ನಿಮ್ಮ ಸಾವಿಗೆ ನೀವೇ ಕಾರಣ; ನಾವಲ್ಲ!

Modi
Published on
ಪರಮ ಪ್ರೀತಿಯ ನರೇಂದ್ರ ಮೋದಿಜಿ ಶ್ರದ್ಧೆಯ ನಮಸ್ಕಾರಗಳು.

ಪಂಜಾಬಿನಲ್ಲಿ ಭದ್ರತಾಲೋಪದ ಕಾರಣಕ್ಕಾಗಿ ಉಂಟಾದ ಪರಿಸ್ಥಿತಿ ನನ್ನಂಥ ಕೋಟ್ಯಂತರ ಜನರ ಎದೆಯಲ್ಲಿ ಹೆದರಿಕೆ ಹುಟ್ಟಿಸಿದ್ದಂತೂ ನಿಜ. ಕಳೆದ ಏಳು ವರ್ಷಗಳಿಂದ ಪ್ರಧಾನಿ ಪಟ್ಟದಲ್ಲಿ ಕುಳಿತು ನೀವು ಮಾಡುತ್ತಿರುವ ಕಾರ್ಯಗಳನ್ನು ನೋಡುತ್ತಲೇ ಬಂದಿದ್ದೇವೆ. ನೀವು ಆಡುವ ಮಾತುಗಳನ್ನು ಕೇಳಿದ್ದೇವೆ. ಭಾರತದ ಸಾಮಾನ್ಯ ಮುಗ್ಧ ಜನರೊಂದಿಗೆ ನೀವು ನಡೆದುಕೊಳ್ಳುವ ರೀತಿಯ ಗುಣಗಾನ ಮಾಡಿದ್ದೇವೆ. ನಮ್ಮ ಕಣ್ಣೆದುರಿಗೇ ನಿಮ್ಮ ಹತ್ಯೆಯ ಯೋಜನೆಯೊಂದು ರೂಪುಗೊಳ್ಳುತ್ತದೆ ಎಂಬುದನ್ನು ಯಾಕೋ ಜೀರ್ಣಿಸಿಕೊಳ್ಳಲೇ ಆಗುತ್ತಿಲ್ಲ. ನಿಮಗೀಗ 71 ವರ್ಷ ವಯಸ್ಸು. ಆರಂಭದ ಒಂದಿಪ್ಪತ್ತು ವರ್ಷಗಳನ್ನು ತೆಗೆದರೂ ಸುಮಾರು ಐವತ್ತು ವರ್ಷಗಳ ಕಾಲ ದೇಹವನ್ನು ರಾಷ್ಟ್ರಕಾರ್ಯಕ್ಕಾಗಿ ಸವೆಸಿದ್ದೀರಿ. ಕಳೆದ ಏಳು ವರ್ಷಗಳಲ್ಲಂತೂ ಹಿಂದಿನ 75 ವರ್ಷಗಳಲ್ಲಿ ಕಾಣದ ವೈಭವವನ್ನು ರಾಷ್ಟ್ರಕ್ಕೆ ತಂದುಕೊಟ್ಟಿದ್ದೀರಿ. ನಾನು, ನನ್ನ ಮುಂದಿನ ಪೀಳಿಗೆ ನಿಮ್ಮಿಂದ ತೀರಿಸಲಾಗದಷ್ಟು ಋಣಭಾರವನ್ನು ಪಡೆದುಕೊಂಡುಬಿಟ್ಟಿದ್ದೇವೆ. ನಿಮಗೆ ಶ್ರದ್ಧೆಯ ಧನ್ಯವಾದ ಹೇಳುವುದಿರಲಿ ಹತ್ಯೆಯನ್ನೇ ಮಾಡಿಸುವಂಥ ನೀಚ ಮಟ್ಟಕ್ಕೆ ಬಂದುಬಿಟ್ಟೆವಲ್ಲ, ಮಹಾಕೃತಘ್ನರು ನಾವು. ಒಬ್ಬರೇ ಕುಳಿತಾಗ ಈ ಕುರಿತಂತೆ ಬೇಸರವುಂಟಾದರೆ ನಿಮ್ಮನ್ನು ಪ್ರೀತಿಯಿಂದ ಕಾಣುವ ನನ್ನಂತಹ ಕೋಟ್ಯಂತರ ಮಂದಿಯನ್ನು ಕ್ಷಮಿಸಿಬಿಡಿ!

