾಡುವ ಕಾಂಗ್ರೆಸ್ಸು ಅದಾನಿಯ ಸಿರಿವಂತಿಕೆಗೆ ಮುಖ್ಯ ಕಾರಣಗಳಲ್ಲಿ ತಮ್ಮ ಸರ್ಕಾರಗಳು ನೀಡಿರುವ ಸೌಲಭ್ಯವೂ ಒಂದು ಎಂಬುದನ್ನು ಮರೆತುಬಿಟ್ಟಿದೆ.
ಒಟ್ಟಾರೆ ಸ್ವಾತಂತ್ರ್ಯ ಅಮೃತ ಮಹೋತ್ಸವದ ಶುಭಾಶಯಗಳನ್ನು ಹೇಳಲು ಇದಕ್ಕಿಂತಲೂ ಒಳ್ಳೆಯ ಸಂಗತಿಗಳು ದೊರೆಯಲಿಲ್ಲ. ಭಾರತಕ್ಕೆ ಜಯವಾಗಲಿ.
(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)