ಇಷ್ಟಕ್ಕೂ ತಪ್ಪು ನಮ್ಮದಲ್ಲ, ನಿಮ್ಮದೇ. ನಮಗೆ ಬೇಡಿಕೊಂಡು ತಿನ್ನುವುದು ರೂಢಿಯಾಗಿಹೋಗಿತ್ತು. ಎಲ್ಲರ ಮುಂದೆ ತಲೆತಗ್ಗಿಸಿ ನಿಲ್ಲುವುದು ನಮಗೇನೂ ಹೊಸತಾಗಿರಲಿಲ್ಲ. ಮಾತೆತ್ತಿದರೆ ಹಳೆಯ ಭಾರತದ ಸಾಧನೆಗಳನ್ನು ಮೆಲುಕು ಹಾಕುತ್ತ, ಕನಸು ಕಾಣುತ್ತ ಕುಳಿತುಕೊಂಡುಬಿಡುತ್ತಿದ್ದೆವು. ಕರೆಂಟಿಲ್ಲದ, ಗ್ಯಾಸು ಸಿಗದ, ಪೆಟ್ರೋಲಿಗೆ ಅಂಡಲೆಯುವ, ಬಿಲ್ ಕಟ್ಟಲು ಉದ್ದನೆಯ ಸರತಿಯಲ್ಲಿ ನಿಲ್ಲುವ, ಲೋಕಲ್ ಬಸ್ಸುಗಳಲ್ಲಿ ಜೋತಾಡಿಕೊಂಡು ಹೋಗುವ, ಹಳ್ಳಗಳೇ ತುಂಬಿರುವ ರಸ್ತೆಗಳಲ್ಲಿ ಸಂಚರಿಸುವುದು ರೂಢಿಯಾಗಿಹೋಗಿತ್ತು. ಬದಲಾಯಿಸುವ ದರ್ದು ನಿಮಗೇಕೆ ಬೇಕಿತ್ತು? ಬ್ರಿಟಿಷರು ಬಿಟ್ಟು ಹೋದಾಗಿನಿಂದಲೂ ಗುಲಾಮೀ ಮಾನಸಿಕತೆಯನ್ನು ಆನಂದಿಸಿಕೊಂಡು ಬದುಕುತ್ತಿದ್ದ ನಮಗೆ ಸ್ವಾಭಿಮಾನದ ಸುರೆಯನ್ನು ಕುಡಿಸಿದ್ದಾದರೂ ಏಕೆ? ನಮ್ಮ ಪಾಡಿಗೆ ನಮ್ಮನ್ನು ಬಿಟ್ಟುಬಿಟ್ಟಿದ್ದರೆ ಕಚೇರಿಗಳಲ್ಲಿ ಮತ್ತದೇ ಲಂಚವನ್ನು ಕೊಡುತ್ತ, ಸಾಲಕ್ಕಾಗಿ ಮ್ಯಾನೇಜರ್​ಗಳ ಮುಂದೆ ಹ್ಯಾಪು ನಗೆ ಬೀರುತ್ತ, ವಿದೇಶದಲ್ಲಿ ಕೆಲಸ ಸಿಕ್ಕರೆ ಸಾಕು ಎಂದು ಹಾತೊರೆಯುತ್ತ ಬದುಕು ಕಳೆದುಬಿಡುತ್ತಿದ್ದೆವು. ಸ್ಟಾರ್ಟಪ್​ಗಳ ಕನಸು ಕಟ್ಟಿಕೊಟ್ಟಿದ್ದು ನಿಮ್ಮದೇ ತಪು್ಪ. ಜಗತ್ತಿನ ಯುನಿಕಾರ್ನ್​ಗಳ ಸಾಲಿನಲ್ಲಿ ನಮ್ಮ ತರುಣ-ತರುಣಿಯರು ನಿಲ್ಲುವಂತೆ ಮಾಡಿದಿರಲ್ಲ, ನಿಮಗೆ ಅಧಿಕಾರ ಕೊಟ್ಟಿದ್ದು ಯಾರು? ಇಂದು ಜಗತ್ತಿನ ಸಿರಿವಂತರೆಲ್ಲ ಹೂಡಿಕೆಗೆಂದು ಭಾರತಕ್ಕೆ ಧಾವಿಸುವಂತೆ ಮಾಡಿಬಿಟ್ಟಿದ್ದೀರಿ. ಚೀನಾವನ್ನು ಪಕ್ಕಕ್ಕಿಟ್ಟು ಭಾರತವನ್ನು ಜಗತ್ತು ಆಯ್ಕೆ ಮಾಡಿಕೊಳ್ಳುವಂತೆ ಮಾಡಿದ್ದೀರಿ. ಇದು ಅಗತ್ಯವಿತ್ತೇನು? ನಮ್ಮ ಪಾಸ್​ಪೋರ್ಟಿಗೆ ಜಗತ್ತಿನ ವೇದಿಕೆಯಲ್ಲಿ ನಯಾಪೈಸೆ ಕಿಮ್ಮತ್ತಿಲ್ಲದಿದ್ದಾಗಲೇ ಚೆನ್ನಾಗಿತ್ತು; ಇಂದು ಭಾರತದ ಪಾಸ್​ಪೋರ್ಟ್​ಗೆ ಗೌರವ ಕೊಡುವ ಸ್ಥಿತಿ ಬಂದಿದೆಯಲ್ಲ, ಯಾವ ಪುರುಷಾರ್ಥಕ್ಕೆ?

ಅನೇಕ ಬಾರಿ ಅನಿಸುತ್ತೆ, ಇತರೆಲ್ಲ ಪ್ರಧಾನಮಂತ್ರಿಗಳಂತೆ ನಿಮ್ಮ ಪಾಡಿಗೆ ನೀವಿರುವುದನ್ನು ಬಿಟ್ಟು ದಿನದ 18 ಗಂಟೆ ಕೆಲಸ ಮಾಡುವೆನೆಂಬ ಹಠಕ್ಕೆ ಬೀಳಲೇಬಾರದಿತ್ತು. ದೇಶ ಹಿಂದೆ ಹೇಗಿತ್ತೋ ಈಗಲೂ ಹಾಗೆಯೇ ಇದ್ದಿದ್ದರೆ ನಿಮ್ಮ ಗಂಟಾದರೂ ಏನು ಹೋಗುತ್ತಿತ್ತು? ಕರೊನಾ ಬಂದಾಗ ನಮ್ಮ ಪಾಡಿಗೆ ನಾವು ನೆಮ್ಮದಿಯಿಂದ ಸತ್ತಾದರೂ ಹೋಗುತ್ತಿದ್ದೆವಲ್ಲ, ನೀವು ಅದಕ್ಕೂ ಬಿಡಲಿಲ್ಲ. ಜಗತ್ತಿನೆದುರು ಭಿಕ್ಷೆ ಬೇಡಿಕೊಂಡು ನಿಲ್ಲುತ್ತಿದ್ದ ನಾವು ಲಸಿಕೆ ತಯಾರಿಸಿ ಜಗತ್ತಿಗೆ ಆರೋಗ್ಯದ ಕೇಂದ್ರವಾಗುವ ಸ್ಥಿತಿ ನಿರ್ಮಾಣ ಮಾಡಿಬಿಟ್ಟಿರಿ. ಇಂದಂತೂ ಕರೊನಾಕ್ಕೆ ಬೇಕಾದ ಔಷಧ ನಿರ್ವಣಕ್ಕೆ ಭಾರತವೇ ಜಗತ್ತಿನ ಕೇಂದ್ರವಾಗಿಬಿಟ್ಟಿದೆ ಎಂದು ವರದಿಗಳೆಲ್ಲ ಹೇಳುತ್ತಿವೆ. ನಿಜಕ್ಕೂ ಒಪ್ಪಲಾಗದ ಸಂಗತಿಯಿದು. ದುಡ್ಡಿದ್ದವರು ಅಮೆರಿಕದ ಫೈಝುರ್ ಲಸಿಕೆಗಳನ್ನು ಖರೀದಿಸಿ ಚುಚ್ಚಿಕೊಂಡುಬಿಡುತ್ತಿದ್ದರು. ಕೈಲಾಗದ ಬಡವರು ಆಸ್ಪತ್ರೆಯ ವೆಚ್ಚ ಭರಿಸಲಾರದೆ ಭೂಮಿಯನ್ನೇ ಬಿಟ್ಟುಹೋಗುತ್ತಿದ್ದರು. ಅವರ ಸಂಕಟವಾದರೂ ದೂರವಾಗುತ್ತಿತ್ತಲ್ಲ. ಅವರನ್ನೆಲ್ಲ ಉಳಿಸಬೇಕೆಂಬ ಪಣತೊಟ್ಟು ಹಗಲು-ರಾತ್ರಿ ವಿಜ್ಞಾನಿಗಳೊಂದಿಗೆ ಸಂಪರ್ಕ ಏರ್ಪಡಿಸಿಕೊಂಡು ಲಸಿಕೆ ನಿರ್ವಣಕ್ಕೆ ಪ್ರೇರಣೆ ಕೊಟ್ಟಿದ್ದಾದರೂ ಯಾಕೆ? ಅಕಸ್ಮಾತ್ ನಿಮಗೇ ಕರೊನಾ ಬಂದಿದ್ದರೂ ಅಮೆರಿಕಕ್ಕೆ ಹೋಗಿ ಚಿಕಿತ್ಸೆ ಪಡೆಯಬಹುದಿತ್ತಲ್ಲ. ಕೇರಳದ ಮುಖ್ಯಮಂತ್ರಿ ಪಿಣರಾಯಿ ನೋಡಿ. ತನ್ನ ರಾಜ್ಯದಲ್ಲಿ ಅತಿಶ್ರೇಷ್ಠ ಆರೋಗ್ಯ ವ್ಯವಸ್ಥೆ ಇದೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತ, ಅಮೆರಿಕದ ಬಂಡವಾಳಶಾಹಿ ಚಿಂತನೆಯನ್ನು ವಿರೋಧಿಸುತ್ತ ಬಂದಿದ್ದವರು. ಈಗ ಸರ್ಕಾರಿ ಖರ್ಚಿನಲ್ಲಿ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಾರಂತೆ. ನಮಗೆ ಸೂಕ್ತವಾಗುವಂಥ ವ್ಯಕ್ತಿಗಳು ಇಂಥವರೇ. ಏಕೆಂದರೆ ಇವರಿಗೆ ನಿಜವಾದ ಭಾರತೀಯನ ಯೋಗ್ಯತೆ ಚೆನ್ನಾಗಿ ಗೊತ್ತಿದೆ. ನೀವು ಅರಿಯುವಲ್ಲಿ ಸೋತಿದ್ದೀರಿ ಅಷ್ಟೇ!

ಕರೊನಾ ಬಂದಮೇಲೆ ಎಲ್ಲ ದೇಶಗಳ ಆಮದು ಹೆಚ್ಚಾಗಿ ರಫ್ತು ಕಡಿಮೆಯಾಗಿದೆ; ಆರ್ಥಿಕ ಬೆಳವಣಿಗೆಯ ದರ ಕುಸಿತ ಕಂಡಿದೆ ಎಂದೆಲ್ಲ ಆರ್ಥಿಕ ಪಂಡಿತರು ಮಾತನಾಡುವಾಗ, ಈ ಡಿಸೆಂಬರ್ ಒಂದರಲ್ಲೇ ಸರಕು ರಫ್ತು 37 ಬಿಲಿಯನ್ ಡಾಲರ್​ಗಳಷ್ಟಾಗಿ ಹಿಂದಿನ ಎಲ್ಲ ದಾಖಲೆಗಳನ್ನೂ ಮುರಿದಿದೆ. ಇನ್ನೊಂದೇಳೆಂಟು ವರ್ಷಗಳಲ್ಲಿ ಜಪಾನನ್ನು ಹಿಂದಿಕ್ಕಿ ನಾವು ಏಷ್ಯಾದ ಎರಡನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯಲಿದ್ದೇವೆ.ಎಂದು ವರದಿಗಳು ಹೇಳುತ್ತಿವೆ. ಇದರಿಂದ ನಮಗೇನಾಗಬೇಕು? ನಮಗೆ ತಿಂಗಳಿಗೆ 30 ಕೆಜಿ ಅಕ್ಕಿ ಬಿಟ್ಟಿ ಬೇಕು. ಕುಡಿಯಲು ಹೆಂಡವನ್ನು ಉಚಿತವಾಗಿ ಕೊಟ್ಟರೆ ಅಷ್ಟೇ ಸಾಕು. ಪರಿವಾರಗಳ ಜೀತಕ್ಕೆ ಈ ರಕ್ತ ಒಗ್ಗಿಹೋಗಿದೆ. ನೀವೆಲ್ಲಿ ಮಧ್ಯೆ ಬಂದಿರಿ? ನಿಮ್ಮನ್ನು ಬದಿಗೆ ಸರಿಸದೆ ಹೋದರೆ ನಾವು ನಮ್ಮ ಹಳೆಯ ವೈಭವಕ್ಕೆ ಮರಳೋದು ಹೇಗೆ? ನಮಗೆ ಆರ್ಥಿಕ ಶಕ್ತಿಯಾಗುವುದು ಬೇಕಿಲ್ಲ. ನಿಮ್ಮ ಪಾಡಿಗೆ ನೀವಿದ್ದರೆ ಸರಿ ಅಷ್ಟೇ.

ನನಗೆ ಚೆನ್ನಾಗಿ ನೆನಪಿದೆ. ನೋಟು ಅಮಾನ್ಯೀಕರಣ ಜಾರಿಗೆ ತಂದಾಗ ಕಾಂಗ್ರೆಸ್ಸಿನವರು ಭಾರತೀಯರಿಗೆ ಮೊಬೈಲ್ ಮೂಲಕ ಹಣದ ವಹಿವಾಟು ಮಾಡುವುದು ಬರುವುದೇ ಇಲ್ಲ ಎಂದು ಮೂದಲಿಸಿದ್ದರು. ನೀವು ಸವಾಲು ಸ್ವೀಕರಿಸಿದಿರಿ. ಬಗೆ-ಬಗೆಯ ಮಾರ್ಗಗಳನ್ನು ಬಳಸಿ ನಮ್ಮನ್ನೂ ಜಗತ್ತಿನ ಮಟ್ಟದಲ್ಲಿ ಬುದ್ಧಿವಂತರೆಂದು ಸಾಬೀತುಪಡಿಸಲು ಪ್ರಯತ್ನಿಸಿದಿರಿ. 2011ರಲ್ಲಿ ಡಿಜಿಟಲ್ ವ್ಯವಹಾರದಲ್ಲಿ ಚೀನಾ ನಮಗಿಂತ ನಾಲ್ಕುಪಟ್ಟು ಹೆಚ್ಚು ಮುಂದಿತ್ತು. 2016ರಲ್ಲಿ ನಾವು ಯುಪಿಐ ಆರಂಭಿಸಿದೆವು. 2018ರ ವೇಳೆಗೆ ಚೀನಾವನ್ನು ಹಿಂದಿಕ್ಕಿಯಾಗಿತ್ತು. ಈಗ ಚೀನಾದ ಎರಡುಪಟ್ಟು ಹೆಚ್ಚು ವಹಿವಾಟನ್ನು ಭಾರತ ಡಿಜಿಟಲ್ ತಂತ್ರಜ್ಞಾನದ ಮೂಲಕ ಮಾಡುತ್ತಿದೆ. ಹೌದು, ಇವೆಲ್ಲವೂ ಮೇಲ್ನೋಟಕ್ಕೆ ಚೆಂದ. ಆದರೆ ಊರಿನ ಎಂಎಲ್​ಎ ಮುಂದೆ ಕೈಚಾಚಿದಾಗ 20 ರೂಪಾಯಿ ನೋಟು ಸಿಗುತ್ತಿತ್ತಲ್ಲ, ಅದರ ಘಮ ನಿಮಗೇನು ಗೊತ್ತು? ನಿಮ್ಮ ಹೆಸರು ಹೇಳಿ ಇಂದು ನಮಗೆ ನೋಟು ಕೊಡುವುದನ್ನೇ ಬಿಟ್ಟುಬಿಟ್ಟಿದ್ದಾರೆ. ನೀವು ಬೇರೆ ಸರ್ಕಾರದಿಂದ ನಮಗೆ ಬರಬೇಕಾದ ಹಣವನ್ನು ನೇರವಾಗಿ ನಮ್ಮ ಅಕೌಂಟಿಗೇ ಹಾಕುತ್ತಿದ್ದೀರಿ. ಗ್ರಾಮ ಪಂಚಾಯ್ತಿಯ ಸದಸ್ಯ ನೂರು ರೂಪಾಯಿ ತೆಗೆದುಕೊಂಡರೆ ಗಂಟೇನು ಹೋಗುತ್ತಿತ್ತು? ಸಂಜೆಯಾದೊಡನೆ ಗರಿಗರಿ ನೋಟುಗಳನ್ನಾದರೂ ಕೊಡುತ್ತಿದ್ದನಾ! ಅದನ್ನು ಕೈಲಿ ಹಿಡಿದು ರಾಜನಂತೆ ಶರಾಬು ಅಂಗಡಿಗೆ ಹೋಗುವ ಅವಕಾಶವನ್ನೇ ತಪ್ಪಿಸಿದಿರಿ.

ದೇಶದಾದ್ಯಂತ ರಸ್ತೆಗಳ ಅಭಿವೃದ್ಧಿ ಮಾಡಿದಿರಿ, ರೈಲು ಸಮಯಕ್ಕೆ ಬರುವಂತೆ ಮಾಡಿದಿರಿ, ಮುಕ್ಕಾಲುಪಾಲು ರೈಲುಗಳ ವಿದ್ಯುದೀಕರಣ ಮುಗಿಸಿದ್ದೀರಿ, ಈ ಕರೊನಾ ಅವಧಿಯಲ್ಲಿ ವಿಶೇಷ ಯೋಜನೆಗಳನ್ನು ಜಾರಿಗೆ ತಂದು ಸಣ್ಣ ಮತ್ತು ಮಧ್ಯಮ ಉದ್ಯಮಿಗಳಿಗೆ ಸಾಲ ಕೊಟ್ಟಿರಿ. ಅದರ ಪರಿಣಾಮವಾಗಿ ದಿವಾಳಿ ಏಳಬೇಕಾಗಿದ್ದ ಅವರೆಲ್ಲ ಇಂದು ನೆಮ್ಮದಿಯಿಂದಿದ್ದಾರೆ. ಒಂದೂವರೆ ಕೋಟಿ ಜನರ ಉದ್ಯೋಗ ಉಳಿದಿದೆ. ಎಲ್ಲವೂ ನಿಜ. ಆದರೆ ನನಗಾದ ಲಾಭ ಏನು? ನನಗೆ ಉಚಿತ ಬಟ್ಟೆ ಸಿಕ್ಕಿತಾ? ಅಕ್ಕಿ, ಬೇಳೆ? ಗ್ಯಾಸು, ಪೆಟ್ರೋಲು? ಊಹ್ಞೂಂ! ನೀವು ಬಂದಾಗಿನಿಂದ ನನ್ನ ಅಕೌಂಟಿನಲ್ಲಿ ಹಣ ಹೆಚ್ಚಾಗುತ್ತಿದೆಯೇ ಹೊರತು ಒಂದು ರೂಪಾಯಿಯ ಬಿಟ್ಟಿ ವಸ್ತುಗಳು ಸಿಗಲಿಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಎಷ್ಟು ಭಾಗ್ಯಗಳಿದ್ದವು ಗೊತ್ತೇನು? ನೀವು ಜಿಎಸ್​ಟಿ ಸಂಗ್ರಹದಲ್ಲಿ ದಾಖಲೆ ಬರೆಯುತ್ತಿದ್ದೀರಂತೆ. ತೆರಿಗೆ ಕಳ್ಳತನ ಮಾಡುತ್ತಿದ್ದವರು ಗೌರವಯುತವಾಗಿ ತೆರಿಗೆ ಕಟ್ಟುವ ವ್ಯವಸ್ಥೆ ಮಾಡುತ್ತಿದ್ದೀರಂತೆ. ಇದನ್ನು ಅನೇಕರು ಸಂಭ್ರಮಿಸುತ್ತಾರೆ. ನನಗೆ ಇದ್ಯಾವುದೂ ಅರ್ಥವಾಗುವುದಿಲ್ಲ. ನನಗೆ ಬೇಕಾದ್ದು ಬಿಟ್ಟಿ ವಸ್ತುಗಳಷ್ಟೇ. ಕೊಟ್ಟಿರಾ? ಅಷ್ಟು ಹೇಳಿ!

ನಿಮ್ಮ ಆಗಮನದೊಂದಿಗೆ ಕಾಶ್ಮೀರದಲ್ಲಿ 370ನೇ ವಿಧಿ ರದ್ದಾಯ್ತು. ಇತರ ಭಾರತೀಯರು ಅಲ್ಲೀಗ ಜಮೀನು ಕೊಂಡುಕೊಳ್ಳಬಹುದೆಂಬ ಕಾನೂನು ತಂದಿದ್ದೀರಿ. ಗಲ್ಪ್​ನ ಲುಲು ಕಂಪನಿ ಕಾಶ್ಮೀರದಲ್ಲಿ ಕೋಟ್ಯಂತರ ರೂಪಾಯಿ ಹಣಹೂಡಲು ಮುಂದೆ ಬಂದಿದೆ. ಇದರಲ್ಲಿ ಖುಷಿ ಪಡುವಂಥದ್ದೇನು? ನಾನು ಕರ್ನಾಟಕದವನು. ಕಾಶ್ಮೀರದಲ್ಲಾಗುವ ಬದಲಾವಣೆಗೂ ನನಗೂ ಯಾವ ಸಂಬಂಧವೂ ಇಲ್ಲ. ನನಗೆ ಬೇಕಿರೋದು ನನ್ನ ರಾಜ್ಯ, ನನ್ನ ಜನ. ನಾಳೆ ನನ್ನ ರಾಜ್ಯವೇ ಪ್ರತ್ಯೇಕ ದೇಶವಾದರೆ ನನಗೆ ಅದೇ ಹಬ್ಬ. ಖಲಿಸ್ತಾನಿಗಳು ಹೀಗೇ ಯೋಚಿಸುತ್ತಿರೋದು. ನಿಮ್ಮ ಸಾವನ್ನು ವರ್ಷದ ಮುಂಚೆಯೇ ಯೋಜಿಸಿಟ್ಟಿದ್ದಾರೆ. ಮೊನ್ನೆ ತಾನೇ ಪ್ರತಿಭಟನೆಯ ನಡುವೆ ನೀವು ಸಿಕ್ಕುಹಾಕಿಕೊಂಡಿರಲ್ಲ, ಕಾರಿನಿಂದ ಕೆಳಗಿಳಿಸಿ ಅಟ್ಟಿಸಿಕೊಂಡು ಹೋಗಿ ಬಡಿದು ಕೊಲ್ಲಬೇಕೆಂಬ ಯೋಜನೆ ಅವರದ್ದು. ನಿಮ್ಮ ಅದೃಷ್ಟ ಚೆನ್ನಾಗಿದೆ. ಐದು ಶತಮಾನಗಳ ಕಿರಿಕಿರಿಯ ನಂತರ ರಾಮಮಂದಿರ ನಿರ್ವಣಕ್ಕೆ ನಿಂತಿದ್ದೀರಲ್ಲ, ಆಂಜನೇಯ ಸ್ವಲ್ಪ ಕಾಪಾಡಿದ್ದಾನೆ. ಇಲ್ಲವಾಗಿದ್ದರೆ ನೀವು ಸಾಯಬಹುದು ಎನ್ನುವ ಆಲೋಚನೆಯೊಂದಿಗೇ ಸಂಭ್ರಮಿಸುತ್ತಿರುವ ಕಾಂಗ್ರೆಸ್ಸಿಗರು ದೀಪಾವಳಿಯ ಸಂದರ್ಭಕ್ಕಿಂತಲೂ ಹೆಚ್ಚು ಪಟಾಕಿ ಹೊಡೆದುಬಿಡುತ್ತಿದ್ದರು. ಅವರು ಹಾಗೆ ಮಾಡಲು ಕಾರಣವೂ ಇದೆ. ಮೊನ್ನೆ ತಾನೇ ಛತ್ತೀಸ್​ಗಢದ ಕಾಂಗ್ರೆಸ್ಸಿನ ಮುಖ್ಯಮಂತ್ರಿ ಭೂಪೇಶ್ ಬಾಗೇಲ್ ಪಾಕಿಸ್ತಾನ ಮೂಲದ ದಾವತ್-ಎ-ಇಸ್ಲಾಮೀ ಎಂಬ ಸಂಸ್ಥೆಗೆ 25 ಎಕರೆ ಜಮೀನು ಕೊಟ್ಟು ಸಾಷ್ಟಾಂಗವೆರಗಿದ್ದಾರಲ್ಲ; ನಿಮ್ಮ ಮಂದಿ ಗಲಾಟೆ ಮಾಡಿ ಅದನ್ನು ತಪ್ಪಿಸಿಬಿಟ್ಟರಲ್ಲ. ತಮ್ಮವರಿಗೆ ಉಪಕಾರ ಮಾಡಲು ಬಿಡದ ನಿಮ್ಮ ಈ ಮನೋಭಾವನೆಯನ್ನು ಧಿಕ್ಕರಿಸದೇ ಇನ್ನೇನು ಮಾಡಬೇಕು?

ನೀವು ಬಂದಮೇಲೆ ಭಾರತೀಯ ಸೈನಿಕ ಬಲವಾಗಿದ್ದಾನೆ. ಗಲ್ವಾನ್​ನಲ್ಲಿ ತನ್ನ ಸೈನಿಕರಿಗೆ ಅವನು ಕೊಟ್ಟ ಪೆಟ್ಟನ್ನು ಚೀನಾ ಇನ್ನೂ ಮರೆತಿಲ್ಲ. ಇಲ್ಲಿ ಕಾಂಗ್ರೆಸ್ಸಿಗರು ಚೀನೀ ಕಮ್ಯುನಿಸ್ಟರೊಂದಿಗೆ ಒಪ್ಪಂದ ಮಾಡಿಕೊಂಡು ಭಾರತಕ್ಕೆ ಅವಮಾನವಾಗುವ ಸಂಗತಿಗಳನ್ನು ಸಂಭ್ರಮಿಸುತ್ತಿದ್ದಾರೆ. ನೀವೋ ಗಡಿಯವರೆಗೂ ಹೋಗಿ ಸೈನಿಕರಿಗೆ ಬಲತುಂಬಿ ಚೀನಿಯರ ಎದೆಗೆ ಗುದ್ದುವ ಮಾತನಾಡುತ್ತೀರಿ. ನಿಮಗ್ಯಾಕ್ರೀ ಬೇಕು ಇವೆಲ್ಲ? ಸುಮ್ಮನೆ ಷಿ ಜಿನ್​ಪಿಂಗ್​ರೊಂದಿಗೆ ಒಪ್ಪಂದ ಮಾಡಿಕೊಂಡು ನೆಮ್ಮದಿಯಿಂದಿದ್ದುಬಿಡಿರಲ್ಲ. ಮನಮೋಹನ ಸಿಂಗ್​ರನ್ನು ನೋಡಿ. ಮೇಡಮ್ ಹೇಳಿದಂತೆ ಕೇಳುತ್ತ, ಹೇಳಿದ ಜಾಗದಲ್ಲೆಲ್ಲ ಸಹಿ ಮಾಡುತ್ತ, ಕೊನೆಗೆ ವಿದೇಶಿಗರು ಪ್ರಧಾನಮಂತ್ರಿಗೆಂದು ಕೊಟ್ಟ ನೂರಕ್ಕೂ ಹೆಚ್ಚು ಉಡುಗೊರೆಗಳನ್ನು ಮನೆಗೆ ಮರಳುವಾಗ ಹೊತ್ತೊಯ್ದರಲ್ಲ! ನಮಗೆ, ನಮ್ಮ ಯೋಗ್ಯತೆಗೆ ಅಂಥವರೇ ಸರಿ. ನಿಮ್ಮ ಪ್ರಾಮಾಣಿಕತೆ, ದೇಶಭಕ್ತಿ, ಹುಚ್ಚು ಕ್ರಿಯಾಶೀಲತೆ, ಭಾವುಕತೆ, ಜನಸಾಮಾನ್ಯರ ಮೇಲಿನ ಪ್ರೇಮ, ಇವೆಲ್ಲ ಬಹಳ ಕಾಲ ನಡೆಯೋದಿಲ್ಲ. ನೀವಾಗಿಯೇ ತಿದ್ದುಕೊಂಡರೆ ಸರಿ. ಇಲ್ಲವಾದರೆ ಅತ್ತ ಖಲಿಸ್ತಾನಿಗಳು, ಇತ್ತ ಪಾಕಿಸ್ತಾನಿಗಳು, ಮೇಲೆ ಚೀನಿಯರು, ಒಳಗೆ ದೇಶವನ್ನು ತುಂಡರಿಸಬೇಕೆಂದು ಕಾಯುತ್ತಿರುವ ಶಕ್ತಿಗಳು ನಿಮ್ಮನ್ನು ತೆಪ್ಪಗಾಗಿಸುವ ಮಾರ್ಗವನ್ನು ಅರಿತಿದ್ದಾರೆ.

ನನ್ನಂಥ ಮಖೇಡಿಗಳು ಫೇಸ್​ಬುಕ್ಕಿನಲ್ಲಿ, ಟ್ವಿಟರ್​ನಲ್ಲಿ, ಇನ್​ಸ್ಟಾಗ್ರಾಂನಲ್ಲಿ, ಹೆಚ್ಚೆಂದರೆ ವಾಟ್ಸ್​ಆಪ್​ನಲ್ಲಿ ನಿಮ್ಮ ಬಗ್ಗೆ ನಾಲ್ಕು ಸಾಲು ಬರೆದು ಆಗಾಗ ರಿಫ್ರೆಶ್ ಮಾಡುತ್ತ ಎಷ್ಟು ಲೈಕ್ ಬಂತು ಎಂದು ನೋಡುತ್ತ ಕುಳಿತುಬಿಡುತ್ತೇವೆ. ಮುಂದಿನ ಪೀಳಿಗೆ ಪ್ರಶ್ನೆ ಕೇಳುವಾಗ ಸುಳ್ಳು ಇತಿಹಾಸ ಬರೆಯಲು ಕಮ್ಯುನಿಸ್ಟರು ಇದ್ದೇ ಇರುತ್ತಾರಲ್ಲ! ಇದೆಲ್ಲ ಅರಿತುಕೊಂಡು ಇತರ ರಾಜಕಾರಣಿಗಳಂತೆ ಬದುಕುವುದನ್ನು ಕಲಿತುಬಿಡಿ. ಇಲ್ಲವಾದರೆ ಪಂಜಾಬಿನಲ್ಲಾದ ಘಟನೆ ಎಲ್ಲಿ ಬೇಕಿದ್ದರೂ ಮರುಕಳಿಸಬಹುದು!

ನಿಮ್ಮನ್ನು ಬಹುವಾಗಿ ಪ್ರೀತಿಸುವ,

ಹತಭಾಗ್ಯ ಭಾರತೀಯ

(ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net